ಮತ್ತೆ ನೆನಪಾದರು ಖಾಸನೀಸ

n1114014611_2337ಮೊನ್ನೆ ಫೇಸ್ ಬುಕ್ ನಲ್ಲಿ ಅಡ್ಡಾಡುತ್ತಾ ಇರುವಾಗ ರಮೇಶ್ ಗುರುರಾಜ ರಾವ್ ಅವರು ಖಾಸನೀಸರ ಕಥೆಗಳನ್ನು ಓದುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಖಾಸನೀಸರ ಕಥೆಗಳ ಬಗ್ಗೆ ಪಿ ಲಂಕೇಶ್ ಆಗ್ಗಿಂದಾಗ್ಗೆ ಬರೆಯುತ್ತಾ ಹುಚ್ಚೆಬ್ಬಿಸಿದ್ದರು. ಇದರ ಮುಂದುವರಿಕೆ ಎಂಬಂತೆ ಕನ್ನಡ ಟೈಮ್ಸ್ ನಲ್ಲಿ ಕಿ ರಂ ನಾಗರಾಜ್ ‘ಖಾಸನೀಸ ಎಂಬ ರುದ್ರವೀಣೆ’ ಎನ್ನುವ ಆಪ್ತ, ಮನ ಕಲಕುವ ಬರಹ ಬರೆದಿದ್ದರು. ರಮೇಶ್ ಅವರಿಗೆ ನೀವು ಓದುತ್ತಿರುವ ಪುಸ್ತಕದ ಬಗ್ಗೆ ಏಕೆ ಬರೆಯಬಾರದು ಎಂದು ‘ಅವಧಿ’ ಕೇಳಿತು. ರಮೇಶ್ ಬರೆದ ಬರಹ ಇಲ್ಲಿದೆ. ಪೂರಕ ಓದಿಗಾಗಿ ಕಿ ರಂ ಅವರ ಬರಹವನ್ನೂ ನೀಡುತ್ತಿದ್ದೇವೆ .
ರಮೇಶ್ ಗುರುರಾಜರಾವ್
ಯಾವುದೇ ಒಬ್ಬ ನಟ ಅಥವ ನಟಿಯ ಬಗ್ಗೆ ಅಂತರ್ಜಾಲ ಪ್ರಪಂಚದಲ್ಲಿ ಹುಡುಕಬೇಕು ಅಂದ್ರೆ, ನೂರಾರು ಹಾಳೆಗಳು ಪರದೆಯ ಮೇಲೆ ಧೊಪ್ಪೆಂದು ಬಂದು ಬೀಳುತ್ತವೆ.. ಕನ್ನಡ ಸಾಹಿತ್ಯ ಲೋಕ ಕಂಡ ಅತ್ಯದ್ಭುತ ಕಥೆಗಾರ ರಾಘವೇಂದ್ರ ಖಾಸನೀಸರ ಹೆಸರಿನ ಮೇಲೆ ಹುಡುಕಿದಾಗ, ಧೊಪ್ಪೆಂದು ಬೀಳದೆ ಕಷ್ಟ ಪಟ್ಟು ತೆರೆಯ ಮೇಲೆ ನುಸುಳಿ ಬಂದದ್ದು ಕೇವಲ ಬೆರಳೆಣಿಕೆಯಷ್ಟು ಹಾಳೆಗಳು. ಇಂದಿನ benchmark ಪ್ರಕಾರ ಈ ಪರಿ 2 – 3 ಫಲಿತಾಂಶಗಳು ಖೇದಕರವೇ. ಖಾಸನೀಸರ ಕಥೆಗಳಲ್ಲಿ ಮಾತ್ರ ವಿಷಾದ ಅಡಗಿದೆ ಎಂದರೆ ಅದು ಸುಳ್ಳು ಮಾತಾಯಿತು. ಅವರನ್ನು ಗುರುತಿಸದ ನಮ್ಮ ಕನ್ನಡ ಸಾಹಿತ್ಯ ಲೋಕದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಕೂಡ ವಿಷಾದವೇ… ಹೀಗೆ ಖಾಸನೀಸರ ಬದುಕು, ಬರಹ, ಅವರ ಬದುಕಿನ ನಂತರ ಅವರ ಬಗ್ಗೆ ಬರಹ… ಎಲ್ಲ ಕಡೆ ವಿಷಾದ, ಸಂಕಟ.
Copy of khasaneesa
ಇಷ್ಟಾಗಿ ನನಗೂ ಕೂಡ ಅವರ ಹೆಸರು ಪರಿಚಯವಿತ್ತೆ ವಿನಃ, ಅವರ ಕಥೆಗಳಲ್ಲಿ ಓದಿದ್ದು ಮೊನಾಲಿಸ ಮಾತ್ರವೇ… ವ್ಯಾಸರಂಥ ಕಥೆಗಾರರ ಸಾಲಿನಲ್ಲಿ ನಿಲ್ಲುವವರು ಗುಬ್ಬಿ ದೇಹದ ದೈತ್ಯ ಪ್ರತಿಭೆ ರಾಘವೇಂದ್ರ ಖಾಸನೀಸರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸರಿಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಖಾಸನೀಸರು, ವಿಶ್ವೇಶ್ವರ ಭಟ್ಟರು ಅವರ ಮುನ್ನುಡಿಯಲ್ಲಿ ಹೇಳುವಂತೆ “ಮಹಾ ಮೌನಿ…… ತನ್ನ ಕಥೆಗಳ ಮೂಲಕ ಅಲ್ಲದೆ ಮತ್ತೊಂದು ರೀತಿಯಲ್ಲಿ ಪ್ರಕಟಗೊಳ್ಳಲಾರೆ ಅಂದು ಪಟ್ಟು ಹಿಡಿದು ಕೂತವರು”.
ಪ್ರಿಸಂ ಬುಕ್ಸ್ ತನ್ನ ಕಥಾ ಮಾಲಿಕೆಯ ಸಾಲಿನಲ್ಲಿ ಹೊರ ತಂದ “ರಾಘವೇಂದ್ರ ಖಾಸನೀಸರ ಸಮಗ್ರ ಕಥೆಗಳು” ಕೇವಲ 9 ಕಥೆಗಳಿದ್ದರೂ, ಪ್ರತಿಯೊಂದು ಕಥೆ ನಮ್ಮನ್ನು ಅದರ ಪಾತ್ರಗಳಿಗೆ ಹೋಲಿಸಿ ನೋಡಿಕೊಳ್ಳುವಂತೆ ಮಾಡುವ ತಾಕತ್ತು ಹೊಂದಿದೆ. ಇಷ್ಟಾಗಿ ಖಾಸನೀಸರು ಬರೆದದ್ದು ಸುಮಾರು 25 ಕಥೆಗಳು. ಸಾಹಿತ್ಯ ಲೋಕದ ಅಂಕಿ ಅಂಶಗಳನ್ನು ನೋಡಿದರೆ ಅದರ ಮಾನದಂಡದ ಪ್ರಕಾರ ಇದು ಕಡಿಮೆಯೇ. ಖಾಸನೀಸರ ಅಷ್ಟೂ ಕಥೆಗಳು ಅಮೂಲ್ಯವಾದ ಗಟ್ಟಿಗಳೇ. ಪ್ರತಿಯೊಂದು ಕಥೆ ಕೂಡ ಜನ್ಮ-ಜನ್ಮಾಂತರಕ್ಕಾಗುವಷ್ಟು ಛಾಯೆಗಳನ್ನು ಉಳಿಸಿಬಿಡುತ್ತವೆ.
ಖಾಸನೀಸರಿಗೂ ರೈಲ್ವೆ ನಿಲ್ದಾಣಕ್ಕೂ ಅದೇನು ಸಂಬಂಧವೋ…. ಪ್ರಿಸಂ ಕಥಾ ಮಾಲಿಕೆಯ ಸಮಗ್ರ ಕಥೆಗಳಲ್ಲಿ “ಮಂದಿಯ ರಹಸ್ಯ” “ಅಪಘಾತ” “ಹೀಗೂ ಇರಬಹುದು” “ಅಲ್ಲಾ ಉದ್ದೀನನ ಅದ್ಭುತ ದೀಪ” ಹೀಗೆ ಅವರ ಸುಮಾರು ಕಥೆಗಳು ಆರಂಭವಾಗುವುದೇ ರೈಲ್ವೆ ಹಳಿಗಳ ಮೇಲೆ, ನಿರ್ಜನವಾದ ರೈಲ್ವೆ ನಿಲ್ದಾಣಗಳ ಮೇಲೆ.. ಓಡುವ ರೈಲು, ಓಡುವ ಶಕ್ತಿಯನ್ನು ಕೆಲ ಕಾಲ ಹಿಡಿದಿಟ್ಟುಕೊಳ್ಳುವ ರೈಲ್ವೆ ನಿಲ್ದಾಣಗಳು ಇವುಗಳನ್ನೆಲ್ಲ ಅರ್ಥೈಸುವುದು ನನ್ನ ಮಟ್ಟಿಗೆ ಕೊಂಚ ಕಷ್ಟವೇ…
“ಮಂದಿಯ ರಹಸ್ಯ” ಕಥೆಯಲ್ಲಿ ಹೆಣ್ಣಿನ ಮನಸ್ಸಿನ ಹೊಯ್ದಾಟ ತುಯ್ದಾಟಗಳನ್ನು, ಸಣ್ಣ ಕಥೆಗಳಲ್ಲಿ ಇಷ್ಟೊಂದು ಸೂಕ್ಷ್ಮವಾಗಿ ತಂದದ್ದು ಖಾಸನೀಸರ ಶಕ್ತಿಯೇ. ಓಡುವ ರೈಲು, ನಿರ್ಜನ ರೈಲು ನಿಲ್ದಾಣ, ಮಂದಾಕಿನಿಯ ಬದುಕಿನೊಂದಿಗೆ ಥಳುಕು ಹಾಕಿಕೊಳ್ಳುತ್ತವೆ. ಕಥೆಯ ಆರಂಭ ರೈಲಿನ ಸಿಗ್ನಲ್ ನೊಂದಿಗೆ ಪ್ರಾರಂಭವಾಗಿ, ಕೊನೆಯಾಗುವುದು ವಿಶಾದಕರವಾಗಿಯೇ. “ಸಾಸವಾಡದ ಹಸಿರು ಕೆಂಪಾಗುವ ದೀಪಗಳು ಕನಸಿನಲ್ಲಿ ಅಣಕಿಸಿ ಹೋಗುತ್ತಿದ್ದವು. ಗೋಳಗುಮ್ಮಟದ ಬಸಿರಲ್ಲಿ ಹುಟ್ಟಿ ಸಾಯುವ ದನಿಗಳು ಹೇಳುತ್ತಿದ್ದವು: “ಕಂಡ ಗಂಡೆಲ್ಲ ಮದುವೆಯಾಗುತ್ತೇವೆಂದು ಬರೆದು ಕೊಡಬೇಕೇ ? ಆಕಾಂಕ್ಷೆ ನಿನ್ನದು, ಅದಕ್ಕಾಗಿ ನೀನೇ ಅನುಭೋಗಿಸಬೇಕು”. ಗೋಳಗುಮ್ಮಟದಲ್ಲಿ ದನಿ ಒಂದಕ್ಕೆ ಹತ್ತಾದರೆ ಆ ತಪ್ಪು ಅದರದೇ ವಿನಾ ಮಾತಾಡಿದವನದಲ್ಲ”
ಖಾಸನೀಸರ ಕಥೆಗಳಲ್ಲಿ ಮನುಷ್ಯ ಮನಸ್ಸುಗಳ ನಡುವಣ ತಿಕ್ಕಾಟ ತೊಳಲಾಟ ಎದ್ದು ಕಾಣುತ್ತದೆ… ಅದು “ಅಪಘಾತ” ಆಗಿರಬಹುದು ಅಥವಾ “ಪುರುಷನ ಮುಂದೆ ಮಾಯೆ” ಕಥೆಯಲ್ಲಿ ಬರುವ ರಾಮಬಾವು ರತ್ನಪಾರಖಿ ಆಗಿರಬಹುದು. ಯಾವತ್ತಿಗೂ ಇರುವ ದ್ವಂದ್ವಗಳು, ನೋವುಗಳು, ರಪ್ಪನೆ ಬೀಸುತ್ತವೆ… ನಮ್ಮನ್ನು ಮತ್ತೆ ಮತ್ತೆ ನಮ್ಮ ಅಸ್ತಿತ್ವದ ಬಗ್ಗೆ, ನಮ್ಮ ವ್ಯವಸ್ಥೆಯ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತವೆ. ಅದಕ್ಕೆ ಮೊದಲೇ ಹೇಳಿದ್ದು. ಪ್ರತಿಯೊಂದು ಕಥೆ ನಮ್ಮನ್ನು ಅದರ ಪಾತ್ರಗಳಿಗೆ ಹೋಲಿಸಿ ನೋಡಿಕೊಳ್ಳುವಂತೆ ಮಾಡುವ ತಾಕತ್ತು ಹೊಂದಿದೆ ಎಂದು.
ವೃದ್ಧಾಪ್ಯದ ಬಗೆಗೆ ಖಾಸನೀಸರು “ಪುರುಷನ ಮುಂದೆ ಮಾಯೆ” ಕಥೆಯಲ್ಲಿ ಮಾತನಾಡುತ್ತಾರೆ. ಒಂದು ಕುಟುಂಬದಲ್ಲಿ ತಂದೆ ತಾಯಿ ಮಗ ಮಗಳು ಈ ನಾಲ್ಕು ಮಂದಿಯ ನಾಲ್ಕು ದಿಕ್ಕುಗಳ ಹೊಯ್ದಾಟವನ್ನು ಎದ್ದು ಕಾಣುವಂತೆ ನಮಗೆ “ಅಶ್ವಾರೋಹಿ” ಕಥೆಯಲ್ಲಿ ಕಟ್ಟಿ ಕೊಡುತ್ತಾರೆ…. ಅದೇ ಖಾಸನೀಸರ ತಾಕತ್ತು… ವಿಷಾದವೆಂದರೆ… ಕಥೆಗಳು ಸುಖಾಂತವಾದಂತೆ ಕಂಡರೂ, ಒಳಗೆ, ಕಹಿ ಹಾಗೇ ಉಳಿದುಬಿಡುತ್ತದೆ. ಓದಿ ಮುಗಿಸಿದ ನಂತರವೂ ನಮ್ಮನ್ನು ವಿಪರೀತ ಕಾಡುವ ಪಾತ್ರಗಳೊಂದಿಗೆ ನಮ್ಮನ್ನು ತೇಲಿ ಬಿಡುತ್ತಾರೆ ಖಾಸನೀಸರು…. ವಿಷಾದವೂ ಒಂದು ಭಾವ… ಅದರೊಂದಿಗೆ ಬದುಕಲೇಬೇಕಾದ ಅನಿವಾರ್ಯತೆಯನ್ನು ಖಾಸನೀಸರ ಕಥೆಗಳು ನಮ್ಮ ಮನಸ್ಸಿನ ಎಲ್ಲ ಕಡೆ ಹರಡಿ ಕಾಡುತ್ತವೆ… ಇದಿಷ್ಟೇ ಸಾಕು ಈ ಕಥೆಗಳ ಶಕ್ತಿಯನ್ನು ಕಾಣುವುದಕ್ಕೆ

ಖಾಸನೀಸ ಎಂಬ ರುದ್ರವೀಣೆ

ಕಿ ರಂ ನಾಗರಾಜ
ಕತೆಗಾರ ರಾಘವೇಂದ್ರ ಖಾಸನೀಸರು ನನಗೆ ೭೦ರ ದಶಕದಲ್ಲಿ ಪರಿಚಿತರಾದರು. ಹೀಗೆ ಪರಿಚಯ ಆದವರು ಅನಂತರದ ದಿನಗಳಲ್ಲಿ ತುಂಬ ಆತ್ಮೀಯರೇ ಆದರು. ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯದ ಅಧಿಕಾರಿಗಳಾಗಿದ್ದ ಅವರು ಅಲ್ಲಿನ ತಾಂತ್ರಿಕ ಶಾಖೆಯಲ್ಲಿದ್ದರು. ಪ್ರತಿನಿತ್ಯ ಒಮ್ಮೆಯಾದರೂ ಅವರು ನಮ್ಮೊಂದಿಗೆ, ಅಂದರೆ ಕೆ.ವಿ.ನಾರಾಯಣ, ಬಸವರಾಜ ಕಲ್ಗುಡಿ, ಎಸ್.ಶಿವಣ್ಣ, ಡಿ.ಆರ್.ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಸೇರಿಕೊಳ್ಳುತ್ತಿದ್ದರು. ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಟೀ ಕುಡಿದು ಅಥವಾ ಆ “ಆಚರಣೆ”ಯನ್ನು ಮುಗಿಸಿಕೊಂಡು ಗ್ರಂಥಾಲಯದ ಕಡೆಗೆ ಹೊರಡುತ್ತಿದ್ದರು. ನಮ್ಮ “ಗುಂಪು” ಚಹಾದತ್ತ ಹೋಗುತ್ತಿದ್ದಾಗ ಅವರ ಭೇಟಿ ಅಕಸ್ಮಾತ್ ಎಂಬಂತೆಯೇ ಸಹಜವಾಗಿಯೇ ಆಗುತ್ತಿತ್ತು. ನಾನು ಅವರನ್ನು ಮತ್ತೆ ಒಂದರ್ಧ ಟೀ ಕುಡಿಯಲು ಪ್ರೇರೇಪಿಸುತ್ತಿದ್ದೆ. ಅವರು ಮತ್ತೆ ಟೀ ಕುಡಿಯಲು ಒಲ್ಲೆ ಎಂದದ್ದು ನನಗೆ ಗೊತ್ತೇ ಇಲ್ಲ. ಅಂಥ ಅದಮ್ಯ ಟೀ ಪ್ರೇಮಿಯನ್ನು ನಾನು ನೋಡಿಯೇ ಇಲ್ಲ. ತುಂಬ ಇಷ್ಟಪಟ್ಟು ಟೀ ಕುಡಿಯುವವರೆಂದರೆ ಅವರೇ ಸೈ. ಟೀ ನಿಮಿತ್ತವಾಗಿ ನನ್ನ – ಅವರ ನಡುವೆ, ಗೇಲಿಯಿಂದ ಗಂಭೀರದ ತನಕ ಅಂದಿನ, ಹಿಂದಿನ ಅನೇಕ ಸಂಗತಿಗಳು ಬಂದು ಹೋಗುತ್ತಿದ್ದವು. ಅವರನ್ನು ನಾನು ಪೂನಾವಾಲಾ ಎಂದೇ ಗುರುತಿಸುತ್ತಿದ್ದೆ. ಅದು ಅವರಿಗೆ ಮತ್ತೆ ಹುರುಪನ್ನೇ ಕೊಡುತ್ತಿತ್ತು. ಗೋಕಾಕರು ಕವಿತೆಯನ್ನು ಗಡಗಡಿಸಿ, ದಪ್ಪ ಗಂಟಲಿನಲ್ಲಿ ನಡುಕದ ಶೈಲಿಯಲ್ಲಿ ಓದುತ್ತಿದ್ದುದನ್ನು ಕುರಿತು ನಾನು ಅವರನ್ನು “ಮಾಗಿ” ಕವಿ ಎಂದು ಕರೆದಿದ್ದೆ. ಖಾಸನೀಸರು ಆ ಮಾತನ್ನು ತುಂಬ ಇಷ್ಟಪಟ್ಟರು. ಅಂದಿನಿಂದ ನಮ್ಮಿಬ್ಬರ ಮಾತಿನ ನಡುವೆ ಗೋಕಾಕರು “ಮಾಗಿ”ಯೇ ಆದರು. ಬೇಂದ್ರೆ ಮಾತು ಬಂದಾಗ ಖಾಸನೀಸ ಉತ್ಸಾಹಿತರಾಗುತ್ತಿದ್ದರು. ಲೈಬ್ರರಿಯ ತಾಂತ್ರಿಕ ವಿಭಾಗಕ್ಕೆ ಪರಿಶೀಲನೆಗಾಗಿ ಬಂದ ಹೊಸ ಪುಸ್ತಕಗಳ ಬಗ್ಗೆ ಗಮನ ಸೆಳೆದು “ಬಂದು ನೋಡಿ” ಎಂದು ಹೇಳಿ ನಮಗೆಲ್ಲ ಪುಸ್ತಕ ಪ್ರೀತಿಯನ್ನು ಬೆಳೆಸಿದರು. ಅನೇಕ ಬಾರಿ ಅವರನ್ನು ಬೀರು ಕುಡಿಯಲು ಮೆಜೆಸ್ಟಿಕ್ ಕಡೆಗೆ ಕರೆದುಕೊಂಡು ಬಂದದ್ದಿದೆ. ಒಂದೇ ಒಂದು ಬೀರ್ ಕುಡಿದು ಸಾಕಷ್ಟು ಸಮಯ ಕಳೆದು ಅವರು ರಾಜಾಜಿನಗರದ ಕಡೆಗೆ ಹೊರಡುತ್ತಿದ್ದರು.
ಖಾಸನೀಸರು ಆಗ್ಗೆ ಇನ್ನೂ ತಮ್ಮ ಕತೆಗಳ ಸಂಕಲನವನ್ನು ಪ್ರಕಟಿಸಿರಲಿಲ್ಲ. ಬರೆದ ಮೂರು ನಾಲ್ಕು ಕತೆಗಳ ಮೂಲಕವೇ ಕಥಾಸಕ್ತರನ್ನು ಆವರಿಸಿಕೊಂಡು ಅವರನ್ನು ತುದಿಗಾಲಿನ ಮೇಲೆ ನಿಲ್ಲಿಸಿದ್ದರು. ಆ ಕಾಲಕ್ಕಾಗಲೇ ಕಥಾಸಂಕಲನಗಳನ್ನು ಪ್ರಕಟಿಸಿದ್ದ ಅನೇಕ ಮುಖ್ಯ ಕತೆಗಾರರ ಮಧ್ಯೆ ಖಾಸನೀಸರು ತಮ್ಮದೇ ಆದ ವಿಭಿನ್ನ ಕತೆಗಳ ಮೂಲಕ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡವರಾಗಿದ್ದರು. ಅವರು ಎಂದೂ ತಮ್ಮ ಕತೆಗಳ ಬಗ್ಗೆ ಏನನ್ನೂ ಹೇಳಿದವರಲ್ಲ. ಯಾರೇ ಆಗಲಿ, ಅವರ ಕತೆಗಳ ಬಗ್ಗೆ ಅಷ್ಟಿಷ್ಟು ಮಾತನಾಡಲು ಆರಂಭಿಸಿದರೆ ಮೌನವಾಗುತ್ತಿದ್ದರು. ತಮ್ಮ ಕೃತಿಗಳ ಬಗೆಗೆ ಹೀಗೆ ದಿವ್ಯ ನಿರ್ಲಕ್ಷ್ಯ ತೋರುವ ಲೇಖಕರು ಬೆರಳೆಣಿಕೆಯಷ್ಟು ಮಾತ್ರ ಇರಬಹುದು. ಈಗಂತೂ ಇಂಥ ಲೇಖಕರು ಅದೆಷ್ಟು ಮಂದಿ ಇದ್ದಾರು?
ಖಾಸನೀಸರ ಕತೆಗಳು ಸೂಕ್ಷ್ಮವೂ, ಒಳಹೊಕ್ಕು ಪರಿಭಾವಿಸಿದರೆ ಭಯಾನಕವೂ ಆದ ಶ್ರದ್ಧೆಗಳ ದ್ವಂದ್ವಗಳಿಗೆ ಎದುರಾದ ಕತೆಗಳು. ಸಮಾಜದ ನೆಲೆಯನ್ನು ಅದೆಷ್ಟೇ ಐಕ್ಯಕಲ್ಪನೆಯ ದೃಷ್ಟಿಯಿಂದ ನೋಡಿದರೂ ಅಲ್ಲಿ ಐಕ್ಯತೆ ಹಾಗೆ ಇಲ್ಲವೆನ್ನುವುದೇ ಒಂದು ಮಹತ್ವದ ವಿಸಂಗತಿ. ಛಿದ್ರಗೊಂಡಿರುವ ಮನುಷ್ಯ ಸಂಬಂಧಗಳು, ಕೌಟುಂಬಿಕ ಸಂಬಂಧಗಳು ತನ್ನ ಮೇಲು ನೆಲೆಗಳ ಅನುಭೂತಿಗಳು ಅರ್ಥಾತ್ ಫೀಲಿಂಗ್ ಗಳು ಹಾಗೆ ಇಲ್ಲ ಅಥವಾ ನಿರ್ಜೀವಗೊಂಡಿವೆ ಎಂಬ ಭಯಾನಕ ಸತ್ಯಗಳನ್ನು ನಿರ್ಮಮ ಭಾವದಿಂದ ಖಾಸನೀಸರ ಕತೆಗಳು ಸ್ಫೋಟಿಸುತ್ತವೆ. ಸಾಮಾಜಿಕ ಅಪರಾಧದ ಗುಪ್ತ ವಲಯದ ಸಮಾಧಾನ ಸ್ಥಿತಿ ಮತ್ತು ಅದೇ ವಲಯ ಬಹಿರಂಗಗೊಂಡಾಗ ಏರ್ಪಡುವ ಕ್ರಿಯೆ, ಪ್ರಕ್ರಿಯೆಗಳನ್ನು ಅವರು ತೋರುವ ಬಗೆ ಕನ್ನಡ ಸಣ್ಣಕತೆಗಳ ಜಗತ್ತಿನಲ್ಲಿ ತುಂಬ ವಿಭಿನ್ನವಾದದ್ದು. ಮನುಷ್ಯ ಲೋಕ ಒಂದು ಬಂಧನದ ಲೋಕ. ಇದು ಅವನೇ ನಿರ್ಮಿಸಿಕೊಂಡದ್ದೋ? ಹಾಗೆ ಅವನ ಸುತ್ತ ನಿರ್ಮಿತಗೊಂಡದ್ದೊ? ಹೇಳಲು ಬರುವಂತಿಲ್ಲ. ಮನುಷ್ಯನ ಸುತ್ತ ಹೇಗೆ ಗುಪ್ತಶಕ್ತಿಗಳ ಅನೇಕ ಹೆಣಿಗೆಗಳು ವಿವರಿಸಲಾಗದಷ್ಟು ಗಾಢವಾಗಿ ಸಿಲುಕಿದೆ ಎಂಬುದು ಅವರ ಕತೆಗಳಲ್ಲಿ ತನ್ನಿಂದ ತಾನೇ ಸಹಜವಾಗಿ ಹಬ್ಬಿಕೊಂಡಿದೆ. ಒಬ್ಬ ಕತೆಗಾರ ತನ್ನ ನಿಲುವುಗಳನ್ನು, ಧೋರಣೆಗಳನ್ನು ಹೇಳಲು ಅನೇಕ ಬಾರಿ ಉತ್ಸುಕನಾಗುವುದುಂಟು. ಆದರೆ ಖಾಸನೀಸರು ಕತೆಯನ್ನು ಕಟ್ಟುವ ಕೆಲಸಕ್ಕಷ್ಟೇ ನಿಂತು ಓದುಗರು ತಮ್ಮ ತಮ್ಮ ಕಲ್ಪನೆಗಳನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಕತೆಗಾರರು. ಹೀಗಾಗಿ ಅವರ ಕತೆಗಳು ನನಗೆ ಪ್ರಿಯವಾಗಿವೆ.
ಖಾಸನೀಸರ “ತಬ್ಬಲಿಗಳು”, “ಅಲ್ಲಾವುದ್ದೀನನ ಅದ್ಭುತದೀಪ”ದಂಥ ಕತೆಗಳು ಕನ್ನಡ ಸಣ್ಣ ಕತೆಗಳ ವಲಯದಲ್ಲಿ ಕ್ಲಾಸಿಕ್ ಗಳೇ ಆಗಿವೆ. ಈ ಜಗತ್ತಿನಲ್ಲಿ ಯಾರಾದರೂ ಯಾರನ್ನಾದರೂ ಸಂಧಿಸಲು ಸಾಧ್ಯವೇ? ಹಾಗೆ ಸಂಧಿಸಲು ಯಾರಿಗೂ ಯಾವ ಅವಕಾಶಗಳೂ ಹಾಗೆ ಇಲ್ಲ. ಅದರಲ್ಲೂ ಪಿತೃಗಳ ಅಧಿಕಾರದ ಗಡಿರೇಖೆಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲದಂಥ ಕಠೋರ ಅಸಹಾಯಕ ಸ್ಥಿತಿ ತುಂಬ ಗೂಢವೂ, ಅಪಾರ ನೋವಿನಿಂದ ಕೂಡಿದ್ದೂ ಆಗಿದೆ ಎಂಬ ಸೂಕ್ಷ್ಮ ಧ್ವನಿ ಅವರ ಕತೆಗಳ ಆಳದಲ್ಲಿ ಹುದುಗಿದೆ. ಸಂಬಂಧಗಳ ಒಳಸುಳಿಗಳೊಂದಿಗೆ ಆಧ್ಯಾತ್ಮದ ಬಿಗಿತವೂ ಹೆಣೆದುಕೊಂಡಿರುವುದರಿಂದ ಮನುಷ್ಯ ಲೋಕಕ್ಕೆ ಯಾವ ಭರವಸೆಯಾಗಲೀ, ನಿರ್ದಿಷ್ಟತೆಯೂ ಇಲ್ಲ ಎನ್ನುವುದನ್ನು ಖಾಸನೀಸರ ಕತೆಗಳು ಹೇಳುತ್ತಿವೆ.
ನೋವನ್ನು ಮರೆಸುವುದಕ್ಕಿಂತ ನೋವನ್ನು ಲೋಕಕ್ರಮವನ್ನಾಗಿ ರೂಪಿಸಿದ ಖಾಸನೀಸರಿಗೆ ನನ್ನ ನಮಸ್ಕಾರಗಳು

‍ಲೇಖಕರು avadhi

October 21, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This