ಮತ್ತೆ ಚಿಗುರುವ ಗೆಳೆತನ

ಕಥೆಗಾರ ಕೆ ಸತ್ಯನಾರಾಯಣ ಅವರು ಉತ್ತಮ ಪ್ರಬಂಧಕಾರ ಕೂಡ. ನಮ್ಮ ಪ್ರೀತಿಯ ಕ್ರಿಕೆಟ್, ದಾಂಪತ್ಯಕ್ಕೊಂದು ಶೀಲ ಎಂಬ ಪ್ರಬಂಧಸಂಕಲನಗಳ ಬಳಿಕ ಇದೀಗ ಅವರ ಹೊಸ ಪ್ರಬಂಧಸಂಗ್ರಹ “ನಿಂತ ಬಂಡಿಯ ದೇಶಾಂತರ” ಪ್ರಕಟವಾಗಿದೆ. ಬೆನ್ನುಡಿಯಲ್ಲಿ ಹೇಳಿರುವಂತೆ, ಲಹರಿಯಾಗದ ಕಥನ, ಆತ್ಮರತಿಯಾಗದ ಸ್ವವಿಮರ್ಶೆ, ವ್ಯಂಗ್ಯ, ಸಿನಿಕತೆಯಿಲ್ಲದ ಹಾಸ್ಯ, ಗೊಡ್ಡು ತಾತ್ವಿಕತೆಯ ಹೊರೆಯಿಲ್ಲದ ಜೀವನ ದರ್ಶನ -ಇವೆಲ್ಲ ಹದವಾಗಿ ಬೆರೆತಿದೆ.

ಇಂಥ ಸೊಗಸಿನೊಂದಿಗಿರುವ ಈ ಸಂಗ್ರಹದ ಒಂದು ಪ್ರಬಂಧದ ರುಚಿಯನ್ನು ಇಲ್ಲಿ ಬಡಿಸುತ್ತಿದ್ದೇವೆ.

* * *

ಕೆ ಸತ್ಯನಾರಾಯಣ

ಧ್ಯಾಹ್ನ ಮತ್ತು ಸಂಜೆಯ ನಡುವಿನ ಸಮಯವದು. ನಗರದ ಆ ಭಾಗ ದಿನ ಓಡಾಡುವ ರಸ್ತೆ ಕೂಡ. ನನ್ನ ಹೆಂಡತಿ ಅವರಕ್ಕನ ಮನೆಗೆ ಹೊರಟಿದ್ದಳು. ಅವಳನ್ನು ಆಟೋ ಹತ್ತಿಸಿ ಬರೋಣವೆಂದು ನಾನು ಮನೆಯಿಂದ ಈಚೆಗೆ ಬಂದೆ. ಅದೇ ರಸ್ತೆ. ಆ ರಸ್ತೆಯಲ್ಲಿ, ಆ ಸಮಯದಲ್ಲಿ ತ್ರೇತಾಯುಗದಿಂದಲೂ ಅಷ್ಟೇ ಜನ. ಎಷ್ಟು ಸಲ ಆ ಹೊತ್ತಿನಲ್ಲಿ ಆ ರಸ್ತೆಯಲ್ಲಿ ನಾನೇ ಓಡಾಡಿಲ್ಲ. ಇದ್ದಕ್ಕಿದ್ದಂತೆ ಯಾರೋ ಮಾತಾಡಿಸಿದರು. ಪರಿಚಿತ ದನಿ, ಸಲಿಗೆಯದು. ಕೇಳಿದ್ದು ಕ್ಷೇಮ ಸಮಾಚಾರ.

ಹತ್ತು ಹನ್ನೆರಡು ವರ್ಷಗಳಾಗಿತ್ತು ಆತ ಸಿಕ್ಕಿ. ಪಕ್ಕದಲ್ಲಿದ್ದ ಹೆಂಡತಿ ಈತ ಇಂತವನೇ ಅಲ್ಲವೇ ಎಂದು ಪಿಸುಮಾತಿನಲ್ಲಿ ಗೊಣಗಿದಳು. ನಾನು ಹೌದೆಂದೆ. ಸರಿ, ಹಾಗಾದರೆ ನೀವು ನಿಮ್ಮ ಸ್ನೇಹಿತನ ಜೊತೆ ಹೋಗಿ, ನನ್ನ ಪಾಡಿಗೆ ನಾನು ಹೋಗುತ್ತೇನೆ ಎನ್ನುತ್ತಾ ಮುಂದೆ ಮುಂದೆ ಹೊರಟು ಹೋದಳು. ನಾನು ಅಲ್ಲೇ ನಿಂತೆ. ನಿಲ್ಲುವ ಉದ್ದೇಶವಿರಲಿಲ್ಲ. ನನ್ನ ಸ್ನೇಹಿತನ ಜೊತೆ ಮಾತಿಗಿಳಿದೆ. ಹಾಗೆ ಅಲ್ಲಿ ನಿಲ್ಲುವುದು, ಆತನ ಜೊತೆ ಮಾತಿಗಿಳಿಯುವುದು ಕನಸುಮನಸಿನ ಲೆಕ್ಕಾಚಾರದಲ್ಲಿ ಮಾತ್ರವಲ್ಲ ತೀರಾ ಅಂತರಾತ್ಮದ ಆಸೆಯಲ್ಲೂ ಇರಲಿಲ್ಲ.

ಹತ್ತು ಹನ್ನೆರಡು ವರ್ಷಗಳ ನಂತರ ಸಿಕ್ಕ ಗೆಳೆಯೆನೆಂದೇ ಅಲ್ಲವೇ? ನಮ್ಮಲ್ಲೇನು ಪರಸ್ಪರ ಜಗಳವಾಗಿರಲಿಲ್ಲ. ಭಿನ್ನಾಭಿಪ್ರಾಯವೂ ಬಂದಿರಲಿಲ್ಲ. ನನ್ನೊಡನೆ ಒಡನಾಟದಿಂದ ಆತನಿಗೇನು ನೆರವಾಗುವುದಿಲ್ಲವೆಂದು ಬದಲಾಗಿ ಆತನ ಬೆಳವಣಿಗೆಗೆ ತೊಂದರೆಯಾಗುವುದೆಂದು ಆತನೇ ಒಂದೆರಡು ಸಲ ಅರೆಗಾಂಭೀರ್ಯದಿಂದ, ಅರೆಹಾಸ್ಯದಿಂದ ಗೊಣಗಿದ್ದ. ಅಂತಹ ಗೊಣಗಾಟವು ಕೂಡ ಹಿಂದೆ ಎಷ್ಟೋ ಸಲ ಆತನ ಬಾಯಿಂದ ಹೊರಟಿತ್ತು. ಆದರೂ ಅದೇಕೋ ಇದ್ದಕ್ಕಿದ್ದಂತೆ ಒಡನಾಟವು ನಿಂತು ಹೋಯಿತು. ನಿಂತ ತಕ್ಷಣ ಗೊತ್ತಾಗಲಿಲ್ಲ. ಎಷ್ಟೋ ದಿನಗಳ ನಂತರ, ಎಷ್ಟೋ ತಿಂಗಳುಗಳ ನಂತರ ಒಂದು ದಿನ ಹೊಳೆಯಿತು. ಆತ್ಮೀಯತೆ ಶುರುವಾಗುವುದು, ಕಡಿದು ಹೋಗುವುದು ಹೀಗೆಯೇ ನಮ್ಮ ಅರಿವಿಗೆ ಬಾರದೆ. ನಮಗೆ ಅರಿವಿಗೆ ಬರುವುದಕ್ಕೆ ಮುಂಚೆಯೇ ಕೆಲವರು ಆತ್ಮೀಯರಾಗಿರುತ್ತಾರೆ. ಮತ್ತು ಆತ್ಮೀಯತೆ ಕಡಿದು ಹೋದ ಮೇಲೆ ಅದೆಷ್ಟೋ ದಿನಗಳ ನಂತರ ಅರಿವಿಗೆ ಬರುತ್ತದೆ. ಇರಲಿ, ನನ್ನ ಊರೂರಿನ ತಿರುಗಾಟ, ವರ್ಗ, ಸಂಸಾರದ ಏಳುಬೀಳುಗಳಲ್ಲಿ ಈ ಗೆಳೆಯನ ಸಂಬಂಧ ಮುಂದೆ ನೆನಪಿಗೆ ಕೂಡ ಬರಲಿಲ್ಲ.

ಆದರೂ ಆತ ಅವತ್ತು ಅಕಸ್ಮಾತು ಸಿಕ್ಕಾಗ ಇಷ್ಟು ವರ್ಷಗಳ ನಡುವಿನ ಕಾಲಾವಧಿಯಲ್ಲಿ ಏನೂ ನಡೆದೇ ಇಲ್ಲವೆಂಬಂತೆ ತೀರಾ ಹಿಂದಿನ ದಿನ ಸಂಜೆ ನಾವಿಬ್ಬರೂ ಸೇರಿ ಅಪೂರ್ಣ ಹರಟೆ ಹೊಡೆದಿದ್ದವರು ಈವತ್ತು ಮತ್ತೆ ಅದನ್ನೇ ಮುಂದುವರೆಸುತ್ತಿರುವಂತೆ ನಿರರ್ಗಳವಾಗಿ ಹರಟಿದೆವು. ನಮ್ಮ ಬಗ್ಗೆ. ನಮ್ಮ ಸಂಸಾರಗಳ ಬಗ್ಗೆ, ಒಟ್ಟಾರೆ ಜಗತ್ತಿನ ಬಗ್ಗೆ. ಇದ್ಯಾವುದರ ಬಗ್ಗೆಯೂ ನಮ್ಮಗಳ ಅಭಿಪ್ರಾಯ ಕಿಂಚಿತ್ತೂ ಬದಲಾಗಿರಲಿಲ್ಲ. ಈ ಕಾಲಾವಧಿಯಲ್ಲಿ. ಈ ಗೆಳೆಯ ಮತ್ತೆ ಮತ್ತೆ ಸಿಗಲಾರಂಭಿಸಿದ. ಫೋನು, ಪತ್ರ ಈ ಮೇಲ್, ಪುಸ್ತಕ ವಿನಿಮಯ ಎಲ್ಲವೂ ಪ್ರಾರಂಭವಾಯಿತು. ಮತ್ತೆ ಗೆಳೆತನ ಚಿಗುರಿತು. ಎಲ್ಲವೂ ಮತ್ತು ನಾವಿಬ್ಬರೂ ಈಗ ಹಿಂದಿನಂತೆಯೇ, ಎಂದಿನಂತೆಯೇ.

ಅಂದರೆ ಇದರರ್ಥ ಏನಿರಬಹುದು. ನಾನು ಯೋಚಿಸುತ್ತಲೇ ಇದ್ದೇನೆ. ಹತ್ತು-ಹನ್ನೆರಡು ವರ್ಷಗಳ ಕಾಲವೇ ಸುಳ್ಳೇ ಅಥವಾ ಆ ಕಾಲ ಸಂದುಹೋದ ಬಗೆಯೇ ಸುಳ್ಳೇ! ಈಗ ಈತನ ಗೆಳೆತನ, ಒಡನಾಟ ಅದೆಷ್ಟೊಂದು ಅನಿವಾರ್ಯವಾಗಿದೆ. ಹಾಗಿದ್ದರೆ ನಾನಾಗಲೀ ಅವನಾಗಲೀ ಇಬ್ಬರೂ ಒಬ್ಬರೊಡನೆ ಒಬ್ಬರು ಒಡನಾಡುವುದಿರಲಿ, ಒಬ್ಬರ ಅಸ್ತಿತ್ವದ ಪತ್ತೆ ಇನ್ನೊಬ್ಬರಿಗೆ ಕೂಡ ತಿಳಿಯದಂತೆ ಇಷ್ಟೊಂದು ದಿನ ಬದುಕಿದ್ದು ಹೇಗೆ? ಒಂದೇ ಒಂದು ಅಕಸ್ಮಾತ್ ಭೇಟಿಯಿಂದ ಮತ್ತೆ ಗೆಳೆತನ ಚಿಗುರೇ ಬಿಟ್ಟಿತಲ್ಲ. ಏನಿದೆಲ್ಲದರ ಮರ್ಮ?

ಎಷ್ಟು ಯೋಚಿಸಿದರೂ ಹೊಳೆಯುವುದಿಲ್ಲ. ಇದೇ, ಇಷ್ಟೇ ಅರ್ಥವೆಂದು ನಿಖರವಾಗಿ ಸಂಬಂಧವಾಗಲೀ ಗೆಳೆತನವಾಗಲೀ ಹಾಗೆ ಬಿಟ್ಟು ಹೋಗುತ್ತದೆಯೇನು? ಬಹುಕಾಲದಿಂದ ಒಡನಾಟವಿದ್ದ ಗೆಳೆಯನೊಬ್ಬನ ಜೊತೆ ಒಂದು ಕ್ಷುಲ್ಲಕ ವಿಷಯಕ್ಕೆ – ನನ್ನ ಯಾವುದೋ ಒಂದು ಬರಹವನ್ನು ಅವನು ಚೆನ್ನಾಗಿಲ್ಲವೆಂದದ್ದಕ್ಕೆ ಮುನಿಸಾಯಿತು, ಜಗಳವಾಯಿತು. ಪರಸ್ಪರ ನಿಂದನೆ-ಭರ್ತ್ಸನೆ ವಿನಿಮಯವಾಯಿತು. ನನ್ನ ಬಗ್ಗೆ ಅವನಿಗಾಗಲೀ, ಆತನ ಬಗ್ಗೆ ನನಗಾಗಲೀ ಅಷ್ಟೊಂದು ಕೀಳುಸ್ತರದ ಭಾವನೆಗಳು ಇಬ್ಬರ ಮನಸ್ಸಿನೊಳಗೂ ಇದ್ದುದು ಪರಸ್ಪರ ಇಬ್ಬರಿಗೂ ಗೊತ್ತಿರಲಿಲ್ಲ. ಸರಿ, ಮಾತು ಬಿಟ್ಟೆವು. ಸೆಟೆದುಕೊಂಡೆವು ಕೊನೆಗೆ ಆದದ್ದಾದರೂ ಏನು? ನಂತರದ ಬದುಕು, ಬರವಣಿಗೆಯೆಲ್ಲ ಮುಂದುವರೆಯಿತು. ಆದರೂ ಪ್ರತಿಯೊಂದು ಹಂತದಲ್ಲೂ ಪ್ರತಿದಿನವೂ ನನಗೆ ಆ ಗೆಳೆಯನ ಅಭಿಪ್ರಾಯ ತಿಳಿಯುವ ತವಕ. ಅವನ ಮನಸ್ಸಿನ ವ್ಯಾಪಾರವನ್ನು ಕುರಿತೇ ಲೆಕ್ಕಾಚಾರ. ನಾನು ಅವನು ಗೆಳೆಯರಾಗಿದ್ದಾಗಲೇ ಆತನ ಬಗ್ಗೆ ನಾನು ಅಷ್ಟೊಂದು ಯೋಚಿಸುತ್ತಲೇ ಇರಲಿಲ್ಲ. ನನಗೆ ಗೊತ್ತಿಲ್ಲದಂತೆ ಅವನು, ಅವನಿಗೆ ಗೊತ್ತಿಲ್ಲದಂತೆ ನಾನು ಮತ್ತೆ ಒಂದಾಗುವ ಅವಕಾಶಕ್ಕೆ, ನೆಪವೂ ಕಾದು ಕುಳಿತೆವು. ಜಯವಿಜಯ ಹಿರಣ್ಯಕಶಿಪು ಪ್ರಹ್ಲಾದರ ಕತೆ ಯಾವಾಗಲೂ ಎಷ್ಟು ನಿಜ.

ಇನ್ನೊಬ್ಬರೊಡನೆ ಗೆಳೆತನ ಬಿಟ್ಟೇಬಿಟ್ಟೆವು ಅನ್ನುವುದು ತಪ್ಪು. ನೂರಕ್ಕೆ ನೂರೊಂದರಷ್ಟು ಬೆಂಗಳೂರಿನ ಒಬ್ಬ ಗೆಳೆಯನೊಡನೆ ನಾನೇ ಗಟ್ಟಿ ಮನಸ್ಸು ಮಾಡಿ ಸಂಬಂಧ ಕಡಿದುಕೊಂಡೆ. ಹಣಕಾಸಿನ ಬಗ್ಗೆ ಆತ ಕೊಡುತ್ತಿದ್ದ ವರಾತ ತಪ್ಪಿಸಿಕೊಳ್ಳುವ ದೃಷ್ಟಿಯಿಂದ. ಇದೊಂದು ಕೊರತೆಯ ಹೊರತಾಗಿ ಆತ ಇನ್ನೆಲ್ಲ ದೃಷ್ಟಿಯಿಂದಲೂ ನನಗೆ ಬೇಕಾದವನಾಗಿದ್ದ. ಬೆಂಗಳೂರಿಂದ ನಾಗಪುರಕ್ಕೆ ಹೋಗಿ ಒಂದೆರಡು ವರ್ಷವಾಗಿ ಅಲ್ಲಿಯ ಗೆಳೆಯರ ವಲಯ ಚಾಲೂ ಆದ ಮೇಲೆ ನನಗೆ ಗೊತ್ತಾಯಿತು. ಅಲ್ಲಿ ನನಗೆ ಸಿಕ್ಕಿದ್ದ ಗೆಳೆಯ ಥೇಟ್, ತಾನು ಮಾತುಬಿಟ್ಟು ಸಂಬಂಧ ಕಡಿದುಕೊಂಡ ಬೆಂಗಳೂರಿನ ಗೆಳೆಯನ ತದ್ರೂಪಿನಂತೆಯೇ ಇದ್ದ ಎಷ್ಟರಮಟ್ಟಿಗೆಂದರೆ ತದ್ರೂಪಿತನವನ್ನು ಸಂಪೂರ್ಣಗೊಳಿಸಲೆಂಬಂತೆ ಆತ ನನ್ನನ್ನು ಪದೇ ಪದೇ ಸಾಲ ಕೇಳಲು, ತಗಾದೆ ಮಾಡಲು ಪ್ರಾರಂಭಿಸಿದ. ಗೆಳೆಯರನ್ನು ಬದಲಾಯಿಸುವುದರಲ್ಲಿ ಹೊಸ ಗೆಳೆಯರನ್ನು ಮಾಡಿಕೊಳ್ಳುವುದರಲ್ಲಿ ನನಗೆ ಕಿಂಚಿತ್ತೂ ಆಸಕ್ತಿಯಿಲ್ಲ, ನಮ್ಮ ಸ್ವಭಾವಕ್ಕೆ ಒಪ್ಪುವ ಗೆಳೆಯರು ಯಾವಾಗಲೂ ಕೆಲವರೇ. ಅವರೇ ಬೇರೆ ಬೇರೆ ಹೆಸರಿನಲ್ಲಿ, ಬೇರೆ ಬೇರೆ ಊರಿನಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಅಷ್ಟೆ.

ಮತ್ತೆ ಚಿಗುರುವ ಗೆಳೆತನ ಹಾಗೆ ಇದ್ದಕ್ಕಿದ್ದಂತೆ. ಅಕಸ್ಮಾತ್ ಜರುಗುವ ಘಟನೆಯೇ ಇಲ್ಲವೆನಿಸುತ್ತದೆ. ಮೇಲುನೋಟಕ್ಕೆ ಹಾಗೆ ಕಂಡರೂ ಏಕೆಂದರೆ ಮನಸ್ಸಿನ ಒಂದು ಭಾಗ ಆ ಗೆಳೆತನಕ್ಕೆ ಯಾವಾಗಲೂ ಹಾತೊರೆಯುತ್ತಿರುತ್ತದೆ. ಹಾಗಾಗಿ ಯಾರಾದರೂ ಆತ್ಮೀಯರಿಬ್ಬರು ಪರಸ್ಪರ ಮುನಿಸಿಕೊಂಡು ಜಗಳ ಕಾದು ಮಾತು ಬಿಟ್ಟು ನನ್ನ ಹತ್ತಿರ ಬಂದು ಹೇಳಿಕೊಂಡಾಗ ನನಗೆ ಒಳಗೊಳಗೇ ನಗು ಬರುತ್ತದೆ. ಇಬ್ಬರ ಪರಸ್ಪರ ಮುನಿಸು, ಜಗಳ, ನಿಂದನೆ ಪರಸ್ಪರ ತೀವ್ರವಾದಷ್ಟೂ ನನಗೆ ಒಂದು ಸಂಗತಿ ಖಚಿತವಾಗಿ ಗೊತ್ತಾಗುತ್ತದೆ. ಇಬ್ಬರೂ ಬಹುಬೇಗ ಮತ್ತೆ ಗೆಳೆಯರಾಗುತ್ತಾರೆ. ಗೆಳೆತನಕ್ಕೆ ಹಾತೊರೆಯುತ್ತಲೇ ಇರುತ್ತಾರೆಂದು.

ಗೆಳೆತನ ಮತ್ತೆ ಚಿಗುರಿದ ಮೇಲೆ ಬದುಕು, ಒಡನಾಟ ಎಲ್ಲವೂ ಹಿಂದಿನಂತೆಯೇ ಇರುತ್ತದೆಯೇ, ಹಾಗೆನಿಸುತ್ತದೆ. ಆದರೂ ಏನೋ ಕಳೆದುಹೋಗುತ್ತದೆ, ಮತ್ತೇನೋ ಸೇರಿಕೊಳ್ಳುತ್ತದೆ. ನಾನು ಮಂಡ್ಯದಲ್ಲಿ ಓದುತ್ತಿದ್ದಾಗ ಅಂದರೆ ಮೂವತ್ತೈದು ವರ್ಷಗಳ ಹಿಂದೆ ಮನೆ ಪಾಠದ ನೋಟ್ಸನ್ನು ಸಹಪಾಠಿಯೊಬ್ಬ ಬಿಟ್ಟಿಯಾಗಿ ಕೊಡಲಿಲ್ಲವೆಂದು, ಆತ್ಮೀಯನಾದ ನನ್ನೊಡನೆ ಹಂಚಿಕೊಳ್ಳಲಿಲ್ಲವೆಂದು ಜಗಳ ಕಾದು ಮಾತು ಬಿಟ್ಟಿದ್ದೆ. ಆಮೇಲೆ ನಾನು ಮಂಡ್ಯವನ್ನೂ ಬಿಡಬೇಕಾಯಿತು. ಆತನನ್ನು ಭೇಟಿಯಾಗುವ ಸಂದರ್ಭ ಬರಲೇ ಇಲ್ಲ. ಗೆಳೆಯ ಆಗಾಗ್ಗೆ ಬೇರೆ ಬೇರೆ ಕಾರಣಗಳಿಗೆ ನೆನಪಿಗೆ ಬಂದರೂ ಹಿಂದಿನ ಘಟನೆಗಳ ನೆನಪಿನ ತೀವ್ರತೆ ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. ಕೊನೆಕೊನೆಗೆ ಎಲ್ಲವೂ ಮರೆವಿಗೆ ಸೇರಿಕೊಂಡಿತು. ಆದರೆ ಮೊನ್ನೆ ಬಂಧುವೊಬ್ಬರ ಮದುವೆಗೆ ಹೋಗಿದ್ದಾಗ ಆತ ಸಿಕ್ಕಿದ. ಕಳೆದ ನಲವತ್ತು ವರ್ಷಗಳಲ್ಲಿ ಊರುಕೇರಿ ಏನನ್ನೂ ಬದಲಾಯಿಸದ ಅವನಿಗೆ ಹಿಂದಿನ ಘಟನೆ ಇನ್ನೂ ನೆನಪಿನಲ್ಲಿ ಖಚಿತವಾಗಿ ಇತ್ತು. ಅವನು ದುಡ್ಡು ಕೊಟ್ಟು ಮನೆಪಾಠ ಹೇಳಿಸಿಕೊಳ್ಳುತ್ತಿದ್ದುದರಿಂದ, ನೋಟ್ಸ್ ಕೂಡ ಮನೆಪಾಠದ ಭಾಗವಾಗಿ ಸಿಗುತ್ತಿದ್ದುದರಿಂದ ಯಾವ ನೋಟ್ಸನ್ನೂ ಬಿಟ್ಟಿಯಾಗಿ ಹಂಚಬಾರದೆಂದು ಆತನ ತಾಯಿ-ತಂದೆ ತಾಕೀತು ಮಾಡಿದ್ದರಂತೆ. ಮೂವತ್ತೈದು ನಲವತ್ತು ವರ್ಷಗಳಲ್ಲಿ ನನ್ನ ಬದುಕಿನಲ್ಲಿ ನಡೆದುಹೋದ ಸಾವಿರಾರು ಘಟನೆಗಳ ನಡುವೆ ಆ ಪ್ರಕರಣಕ್ಕೆ ಯಾವ ಮಹತ್ವವೂ ಇರಲಿಲ್ಲ ನನ್ನ ಮನಸ್ಸಿನಲ್ಲಿ. ಎಲ್ಲವೂ ಅವನ ಮನಸ್ಸಿನಲ್ಲಿತ್ತು. ಆ ಕಾರಣಕ್ಕೇ ಅವನು ಸೆಟೆದುಕೊಂಡಂತಿದ್ದ – ಮೊನ್ನೆ ಎಷ್ಟೋ ವರ್ಷಗಳ ನಂತರ ಸಿಕ್ಕಾಗಲೂ. ನಂತರ ಹಗುರಾದ, ಸಡಿಲವಾದ. ನನ್ನನ್ನೂ ಮೀಟಿದ. ಹಾಗೆ ಮೀಟಿದ ತಕ್ಷಣ ನಾನು ನನ್ನ ಬದುಕಿನಲ್ಲಿ ಇದುವರೆಗೆ ನಡೆದದ್ದನ್ನೆಲ್ಲ ಚಾಚೂ ತಪ್ಪದೆ ಅವನಿಗೆ ವಿವರಿಸಿದೆ. ಅವನೂ ಕೂಡ ಸಾದ್ಯಂತ ಹೇಳಿಕೊಂಡ. As though mutual re[orting and confession was both natural and inevitable. ಈಗ ಮತ್ತೆ ಪತ್ರ ವ್ಯವಹಾರ, ಫೋನಾಯಣ ಎಲ್ಲವೂ ಹಿಂದಿನಂತೆಯೇ ಮುಂದುವರೆಯುತ್ತಿದೆ ಎನಿಸಿದರೂ ಮತ್ತೆ ಸೆಟೆದುಕೊಳ್ಳಬಾರದು, ಮುನಿಸಿಕೊಳ್ಳಬಾರದು ಎಂಬ ಎಚ್ಚರವೂ ಇಬ್ಬರಲ್ಲೂ ಇದೆ. ಈ ಎಚ್ಚರ ಇಬ್ಬರ ಮನಸ್ಸಿನಲ್ಲೂ ಕೆಲಸ ಮಾಡುತ್ತಿದೆ. ಎಲ್ಲವೂ ಹಿಂದಿನಂತಿದ್ದರು ಈ ಎಚ್ಚರ ಮಾತ್ರ ಹೊಸದೇ. ಇದೇ ಮತ್ತೆ ಚಿಗುರಿದ ಗೆಳೆತನದಿಂದ ದೊರಕಿದ ಲಾಭ. ನಷ್ಟವೆಂದರೆ ಈ ಮಿತ್ರನ ಒಡನಾಟವೇ ಇಲ್ಲದೆ ಕೂಡ ಕಳೆದ ಮೂವತ್ತೈದು ವರ್ಷಗಳು ಕಳೆದೇ ಹೋಯಿತೆಂಬ ವಿಚಾರ ಹುಟ್ಟಿಸುವ ಭಯ.

ಈ ಕಾರಣಕ್ಕೇ ಯಾವುದೇ ಗೆಳೆತನವು ಬಿಟ್ಟು ಹೋಗಿರುತ್ತದೆ ಅನ್ನುವುದು ತಪ್ಪಾಗುತ್ತದೆ. ಬದುಕಿನ ಒತ್ತಡದಿಂದ ಒಮ್ಮೊಮ್ಮೆ, ಹೊಸ ಗೆಳೆತನದ ಪ್ರಭೆಯಿಂದ ಒಮ್ಮೊಮ್ಮೆ ಹಳೆಯ ಸಂಬಂಧಗಳು, ಒಡನಾಟಗಳು ಕೆಲಕಾಲ ಹಿಂದೆ ಸರಿದಿರಬಹುದು, ಮಸುಕಾಗಿರಬಹುದು. ಆದರೆ ಮತ್ತೆ ಬದುಕಿನ ಒತ್ತಡವೇ, ಕಾಲದ ಪ್ರವಾಹವೇ ಮನಸ್ಸು ಹಳೆಯದರ ಅಗತ್ಯವನ್ನು ಬಯಸುವಂತೆ, ಹುಡುಕುವಂತೆ ಮಾಡುತ್ತದೆ. ಹಳೆಯ ಗೆಳೆತನ, ಒಡನಾಟವೇ ಹೊಸ ಪ್ರಭೆಯಿಂದ ಬೀಗುತ್ತದೆ.

ಹೀಗೆ ಮತ್ತೆ ಚಿಗುರುವ ಗೆಳೆತನದಿಂದ ಇದ್ದಕ್ಕಿದ್ದಂತೆ ಬದುಕಿಗೆ ಹೊಸದಾಗಿ ಏನೋ ಸೇರಿದಂತೆನಿಸುತ್ತದೆ, ಹೊಸ ಉತ್ಸಾಹ ಮೂಡುತ್ತದೆ. ಮನಸ್ಸಿನ ಕಹಿ, ಚಿಗುರು ಕಡಿಮೆಯಾಗುತ್ತದೆ. ಇದೆಲ್ಲ ನನಗೆ ಅನುಭವವಾಗಿದ್ದರೂ ೫೪ ತಲುಪಿರುವ ನಾನು ಮತ್ತೆ ಚಿಗುರುವ, ಚಿಗುರಬೇಕಾದ ಗೆಳೆತನದ ಮೇಲೆಯೇ ಭರವಸೆ ಇಟ್ಟುಕೊಳ್ಳಲಾರೆ. ೧೮ ಆಗಿದ್ದಾಗ, ಮೂವತ್ತರಲ್ಲಿ, ನಲವತ್ತರಲ್ಲಿ ಜಗಳ ಕಾಯಬಹುದು, ಮುನಿಸಿಕೊಳ್ಳಬಹುದು, ಗೆಳೆತನ ಮತ್ತೆ ಚಿಗುರಬಹುದು ಮತ್ತೆ ಚಿಗುರೇ ಚಿಗುರುತ್ತದೆಂದು ಕಾಯಬಹುದು, ಕಾಯಲು ಸಮಯವಿರುತ್ತದೆ, ಆಯಸ್ಸಿರುತ್ತದೆ, ಮುಂದೆ ಬಹುದೀರ್ಘವಾಗಿ. ೫೪ರಲ್ಲಿ ಸಮಯದ ಬಗ್ಗೆ, ಆಯಸ್ಸಿನ ಬಗ್ಗೆ ಅಂತಹ ಭರವಸೆ, ನಿಗದಿಯಿರುವುದಿಲ್ಲ. ಹಾಗಾಗಿ ಮತ್ತೆ ಚಿಗುರುವ ಗೆಳೆತನದ ಸೊಗಸು ಎಷ್ಟೇ ಇದ್ದರೂ, ಹೇಗೇ ಇದ್ದರೂ ಸದ್ಯದ ಗೆಳೆಯರನ್ನು, ಒಡನಾಟವನ್ನು ಯಾವ ಕಾರಣಕ್ಕೂ ದೂರ ಮಾಡಿಕೊಳ್ಳಲಾರೆ, ಮೊಟಕುಗೊಳಿಸಿಕೊಳ್ಳಲಾರೆ. ಮತ್ತೆ ಚಿಗುರುವ ಗೆಳೆತನದ ಸೌಂದರ್ಯವನ್ನು ಈಗ ಇನ್ನೊಬ್ಬರ ಸಂದರ್ಭದಲ್ಲಿ, ಒಡನಾಟದಲ್ಲಿ ಕಂಡು ಖುಷಿಪಡುತ್ತೇನೆ.

ಸ್ವಾನುಭವಕ್ಕೆ ಪ್ರಯತ್ನಿಸುವುದಿಲ್ಲ.

‍ಲೇಖಕರು avadhi

March 10, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This