ಮಣಿಕಾಂತ್ ಬರೆಯುತ್ತಾರೆ: ಪ್ರಿಯತಮಾ… ಕರುಣೆಯಾ ತೋರೆಯಾ…

ಚಿತ್ರ: ಕವಿರತ್ನ ಕಾಳಿದಾಸ. ಗೀತೆರಚನೆ:  ಚಿ. ಉದಯಶಂಕರ್

ಸಂಗೀತ: ಎಂ. ರಂಗರಾವ್. ಗಾಯನ:  ಡಾ. ರಾಜ್ -ವಾಣಿ ಜಯರಾಂ

ಓ…ಓ…ಓ… ಪ್ರಿಯತಮಾ, ಪ್ರಿಯತಮಾ,

ಪ್ರಿಯತಮಾ… ಕರುಣೆಯಾ ತೋರೆಯಾ,

ಸನಿಹಕೆ ಬಾರೆಯಾ, ತೀರಿಸೀ ಬಯಕೆಯಾ

ಜೀವವಾ ಉಳಿಸೆಯಾ… ಪ್ರಿಯತಮಾ…

ಓ…ಓ… ಪ್ರಿಯತಮಾ           ||ಪ||

ಹಗಲಲೀ ಇರುಳಲೀ ಕನಸಲೀ ಮನಸಲೀ

ಬಳಲಿದೆ ಬೆಚ್ಚಿದೆ ನೆನಪಿನ ಸುಳಿಯಲಿ

ಬೆವರುತ ಚಳಿಯಲಿ ಬೆದರುತಾ ಭಯದಲಿ

ವಿರಹದಾ ಉರಿಯಲಿ ಬೆಂದೆನೂ ನೋವಲಿ

ಯಾರಿಗೆ ಹೇಳಲಿ, ಏನನು ಮಾಡಲಿ         ||೧||

ಓ…ಓ…ಓ… ಪ್ರಿಯತಮೇ, ಪ್ರಿಯತಮೇ

ಪ್ರಿಯತಮೇ, ಕರುಣೆಯಾ ತೋರೆಯಾ

ಸನಿಹಕೆ ಬಾರೆಯಾ ತೀರಿಸೀ ಬಯಕೆಯಾ

ಜೀವವಾ ಉಳಿಸೆಯಾ, ಪ್ರಿಯತಮೇ…

ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ

ಆಸೆಯಾ ಹೂಗಳ ಚೆಲ್ಲಿದೆ ಮನದಲಿ

ಹೃದಯದಾ ವೀಣೆಯ ತಂತಿಯ ಮೀಟುತಾ

ವಿರಹದಾ ಗೀತೆಯ ಹಾಡಿದೆ ಕಿವಿಯಲಿ

ನನ್ನೆದೆ ತಳಮಳ ಯಾರಿಗೆ ಹೇಳಲಿ?        ||೨||

ಓ…ಓ…ಓ… ಪ್ರಿಯತಮಾ

ಓ…ಓ…ಓ… ಪ್ರಿಯತಮೇ

ಓ…ಓ…ಓ… ಪ್ರಿಯತಮಾ

ಓ…ಓ…ಓ… ಪ್ರಿಯತಮೇ

ಈಗ ‘ಚಿತ್ತಾರ’ ಮಾಸಿಕದ ಸಂಪಾದಕರಾಗಿರುವ ಬಿ. ಗಣಪತಿಯವರು ಹಿಂದೊಮ್ಮೆ ಡಾ. ರಾಜ್‌ಕುಮಾರ್ ಅವರಲ್ಲಿ ಕೇಳಿದ್ದರು: ‘ಸಾರ್  ‘ಸ್ವತಃ ನೀವೇ ಇಚ್ಛೆ ಪಟ್ಟು, ಹಂಬಲಿಸಿ, ಇಂಥ ವಸ್ತುಗಳ ಮೇಲೆ ಚಿತ್ರಮಾಡಿ ಅಂತ ಹೇಳಿದ ಪ್ರಸಂಗಗಳೇನಾದ್ರೂ ಇವೆಯಾ?

ಆಗ ಡಾ. ರಾಜ್ ಹೀಗೆಂದಿದ್ದರು: ಭಕ್ತ ಕುಂಬಾರ, ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ, ಶಂಕರ್‌ಗುರು ಇವಿಷ್ಟೂ ನಾನು ಇಚ್ಛೆಪಟ್ಟು , ಹಂಬಲಿಸಿ ಮಾಡಿದ ಸಿನಿಮಾಗಳು. ಅದರಲ್ಲೂ ಕಾಳಿದಾಸ… ನನ್ನನ್ನು ಚಿಕ್ಕಂದಿನಿಂದಲೂ ಕಾಡಿದ್ದ ಕಥೆ. ನಾನು ಗುಬ್ಬಿ ಕಂಪನೀಲಿದ್ದಾಗ ಅವಾಗವಾಗ ಈ ನಾಟಕ ಆಡ್ತಿದ್ರು. ಆ ನಾಟಕದಲ್ಲಿ ಸಂಸ್ಕೃತದ ಸಂಭಾಷಣೆಗಳಿದ್ವು. ಅದು ಜನರಿಗೆ ತಕ್ಷಣಕ್ಕೆ ಅರ್ಥ ಆಗ್ತಿರಲಿಲ್ಲ ಅನಿಸುತ್ತೆ. ಹಾಗಾಗಿ ಕಮರ್ಷಿಯಲ್ಲಾಗಿ ಸಕ್ಸಸ್ ಆಗಲಿಲ್ಲ. ಆದ್ರೆ ಗುಬ್ಬಿ ಕಂಪನಿಯವರು ಈ ನಾಟಕವನ್ನು ತಮ್ಮ ಮನಸ್ಸಂತೋಷಕ್ಕಾಗಿ  ಆಡ್ತಿದ್ರು.

ನನಗೆ ಈ ನಾಟಕ ಅಂದ್ರೆ ಅದೇನೋ ಆಕರ್ಷಣೆ. ನೋಡಿದಾಗಲೆಲ್ಲ ತೃಪ್ತಿ, ಆನಂದ, ಮಂದೆ ಚಿತ್ರರಂಗಕ್ಕೆ ಬಂದ ಮೇಲೆ ‘ಕಾಳಿದಾಸವನ್ನು ಸಿನಿಮಾ ಮಾಡಿದ್ರೆ ಚನ್ನಾಗಿರುತ್ತಲ್ವಾ ಅನಿಸೋಕೆ ಶುರುವಾಯ್ತು. ಸರಿ, ಅದೊಂದು ದಿನ ಚಿ. ಉದಯಶಂಕರ್ ಅವರನ್ನು ಕೂರಿಸಿಕೊಂಡು ಇಡೀ ನಾಟಕವನ್ನು ಪಾಯಿಂಟ್ ಟು ಪಾಯಿಂಟ್ ಹೇಳಿಬಿಟ್ಟೆ. ಅವರು ತುಂಬಾ ಚನ್ನಾಗಿ ಗ್ರಹಿಸಿದ್ರು. ಧ್ಯಾನದಲ್ಲಿ ಕೂತ್ಕಂಡು ಬರದ್ರು. ಕೆಲವೇ ದಿನಗಳಲ್ಲಿ ಸ್ಕ್ರಿಪ್ಟ್ ರೆಡಿ ಆಗಿಹೋಯ್ತು. ಆದರೆ, ಯಾರೂ ಈ ಸಿನಿಮಾ ನಿರ್ಮಿಸಲು ಮುಂದೆ ಬರಲೇ ಇಲ್ಲ. ಆ ನಂತರ ನಮ್ಮ ಷಡ್ಕರಾದ ಜಯರಾಮ ಮುಂದೆ ಬಂದ್ರು. ಕೆಲದಿನಗಳ ನಂತರ ಅವರೂ ಕೂಡ ‘ಬ್ಯಾಡ, ಇದು ಫೈಲ್ಯೂರ್ ಸಬ್ಜೆಕ್ಟ್. ನಾಟಕಕ್ಕೂ ಜನ ಬರ್‍ತಿರಲಿಲ್ಲ. ತಮಿಳಿನಲ್ಲಿ ಸಿನಿಮಾ ಆಯ್ತು. ಫೈಲು. ತೆಲುಗಿನಲ್ಲಿ ಆಯ್ತು. ಅಲ್ಲೂ ಫೈಲ್ಯೂರ್. ಕನ್ನಡದಲ್ಲೂ ಹಿಂದೊಮ್ಮೆ ಬಂದಿತ್ತು. ಅದೂ ಹಿಟ್ ಆಗಲಿಲ್ಲ. ಹಿಂದೀಲಿ ತಯಾರಾಯ್ತು. ಅಲ್ಲೂ ಗೆಲ್ಲಲಿಲ್ಲ. ಹೀಗಿರುವಾಗ ನಾವು ರಿಸ್ಕ್ ತಗೊಳ್ಳೋದು ಹೇಗೇ? ಅಂದು ಹಿಂದೆ ಸರಿದುಬಿಟ್ರು.

ಇವರೆಲ್ಲ ಇಷ್ಟು ತರ್ಕಬದ್ಧವಾಗಿ ಹೇಳಿದ ನಂತರವೂ ನನಗೆ ಆ ಕಥೆಯ ಮೇಲಿನ ಮೋಹ ಕಡಿಮೆಯಾಗಲಿಲ್ಲ. ಆಗ ನಮ್ಮ ವಿಕ್ರಂ ಶ್ರೀನಿವಾಸ್ ಬಂದು-‘ಅಣ್ಣಾ, ನಾ ಎಡಕಲಾಮಾ? (ಅಣ್ಣಾ, ನಾನು ಮಾಡಲಾ?) ಎಂದ. ‘ ಜಮಾಯ್ಸು’ ಅಂದೆ…’

***

‘ಕವಿರತ್ನ ಕಾಳಿದಾಸ’ ಚಿತ್ರ ನಿರ್ದೇಶಿಸಿದವರು ರೇಣುಕಾಶರ್ಮ. ಇದು ಅವರ ನಿರ್ದೇಶನದ ಎರಡನೇ ಚಿತ್ರ. ತಮ್ಮ ಎರಡನೇ ಪ್ರಯತ್ನದಲ್ಲಿಯೇ ಡಾ. ರಾಜ್ ಅವರಂಥ ಮೇರು ನಟನ ಚಿತ್ರ ನಿರ್ದೇಶಿಸುವ ಸೌಭಾಗ್ಯ ಅವರಿಗೆ ಒದಗಿ ಬಂದದ್ದೂ ಆಕಸ್ಮಿಕವೇ.  ಅದು ಹೀಗೆ:

ಡಾ. ರಾಜ್‌ಕುಮಾರ್ ಅವರಿಗೆ ಸಿತಾರ್ ನುಡಿಸಲು ಕಲಿಸುತ್ತಿದ್ದವರು ನಿರ್ದೇಶಕ ದೊರೈ ಅವರ ಸೋದರ ರಾಧಾಕೃಷ್ಣ. ಇವರು ಸೆನ್ಸಾರ್ ಮಂಡಳಿಯ ಸದಸ್ಯರೂ ಆಗಿದ್ದರು. ಆಗಲೇ ರೇಣುಕಾಶರ್ಮ  ನಿರ್ದೇಶನದ ಮೊದಲ ಚಿತ್ರ ‘ಅನುಪಮ’ ಸೆನ್ಸಾರ್‌ಗೆ ಬಂದಿತ್ತು. ಅದನ್ನು ವೀಕ್ಷಿಸಿದ ರಾಧಾಕೃಷ್ಣ, ನಂತರ ರಾಜ್‌ಕುಮಾರ್ ಬಳಿ ಹೋಗಿ ಹೇಳಿದರಂತೆ: ‘ ಸಾರ್, ಇವತ್ತು ‘ಅನುಪಮ’ ಅನ್ನೋ ಸಿನಿಮಾ ನೋಡಿದೆ. ಬೆಳ್ಳಿತೆರೆಯ ಮೇಲೆ ಒಂದು ಕಾವ್ಯ ಓದಿದ ಹಾಗಾಯ್ತು. ಅಷ್ಟೊಂದು ಚನ್ನಾಗಿದೆ. ನೀವು ಅದನ್ನು ನೋಡಲೇಬೇಕು…’

ರಾಧಾಕೃಷ್ಣರ ಸಲಹೆಯ ಮೇರೆಗೆ, ಮದ್ರಾಸ್‌ನ ಕೋಡಂಬಾಕಂನಲ್ಲಿದ್ದ ಎಂ.ಎಂ. ಥಿಯೇಟರಿನಲ್ಲಿ ಒಂದೆರಡಲ್ಲ, ಮೂರು ಬಾರಿ ‘ಅನುಪಮ’ ಚಿತ್ರ ವೀಕ್ಷಿಸಿದರಂತೆ ರಾಜ್. ಕಡೆಗೆ ರೇಣುಕಾಶರ್ಮ ಅವರನ್ನು ಕರೆಸಿ ಹೇಳಿದರಂತೆ: ‘ಶರ್ಮಾ ಅವರೇ, ನಿಮ್ಮ ಸಿನಿಮಾ ನೋಡಿದೆ. ಅದ್ಭುತ, ಅದ್ಭುತವಾಗಿ ತೆಗೆದಿದ್ದೀರಿ. ನಾನೇನಾದ್ರೂ ಅವಾರ್ಡ್ ಕಮಿಟಿಯ ಸದಸ್ಯ ಆಗಿದ್ದಿದ್ರೆ ನಿಮ್ಮ ಸಿನಿಮಾಕ್ಕೆ ಚಿನ್ನದ ಪದಕವನ್ನೇ ಕೊಟ್ಟು ಬಿಡ್ತಿದ್ದೆ…’ ಈ ಮಾತುಕತೆಯ ಸಂದರ್ಭದಲ್ಲಿಯೇ- ‘ಕವಿರತ್ನ ಕಾಳಿದಾಸ ಸಿನಿಮಾ ತಯಾರಿಸೋಣ ಅಂತಿದೀವಿ. ಅದನ್ನು ನೀವು ನಿರ್ದೇಶಿಸಬೇಕು ಶರ್ಮ ಅವರೇ’ ಅಂದರಂತೆ ರಾಜ್‌ಕುಮಾರ್.

ಕವಿರತ್ನ ಕಾಳಿದಾಸ ಅಂದಾಕ್ಷಣ ನೆನಪಾಗುವುದು ‘ಓ ಪ್ರಿಯತಮಾ…’ ಹಾಗೂ ‘ಸದಾ ಕಣ್ಣಲೀ’ ಹಾಡುಗಳು. ಈ ಹಾಡುಗಳಲ್ಲಿ ಸಾಹಿತ್ಯ-ಸಂಗೀತ ಎರಡೂ ಅದ್ಭುತ, ಅದ್ಭುತ ಎಂದು ಉದ್ಗರಿಸುವ ಹಾಗಿವೆ. ಅದರಲ್ಲೂ -‘ಓ ಪ್ರಿಯತಮಾ…’ ಹಾಡಿನಲ್ಲಿರುವ ಕೋಮಲತೆ, ಪ್ರೀತಿ, ಅನುಬಂಧ, ತಹತಹ ವರ್ಣನೆಗೆ ನಿಲುಕದ್ದು. ಈ ಹಾಡಿನ ಬಗ್ಗೆ ರೇಣುಕಾಶರ್ಮ ವಿವರಿಸಿದ್ದು ಹೀಗೆ:

ಕಣ್ವರ ಆಶ್ರಮದಲ್ಲಿ ಶಕುಂತಲೆ, ದುಶ್ಯಂತನ ಧ್ಯಾನದಲ್ಲೇ ಉಳಿದಿರ್‍ತಾಳೆ. ಆ ವೇಳೆಗಾಗಲೇ ಅವರಿಬ್ಬರ ದೈಹಿಕ ಸಮಾಗಮ ಆಗಿರುತ್ತೆ. ನಂತರ ದುಶ್ಯಂತ ತನ್ನ ರಾಜ್ಯಕ್ಕೆ ಹೋಗಿರ್‍ತಾನೆ. ಇಲ್ಲಿ ಶಕುಂತಲೆಗೆ ಒಂದು ಕಡೇಲಿ ವಿರಹ. ಇನ್ನೊಂದು ಕಡೆಯಲ್ಲಿ ಗುಟ್ಟು ಕಾಪಾಡಬೇಕಾದ ಅನಿವಾರ್ಯತೆ. ಮನದ ವೇದನೆಯನ್ನೆಲ್ಲ ಹೇಳಿಕೊಳ್ಳೋಣವೆಂದರೆ ಆಶ್ರಮದಲ್ಲಿ  ಬಂಧುಗಳಾಗಿ ಯಾರೆಂದರೆ ಯಾರೂ ಇರುವುದಿಲ್ಲ- ಇಂಥ ಸಂದರ್ಭದಲ್ಲಿ ಅವಳ ಮನದ ಆಸೆ, ಕಾತುರ, ವೇದನೆ, ಸಂಕಟ, ತಳಮಳವೆಲ್ಲ ಹಾಡಾಗಬೇಕಿತ್ತು. ಅದನ್ನೇ ಉದಯಶಂಕರ್‌ಗೆ ಹೇಳಿದೆ. ಆಗ ನಮ್ಮೊಂದಿಗೆ ಪಾರ್ವತಮ್ಮ ಅಣ್ಣಾವ್ರು ಹಾಗೂ ವರದಪ್ಪ ಇದ್ದರು. ಅವರು ಎಲ್ಲವನ್ನೂ ಕೇಳಿದ ನಂತರ ಕಣ್ಣು ಮುಚ್ಚಿ ಧ್ಯಾನಾ ಸಕ್ತರಾಗಿ ಕೂತುಬಿಟ್ರು. ನಂತರದ ಐದು ನಿಮಿಷದಲ್ಲಿ ಸರಸರನೆ ಬಂದು ಹಾಡು ಬರೆದು ಕೊಟ್ರು. ಅದೇ ‘ಓ ಪ್ರಿಯತಮಾ…’

ದುಶ್ಯಂತ, ಶಕುಂತಲೆಯನ್ನು ಅರಸಿಕೊಂಡು ಬಂದ ಸಂದರ್ಭದಲ್ಲಿ, ಇವಳೂ ಅವನನ್ನೇ ಧ್ಯಾನಿಸುತ್ತಾ, ಭೇಟಿಯಾಗೆಂದು ಆರ್ದ್ರಳಾಗಿ ಪ್ರಾರ್ಥಿಸುವಾಗ ಬರುವ ಹಾಡಿದು. ಹಾಡಿನ ಮೊದಲರ್ಧವನ್ನು ನಾಯಕಿ ಹಾಡ್ತಾಳೆ. ನಂತರದ್ದನ್ನು ನಾಯಕ ಹಾಡ್ತಾನೆ. ಈ ಚಿತ್ರೀಕರಣದ ಶೂಟಿಂಗ್ ನಡೀತಿದ್ದುದು ಊಟಿಯಲ್ಲಿ. ಚಿತ್ರೀಕರಣದ ಸಂದರ್ಭದಲ್ಲಿ ಅದೊಮ್ಮೆ ರಾಜ್ ಅವರು ನನ್ನ ಬಳಿ ಬಂದು- ಶರ್ಮ ಅವರೇ, ನನ್ನದೊಂದು ಅನಿಸಿಕೆ. ಹೇಳಬಹುದಾ?’ ಅಂದರು.

‘ಧಾರಾಳವಾಗಿ ಹೇಳಿ ಸಾರ್’ ಎಂದೆ. ಆಗ ರಾಜ್ ‘ನೋಡೀ, ಈ ಹಾಡಲ್ಲಿ ಮೊದಲು ನಾಯಕಿ, ನಂತರ ನಾಯಕ ಹಾಡುವಂಥ ಸನ್ನಿವೇಶ ಇದೆ. ಇದರ ಬಗ್ಗೆ ನನ್ನದೇನೂ ತಕರಾರಿಲ್ಲ. ಆದರೆ, ಅಭಿಮಾನಿ ದೇವತೆಗಳಿಗೆ ಬೇಸರ ಆಗಬಹುದು. ಹಾಗಾಗಿ, ಇದನ್ನು ಅದಲು ಬದಲು ಮಾಡಬಹುದಾ ನೋಡಿ’ ಅಂದರು.

‘ಸಾರ್, ದಯವಿಟ್ಟು ತಪ್ಪು ತಿಳ್ಕೋಬೇಡಿ. ಈ ದೃಶ್ಯಗಳು ಈಗ ಇರುವಂತೆಯೇ ಇರಲಿ. ಯಾಕೆ ಅನ್ನೋದನ್ನು ಚಿತ್ರೀಕರಣ ಮುಗಿದ ತಕ್ಷಣ ನಿಮಗೆ ಹೇಳ್ತೀನಿ’ ಅಂದೆ. ‘ಸರಿ’ ಎಂದರು ರಾಜ್. ಚಿತ್ರೀಕರಣದ ಸಂದರ್ಭದಲ್ಲಿ ನನ್ನದೊಂದು ಪದ್ಧತಿ ಇದೆ. ಅದೇನೆಂದರೆ- ಚಿತ್ರೀಕರಣಕ್ಕೂ ಮುಂಚೆ ಹಾಗೂ ಚಿತ್ರೀಕರಣದ ನಂತರ, ದೇವರನ್ನು ನೆನೆಯುತ್ತಾ ಪ್ರದಕ್ಷಿಣೆ ಬರುವುದು. ‘ಓ ಪ್ರಿಯತಮಾ…’ ಹಾಡಿನ ಚಿತ್ರೀಕರಣದ ನಂತರ ನಾನು ಯಥಾಪ್ರಕಾರ ದೇವರಿಗೆ ಪ್ರದಕ್ಷಿಣೆ ಹಾಕಿ ಹಿಂದೆ ತಿರುಗಿದರೆ ಅಲ್ಲಿ  ಡಾ. ರಾಜ್‌ಕುಮಾರ್!

ಅವರ ಕಂಗಳಲ್ಲಿ ಕುತೂಹಲವಿತ್ತು. ತುಂಬಾ ಮುಗ್ಧವಾಗಿ ಕೇಳಿದರು ರಾಜ್: ‘ಶರ್ಮ ಅವರೇ, ಚಿತ್ರೀಕರಣ ಮುಗಿದ ನಂತರ ಹೇಳ್ತೇನೆ ಅಂದ್ರಲ್ಲ, ಅದೇನು? ಈಗ ಹೇಳ್ತೀರಾ…?’

ಆಗ ನಾನೆಂದೆ: ‘ಸಾರ್, ತನ್ನ ವಿರಹವನ್ನ, ಸಂಕಟವನ್ನ, ದುಗುಡವನ್ನ, ನೋವನ್ನು ಹೇಳಿಕೊಳ್ಳಲಿಕ್ಕೆ ಗಂಡಸಿಗೆ ಸಾವಿರ ದಾರಿಗಳಿವೆ. ಅದರಲ್ಲೂ ನಮ್ಮ ಹಾಡಲ್ಲಿ ಬರುವಾತ ಚಕ್ರವರ್ತಿ ದುಶ್ಯಂತ. ಅವನ ಸಂಕಟಕ್ಕಿಂತ ತಾಯಿಯ ಆಸರೆಯೇ ಇಲ್ಲದೆ, ಬಂಧುಗಳೂ ಇಲ್ಲದೆ ಆಶ್ರಮದಲ್ಲಿ ಒಂಟಿಯಾಗಿ ಉಳಿದ ಶಕುಂತಲೆ ಅನುಭವಿಸುವ ಸಂಕಟ- ವಿರಹ ದೊಡ್ಡದು. ಹಾಗಾಗಿ ಅವಳ ನೋವು ಮೊದಲು ಹಾಡಾಗಿ ಬರಬೇಕು. ಅದನ್ನು ಕಂಡು ದುಶ್ಯಂತನಿಗೂ ವಿಪರೀತದ ಖುಷಿಯಾಗಬೇಕು. ಆ ಖುಷಿಯಲ್ಲಿ ಹಾಡುತ್ತಲೇ ಅವನೂ ತನ್ನ ಸಂಕಟ ಹೇಳಿಕೊಳ್ಳಬೇಕು. ಆಗ, ಶಕುಂತಲೆಯ ಮನಸ್ಸು ನವಿಲಾಗಿ ಕುಣಿಯಬೇಕು… ಇದು ನನ್ನ ಕಲ್ಪನೆ. ಹಾಗಾಗಿ ಮೊದಲು ನಾಯಕಿಯೇ ಹಾಡಲಿ ಎಂದೆ…’

ನನ್ನ ಮಾತಿನ್ನೂ ಮುಗಿದಿರಲಿಲ್ಲ. ಆಗಲೇ ಎರಡೂ ಕೈಗಳಲ್ಲಿ ನನ್ನ ಕೈ ಹಿಡಿದ ರಾಜ್ ಹೀಗೆಂದರು: ಶರ್ಮಾ ಅವರೆ, ಇದನ್ನೇ ನಿರ್ದೇಶಕನ ಪರಿಕಲ್ಪನೆ ಅನ್ನೋದು. ನಿಮ್ಮ ಯೋಚನೆ ಅದ್ಭುತವಾಗಿದೆ. ಚನ್ನಾಗಿ ಬರ್‍ತಾ ಇದೆ, ಮುಂದುವರಿಸಿ’

***

‘ಕಾಳಿದಾಸ’ನ ಹಾಡುಗಳಿಗೆ ಕನ್ನಡಿ ಹಿಡಿಯಲು ಹೊರಟಾಗ ಸಿಕ್ಕಿದ್ದು ಈ ಮಾಹಿತಿ. ಅಂದಹಾಗೆ ಈ ಚಿತ್ರದಲ್ಲಿ ‘ಮಾಣಿಕ್ಯ ವೀಣಾ’ ಎಂಬ ಇನ್ನೊಂದು ಅಪರೂಪದ, ಅದ್ಭುತವಾದ ಹಾಡಿದೆ, ಕಾಳಿದಾಸ ಮಹಾಕವಿಯ ರಚನೆಯಾದ ಆ ಹಾಡಿನ ವಿವರ- ಮುಂದಿನವಾರ!

‍ಲೇಖಕರು avadhi

July 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: