ಮಣಿಕಾಂತ್ ಬರೆಯುತ್ತಾರೆ: ಇದು ಎಂಥಾ ಲೋಕವಯ್ಯಾ..

ಎ ಆರ್ ಮಣಿಕಾಂತ್

.

ಚಿತ್ರ: ನಾರದ ವಿಜಯ. ಗೀತೆರಚನೆ: ಚಿ. ಉದಯಶಂಕರ್

ಸಂಗೀತ: ಅಶ್ವತ್ಥ್-ವೈದಿ. ಗಾಯನ:  ಕೆ.ಜೆ. ಯೇಸುದಾಸ್

ಎಂಥಾ ಲೋಕವಯ್ಯಾ

ಇದು ಎಂಥಾ ಲೋಕವಯ್ಯಾ

ಹೊಸತನವ ಕೊಡುವ ಹೊಸ ವಿಷಯ ಅರಿವ

ಬಯಕೆ ತರುವ ಇದು ಎಂಥಾ ಲೋಕವಯ್ಯಾ ||ಪ||

ಕಡಲಲ್ಲಿ ಧುಮುಕಿ ಹೋರಾಡುವಾ

ಮುಗಿಲೇರಿ ಮೇಲೆ ತೇಲಾಡುವಾ

ಆ ಚಂದ್ರನೆಡೆಗೆ ಹಾರಾಡುವಾ

ಗ್ರಹತಾರೆಗಳಿಗೆ ಕೈ ಚಾಚುವಾ

ಜನರಿಂದ ತುಂಬಿ ಮೆರೆವಾ ಆಆಆಆ

ಜನರಿಂದ ತುಂಬಿ ಮೆರೆವಾ, ಇದು ಎಂಥಾ ಲೋಕವಯ್ಯ ||1||

ಬಡತನದ ಜತೆಗೆ ಬಡಿದಾಡುವಾ

ಸುಖವನ್ನು ಅರಸಿ ಅಲೆದಾಡುವಾ

ಹೊಸದನ್ನು ದಿನವೂ ಹುಡುಕಾಡುವಾ

ಛಲವನ್ನು ಬಿಡದೆ ಸೆಣಸಾಡುವಾ

ಜನರಿಂದ ತುಂಬಿ ಮೆರೆವಾ ಆಆಆಆಆ

ಜನರಿಂದ ತುಂಬಿ ಮೆರೆವಾ, ಇದು ಎಂಥಾ ಲೋಕವಯ್ಯಾ ||2||

1980ರಲ್ಲಿ ಎಲ್ಲರನ್ನೂ ಕಾಡಿದ, ಎಲ್ಲರಿಗೂ ಇಷ್ಟವಾದ ಮತ್ತು ಎಲ್ಲರಿಂದಲೂ ಕನಿಷ್ಠ ಒಂದು ಬಾರಿಯಾದರೂ ಹಾಡಿಸಿಕೊಂಡ ಗೀತೆ-`ಇದು ಎಂಥಾ ಲೋಕವಯ್ಯಾ…’. ಈ ಹಾಡು, ಸಿದ್ದಲಿಂಗಯ್ಯ ನಿದರ್ೇಶನದ `ನಾರದ ವಿಜಯ’ ಚಿತ್ರದ್ದು. ಹಾಸ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಈ ಚಿತ್ರದಲ್ಲಿ ನಾರದ-ವಿಜಯ ಎಂಬೆರಡು ಪಾತ್ರಗಳಲ್ಲಿ ನಾಯಕನಾಗಿ ಮಿಂಚಿದ್ದವರು ನಟ ಅನಂತನಾಗ್.

`ನಾರದ- ವಿಜಯ’ ಚಿತ್ರದಲ್ಲಿ `ಇದು ಎಂಥಾ ಲೋಕವಯ್ಯಾ’ ಗೀತೆ ಆರಂಭವಾಗುವ ಸಂದರ್ಭವೇ ಸ್ವಾರಸ್ಯಕರವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಅದು ಹೀಗೆ: ಶ್ರೀಮನ್ನಾರಾಯಣನ ಭಕ್ತನೊಬ್ಬನ ಬದುಕು ಸಂಕಟಕ್ಕೆ ಸಿಕ್ಕಿಕೊಂಡಿರುತ್ತದೆ. ಅದಕ್ಕೆ ಪರಿಹಾರ ಕಂಡು ಹಿಡಿದು ಭಕ್ತನ ಬದುಕನ್ನು ನೇಪರ್ುಗೊಳಿಸಲೆಂದು ನಾರಾಯಣ, ನಾರದನನ್ನು ಭೂಲೋಕಕ್ಕೆ ಕಳಿಸುತ್ತಾನೆ. ವೈಕುಂಠದಿಂದ ಬಂದ ನಾರದನನ್ನು ಭೂಲೋಕದ ಜನ ವಿಚಿತ್ರವಾಗಿ ನೋಡುತ್ತಾರೆ. ತಾಳ-ತಂಬುರಿ ಹಿಡಿದುಕೊಂಡು ನಾರಾಯಣ ನಾರಾಯಣ ಎಂದು ರಾಗವಾಗಿ ಹೇಳುತ್ತಾ ಅಡ್ಡಾಡುವ ಈ ಆಸಾಮಿ ಯಾವುದೋ ನಾಟಕ ಕಂಪನಿಯ ಕಲಾವಿದನಿರಬಹುದು. ಈತ ಮೇಕಪ್ ಮಾಡಿಸಿಕೊಂಡು ಸ್ಟೇಜ್ಗೆ ಹೋಗುವ ಬದಲು ಸೀದಾ ರಸ್ತೆಗೆ ಬಂದುಬಿಟ್ಟಿದ್ದಾನೆ ಎಂಬ ಅನುಮಾನ ಹಲವರದು. ಈ ಕಾರಣದಿಂದಲೇ ಅವರಲ್ಲಿ ಕೆಲವರು ನಾರದನನ್ನು ಮುಟ್ಟಲು, ಹಿಡಿದುಕೊಳ್ಳಲು ನೋಡುತ್ತಾರೆ.

ಮನುಷ್ಯರ ಈ ವರ್ತನೆಯಿಂದ ಕಂಗಾಲಾದ ನಾರದ, ಅವರಿಂದ ತಪ್ಪಿಸಿಕೊಳ್ಳಲು ಪಾದಚಾರಿಯೊಬ್ಬನ ಸೈಕಲ್ ಹತ್ತಿ ಪರಾರಿಯಾಗುತ್ತಾನೆ. ಆ ಸಂದರ್ಭದಲ್ಲಿಯೇ ಭೂಲೋಕದ ಜನ, ಅವರ ಬದುಕು, ಅವರ ಕನಸು- ಕುತೂಹಲ, ಆಸೆ-ನಿರಾಸೆ, ಸಂಭ್ರಮ- ಸಂಕಟವನ್ನೆಲ್ಲ ಕಂಡು ಬೆರಗಾಗಿ `ಇದು ಎಂಥಾ ಲೋಕವಯ್ಯಾ…’ ಎಂದು ಹಾಡುತ್ತಾನೆ.

ಈ ಹಾಡು ಬರೆದವರು ಚಿ. ಉದಯಶಂಕರ್. ಹಾಡಿಗೆ ರಾಗ ಸಂಯೋಜನೆ ಮಾಡಿದವರು ಅಶ್ವತ್ಥ್-ವೈದಿ. ಈ ಹಾಡು ಹುಟ್ಟಿದ ಕಥೆಯನ್ನು ಅದೊಮ್ಮೆ ಅಶ್ವತ್ಥ್ ರಸವತ್ತಾಗಿ ವಣರ್ಿಸಿದ್ದರು. ಅದು ಹೀಗೆ:

ಸಿದ್ದಲಿಂಗಯ್ಯ ಅವರ ನಿದರ್ೇಶನದ `ಭೂಲೋಕದಲ್ಲಿ ಯಮರಾಜ’ ಚಿತ್ರಕ್ಕೆ ನಾನು ಸಂಗೀತ ನೀಡಿದ್ದೆ. ಆ ಚಿತ್ರದ ಹಾಡುಗಳು ಹಿಟ್ ಆಗಿದ್ದವು. `ಯಮರಾಜ…’ದಂತೆಯೇ ನಾರದ-ವಿಜಯ ಕೂಡ ಹಾಸ್ಯ ಕಥಾವಸ್ತು ಹೊಂದಿತ್ತು. ಹಾಗಾಗಿ ಈ ಸಿನಿಮಾಕ್ಕೆ ನನ್ನ ಸಂಗೀತ ಹೊಂದುತ್ತದೆ ಎಂಬ ನಂಬಿಕೆ ಸಿದ್ದಲಿಂಗಯ್ಯ ಹಾಗೂ ವರದಪ್ಪ ಅವರಿಗೆ ಬಂತು. ತಕ್ಷಣವೇ ನನ್ನನ್ನು ಸಂಪಕರ್ಿಸಿ ವಿಷಯ ತಿಳಿಸಿದರು. ಆ ವೇಳೆಗೆ ನಾನು -ವೈದಿ ಜತೆಯಾಗಿದ್ದೆವು. `ಏನೇ ಬರಲಿ ಪ್ರೀತಿ ಇರಲಿ’ ಚಿತ್ರಕ್ಕೆ ಸಂಗೀತ ನೀಡಿ ಮನೆಮಾತಾಗಿದ್ದೆವು. ಸಿದ್ದಲಿಂಗಯ್ಯನವರ ಆಹ್ವಾನವನ್ನು ನಾನು ತಕ್ಷಣ ಒಪ್ಪಿಕೊಂಡೆ. ಆಗ ಸಿದ್ದಲಿಂಗಯ್ಯ ಹೇಳಿದರು: `ನೋಡಿ ಅಶ್ವತ್ಥ್, ಈಗ ಸಮಯದ ಅಭಾವವಿದೆ. ಹಾಗಾಗಿ ನಾವು ಮದ್ರಾಸ್ನಲ್ಲೇ  ಹಾಡುಗಳ ರೆಕಾಡರ್ಿಂಗ್ ಇಟ್ಕೊಂಡಿದೀವಿ. ಒಂದು ಹೋಟೆಲಿನಲ್ಲಿ ನಿಮಗೆ ರೂಂ ಮಾಡಿಕೊಡ್ತೇವೆ. ಅಲ್ಲಿಗೇ ಬಂದು ಟ್ಯೂನ್ ಕೊಡಿ…’

`ಸರಿ ಸರ್’ ಅಂದೆ. ಸಡಗರದಿಂದಲೇ ಮದ್ರಾಸಿಗೆ ಹೋದೆ. ಅಲ್ಲಿ ಸಿದ್ದಲಿಂಗಯ್ಯನವರು, ಹಾಡುಗಳು ಬರಬೇಕಿದ್ದ ಸಂದರ್ಭ ವಿವರಿಸಿದರು. ಆದರೆ, ಯಾಕೋ ಏನೋ ಅಲ್ಲಿನ ವಾತಾವರಣದಲ್ಲಿ ನನಗೆ ಒಂದು ಟ್ಯೂನೂ ಹೊಳೆಯಲಿಲ್ಲ. ನನ್ನ ಜತೆ ವೈದಿ ಕೂಡ ಸಹ ಸಂಯೋಜಕರಾಗಿದ್ದರಲ್ಲ? ಹಾಗಾಗಿ ಅವರೂ 10 ಟ್ಯೂನ್ ಹೇಳಿದರು. ಅಷ್ಟನ್ನೂ ಕೇಳಿ, ಈ 10 ಟ್ಯೂನ್ ಪೈಕಿ ಒಂದು ಮಾತ್ರ ಪರವಾಗಿಲ್ಲ ಅನ್ನಿಸ್ತು ಅಶ್ವತ್ಥ್.  ಆದ್ರೆ ನನಗೆ ಪೂತರ್ಿ  ಸಮಾಧಾನವಾಗಿಲ್ಲ ಅಂದರು ಸಿದ್ಧಲಿಂಗಯ್ಯ. ಆಗ ನಾನು ಹೇಳಿದೆ:  `ಸಾರ್, ಯಾಕೋಪ್ಪ, ನನಗೆ  ಏನೂ ಹೊಳೀತಾ ಇಲ್ಲ. ಈಗ ಒಂದು ಕೆಲ್ಸ ಮಾಡಿ. ದಯವಿಟ್ಟು ನನಗೆ ಸ್ವಲ್ಪ ಡ್ರಿಂಕ್ಸ್ ತರಿಸಿಕೊಡಿ. ನನ್ನನ್ನು ಒಂಟಿಯಾಗಿ ಬಿಡಿ. ಪ್ರಯತ್ನಿಸುತ್ತೇನೆ…’

ಸಿದ್ದಲಿಂಗಯ್ಯನವರು ಅದೆಂಥ ದೊಡ್ಡ ಮನಸ್ಸಿನ ವ್ಯಕ್ತಿಯೆಂದರೆ ನಾನು ಹೇಳಿದಂತೆಯೇ ಕೇಳಿದರು. ರಾತ್ರಿ ನಾನು ರೂಮ್ಗೆ ಹೋದೆ. ವೈದಿಯ ಹಾಮರ್ೋನಿಯಂ ಅಲ್ಲೇ ಇತ್ತು. ಅದನ್ನು ಹಿಡಿದುಕೊಂಡು ಬಂದ ಹಾಡನ್ನೆಲ್ಲ ಹಾಡ್ತಾ ಹೋದೆ. ಊಟದ ಪಾಸರ್ೆಲ್ ಬಂದಿತ್ತು. ನನಗೋ ಅದರ ಕಡೆ ಗಮನವೇ ಇರಲಿಲ್ಲ. ಮಧ್ಯರಾತ್ರಿ 12.30ರ ವೇಳೆಯಲ್ಲಿ  ಚಢ ಐ ್ಚಟಞಛಿ ಜ್ಞಿ’ ಎಂಬ ಧ್ವನಿ ಕೇಳಿಸಿತು. ಕತ್ತೆತ್ತಿ ನೋಡಿದರೆ- ಬಾಗಿಲಲ್ಲಿ ಸಿದ್ದಲಿಂಗಯ್ಯ ನಿಂತಿದ್ದರು. ಜತೆಗೇ ಡಾ. ರಾಜ್ಕುಮಾರ್ ಅವರ ಸೋದರ ವರದಪ್ಪನವರು!

