ಮಣಿಕಾಂತ್ ಬರೆಯುತ್ತಾರೆ: ಓ ಮಲ್ಲಿಗೆ ನಿನ್ನೊಂದಿಗೆ..

-ಎ ಆರ್ ಮಣಿಕಾಂತ್
ಚಿತ್ರ:  ಅನುರಾಗ ಸಂಗಮ. ಗಾಯನ: ರಮೇಶ್ ಚಂದ್ರ
ಸಾಹಿತ್ಯ-ಸಂಗೀತ: ವಿ. ಮನೋಹರ್.
ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೆ ಸದಾ ಸದಾ ಸದಾ
ಈ ಕಂಗಳು ಮಂಜಾದರೆ ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ
ಸದಾ ಕಾಯುವೆ       ||ಪ||
ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು
ಅವರ ಸವಿಯ ನೆನಪು ನಾವೆ, ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ ಇರುವೆ ನಾನು ಎಂದೂ ಹೀಗೆ,
ಒಂಟಿಯಲ್ಲ ನೀ
ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತಾ
ದುಃಖ ನೋವು ಎಂದೂ ಜತೆಗೆ ಇರದು ಶಾಶ್ವತಾ
ಭರವಸೆಯ ಬೆಳ್ಳಿ ಬೆಳಕು,
ಹುಡುಕಿ ಮುಂದೆ ಸಾಗಬೇಕು ಧೈರ್ಯ ತಾಳುತಾ        ||೨||
ಕಥಾ ನಾಯಕಿ ಕುರುಡಿ. ಅವಳಿಗೆ ಅಮ್ಮ ಇರುವುದಿಲ್ಲ. ಅಪ್ಪ ಇರುತ್ತಾರೆ. ಮಗಳಿಗೆ ನೆಮ್ಮದಿಯ ಬದುಕು ಕಲ್ಪಿಸುವುದೇ ಅವರ ಕನಸಾಗಿರುತ್ತದೆ. ಈ ಹುಡುಗಿಯಾದರೋ ತಂದೆಯಲ್ಲಿಯೇ ತಾಯಿಯನ್ನೂ, ದೇವರನ್ನೂ ಕಾಣುತ್ತಿರುತ್ತಾಳೆ.
ಅವಳು ಕುರುಡಿ ಎಂದು ಗೊತ್ತಾದ ಮೇಲೂ ನಾಯಕ ಅವಳನ್ನು ಪ್ರೀತಿಸುತ್ತಾನೆ. ಆರಾಸುತ್ತಾನೆ. ಅಭಿಮಾನದಿಂದ ನೋಡುತ್ತಾನೆ. ಈ ಜೀವ ನಿನಗಾಗಿ ಎಂದು ಭಾಷೆ ಕೊಡುತ್ತಾನೆ. ನಾಯಕಿಯ ತಂದೆಯ ಬಳಿ ಬಂದು- ನಿಮ್ಮ ಮಗಳನ್ನು ಮದುವೆಯಾಗುವ, ಅವಳ ಸಹವಾಸದಲ್ಲಿ ಹೊಸ ಬದುಕು ಕಂಡುಕೊಳ್ಳುವ ಆಸೆ ನನ್ನದು ಎಂದೂ ಹೇಳುತ್ತಾನೆ. ಮಗಳ ಭವಿಷ್ಯದ ಬಗ್ಗೆಯೇ ಸದಾ ಯೋಚಿಸುತ್ತಿದ್ದ ತಂದೆ ಈ ಮಾತು ಕೇಳಿ ಸಹಜವಾಗಿಯೇ ಖುಷಿಯಾಗುತ್ತಾನೆ.
ಹೀಗೆ, ಎಲ್ಲರ ಬದುಕೂ ಸಂಭ್ರಮದ ಗೂಡಾಗಿದ್ದಾಗಲೇ ಅನಾಹುತ ನಡೆದು ಹೋಗುತ್ತದೆ. ತೀರಾ ಆಕಸ್ಮಿಕವಾಗಿ ನಾಯಕಿಯ ತಂದೆ ಸತ್ತು ಹೋಗುತ್ತಾನೆ. ಅವಳಿಗೆ ಇದು ಬಹುದೊಡ್ಡ ಆಘಾತ. ಅಮ್ಮನೂ, ಗೆಳೆಯನೂ, ಗುರುವೂ, ರಕ್ಷಕನೂ, ಮಾರ್ಗದರ್ಶಿಯೂ ಆಗಿದ್ದ ತಂದೆಯನ್ನು ಕಳೆದುಕೊಂಡ ನಾಯಕಿ ಹತಾಶಳಾಗುತ್ತಾಳೆ. ನಾನು ಇನ್ಯಾರ ಸಂತೋಷಕ್ಕಾಗಿ ಬದುಕಬೇಕು ಎಂದೆಲ್ಲ ಯೋಚಿಸುತ್ತಾಳೆ. ಮುಂದೆ ಒಂಟಿಯಾಗಿ ಬದುಕಬೇಕಲ್ಲ? ಆ ಸಂದರ್ಭ ನೆನೆದು ನಡುಗುತ್ತಾಳೆ. ತನ್ನ ಕಷ್ಟಕ್ಕೆ, ಸಂಕಟಕ್ಕೆ ಆಗಿಬರುವ ಜನರೇ ಇಲ್ಲವಲ್ಲ ಎಂದು ಚಿಂತಿತಳಾಗುತ್ತಾಳೆ. ಬಹುಶಃ ನನಗಿನ್ನು ದುಃಖ, ದುಗುಡವೇ ಸಂಗಾತಿ ಅಂದುಕೊಂಡು ಕಂಬನಿ ಮಿಡಿಯುತ್ತಾಳೆ. ಹೀಗಿದ್ದಾಗಲೇ ನಾಯಕ ಅವಳ ಬಳಿ ಬರುತ್ತಾನೆ. ಮುಂದೆ ಎಂದೆಂದೂ ನಿನ್ನೊಂದಿಗೆ ನಾನಿರುತ್ತೇನೆ. ನಿನ್ನ ಬದುಕಿಗೆ ಆಸರೆಯಾಗುತ್ತೇನೆ ಎಂದು ಹೇಳಲು ಮುಂದಾಗುತ್ತಾನೆ. ಆಗಲೇ ಶುರುವಾಗುತ್ತದೆ ಈ ಹಾಡು: ‘ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೆ ಸದಾ ಸದಾ ಸಾದಾ…’
ಈ ಹಾಡಲ್ಲಿ ಅಭಯವಿದೆ ಸಾಂತ್ವನವಿದೆ. ಸಮಾಧಾನವಿದೆ. ಧ್ಯಾನವಿದೆ. ಸದಾಶಯವಿದೆ. ತಾಳಿದವನು ಬಾಳಿಯಾನು ಎಂಬ ಮಾತಿನ ಅರ್ಥವಿದೆ. ನೋವು ಈ ಬಾಳೆಂಬ ಆಟದಲ್ಲಿ ನೋವು-ನಲಿವು ಜತೆ ಜತೆಗೇ ಇವೆ. ನೋವು ಬಂದಷ್ಟೇ ಬೇಗ ಮಾಯವಾಗುತ್ತದೆ. ಆ ಜಾಗಕ್ಕೆ ನಲಿವು ಬಂದೇ ಬರುತ್ತದೆ. ಅದರ ನಿರೀಕ್ಷೆಯಲ್ಲಿ ಬದುಕುತ್ತಾ ನಾವು ನೋವು ಮರೆಯಬೇಕು ಎಂಬ ಬುದ್ಧಿಮಾತಿದೆ.
ಎಲ್ಲರ ಬದುಕಿಗೂ ಅನ್ವಯವಾಗುವಂಥ ಈ ಚೆಂದದ ಹಾಡು ಬರೆದವರು ವಿ. ಮನೋಹರ್. ಅವರು ಮೊದಲ ಸಾಲಿನಲ್ಲಿ ‘ಓ ಮಲ್ಲಿಗೆ’ ಎಂಬ ಪದ ಬಳಸಿದ್ದಾರಲ್ಲ? ಅದರಲ್ಲೇ ಒಂದು ಪ್ರೀತಿಯಿದೆ. ಹೊಸತನವಿದೆ. ಉಲ್ಲಾಸವಿದೆ. ಆಕರ್ಷಣೆಯಿದೆ. ಮೋಡಿಯಿದೆ. ನಾಯಕಿ ಕುರುಡಿ ಎಂದು ತಿಳಿದ ನಂತರವೂ ಅವಳನ್ನು ‘ಮಲ್ಲಿಗೆ’ ಎಂದು ಕರೆಯುತ್ತಾನೆ ಎಂದರೆ, ಆ ಹುಡುಗನ ಪ್ರೀತಿ ಎಷ್ಟು ಉದಾತ್ತವಾದದ್ದು ಎನಿಸಿ ಮನಸ್ಸು ಭಾವುಕವಾಗುತ್ತದೆ. ಈ ಹಾಡು ಬರೆದ ಸಂದರ್ಭದಲ್ಲಿ ಮನೋಹರ್ ಬ್ರಹ್ಮಚಾರಿಯಾಗಿದ್ದರು. ಬಹುಶಃ ಆ ದಿನಗಳಲ್ಲೇ ಅವರ ಮನಸ್ಸನ್ನು ಚೆಲುವೆಯೊಬ್ಬಳು ಕದ್ದಿರಬೇಕು. ಹಿಂದೆಯೇ ಅವಳು ಮನಸಿಗೂ ಬಂದಿರಬೇಕು. ಕನಸಿಗೂ ಬಂದು ಕಾಡಿರಬೇಕು. ಅವಳನ್ನು ಪದೇ ಪದೆ ನೆನಪು ಮಾಡಿಕೊಂಡೇ ಮನೋಹರ್ ಈ ಹಾಡು ಬರೆದಿರಬೇಕು…
ಇಂಥದೇ ಅನುಮಾನವನ್ನು ಮನೋಹರ್ ಬಳಿ ಹೇಳಿಕೊಂಡಾಗ ಅವರು ಮುಗ್ಧವಾಗಿ ನಕ್ಕರು. ನಂತರ ‘ನಿಮ್ಮ ಅಂದಾಜುಗಳಿಗೆ ಅರ್ಥವಿಲ್ಲ. ಈ ಹಾಡು, ಹಾಡಿನ ಸಾಲುಗಳು ಹೊಳೆದಿದ್ದರ ಹಿಂದೆ ಒಂದು ಕಥೆಯೇ ಇದೆ. ಹೇಳ್ತಾ ಹೋಗ್ತೇನೆ ಕೇಳಿ’ ಎಂದು ಆರಂಭಿಸಿದರು. ಆ ಚರಿತೆ ಹೀಗೆ:
ಉಮಾಕಾಂತ್ ಹಾಗೂ ನಾನು ಜತೆಯಲ್ಲಿ ವಾಸಿಸುತ್ತಿದ್ದ ದಿನಗಳವು. ‘ಅನುರಾಗ ಸಂಗಮ’ದ ಕಥೇನ ಉಮಾಕಾಂತ್ ಸಿನಿಮಾ ಮಾಡಲು ಹೊರಟಾಗ, ದೊರೆಸ್ವಾಮಿ ಎಂಬುವರು ನಿರ್ಮಾಪಕರಾಗಲು ಮುಂದೆ ಬಂದರು. ಚಿತ್ರೀಕರಣ ಆರಂಭವಾದ ಕೆಲವೇ ದಿನಗಳಲ್ಲಿ ಅವರು ನಿರ್ಮಾಣದಿಂದ ಹಿಂದೆ ಸರಿದರು. ನಂತರ ಈ ಚಿತ್ರ ಐದಾರು ಮಂದಿ ನಿರ್ಮಾಪಕರ ಕೈ ಬದಲಾಯಿಸಿತು. ಆದರೆ ಎಲ್ಲರೂ ಕೈಬಿಟ್ಟರು. ಕಡೆಗೆ, ನಿರ್ಮಾಪಕರೇ ಸಿಗುತ್ತಿಲ್ಲ ಎನ್ನಿಸಿದಾಗ ಉಮಾಕಾಂತ್ ಸಹಜವಾಗಿಯೇ ಕಂಗಾಲಾದರು. ಅದೊಂದು ದಿನ ಹತಾಶೆಯಿಂದ -‘ಚಿತ್ರವನ್ನು ಸಿನಿಮಾ ಸ್ಕೋಪ್‌ನಲ್ಲಿ ತೆಗೀಬೇಕು ಅಂತ ನನ್ನಾಸೆ. ಆದ್ರೆ ಯಾರೂ ನಿರ್ಮಾಪಕರೇ ಸಿಕ್ತಾ ಇಲ್ಲ. ಹಾಗಾಗಿ ಇದನ್ನು ೩೫ ಎಂಎಂ ನಲ್ಲಿ ತೆಗೆದುಬಿಡೋಣ’ ಎಂದರು. ಆಗ ನಾನು ಸಮಾಧಾನ ಮಾಡಿ, ಹೀಗೆಂದೆ: ‘ದುಡುಕಬೇಡಿ. ಅವಸರ ಪಡಬೇಡಿ. ಸದಾ ಆಶಾವಾದಿಯಾಗಿರಿ. ನಿಮಗೆ ಇವತ್ತಲ್ಲ  ನಾಳೆ ಒಳ್ಳೆಯ ದಿನ ಬಂದೇ ಬರುತ್ತೆ. ಸ್ವಲ್ಪ ಕಾದು ನೋಡಿ…’
ಮುಂದೆ, ನಾಯಕರಾಗಿದ್ದ ಕುಮಾರ್ ಗೋವಿಂದ್ ಅವರೇ ನಿರ್ಮಾಣದ ಹೊರೆ ಹೊತ್ತರು. ನಿಂತು ಹೋಗಿದ್ದ ಕೆಲಸ ಶುರುವಾಯಿತು. ಸಾಗರ -ಶಿವಮೊಗ್ಗ, ಕೆಮ್ಮಣ್ಣುಗುಂಡಿ ಸೀಮೆಯಲ್ಲಿ ಚಿತ್ರೀಕರಣ ಶುರುವಾಯಿತು. ನಾಯಕಿಯ ತಂದೆ ಸತ್ತಾಗ, ಅವಳಿಗೆ  ಸಮಾಧಾನ ಹೇಳುವ ಹಾಡೊಂದು ಬೇಕು ಎಂದರು ಉಮಾಕಾಂತ್. ಹಾಡು ಬರೆಯಲು ಕೂತವನು, ಮೊದಲ ಸಾಲನ್ನು ಹೇಗೆ ಆರಂಭಿಸಲಿ ಎಂದು ಯೋಚಿಸಿದೆ. ತಲೆಕೆರೆದುಕೊಂಡೆ. ಧ್ಯಾನಿಸಿದೆ. ಆ ಕ್ಷಣಕ್ಕೆ ಏನೂ ಹೊಳೆಯಲಿಲ್ಲ. ಈಗೇನು ಮಾಡೋದು ಎಂದುಕೊಂಡು ಸುತ್ತಲೂ ನೋಡಿದೆ. ಎದುರಲ್ಲೇ ಒಂದು ಮಲ್ಲಿಗೆಯ ಹೂವು ಬಿದ್ದಿತ್ತು. ಚಿತ್ರೀಕರಣದಲ್ಲಿ ನಾಯಕಿಗೆ ಮುಡಿಸಲೆಂದು ತಂದಿದ್ದ ಮಾಲೆಯಿಂದ ಕಳಚಿ ಬಿದ್ದ ಹೂವಾಗಿತ್ತು ಅದು. ಹೂವು, ಅದರಲ್ಲೂ ಮಲ್ಲಿಗೆ ಹೂವು ಅಂದ್ರೆ ನಂಗೆ ತುಂಬಾ ಇಷ್ಟ. ಅಂಥ ಮಲ್ಲಿಗೆಯನ್ನು ಹಾಗೆಯೇ ಬಿಟ್ಟರೆ  ಯಾರಾದರೂ ತುಳಿದು ಬಿಡ್ತಾರೆ ಅನ್ನಿಸ್ತು. ತಕ್ಷಣವೇ ಎದ್ದು ಹೋಗಿ ಅದನ್ನು ಎತ್ತಿಕೊಂಡೆ. ಅಂಗೈಲಿ ಇಟ್ಟುಕೊಂಡು- ‘ಇನ್ಮೇಲೆ ನಿನಗೆ ಭಯವಿಲ್ಲ’ ಎಂದು ತಮಾಷೆಯಾಗಿ ಹೇಳಿದೆ. ಆ ಕ್ಷಣದಲ್ಲೇ ಕಥಾನಾಯಕಿಗೂ  ಈ ಮಲ್ಲಿಗೆ ಹೂವಿಗೂ ಒಂಥರಾ ಸಂಬಂಧವಿದೆ ಅನ್ನಿಸ್ತು. ಯಾಕೆಂದರೆ, ಕಥಾನಾಯಕಿ ಕೂಡ ಈ ಹೂವಿನಂಥವಳು. ಕುಟುಂಬದ ಆಸರೆ ಕಳೆದುಕೊಂಡವಳು. ಅನಾಥೆಯಾದವಳು. ಅಭದ್ರತೆಯ ಭಾವ ಎದುರಿಸುತ್ತಿದ್ದವಳು ಅನಿಸಿತು. ಆಗಲೇ ಸುಂದರಿಯರನ್ನು ‘ಏಳು ಮಲ್ಲಿಗೆ ತೂಕದ ರಾಜಕುಮಾರಿ’ ಎಂದು ಕರೆದ ಕಥೆ ನೆನಪಾಯಿತು.
ತಕ್ಷಣವೇ, ನಾಯಕಿಯನ್ನು ‘ಓ ಮಲ್ಲಿಗೆ’ ಎಂದು ಕರೆದರೆ ಹೇಗೆ ಅನ್ನಿಸ್ತು. ಬರೆದೆ. ನಂತರ ನನ್ನ ಕೈಲಿದ್ದ ಮಲ್ಲಿಗೆ ಹೂವು ನೋಡಿಕೊಂಡೇ ಪಲ್ಲವಿ ಬರೆದೆ. ಯಾರಾದರೂ ತೀರಿಕೊಂಡಾಗ-‘ಒಳ್ಳೆಯವರನ್ನು ದೇವರು ಬೇಗ ಕರ್‍ಕೋತಾನೆ’ ಎನ್ನುವ ಜನರ ಮಾತು ನೆನಪಾಯ್ತು. ಅದನ್ನು ಮೊದಲ ಚರಣದಲ್ಲಿ ತಂದೆ. ಈ ಹಿಂದೆ ಉಮಾಕಾಂತ್‌ಗೆ ಆಶಾವಾದಿಯಾಗಿರಿ.  ಧೈರ್ಯ ಕಳ್ಳೋಬೇಡಿ ಎಂದು ಹೇಳಿದ್ದ ಸಂದರ್ಭವಿತ್ತಲ್ಲ? ಅದನ್ನು ಎರಡನೇ ಚರಣದಲ್ಲಿ ತಂದೆ. ಈ ಥರದ ಸಮಾಧಾನವನ್ನು ಎಷ್ಟೋ ಬಾರಿ, ಅವಕಾಶ ಸಿಗದೇ ಹೋದಾಗ ನನಗೆ ನಾನೇ ಹೇಳಿಕೊಂಡಿದ್ದೆ. ನೊಂದವರಿಗೆ ಸಮಾಧಾನ ಹೇಳುವ ಧಾಟಿಯಲ್ಲಿದ್ದ ಹಾಡು ಎಲ್ಲರಿಗೂ ಇಷ್ಟವಾಯಿತು.
ಇದಿಷ್ಟು ಹಾಡು ಹುಟ್ಟಿದ ಕಥೆ. ಈ ಹಾಡನ್ನು ದೇವರೂ ಮೈಮರೆತು ಕೇಳುವಂತೆ ಹಾಡಿದವರು ರಮೇಶ್ಚಂದ್ರ. ಇದು ಅವರ ಗಾಯನದ ಮೊದಲ ಚಿತ್ರಗೀತೆ. ಈ ಹಾಡು ಅವರಿಗೆ ಶ್ರೇಷ್ಠ ಗಾಯಕ ಎಂಬ ರಾಜ್ಯ ಪ್ರಶಸ್ತಿಯ ಕಿರೀಟ ತೊಡಿಸಿತು. ಸ್ವಾರಸ್ಯವೆಂದರೆ, ಅವರಿಗೆ ಈ ಹಾಡು ಹಾಡುವ ಅವಕಾಶ ಒದಗಿಬಂದದ್ದೇ ಆಕಸ್ಮಿಕವಾಗಿ. ಆ ಕಥೆ ಹೀಗೆ:
ಮೈಯ ಕಣಕಣದಲ್ಲೂ ಕನ್ನಡಾಭಿಮಾನ ತುಂಬಿಕೊಂಡಿರುವ ರಮೇಶ್ಚಂದ್ರ, ಕಾಸರಗೋಡಿನವರು. ಅಲ್ಲಿದ್ದುಕೊಂಡೇ ಕನ್ನಡ ಮಾಧ್ಯಮದಲ್ಲಿ ಓದಿದವರು. ಗಾಯಕನಾಗಬೇಕೆಂಬುದು ಅವರ ಬಹುದಿನಗಳ ಕನಸು. ಅದಕ್ಕಾಗಿ ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡು ಬೆಂಗಳೂರಿಗೆ ಬಂದರೆ-ನಿಮ್ದು ಕಾಸರಗೋಡು ಅಲ್ವಾ? ಮಲಯಾಳಿಗೆ ಹೋಗಿ ಅಂದರಂತೆ ಕೆಲವರು. ಊರಿಗೆ ಹೋದರೆ-‘ನೀನು ಬಿಡಪ್ಪಾ, ಕನ್ನಡಿಗ. ಅಲ್ಲಿಗೇ ಹೋಗು’ ಎಂದರಂತೆ.
‘ಛೆ, ಎಲ್ಲಿಯೂ ಸಲ್ಲದವನಾದೆ’ ಎಂದುಕೊಂಡು ರಮೇಶ್ಚಂದ್ರ ಚಿಂತಾಕ್ರಾಂತರಾಗಿದ್ದಾಗಲೇ ಅವರಿಗೆ ಅರವಿಂದ್ ಸ್ಟುಡಿಯೋದ ಮಾಲೀಕರು ಪರಿಚಯವಾದರು. ಅವರ ಮೂಲಕವೇ ವಿ. ಮನೋಹರ್‌ರ ಪರಿಚಯವೂ ಆಯಿತು. ಆ ವೇಳೆಗೆ-‘ಓ ಮಲ್ಲಿಗೆ’ ಹಾಡನ್ನು ಡಾ. ರಾಜ್ ಅವರಿಂದ ಹಾಡಿಸಲು ನಿರ್ಧರಿಸಲಾಗಿತ್ತು. ಅದೊಮ್ಮೆ ರಮೇಶ್ಚಂದ್ರರನ್ನು ಭೇಟಿಯಾದ ಮನೋಹರ್-ಅಣ್ಣಾವ್ರು ಹಾಡಬೇಕಿರುವ ಒಂದು ಹಾಡಿದೆ. ಅದಕ್ಕೆ ಟ್ರ್ಯಾಕ್‌ನಲ್ಲಿ ಹಾಡ್ತೀರಾ ಅಂದರಂತೆ. ರಾಜ್‌ಕುಮಾರ್ ಅವರು ಹಾಡುವ ಗೀತೆಗೆ ಟ್ರ್ಯಾಕ್ ಸಿಂಗರ್ ಆಗಿ ಹಾಡುವುದೂ ಸೌಭಾಗ್ಯ ಎಂದುಕೊಂಡು, ಹಾಡ್ತೇನೆ ಸರ್ ಎಂದಿದ್ದಾರೆ ರಮೇಶ್ಚಂದ್ರ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ   ಅಭಿಮಾನ ಹಾಗೂ ಅಕ್ಕರೆಯನ್ನು ಅಂಗೈಲಿ ಹಿಡಿದುಕೊಂಡೇ ಹಾಡಿದರು.
ಮುಂದಿನ ಕಥೆ ಕೇಳಿ: ಈ ಟ್ರ್ಯಾಕ್ ಹಾಡನ್ನು ಅದೊಮ್ಮೆ ಕೇಳಿದ ಅಣ್ಣಾವ್ರು- ಅರೇ, ಇದ್ಯಾರ ದನಿ? ಇಲ್ಲಿ ಹಾಡಿರುವವರ ಧ್ವನಿ ಸೊಗಸಾಗಿದೆ. ಈ ಹೊಸ ಗಾಯಕನ ದನಿಯಲ್ಲಿ ಯಾವುದೋ ಮಾಂತ್ರಿಕತೆಯಿದೆ. ಮೋಡಿಯಿದೆ. ಎಂಥದೋ ಸೆಳೆತವಿದೆ. ಇದನ್ನೇ ಉಳಿಸಿಕೊಳ್ಳಿ ಎಂದರಂತೆ. ಪರಿಣಾಮ, ಟ್ರ್ಯಾಕ್‌ಗೆ ಹಾಡಿದ್ದ ಗೀತೆಯೇ ಚಿತ್ರಕ್ಕೂ ಬಂತು. ಕನ್ನಡಿಗರಿಗೆ ರಮೇಶ್ಚಂದ್ರರ ಸಿರಿಕಂಠದ ಪರಿಚಯ ಮಾಡಿಕೊಟ್ಟಿತು.
ಈ ಹಾಡಿಗಾಗಿ ರಮೇಶ್ಚಂದ್ರ ಅವರಿಗೆ ಶ್ರೇಷ್ಠ ಗಾಯಕ ಪ್ರಶಸ್ತಿ ಬಂತು. ಜ್ಯೂನಿಯರ್ ಯೇಸುದಾಸ್ ಎಂಬ ಬಿರುದೂ ಜತೆಯಾಯಿತು. ಆದರೆ ಮುಂದಿನ ದಿನಗಳಲ್ಲಿ  ಈ ಮಧುರ ಕಂಠದ ಗಾಯಕನಿಗೆ ಅವಕಾಶಗಳನ್ನು ಕೊಡುವ ದೊಡ್ಡ ಮನಸ್ಸು ಕನ್ನಡದ ಸಂಗೀತ ನಿರ್ದೇಶಕರಿಗೆ ಬರಲೇ ಇಲ್ಲ!
ರಮೇಶ್ಚಂದ್ರ ಎಂಬ ಸಿರಿಕಂಠದ ಕೋಗಿಲೆಗೆ ಅವಕಾಶ ಕೊಡುವ ಆಪ್ತ ಮನಸ್ಸುಗಳಿಗೆ ಕನ್ನಡದಲ್ಲಿ ಬರವೆ?

‍ಲೇಖಕರು avadhi

May 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This