ಮಣಿಕಾಂತ್ ಬರೆಯುತ್ತಾರೆ: ಕಾಳಿ ಕಂಡು ಕೈ ಮುಗಿದ ರಾಜ್!

ಮಾಣಿಕ್ಯ ವೀಣಾ…
ಚಿತ್ರ: ಕವಿರತ್ನ ಕಾಳಿದಾಸ. ಗಾಯನ: ಡಾ. ರಾಜ್‌ಕುಮಾರ್
ಸಂಗೀತ: ಎಂ. ರಂಗರಾವ್. ಗೀತೆರಚನೆ: ಕಾಳಿದಾಸ
ಮಾಣಿಕ್ಯವೀಣಾ ಮುಫಲಾಲಯಂತೀಂ
ಮದಲಸಾಂ ಮಂಜುಲ ವಾಗ್ವಿಲಾಸಾಂ… ಆ…ಆ…
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗ ಕನ್ಯಾಂ ಮನಸಾಸ್ಮುರಾಮೀ… ಮನಸಾಸ್ಮರಾಮೀ…
ಚತುರ್ಭುಜೇ ಚಂದ್ರಕಳಾಮಾತಸೇ
ಕುಚೋನ್ನತೇ ಕುಂಕುಮ ರಾಗಶೋಣೇ… ಆ…ಆ…
ಪುಂಡ್ರೇಕ್ಷು ಪಾಶಾಂಕುಶ ಪುಷ್ಪಬಾಣಹಸ್ತೇ
ನಮಸ್ತೇ ಜಗದೇಕ ಮಾತಹಾ…
ಮಾತಾ… ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಕಾಟಾಕ್ಷಂ ಕಲ್ಯಾಣೀ… ಕದಂಬ ವನವಾಸಿನೀ
ಜಯ ಮಾತಂಗ ತನಯೇ ಜಯ ನೀಲೋತ್ಪಲದ್ಯುತೇ
ಜಯ ಸಂಗೀತ ರಸಿಕೇ, ಜಯ ಲೀಲಾ ಶುಕಪ್ರಿಯೇ
ಸುಧಾ ಸಮುದ್ರಾಂತ ಹೃದ್ಯನ್ಮಣೀದೀಪ ಸಮ್ರಾಡ
ಬಿಲ್ವಾಟಡೀ ಮಧ್ಯ
ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸ ಪ್ರಿಯೇ
ಕೃತ್ತಿ ವಾಸಪ್ರಿಯೇ… ಸರ್ವಲೋಕಪ್ರಿಯೇ
ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ಧ
ತಾಟಂಕ ಭೂಷಾ ವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ….
ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ
ವಾಗೀಶ ಕೋಣೇಶ ವಾಯ್ವುಗ್ನಿ ಕೋಟೀರ ಮಾಣಿಕ್ಯ
ಸಂಕೃಷ್ಟ ಬಾಲಾ ತಪೋತ್ತಾಮ ಲಾಕ್ಷಾರ ಕಾರುಣ್ಯ
ಲಕ್ಷ್ಮೀ ಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ
ಪುರುಚಿನ ನವರತ್ನ ಪೀಠಸ್ತಿತೇ ಸುಸ್ತಿತೇ
ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