ಆ ವೇಳೆಗಾಗಲೇ ನಾನು ಕುಡಿದಿದ್ದೆ. ಆ ಕಿಕ್ನಲ್ಲಿಯೇ- `ಸಾರ್, ಏನು ಬೇಕಿದೆ ನಿಮ್ಗೆ? ಹೇಳಿದೆನಲ್ಲ, ನಂಗೆ ಏನೂ ಹೊಳೀತಿಲ್ಲ. ಆದ್ರೂ ಈಗ ಹಾಡ್ತಾ ಹೋಗ್ತೇನೆ. ಆ ಮಧ್ಯೆಯೇ ಟ್ಯೂನ್ ಹೊಳೆದ್ರೆ ಹೇಳ್ತೇನೆ. ಹೊಳೀಲಿಲ್ಲಾಂದ್ರೆ ನನ್ನನ್ನು ಬಿಟ್ಟುಬಿಡಿ’ ಅಂದುಬಿಟ್ಟೆ. ಆಗಲೂ ಸಿದ್ದಲಿಂಗಯ್ಯನವರು ಮಾತಾಡಲಿಲ್ಲ. ಬದಲಿಗೆ,  ಜತೆಗೆ ತಂದಿದ್ದ ಟೇಪ್ರೆಕಾರ್ಡರ್ ಆನ್ ಮಾಡಿ ಎದುರು ಕೂತರು. ನಾನು, ಕೆ.ಎಸ್.ನ, ಬೇಂದ್ರೆ, ಕುವೆಂಪು ಅವರ  ಒಂದೊಂದೇ ಹಾಡು ಹಾಡ್ತಾ ಹೋದೆ. ಆಗಲೇ ಆಕಸ್ಮಿಕವಾಗಿ ಮಧ್ಯೆ ಮಧ್ಯೆ ಟ್ಯೂನ್ಗಳು ಹೊಳೆದವು. `ನಾರದ ವಿಜಯ’ದ `ಈ ವೇಷ ನೋಡಬೇಡ ಅಮ್ಮಯ್ಯ’ `ನಾ ಬಲೆ ಬೀಸುವೆ’ ಹಾಡಿನ ಟ್ಯೂನ್ಗಳೆಲ್ಲ ಬಂದದ್ದು ಅಪರಾತ್ರಿಯಲ್ಲೇ, ನಂತರ ಸಿದ್ದಲಿಂಗಯ್ಯನವರೇ ಅನ್ನ ಕಲೆಸಿ ಕೈ ತುತ್ತು ತಿನ್ನಿಸಿದರು. ನಂತರ `ಈಗ ಮಲಗಿ. ನಾಳೆ ಸಿಗೋಣ’ ಅಂದು ಹೋಗಿಬಿಟ್ಟರು.

ಮರುದಿನ ಬೆಳಗ್ಗೆ ಸಿದ್ದಲಿಂಗಯ್ಯ ಹಾಗೂ ವರದಪ್ಪನವರನ್ನು ಕಂಡಾಕ್ಷಣ, ಹಿಂದಿನ ರಾತ್ರಿ ನಡೆದಿದ್ದೆಲ್ಲ ನೆನಪಿಗೆ ಬಂತು. ತಕ್ಷಣವೇ `ಸಾರ್, ರಾತ್ರಿ ನಾನು ಏನೇನೋ ಮಾತಾಡಿಬಿಟ್ಟೆ, ಕ್ಷಮಿಸಿ, ಯಾಕೋ ಈ ಸಿನಿಮಾಕ್ಕೆ ಟ್ಯೂನ್ ಹೊಳೀತಿಲ್ಲ. ನನ್ನನ್ನು ಬಿಟ್ಟುಬಿಡಿ’ ಅಂದೆ.

ತಕ್ಷಣ ಟೇಪ್ರೆಕಾರ್ಡರ್ ಆನ್ ಮಾಡಿದ ಸಿದ್ದಲಿಂಗಯ್ಯನವರು `ರಾತ್ರಿ ಮೂರು ಟ್ಯೂನ್ ಸಿಕ್ಕಿವೆ ಅಶ್ವತ್ಥ್. ಅವು ಚನ್ನಾಗಿವೆ.  ಇವುಗಳ ಚರಣಕ್ಕೂ  ಈಗ ರಾಗ ಸಂಯೋಜನೆ ಮಾಡಿಬಿಡಿ. ಸಂಜೆ ಉದಯ ಶಂಕರ್ ಬರ್ತಾರೆ. ಅವರಿಂದ ಹಾಡು ಬರೆಸೋಣ’ ಅಂದರು. ಅವತ್ತು ಸಂಜೆಯೊಳಗೆ ರಾಗ ಸಂಯೋಜನೆ ಮುಗೀತು. ಆದರೆ, ನಾರದ ಹಾಡಬೇಕಿದ್ದ ಒಂದು ಹಾಡಿಗೆ ಟ್ಯೂನ್ ಹೊಳೆದಿರಲಿಲ್ಲ. ಆಗ ಸಿದ್ದಲಿಂಗಯ್ಯನವರು -`ನಾರದನ ಹಾಡಿಗೆ ಸ್ವಲ್ಪ ಕ್ಲಾಸಿಕಲ್ ಥರದ ಟ್ಯೂನ್ ಬೇಕು. ಅದು ನಿಮ್ಮಿಂದ ಆಗಲ್ಲ ಅನ್ಸುತ್ತೆ. ಅಲ್ಲಿಗೆ ಜಿ.ಕೆ. ವೆಂಕಟೇಶ್ ರಾಗ ಸಂಯೋಜನೆಯ `ಬೊಂಬೆಯಾಟವಯ್ಯ’ ಹಾಕ್ಕೋತೇನೆ. ಆಗಬಹುದಾ?’ ಅಂದರು. ಅದಕ್ಕೆ ನಾನು- `ಸಾರ್, ಈ ಸಿನಿಮಾಕ್ಕೆ  ಅಶ್ವತ್ಥ್- ವೈದಿ ಸಂಗೀತವಿದೆ ಅಂತ ವಾಲ್ ಪೋಸ್ಟರ್ ಹಾಗೂ ಟೈಟಲ್ ಕಾಡರ್್ಲ್ಲಿ ಹಾಕ್ತೀರಾ. ಆದರೆ, ಬೇರೆಯವರ ಹಾಡೇಕೆ? ನಾನೇ ಪ್ರಯತ್ನಿಸ್ತೇನೆ’ ಅಂದೆ. ನಂತರ-ರಾಗ ತಿಲ್ಲಾಂಗ್ ಛಾಯೆಯಲ್ಲಿ ಒಂದು ಟ್ಯೂನ್ ಹೇಳಿದೆ. ಅದನ್ನು ಕೇಳಿದ್ದೇ- ಸಿದ್ದಲಿಂಗಯ್ಯ- ವರದಪ್ಪರ ಮುಖ ಊರಗಲ ಆಯಿತು. `ವಾಹ್, ಎಷ್ಟ್  ಚನ್ನಾಗಿದೇರೀ ಇದೂ? ಅದ್ಭುತ ಟ್ಯೂನ್ ಕಣ್ರೀ’ ಅಂದರು. `ಇದು ಎಂಥಾ ಲೋಕವಯ್ಯ’ ಹಾಡಿನ ಟ್ಯೂನ್ ಅದು!

***

ಸಂಜೆ ಚಿ. ಉದಯಶಂಕರ್ ಬಂದಾಗ, ನಡೆದದ್ದೆಲ್ಲವನ್ನೂ ವಿವರಿಸಿದ್ದಾರೆ ಸಿದ್ದಲಿಂಗಯ್ಯ ಜಿ.ಕೆ. ವೆಂಕಟೇಶ್ ರಾಗ ಸಂಯೋಜಿಸಿರುವ ಹಾಡು ಬಳಸಿಕೊಳ್ತೇವೆ ಎಂದು ಹೇಳಿದಾಕ್ಷಣ ಅಡ್ಡಡ್ಡ  ತಲೆ  ಒಗೆದ ಅಶ್ವತ್ಥ್, ನಂತರದ ಕೆಲವೇ ನಿಮಿಷಗಳಲ್ಲಿ ಹೊಸ ಟ್ಯೂನ್ ಕೊಟ್ಟದ್ದನ್ನೂ ಹೇಳಿದ್ದಾರೆ. ತಮಾಷೆ ಮಾಡುವುದರಲ್ಲಿ  ನಿಪುಣರಾಗಿದ್ದ ಉದಯಶಂಕರ್ ‘ ಇದೇನ್ರೀ ಅಶ್ವತ್ಥ್? ನಿಮ್ಗೆ ಗುಂಡು ಹಾಕಿದಾಗಲೂ ಹೊಸ ಟ್ಯೂನ್ ಹೊಳೆದಿದೆ. ಸಿದ್ದಲಿಂಗಯ್ಯನವರು ಕಿಚಾಯಿಸಿದಾಗಲೂ ಒಂದು ಟ್ಯೂನ್ ಹೊಳೆದಿದೆ. ನಾವಿರೋದು  ಎಂಥ ವಿಚಿತ್ರ ಲೋಕ ನೋಡ್ರೀ… ಹೊಸ ಟ್ಯೂನ್ ಕೊಡಬೇಕು ಅನ್ನೋ ಬಯಕೆ ನಿಮಗೆ ಹೇಗೆಲ್ಲ ಬಂದಿದೆ ನೋಡಿ’ ಎಂದು ಹೇಳಿ ಎಲ್ಲರನ್ನೂ ನಗಿಸಿದರಂತೆ. ನಂತರ, ಆ ಸಂದರ್ಭವನ್ನೇ ಜತೆಗಿಟ್ಟುಕೊಂಡು ಇದು ಎಂಥಾ ಲೋಕವಯ್ಯಾ’ ಎಂದು ಬರೆದೇಬಿಟ್ಟರಂತೆ.

ಈ ಚಿತ್ರ ತಯಾರಿಯ ಸಂದರ್ಭದಲ್ಲಿ ಶ್ರೀಹರಿಕೋಟಾದಿಂದ ಸ್ಟೇಸ್ ಶಟಲ್ ಕೊಲಂಬಿಯಾ ಎಂಬ ಉಪಗ್ರಹವನ್ನು ಹಾರಿಬಿಡುವ ಸಿದ್ಧತೆ ಜೋರಾಗಿ ನಡೆದಿತ್ತು. ಆ ಉಪಗ್ರಹ ಸೀದಾ ಚಂದ್ರಲೋಕಕ್ಕೇ ಹೋಗುತ್ತೆ. ಗ್ರಹ, ತಾರೆಗಳ ಚಿತ್ರವನ್ನೆಲ್ಲ ಸೆರೆ ಹಿಡಿಯುತ್ತೆ ಎಂದೆಲ್ಲ ಆಗ ಜನ ಮಾತಾಡಿಕೊಳ್ಳುತ್ತಿದ್ದರು.  ಇದನ್ನೆಲ್ಲ ಉದಯಶಂಕರ್ ಗಮನಕ್ಕೆ ತಂದ ಸಿದ್ದಲಿಂಗಯ್ಯನವರು-`ಭೂಲೊಕಕ್ಕೆ ಬಂದ ನಾರದ, ಈ ವಿದ್ಯಮಾನವನ್ನೆಲ್ಲ ಕಂಡು ಬೆರಗಾಗಿ ಹಾಡುವಂತಿರಲಿ’ ಎಂದರಂತೆ. ಈ ಮಾತಿಗೆ `ಸರಿ, ಸರಿ’ ಎಂದ ಉದಯಶಂಕರ್, ಮನುಕುಲದ ಅಷ್ಟೂ ಬೆರಗನ್ನು ಮೊದಲ ಚರಣದಲ್ಲೂ ; ಸುಖಪುರುಷರಾಗಲು ಮನುಷ್ಯರು ಹೋರಾಡುವ ಬಗೆಯನ್ನು ಎರಡನೇ ಚರಣದಲ್ಲೂ  ತಂದರು.

ಪರಿಣಾಮ, ಹಾಡು ಅಮರವಾಯಿತು. ನಾರದನಂತೆ ಚಿರಂಜೀವಿಯೂ ಆಯಿತು!

‍ಲೇಖಕರು avadhi

April 16, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This