ಮಣಿಕಾಂತ್ ಬರೆಯುತ್ತಾರೆ: ನಾನೊಂದು ತೀರ, ನೀನೊಂದು ತೀರ..

ಎ ಆರ್  ಮಣಿಕಾಂತ್
ಚಿತ್ರ: ಅರುಣರಾಗ. ಗೀತೆರಚನೆ:  ದೊಡ್ಡರಂಗೇಗೌಡ
ಸಂಗೀತ:  ಎಂ. ರಂಗರಾವ್. ಗಾಯನ: ಕೆ.ಜೆ. ಏಸುದಾಸ್-ಚಿತ್ರಾ
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರಾ
ಪ್ರೀತಿ ಹೃದಯ ಭಾರ ||ಪ||
ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ
ಹೆಣ್ಣು ಸೊಗಸಾಗಿ ಬೆಳೆದು ಗಂಡು ಬಯಸೋದು ಸಹಜ
ಹೀಗೇಕೆ ನಿನಗೆ ಏಕಾಂಗಿ ಬದುಕು
ಹೀಗೇಕೆ ನಿನಗೆ ಏಕಾಂಗಿ ಬದುಕು
ಸಂಗಾತಿ ಇರದೆ ಬಾಳೆಲ್ಲ ಬರಿದು ||೧||
ಭೂಮಿ ಆಕಾಶ ಸೇರಿ ಕಲೆತು ಕೂಡೋದು ಉಂಟೆ
ಕಡಲು ತಾನಾಗಿ ಹರಿದು ನದಿಗೆ ಸೇರೋದು ಉಂಟೆ?
ಚೂರಾದ ಹೃದಯ ಮತ್ತೊಮ್ಮೆ ಮಿಡಿದು
ಚೂರಾದ ಹೃದಯ ಮತ್ತೊಮ್ಮೆ ಮಿಡಿದು
ಜೀವಂತ ಬದುಕಿ ಸಂಬಂಧ ತರದು          ||೨||

ಅದು ಬಡವರ ಗುಡಿಸಲಿರಬಹುದು, ಶ್ರೀಮಂತರ ಬಂಗಲೆಯಿರಬಹುದು, ಮಹಾರಾಜರ ಅರಮನೆಯೇ ಆಗಿರಬಹುದು. ಅಲ್ಲೆಲ್ಲ ನಡೆದೇ ತೀರುವ ಒಂದು ತೀರಾ ಸಾಮಾನ್ಯ ಸಂಗತಿ ಎಂದರೆ ಗಂಡ ಹೆಂಡಿರ ಜಗಳ!
ಸ್ವಲ್ಪ ಜೋರಾಗಿಯೇ ಜಗಳವಾಯ್ತು ಅಂದುಕೊಳ್ಳಿ: ಅದರ ಪರಿಣಾಮವಾಗಿ, ಗಂಡ -ಹೆಂಡತಿ ಮಾತು ಬಿಡುತ್ತಾರೆ. ಮೌನದ ಮೊರೆ ಹೋಗುತ್ತಾರೆ. ಒಬ್ಬರಿಗೊಬ್ಬರು ಬೇಕೆಂದೇ ಸಿಗದೆ ತಪ್ಪಿಸಿಕೊಳ್ಳುತ್ತಾರೆ.  ಜಗಳವಾಡಿದ್ದೇವೆ ಎಂಬುದನ್ನೇ ನೆಪ ಮಾಡಿಕೊಂಡು ಪ್ರತ್ಯೇಕ ರೂಂಗಳಲ್ಲಿ ಮಲಗಲು ಶುರುಮಾಡುತ್ತಾರೆ. ಈ ಮಧ್ಯೆಯೇ ಛೆ, ನಾನು ದುಡುಕಬಾರದಿತ್ತು. ಜಗಳ ಮಾಡಬಾರದಿತ್ತು ಎಂದೆಲ್ಲ ಅಂದುಕೊಳ್ಳುತ್ತಾರೆ.
ಈ ಹಟವೆಲ್ಲಾ ಕೇವಲ ನಾಲ್ಕೇ ದಿನ. ಐದನೇ ದಿನದ ವೇಳೆಗೆ ಬೇಗ ರಾಜಿಯಾಗಬೇಕು, ಮಾತಾಡಬೇಕು, ಸರಸಕ್ಕೆ ಮುಂದಾಗಬೇಕು. ಈ ಸಂದರ್ಭದಲ್ಲೇ ‘ಸಾರಿ’ ಕೇಳಿಬಿಡಬೇಕು ಎಂಬ ಭಾವ ಇಬ್ಬರಿಗೂ ಬರುತ್ತದೆ. ಆದರೆ, ಅವನೇ ಮೊದಲು ಮಾತಾಡಿಸಲಿ ಎಂಬ ಹಟದಲ್ಲಿ ಇವಳು: ಅವಳೇ ಮೊದಲು ಹತ್ತಿರ ಬರಲಿ ಎಂಬ ಹಮ್ಮಿನಲ್ಲಿ ಇವನು ಉಳಿದುಬಿಡುತ್ತಾರೆ. ಅಂಥ ಸಂದರ್ಭದಲ್ಲಿ ಜಗಳವಾಡಿದ ಎಲ್ಲ ದಂಪತಿಯ ಮನದ ಪಿಸುಮಾತಿನಂತೆ ಕೇಳಿಬರುವ ಹಾಡೇ- ‘ನಾನೊಂದು ತೀರ, ನೀನೊಂದು ತೀರ, ಮನಸು ಮನಸು ದೂರ… ಪ್ರೀತಿ ಹೃದಯ ಭಾರ…’
ದೊಡ್ಡ ರಂಗೇಗೌಡ ಅವರ ರಚನೆಯ ಈ ಹಾಡು ಕೆ.ವಿ. ಜಯರಾಂ ನಿರ್ದೇಶನದ ‘ಅರುಣರಾಗ’ ಚಿತ್ರದ್ದು. ಇಲ್ಲಿ, ಹಾಡು ಹುಟ್ಟಿದ ಸಂದರ್ಭದ ಬಗ್ಗೆ ಹೇಳುವ ಮೊದಲು ಕೆ.ವಿ. ಜಯರಾಂ ಅವರ  ಕುರಿತೂ ನಾಲ್ಕು ಮಾತು ಹೇಳಬೇಕು. ಕಾದಂಬರಿ ಆಧಾರಿತ ಚಿತ್ರಗಳಿಗೆ ಪುಟ್ಟಣ್ಣ ಕಣಗಾಲ್ ಮತ್ತು ದೊರೆ -ಭಗವಾನ್ ನೀಡಿದ್ದರಲ್ಲ? ಅಷ್ಟೇ ಪ್ರಾಶಸ್ತ್ಯ ನೀಡಿದ ವ್ಯಕ್ತಿ ಜಯರಾಮ್. ಈ ಕಾರಣದಿಂದಲೇ ಅವರನ್ನು ಜ್ಯೂನಿಯರ್ ಪುಟ್ಟಣ್ಣ ಕಣಗಾಲ್ ಎಂದೂ ಕರೆಯಲಾಗುತ್ತಿತ್ತು. ಕನ್ನಡಕ್ಕೆ ಹೊಸ ಅಲೆಯ ಚಿತ್ರಗಳನ್ನು ನೀಡಿದರಲ್ಲ ಎಂ.ಆರ್. ವಿಠಲ್? ಅವರ ಪಟ್ಟ ಶಿಷ್ಯ ಈ ಕೆ.ವಿ. ಜಯರಾಮ್. ೧೯೭೫ ರಲ್ಲಿ ‘ಮಾಗಿಯ ಕನಸು’ ಎಂಬ ಆ ಚಿತ್ರ ಬಿಡುಗಡೆಯಾಯಿತು. ಆ ಚಿತ್ರಕ್ಕೆ ದೊಡ್ಡ ರಂಗೇಗೌಡರು ‘ಬಂದಿದೆ ಬದುಕಿನ ಬಂಗಾರದ ದಿನ’ ಎಂಬ ಹಾಡು ಬರೆದಿದ್ದರು. ಈ ಹಾಡು ಕೇಳಿ ಖುಷಿಯಾದ ವಿಠಲ್ ಅವರು, ಜಯರಾಂ ಅವರನ್ನು ಕುರಿತು-‘ನೋಡಪ್ಪಾ, ನೀನೇನಾದ್ರೂ ಹೊಸ ಸಿನಿಮಾ ನಿರ್ದೇಶಿಸಿದರೆ ಈ ಗೌಡರ ಹತ್ರಾನೇ ಹಾಡು ಬರೆಸು’ ಅಂದರಂತೆ.
ಗುರುಗಳು ಹೇಳಿದ ಮೇಲೆ ಸುಮ್ಮನಿರುವುದುಂಟೆ? ದೊಡ್ಡ ರಂಗೇಗೌಡರನ್ನು ಹುಡುಕಿಕೊಂಡು ಅವರಿದ್ದ ಎಸ್.ಎಲ್.ಎನ್. ಕಾಲೇಜಿಗೇ ಬಂದರು ಜಯರಾಂ. ಬಂದವರೇ, ತಮ್ಮ ಪರಿಚಯ ಹೇಳಿಕೊಂಡರು. ‘ಭಾವಬಂಧನ; ಎಂಬ ಸಿನಿಮಾ ತೆಗೀತಿದೀನಿ ಸಾರ್. ಅದಕ್ಕೆ ನೀವು ಹಾಡು ಬರೀಬೇಕು ಅಂದರು. ಹೀಗೆ ಶುರುವಾದ ದೋಸ್ತಿ ದಿನೇ ದಿನೇ ಗಟ್ಟಿಯಾಗುತ್ತಾ ಬಂತು. ಪರಿಣಾಮ, ಕೆ.ವಿ. ಜಯರಾಂ ನಿರ್ದೇಶನದ ಚಿತ್ರಗಳಿಗೆ  ಅತಿ ಹೆಚ್ಚು ಹಾಡು ಬರೆದವರು ಎಂಬ ಹೆಗ್ಗಳಿಕೆ ದೊಡ್ಡರಂಗೇಗೌಡರ ಪಾಲಾಯಿತು.
ಈಗ ‘ಅರುಣರಾಗ’ದ ವಿಷಯಕ್ಕೆ ಬರೋಣ. ಆ ಚಿತ್ರದಲ್ಲಿ ನಾಯಕ ಡಾಕ್ಟರ್. ಹೆಂಗಸರು ಏನಿದ್ರೂ ಅಡುಗೆ ಮಾಡೋಕೆ, ಕಸಗುಡಿಸೋಕೆ ಲಾಯಕ್ಕು ಎಂಬುದು ಅವನ ಮನೋಭಾವ. ನಾನು ಮೇಲು, ನೀನೇನಿದ್ರೂ ನನ್ನ ನಂತರ ಎಂದು ಅವನು ಅವಾಗವಾಗ ಹೆಂಡತಿಗೆ ಹೇಳುತ್ತಲೇ ಇರುತ್ತಾನೆ. ಹಾಗೇನೂ ಇಲ್ಲ. ಹೆಣ್ಣು ಸಬಲೆ. ಅವಕಾಶ ಒದಗಿಸಿಕೊಟ್ಟರೆ, ಅವಳೂ ಕೂಡ ಗಂಡಿಗೆ ಸರಿಸಮನಾಗಿ ಬದುಕಬಲ್ಲಳು ಎಂಬುದು ಕಥಾನಾಯಕಿಯ ವಾದ. ಹೀಗಿರುವಾಗಲೇ, ಆಗಿನ್ನೂ ಮದುವೆಯಾದ ಹೊಸದರಲ್ಲಿಯೇ ನಾಯಕ ವಿದೇಶಕ್ಕೆ ಹೊರಟು ನಿಲ್ಲುತ್ತಾನೆ. ಕಥಾನಾಯಕಿ ತಡೆಯುತ್ತಾಳೆ. ಈ ಪುಣ್ಯಾತ್ಮ- ‘ಹೆಂಗಸರು ಏನಿದ್ರೂ ಅಡುಗೆ ಮನೆಗೇ ಲಾಯಕ್ಕು’ ಎಂಬ ಅದೇ ಅಹಮಿಕೆಯ ಡೈಲಾಗ್ ಹೊಡೆದು ವಿದೇಶಕ್ಕೆ ಹೋಗಿಬಿಡುತ್ತಾನೆ. ಕೆಲವೇ ದಿನಗಳಲ್ಲಿ ಅಲ್ಲಿ ಲೂಸಿ ಎಂಬಾಕೆಯನ್ನು ಮದುವೆಯಾಗುತ್ತಾನೆ.
ಈ ಸಂದರ್ಭದಲ್ಲಿ ಹಠಕ್ಕೆ ಬಿದ್ದ ಕಥಾನಾಯಕಿ, ತಾನೂ ಕಷ್ಟಪಟ್ಟು ಓದಿ ಡಾಕ್ಟರ್ ಆಗಿಬಿಡುತ್ತಾಳೆ. ಗಂಡ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ನೌಕರಿಗೆ ಸೇರುತ್ತಾಳೆ. ಈ ವೇಳೆಗೆ ಕಥಾ ನಾಯಕನಿಗೆ ವಿದೇಶಿ ಹೆಂಡತಿ ಸೋಡಾ ಚೀಟಿ ಕೊಟ್ಟಿರುತ್ತಾಳೆ. ಈ ಆಘಾತದ ಮಧ್ಯೆಯೇ ಸ್ವದೇಶಕ್ಕೆ ಮರಳುವ ನಾಯಕ ಮನೆಗೆ ಮರಳುತ್ತಾನೆ. ತನ್ನ ತಪ್ಪು ಒಪ್ಪಿಕೊಳ್ಳುತ್ತಾನೆ. ಆದರೆ ನಾಯಕಿ ಕ್ಷಮಿಸುವುದಿಲ್ಲ. ಪರಿಣಾಮ, ಒಂದೇ ಮನೆಯಲ್ಲಿದ್ದರೂ ಇಬ್ಬರೂ ಅಪರಿಚಿತರಂತೆ ಬದುಕುತ್ತಾರೆ.
ಕೆಲ ದಿನಗಳ ನಂತರ, ಮೌನ ಅಸಹನೀಯವೆಂದು ಇಬ್ಬರಿಗೂ ಗೊತ್ತಾಗುತ್ತದೆ. ಮಾತಾಡಬೇಕೆಂಬ ಆಸೆ ಇಬ್ಬರಿಗೂ ಇರುತ್ತದೆ. ಆದರೆ ಅವರೇ ಮೊದಲು ಮಾತಾಡಲಿ ಎಂದು ಇವಳು; ಅವಳೇ ಶುರುಮಾಡಲಿ ಎಂದು ಅವನು ಕಾಯುತ್ತಾರೆ. ರಾಜಿಯಾಗಲು ಇಬ್ಬರಿಗೂ ಅಹಂ ಅಡ್ಡಿ ಬರುತ್ತದೆ. ಹೀಗಿರುವಾಗಲೇ ಅದೊಮ್ಮೆ ಇಬ್ಬರಿಗೂ ರಾತ್ರಿ ಪಾಳಿಯ ಕೆಲಸ ಇರುತ್ತದೆ. ಕೆಲಸಕ್ಕೆ ಬಂದವರು ತಿಂಡಿ ತಿನ್ನಲು ಕೂರುತ್ತಾರೆ. ಒಬ್ಬೊಬ್ಬರು ಒಂದೊಂದು ದಿಕ್ಕಲ್ಲಿ ಕೂತು ತಿಂಡಿ ತಿನ್ನಲು ತೊಡಗುತ್ತಾರೆ. ಆಗಲೇ ಇಬ್ಬರ ಮನದ ಭಾವವನ್ನೂ ಹೇಳುವಂತೆ ಶುರುವಾಗುತ್ತದೆ. ಹಾಡು: ‘ನಾನೊಂದು ತೀರ, ನೀನೊಂದು ತೀರ…’
‘ಸಾರ್, ಈ ಹಾಡನ್ನು ನೀವು ಹೇಗೆ ಬರೆದಿರಿ? ಬರೆಯುವ ಮುನ್ನ ಏನೇನನ್ನು ನೆನಪು ಮಾಡಿಕೊಂಡಿರಿ ಎಂದಾಗ ದೊಡ್ಡರಂಗೇಗೌಡರು ಹೇಳಿದ್ದಿಷ್ಟು. ‘ ಅರುಣರಾಗ’ ಚಿತ್ರದ ಸಂದರ್ಭದಲ್ಲಿ ಕೇವಲ ಹಾಡಿನ ಕುರಿತ ಚರ್ಚೆಯಲ್ಲಿ ಮಾತ್ರವಲ್ಲ, ಇಡೀ ಸಿನಿಮಾ ತಯಾರಿಯ ಕುರಿತ ಚರ್ಚೆಯಲ್ಲೂ ನಾನು ಪಾಲ್ಗೊಂಡಿದ್ದೆ. ಹಾಗಾಗಿ ಇಂಚಿಂಚು ಸನ್ನಿವೇಶವೂ ಗೊತ್ತಿತ್ತು. ಗಾಂನಗರದ ಸತ್ಕಾರ್ ಹೋಟೆಲಿನಲ್ಲಿ ಸಿನಿಮಾ ಕುರಿತು ಚರ್ಚಿಸುತ್ತಿದ್ದಾಗ-‘ಸಾರ್, ಮಾತು ಬಿಟ್ಟ ನಾಯಕ-ನಾಯಕಿ ಅದೊಂದು ದಿನ ಆಸ್ಪತ್ರೇಲಿ ಒಂದೊಂದು ದಿಕ್ಕಿನಲ್ಲಿ ಕೂತಿರುತ್ತಾರೆ. ಅವರ ಮನಸ್ಸಿನ ಅಷ್ಟೂ ಸಂಕಟ, ತೊಳಲಾಟ, ತಹ ತಹವೆಲ್ಲ  ಒಂದು ಹಾಡಲ್ಲಿ ಬಂದರೆ ಚೆಂದ’ ಎಂದರು ಜಯರಾಂ.
‘ಒಬ್ಬೊಬ್ಬರು ಒಂದೊಂದು ಕಡೆಯಲ್ಲಿ ಕೂತಿದ್ದಾರೆ’ ಎಂದರಲ್ಲ? ಆ ಮಾತೇ ನನ್ನನ್ನು ಹಿಡಿದುಬಿಟ್ಟಿತು. ಅದನ್ನೇ ಸ್ವಲ್ಪ Iಟbಛ್ಟಿZಠಿಛಿ  ಆದ ಭಾಷೆಗೆ ತಂದು-‘ನಾನೊಂದು ತೀರ, ನೀನೊಂದು ತೀರ’ ಎಂದು ಬರೆಯಬಹುದಲ್ಲವೆ ಅನ್ನಿಸಿತು. ಮರುಕ್ಷಣವೇ ಹಾಡನ್ನು ಹೇಗೆ ಮುಂದುವರಿಸಬಹುದು ಎಂದು ಯೋಚಿಸಿದೆ: ಇಬ್ಬರೂ ಮುನಿದಿರುತ್ತಾರೆ. ಮಾತು ಬಿಟ್ಟಿರುತ್ತಾರೆ. ವಿರಹ ವೇದನೆಯೂ ಅವರ ಕೈ ಹಿಡಿದಿರುತ್ತದೆ. ಅಪರಾ ಭಾವವೂ ಕಾಡುತ್ತಿರುತ್ತದೆ ಎಂಬುದೆಲ್ಲ ಮನಸ್ಸಿಗೆ ಬಂತು. ಜಗಳ, ಅಹಮಿಕೆಯ ಕಾರಣದಿಂದಲೇ ಮನಸು ದೂರವಾಗಿದೆ, ಹೃದಯ ಭಾರವಾಗಿದೆ ಅಂತ ಹೇಳಬಹುದಲ್ಲವೆ ಅಂದು ಕೊಂಡೆ. ನಂತರದ ಐದಾರು ನಿಮಿಷದಲ್ಲಿ ಪಲ್ಲವಿ ‘ಹೀಗೇ ಇರಬೇಕು’ ಎಂಬ ಐಡಿಯಾ ನನಗೆ ಬಂತು.
