ಮಣಿಕಾಂತ್ ಬರೆಯುತ್ತಾರೆ: ಹೊಸ ಗಾನ ಬಜಾನಾ..

ಅವಸರ, ಗಡಿಬಿಡಿ, ಧಾವಂತದ ಮಧ್ಯೆಯೇ- ಹೊಸ ಗಾನ ಬಜಾನಾ…

ಹೊಸ ಗಾನ ಬಜಾನಾ… ಚಿತ್ರ: ರಾಮ್. ಗೀತೆರಚನೆ: ಯೋಗರಾಜಭಟ್ ಗಾಯನ: ಪುನೀತ್ ರಾಜಕುಮಾರ್, ಸಂಗೀತ: ವಿ. ಹರಿಕೃಷ್ಣ. ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ ನೀನು ತುಂಬ ನಿಧಾನ, ಸ್ಪೀಡಾಗಿದೆ ಜಮಾನಾ ನನ್ನ ಜತೆ ಜೋಪಾನ… ಹೊಸಾ ಗಾನ ಬಜಾನಾ ||ಪ|| ನಿಧಾನವೇ ಪ್ರಧಾನ, ಅದೇ ಸೇಫು ಪ್ರಯಾಣ ಹೇಳಿಕೊಂಡೇ ಸಾಗೋಣ… ಹಳೇ ಪ್ರೇಮ ಪುರಾಣ ಯಾಕೋ…ಹ..ಹಾ… ನಂಗೇ….ಹ…ಹಾ ತುಂಬಾ… ಹೊ…. ಹೋ… ಬೋರೂ… ಹಂಗಾ|? ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣಾ ಹೊಸಾ ಗಾನ ಬಜಾನಾ ||ಅ.ಪ|| ಗಾನಾ… ಸಿಂಗು… ಗಾನಾ… ಜಾನಿ ಜಾನಿ ಎಸ್ ಪಪ್ಪಾ, ಈಟಿಂಗ್ ಶುಗರ್ ನೋ ಪಪ್ಪಾ ಕನ್ನಡದಲ್ಲಿ ಹೇಳ್ಬೇಕಪ್ಪ… ಆ… ಅವಲಕ್ಕಿ ಪವಲಕ್ಕಿ ಡಾಮ್ ಡೂಂ ಟಸ್ಕು ಪುಸ್ಕು ಪ್ರೀತಿ ಗೀತಿ ಇರಲಿ ಸ್ವಲ್ಪ ಐ ಲವ್‌ಯೂ ಹೇಳ್ಬೇಕಪ್ಪ, ತುಂಬಾನೇ ಸುಸ್ತಾಗುತ್ತೆ ನೀನಂತೂ ಸಿಕ್ಕಾಪಟ್ಟೆ ಸೋಂಬೇರಿ ಆಗಿಬಿಟ್ಟೆ ದೂರ ಕುಳಿತು ನಡುವೆ ಗ್ಯಾಪು ಬಿಡೋಣಾ ||೧|| ಐಯಾಮ್ ಕ್ರೇಜಿ ಎಬೌಟ್ ಯೂ ಮುತ್ತು ಕೊಡೋ ಬೆಟ್ಟಿಂಗ್ ಕಟ್ಟಿ ಹೆಡ್ಡು ಪುಶ್ಶು ಆಡೋಣಾ ಬಾ ತುಂಬಾ ಕಾಸ್ಟ್‌ಲಿ ನನ್ನ ಮುತ್ತು ಯಾವ್ದೋ ಒಂದು ಬೆಟ್ಟ ಹತ್ತಿ ಅಪ್ಪಿಕೊಂಡು ಕೂರೋಣ ಬಾ ನಂಗೆ ಬೇರೆ ಕೆಲಸಾ ಇತ್ತು ಈ ಹಾಡು ಹೇಳೋಕಿಂತಾ ಬೇರೊಂದು ಕೆಲ್ಸಬೇಕಾ ಸಾಕಾಯ್ತು ಥೈಯ್ಯಾಥಕ್ಕ, ಮಾತಾಡು ಕಷ್ಟ ಸುಖ ಫ್ಯೂಚರ್ರು ಪಾಪುಗೊಂದು ಹೆಸರು ಇಡೋಣ ||೨|| ಮುಂಗಾರು ಮಳೆ’ಯ ಮೂಲಕ ಮನೆಮನೆಯ ಮಾತಾದವರು, ಪ್ರತಿ ಮನದ ಕದ ತಟ್ಟಿದವರು ಯೋಗರಾಜ ಭಟ್. ಮಾತು ಮಾಣಿಕ್ಯ ಎಂಬ ಮಾತಲ್ಲಿ ಅವರಿಗೆ ಅಪಾರ ನಂಬಿಕೆ. ಈ ಕಾರಣಕ್ಕೇ ಇರಬೇಕು: ಅವರ ಎಲ್ಲ ಸಿನಿಮಾಗಳಲ್ಲೂ ಚಿನಕುರುಳಿ ಪಟಾಕಿಯಂಥ ಡೈಲಾಗುಗಳಿರು ತ್ತವೆ. ಒಂದೊಂದು ಸಂಭಾಷಣೆಯೂ ಎದೆಯಾಳದಿಂದ ಎದ್ದು ಬಂದಿರುತ್ತದೆ. ಅನಿಸಿದ್ದನ್ನು ಮುಲಾಜಿಲ್ಲದೆ ಹೇಳಿಬಿಡಬೇಕು ಎಂದು ಗಟ್ಟಿಯಾಗಿ ನಂಬಿರುವ ಯೋಗರಾಜ ಭಟ್, ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಹಾಗೇ ಮಾಡಿದ್ದಾರೆ. ತಮ್ಮ ಸಂಭಾಷಣೆಯ ಬಗ್ಗೆ- ಅದರ ಹಸಿ-ಬಿಸಿ ಶೈಲಿಯ ಬಗ್ಗೆ ಟೀಕೆ ಬಂದರೆ ಕತ್ತೆ ಬಾಲ, ಕುದುರೆ ಜುಟ್ಟು ಎಂದುಕೊಂಡೇ ಮಾತು ಹೊಸೆದಿದ್ದಾರೆ. ಆ ಮಾತುಗಳನ್ನು ಎಲ್ಲರಿಗೂ ತಲುಪಿಸಿದ್ದಾರೆ. ಈ ಸಾದಾ ಸೀದಾ ಕೆಲಸದಿಂದ ಒಂದಷ್ಟು ರೂಮರ್‌ಗಳು ಹುಟ್ಟಿ ಕೊಂಡಿವೆ. ಯೋಗ್ರಾಜ್ ಭಟ್ರು ಸಕತ್ ಸಿಡುಕ ಅಂತೆ. ತುಂಬಾ ಮೂಡಿ ಯಂತೆ. ಒಂದೊಂದ್ಸಲ ಸುಚಿತ್ರಾ ಫಿಲಂ ಸೊಸೈಟಿ ರಸ್ತೇಲಿ ಒಬ್ಬೊಬ್ರೇ ಮಾತಾಡಿಕೊಂಡು ಅಡ್ಡಾಡ್ತಾರಂತೆ. ಎಸ್.ಎಲ್.ವಿ. ಹೋಟೆಲಲ್ಲಿ ಆ ಗಜಿಬಿಜಿಯ ಮಧ್ಯೆಯೇ ಇಡ್ಲಿ ತಿಂದು ಹೋಗ್ತಾರಂತೆ. ಆಮೇಲೆ… ಒಂದು ಸಿನಿಮಾಕ್ಕೆ ಅವರ ಪಡೆಯೋ ಸಂಭಾವನೆ ಐವತ್ ಲಕ್ಷಕ್ಕೂ ಜಾಸ್ತಿಯಂತೆ…. ಮನುಷ್ಯ ಒಂಥರಾ ಅಂತೆ… ಹೀಗೆ ಏನೇನೋ ಮಾತುಗಳು. ಜನ ಹೀಗೆಲ್ಲ ಮಾತಾಡಿಕೊಂಡ ಸಂದರ್ಭದಲ್ಲೇ ಭಟ್ಟರು ಪದ್ಯ ಬರೆದಿದ್ದಾರೆ. ಅದರ ಹಿಂದೆಯೇ ಸಿನಿಮಾಗಳಿಗೆ ಹಾಡು ಬರೆದಿದ್ದಾರೆ; ಬರೆಯುತ್ತಿದ್ದಾರೆ. ಈ ‘ಅವತಾರಗಳನ್ನೆಲ್ಲ ಜನ ಕುತೂಹಲದಿಂದ ನೋಡುತ್ತಿರುವಾಗಲೇ’ ‘ಲೈಫು ಇಷ್ಟೇನೆ’ ಎಂದು ಘೋಷಿಸಿಬಿಟ್ಟಿದ್ದಾರೆ! ಇಂತಿಪ್ಪ ಯೋಗರಾಜಭಟ್ಟರು ತೀರಾ ಆಕಸ್ಮಿಕವಾಗಿ ‘ರಾಮ್’ ಚಿತ್ರಕ್ಕೆ ‘ಹೊಸ ಗಾನ ಬಜಾನಾ’ ಎಂಬ ಹಾಡು ಬರೆದರು. ಆ ಸಮಯ- ಸಂದರ್ಭ ಸೃಷ್ಟಿಯಾದದ್ದು ಹೇಗೆ ಎಂಬುದನ್ನು ಭಟ್ಟರ ಮಾತುಗಳಲ್ಲೇ ಕೇಳೋಣ ಬನ್ನಿ: *** ‘ಹೊಸ ಸಿನಿಮಾವೊಂದರ ಕುರಿತು ಪರಭಾಷಾ ನಿರ್ಮಾಪಕರೊಂದಿಗೆ ಚರ್ಚಿಸು ವುದಿತ್ತು. ಈ ಕೆಲಸಕ್ಕೆಂದೇ ಸಂಗೀತ ನಿರ್ದೇಶಕ ಹರಿಕೃಷ್ಣ ಅವರೊಂದಿಗೆ ವಿಜಯನಗರದ ಅಶ್ವಿನಿ ಸ್ಟುಡಿಯೋಗೆ ಹೋದೆ. ಆ ಸಂದರ್ಭದಲ್ಲಿಯೇ ನಾನು ‘ಮನಸಾರೆ’ ಚಿತ್ರದ ಹಾಡುಗಳನ್ನು ಹರಿಕೃಷ್ಣ ಅವರಿಗೆ ಕೇಳಿಸಿದೆ. ಅವರು, ರಾಮ್ ಚಿತ್ರದ ಹಾಡುಗಳನ್ನು ನನಗೆ ಕೇಳಿಸಿದರು, ಹಾಡುಗಳು ಬರುವ ಸಂದರ್ಭವನ್ನೂ ಹೇಳಿದರು. ಅದರಲ್ಲಿ ನಾಯಕ-ನಾಯಕಿ-ಸುಮ್ನೇ ತಮಾಷೆಯಾಗಿ ಹಾಡಿಕೊಳ್ಳುವ ಒಂದು ಹಾಡೂ ಇತ್ತು. ಯಾಕೋ ಆ ಹಾಡಲ್ಲಿ ಜೋಷ್ ಇಲ್ಲ ಅನ್ನಿಸ್ತು. ಅದನ್ನೇ ಹರಿಕೃಷ್ಣ ಅವರಿಗೆ ಹೇಳಿದೆ. ‘ಜಂಗ್ಲಿ’ ಚಿತ್ರದ ನಂತರ ಪ್ರೇಕ್ಷಕರು ಸ್ಪೀಡ್ ಹಾಡುಗಳ ನಿರೀಕ್ಷೆಯಲ್ಲಿದ್ದಾರೆ. ನೀವು ಈ ಹಾಡಿನ ಬದಲಿಗೆ ಅದೇ ಥರದ ಒಂದು ಹಾಡು ಹಾಕಿದ್ರೆ ಚೆಂದ ಎಂಬ ಸಲಹೆಯನ್ನೂ ಕೊಟ್ಟೆ! ಆಗ ಹರಿಕೃಷ್ಣ ಅವರು ಅಡ್ಡಡ್ಡ ಕತ್ತು ಒಗೆದು-‘ಹಾಗೆ ಮಾಡೋಕೆ ಆಗಲ್ಲ ಸಾರ್. ಯಾಕಂದ್ರೆ ಈ ಹಾಡಿನ ಶೂಟಿಂಗ್‌ಗೆಂದು ಚಿತ್ರತಂಡ ಈಗಾಗಲೇ ಸ್ವೀಡನ್‌ಗೆ ಹೋಗಿಬಿಟ್ಟಿದೆ. ನಾಳೆ ಬೆಳಗ್ಗೆ ಅಲ್ಲಿ ಚಿತ್ರೀಕರಣ ಶುರುವಾಗ್ತಿದೆ’. ಈಗಾಗಲೇ ಚೆನ್ನೈನಲ್ಲಿ ಹಾಡಿನ ರೆಕಾರ್ಡಿಂಗ್ ಕೂಡ ನಡೀತಿದೆ’ ಅಂದರು. ‘ಸರಿ ಹಾಗಾದ್ರೆ. ಹೋಗ್ಲಿ ಬಿಡಿ’ ಎಂದು ನಾನೂ ಮನೆಗೆ ಬಂದೆ. ಅವತ್ತೇ, ಸಂಜೆ ಏಳು ಗಂಟೆಗೆ ಹರಿಕೃಷ್ಣ ಫೋನ್ ಮಾಡಿದರು: ‘ಏನ್ಸಾರ್?’ ಎಂದೆ. ‘ಬೆಳಗ್ಗೆ ನಿಮ್ಮ ಮಾತು ಕೇಳಿದಾಗಿಂದ ನನಗೂ ತಲೇಲಿ ಹುಳ ಬಿಟ್ಟಂತೆ ಆಗಿದೆ. ಈಗ ಒಂದು ಕೆಲ್ಸ ಮಾಡೋಣ. ರಾತ್ರಿ ೧೦ ಗಂಟೆ ಹೊತ್ತಿಗೆ ಅಶ್ವಿನಿ ಸ್ಟುಡಿಯೋಗೆ ಬನ್ನಿ. ಅಲ್ಲಿ ನಿಮ್ಗೆ ಟ್ಯೂನ್ ಕೇಳಿಸ್ತೇನೆ. ಅದಕ್ಕೆ ಹೊಂದು ವಂತೆ ನೀವೇ ಹಾಡು ಬರೆದುಬಿಡಿ’ ಎಂದರು. ಇದೊಳ್ಳೆ ಫಜೀತಿ ಆಯ್ತಲ್ಲ, ಸುಮ್ನೇ ಒಂದು ಸಲಹೆ ಕೊಟ್ರೆ ನೀವೇ ಹಾಡು ಬರೀರಿ ಅಂತಿದಾರಲ್ಲ ಅಂದುಕೊಂಡೆ. ನಂತರ ‘ಈಗಾಗ್ಲೇ ರಾತ್ರಿ ಆಗಿದೆ. ನಾಳೆ ಹಾಡಿನ ಚಿತ್ರೀಕರಣ ಶುರುವಾಗುತ್ತೆ ಅಂತ ಬೇರೆ ಹೇಳಿದ್ದೀರಿ. ಹೀಗಿರುವಾಗ ಹೇಗೆ ಸಾರ್ ಹಾಡು ಬರೆಯೋದು?’ ಅಂದೆ.’ ತಂಡಕ್ಕೆ ಈಗಾಗಲೇ ಇ-ಮೇಲ್ ಮೂಲಕ ವಿಷಯ ತಿಳಿಸಿದ್ದೀನಿ. ಸ್ವೀಡನ್, ಭಾರತಕ್ಕಿಂತ ಆರು ಗಂಟೆ ಹಿಂದಿರುತ್ತೆ. ಹಾಗಾಗಿ ನಮಗೆ ಟೈಂ ಇದೆ. ನೀವು ಹತ್ತು ಗಂಟೆಗೆ ಅಶ್ವಿನಿ ಸ್ಟುಡಿಯೋಗೆ ಬನ್ನಿ. ಅಲ್ಲಿ ಟ್ಯೂನ್ ಕೇಳಿಸ್ತೇನೆ. ನೀವು ಬೆಳಗ್ಗೆ ಎಂಟೂವರೆ ಹೊತ್ತಿಗೆ ಹಾಡು ಕೊಟ್ರೂ ಸಾಕು’ ಅಂದರು ಹರಿಕೃಷ್ಣ. ನಾನು ಸ್ಟುಡಿಯೋ ತಲುಪುವ ವೇಳೆಗೆ ಟ್ಯೂನ್ ಸಿದ್ಧವಾಗಿತ್ತು. ಇಬ್ಬರು ಟ್ರ್ಯಾಕ್ ಸಿಂಗರ್‌ಗಳಿಂದ ಅದನ್ನು ಲಲಲಾಲ, ಲಲಲ, ಲಾಲಲಾ…. ಧಾಟಿಯಲ್ಲಿ ಹಾಡಿಸ್ತಿದ್ರು ಹರಿಕೃಷ್ಣ. ನಂತರ ಆ ಧ್ವನಿಯನ್ನು ರೆಕಾರ್ಡ್ ಮಾಡಿ, ಒಂದು ಸಿ.ಡಿ.ಗೆ ಹಾಕಿ ಕೊಟ್ರು. ಬೆಳಗ್ಗೆ ಹೊತ್ತಿಗೆ ಹಾಡು ಕೊಡಿ ಸಾರ್. ಅದನ್ನು ಟ್ರ್ಯಾಕ್‌ನಲ್ಲಿ ಹಾಡಿಸಿ, ಸ್ವೀಡನ್‌ಗೆ ಮೇಲ್ ಮಾಡ್ತೇನೆ’ ಅಂದರು. ಸ್ಟುಡಿಯೊದಿಂದ ಹೊರಬಂದ ತಕ್ಷಣ, ಟೆನ್ಷನ್ ಶುರುವಾಯ್ತು. ನಾನು ಏನೂ ಹೇಳದೆ ಇದ್ದಿದ್ರೇ ಚೆನ್ನಾಗಿರ್‍ತಿತ್ತು ಅಂದುಕೊಂಡೆ. ಆದರೆ, ಈಗ ಯೋಚಿಸಿ ಪ್ರಯೋಜನವಿರಲಿಲ್ಲ. ಅಲ್ಲಿಂದ ಸೀದಾ ಗೆಳೆಯ ದುನಿಯಾ ಸೂರಿಯ ಮನೆಗೆ ಹೊರಟೆ. ಸೂರಿ, ಆಗಷ್ಟೇ ಒಂದು ಹೊಸ ಟೇಬಲ್ ತಗೊಂಡಿದ್ದ. ಅದು ಎಷ್ಟೊಂದು ಚೆನ್ನಾಗಿತ್ತು ಅಂದರೆ- ಅದನ್ನು ನೋಡಿದಾಗೆಲ್ಲ ಇಲ್ಲಿ ಕೂತು ಏನಾದ್ರೂ ಬರೀಬೇಕು ಎಂಬ ಆಸೆ ಹುಟ್ಟುತ್ತಿತ್ತು. ನೋಡೋಣ, ಇಲ್ಲಾದರೂ ಹಾಡಿನ ಸಾಲುಗಳು ಹೊಳೆದ್ರೆ ಸಾಕು ಎಂದುಕೊಂಡು ಆ ಟೇಬಲ್ ಮುಂದೆ ಕೂತೆ. ಏನೇ ತಿಪ್ಪರಲಾಗ ಹಾಕಿದ್ರೂ ಒಂದು ಸಾಲೂ ಹೊಳೆಯಲಿಲ್ಲ. ಬೇಜಾರಾಯ್ತು. ಸೀದಾ ಮನೆಗೆ ಬಂದೆ. ನನ್ನ ಆಗಮನಕ್ಕೇ ಕಾಯುತ್ತಿದ್ದ ಹೆಂಡತಿ-‘ಮರೆತು ಬಿಟ್ಟಿದೀರಾ? ನಾಳೆ ನಿಮ್ಮ ಮಾವನವರ ತಿಥಿ ಇದೆ; ಬೆಳಗ್ಗೆ ಆ ಕೆಲಸಕ್ಕೆ ಹೋಗಲೇಬೇಕು. ಹಾಗಾಗಿ ನಿಮ್ಮ ಸಿನಿಮಾದ ಕೆಲಸಗಳಿಗೆ ನಾಳೆ ರಜೆ ಕೊಡಿ’ ಎಂದಳು. ಮಾವನವರ ತಿಥಿ ಕಾರ್ಯವನ್ನು ಮಿಸ್ ಮಾಡುವಂತಿರಲಿಲ್ಲ. ಈ ಕಡೆ ಹಾಡು ಬರೆಯುವುದರಿಂದ ತಪ್ಪಿಸಿಕೊಳ್ಳುವಂತೆಯೂ ಇರಲಿಲ್ಲ. ಇರಲಿ, ಬೆಳಗ್ಗೆ ಬೇಗ ಎದ್ದು ಬರೆದು ಬಿಡೋಣ ಅಂದುಕೊಂಡೇ ಮಲಗಿದೆ. ರಾತ್ರಿಯಿಡೀ ಹಾಡು, ಹಾಡು, ಹಾಡು ಎಂದು ಗುನುಗಿಕೊಂಡೆ. ಪರಿಣಾಮ, ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಏನು ಬರೆಯೋದು, ಹೇಗೆ ಶುರು ಮಾಡೋದು ಎಂದು ಯೋಚಿಸಿದೆ. ಆಗಲೇ -ಹಿಂದಿನ ದಿನ ಅಶ್ವಿನಿ ಸ್ಟುಡಿಯೋದಲ್ಲಿ ಟ್ರ್ಯಾಕ್ ಸಿಂಗರ್ ಒಬ್ಬನಿಂದ ‘ಐಯಾಮ್ ಕ್ರೇಜಿ ಎಬೌಟ್ ಯೂ’ ಎಂದು ಹರಿಕೃಷ್ಣ ಹಾಡಿಸಿದ್ದು ನೆನಪಾಯಿತು. ಹೇಳಿ ಕೇಳಿ ಅದು ಇಂಗ್ಲಿಷ್ ಸಾಲು. ಇಂಗ್ಲಿಷ್ ಬೇಡ. ಈ ಹಾಡು ಕನ್ನಡದ ಸಾಲಿನಿಂದಲೇ ಶುರುವಾಗಲಿ ಅಂದುಕೊಂಡೆ ನಿಜ. ಆದರೆ, ಒಂದೇ ಒಂದು ಪದವೂ ಹೊಳೆಯುತ್ತಿಲ್ಲ. ಆಗ ನನ್ನಷ್ಟಕ್ಕೆ ನಾನೇ-‘ ಹೊಸ ಹಾಡಿಗೆ ಯಾವ ಸಾಲು? ಹೊಸ ಹಾಡು, ಹೊಸ ಸಾಲು ಹೊಸರಾಗ… ಎಂದೆಲ್ಲ ಬಡಬಡಿಸಿದೆ. ಆಗಲೇ ತಲೆಯೊಳಗೆ ಟ್ಯೂಬ್ ಲೈಟ್ ಝಗ್ ಎಂದಿರಬೇಕು. ಇದ್ದಕ್ಕಿ ದ್ದಂತೆ-‘ಹೊಸ ಗಾನ ಬಜಾನಾ’ ಎಂಬ ಸಾಲು, ಹೊಳೆಯಿತು. ತಕ್ಷಣ ಅದನ್ನು ಬರೆದಿಟ್ಟುಕೊಂಡೆ. ಇದನ್ನೇ ಮೊದಲ ಸಾಲಾಗಿಸಬೇಕು ಅಂದುಕೊಂಡೆ. ಈ ಹಾಡು ಬರೆಯೋಕೆ ತುಂಬಾ ಸಮಯ ಹಿಡಿಯಿತಲ್ಲ? ಅದನ್ನೇ ನೆಪವಾಗಿಟ್ಟುಕೊಂಡು, ನನ್ನನ್ನು ನಾನೇ ಗೇಲಿ ಮಾಡಿಕೊಂಡು-‘ನೀನು ತುಂಬ ನಿಧಾನ, ಸ್ಪೀಡಾಗಿದೆ ಜಮಾನಾ’ ಎಂದು ಬರೆದೆ. ಇದೇ ಸಂದರ್ಭದಲ್ಲಿ, ಹಿಂದಿನ ದಿನವಷ್ಟೆ ಒಂದು ವಾಹನದ ಹಿಂದೆ ನೋಡಿದ್ದ -‘ನಿಧಾನವೇ ಪ್ರಧಾನ’ ಎಂಬ ಸಾಲು ನೆನಪಾಯ್ತು. ಅದನ್ನೂ ಜತೆಗಿಟ್ಟುಕೊಂಡೆ. ನಂತರ, ಹರಯದ ಜೋಡಿಗಳು ಗುನುಗುವ ಒಂದೊಂದೇ ಹೊಸ ಪದಗಳನ್ನು ನೆನಪಿಸಿಕೊಂಡೆ. ನಂತರದ ಕೆಲವೇ ನಿಮಿಷಗಳಲ್ಲಿ ಇಡೀ ಹಾಡು ಸಿದ್ಧವಾಗಿ ಹೋಯ್ತು. ಗಡಿಯಾರ ನೋಡಿಕೊಂಡೆ: ಬೆಳಗ್ಗೆ ಎಂಟೂವರೆ. ತಕ್ಷಣವೇ ಹರಿಕೃಷ್ಣ ಅವರಿಗೆ ಫೋನ್ ಮಾಡಿದೆ. ಅವರು ಆಗಲೇ ಚೆನ್ನೈನಲ್ಲಿ, ಮ್ಯೂಸಿಕ್ ರೆಕಾರ್ಡಿಂಗ್‌ನ ಸಿದ್ಧತೆಯಲ್ಲಿದ್ದರು. ಹಾಡಿನ ಸಾಲುಗಳನ್ನು ಫೋನ್‌ನಲ್ಲಿಯೇ ಹೇಳಿದೆ. ತಕ್ಷಣವೇ ಟ್ರಾಕ್ ಹಾಡು ಹಾಗೂ ಮ್ಯೂಸಿಕ್ ಟ್ರ್ಯಾಕ್ ಸಿದ್ಧಪಡಿಸಿ, ಅದನ್ನು ಸ್ವೀಡನ್‌ನಲ್ಲಿದ್ದ ಚಿತ್ರತಂಡಕ್ಕೆ ಮೇಲ್ ಮೂಲಕ ಕಳಿಸಿಬಿಟ್ಟರು ಹರಿಕೃಷ್ಣ. ಒಂದು ಬಾರಿ ತಿದ್ದುವುದಕ್ಕೂ ಅವಕಾಶವಿಲ್ಲದಂತೆ ಬರೆದ ಹಾಡದು. ಹಾಗಾಗಿ ಚೆನ್ನಾಗಿರಲಿಕ್ಕಿಲ್ಲ ಎಂಬ ಅಂದಾಜು ನನ್ನದಿತ್ತು. ಹಾಗಾಗಿ, ಈ ಬಗ್ಗೆ ವಿಚಾರಿಸುವುದನ್ನೇ ಮರೆತೆ. ಆದರೆ, ಕೆಲ ದಿನಗಳ ನಂತರ ಫೋನ್ ಮಾಡಿದ ಹರಿಕೃಷ್ಣ, ಆಡಿಯೋ ಸಿ.ಡಿ. ಬಿಡುಗಡೆಯಾಗಿದೆ ಸಾರ್ ಅಂದರು. ಹಿಂಜರಿಕೆಯಿಂದಲೇ ಸಿ.ಡಿ. ಖರೀದಿಸಿ ಕೇಳಿದೆ. ತಕ್ಷಣಕ್ಕೇ ಇಷ್ಟವಾಯಿತು. ಮುಂದೆ ಅದೇ ಹಾಡು ಹಿಟ್ ಆದಾಗ ಗಡಿಬಿಡಿಯ ಮಧ್ಯೆ, ಟೆನ್ಷನ್‌ನ ಮಧ್ಯೆ, ತುಂಬ ಅವಸರದ ಮಧ್ಯೆ ಅಂಥದೊಂದು ಹಾಡು ಬರೆದದ್ದಕ್ಕೆ ಸ್ವಲ್ಪ ಜಾಸ್ತಿಯೇ ಖುಷಿಯಾಯಿತು…. ಇಷ್ಟು ಹೇಳಿ ಮಾತು ನಿಲ್ಲಿಸಿದ ಯೋಗರಾಜ ಭಟ್. ನಂತರ ಫಾರ್ ಎ ಛೇಂಜ್ ಎಂಬಂತೆ ನಸುನಕ್ಕು ಹೇಳಿದರು: ಮಾತು ಇಷ್ಟೇನೆ…
 ]]>

‍ಲೇಖಕರು avadhi

October 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This