ಮಣಿಕಾಂತ್ ಬರೆಯುತ್ತಾರೆ: …..ಡಿಮ್ಯಾಂಡಪ್ಪೊ ಡಿಮ್ಯಾಂಡು

ಮೀಸೆ ಹೊತ್ತ ಗಂಡಸಿಗೆ…

ಚಿತ್ರ: ಅವಳೇ ನನ್ನ ಹೆಂಡ್ತಿ. ಸಾಹಿತ್ಯ-ಸಂಗೀತ: ಹಂಸಲೇಖ.

ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೊ ರಿಮ್ಯಾಂಡು

ಎಷ್ಟು ಕೊಟ್ರು ಸಾಲಲ್ಲ ಬೀಗತನ ಮುಗಿಯಲ್ಲ

ತಾಳಿಯಿನ್ನು ಕಟ್ಟಿಲ್ಲ ಮಾತುಕತೆ ಮುಗಿದಿಲ್ಲ

ಹೆಣ್ಣಿಗೊಂದು ತಾಳಿಕಟ್ಟೊ ಗಳಿಗೆಯಿನ್ನು ಕೂಡಿಬಂದಿಲ್ಲಾ ||ಪ||

ಹೆಣ್ಣು ಕೊಟ್ಟ ಮಾವನು ಕಣ್ಣುಕೊಟ್ಟ ದೇವನು

ಹೆಣ್ಣು ಹೆತ್ತ ತಪ್ಪಿಗೆ ಕಾಲಿಗೇ ಬಿದ್ದರೋ…

ಸಾಲ ಸೋಲ ಮಾಡಿಯೋ ಚಕ್ರಬಡ್ಡಿ ನೀಡಿಯೋ

ದುಡ್ಡು ತಂದು ಒಟ್ಟಿಗೇ ಗಂಡಿಗೇ…. ಕೊಟ್ಟರೋ…

ಸೂಟು ಬೂಟು ಬೇಕಂತಾನೆ, ವಾಚು ಉಂಗ್ರ ಎಲ್ಲಂತಾನೆ

ಸ್ಕೂಟ್ರು ತಂದು ನಿಲ್ಸಂತಾನೆ, ಮದುವೆ ಆಮೇಲಂತಾನೆ

ಮಾತು ಕತೆ ಇನ್ನೂ ಮುಗ್ದಿಲ್ಲಾ….ಓ….

ಹೆಣ್ಣಿಗೊಂದು ತಾಳಿಕಟ್ಟೋ ಪುಣ್ಯವಂತು

ಇನ್ನೂ ಕೂಡಿ ಬಂದಿಲ್ಲಾ || ಮೀಸೆ ಹೊತ್ತ||

ನಿಂತು ಹೋದ ಮದುವೆಗೆ, ಬಂದು ಸೇರಿದವರಿಗೆ

ಮದುವೆ ಊಟದಡಿಗೆ ಸಂಡಿಗೆ ಚಿಂತೆಯೋ

ದೇಶದಲ್ಲಿ ತಿನ್ನಲು ಅನ್ನವಿಲ್ಲದಿರಲು

ದಂಡಪಿಂಡಗಳಿಗೆ ಅನ್ನದಾ ಸಂತೆಯೋ ಓ…

ಬಾಳೆದಿಂಡು ಬಾಡೇಹೋಯ್ತು ತೋರಣವು ಒಣಗೇ ಹೋಯ್ತು

ತೆಂಗಿನ್‌ಕಾಯ್ ನಿದ್ದೆ ಮಾಡ್ತು, ತಾಳಿಯಂತು ಯೋಚ್ನೇಗ್ ಬಿತ್ತು

ಅಕ್ಷತೆಗೆ ಕಾಲ ಬಂದಿಲ್ಲಾ… ಓ….

ಹೆಣ್ಣಿಗೊಂದು ತಾಳಿ ಕಟ್ಟೊ ಯೋಗವಂತೂ ಇಲ್ವೇ ಇಲ್ಲ ||೨||

ವರದಕ್ಷಿಣೆಯಾಗಿ ಉಂಗುರ ಕೊಡಲಿಲ್ಲ ಎಂಬ ಕಾರಣಕ್ಕೆ, ಮಾಡಿಸಿದ್ದ ಜೈನು ಚನ್ನಾಗಿಲ್ಲ ಎಂಬ ಕಾರಣಕ್ಕೆ, ಹೆಣ್ಣಿಗೆ ಜಾಸ್ತಿ ಒಡವೆ ಹಾಕಿಲ್ಲ ಎಂಬ ಕಾರಣಕ್ಕೆ ತಾಳಿ ಕಟ್ಟಲು ನಿರಾಕರಿಸಿದ ಭೂಪತಿಗಳಿದ್ದಾರೆ. ಅಷ್ಟೇ ಅಲ್ಲ, ಕೇಳಿದಷ್ಟು ವರದಕ್ಷಿಣೆಯಲ್ಲಿ ಕೆಲವೇ ಸಾವಿರ ರೂಪಾಯಿ ಕಡಿಮೆ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಹುಡುಗಿಯ ತಂದೆಯನ್ನು ಎಡಗಾಲಲ್ಲಿ ಒದ್ದು ಹೋದವರಿದ್ದಾರೆ.

ವರದಕ್ಷಿಣೆಯ ಕಾರಣಕ್ಕೇ ಮಗನನ್ನು ಮದುವೆ ಮಂಟಪದಿಂದಲೇ ಕರೆದುಕೊಂಡು ಹೋದ ತಂದೆ- ತಾಯಿಗಳೂ ಇದ್ದಾರೆ. ಹೌದಲ್ಲವಾ? ವರದಕ್ಷಿಣೆಯ ಕಾರಣದಿಂದ ಮದುವೆ ನಿಂತು ಹೋದರೆ ಆ ನಂತರದಲ್ಲಿ ಹುಡುಗಿಗೆ ಮತ್ತೆ ಮದುವೆಯಾಗುವ ಯೋಗವೇ ಬಾರದೇ ಹೋಗಬಹುದು. ಈ ಕಾರಣದಿಂದಲೇ ಮದುವೆ ಮನೆ ಎಂದರೆ- ಅಲ್ಲಿ ಹೆಣ್ಣು ಹೆತ್ತವರ ಕುಟುಂಬದ ಶೋಕ ಹಾಗೂ ಗಂಡಿನ ಕಡೆಯವರ ಠೇಂಕಾರದ ವರ್ತನೆಯನ್ನು ನೋಡಬಹುದಾದ ತಾಣ ಎಂದೇ ಕಣ್ಮುಚ್ಚಿಕೊಂಡು ಹೇಳಬಹುದಾಗಿದೆ.

ಗಂಡಿನ ಕಡೆಯುವರ ಜರ್ಬು, ಹೆಣ್ಣಿನ ಮನೆಯವರ ನೋವು, ಮದುವೆ ಸಂದರ್ಭದ ಸಡಗರ, ಅದು ನಿಂತುಹೋದಾಗ ದಿಢೀರ್ ಜತೆಯಾಗುವ ವಿಷಾದ, ಡೋಲು- ವಾಲಗಗಳ ಹಿಮ್ಮೇಳ ಮುಮ್ಮೇಳ, ಮದುವೆ ಊಟದ ಘಮಲು, ಅದು ತಂದಿಡುವ ಅಮಲು… ಇದೆಲ್ಲ ವನ್ನೂ ತುಂಬ ಪರಿಣಾಮ ಕಾರಿಯಾಗಿ ಹೇಳಿದ ಗೀತೆ ‘ಅವಳೇ ನನ್ನ ಹೆಂಡ್ತಿ’ ಚಿತ್ರದ್ದು. ‘ಮೀಸೆ ಹೊತ್ತ ಗಂಡಸಿಗೇ ಡಿಮ್ಯಾಂಡಪ್ಪೊ ಡಿಮ್ಯಾಂಡು/ ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೊ ರಿಮ್ಯಾಂಡು…’ ಎಂಬ ಆಡುಮಾತಿನ, ವಿಶಿಷ್ಟ ಸಾಲುಗಳೊಂದಿಗೆ ಈ ಹಾಡು ಶುರುವಾಗುತ್ತದೆ. ಇಲ್ಲಿ, ಡಿಮ್ಯಾಂಡು ಹಾಗೂ ರಿಮ್ಯಾಂಡು ಎಂಬ ಪದಗಳು ಪ್ರಾಸದ ರೂಪದಲ್ಲಿ ಬಂದಿವೆ ನಿಜ. ಆದರೆ, ಈ ಎರಡೂ ಪದಗಳು ಮದುವೆ ಸಂದರ್ಭದಲ್ಲಿ ದೃಗ್ಗೋಚರವಾಗುವ ಎರಡು ಕುಟುಂಬಗಳ ಪರಿಸ್ಥಿತಿಯನ್ನೇ ಹೇಳಿಬಿಡುವಂಥ ಅಪೂರ್ವ ಶಕ್ತಿ ಹೊಂದಿವೆ.

ಈ ಡಿಮ್ಯಾಂಡಿನ ಹಾಡು ಬರೆದವರು ಹಂಸಲೇಖ. ಈ ಹಾಡು ಸೃಷ್ಟಿಯಾದ ಸಂದರ್ಭದ ಕತೆ ಹೇಳಿ ಸಾರ್ ಎಂದು ಕೇಳಿದಾಗ ಅವರು ಹೇಳಿದ್ದು ಹೀಗೆ:

‘ಅದು ರವಿಚಂದ್ರನ್ ಅಭಿನಯದ ‘ನಾನು ನನ್ನ ಹೆಂಡ್ತಿ’ ಸಿನಿಮಾ ತಯಾರಾಗುತ್ತಿದ್ದ ಸಂದರ್ಭ. ಆ ಚಿತ್ರತಂಡದಲ್ಲಿ ಉಮೇಶ್ ಎಂಬಾತ ಸಹಾಯಕ ನಿರ್ದೇಶಕರಾಗಿದ್ದರು. ಆ ದಿನಗಳಲ್ಲಿ ಹಂಸಲೇಖಾ ಹೆಚ್ಚಾಗಿ ರವಿಚಂದ್ರನ್ ಚಿತ್ರಗಳಿಗೆ ಮಾತ್ರ ಸಂಗೀತ ನಿರ್ದೇಶಿಸುತ್ತಾರೆ ಎಂಬ ಮಾತು ಚಾಲ್ತಿಯಲ್ಲಿತ್ತು.

ಆಗ ಕೆಲವು ಹಿತೈಷಿಗಳು ನನಗೆ ಹೀಗೆ ಸಲಹೆ ಕೊಟ್ಟರು: ‘ಸಾರ್, ನೀವು ದೊಡ್ಡ ಬ್ಯಾನರ್‌ಗೆ ಕೆಲಸ ಮಾಡುವುದರೊಂದಿಗೆ ಚಿಕ್ಕ ಬ್ಯಾನರ್‌ಗೂ ಕೆಲಸ ಮಾಡಿ. ವ್ಯಾಪಾರದ ದೃಷ್ಟಿಯಿಂದ ಇದು ಅನಿವಾರ್ಯ. ಏಕೆಂದರೆ, ದೊಡ್ಡ ಬ್ಯಾನರ್‌ನ ಚಿತ್ರಗಳು ಕಡಿಮೆ ಬರ್‍ತವೆ. ಚಿಕ್ಕ ಬ್ಯಾನರ್‌ನ ಚಿತ್ರಗಳು ಹಿಟ್ ಆಗದಿದ್ರೂ ಸಂಖ್ಯೇಲಿ ಜಾಸ್ತಿ ಇರ್‍ತವೆ. ಇದು ನೀವು ಚಾಲ್ತಿಯಲ್ಲಿದ್ದೀರಿ ಎಂಬುದನ್ನು ಎಲ್ಲರಿಗೂ ತಿಳಿಸುತ್ತೆ. ಹಿರಿಯ ಸಂಗೀತ ನಿರ್ದೇಶಕರಾದ ಎಂ.ಎಸ್.ವಿಶ್ವನಾಥನ್, ಕೆ.ವಿ. ಮಹಾದೇವನ್ ಕೂಡ ಹೀಗೆ ಚಿಕ್ಕ-ದೊಡ್ಡ ಬ್ಯಾನರ್ ಚಿತ್ರಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಕೆಲಸ ಮಾಡ್ತಿದ್ರು….’

ಒಂದೆರಡು ದಿನ ಯೋಚಿಸಿದಾಗ ಹೀಗೆ ಮಾಡೋದೇ ಸರಿ ಅನ್ನಿಸಿತು. ಅದೇ ವೇಳೆಗೆ ಒಂದು ಚಿಕ್ಕ ಬ್ಯಾನರ್‌ಗೆ ಕೆಲಸ ಮಾಡುವ ಅವಕಾಶ ತಂತಾನೇ ಒದಗಿ ಬಂತು. ಸಹಾಯಕ ನಿರ್ದೇಶಕ ಉಮೇಶ್- ‘ನಾನು ನನ್ನ ಹೆಂಡ್ತಿ’ ಸಿನಿಮಾಕ್ಕೆಂದೇ ರವಿಚಂದ್ರನ್‌ರ ಅಣ್ಣನ ಪಾತ್ರವೊಂದನ್ನು ಸೃಷ್ಟಿಸಿದ್ದರು. ಇಡೀ ಚಿತ್ರದಲ್ಲಿ ಆ ಪಾತ್ರ ಶೇಕಡಾ ೩೦ ರಷ್ಟು ಭಾಗದಷ್ಟಿತ್ತು. ಅದು, ವರದಕ್ಷಿಣೆಯನ್ನು ವಿರೋಸುವ, ಗಂಡಿನ ಮನೆಯವರಿಗೆ ತಲೆಬಾಗಲಾರೆ ಎಂದು ವಾದಿಸುವ, ಅಂತೆಯೇ ಬದುಕುವ ಭಾವಜೀವಿಯೊಬ್ಬನ ಪಾತ್ರ. ಈ ಪಾತ್ರವನ್ನು ಬಳಸಿಕೊಂಡರೆ ಚಿತ್ರಕಥೆ ಉದ್ದವಾಗಬಹುದು ಹಾಗೂ ಇಡೀ ಸಿನಿಮಾ ಸ್ವಲ್ಪ ಬೋರ್ ಹೊಡೆಸಬಹುದು ಎಂಬ ಅನುಮಾನ ರವಿಚಂದ್ರನ್‌ಗೆ ಬಂತು. ಅದೇ ಕಾರಣದಿಂದ ಈ ಪಾತ್ರವೇ ಬೇಡ ಅಂದುಬಿಟ್ಟರು.

ಕೆಲ ದಿನಗಳ ನಂತರ ಸಹಾಯಕ ನಿರ್ದೇಶಕ ಉಮೇಶ್, ತನ್ನ ಗೆಳೆಯ ಪ್ರಭಾಕರ್ ಅವರೊಂದಿಗೆ ಬಂದು ಹೀಗೆಂದರು: ‘ಸಾರ್, ಈ ಹಿಂದೆ ಉಳಿದು ಹೋಗಿತ್ತಲ್ಲ ಪಾತ್ರ? ಅದನ್ನೇ ಬೇಸ್ ಆಗಿ ಇಟ್ಕೊಂಡು ಒಂದು ಹೊಸ ಕಥೆ ಮಾಡೋಣ ಅಂತಿದ್ದೀನಿ. ಅದಕ್ಕೆ ಸಾಹಿತ್ಯ-ಸಂಗೀತ, ಸಂಭಾಷಣೆ ಒದಗಿಸುವ ಜವಾಬ್ದಾರಿ ನಿಮ್ಮದು, ಮಾರ್ಗದರ್ಶನ ಮಾಡಿ ಸಾರ್. ನಾನು ನಿರ್ದೇಶನ ಮಾಡ್ತೀನಿ’ ಅಂದರು.

‘ಆಯ್ತು. ಆದ್ರೆ ಒಂದು ಕಂಡೀಷನ್. ಏನೆಂದರೆ ಪ್ರತಿದಿನ ಬೆಳಗ್ಗೆ ೮.೪೫ ರಿಂದ ರವಿಚಂದ್ರನ್ ಜತೆ ಸಿನಿಮಾ ಕುರಿತ ಚರ್ಚೆಗೆ ನಾನು ಹೋಗಲೇಬೇಕಾಗುತ್ತೆ. ನೀವು ದಿನಾಲೂ ಅದಕ್ಕಿಂತ ಮುಂಚೆ ಬಂದು ಚಿತ್ರ ಕಥೆ, ಪಾತ್ರ ಪೋಷಣೆ ಹಾಗೂ ಇತರೆ ವಿಷಯಗಳ ಚರ್ಚೆಯನ್ನು ಮುಗಿಸಬೇಕು’ ಅಂದೆ.

ಈ ಮಾತಿಗೆ ಉಮೇಶ್ ಒಪ್ಪಿಕೊಂಡರು. ಮರುದಿನದಿಂದಲೇ ಗೆಳೆಯ ಪ್ರಭಾಕರ್ ಜತೆ ಬೆಳಗ್ಗೆ ಆರು ಗಂಟೆಗೇ ನಮ್ಮ ಮನೆಗೆ ಬರಲು ಶುರುಮಾಡಿದರು. ೮.೩೦ರ ತನಕವೂ ಚರ್ಚೆ ನಡೀತಿತ್ತು. ಎಂಟೂ ಮುಕ್ಕಾಲಿಗೆ ಸರಿಯಾಗಿ ನಾನು ರವಿಚಂದ್ರನ್ ಜತೆ ಹೋಗಿಬಿಡ್ತಿದ್ದೆ. ಎರಡು ತಿಂಗಳ ಚರ್ಚೆಯ ಬಳಿಕ ಕಥೆ- ಚಿತ್ರಕಥೆ, ಸಂಭಾಷಣೆ, ಹಾಡು ಬರಬೇಕಾದ ಸಂದರ್ಭ… ಇದೆಲ್ಲಾ ಒಂದು ಹಂತಕ್ಕೆ ಬಂತು.

ಕೆಲ ದಿನಗಳ ನಂತರ, ಕಾರ್ಯನಿಮಿತ್ತ ಚೆನ್ನೈಗೆ ಹೋಗಬೇಕಾಗಿ ಬಂತು. ಅಲ್ಲಿಗೆ ಹೋದವನು, ಸಿದ್ದಲಿಂಗಯ್ಯ ಹಾಗೂ ಡಿ. ರಾಜೇಂದ್ರ ಬಾಬು ಅವರೊಂದಿಗೆ ಒಂದು ಸಿನಿಮಾ ನೋಡಲು ಹೋದೆ. ಆ ಚಿತ್ರದ ಒಂದು ದೃಶ್ಯದಲ್ಲಿ ಇಳಿಯರಾಜ ಅವರ ಧ್ವನಿಯಲ್ಲಿ ‘ಜಾಗ್ರತೆ ಜಾಗ್ರತೆ’ ಎಂಬ ಡೈಲಾಗ್ ಕೇಳಿಸಿತು.

ಆ ಪದದಲ್ಲಿ ಏನೋ ಮೋಡಿ ಇದೆ ಅನ್ನಿಸ್ತು. ಆ ಡೈಲಾಗ್ ಕೇಳಿದಾಕ್ಷಣ ನನಗೆ ಒಂದು ಟ್ಯೂನ್ ಹೊಳೆಯಿತು. ತಕ್ಷಣವೇ ಸಿದ್ಧಲಿಂಗಯ್ಯ ಹಾಗೂ ರಾಜೇಂದ್ರ ಬಾಬು ಅವರನ್ನು ಉದ್ದೇಶಿಸಿ-‘ಸಾರ್, ಒಂದು ಮ್ಯೂಸಿಕ್ ಬರ್‍ತಿದೆ’ ಅಂದು ಪಿಸುಗುಟ್ಟಿದೆ. ಅವರಿಬ್ಬರೂ-‘ಇಲ್ಲವಲ್ರೀ. ನಮಗೆ ಏನೂ ಕೇಳಿಸ್ತಾ ಇಲ್ವಲ್ಲ…’ ಅಂದರು. ‘ಸಾರ್, ಮ್ಯೂಸಿಕ್ ಬರ್‍ತಿರೋದು ಸಿನಿಮಾದಲ್ಲಲ್ಲ. ನನ್ನ ಮನಸ್ಸಲ್ಲಿ . ಅದು ನಿಮ್ಗೆ ಹೇಗೆ ಕೇಳಿಸ್ತದೆ ಹೇಳಿ?’ ಎಂದು ತಮಾಷೆ ಮಾಡಿದೆ.

ಆನಂತರದಲ್ಲಿ ಆ ಟ್ಯೂನ್‌ನ ಗುಂಗು ನನ್ನನ್ನು ತುಂಬಾನೇ ಕಾಡತೊಡಗಿತು. ಅದೇ ಸಂದರ್ಭಕ್ಕೆ ‘ಮೀಸೆ ಹೊತ್ತ ಗಂಡಸಿಗೇ ಡಿಮ್ಯಾಂಡಪ್ಪೊ ಡಿಮ್ಯಾಂಡು’ ಎಂಬ ಸಾಲೂ ಹೊಳೆಯಿತು. ಇಂಟರ್‌ವಲ್‌ನಲ್ಲಿ ಹೊರಗೆ ಬಂದು ಪ್ರಭಾಕರ್-ಉಮೇಶ್ ಜೋಡಿಗೆ ಫೋನ್ ಮಾಡಿ, ನನಗೆ ದಿಢೀರ್ ಹೊಳೆದ ಟ್ಯೂನ್ ಮತ್ತು ಹಾಡಿನ ಸಾಲು ಕೇಳಿಸಿದೆ. ಅವರಿಬ್ರೂ ತುಂಬಾ ಖುಷಿಪಟ್ಟು-‘ಗುರುಗಳೇ ತುಂಬಾ ಚನ್ನಾಗಿದೆ, ಮುಂದುವರಿಸಿ’ ಅಂದರು. ಮರುದಿನವೇ ಆರ್ಕೆಸ್ಟ್ರಾ ಟೀಮ್ ಕರೆಸಿ ಟ್ಯೂನ್ ಕಂಪೋಸ್ ಮುಗಿಸಿದೆ. ಹಿಂದೆಯೇ ಹಾಡನ್ನೂ ಬರೆದು ಮುಗಿಸಿದೆ.

ನಾಯಕಿಯ ಮದುವೆ ನಿಂತುಹೋದ ಸಂದರ್ಭದಲ್ಲಿ ಇದನ್ನು ಬ್ಯಾಕ್‌ಗ್ರೌಂಡ್ ಹಾಡಾಗಿ ಬಳಸಬೇಕು ಎಂಬುದು ನನ್ನ ನಿರ್ಧಾರವಾಗಿತ್ತು. ಆದರೆ, ಶೂಟಿಂಗ್ ಸಂದರ್ಭದಲ್ಲಿ ಈ ಹಾಡು ಕೇಳಿಸಿಕೊಂಡ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್-‘ಸಾರ್, ಈ ಹಾಡು- ಸಂಗೀತ ಎರಡೂ ಅದ್ಭುತವಾಗಿವೆ. ಹಾಗಿರೋವಾಗ ಇದನ್ನು ಬ್ಯಾಕ್ ಗ್ರೌಂಡ್ ಹಾಡಾಗಿಸೋದು ಬೇಡ. ಬದಲಿಗೆ, ನಾಯಕ ಕಾಶೀನಾಥ್ ಅವರಿಗೆ ಲಿಪ್ ಮೂವ್‌ಮೆಂಟ್ ಕೊಟ್ಟು ಅಭಿನಯಿಸಲು ಹೇಳಿ. ಹಾಗೆ ಮಾಡಿದ್ರೆ ಹಾಡು ತುಂಬಾ ಜನರನ್ನು ತಲುಪುತ್ತೆ. ಪ್ರೇಕ್ಷಕರ ಪ್ರತಿಕ್ರಿಯೆ ಕೂಡ ಅದ್ಭುತವಾಗಿರುತ್ತೆ’ ಅಂದರು. ಅವರ ಸಲಹೆಯನ್ನು ನಿರಾಕರಿಸಲು ಮನಸು ಬರಲಿಲ್ಲ. ನನ್ನ ನಿರ್ಧಾರ ಬದಲಿಸಿಕೊಂಡೆ.

ಈ ಹಾಡಿಗೆ ಸಂಬಂಸಿದಂತೆ ಇನ್ನೊಂದು ಸ್ವಾರಸ್ಯಕರ ಪ್ರಸಂಗವೂ ನಡೆಯಿತು. ಏನೆಂದರೆ, ಹಾಡಿನ ರೆಕಾರ್ಡಿಂಗ್ ಮುಗಿಸಿ, ನಾವೆಲ್ಲ ‘ಡಿಮ್ಯಾಂಡಪ್ಪೊ ಡಿಮ್ಯಾಂಡು’ ಹಾಡನ್ನೇ ಕೇಳುತ್ತಾ, ಗುನುಗುತ್ತಾ ಕೂತಿದ್ದ ಸಂದರ್ಭದಲ್ಲಿಯೇ ಬೇರೊಂದು ಹಾಡಿನ ಧ್ವನಿಮುದ್ರಣಕ್ಕಾಗಿ ವರನಟ ರಾಜ್‌ಕುಮಾರ್ ಅಲ್ಲಿಗೆ ಬಂದರು. ಹಾಗೆ ಬಂದವರು, ನಮ್ಮ ಹಾಡು ಕೇಳಿ, ತಲೆದೂಗಿ- ಈ ಹಾಡು ಯಾವ ಚಿತ್ರದ್ದು? ಯಾರು ಹೀರೋ?’ ಎಂದು ವಿಚಾರಿಸಿದರು.

ಆ ವೇಳೆಗೆ ಸಿನಿಮಾಕ್ಕೆ ‘ಅವಳೇ ನನ್ನ ಹೆಂಡ್ತಿ’ ಎಂದು ಹೆಸರು ಇಡಲಾಗಿತ್ತು. ನಾನು ತಕ್ಷಣವೇ ಸಿನಿಮಾದ ಹೆಸರು, ಅದರಲ್ಲಿರುವ ಕಲಾವಿದ-ತಂತ್ರಜ್ಞರು ಹಾಗೂ ಹಾಡಿನ ಸಂದರ್ಭವನ್ನು ವಿವರಿಸಿದೆ. ಎಲ್ಲವನ್ನೂ ಕೇಳಿಸಿಕೊಂಡ ನಂತರ ರಾಜ್‌ಕುಮಾರ್ ಹೀಗೆಂದರು: ‘ ಹಂಸಲೇಖಾ ಅವರೆ, ಈ ಹಾಡು, ಅದರ ಭಾಷೆ, ಸಂಗೀತದ ಲಾಲಿತ್ಯ ತುಂಬಾ ಚನ್ನಾಗಿದೆ.

ಈ ಹಾಡು ತುಂಬಾ ಪರಿಣಾಮಕಾರಿಯಾಗಿ ಬರುತ್ತೆ ಹಾಗೂ ಪ್ರೇಕ್ಷಕರಿಗೆ ಒಂದು ಸಂದೇಶವನ್ನೂ ಕೊಡುತ್ತೆ ಎಂದು ನನ್ನ ಮನಸ್ಸು ಹೇಳುತ್ತಿದೆ. ನನ್ನದೊಂದು ಚಿಕ್ಕ ಸಲಹೆ: ಏನೆಂದರೆ- ಹಾಡು ಶುರುವಾಗುವ ಮೊದಲಿನ ಹಾಗೂ ಹಾಡು ಮುಗಿದ ನಂತರದ ಒಂದೆರಡು ದೃಶ್ಯಗಳನ್ನು ತುಂಬಾ ಗಮನವಿಟ್ಟು ಚಿತ್ರಿಸಲು ನಿರ್ದೇಶಕರಿಗೆ ತಿಳಿಸಿ. ಏಕೆಂದರೆ, ಹಾಡಿನ ಹಿಂದು-ಮುಂದಿನ ದೃಶ್ಯಗಳು ಗಟ್ಟಿಯಾದರೆ ಸಿನಿಮಾ ಕೂಡ ಗಟ್ಟಿಯಾಗುತ್ತೆ…’

ಕಾರು ಓಡಿಸುತ್ತಾ ಇಷ್ಟೂ ವಿವರಣೆಯ ರನ್ನಿಂಗ್ ಕಾಮೆಂಟರಿ ನೀಡಿದ ಹಂಸಲೇಖಾ ಕಡೆಯದಾಗಿ ಹೇಳಿದರು: ಅಣ್ಣಾವ್ರು ಹೇಳಿದಂತೆಯೇ ನಾವು ಚಿತ್ರೀಕರಣ ನಡೆಸಿದ್ವಿ. ಪರಿಣಾಮ, ಈ ಹಾಡು ವಾಲಗದ ಸದ್ದಿನಂತೆ ನಾಡಿನ ಮನೆ-ಮನ ತಲುಪಿತು….

****

ಪ್ರಿಯ ಓದುಗರೆ, ಮುಂದಿನ ಎರಡು ವಾರಗಳಲ್ಲಿ ಎರಡು ಮಧುರ ಗೀತೆಗಳೊಂದಿಗೆ ಹಂಸಲೇಖಾ ಮತ್ತೆ ಮಾತಾಡಲಿದ್ದಾರೆ. ಆ ಎರಡು ಹಾಡುಗಳು ಯಾವುವು? ಥಟ್ಟನೆ ಹೇಳಿ ನೋಡೋಣ…

‍ಲೇಖಕರು avadhi

July 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This