ಈ ಸಂದರ್ಭದಲ್ಲಿಯೇ  ದಾಂಪತ್ಯದ ಬದುಕನ್ನು ಕಣ್ಮುಂದೆ ತಂದುಕೊಂಡೆ. ಗಂಡ-ಹೆಂಡತಿ ಅಂದ ಮೇಲೆ ಅಲ್ಲಿ ಜಗಳವಿದ್ದೇ ಇರುತ್ತೆ. ಜಗಳದ ನಂತರ ರಾಜಿ ಆಗುವ ಸಂದರ್ಭವಿದೆಯಲ್ಲ? ಅದು ತುಂಬಾ ಮಹತ್ವದ್ದು. ಆಗ ಗಂಡ-ಹೆಂಡತಿ ಇಬ್ಬರೂ ತಂತಮ್ಮ ತಪ್ಪು  ಒಪ್ಪಿಕೋತಾರೆ. ಸರಿ ತಪ್ಪುಗಳ ಪರಾಮರ್ಶೆ ನಡೆಸ್ತಾರೆ ಅನ್ನಿಸ್ತು. ಇದನ್ನೇ ಹಾಡಿನ ಮೂಲಕ ಹೇಳುವಾಗ ಪ್ರತಿಮಾತ್ಮಕ ವಿಧಾನ ಬಳಸಿ ಹೇಳಬೇಕು ಅನ್ನಿಸ್ತು. ಆಗಸದ ತುಂಬಾ ಮೋಡ ಹರಡಿಕೊಂಡಿರುತ್ತೆ. ಮಳೆ ಸುರಿಯುದೇ ಹೋದರೆ ವಿಪರೀತ ಸೆಖೆ. ಭೂಮಿ ತಂಪಾಗಬೇಕು ಎಂದರೆ ಮಳೆ ಸುರಿಯಲೇಬೇಕು. ಆಗ ತಂಪೂ ಆಗುತ್ತೆ. ಮೋಡದ ಭಾರವೂ ಇಳಿಯುತ್ತೆ ಅನ್ನಿಸಿತು. (ಮೋಡ-ಮಳೆ-ಸೆಖೆ- ತಂಪು-ಹಗುರ, ಮಧುರ… ಎಂಬುದನ್ನು ದಾಂಪತ್ಯದ ಬದುಕಿಗೆ, ವಿರಹ ವೇದನೆಗೆ, ಮಿಲನಕ್ಕೆ, ಆನಂತರದ ಸಂಭ್ರಮಕ್ಕೆ ಹೋಲಿಸಿಕೊಳ್ಳಿ) ಅದನ್ನೇ ಹಾಡಿನಲ್ಲಿ ತಂದೆ.
‘ಗೊತ್ತಿಲ್ಲದೇ ನಾನು ತಪ್ಪು ಮಾಡಿಬಿಟ್ಟೆ. ಅದನ್ನು ಕ್ಷಮಿಸಿಬಿಡು’ ಎಂದು ಹೇಳುವ ಹಂತಕ್ಕೆ ಬಂದಿರುತ್ತಾನೆ ನಾಯಕ. ಹಿಂದೆಯೇ, ರಾಜಿ ಮಾಡಿಕೊಳ್ಳೋಣ, ಒಪ್ಕೋ’ ಎಂದೂ ಅವಳತ್ತ ಆರ್ದ್ರತೆಯಿಂದ ನೋಡುತ್ತಾನೆ. ಆದರೆ, ಉಹೂಂ, ನನ್ನ  ಮನಸ್ಸು ಒಡೆದು ಹೋಗಿದೆ. ನಾನು ಕ್ಷಮಿಸಲಾರೆ ಎಂಬ ನಿರ್ಧಾರ ನಾಯಕಿಯ ಮನದಲ್ಲಿರುತ್ತದೆ. ಈ ಅಂಶಗಳನ್ನು ಒಂದು ಮತ್ತು ಎರಡನೇ ಚರಣಗಳಲ್ಲಿ ತಂದೆ. ಸುಳ್ಳೇಕೆ? ಮನೇಲಿ ನಾನು ಹೆಂಡತಿಯೊಂದಿಗೆ ಜಗಳವಾಡಿದ ಸಂದರ್ಭ, ಮಾತು ಬಿಟ್ಟ ಸಂದರ್ಭ,  ರಾಜಿಗೆ ಮುನ್ನ ನನ್ನ ಮನದ ತೊಳಲಾಟ, ತಹತಹವನ್ನೆಲ್ಲ ನೆನಪು ಮಾಡಿಕೊಂಡೇ ಹಾಡು ಬರೆದೆ…
ಸಾಹಿತ್ಯ ನೋಡಿದ ಜಯರಾಂ ತುಂಬ ಖುಷಿಯಾದರು. ರಾತ್ರಿ ಹೆಚ್ಚಿದಂತೆಲ್ಲಾ ನಾಯಕ ನಾಯಕಿಯ ಭಾವನೆಗಳೂ ಗಾಢವಾಗ್ತಾ ಹೋಗ್ತವೆ ಎಂಬುದನ್ನು ನೆರಳು ಬೆಳಕಿನ ಮೂಲಕ ತೋರಿಸೋಣ ಸಾರ್ ಎಂದರು. ಇಬ್ಬರ ಮನಸ್ಸಿನ ಹೊಯ್ದಾಟವನ್ನು ಗೋಡೆಯ ಮೇಲೆ ಅಲೆಯಂಥ ಸಾಲು ಮೂಡಿಸಿ ತೋರಿಸಿದರು. ಅಷ್ಟೇ ಅಲ್ಲ;
ಹಾಡಿನ ಸಾಹಿತ್ಯ ನೋಡಿದ ನಂತರವೇ ಚಿತ್ರೀಕರಣ ಹೇಗಿರಬೇಕು ಎಂದು ಪ್ಲಾನ್ ಮಾಡಿಕೊಂಡರು. ಒಬ್ಬೊಬ್ಬರದು ಒಂದೊಂದು ದಾರಿ ಎಂಬುದನ್ನು ತೋರಲು ಅವರ ಮಧ್ಯೆ ಕಬ್ಬಿಣದ ಪರದೆ ಇಟ್ಟರು. ಒಬ್ಬೊಬ್ಬರು ಒಂದೊಂದು ಕಡೆಯಿಂದ ಮೆಟ್ಟಿಲಿಳಿದು ಬರುವಂತೆ ತೋರಿಸಿದರು.
ಹಾಡಿನೊಂದಿಗೆ ಕ್ಯಾಮರಾ, ಸಂಗೀತ, ನಿರ್ದೇಶಕರ ಶ್ರಮ, ನಾಯಕ, ನಾಯಕಿಯ ಅನುಪಮ ನಟನೆ ಎಲ್ಲವೂ ಜತೆಯಾದವು. ಪರಿಣಾಮ, ಹಾಡು ಅಮರವಾಯಿತು… ಹೀಗೆಂದು ಖುಷಿಯಿಂದ ನಕ್ಕು ಹಾಡಿನ ಕತೆಗೆ ಮಂಗಳ ಹಾಡಿದರು ದೊಡ್ಡರಂಗೇಗೌಡ…

‍ಲೇಖಕರು avadhi

May 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: