ಮಣ್ಣಿನ ಗೋಡೆಗೆ ಮೊಳೆ ಹೊಡೆದು ಒಂದು ಫಿಲಿಫ್ ರೇಡಿಯೋ

ಕರ್ನಾಟಕ ವಿ ವಿ ಯ ಪತ್ರಿಕೋದ್ಯಮ ವಿಭಾಗದಲ್ಲಿ ೬ ಚಿನ್ನದ ಪದಕ ಪಡೆದ ಹುಡುಗ ಜೋಮನ್. ಪ್ರಸ್ತುತ ಅಂತರ್ಜಾಲ ನಿಯತಕಾಲಿಕದಲ್ಲಿ ಉಪಸಂಪಾದಕ. ಮಳೆಹನಿ ಇವರ ಬ್ಲಾಗ್. ತನ್ನ ಆ ದಿನಗಳ ನೆನಪೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ.
-ಜೋಮನ್
***
ನನ್ನ ಅಪ್ಪ ಒಬ್ಬ ಸಾಮಾನ್ಯ ರೈತ. ಅಪ್ಪನಿಗೆ ಮೂರು ವರ್ಷ ಇರುವಾಗ ಅಜ್ಜ ತೀರಿಕೊಂಡರು. ಮನೆಯಲ್ಲಿ ಬಡತನವಿತ್ತು. ಆದ್ದರಿಂದ ಚೆನ್ನಾಗಿಯೇ ಓದುತ್ತಿದ್ದ ಅಪ್ಪನ ಓದು ಅರ್ಧಕ್ಕೇ ನಿಂತಿತು. ಮುಂದಿನದು ದುಡಿಮೆಯ ಬದುಕು. ಒಬ್ಬ ಸಾಮಾನ್ಯ ರೈತನ ಲೋಕಜ್ಞಾನ ಎಷ್ಟು ವಿಶಾಲವಾಗಿರುತ್ತದೆ ಎನ್ನುವುದನ್ನು ನಾನು ಅಪ್ಪನಿಂದ ಕಲಿತಿದ್ದೇನೆ. ಆತನ ಹೆಗಲ ಮೇಲೆ ಕುಳಿತು ಅಂಗನವಾಡಿಗೆ ಹೋಗುತ್ತಿದ್ದ ದಿನಗಳಿಂದ ಹಿಡಿದು, ಇಂದಿನವರೆಗೆ ಬದುಕಿನೆಡೆಗೆ ಆತನಿಗಿರುವ ಶ್ರದ್ಧೆಯನ್ನೂ, ಪ್ರಾಮಾಣಿಕತೆಯನ್ನೂ ಪುಟ್ಟ ಅಚ್ಚರಿಯಿಂದಲೇ ಗಮನಿಸುತ್ತಾ ಬಂದಿದ್ದೇನೆ.
ಅಪ್ಪನನ್ನು ನೆನೆಯುವಾಗ ನನ್ನ ಬಾಲ್ಯವೂ ನೆನಪಾಗುತ್ತದೆ. ಬಾಲ್ಯದಲ್ಲಿ ಒಂದಿಷ್ಟು ಬೆಚ್ಚನೆಯ ಭಾವಗಳಿವೆ. ಹೇಳಿಕೊಳ್ಳುವಂತ ವಿಶೇಷ ಏನಿರದಿದ್ದರೂ, ಇದನ್ನೆಲ್ಲಾ ಸುಮ್ಮನೆ ಒಂದೆಡೆ ಬರೆದಿಡಬೇಕು ಎನಿಸುತ್ತದೆ. ಮೊದಲ ಮಳೆ ಸುರಿಯುವಾಗ ಹನಿಗಳನ್ನು ಬೊಗಸೆಯಲ್ಲಿ ಹಿಡಿಯಲು ಅಂಗಳಕ್ಕೆ ಓಡುವ ತುಂಟ ಮಗುವಿನಂತೆ, ಅದರ ಮುಗ್ದತೆಯಂತೆ ನನ್ನ ಬಾಲ್ಯಕಾಲದ ದಿನಗಳನ್ನು ಇಲ್ಲಿ ಕೆಲವು ಕಂತುಗಳಲ್ಲಿ ಬರೆಯಬೇಕೆಂದು ವಿಚಾರ ಮಾಡಿದ್ದೇನೆ. ಹಾಗೆ ವಿಚಾರ ಮಾಡಿದ ನಂತರ ಬರೆದ ಮೊದಲ ಕಂತು ಇದು. ಮೆಲ್ಲಗೆ ಸುರಿಯುವ ಮಳೆಹನಿ ನಿಮಗೆ ಇಷ್ಟವಾದರೆ ಎರಡು ಸಾಲು ಬರೆಯಿರಿ.
^^^
ಅಪ್ಪ, ಫಿಲಿಪ್ ರೇಡಿಯೋ ಮತ್ತು ಎಮ್‌.ಆರ್.ಬೀಡಿ
ಇಂದು ನಮ್ಮ ಮನೆಯ ಹಾಲ್‌ನಲ್ಲಿ ಬಣ್ಣದ ಪ್ಲಾಟ್ ಟಿವಿ ಇದೆ. ಆದರೆ ಇಂದಿಗೆ ಹತ್ತು ವರ್ಷಗಳ ಹಿಂದೆ ಅದಿರಲಿಲ್ಲ. ಅದರ ಬದಲಿಗೆ ಹಳೆಯ ಮನೆಯಲ್ಲಿ ಮಣ್ಣಿನ ಗೋಡೆಗೆ ಮೊಳೆ ಹೊಡೆದು ಒಂದು ಫಿಲಿಫ್ ರೇಡಿಯೋ ತೂಗು ಹಾಕಿದ್ದರು. ಗಾತ್ರದಲ್ಲಿ ಸಿಮೆಂಟ್ ಇಟ್ಟಿಗೆಯಷ್ಟಿದ್ದ ಆ ರೇಡಿಯೋ ಒಂದೇ ಸಮನೆ ಹಾಡುತ್ತಿದ್ದ ನೆನಪು. ಅಮ್ಮ ರೇಡಿಯೋ ಮುಟ್ಟಲು ಹೋಗುತ್ತಿರಲಿಲ್ಲ. ಹೋದರೆ ಇರುವ ಸ್ಟೇಷನ್‌ಗಳೆಲ್ಲಾ ದಿಕ್ಕುತಪ್ಪಿ ಗುಡುಗು ಮಳೆ ಸುರಿಯುತ್ತಿತ್ತು. ಅಪ್ಪನ ಸಿಟ್ಟು ಮಿಂಚಿನಂತೆ ಏರುತ್ತಿತ್ತು.
ಅಪ್ಪ ರೇಡಿಯೋ ಆರಿಸುತ್ತಿದ್ದದ್ದು ರಾತ್ರಿ 11 ಗಂಟೆಯ ನಂತರ. ಎಂಟು ಗಂಟೆಗೆ ಪ್ರಸಾರವಾಗುತ್ತಿದ್ದ ರೇಡಿಯೋ ನಾಟಕವನ್ನು ಕೇಳಿ ಅಪ್ಪ ಊಟ ಮಾಡುತ್ತಿದ್ದರು. ತೋಟದ ಕೆಲಸ ಮಾಡುವಾಗಲೂ ರೇಡಿಯೋವನ್ನು ಬದುವಿನ ಮೇಲಿರಿಸಿ ಚಿತ್ರಗೀತೆಗಳನ್ನು ಕೇಳುತ್ತಿದ್ದರು. ಆದರೆ ಅಪ್ಪನಿಗೆ ಹಾಡುಗಳಿಗಿಂತ ಇಷ್ಟವಾಗುತ್ತಿದ್ದದ್ದು ವಾರ್ತೆಗಳು. ವಾರ್ತೆಗಳನ್ನು ಕೇಳಿ ತನ್ನದೇ ಜ್ಞಾನದ ಪರಿಧಿಯೊಳಗೆ ಸರಳೀಕರಿಸಿ ನನಗೆ ಹೇಳುತ್ತಿದ್ದರು. ನಾನಾಗ ಮೂರನೆಯೋ ನಾಲ್ಕನೆಯೋ ಕ್ಲಾಸಿಗೆ ಹೋಗುತ್ತಿದ್ದೆ. ಅಪ್ಪ ತೋಟಕ್ಕೆ ಹೊರಟರೆ, ನಾನೂ ಒಂದು ಚಿಕ್ಕ ಕತ್ತಿ ಹಿಡಿದು ಹಿಂದೆ ಹೊರಡುತ್ತಿದ್ದೆ. ನನ್ನ ಮುಖ್ಯ ಕೆಲಸ ತೋಟದಲ್ಲಿ ಬಿದ್ದಿರುವ ಅಡಿಕೆಯ ಸೋಗೆಗಳನ್ನು ಒಂದೆಡೆ ಜೋಡಿಸಿಡುವುದು. ನಂತರ ಹಣ್ಣಾಗಿ ಉದುರಿ ಬಿದ್ದಿರುವ ಅಡಿಕೆಗಳನ್ನು ಹೆಕ್ಕಿ ಬುಟ್ಟಿಗೆ ಹಾಕುವುದು. ನಡುನಡುವೆ ರೇಡಿಯೋಗೆ ಬಿಸಿಲು ತಾಗದಂತೆ ಸ್ಥಳಾಂತರ ಮಾಡುವುದು.
ರೇಡಿಯೋ ಅಪ್ಪನ ಜೀವನಾಡಿಯಾಗಿತ್ತು. ವಿಶೇಷ ಆದರಕ್ಕೂ ಪಾತ್ರವಾಗಿತ್ತು. ರೇಡಿಯೋಗೆ ಹಾಕುವ ಬ್ಯಾಟರಿಗೆ ಚಾರ್ಜ್ ಖಾಲಿಯಾದರೆ, ಅಪ್ಪ, ಟಾರ್ಚ್‌ಗೆ ಹಾಕಿರುತ್ತಿದ್ದ ಶೆಲ್‌ಗಳನ್ನು ತೆಗೆದು ಹಾಕುತ್ತಿದ್ದರು. ಟಾರ್ಚ್‌ನ ಶೆಲ್ ರೇಡಿಯೋಗೆ, ರೇಡಿಯೋದ ಶೆಲ್ ಟಾರ್ಚ್‌ಗೆ ಮತ್ತೆ ಮತ್ತೆ ಬದಲಾವಣೆಯಾಗುತ್ತಲೇ ಇರುತ್ತಿತ್ತು. ಅಪ್ಪ ರೇಡಿಯೋ ಕೇಳುತ್ತಾ ಮಾಡುತ್ತಿದ್ದ ಮತ್ತೊಂದು ಕೆಲಸವೆಂದರೆ ಬೀಡಿ ಸೇದುವುದು. ಅದು ಎಮ್‌.ಆರ್. ಬೀಡಿ. ಮಂಗಳೂರಿನಿಂದ ಬರುತ್ತಿತ್ತು. ಆಗಿನ ಕಾಲಕ್ಕೆ ಸ್ಟಾಂಡರ್ಡ್ ಎಂದು ಕರೆಸಿಕೊಂಡಿತ್ತು. ಆ ಬ್ರಾಂಡ್ ಬಿಟ್ಟರೆ ಅಪ್ಪ ಬೇರಾವ ಬೀಡಿಯನ್ನೂ ಮುಟ್ಟುತ್ತಿರಲಿಲ್ಲ ಅನಿಸುತ್ತದೆ. ಒಂದು ದಿನಕ್ಕೆ ಎರಡರಿಂದ ಮೂರು ಕಟ್ ಎಮ್‌.ಆರ್ ಬೀಡಿಗಳನ್ನು ಅನಾಮತ್ತಾಗಿ ಎಳೆದು ಬೀಸಾಕುತ್ತಿದ್ದ ಅಪ್ಪ, ಅದರ ಮೊಂಡು ತುಣುಕುಗಳನ್ನು ಅಂಗಳದಲ್ಲಿ ಎಸೆಯುತ್ತಿದ್ದರು. ಕಸ ಗುಡಿಸಲು ಅಮ್ಮ ಬಂದಾಗ ಬೀಡಿ ಹಾಗೂ ಬೆಂಕಿ ಕಡ್ಡಿಯ ನೂರಾರು ತುಂಡುಗಳನ್ನು ನೋಡಿ, ಬೀಡಿ ಸೇದುವ ಊರಿನ ಗಂಡಸರಿಗೆಲ್ಲಾ ಬೈಯುತ್ತಿದ್ದಳು. ಇದಕ್ಕೆ ಕಾರಣವೂ ಇತ್ತು. ನಮ್ಮೂರಿನಲ್ಲಿ ಯಾರ ಬಳಿ ಬೀಡಿ ಖಾಲಿಯಾದರೂ ನಮ್ಮಪ್ಪನ ಹತ್ತಿರ ಇರುತ್ತಿತ್ತು. ಬೀಡಿ ಸಾಲ ಕೇಳಲು ಬಂದವರೆಲ್ಲಾ, ಎರಡೆರಡು ಪುಕ್ಕಟೆ ಬೀಡಿ ಸೇದಿ ಅಂಗಳದಲ್ಲಿ ಬೀಡಿಯ ಬೂದಿಯಿಂದ ರಂಗವಲ್ಲಿ ಹಾಕಿ ಹೋಗುತ್ತಿದ್ದರು.
ಆಗ ನಾವು ಲೆಮನ್ ಗ್ರಾಸ್ ಎಂಬ ತೈಲದ ಹುಲ್ಲು ಬೆಳೆಯುತ್ತಿದ್ದೆವು. ತಿಂಗಳಿಗೊಮ್ಮೆ ಹುಲ್ಲನ್ನು ಕತ್ತರಿಸಬೇಕಿತ್ತು. ಹುಲ್ಲು ಕತ್ತರಿಸುವ ದಿನಗಳಲ್ಲಿ ಅಪ್ಪ-ಅಮ್ಮನಿಗೆ ಅಹೋರಾತ್ರಿ ಕೆಲಸ. ಅಮ್ಮ ತಲೆಗೊಂದು ಟವಲು ಕಟ್ಟಿಕೊಂಡು ಇತರೆ ಕೆಲಸದ ಹೆಂಗಸರೊಂದಿಗೆ ಸಿಸರ್ಲಾ ಎಂದು ಕರೆಯುತ್ತಿದ್ದ ಆ ಹುಲ್ಲನ್ನು ಕತ್ತರಿಸುತ್ತಿದ್ದರು. ಅಪ್ಪ ಪಕ್ಕದ ಕಾಡಿನಿಂದ ಒಣ ಮರದ ದಿಮ್ಮಿಗಳನ್ನು ಎತ್ತಿ ತಂದು ಕುದಿಯುತ್ತಿರುವ ಬಾಯ್ಲರ್ ಕೆಳಗಿನ ಬೆಂಕಿಗೆ ದೂಡುತ್ತಿದ್ದರು. ಬೆಂಕಿಯ ಕಾವು ಹೆಚ್ಚಿದಂತೆ ಎಣ್ಣೆ ಆವಿಯ ರೂಪದಲ್ಲಿ ಹೊರಬಂದು ತೊಟ್ಟಿಕ್ಕುತ್ತಾ ಪಾತ್ರೆಯೊಳಗೆ ಬೀಳುತ್ತಿತ್ತು. ಬಂಗಾರ ವರ್ಣದ ಎಣ್ಣೆ ನೀರಿನ ಮೇಲೆ ತೇಲುತ್ತಾ, ಊರಿಗೆಲ್ಲಾ ಸುವಾಸನೆ ಹೊರಡಿಸುತ್ತಿತ್ತು. ಈ ರೀತಿ ಹುಲ್ಲು ಬೇಯಿಸುವ ರಾತ್ರಿಗಳಲ್ಲಿ ನಾನೂ ಅಪ್ಪನೊಂದಿಗೆ ಭಟ್ಟಿಮನೆ ಎಂದು ಕರೆಯುತ್ತಿದ್ದ ಈ ಸ್ಥಳಕ್ಕೆ ಹೋಗುತ್ತಿದ್ದೆ. ಕಟ್ಟಿಗೆಯನ್ನು ಬೆಂಕಿಯೊಳಗೆ ದೂಡಲು ಒಂದು ಉದ್ದನೆಯ ಕೂಲನ್ನು ಅಪ್ಪ ಬಳಸುತ್ತಿದ್ದರು. ಅದರ ತುದಿಯಿಂದ ನಿಗಿನಿಗಿಸುತ್ತಿರುವ ಕೆಂಡವನ್ನು ಹೊರಗೆಳೆದು ಬೀಡಿ ಹಚ್ಚಿಕೊಳ್ಳುತ್ತಿದ್ದರು. ಆ ರೀತಿ ಅಪ್ಪ ಬೀಡಿ ಸೇದುವುದನ್ನು ನೋಡುವುದೇ ಒಂದು ಸೊಗಸಾಗಿತ್ತು. ನಾನು ಕಣ್ಣು ಮಿಟುಕಿಸದೆ ನೋಡುತ್ತಾ ಕೂರುತ್ತಿದ್ದೆ. ಈ ಬೀಡಿ ಸೇದುವುದೂ ಒಂದು ಕಲೆಯೆಂದೇ ಆಗ ನಾನು ಭಾವಿಸಿದ್ದೆ.
ಲೆಮನ್‌ಗ್ರಾಸ್ ಹುಲ್ಲಿನ ಅಂಚು ಗರಗಸದಂತೆ ಮೊನುಚಾಗಿರುತ್ತದೆ. ಭಟ್ಟಿಮನೆಯಲ್ಲಿ ಮಲಗುವ ರಾತ್ರಿಗಳಲ್ಲಿ ಈ ಹುಲ್ಲು ಮೈಗೆ ಸೋಕಿದಾಗ ತುರಿಕೆ ಪ್ರಾರಂಭವಾಗುತ್ತಿತ್ತು. ಭಟ್ಟಿಮನೆಗೆ ಮೇಲ್ಛಾವಣಿ ಇರಲಿಲ್ಲ. ಭಟ್ಟಿಮನೆಯಲ್ಲಿ ಮಲಗಿ ಆಗಸದಲ್ಲಿ ಮಿಂಚುಹುಳದಂತೆ ಮಿಂಚುತ್ತಾ ಹೋಗುವ ಜೆಟ್ ವಿಮಾನಗಳನ್ನು ನೋಡುವುದು ನನಗಿಷ್ಟದ ಕೆಲಸವಾಗಿತ್ತು. ಆ ಸುಖದೊಳಗೆ ತುರಿಕೆ ಎನ್ನುವುದು ಮರೆತು ಹೋಗುತ್ತಿತ್ತು. ಅಪ್ಪ ಮಾತ್ರ ರೇಡಿಯೋ ಕೇಳುತ್ತಾ, ಬೆಂದ ಹುಲ್ಲನ್ನು ಬಾಯ್ಲರ್‌ನಿಂದ ಹೊರಗೆಳೆದು ಹಾಕುತ್ತಿದ್ದ. ನಾನು ರಾತ್ರಿ ಟಾರ್ಚ್ ಬೆಳಗಿಸುತ್ತಾ, ಜೋರಾಗಿ ಹಾಡು ಹೇಳುತ್ತಾ, ಮನೆಗೆ ಹೋಗಿ ಬುತ್ತಿ ತರುವ ಹೊತ್ತಿಗೆ, ಅಪ್ಪ ಹೊಸದಾಗಿ ಹಸಿ ಹುಲ್ಲು ತುಂಬಿ, ಗೆದ್ದಲು ಹುತ್ತದ ಅಂಟು ಮಣ್ಣನ್ನು ಬಾಯ್ಲರ್‌ನ ವೃತ್ತಾಕಾರದ ಮುಚ್ಚಳದ ಸುತ್ತ ಸವರಿ, ಬಿಗಿಯಾಗಿ ಮುಚ್ಚಿರುತ್ತಿದ್ದ. ನಂತರ ಆರು ಗಂಟೆಗಳ ಕಾಲ ಬೆಂಕಿ ನೋಡಿಕೊಳ್ಳುವ ಕೆಲಸ ನನ್ನದು. ದಣಿವರಿಯದ ಕೆಲಸಗಾರನಾಗಿದ್ದ ಅಪ್ಪ, ಯಾವಾಗಾದರೊಮ್ಮೆ ದೇಹಕ್ಕೊಂದಿಷ್ಟು ವಿಶ್ರಾಂತಿ ಪಡೆಯಲು ಹಳೆಯ ಈಚಲು ಮರದ ಚಾಪೆಗೆ ಮೈಯಾನಿಸಿದರೆ ಆತನಿಗೆ ಜೊಂಪು ಹತ್ತುತ್ತಿತ್ತು. ಮಧ್ಯೆ ಅದ್ಯಾವ ಹೊತ್ತಿನಲ್ಲಿ ಎದ್ದು ಹೋಗಿ ಕಟ್ಟಿಗೆಯನ್ನು ಹೊಡೆದು ಹಾಕುತ್ತಿದ್ದನೋ ನನಗೆ ಶಬ್ದವೂ ಕೇಳಿಸದಷ್ಟು ನಿದ್ರೆ.
ಹೀಗೆ ಒಂದು ದಿನ ಭಟ್ಟಿಮನೆಯ ಕಂಬಕ್ಕೆ ನೇತು ಹಾಕಿದ್ದ ಫಿಲಿಫ್ ರೇಡಿಯೋ ಕಳಗೆ ಬಿದ್ದು ಹಾಡು ನಿಲ್ಲಿಸಿತು. ಅಪ್ಪ ಅದನ್ನು ಬಲು ಸಂಕಟದಿಂದಲೇ ಭಟ್ಕಳದ ರಿಪೇರಿ ಅಂಗಡಿಯೊಂದಕ್ಕೆ ದಾಖಲಿಸಿದರು. ರಿಪೇರಿ ಮಾಡುವವನು ಏನು ಮಾಡಿದನೋ ಏನೋ? ರೇಡಿಯೋ ಮೊದಲಿನಂತೆ ಹಾಡಲೇ ಇಲ್ಲ. ಜಪಾನ್ ಮೇಡ್ ಆಗಿದ್ದ ಅದರಿಂದ ಯಾವುದೇ ಒಂದು ವಸ್ತುವನ್ನು ರಿಪೇರಿ ಮಾಡುವಾತ ಎಗರಿಸಿದ್ದಾನೆ ಎನ್ನುವುದು ಅಪ್ಪನ ವಾದವಾಗಿತ್ತು. ಮನೆಗೆ ಬಂದ ಒಂದು ತಿಂಗಳಲ್ಲೇ ಶಾಶ್ವತವಾಗಿ ರೇಡಿಯೋ ಕಾಯಿಲೆ ಬಿತ್ತು. ಹೊಸದೊಂದು ರೇಡಿಯೋ ತರಲು ಹಣ ಹೊಂದಿಸಲು ಮತ್ತೆ ಅಪ್ಪ ಒಂದು ವರ್ಷ ಕಾಯಬೇಕಾಯಿತು.
ಈಗ ಅಪ್ಪ ಬೀಡಿ ಸೇದುವುದನ್ನು ಬಿಟ್ಟಿದ್ದಾನೆ.. ಮೂವತ್ತು ವರ್ಷದಿಂದ ಸತತವಾಗಿ ಬೀಡಿ ಸೇದುತ್ತಿದ್ದ ವ್ಯಕ್ತಿಯೊಬ್ಬ ಇದಕ್ಕಿದಂತೆ ಸ್ವಯಂ ಪ್ರೇರಣೆಯಿಂದ ಅದನ್ನು ನಿಲ್ಲಿಸಿದ ಕಥೆ ಅದು. ಸೊಗಸಾಗಿದೆ.. ಮುಂದಿನ ಕಂತಿನಲ್ಲಿ ಬರೆಯುತ್ತೇನೆ.

 

‍ಲೇಖಕರು avadhi

May 26, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. subramani

  ನಿನ್ನ ಅಪ್ಪ ತರ ನನ್ನಪ್ಪನೂ ಶ್ರಮಿಕ.ನನ್ನ ಅಪ್ಪ ಇಂದಿಗೂ ದಣಿವು ಅರಿಯದ ರೈತ.ದುಡಿಯುವ ಮಂದಿ
  ಯಾವಗಲೂ ಶ್ರಮ ಸಂಸ್ಕೃತಿಯ ಪ್ರತೀಕವಿದ್ದಂತೆ.
  ಸುಬ್ರಮಣಿ

  ಪ್ರತಿಕ್ರಿಯೆ
 2. shari

  ಶಾಲೆ,ಪಾಠ,ಟೀಚರ್ ಎಲ್ಲರೂ ಬೋರು ಬೋರು ಎಂದುಕೊಂಡೇ ದಿನಕಳೆದಿದ್ದ ನಾನು ಎಸ್ಸೆಸ್ಸೆಲ್ಸಿಯಲ್ಲಿ
  ಶ.67ಮಾಡಿದಾಗ ನಮ್ಮ ಮನೆಜನರಿಗೆ ಖುಷಿಯೋ ಖುಷಿ.ನನ್ನ ಭಾವ ಆಗ ಫಿಲಿಪ್ಸ್ ರೇಡಿಯೋ ಪ್ರೆಸೆಂಟ್
  ಮಾಡಿದ್ರು.ಅಂದಿನಿಂದ ಇಡೀ ದಿನ ಅದನ್ನು ಮಗು ಥರ ಸಾಕೋದೇ ನನ್ನ ದಿನಚರಿಯಾಗಿಬಿಟ್ಟಿತ್ತು.
  ಅದರಲ್ಲೂ ರಾತ್ರಿ10 ಘಂಟೆಯಿಂದ 11 ಘಂಟೆವರೆಗೆ ವಿವಿಧ ಭಾರತಿ ಕೇಳುವುದೆಂದರೆ ಎಲ್ಲಿಲ್ಲದ ಪ್ರೀತಿ.ತಲತ್
  ಮಹಮೂದ್,ಗೀತಾದತ್,ಅವರನ್ನು ಕೇಳುತ್ತಿದ್ದರೆ ಲೋಕವೆಲ್ಲ ಮರೆಯುತ್ತಿದೆ.ಈಗಲೂ ಆ ರೆಡಿಯೋ
  ನನ್ನ ಬಳಿ ಇದೆ.ನೆನಪಾದಗಲೆಲ್ಲಾ, ಅವಕಾಶ ಸಿಕ್ಕಾಗಲೆಲ್ಲಾ ಇದು ನನ್ನ ಭಾವ ಕೊಡಿಸಿದ್ದು ಎಂದು
  ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.ಮಣ್ಣಿನ ಗೋಡೆ….ಫಿಲಿಪ್ ರೆಡಿಯೋ ಓದಿ ಮತ್ತೆ ಆ ದಿನಗಳು
  ನೆನಪಾದವು.ಇಂದು ನನ್ನ ಬಳಿ ಇರುವ ಮೊಬೈಲ್,ಐಪಾಡು, ಹೋಮ್ ಥಿಯೇಟರ್,
  ಕಂಪ್ಯ್ಯೂಟರ್ ನಲ್ಲೆಲ್ಲ ಬೇಕಾದಷ್ಟು ಹಾಡುಗಳ ಸಂಗ್ರಹವಿದೆ.ಆದರೆ ಕೇಳೋಕೆ ಸಮಯವಿಲ್ಲ.
  ಆ ಕಾಲ ಈಗೆಲ್ಲಿ.ಹಲ್ಲಿದ್ದಾಗ ಕಡ್ಲೆಇಲ್ಲ.ಕಡ್ಲೆ ಇದ್ದಾಗ ಹಲ್ಲಿಲ್ಲ.ನಮ್ಮ ಪರಿಸ್ಥಿತಿ ಹೀಗಿದೆ ನೋಡಿ…..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: