ಮಣಿಕಾಂತ್ ಬರೆಯುತ್ತಾರೆ: ಸವಿ ನೆನಪುಗಳು ಬೇಕು..

ಚಿತ್ರ: ಅಪರಿಚಿತ. ಗೀತೆರಚನೆ: ರಾಮದಾಸ ನಾಯ್ಡು
ಗಾಯನ: ವಾಣಿ ಜಯರಾಂ. ಸಂಗೀತ: ಎಲ್. ವೈದ್ಯನಾಥನ್.
6213_1079515355773_1462958320_30205965_5660699_n111ಎ ಆರ್ ಮಣಿಕಾಂತ್
ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ
ಕಾಡುತಿದೆ ಮನವಾ…
ಸವಿನೆನಪುಗಳು ಬೇಕು, ಸವಿಯಲೀ ಬದುಕೂ ||ಪ||
ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನಾ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನಾ ಎದೆಬಡಿತ ಗುಂಡಿನಾ ದನಿಗಿರಿದು
ಮಾಸುತಿದೆ ಕನಸೂ  ||1||
ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನಾ ಭೀತಿಯಲಿ ನಾ ಬಂದಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿದೆ
ಅರಳುವಾ ಹೂವೊಂದು ಕಮರುವಾ ಭಯದಲ್ಲಿ
ಸಾಗುತಿದೆ ಬದುಕೂ  ||2||
shobhaನಾಯಕನ ವಿಷಯವಾಗಿ ಚಿತ್ರರಂಗದಲ್ಲಿ ಒಂದಿಷ್ಟು ನಂಬಿಕೆಗಳಿವೆ. ಏನೆಂದರೆ- ಹೀರೊ ಅನಿಸಿಕೊಂಡಾತ ಸುರಸುಂದರಾಂಗ ಆಗಿರಬೇಕು. ಅವನಿಗೆ ಡ್ಯಾನ್ಸು ಗೊತ್ತಿರಬೇಕು. ಫೈಟು ತಿಳಿದಿರಬೇಕು. ಕಾನೂನು ಕೈಗೆತ್ತಿಕೊಳ್ಳುವ `ಅವಸರ’ ಅವನಿಗಿರಬೇಕು. ಹೀರೊ ಅನ್ನಿಸಿಕೊಂಡ ಕಾರಣಕ್ಕೇ ಆತ ಏಕಕಾಲಕ್ಕೆ ಹತ್ತು ಮಂದಿಯನ್ನು ಚಚ್ಚಿ ಹಾಕಬೇಕು… ಇಂಥ ಎಲ್ಲ ನಂಬಿಕೆಗಳನ್ನೂ ಉಲ್ಟಾ ಮಾಡಿದವರು ಕಾಶೀನಾಥ್. ಸಾಧಾರಣ ರೂಪಿನವರೂ ಹೀರೊ ಆಗಿ ಗೆಲ್ಲಬಹುದು. ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ಕಥೆ ಮುಖ್ಯವೇ ಹೊರತು ನಾಯಕನೋ, ನಾಯಕಿಯೋ ಅಲ್ಲ ಎಂಬುದನ್ನು ಆಗಿಂದಾಗ್ಗೆ ಪ್ರೂವ್ ಮಾಡುತ್ತಲೇ ಬಂದದ್ದು ಕಾಶೀನಾಥ್ ಅವರ ಹೆಚ್ಚುಗಾರಿಕೆ.
ಕಾಶೀನಾಥ್ ಅಂದಾಕ್ಷಣ ಎಲ್ಲರಿಗೂ ನೆನಪಾಗುವ ಸಿನಿಮಾ `ಅನುಭವ’. ಅದರ ಹಿಂದೆಯೇ- ಅವಳೇ ನನ್ನ ಹೆಂಡ್ತಿ, ತಾಯಿಗೊಬ್ಬ ತರ್ಲೆ ಮಗ, ಅಜಗಜಾಂತರ, ಹಲೋ ಯಮ, ಮನ್ಮಥಲೀಲೆ ಸಿನಿಮಾಗಳೂ ನೆನಪಾಗುವುದುಂಟು. ಹಾಗೆಯೇ ಕಾಶೀನಾಥ್ `ಮಹಾತ್ಮೆ’ಯ ಇನ್ನೊಂದು ಮುಖವನ್ನೂ ಪರಿಚಯಿಸುವ `ಅನಂತನ ಅವಾಂತರ’ ಸಿನಿಮಾ ನೆನಪಿಗೆ ಬಂದಾಗಲೆಲ್ಲ ಅಭಿಮಾನ, ಅಚ್ಚರಿ, ಅಸಮಾಧಾನ, ಕಸಿವಿಸಿ ಮತ್ತು ಥ್ರಿಲ್ ಒಟ್ಟೊಟ್ಟಿಗೇ ಆಗಿಬಿಡುವುದುಂಟು.
ಕನ್ನಡ ಚಿತ್ರರಂಗದಲ್ಲಿ ಹೀರೊ ಆಗಿ ಗೆಲ್ಲಬೇಕೆಂದರೆ, ಗಾಡ್ಫಾದರ್ಗಳ ಬೆಂಬಲ ಬೇಕು. `ನಮ್ಮವರು’ ಎನ್ನಿಸಿಕೊಂಡ ಒಂದಿಬ್ಬರು ನಿಮರ್ಾಪಕರು ಬೆನ್ನಿಗಿರಬೇಕು. ಹಾಗೆಯೇ, ಒಂದು ಸಿನಿಮಾ ಗೆಲ್ಲಬೇಕಾದರೆ ಅದು ತಾಂತ್ರಿಕವಾಗಿಯೂ ಶ್ರೀಮಂತವಾಗಿರಬೇಕು. ಭವ್ಯವಾದ ಸೆಟ್ಗಳಿಂದ ಕೂಡಿರಬೇಕು. ಆದರೆ, ಮೇಲೆ ವಿವರಿಸಿದ ಯಾವುದೇ `ಅರ್ಹತೆ’ ಇಲ್ಲದಿದ್ದರೂ ತಮ್ಮ ಸಿನಿಮಾಗಳನ್ನು ಗೆಲ್ಲಿಸಿದ್ದು ಕಾಶೀನಾಥ್ ಅವರ ಹೆಚ್ಚುಗಾರಿಕೆ. ಅವರು ಚಿತ್ರರಂಗ ಪ್ರವೇಶಿಸಿದ್ದು `ಅಪರೂಪದ ಅತಿಥಿಗಳು’ ಎಂಬ ಸಿನಿಮಾದ ಮೂಲಕ. ತಮ್ಮ ಚಿತ್ರರಂಗ ಪ್ರವೇಶ, ಕೌಟುಂಬಿಕ ಹಿನ್ನೆಲೆಯ ಬಗ್ಗೆ ಅವರು ಸ್ವಾರಸ್ಯಕರವಾಗಿ ವಿವರಿಸಿದ್ದು ಹೀಗೆ:
kashinathನಮ್ಮದು ಕುಂದಾಪುರ ಸಮೀಪದ ಕೋಟೇಶ್ವರ. ನನ್ನ ಹೈಸ್ಕೂಲ್ವರೆಗಿನ ಶಿಕ್ಷಣ ಕುಂದಾಪುರ, ಲಿಂಗನಮಕ್ಕಿ ಹಾಗೂ ಜೋಗ್ಫಾಲ್ಸ್ನಲ್ಲಿ ನಡೆಯಿತು. ಮುಂದೆ, ನಮ್ಮ ತಂದೆಯವರು ಬೆಂಗಳೂರಿಗೆ ಬಂದರು. ಜಯನಗರ ನಾಲ್ಕನೇ ಬ್ಲಾಕ್ನಲ್ಲಿ `ಗಾಯತ್ರಿ ಜನರಲ್ ಸ್ಟೋರ್ಸ್’ ಹೆಸರಿನ ಅಂಗಡಿ ತೆರೆದರು. ವ್ಯಾಪಾರ ತುಂಬ ಜೋರಾಗಿಯೇ ನಡೆಯಿತು. ಈ ಮಧ್ಯೆ ನನ್ನ ಪದವಿ ಶಿಕ್ಷಣ ಕೂಡ ಮುಗಿಯಿತು. ಆಗಲೇ ನನ್ನನ್ನು ಕರೆದ ತಂದೆಯವರು- `ಮುಂದೆ ಏನು ಮಾಡಬೇಕು ಅಂತಿದೀಯ? ಓದುತ್ತೀಯಾ ಅಥವಾ ಅಂಗಡಿ ವ್ಯಾಪಾರ ನೋಡಿಕೋಳ್ತೀಯಾ?’ ಎಂದರು.
ಆ ವೇಳೆಗೆ ಚಿತ್ರರಂಗ ಸೇರಬೇಕು. ಹೀರೊ ಆಗಬೇಕು. ಸಿನಿಮಾ ನಿದರ್ೇಶಿಸಬೇಕು… ಇಂಥವೇ ಆಸೆಗಳು ನನ್ನ ಜತೆಗಿದ್ದವು. ತಂದೆಯವರಿಗೆ ಇದನ್ನೇ ಹೇಳಿದೆ. `ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸ್ತೇನೆ, ಸ್ವಲ್ಪ ದುಡ್ಡು ಕೊಡಿ’ ಎಂದೆ. ನಮ್ಮ ಕುಟುಂಬದಲ್ಲಿ ಯಾರೊಬ್ಬರಿಗೂ ಸಿನಿಮಾದ ಅಥವಾ ಸಂಗೀತದ ಗಂಧ-ಗಾಳಿ ಇರಲಿಲ್ಲ. ಪರಿಚಯವಿಲ್ಲದ, ಅನುಭವವೂ ಇಲ್ಲದ ಕ್ಷೇತ್ರಕ್ಕೆ ಹೋಗಿ ದುಡ್ಡು ಕಳ್ಕೋಬೇಡ ಎಂದು ತಂದೆ ಎಚ್ಚರಿಸಿದರು. ಮನೆಯಲ್ಲಿ ಎಲ್ಲರೂ ತಂದೆಯ ಮಾತಿನ ಪರವಾಗಿಯೇ ನಿಂತರು. ಒಂದಿಷ್ಟು ಮಂದಿ ಬಂಧುಗಳೂ ನನಗೆ ಬುದ್ಧಿ ಹೇಳಿ ಹೋದರು.
ಆದರೆ ನಾನು ಹಟ ಬಿಡಲಿಲ್ಲ. ಚಿತ್ರರಂಗಕ್ಕೆ ಹೋಗೋದೇ ಸೈ ಎಂದು ಪಟ್ಟು ಹಿಡಿದೆ. ನಂತರ ತಂದೆಯವರ ಬಳಿ ಹೋಗಿ- `ಒಂದು ವೇಳೆ ನಾನು ಅಂಗಡಿ ನೋಡಿಕೊಳ್ತೇನೆ ಅಂದ್ರೆ ಹೊಸದೊಂದು ಅಂಗಡಿ ತೆಗೆದುಕೊಡ್ತೀರ ಅಲ್ವ? ಅದಕ್ಕೆ ಮೀಸಲಾಗಿರುವ ಹಣದಲ್ಲಿ ಅರ್ಧ ಮಾತ್ರ ಕೊಡಿ. ಬಿಜಿನೆಸ್ ಆರಂಭಿಸೋಕೆ ಕೊಡ್ತಾ ಇದೀನಿ ಅಂತಾನೇ ಕೊಡಿ. ಈ ಪುಟ್ಟ ಗಂಟಿನಲ್ಲಿಯೇ ಚಿತ್ರರಂಗಕ್ಕೆ ಹೋಗಿ ಬರ್ತೀನಿ. ಒಂದು ವೇಳೆ ಈ ಪ್ರಯತ್ನದಲ್ಲಿ ಸೋತುಹೋದ್ರೆ ಮುಂದೆ ಸಿನಿಮಾದ ಸಹವಾಸಕ್ಕೆ ಹೋಗಲ್ಲ. ನೀವು ಹೇಳಿದ ಹಾಗೆ ಕೇಳಿಕೊಂಡು ಅಂಗಡಿ ವ್ಯಾಪಾರ ನೋಡಿಕೊಂಡು ಇದ್ದುಬಿಡ್ತೀನಿ’ ಅಂದೆ.
ಈ ವೇಳೆಗೆ, ನನ್ನ ನಿಧರ್ಾರದ ಬಗ್ಗೆ ತಂದೆಯವರಿಗೆ ಅರ್ಥವಾಗಿತ್ತು. `ಸರಿ, ನಿನ್ನಿಷ್ಟ’ ಎಂದು ಒಂದಿಷ್ಟು ದುಡ್ಡು ಕೊಟ್ಟರು. ಆ ಪುಟ್ಟ ಮೊತ್ತದಲ್ಲಿಯೇ `ಅಪರೂಪದ ಅತಿಥಿಗಳು’ ಸಿನಿಮಾ ತಯಾರಿಸಿದೆ. ಅವತ್ತಿಗೆ ನನಗೆ ಚಿತ್ರರಂಗದ ಪರಿಚಯವಿರಲಿಲ್ಲ. ಚಿತ್ರರಂಗಕ್ಕೂ ನನ್ನ ಪರಿಚಯವಿರಲಿಲ್ಲ. ಆದರೆ, ನನ್ನೊಳಗೆ ಉತ್ಸಾಹವಿತ್ತು, ಹಟವಿತ್ತು, ಛಲವಿತ್ತು. ಒಂದು ಹೊಸ ಟ್ರೆಂಡ್ ಆರಂಭಿಸಬೇಕೆಂಬ ಹಪಹಪಿಯಿತ್ತು. ಅಂಗಡಿಗಿದ್ದ `ಗಾಯತ್ರಿ ಜನರಲ್ ಸ್ಟೋರ್ಸ್’ ಎಂಬ ಹೆಸರನ್ನೇ ತಗೊಂಡು ಗಾಯತ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ತೆಗೆದೆ. ಮೊದಲ ಸಿನಿಮಾದಿಂದ ನನಗೆ ಹೆಸರು ಬಂತು. ಹಾಕಿದ ಬಂಡವಾಳದ ಜತೆಗೆ ಒಂದಿಷ್ಟು ಲಾಭವೂ ದಕ್ಕಿತು. ನನ್ನ ಈ ಯಶಸ್ಸು ಕಂಡು ತಂದೆಯವರಿಗೆ ಖುಷಿಯಾಯಿತು. `ಇದೇ ರಂಗದಲ್ಲಿ ಮುಂದುವರಿ’ ಎಂದರು.ಮುಂದೆ ತಯಾರಾದದ್ದೇ `ಅಪರಿಚಿತ!’
`ಅಪರಿಚಿತ’, ಒಂದು ರೋಚಕ ಕಥೆಯ ಪತ್ತೇದಾರಿ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್ ಎನ್ನಿಸಿಕೊಂಡ ಸಿನಿಮಾವೊಂದು ಹೇಗಿರಬೇಕು ಎಂಬ ಪ್ರಶ್ನೆಗೆ `ಅಪರಿಚಿತ’ ಸಿನಿಮಾ ಅತ್ಯುತ್ತಮ ಉದಾಹರಣೆ. ಸಾಮಾನ್ಯವಾಗಿ, ಪತ್ತೇದಾರಿ ಸಿನಿಮಾಗಳಲ್ಲಿ ಹಾಡುಗಳಿರುವುದಿಲ್ಲ. ಒಂದು ವೇಳೆ ಇದ್ದರೂ, ಅದು ಜನಪ್ರಿಯವಾಗಿರುವುದಿಲ್ಲ. ಆದರೆ, ಅಪರಿಚಿತ ಸಿನಿಮಾದಲ್ಲಿ ಹಾಗಾಗಲಿಲ್ಲ. ನಾಯಕಿಯ ಮೇಲೆ ಚಿತ್ರಿಸಿದ `ಸವಿನೆನಪುಗಳು ಬೇಕು ಸವಿಯಲೀ ಬದುಕು’ ಎಂಬ ಹಾಡು ಆ ಸಿನಿಮಾವನ್ನೂ ಮೀರಿ ಜನಪ್ರಿಯವಾಯಿತು. ಕನ್ನಡದ ಸೂಪರ್ಹಿಟ್ ಗೀತೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಈ ಹಾಡು ಬರೆದವರು ರಾಮದಾಸ್ ನಾಯ್ಡು. ಇವತ್ತಿಗೂ, ಹಾಡು ಕೇಳುವ ಎಲ್ಲರನ್ನೂ ನೆನಪುಗಳ ಉಯ್ಯಾಲೆಯಲ್ಲಿ ಜೀಕಿ ಖುಷಿಪಡಿಸುವ ಈ ಹಾಡು ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಕಾಶೀನಾಥ್ ಹೇಳಿದರು: ಅಪರಿಚಿತ ಸಿನಿಮಾದ ಬಗ್ಗೆ ನಮ್ಮ ಮನೆಯಲ್ಲಿ ಚಚರ್ೆ ನಡೆಸ್ತಾ ಇದ್ವಿ. ಆಗ ನನ್ನೊಂದಿಗೆ ಸಂಗೀತ ನಿದರ್ೇಶಕ ಎಲ್. ವೈದ್ಯನಾಥನ್, ರಾಮದಾಸ್ ನಾಯ್ಡು ಹಾಗೂ ಇನ್ನೊಂದಿಬ್ಬರು ಇದ್ರು. ನಾಯಕಿ ಒಬ್ಬನನ್ನು ಪ್ರೀತಿಸಿರುತ್ತಾಳೆ. ಬದುಕು, ಜಗಳ, ಮಾತು, ಮುನಿಸು, ಸರಸ, ವಿರಸ, ನೋವು, ನಲಿವು ಎಲ್ಲವೂ ಅವನೊಂದಿಗೇ. ಈ ಜನ್ಮವೆಂಬುದು ಅವನೊಬ್ಬನಿಗೇ ಮೀಸಲು ಎಂದೆಲ್ಲ ಆಕೆ ಅಂದುಕೊಂಡಿರುತ್ತಾಳೆ. ಅವನೊಂದಿಗಿನ ಹೊಸ ಬದುಕಿನ ಬಗ್ಗೆ ಕನಸು ಕಂಡಿರುತ್ತಾಳೆ. ಹೀಗಿದ್ದಾಗಲೇ ಕಥೆಗೆ ಒಂದು ದಿಢೀರ್ ತಿರುವು ಸಿಗುತ್ತದೆ. ಕೊಲೆಯೊಂದರ ತನಿಖೆಗೆಂದು ನಾಯಕಿಯ ಗೆಳೆಯ ಹೋಗಿಬಿಡುತ್ತಾನೆ. ಅವನ ನೆನಪಲ್ಲಿ ತೇಲಿಹೋದ ನಾಯಕಿ ಒಂದು ಹಾಡಿನ ಮೂಲಕ ತನ್ನ ಅಷ್ಟೂ ಸಂಕಟ ಹೇಳಿಕೊಳ್ಳಬೇಕು…
ಕಥೆಯ ಚಚರ್ೆಗೆಂದು ಕುಳಿತಿದ್ದವರು ಹೀಗೆಲ್ಲ ಮಾತಾಡಿಕೊಂಡಾಗಲೇ ನನಗನ್ನಿಸಿತು ಏನೆಂದರೆ, ಪ್ರತಿಯೊಬ್ಬರೂ ದಿನದಿನವೂ ನೆನಪುಗಳೊಂದಿಗೇ ಬದುಕುತ್ತಾರೆ. ಈ ನೆನಪುಗಳು ಕೆಲವೊಮ್ಮೆ ಅಳಿಸುತ್ತವೆ, ಕೆಲವೊಮ್ಮೆ ನಗಿಸುತ್ತವೆ. ಕೆಲವೊಮ್ಮೆ ಸಿಟ್ಟಿಗೇಳುವಂತೆ ಮಾಡುತ್ತವೆ. ಒಂದೊಂದು ಸಂದರ್ಭದಲ್ಲಿ ಪಶ್ಚಾತ್ತಾಪ ಪಡುವಂತೆಯೂ ಮಾಡಿಬಿಡುತ್ತವೆ. ಸ್ವಾರಸ್ಯವೆಂದರೆ, ಎಲ್ಲರೂ ಒಳ್ಳೆಯ ನೆನಪುಗಳೊಂದಿಗೆ ಮಾತ್ರ ಬದುಕಲು ಇಷ್ಟಪಡುತ್ತಾರೆ. ಆದರೆ, ಬೇಡಬೇಡವೆಂದರೂ ಕೆಟ್ಟ ನೆನಪುಗಳೂ ಆಗಿಂದಾಗ್ಗೆ ಕೈ ಜಗ್ಗುತ್ತಲೇ ಇರುತ್ತವೆ…
ಇಂಥದೊಂದು ಯೋಚನೆ ಬಂದಾಗ ನಾನು ಅದನ್ನೇ ಸಂಗಡಿಗರಿಗೂ ಹೇಳಿದೆ, `ಇಲ್ಲಿ ನಾಯಕಿ ತನ್ನ ಗೆಳೆಯನೊಂದಿಗೆ ಸರಸವಾಡಿದ್ದು, ವಾಕಿಂಗ್ ಹೋಗಿದ್ದು, ಜಗಳವಾಡಿದ್ದು, ಕಿಲಕಿಲನೆ ನಕ್ಕಿದ್ದು, ಅವನು ಜತೆಗಿಲ್ಲವೆಂದು ಹೆದರಿದ್ದು, ಅವನನ್ನೇ ಹೆದರಿಸಿದ್ದು… ಮುಂತಾದ ಕ್ಷಣಗಳನ್ನು ನೆನಪು ಮಾಡಿಕೊಂಡು ಹಾಡ್ತಾಳೆ ನಿಜ. ಆದರೆ ಸಿನಿಮಾ ನೋಡಲು ಬಂದವರಿಗೆ, ಅವರವರ ಭಾವನೆಗಳೊಂದಿಗೆ `ಮಾತಾಡುವಂಥ’ ಹಾಡಾದರೆ ಚೆಂದ ಅನ್ನೋದು ನನ್ನ ಅಭಿಪ್ರಾಯ. ಹಾಗಾಗಿ ಸವಿನೆನಪು ಬೇಕು, ಕಹಿನೆನಪು ಸಾಕು ಎಂಬರ್ಥದ ಸಾಲುಗಳು ಹಾಡಲ್ಲಿ ಬರಲಿ’.
ಈ ಮಾತಿಗೆ ಎಲ್ಲರೂ ಸಮ್ಮತಿ ಸೂಚಿಸಿದರು. ನಂತರದ ಕ್ಷಣಗಳಲ್ಲಿ ಯಾವುದೋ ಲಹರಿಯಲ್ಲಿ ತೇಲಿಹೋದ ಎಲ್. ವೈದ್ಯನಾಥನ್ ಒಂದು ಸೊಗಸಾದ ಟ್ಯೂನ್ ಹೇಳಿದರು. ಅದನ್ನು ಕೇಳಿಸಿಕೊಂಡ ರಾಮದಾಸ್ ನಾಯ್ಡು, `ಸವಿನೆನಪುಗಳು ಬೇಕು ಸವಿಯಲೀ ಬದುಕು…’ ಎಂದು ಬರೆದರು. ತಕ್ಷಣ ಅಲ್ಲಿದ್ದವರೆಲ್ಲ – `ಮನಸ್ಸು ಸವಿನೆನಪುಗಳಿಗಾಗಿ ಹಂಬಲಿಸುತ್ತದೆ ನಿಜ. ಆದರೆ, ಹೆಚ್ಚಾಗಿ ಕಹಿ ನೆನಪುಗಳೇ ಕಾಡುತ್ತವೆ’ ಎಂಬುದು ಹೈಲೈಟ್ ಆಗಲಿ. ಏಕೆಂದರೆ, ನಾಯಕಿ ಕೂಡ ಬೇಸರದಲ್ಲಿದ್ದಾಗಲೇ ಈ ಹಾಡು ಬರುತ್ತದೆ ಎಂದೆವು.
ನಂತರದ ಕೆಲವೇ ಕ್ಷಣಗಳಲ್ಲಿ ಎಲ್ಲರ ಮನಸಿನೊಂದಿಗೂ ಮಾತಾಡಿ ಬಂದವರಂತೆ ಹಾಡು ಬರೆದೇಬಿಟ್ಟರು ರಾಮದಾಸ ನಾಯ್ಡು. ಅದನ್ನು ವಾಣಿ ಜಯರಾಂ, ವಿಷಾದವೆಂಬುದು ನಾಭಿಯಿಂದ ಉಕ್ಕುಕ್ಕಿ ಬಂದ ಭಾವದಲ್ಲಿ ಹಾಡಿಬಿಟ್ಟರು. ಮುಂದೆ ಸಿನಿಮಾ ಬಿಡುಗಡೆಯಾದಾಗ ಎಲ್ಲರೂ ಆ ಹಾಡಿನ ಬಗ್ಗೆಯೇ ಮಾತಾಡಲು ಶುರುಮಾಡುತ್ತಿದ್ದರು. ಮೆಚ್ಚಿನ ಚಿತ್ರಗೀತೆಗಳ ಪಟ್ಟಿಯಲ್ಲೂ ಆ ಹಾಡಿಗೆ ತುಂಬ ದಿನಗಳ ಕಾಲ ಮೊದಲ ಸ್ಥಾನವೇ  ಇತ್ತು. ಈಗಲೂ ಆ ಹಾಡು ಕೇಳಿದಾಗಲೆಲ್ಲ-ಮೂವತ್ತೊಂದು ವರ್ಷಗಳ ಹಿಂದೆ (ಅಪರಿಚಿತ ಸಿನಿಮಾ ತೆರೆಕಂಡದ್ದು 1978ರಲ್ಲಿ) ಜಯನಗರದ ನಮ್ಮ ಪುಟ್ಟ ಮನೆಯಲ್ಲಿ ನಡೆಸಿದ ಮಾತುಕತೆ, ಒತ್ತಡದಲ್ಲಿ, ಅವಸರದ ಮಧ್ಯೆಯೇ ಈ ಹಾಡು ಹುಟ್ಟಿದ ಸಂದರ್ಭ ನೆನಪಾಗುತ್ತದೆ. ಹಾಡು ಕೇಳಿದಾಗಲೆಲ್ಲ ಯಾವುದೊ ಸಿಹಿ ನೆನಪು, ಜತೆಗೇ ಒಂದು ಕಹಿ ನೆನಪು ಕೈ ಜಗ್ಗಿದಂತಾಗಿ ಖುಷಿಯೂ ಒಟ್ಟೊಟ್ಟಿಗೇ ಆಗಿಬಿಡುತ್ತದೆ…
ಇಷ್ಟು ಹೇಳಿ ಕ್ಷಣ ಮೌನವಾದರು ಕಾಶೀನಾಥ್. ಅವರು ಯಾವುದೋ ಹೊಸ ನೆನಪಲ್ಲಿ ತೇಲಿಹೋಗುತ್ತಿದ್ದಾರೆ ಎಂಬುದಕ್ಕೆ ಅಲ್ಲಿ ಸಾಕ್ಷಿಯಿತ್ತು…

‍ಲೇಖಕರು avadhi

October 11, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

2 ಪ್ರತಿಕ್ರಿಯೆಗಳು

 1. keshav

  ಈ ಹಾಡು ನನ್ನ ಆತ್ಮೀಯ ಕನ್ನಡ ಹಾಡುಗಳಲ್ಲಿ ಒಂದು. ಅದರ ಬಗ್ಗೆ ಬರೆದಿದ್ದಕ್ಕೆ ಥ್ಯಾಂಕ್ಸ್! ಸೊಗಸಾದ ರಾಗ, ಅದ್ಭುತ ಹಾಡುಗಾರಿಕೆ!
  – ಕೇಶವ

  ಪ್ರತಿಕ್ರಿಯೆ
 2. Berlinder

  „ಸವಿ ನೆನಪುಗಳು ಬೇಕು…“ ಬರೆದದ್ದು ಮಣಿಕಾಂತರೊ ಅಥವ
  ಗೀತೆರಚಿಸಿದ ಕವಿ „ರಾಮದಾಸ ನಾಯ್ಡು „ ಅವರೆ ಸ್ಪಷ್ಟವಾಗಿಲ್ಲ.
  ಮಣಕಾಂತನನು ಮೇಲೆತ್ತಿ ದಾಸರನು ತಳಕ್ಕೆ ತೆತ್ತಿ ಒತ್ತಿರುವ
  ಶಿರನಾಮ ಪುಟದ ನೆತ್ತಿಗೆ ಕೆತ್ತಿ ಬಣ್ಣದಲಗಲಿಸಿ ಮನಮುತ್ತಿಸುವುದೆಲ್ಲ
  ತದ್ವಬದ್ವ ಗಲಿಬಿಲಿ ಮಾಡಿ ಅಸ್ತವ್ಯ಼ಸ್ತವಾದ ಅರ್ಥವ್ಯರ್ಥ ಅಣಿಗೆಡಿಕೆ.
  ಶುದ್ಧಪ್ರಬುದ್ಧ ಸೊಗಸಾದ ಸವಿಗನ್ನಡ ಸಿರಿನುಡಿಯ ಪತಾಕೆ
  ಹಿಡಿದೆತ್ತಿ ನಡುಮದ್ಯೆ ಕಂಗ್ಲಿಷ್ ಮಾತು ತೊಡಿಸುವರೇಕೆ?
  ಸುವರ್ಣ ಸವಿಗನ್ನಡಕೆ ಗಂಜಳದ ಗಿಜುಗು ಮಿಶ್ರಣವೇತಕೆ?
  ನಾಟ್ಯ,ಹೊಡೆದಾಟ, ನಾಯಕ, ಪುರಾವೆ, ಗಳು ಹೊಳೆಯದೆ ಮನಕೆ?
  ಅಷ್ಟೊಂದು ಕನ್ನಡ ನಿರತರಿಗೆ ಒಂದಿಷ್ಟು ಇಂಗ್ಲಿಷ್ ಇರಲೇಬೇಕೆ?
  – ವಿಜಯಶೀಲ, ಬೆರ್ಲಿನ್, ೧೨.೧೦.೨೦೦೯
  *

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: