ಮಣಿಕಾಂತ್ ಬರೆಯುತ್ತಾರೆ: 3 ಮಕ್ಕಳನ್ನು ಕಳೆದುಕೊಂಡವರು 30 ಮಕ್ಕಳ ಪೋಷಕರಾದರು!

ಎ.ಆರ್. ಮಣಿಕಾಂತ್

ಈ ದಂಪತಿಯ ಹೆಸರು ಕೆ. ಪರಮೇಶ್ವರನ್-ಚೂಡಾಮಣಿ. ತಮಿಳ್ನಾಡಿನ ನಾಗಪಟ್ಟಣಂನಲ್ಲಿ ವಾಸವಿರುವ ಇವರು, 2004ರ ಸುನಾಮಿ ದುರಂತದಲ್ಲಿ ತಮ್ಮ ಮೂರೂ ಮಕ್ಕಳು ಹಾಗೂ ಏಳು ಬಂಧುಗಳನ್ನು ಕಳೆದುಕೊಂಡರು. ನಂತರ ಅದೇ ಸುನಾಮಿ ದುರಂತದಲ್ಲಿ ಅನಾಥರಾದ 30 ಮಕ್ಕಳನ್ನು ಕರೆತಂದು, ಅವರನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿದರು/ಸಾಕುತ್ತಿದ್ದಾರೆ. ಇದನ್ನು ಗಮನಿಸಿದ ಸಿಎನ್್ಎನ್-ಐಬಿಎನ್ ಚಾನೆಲ್, 2012ರ ಸಾಲಿನ ರಿಯಲ್ ಹೀರೋಸ್ ಪ್ರಶಸ್ತಿ ನೀಡಿ ಈ ದಂಪತಿಯನ್ನು ಗೌರವಿಸಿದೆ.
ಇಂಟರ್್ನೆಟ್್ನಲ್ಲಿ ಹೀಗೊಂದು ಸುದ್ದಿ ಕಾಣಿಸಿದಾಗ ಕಣ್ತುಂಬಿ ಬಂತು. ಕರುಳು ತಾಕುವಂಥ ಮಹತ್ಕಾರ್ಯ ಮಾಡಿದ್ದಕ್ಕೆ, ಪರಮೇಶ್ವರನ್-ಚೂಡಾಮಣಿ ದಂಪತಿಗೆ ಅಭಿನಂದನೆ ಹೇಳಬೇಕು ಅನ್ನಿಸಿತು. ಇಂಟರ್್ನೆಟ್ ನೆರವಿನಿಂದಲೇ ಫೋನ್ ನಂಬರ್ ಪತ್ತೆಹಚ್ಚಿ- ‘ಹಲೋ ಸರ್, ನಮಸ್ತೇ. ಐ ಯಾಮ್ ಫ್ರಂ ಬ್ಯಾಂಗಳೂರ್್’ ಅನ್ನುತ್ತಿದ್ದಂತೆಯೇ ಆ ತುದಿಯಲ್ಲಿದ್ದ ಪರಮೇಶ್ವರನ್ ಹೇಳಿದರು: ‘ಬೆಂಗ್ಳೂರಿಂದಾನಾ, ಗ್ರೇಟ್. ನಮ್ಮ ಮಾತೃಭಾಷೆ ಕನ್ನಡ. ಆದ್ರೆ ನಾವು ಸೆಟಲ್ ಆಗಿರೋದು ನಾಗಪಟ್ಟಣಂನಲ್ಲಿ. ಈಗ, ಕನ್ನಡದಲ್ಲೇ ಮಾತು ಮುಂದುವರಿಸೋಣ’
ಎರಡೇ ನಿಮಿಷದಲ್ಲಿ ಉಭಯ ಕುಶಲೋಪರಿಯ ಮಾತು ಮುಗಿಯಿತು. ನಂತರ, ತಮ್ಮ ಬದುಕಿನ ಕಥೆ ಹೇಳಲು ಶುರುವಿಟ್ಟರು ಪರಮೇಶ್ವರನ್.
***************************
ನಾಗಪಟ್ಟಣಂನಲ್ಲಿರುವ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಕಂಪನಿಯಲ್ಲಿ ನಾನು ಎಕ್ಸಿಕ್ಯೂಟಿವ್ ಎಂಜಿನಿಯರ್. ನನ್ನ ಪತ್ನಿ ಚೂಡಾಮಣಿ, ಎಲ್್ಐಸಿಯಲ್ಲಿ ಆಡಳಿತಾಧಿಕಾರಿ. 1991ರಲ್ಲಿ ನಮ್ಮ ಮದುವೆ ಆಯ್ತು. ಅವತ್ತಿಂದ ನಾಗಪಟ್ಟಣಂನಲ್ಲೇ ಸೆಟಲ್ ಆದ್ವಿ. ಸಮುದ್ರದಿಂದ ಬರೀ ಅರ್ಧ ಕಿಲೋಮೀಟರ್್ನಷ್ಟು ದೂರದಲ್ಲಿ ನಮ್ಮ ಮನೆಯಿತ್ತು. 2004ರ ಸಂದರ್ಭದಲ್ಲಿ ನಮಗೆ 12 ಹಾಗೂ 9 ವರ್ಷದ ರಕ್ಷಣ್ಯ, ಕಾರುಣ್ಯ ಎಂಬ ಹೆಣ್ಣುಮಕ್ಕಳೂ, ಕಿರುಬಾಸನ್ ಎಂಬ ಐದು ವರ್ಷದ ಮಗನೂ ಇದ್ದರು. ಅನುಮಾನವೇ ಬೇಡ; ನಮ್ಮ ಸಂಸಾರ ಆನಂದ ಸಾಗರದಂತೆಯೇ ಇತ್ತು.

ಆ ಕರಾಳ ದಿನದ ನೆನಪು, ಕಣ್ಣಿಗೆ ಕಟ್ಟಿದಂತಿದೆ. ಅವತ್ತು 2004ರ ಡಿಸೆಂಬರ್ 26. ಭಾನುವಾರ. ವಿಶೇಷವೆಂದರೆ ಅದು ನನ್ನ ಹುಟ್ಟುಹಬ್ಬದ ದಿನ. ಕ್ರಿಸ್್ಮಸ್ ರಜೆ ಇತ್ತಲ್ಲ; ಅದೇ ಕಾರಣಕ್ಕೆ ಹೆಂಡತಿಯ ಬಂಧುಗಳೂ ಕರ್ನಾಟಕದ ತರೀಕೆರೆಯಿಂದ ಬಂದಿದ್ದರು. ಅದುವರೆಗೂ ಸಮುದ್ರವನ್ನೇ ನೋಡಿಲ್ಲದ ಅವರಿಗೆ, ಮನೆಗೆ ತುಂಬ ಹತ್ತಿರವೇ ಇದ್ದ ಸಮುದ್ರವನ್ನು ಕಂಡು ಖುಷಿಯಾಗಿತ್ತು. ರೋಮಾಂಚನವಾಗಿತ್ತು. ಹಿಂದಿನ ದಿನ ರಾತ್ರಿ, ತುಂಬ ಹೊತ್ತು ಮಾತಾಡುತ್ತ ಕಳೆದಿದ್ದರಿಂದ ಆರು ಗಂಟೆಯಾದರೂ ನಾನು ಮಲಗೇ ಇದ್ದೆ. ಅದೇ ವೇಳೆಗೆ ಅಲ್ಲಿಗೆ ಬಂದ ನನ್ನ ಮಗ ಕಿರುಬಾಸನ್, ಡ್ಯಾಡೀ ಎಂದು ಕರೆದ. ನಾನು ಕಣ್ತೆರೆದ ತಕ್ಷಣ- ‘ಹ್ಯಾಪಿ ಬರ್ತ್ ಡೇ ಟು ಯೂ’ ಎಂದೆನ್ನುತ್ತಾ ಕೊರಳಿಗೆ ಜೋತುಬಿದ್ದ. ಹತ್ತು ನಿಮಿಷದ ನಂತರ ಕಾಫಿಯೊಂದಿಗೆ ಬಂದ ದೊಡ್ಡ ಮಗಳು- ‘ಡ್ಯಾಡೀ, ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ’ ಅಂದಳು. ಅದೇ ವೇಳೆಗೆ, ಹೊಸ ಬಟ್ಟೆಯ ಗಿಫ್ಟ್್ನೊಂದಿಗೆ ಬಂದ ಎರಡನೇ ಮಗಳು- ಹ್ಯಾಪಿ ಬರ್ತ್್ಡೇ ಟು ಯೂ’ ಎಂದು 3 ಬಾರಿ ರಾಗವಾಗಿ ಹೇಳಿದಳು.
ಮಕ್ಕಳ ಈ ಸಡಗರ ಕಂಡು, ನನಗೆ 40 ವರ್ಷ ಆಗಿದೆ ಎಂಬುದೇ ಮರೆತುಹೋಯಿತು. ಬೀಚ್್ಗೆ ಹೋಗಿ ಆಟ ಆಡಿ ಬರೋಣ್ವಾ ಅಂದೆ. ಮಕ್ಕಳು, ಎರಡೇ ನಿಮಿಷದಲ್ಲಿ ತಯಾರಾದರು. ಬಂಧುಗಳೂ ಹೊರಟುನಿಂತರು. ತಿಂಡಿ ಮಾಡುವ ಗಡಿಬಿಡಿಯಲ್ಲಿದ್ದ ಹೆಂಡತಿಗೆ ಹೇಳಿ ಹೋದ್ವಿ. ಆ ವಿಶಾಲ ಸಮುದ್ರ, ಉಪ್ಪುಪ್ಪು ನೀರು, ಹಾಲ್ನೊರೆಯಂಥ ಅಲೆಗಳನ್ನು ನೋಡಿ ಬಂಧುಗಳು ಮೈಮರೆತರು. ಮಕ್ಕಳು, ಪ್ಲೇಟ್ ಕ್ಯಾಚ್ ಹಿಡಿಯುವ ಆಟಕ್ಕೆ ನಿಂತರು. ಆ ಹೊತ್ತಿನಲ್ಲಿ, ನಮ್ಮಂಥ ಸಾವಿರಾರು ಮಂದಿ ಅಲ್ಲಿ ಆಟದಲ್ಲಿ ಮೈಮರೆತಿದ್ದರು.
ಹೀಗೇ ಅರ್ಧ ಗಂಟೆ ಕಳೆದಿತ್ತು. ಆಗಲೇ, ಭಾರೀ ಸದ್ದು ಕೇಳಿಸಿತು. ಗಾಬರಿಯಿಂದ ಏನಿದು ಎಂದು ನೋಡಿದರೆ, ರಾಕ್ಷಸ ಅಲೆಗಳು ನುಗ್ಗಿ ಬರುತ್ತಿದ್ದವು. ಆ ಸದ್ದಿಗೆ ಬೆದರಿದ ನನ್ನ ಮಗ, ಡ್ಯಾಡೀ ಎಂದು ಚೀರುತ್ತಾ ಬಂದು ಕೈಹಿಡಿದುಕೊಂಡ. ಉಳಿದ ಮಕ್ಕಳು, ಬಂಧುಗಳು ಎಲ್ಲಿದ್ದಾರೆ ಎಂದು ನೋಡಲು ಅತ್ತ ತಿರುಗಿದೆ. ಅಷ್ಟೇ; ನುಗ್ಗಿಬಂದ ಅಲೆಯೊಂದು ಎತ್ತಿ ಎಸೆಯಿತು. ಸುತ್ತಮುತ್ತ ಇದ್ದವರೆಲ್ಲ ಚೀರಾಡುತ್ತಿರುವುದು ಅಸ್ಪಷ್ಟವಾಗಿ ಕಾಣಿಸಿತು.
ಕಣ್ತೆರೆದಾಗ, ಸುನಾಮಿಯ ರುದ್ರನರ್ತನ ಮುಗಿದಿತ್ತು. ಕಡಲ ನೀರು ಬಣ್ಣಗೆಟ್ಟಿತ್ತು. ಆಗಲೇ, ನಂಬಲಾಗದ ಸತ್ಯವೊಂದು ಕಾಣಿಸಿತು. ಸುನಾಮಿ ಅಪ್ಪಳಿಸಿದಾಗ, ಅದು ಹೇಗೋ ತಾಳೆಮರದ ರೆಂಬೆಯೊಂದನ್ನು ಹಿಡಿದುಕೊಂಡ ನಾನು ಬದುಕುಳಿದಿದ್ದೆ. ನನ್ನ ಮೂವರು ಮಕ್ಕಳು, ಏಳುಜನ ಬಂಧುಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಸತ್ತುಹೋಗಿದ್ದರು. ಈ ಆಘಾತದಿಂದ ತತ್ತರಿಸಿಹೋದ ನನ್ನ ಹೆಂಡತಿ ಶಾಕ್್ಗೆ ಒಳಗಾದಳು. ಪೂರ್ತಿ ಎರಡು ದಿನ ಮಾತಿಲ್ಲದೆ ಒಂದೇ ಜಾಗದಲ್ಲಿ ಕೂತುಬಿಟ್ಟಿದ್ದಳು. ಆ ಸಂದರ್ಭದಲ್ಲಿ ನಾನು ಸಂಕಟದಿಂದ ಗೋಳಾಡಿದೆ. ಹಣೆ ಚಚ್ಚಿಕೊಂಡೆ. ದೇವರನ್ನು ಪ್ರಾರ್ಥಿಸಿದೆ. ಪೂಜಿಸಿದೆ. ಬೈದೆ. ಏನು ಮಾಡಿದರೂ, ಕಳೆದುಹೋದವರು ಮರಳಿ ಬರುವುದಿಲ್ಲ ಎಂಬುದು ಗ್ಯಾರಂಟಿಯಾದಾಗ, ಮೂರು ದಿನಗಳ ನಂತರ ಹೆಂಡತಿಯೊಂದಿಗೆ ಬೀಚ್್ಗೆ ಹೋದೆ. ಅಲ್ಲಿಗೆ, ನಮ್ಮಂತೆಯೇ ಸಾವಿರಾರು ಜನ ಬಂದಿದ್ದರು. ಎಲ್ಲರೂ ಮಕ್ಕಳು, ಬಂಧುಗಳನ್ನು ಕಳೆದುಕೊಂಡಿದ್ದವರೇ. ಯಾರಿಗೆ ಯಾರೂ ಸಮಾಧಾನ ಹೇಳುವ ಸ್ಥಿತಿಯಲ್ಲಿರಲಿಲ್ಲ. ತುಂಬ ಪ್ರಯಾಸದಿಂದಲೇ ಮಕ್ಕಳು ಹಾಗೂ ಬಂಧುಗಳ ಶವಗಳನ್ನು ಪತ್ತೆಹಚ್ಚಿದ್ದಾಯ್ತು. ಅದೇ ಬೀಚ್್ನಲ್ಲಿ ಗುಂಡಿ ತೋಡಿ ಮಣ್ಣು ಮಾಡಿದೆವು. ಅವತ್ತಿಗೆ ನಾವು ಇಬ್ಬರೂ ಭಾರೀ ಸಂಬಳದ ಹುದ್ದೆಯಲ್ಲಿದ್ದವರು. ಏನುಪಯೋಗ? ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಹೀಗೇ ಎರಡು ದಿನ ಕಳೆದಿರಲಿಲ್ಲ, ಆ ವೇಳೆಗೆ ಸ್ವಲ್ಪ ಚೇತರಿಸಿಕೊಂಡಿದ್ದ ಹೆಂಡತಿ ಹೇಳಿದಳು: ‘ಕಣ್ಮುಚ್ಚಿದರೆ ಸಾಕು, ಮಕ್ಕಳ ಚಿತ್ರವೇ ಕಾಣಿಸ್ತದೆ. ಕನಸಲ್ಲೂ ಅಷ್ಟೆ: ಮಕ್ಕಳು ಪದೇ ಪದೆ ಅಮ್ಮಾ ಎಂದು ಚೀರಿದಂತಾಗುತ್ತೆ. ಅವರು ಇರುವ ಜಾಗಕ್ಕೇ ನಾನೂ ಹೋಗಿಬಿಡ್ತೇನೆ. ಒಪ್ಪಿಗೆ ಕೊಡಿ ಪ್ಲೀಸ್…’ ನಿಜ ಹೇಳಬೇಕೆಂದರೆ, ಮಕ್ಕಳು ತೀರಿಹೋದ ಸುದ್ದಿ ಕೇಳಿದಾಗ ನಾನೇ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ. ಆದರೆ ಹೆಂಡತಿಯ ನೆನಪಾಗಿ ಸುಮ್ಮನಾಗಿದ್ದೆ. ಈಗ ಅವಳೇ ವಿಷಯ ಪ್ರಸ್ತಾಪಿಸಿದ್ದಳು. ಸರಿ, ಇಬ್ಬರೂ ಒಟ್ಟಿಗೇ ಸಾಯೋಣ ಅಂದೆ. ಅದಕ್ಕೂ ಮುಂಚೆ ನಾವು ಆಡಿ ಬೆಳೆದ ಪರಿಸರ, ನಮ್ಮ ಆಸೆ-ಕನಸುಗಳನ್ನೆಲ್ಲ ನುಂಗಿಹಾಕಿದ ಸಮುದ್ರತೀರದಲ್ಲಿ ಕಡೆಯಬಾರಿಗೆ ಒಮ್ಮೆ ಸುತ್ತಾಡಿ ಬರಬೇಕು ಅನ್ನಿಸಿ, ಹೆಂಡತಿಗೆ ಹೇಳಿದೆ: ‘ಇದು ನಮ್ಮ ಬದುಕಿನ ಕೊನೆ ದಿನ. ಕಡೆಯದಾಗಿ ಹೊರಗೆ ಹೋಗಿ ಬರೋಣ.’
ಅವತ್ತು ಸಂಜೆ ನಾಗಪಟ್ಟಣಂನ ಬೀದಿಗಳಲ್ಲಿ ನಾವು ಕಂಡದ್ದು ಘೋರ ದೃಶ್ಯ. ಮೀನುಗಾರರ ಮನೆಗಳ ಮುಂದೆ ಮಕ್ಕಳು ಅಳುತ್ತಾ ಕೂತಿದ್ದವು. ಅವರ ಪೋಷಕರನ್ನು ಸುನಾಮಿ ಬಲಿ ತೆಗೆದುಕೊಂಡಿತ್ತು. ಕೆಲವು ಮಕ್ಕಳಿಗೆ ಅಪ್ಪನೂ, ಕೆಲವಕ್ಕೆ ಅಮ್ಮನೂ ಇರಲಿಲ್ಲ. ಮತ್ತೆ ಕೆಲವರಿಗೆ ಇಬ್ಬರೂ ಇರಲಿಲ್ಲ. ಅವತ್ತೇ ರಾತ್ರಿ ನನ್ನ ಹೆಂಡತಿ ಹೇಳಿದಳು: ಸಂಜೆ ನೋಡಿದಿರಲ್ಲ; ಆ ಮಕ್ಕಳಿಗೆ ತಾಯ್ತಂದೆಯರಿಲ್ಲ. ನಮಗೋ ಮಕ್ಕಳಿಲ್ಲ. ಒಂದರ್ಥದಲ್ಲಿ ನಾವು ಸಮಾನ ದುಃಖಿಗಳು. ನಾನು, ಮಲತಾಯಿಯ ಕಾಟದ ಮಧ್ಯೆ ಬೆಳೆದವಳು. ತಬ್ಬಲಿಗಳ ಬದುಕು ಹೇಗಿರ್ತದೆ ಅಂತ ನನಗೆ ಚೆನ್ನಾಗಿ ಗೊತ್ತು. ನಾವಿಬ್ಬರೂ ಸತ್ತು ಸಾಧಿಸುವುದೇನಿದೆ? ಅದರ ಬದಲು 2 ಅನಾಥ ಮಕ್ಕಳನ್ನು ಸಾಕಿಕೊಂಡರೆ ಹೇಗೆ?
ಅವಳ ಮಾತಲ್ಲಿ ಸತ್ಯವಿದೆ ಅನ್ನಿಸಿತು. ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡರೂ ಆ ದೇವರು ನನ್ನನ್ನು ಉಳಿಸಿರುವುದು ಇಂಥ ಕೆಲಸಕ್ಕಾಗಿಯೇ ಇರಬೇಕು ಅನ್ನಿಸಿತು. ಮರುದಿನವೇ ಮೀನುಗಾರರ ಕುಟುಂಬಗಳಿದ್ದ ಕೇರಿಗೆ ಹೋದೆ. ನನ್ನ ಉದ್ದೇಶ ವಿವರಿಸಿ, ಇಬ್ಬರು ಅನಾಥ ಮಕ್ಕಳನ್ನು ಕೊಡಿ ಎಂದೆ. ಅಲ್ಲಿನ ಜನ, 4 ಮಕ್ಕಳನ್ನು ತಂದು ನಿಲ್ಲಿಸಿದರು. ಅವರನ್ನು ನೋಡುತ್ತಿದ್ದಂತೆಯೇ ನನ್ನ ಮಕ್ಕಳು- ‘ಡ್ಯಾಡೀ, ನಾವು ಇಲ್ಲೇ ಇದೀವಿ’ ಎಂದು ಚೀರಿದಂತಾಯ್ತು. ರಾತ್ರಿ ಕನಸಿಗೆ ಬಂದ ಮಕ್ಕಳು-‘ಆಗಿದ್ದು ಆಗಿಹೋಯ್ತು ಡ್ಯಾಡೀ. ನಮ್ಮ ಬಗ್ಗೆ ಚಿಂತೆ ಬೇಡ. ಈಗ ನೀವು ಮಾಡ್ತಿರೊ ಕೆಲಸದಿಂದ ನಮಗೆ ಖುಷಿಯಾಗಿದೆ’ ಎಂದು ಪಿಸುಗುಟ್ಟಿದಂತಾಯ್ತು.
ಮರುದಿನದಿಂದಲೇ ನಾಗಪಟ್ಟಣಂನ ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ಬಂದೆ. ಕೆಲವು ಕಡೆಗಳಲ್ಲಿ ನಿರಾಶ್ರಿತರ ಕೇಂದ್ರಗಳಿದ್ದವು. ಅಪ್ಪ-ಅಮ್ಮಂದಿರನ್ನು ಕಳೆದುಕೊಂಡು ಮಾತು ಮರೆತಿದ್ದ ಮಕ್ಕಳು ಅಲ್ಲಿಯೂ ಇದ್ದವು. ಇಂಥ ಸಂದರ್ಭದಲ್ಲಿ, ನಿರಾಶ್ರಿತರ ಶಿಬಿರಗಳ ಅಧಿಕಾರಿಗಳೊಂದಿಗೆ, ಮಕ್ಕಳ ಬಂಧುಗಳೊಂದಿಗೆ ಮಾತಾಡಿದೆ. ನನ್ನ ಬದುಕಿನ ಕಥೆ ಹೇಳಿಕೊಂಡೆ. ನನ್ನ ಮಕ್ಕಳಿಗಿಂತ ಹೆಚ್ಚು ಅಕ್ಕರೆಯಿಂದ ಇವರನ್ನು ಸಾಕುತ್ತೇನೆ. ಸಾಯುವವರೆಗೂ ಈ ಮಕ್ಕಳ ಜವಾಬ್ದಾರಿ ಹೊರುತ್ತೇನೆ. ಈ ಮಕ್ಕಳ ಊಟ, ವಸತಿ, ಶಿಕ್ಷಣ… ಹೀಗೆ ಎಲ್ಲ ಖರ್ಚೂ ನನಗಿರಲಿ. ಇವರನ್ನು ಕಳಿಸಿಕೊಡಿ ಎಂದೆ. ಜನ ಒಪ್ಪಿಕೊಂಡರು.
ಮಕ್ಕಳು, ಬಂಧುಗಳೆಲ್ಲ ಕೆಲವೇ ನಿಮಿಷಗಳಲ್ಲಿ ಕಣ್ಮುಂದೆಯೇ ಕೊಚ್ಚಿಹೋದರಲ್ಲ; ಆ ಕ್ಷಣದಲ್ಲೇ ಬದುಕಿನ ಬಗ್ಗೆ, ದೇವರ ಬಗ್ಗೆ, ಭವಿಷ್ಯದ ಬಗ್ಗೆ, ಕನಸುಗಳ ಬಗ್ಗೆ ನಂಬಿಕೆಯೇ ಹೊರಟುಹೋಗಿತ್ತು. ಇದಾಗಿ ಹತ್ತೇ ದಿನದಲ್ಲಿ ಅನಾಥ ಮಕ್ಕಳನ್ನು ಸಾಕಲು ನಿರ್ಧರಿಸಿದ್ದೆ. ಪರಿಣಾಮ, ಒಂದೊಂದೇ ಮಗು ನಮ್ಮ ಮನೆ ಸೇರಿಕೊಂಡಿತು. ಅನಾಥ ಮಕ್ಕಳಿಗೆ ಆಶ್ರಯ ನೀಡಲೆಂದೇ ‘ನಂಬಿಗೈ’ ಎಂಬ ಸಂಸ್ಥೆ ಆರಂಭಿಸಿದೆ. ಮನೆಯ ಹಿಂದಿದ್ದ ಖಾಲಿ ಜಾಗದಲ್ಲಿ ಹೊಸದೊಂದು ಮನೆ ಕಟ್ಟಿಸಿದೆ. ಈಗ ನಮ್ಮೊಂದಿಗೆ 30 ಮಕ್ಕಳಿದ್ದಾರೆ. (20 ಗಂಡು, 10 ಹೆಣ್ಣು ಮಕ್ಕಳು) ಆ ಪೈಕಿ ಐವರು ಎಂಜಿನಿಯರಿಂಗ್ ಓದುತ್ತಿದ್ದಾರೆ. ಇಬ್ಬರು ಬಿ.ಕಾಂ.ನಲ್ಲಿದ್ದಾರೆ. ಇವರ ಜೊತೆಗೆ ನಮಗೂ ಎರಡು ಮಕ್ಕಳಾಗಿವೆ. ಎಲ್ಲ ಮಕ್ಕಳೂ ನಮ್ಮನ್ನು ಡ್ಯಾಡಿ-ಮಮ್ಮಿ ಎಂದೇ ಕರೆಯುತ್ತವೆ. ಈ ಮಕ್ಕಳೆಲ್ಲ ಬಂದ ಮೇಲೆ ಆಘಾತದಿಂದ ನಾವು ಚೇತರಿಸಿಕೊಂಡಿದೀವಿ. ಆದ್ರೂ ಒಂದೊಂದು ಸಂದರ್ಭದಲ್ಲಿ ಕಣ್ಮರೆಯಾದ ಮಕ್ಕಳ ನೆನಪು ಬಿಟ್ಟೂಬಿಡದೆ ಕಾಡುತ್ತೆ. ರಾತ್ರಿಯ ವೇಳೆ ಸುಮ್ಮನೇ ವರಾಂಡಕ್ಕೆ ಬಂದು, ಎದುರಿಗಿರುವ ಸಾಗರವನ್ನೇ ದಿಟ್ಟಿಸಿದರೆ, ಅಲೆಯೊಂದರ ಮೇಲೆ ನಿಂತಿರುವ ಮಕ್ಕಳು- ‘ಡ್ಯಾಡೀ’ ಎಂದು ಕೂಗಿದ ಹಾಗಾಗುತ್ತೆ. ಅಂಥ ಸಂದರ್ಭದಲ್ಲೆಲ್ಲ ದುಃಖದ ಕೈಗೆ ಮನಸ್ಸು ಒಪ್ಪಿಸಿ ಕೂತುಬಿಡ್ತೀನಿ ಎಂದ ಪರಮೇಶ್ವರನ್ ಮುಂದುವರಿದು ಹೀಗೆಂದರು: ‘ನನ್ನ ಪ್ರತಿ ಕೆಲಸದ ಹಿಂದಿರುವ ಪ್ರೇರಕ ಶಕ್ತಿಯೆಂದರೆ ನನ್ನ ಪತ್ನಿ. ಆಕೆಯೊಂದಿಗೂ ನಾಲ್ಕು ಮಾತಾಡಿ…’
‘ಸಾರ್, ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನ ಅಲಸೂರು-ಮಾರತ್್ಹಳ್ಳೀಲಿ. ನಮ್ಮ ತಂದೆ ಎಚ್್ಎಎಲ್್ನಲ್ಲಿ ನೌಕರೀಲಿದ್ರು. ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಡಿಗ್ರಿ ಮುಗಿಸ್ದೆ. ಎಲ್್ಐಸಿಯಲ್ಲಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಆಗಿ ಕೆಲಸ ಸಿಕ್ತು. ರಾಣೆಬೆನ್ನೂರಲ್ಲಿ ಕೆಲಸ ಮಾಡಿದೆ. ಮದುವೆ ಆದಾಗ ನಾಗಪಟ್ಟಣಂಗೆ ಟ್ರಾನ್ಸ್್ಫರ್ ಮಾಡಿಸ್ಕೊಂಡೆ. ಮನೆಗೆ ತುಂಬ ಹತ್ತಿರದಲ್ಲೇ ಸಮುದ್ರ. ರಾತ್ರಿಯ ಹೊತ್ತು ಅಲೆಗಳ ಸದ್ದು ಜೋಗುಳದ ಥರಾ ಕೇಳಿಸ್ತಾ ಇತ್ತು. ನಾವಿರುವ ಜಾಗ ಭೂಲೋಕದ ಸ್ವರ್ಗ ಅಂದುಕೊಂಡಿದ್ವಿ. ಆದರೆ, ಸ್ವರ್ಗದಂತಿದ್ದ ಜಾಗವೇ ನಮಗೆ ನರಕದ ದರ್ಶನ ಮಾಡಿಸಿಬಿಡ್ತು. ಇಷ್ಟಾದ್ರೂ ನಾವು ಅದೇ ಮನೇಲಿ ಇದೀವಿ. ಯಾಕೆ ಗೊತ್ತಾ? ಈ ಮನೇಲಿ ನಮ್ಮ ಮಕ್ಕಳ ಹೆಜ್ಜೆ ಗುರುತಿದೆ. ಪಿಸುಮಾತುಗಳಿವೆ. ಕನಸುಗಳಿವೆ. ಸಮುದ್ರದ ಅಲೆಗಳನ್ನು ನೋಡಿದಾಗೆಲ್ಲ ನಮ್ಮ ಮಕ್ಕಳಿಗೆ ತುಂಬಾ ಹತ್ತಿರದಲ್ಲೇ ಇದೀವಿ ಅನ್ನೋ ಭಾವ ಜೊತೆಯಾಗುತ್ತೆ. ಸುನಾಮಿ ಬಂದ ದಿನ ನಾನು ಮನೇಲಿದ್ದೆ. ಆರು ಅಡಿಯಷ್ಟು ಎತ್ತರದ ಅಲೆಗಳು ಮನೆಗೂ ಬಡಿದವು. ಭಯಂಕರವಾದ ಸಂದರ್ಭವೊಂದನ್ನು ಪ್ರತ್ಯಕ್ಷವಾಗಿ ನೋಡಿಬಿಟ್ಟಿದೀನಿ. ಹಾಗಾಗಿ, ಈಗ ಸಮುದ್ರದ ಬಗ್ಗೆಯಾಗಲಿ, ಸಾವಿನ ಬಗ್ಗೆಯಾಗಲಿ ಹೆದರಿಕೆ ಆಗೋದಿಲ್ಲ. ಅವತ್ತು ಮಕ್ಕಳು ಹಾಗೂ ಬಂಧುಗಳು ಮನೇಲೇ ಇದ್ದಿದ್ರೆ ಎಲ್ರೂ ಬದುಕಿರ್ತಾ ಇದ್ರು ಅಂತ ಪದೇ ಪದೆ ಅನಿಸುವುದುಂಟು. ಆದರೆ ವಿಧಿಯಾಟದ ಮುಂದೆ ನಮ್ಮ ಲೆಕ್ಕಾಚಾರಗಳಿಗೆ ಅರ್ಥವಿಲ್ಲ, ಅಲ್ವಾ?
ಈ ಬದುಕು ಎಷ್ಟೊಂದು ಕ್ಷಣಿಕ ಎಂಬುದನ್ನು ಪ್ರತ್ಯಕ್ಷ ಕಂಡೆವಲ್ಲ; ಅವತ್ತೇ ಹಣ-ಆಸ್ತಿಯ ಮೋಹ ನಮ್ಮಿಂದ ದೂರವಾಯ್ತು. ಈಗ ಇಬ್ಬರ ಸಂಬಳವೂ ಜೊತೆಗಿರುವ ಮಕ್ಕಳ ಶಿಕ್ಷಣ ಮತ್ತಿತರೆ ಖರ್ಚಿಗೆ ಬಳಕೆಯಾಗ್ತಿದೆ. ನಮ್ಮ ಕೆಲಸವನ್ನು ಗಮನಿಸಿರುವ ನಾಗಪಟ್ಟಣಂನ ನಿವಾಸಿಗಳು, ವಿದೇಶಗಳಲ್ಲಿರುವ ಕೆಲವು ಸ್ನೇಹಿತರು ಹಣಕಾಸಿನ ನೆರವು ಒದಗಿಸಿದ್ದಾರೆ. ಹಾಗಾಗಿ, ನಂಬಿಗೈ ಸಂಸ್ಥೆ ಯಾವುದೇ ತೊಂದರೆಗೂ ಈಡಾಗದೇ ಮುನ್ನಡೆದಿದೆ. 30 ಮಕ್ಕಳೂ ಅಮ್ಮ, ಅಮ್ಮ ಅನ್ನುವುದನ್ನು ಕಂಡಾಗ ಖುಷಿಯಾಗುತ್ತದೆ ನಿಜ. ಆದರೆ, ಯಾವುದೋ ತಿಂಡಿ ಮಾಡಿದಾಗ, ಸಮುದ್ರ ತೀರಕ್ಕೆ ನಡೆದು ಹೋದಾಗ, ಬರ್ತ್್ಡೇಗಳು ಕೈಜಗ್ಗಿದಾಗ ಕಣ್ಮರೆಯಾದ ಮಕ್ಕಳ ಚಿತ್ರ ಕಣ್ಮುಂದೆ ಬಂದುಬಿಡುತ್ತೆ. ಅಂಥ ಸಂದರ್ಭದಲ್ಲಿ ಟಪಟಪನೆ ಒಂದೆರಡು ಹನಿಗಳು ಬಿದ್ದರೆ ಸಾಕು: ಎಲ್ಲ ಮಕ್ಕಳೂ ನುಗ್ಗಿಬಂದು ಕಣ್ಣೀರು ಒರೆಸುತ್ತಾರೆ. ಆ ಕ್ಷಣಕ್ಕೆ ಎಲ್ಲ ಮಕ್ಕಳ ಕಣ್ಣಲ್ಲೂ ಆ 3 ಮಕ್ಕಳ ಚಿತ್ರವೇ ಕಾಣುತ್ತದೆ ಎನ್ನುತ್ತಾ ಗದ್ಗದಿತರಾದರು ಚೂಡಾಮಣಿ.
ನಮಗೆ ಒಟ್ಟು 32 ಮಕ್ಕಳು. ಎಲ್ಲರಿಗೂ ಚೆಂದದ ಭವಿಷ್ಯ ಕಲ್ಪಿಸುವುದು ನಮ್ಮ ಗುರಿ ಎನ್ನುತ್ತಾರೆ ಪರಮೇಶ್ವರನ್-ಚೂಡಾಮಣಿ. ಅವರ ಈ ನಿಸ್ವಾರ್ಥ ಸೇವೆ ಕಂಡು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ಕೈಮುಗಿದಿದ್ದಾರೆ. ಈ ದಂಪತಿಯನ್ನು ನಾನು ಎಂದೆಂದೂ ಮರೆಯಲಾರೆ ಎಂದು ಉದ್ಗರಿಸಿದ್ದಾರೆ. ಕರ್ನಾಟಕದಿಂದ ಯಾರೇ ಫೋನ್ ಮಾಡಿದರೂ ಅದು ನಮ್ಮ ಪಾಲಿಗೆ ತವರಿನಿಂದ ಬಂದ ಫೋನ್ ಎನ್ನುವ ಚೂಡಾಮಣಿ-ಪರಮೇಶ್ವರನ್ ದಂಪತಿ 098424 75121/098424 55121 ನಂಬರಿನಲ್ಲಿ ಸಿಗುತ್ತಾರೆ. ಸಾಧ್ಯವಾದರೆ ಈ ಹೃದಯವಂತರಿಗೆ ಅಭಿನಂದನೆ ಹೇಳಿ.

‍ಲೇಖಕರು G

February 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This