ದೇವಿದುರ್ಗಾವಟುಕ್ಷೇತ್ರ ಪಾಲೈರ್ಯತೆ
ಮತ್ತ ಮಾತಂಗಕನ್ಯಾ ಸಮೂಹಾನ್ವಿತೇ
ಸರ್ವಯಂತ್ರಾತ್ಮಿಕೆ, ಸರ್ವ ಮಂತ್ರಾತ್ಮಿಕೆ, ಸರ್ವ ತಂತ್ರಾತ್ಮಿಕೆ
ಸರ್ವ ಮದ್ರಾಫಿಕೆ, ಸರ್ವ ಶಾಕ್ತ್ಯಾತ್ಮಿಕೆ, ಸರ್ವ ವರ್ಣಾತ್ಮಿಕೆ
ಸರ್ವ ರೂಪೇ ಜಗನ್ಮಾತೃಕೇ… ಹೇ ಜಗನ್ಮಾತೃಕೇ
ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹೀ…
‘ಕವಿರತ್ನ ಕಾಳಿದಾಸ’ ಚಿತ್ರದ ಈ ಸಂದರ್ಭವನ್ನೊಮ್ಮೆ ನೆನಪು ಮಾಡಿಕೊಳ್ಳಿ: ಮಹಾಮಂತ್ರಿಯ ಕುತಂತ್ರದಿಂದ ಅಕ್ಷರದ ಗಂಧವೇ ಗೊತ್ತಿಲ್ಲದ ಕುರುಬನೊಬ್ಬ ರಾಜಕುಮಾರಿಯ ಕೈಹಿಡಿಯುತ್ತಾನೆ. ಮೊದಲಿಗೆ ತನ್ನ ಗಂಡನೊಬ್ಬ ಅಸಾಧಾರಣ ಪಂಡಿತ ಎಂದೇ ನಂಬಿದ್ದ ರಾಜಕುಮಾರಿಗೆ- ಆ ಗಂಡ ಮಹರಾಯ ಮಾತುಮಾತಿಗೂ- ‘ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ’ ಎಂದು ಹೇಳುವುದನ್ನು ಕೇಳಿದ ನಂತರ, ತಾನು ಮೋಸ ಹೋಗಿರುವುದು ಅರ್ಥವಾಗುತ್ತದೆ. ಆಗಿದ್ದಾಯ್ತು. ಈಗ  ಗಂಡನನ್ನು ವಿದ್ಯಾವಂತನನ್ನಾಗಿ ಮಾಡಲೇ ಬೇಕು ಎಂಬ ಹಟದಿಂದ ಅವಳು ಕಾಳಿಕಾದೇವಿಯ ಗುಡಿಗೆ ಬರುತ್ತಾಳೆ. ಆ ಸಂದರ್ಭದಲ್ಲಿ ದೇವಿ ಹೊರಗೆ ಸಂಚಾರ ಹೋಗಿರುತ್ತಾಳೆ. ಇದನ್ನು ಗಮನಿಸಿ, ರಾಜಕುಮಾರಿ ಗಂಡನಿಗೆ ಹೇಳುತ್ತಾಳೆ: ‘ದೇವಿ ಈಗ ಸಂಚಾರ ಹೋಗಿದ್ದಾಳೆ ನೀನು ಹೋಗಿ ಒಳಗೆ ಸೇರಿಕೋ. ಬಾಗಿಲು ಹಾಕ್ಕೊಂಬಿಡು. ದೇವಿ ಬಂದು ಬಾಗಿಲು ತೆಗಿ ಅಂತಾಳೆ. ಆಗ ತೆಗೀಬೇಡ. ತಗೀಲೇಬೇಕು ಅಂತಾದ್ರೆ ನಂಗೆ ವಿದ್ಯಾಬುದ್ಧಿ ಕೊಡು ಅಂತ ಕೇಳಿಕೋ. ಕೊಡ್ತೇನೆ ಅಂದ ನಂತರವೇ ತೆಗಿ…’
ಈ ಸನ್ನಿವೇಶದಲ್ಲಿ ಹುಡುಗಾಟಿಕೆಯ ಮಾತುಗಳ ಕುರುಬನೊಬ್ಬ ದೇವಿಯ ಅನುಗ್ರಹದಿಂದ ದಿಢೀರನೆ ಸಕಲವಿದ್ಯಾಪಾರಂಗತನಾಗಿಬಿಡುವ ಪವಾಡದ ದೃಶ್ಯೀಕರಣವಿದೆ.
ಎರಡು ಭಿನ್ನ ಸಂದರ್ಭಗಳಲ್ಲಿನ ರಾಜ್‌ಕುಮಾರ್ ಅವರ ಅಭಿನಯವಿದೆಯಲ್ಲ? ಅಬ್ಬ, ಅದು ವರ್ಣನೆಗೆ ಸಿಲುಕುವಂಥದಲ್ಲ…
ಈ ಸಂದರ್ಭವನ್ನು ನೆನಪು ಮಾಡಿಕೊಂಡು ‘ಚಿತ್ತಾರ’ ಮಾಸಿಕದ ಸಂಪಾದಕರಾದ ಬಿ. ಗಣಪತಿಯವರು, ಡಾ. ರಾಜ್‌ಕುಮಾರ್ ಅವರನ್ನು ಹಿಂದೊಮ್ಮೆ ಕೇಳಿದ್ದರು:
‘ಸಾರ್, ಕಾಳಿಕಾದೇವಿಯ ಸನ್ನಿಧಾನದಲ್ಲಿ ನಾಲಿಗೆಯ ಮೇಲೆ ಬರೆಸಿಕೊಳ್ಳುವ ಸನ್ನಿವೇಶ- ಅದು, ಒಬ್ಬ ಅನಕ್ಷರಸ್ಥ, ಅಜ್ಞಾನಿ ಇದ್ದಕ್ಕಿದ್ದಂತೆ ಸುಜ್ಞಾನಿಯಾಗಿ, ಪಂಡಿತನಾಗಿ, ಸುಸಂಸ್ಕೃತನಾಗಿ ಮಾರ್ಪಡುವ ಕ್ಷಣ… ಅಲ್ಲಿ ನಿಮ್ಮ ಪಾತ್ರಾಭಿವ್ಯಕ್ತಿ, ವ್ಯಕ್ತಿತ್ವದ ಬದಲಾವಣೆ, ಅದನ್ನು ಕಣ್ಣಿನ ನೋಟದಲ್ಲಿಯೇ ಹೊಮ್ಮಿಸಿದ ತಾದಾತ್ಮ್ಯ… ಆ ಶ್ರೇಷ್ಠ ಅಭಿನಯ ಹೇಗೆ ಸಾಧ್ಯವಾಯ್ತು ಸಾರ್?’
ಈ ಪ್ರಶ್ನೆಗೆ ರಾಜ್ ಹೀಗೆ ಉತ್ತರಿಸಿದ್ದರು:’
ಕಾಳಿದಾಸ ಚಿತ್ರದ ದೃಶ್ಯಗಳ ಬಗ್ಗೆ ಚರ್ಚಿಸ್ತಾ ಇದ್ದಾಗ ಆ ಸೀನ್ ಅಷ್ಟೊಂದು ಗಮನಾರ್ಹವಾದುದು ಅಂತ ನಂಗೆ ಅನಿಸಿಯೇ ಇರಲಿಲ್ಲ. ಆ ಕುರುಬನಿಗೆ ರಾಜಕುಮಾರಿ ಹೇಳಿಕೊಟ್ಟಿರ್‍ತಾಳೆ: ‘ದೇವಿ ಬಾಗಿಲು ತೆಗಿ ಅಂದಾಕ್ಷಣ ತೆಗೀಬೇಡ.
ಮುಕ್ಕಣ್ಣನ ಆಣೆಗೂ ನಿಂಗೆ ವಿದ್ಯಾಬುದ್ಧಿ ಕೊಡ್ತೇನೆ ಅಂತ ಹೇಳಿದ ನಂತರವೇ ಬಾಗಿಲು ತೆಗಿ..’ ಅಂತ.
ಈ ದೃಶ್ಯದಲ್ಲಿ ಅಭಿನಯಿಸುವಾಗ ನನ್ನ ತಲೇಲಿ ಇದ್ದುದು ಇಷ್ಟೆ.
ದೇವಸ್ಥಾನದ ಒಳಗೆ ಒಬ್ಬ ಅನಕ್ಷರಸ್ಥ. ಹೊರಗೆ ಒಬ್ಬಳು ತಿಳಿವಳಿಕಸ್ಥೆ: ಅವಳು ದೇವಿ. ಯಾರೋ ಒಬ್ಬಳು ಅಪರಿಚಿತೆಯೊಂದಿಗೆ ಮಾತಾಡ್ತಾ ಇದೀನಿ ಅನ್ನೋ ಭಾವನೆ ಮಾತ್ರ ಅವನದು.
ದೇವಿ ಅಂದ್ರೆ ಯಾರು? ಸಾಮಾನ್ಯ ಹೆಂಗಸು ಅಂದ್ರೆ ಯಾರು? ಆ ದಿವ್ಯ, ಭವ್ಯ ತೇಜಸ್ಸಿನ ಮಾತೆಯ ಸಾನಿಧ್ಯ ಅಂದ್ರೆ ಏನು… ಇದೊಂದೂ ಗೊತ್ತಿರೋದಿಲ್ಲ ಅವನಿಗೆ.
ಅಂಥದೊಂದು ಕಲ್ಪನೆ ಮಾಡುವುದಕ್ಕೂ ಗೊತ್ತಿಲ್ಲದ ಕುರುಬರ ಪಿಳ್ಳೆ ಅವನು… ದೇವಸ್ಥಾನದ ಒಳಗೆ ಕೂತಿದ್ದಾಗ ಇಷ್ಟೆ… ಇಷ್ಟೇ ನನ್ನ ತಲೇಲಿ ಇದ್ದುದು…
ಆದ್ರೆ, ಬಾಗಿಲು ತೆಗೆದಾಕ್ಷಣ ನನ್ನ ಕಣ್ಣಿಗೆ ಬಿದ್ದದ್ದು ಒಂದು ಭವ್ಯ ಮೂರ್ತಿ. ಅದನ್ನು ನೋಡ್ತಾ ಇದ್ದಂಗೇ ನನಗೆ ರೋಮಾಂಚನವಾಯ್ತು. ದಿಗ್ಭ್ರಮೆಯಾಯ್ತು. ಎದುರಿಗೆ ನಿಂತಾಕೆ ಪಾತ್ರಧಾರಿಯಲ್ಲ, ಸಾಕ್ಷಾತ್ ದೇವತೆ ಅನ್ನಿಸಿಬಿಡ್ತು. ಏನೋ ಹೇಳೋಣ ಅಂದ್ಕೊಂಡೆ. ಮಾತೇ ಹೊರಡಲಿಲ್ಲ.
ಆ ಸ್ಥಳ, ಆ ಸನ್ನಿವೇಶ ನನ್ನಿಂದ ಒಳ್ಳೆಯ ಅಭಿನಯಾನ ತಕ್ಕೊಂಡಿದೆ ಅನ್ನೋತೇನೆ.
ಅಂಥದೊಂದು ಅಭಿನಯ ಹೇಗೆ ಸಾಧ್ಯವಾಯ್ತು? ಯಾರು ಮಾಡಿಸಿದ್ರು? ನಾನೇ ಮಾಡಿದ್ನೋ ಅಥವಾ ಆ ಮಾತೆ ಮಾಡಿಸಿದ್ಲೋ… ಇದೆಲ್ಲ ಲೆಕ್ಕಾಚಾರಕ್ಕೆ ಸಿಕ್ಕೋವಂಥದಲ್ಲ.
ಅದೊಂದು ಕ್ಷಣ. ಅರ್ಪಣಾ ಭಾವ, ಸಮರ್ಪಣಾ ಭಾವ ಅಂತಾರಲ್ಲ ಅದು. ಹಾಗೆಂದ ಮಾತ್ರಕ್ಕೆ ನಾನು ಮೊದಲೇ ರಿಹರ್ಸಲ್ ಮಾಡಿಕೊಂಡು ನಟಿಸಿದ ದೃಶ್ಯವಲ್ಲ ಅದು. ನಾನೇನು ಅಂಥ ದೊಡ್ಡ ನಟನೂ ಅಲ್ಲ, ಅದು, ಆ ಕ್ಷಣದಲ್ಲಿ ಮಿಂಚಿನಂತೆ ಆಗಿಯೋಯ್ತು.
ಬಹುಶಃ ಅದು ದೈವ ಕೃಪೆ. ಅಪ್ಪಾಜಿಯ ಆರ್ಶೀವಾದ. ತಾಯಿಯ ಪ್ರಸಾದ. ಅದು ಬಿಟ್ರೆ ನಮಗೇನು ಗೊತ್ತಿದೆ ಬದ್ನೇಕಾಯಿ… ಅಲ್ವಾ?’
‘ಕವಿರತ್ನ ಕಾಳಿದಾಸ’ದಲ್ಲಿ ಕಾಳಿಕಾಮಾತೆಯ ಪಾತ್ರ ಮಾಡಿದಾಕೆ ಆ ಕಾಲಕ್ಕೆ ತಮಿಳಿನಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿದ್ದ ನಳಿನಿ. ಆಕೆ ದೇವಿಯ ಪಾತ್ರಕ್ಕೆ ಆಯ್ಕೆಯಾಗಿದ್ದೂ ಒಂದು ಸ್ವಾರಸ್ಯದ ಕಥೆ. ಅದನ್ನು ರೇಣುಕಾಶರ್ಮ ವಿವರಿಸಿದ್ದು ಹೀಗೆ:
ಕಾಳಿಕಾದೇವಿಯ ಪಾತ್ರಕ್ಕೆ ಬಿ. ಸರೋಜಾದೇವಿ, ಹೇಮಾಮಾಲಿನಿಯವರ ಹೆಸರುಗಳೂ ಬಂದು ಹೋಗಿದ್ದವು. ಕೆಲವರು-‘ಅಯ್ಯೋ, ಇದೊಂದು ಚಿಕ್ಕ ಪಾತ್ರ ತಾನೆ? ಯಾರಾದರೂ ಕ್ಯಾಬರೆ ನಟಿಯಿಂದ ಮಾಡಿಸಿದರೂ ಆಗುತ್ತೆ’ ಎಂದಿದ್ದರು. ಆದರೆ ಯಾವುದೇ ನಟಿಯನ್ನು ಕಣ್ಮುಂದೆ ತಂದು ಕೊಂಡರೂ ಅಲ್ಲಿ ನನ್ನ ಕಲ್ಪನೆಯ ಕಾಳಿಕಾಮಾತೆ ಕಾಣುತ್ತಿರಲಿಲ್ಲ.
ಹೀಗಿದ್ದಾಗಲೇ ಅದೊಂದು ದಿನ ಚಿತ್ರೀಕರಣದ ಸ್ಥಳಕ್ಕೆ ನಳಿನಿ ಬಂದಳು. ಆಕೆ ಆಗ ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದಳು.
ನನ್ನೊಂದಿಗೆ ಅದನ್ನೂ ಹೇಳಿಕೊಂಡು-‘ಒಂದು ಚಿಕ್ಕ ಪಾತ್ರ ಇದ್ರೆ ಕೊಡ್ತೀರಾ ಸಾರ್?’ ಎಂದಳು. ಒಮ್ಮೆ ಅವಳನ್ನೇ ತಲೆಯೆತ್ತಿ ನೋಡಿದೆ: ಅಷ್ಟೆ. ನನ್ನ ಕಣ್ಮುಂದೆ ಸಾಕ್ಷಾತ್ ಕಾಳಿದೇವಿಯೇ ನಿಂತಿರುವಂತೆ ಭಾಸವಾಯಿತು.
ತಕ್ಷಣವೇ ಆಕೆಗೆ ಕಾಳಿಕಾದೇವಿಯ ಥರಾ ಮೇಕಪ್ ಮಾಡಿಸಿ, ರಾಜ್‌ಕುಮಾರ್ ಅವರ ಬಳಿಗೆ ಕರೆದೊಯ್ದೆ. ಇವಳನ್ನು ನೋಡಿದಾಕ್ಷಣ ಅವರು ಛಕ್ಕನೆ ಎದ್ದುನಿಂತು ಕೈಮುಗಿದುಬಿಟ್ಟರು.
ನಂತರ-‘ ಶರ್ಮಾ ಅವರೇ, ನಿಮ್ಮ ಆಯ್ಕೆ ಅದ್ಭುತ. ಇವರನ್ನು ನೋಡುತ್ತಿದ್ದರೆ ಕಾಳಿಕಾದೇವಿಯನ್ನು ನೋಡಿದಂತೆಯೇ ಭಾಸವಾಗುತ್ತಿದೆ. ಮುಂದುವರೀರಿ…’ ಎಂದರು.
ಅದುವರೆಗೂ ಬಂದು ಹೋಗಿದ್ದ ಸಿನಿಮಾಗಳಲ್ಲಿ ವರ ನೀಡುವ ಸಂದರ್ಭದಲ್ಲಿ ದೇವರ ಕೈಯಿಂದ ಬೆಳಕು ಹೊಮ್ಮುವಂತೆ, ಅದು ಭಕ್ತನ ಮೇಲೆ ಬೀಳುವಂತೆ ತೋರಿಸಲಾಗುತ್ತಿತ್ತು.
‘ಕಾಳಿದಾಸ’ದಲ್ಲಿ  ಈ ದೃಶ್ಯವನ್ನು ಭಿನ್ನವಾಗಿ ತೋರಿಸಬೇಕು ಅನ್ನಿಸ್ತು. ಅದಕ್ಕೇ ಭಕ್ತನ ನಾಲಿಗೆಯ ಮೇಲೆ ತ್ರಿಶೂಲದಿಂದ ಓಂಕಾರ ಬರೆಯುವಂತೆ ತೋರಿಸಲು ನಿರ್ಧರಿಸಿದೆ….
ಹೀಗೆ, ‘ಓಂ’ ಎಂದು ಬರೆದಾಗ ಆಗೋದು ಒಂದು ಪವಾಡ, ಒಂದು ಯುಗಾಂತರದ ಬದಲಾವಣೆ ಎಂಬುದನ್ನು ತೋರಿಸಲು ಹಿನ್ನೆಲೆಯಲ್ಲಿ ನದಿ, ನೀರು, ಬೆಳಕು, ಚಿಗುರೊಡೆದ ಪ್ರಕೃತಿಯ  ದೃಶ್ಯಗಳನ್ನು ತೋರಿಸಿದೆ.
ಹೀಗೆ, ಕಾಳಿಕಾದೇವಿ ಓಂಕಾರ ಬರೀತಾಳಲ್ಲ? ಆನಂತರದಲ್ಲಿ  ಕಾಳಿದಾಸ ಭಾವುಕನಾಗಿ, ಭಾವಪರವಶನಾಗಿ ಆ ಭವ್ಯ-ದಿವ್ಯ ಮೂರ್ತಿಯ ಮುಖ ನೋಡಿಕೊಂಡು ಒಂದು ಸುತ್ತು ಬಂದು, ಆಕೆಯ ಪಾದದ ಮೇಲೆ ಹಣೆಯಿಟ್ಟು ಗೊಳೋ ಎಂದು ಅಳಲು ಶುರುಮಾಡುತ್ತಾನೆ. ಅದು ಕಾಳೀದಾಸನ ಭಕ್ತಿ, ಪ್ರೀತಿ, ಶರಣಾಗತಿ ಎಲ್ಲದರ  ಪರಾಕಾಷ್ಠೆ….
ಈ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ರಾಜ್‌ಕುಮಾರ್ ಮೈಮರೆತು ಅಭಿನಯಿಸಿದ್ರು. ಆ ದೃಶ್ಯ ಮುಗಿದ ನಂತರ ಕಾಳಿಕಾ ಮಾತೆಯ ಪಾತ್ರದಲ್ಲಿದ್ದ ನಳಿನಿ ಅಳುತ್ತಾ-‘ಅಯ್ಯೋ, ಏನ್ಸಾರ್ ಇದೂ? ನೀವು ಮೇರುನಟರು. ವಯಸ್ಸಿನಲ್ಲೂ ಹಿರಿಯರು. ಹಾಗಿದ್ದೂ ನನ್ನ ಕಾಲಿಗೆ ನಮಿಸಿಬಿಟ್ರಲ್ಲ? ಶಾಂತಂಪಾಪಂ ಶಾಂತಂಪಾಪಂ’ ಎನ್ನಲು ಶುರುಮಾಡಿದಳು.
ಆಗ, ರಾಜ್‌ಕುಮಾರ್ ಒಂದು ಮುತ್ತಿನಂಥ ಮಾತು ಹೇಳಿದ್ರು: ‘ಈ ಸನ್ನಿವೇಶದಲ್ಲಿ ನಾನು ರಾಜಕುಮಾರ್ ಅಲ್ಲ, ನೀನು ನಳಿನಿಯೂ ಅಲ್ಲ. ನಾನು ಭಕ್ತ ಕಾಳಿದಾಸ. ನೀನು ಕಾಳಿಕಾಮಾತೆ.
ನಮ್ಮದು ತಾಯಿ ಮಗನ ಸಂಬಂಧ. ದೇವಿ-ಭಕ್ತನ ಅಪರೂಪದ ಮುಖಾಮುಖಿ ಸಂದರ್ಭ  ಇದು. ನಾನಂತೂ ನಿನ್ನಲ್ಲಿ ಕಾಳಿಕಾದೇವಿಯನ್ನು ಕಂಡೇ ನಮಸ್ಕರಿಸಿದೆ…’
ರಾಜ್‌ಕುಮಾರ್ ಅವರ ಮಾತು ಕೇಳಿ ಒಂದರೆಕ್ಷಣ ಯಾರಿಗೂ ಮಾತೇ ಹೊರಡಲಿಲ್ಲ. ನಂತರ ಮೇಕಪ್ ಅಳಿಸಿ ಬಂದ ನಳಿನಿ, ಅಣ್ಣಾವ್ರ ಪಾದಕ್ಕೆರಗಿ-‘ನಿನಗೆ ಒಳ್ಳೆಯದಾಗಲಿ ಎಂದು ಹಾರೈಸಿ ಸಾರ್’ ಎಂದು ಬೇಡಿಕೊಂಡಳು…
ಹಾಡಿನ ಕಥೆಯ ನೆಪದಲ್ಲಿ ಇಷ್ಟೆಲ್ಲ ವಿವರಣೆ ನೀಡಿದ ರೇಣುಕಾ ಶರ್ಮ ಕಡೆಯದಾಗಿ ಒಂದು ಮಾತು ಹೇಳಿದರು. ಪಾತ್ರವೇ ತಾನಾಗಿ ಬಿಡುವ ವಿಷಯಕ್ಕೆ ಬಂದಾಗ, ರಾಜ್‌ಕುಮಾರ್‌ಗೆ ರಾಜ್‌ಕುಮಾರೇ ಸಾಟಿ.
ಈ ಮಾತಿಗೆ ಸಾಕ್ಷಿ ಬೇಕಿದ್ದರೆ ‘ಮಾಣಿಕ್ಯವೀಣಾ’ ಹಾಡು ನೋಡಿ. ಅಲ್ಲಿ ನಮಗೆ ರಾಜ್‌ಕುಮಾರ್ ಸಿಕ್ಕುವುದಿಲ್ಲ. ಸಾಕ್ಷಾತ್ ಕಾಳಿದಾಸನೇ ಸಿಕ್ಕುತ್ತಾನೆ!

‍ಲೇಖಕರು avadhi

July 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

3 ಪ್ರತಿಕ್ರಿಯೆಗಳು

 1. ಸುರೇಶ್ ನಾಡಿಗ್

  ಸರ್ ಬಹಳ ಚೆನ್ನಾಗಿದೆ, ರಾಜ್ಕುಮಾರ್ಗೆ ರಾಜ್ಕುಮಾರೇ ಸಾಟಿ ನಿಜ.

  ಪ್ರತಿಕ್ರಿಯೆ
 2. ಗ್ರಹಣ

  ಸರ್‌, ಇದು ಹಾಡು ಹುಟ್ಟಿದ ಸಮಯ ಅಂಕಣದಲ್ಲಿ ಬಂದ ಲೇಖನ… ಲೇಖನ ಚೆನ್ನಾಗಿದೆ..
  ಆದರೆ ಇದು ಹಾಡಿನ ಚಿತ್ರೀಕರಣದ ಸಮಯದ ಕುರಿತಾಗಿಯೇ ಇದೆ ಹೊರತು ಹುಟ್ಟಿದ ಸಮಯದ ಬಗ್ಗೆ ಇಲ್ಲ. ಅದರ ಹಿಂದೆಯೂ ಕುತೂಹಲಕಾರಿಯಾದ ಕಥೆ ಇರಬಹುದೆಂದು ನನ್ನ ಊಹೆ…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: