ಮತ್ತೆ ಮತ್ತೆ ಅಡಿಗ

‘ಸಿರಿ’ ಬಂದ ಕಾಲಕ್ಕೆ

mn211

tಮೃಗನಯನಿ 

 

ಅರವಿಂದ್ ಅಡಿಗರ ‘ದಿ ವೈಟ್ ಟೈಗರ್’ ಓದುತ್ತಿದ್ದರೆ, ಗೋಪಾಲ ಕೃಷ್ಣ ಅಡಿಗರ ‘ಜಗದ್ಗುರು ಆಗ’ ಪದ್ಯದ ಸಾಲುಗಳು ನೆನಪಾಗುತ್ತಿದ್ದವು.
ಬರೀ ಬಡಾಯಿಯ ದೇಶಭಕ್ತಿ ನಮ್ಮದು. ನಮ್ಮ
ಬೆನ್ನನ್ನು ನಾವೇ ತಟ್ಟಿಕೊಂಡು ಕುಣಿದಾಡುತ್ತಾ
ನಮ್ಮ ಗರಿಮೆಯನ್ನು ನಾವೇ ಬಣ್ಣಿಸುವ ದರಿದ್ರ ಜನ
ಯಾರೋ ಎಲ್ಲೋ ಏಕೋ ಒಂದು ಒಳ್ಳೆಯ ಮಾತನಾಡಿದರೆ
ಅದನ್ನೆ ಸಹಸ್ರ ಸಹಸ್ರ ಕಂಠದಿ ಹಾಡಿ ಅದನ್ನೇ
ದೇಶದುದ್ದಕ್ಕೂ ಅಗಲಕ್ಕೂ ಸಾರುತ್ತಾ ನಮ್ಮಾಧುನಿಕ
ದೈನ್ಯ ಕೈಂಕರ್ಯಗಳ ಮರೆಸಳೆಳಸುವ ಮಂದಿ
ಈ ನಮ್ಮ ಭಾರತದ ಬಂದಿ ವಂದಿ
ದಿ ವೈಟ್ ಟೈಗರ್ ಕಾದಂಬರಿಯ ನಾಯಕನಿಗೂ (ನಾಯಕನಾ?) ಹೀಗೇ ಅನ್ನಿಸಿರಬೇಕು, ಅದಕ್ಕೇ ಚೈನಾದ ಪ್ರಧಾನ ಮಂತ್ರಿ ಭಾರತಕ್ಕೆ ಕೆಲವು ದಿನಗಳ ಭೇಟಿಗೆ ಬರುತ್ತಿದ್ದಾರೆ ಎಂಬುದನ್ನು ರೇಡಿಯೋದಲ್ಲಿ ಕೇಳಿಸಿಕೊಂಡ ???? ಚೈನಾದ ಪ್ರಧಾನ ಮಂತ್ರಿಗೆ ನಮ್ಮ ದೇಶದ ರಾಜಕಾರಣಿಗಳು ದೇಶದ ಚಿತ್ರಕ್ಕೆ ಚಂದದ ಬಣ್ಣ ಬಳಿದು ತೋರಿಸುವ ಮೊದಲೇ ತಾನು ತನ್ನ ಕಥೆಯನ್ನು ಹೇಳುವುದರ ಮೂಲಕ ದೇಶದ ನೈಜ ಚಿತ್ರವನ್ನು ಅವರ ಮುಂದಿಡಬೇಕೆಂದು ನಿರ್ಧರಿಸಿ ಅವರಿಗೆ ಏಳು ಪತ್ರಗಳನ್ನು ಬರೆಯುತ್ತಾನೆ. ಚೈನಾದ ಪ್ರಧಾನ ಮಂತ್ರಿಗಳಿಗೆ ಏಳು ಪತ್ರಗಳನ್ನ ಬರೆಯುತ್ತಾನೆ ಅನ್ನುವುದನ್ನ ಕಲ್ಪಿಸಿಕೊಳ್ಳಲು ಸ್ವಲ್ಪ ಕಷ್ಟವಾದರೂ ಭಾರತದ ನೈಜ ಚಿತ್ರಣ ಎಷ್ಟು ನೈಜ ಎನ್ನುವುದನ್ನು ತಿಳಿದುಕೊಳ್ಳಲು ಓದತೊಡಗಿದೆ.
aravjpgಚೈನಾದ ಪ್ರಧಾನಿಗೆ ಬರೆದ ಮೊದಲ ಪತ್ರದಲ್ಲೇ ಕಥೆ ಹೇಳುತ್ತಿರುವವನು ಒಂದು ಕೊಲೆ ಮಾಡಿದ್ದಾನೆ ಎಂದು ಗೊತ್ತಾದಾಗ ಈ ಕಾದಂಬರಿ ಏನಾದರೂ, ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾ ತಾನು ಮಾಡಿದ ತಪ್ಪುಗಳನ್ನೆಲ್ಲಾ ಪಾದ್ರಿಯ ಮುಂದೆ ಹೇಳಿಕೊಳ್ಳುವ ಕ್ಯಾಥೋಲಿಕ್ ನಂತೆ ಬಲರಾಮ್ ಹಲ್ವಾಯಿ ಕೂಡಾ ಚೈನಾದ ಪ್ರಧಾನ ಮಂತ್ರಿಯ ಮುಂದೆ ತಪ್ಪೊಪ್ಪಿಗೆ ಮಾಡಿಕೊಳ್ಳುವ ಕಥೆಯೋ? ತಾನು ಮಾಡಿದ ತಪ್ಪಿಗೆ ಕಾರಣಗಳನ್ನು ಒದಗಿಸುತ್ತಿದ್ದಾನ? ಅಂತ ಅನುಮಾನವಾದರೂ ಅಂಥದೇನೂ ಆಗದೆ, ನಮ್ಮ ನಾಯಕ ಬಲರಾಮ್ ತಾನು ಮಾಡಿದ ಕೃತ್ಯವೂ ದೇಶದ ಚಿತ್ರಣದ ಒಂದು ಭಾಗದಂತೆ, ಅದೇ ನಿರುಮ್ಮಳತೆಯಿಂದ ವಿವರಿಸಿಕೊಂಡು ಹೋಗುತ್ತಾನೆ.
ಒಂದು ಹೆಸರೇ ಇಲ್ಲದೆ ಬರೀ ಹುಡುಗ (ಮುನ್ನ) ಎಂದು ಕರೆಸಿಕೊಳ್ಳುತ್ತಿದ್ದ ಹುಡುಗನಿಂದ ಶುರುವಾಗುವ ಕಥೆ ಅವನು ಬಲರಾಮ್ ಆಗಿ ಸ್ಕೂಲ್ ಇನ್ಸ್ಪೆಕ್ಟರ್ ನಿಂದ ‘ಬಿಳಿ ಹುಲಿ’ ಎಂದು ಹೊಗಳಿಸಿಕೊಂಡು, ನಿಷ್ಠಾವಂತ ಸೇವಕನಾಗಿ ಕೊನೆಗೆ ‘ರೂಸ್ಟರ್ ಕೂಪ್’ನಿಂದ ಹೊರಬಂದು, ತಾನು ಹಿಂದೊಮ್ಮೆ ಕರೆಸಿಕೊಂಡಂತೆ ನಿಜವಾಗಲೂ ವೈಟ್ ಟೈಗರ್ ಆಗುವವನ ಕಥೆ, ಮೊದಲ ಪತ್ರದಲ್ಲಿಯೇ ಅವನು ತನ್ನ ಮಾಲೀಕನನ್ನ ಕೊಲೆ ಮಾಡಿ ಬಂದಿರುತ್ತಾನೆ ಎಂದು ತಿಳಿದರೂ ಓದಿಸಿಕೊಂಡು ಹೋಗುತ್ತದೆ ಎನ್ನುವುದಾದರೆ ಆ ಶ್ರೇಯಸ್ಸೆಲ್ಲಾ ಅರವಿಂದ ಅಡಿಗ ಕಟ್ಟಿಕೊಡುವ ಬಲರಾಮ್ ಜಗತ್ತು, ಬಲರಾಮನ ಸ್ವಭಾವ ವೈಚಿತ್ರ್ಯ- ಅವನ ಮುಗ್ಧತೆ, ಆಸೆ, ಆಕಾಂಕ್ಷೆ, ಸಂಕಟ, ದುಃಖ, ದುಮ್ಮಾನ, ದಾಸ್ಯ, ಕುಟಿಲತೆ, ಕ್ರೌರ್ಯ, ಘಾಸಿ ಮಾಡುವ ಕ್ರೂರ ವಿನೋದ ಎಲ್ಲಕ್ಕೆ ಸಲ್ಲುತ್ತದೆ.
ವಿಶೇಷವಾಗಿ ಆಕರ್ಷಿಸುವುದು ಆ ‘ರೂಸ್ಟರ್ ಕೂಪ್’ನ ಚಿತ್ರಣ. ನಮ್ಮ ಸಂತೆಗಳಲ್ಲಿ, ಒಂದು ರಾಶಿ ಕೋಳಿ ಹುಂಜಗಳನ್ನು ಒಟ್ಟಿರುವ ಪಂಜರಗಳನ್ನು ನೋಡಿರುತ್ತೇವಲ್ಲ, ಅವುಗಳಲ್ಲೇ ಒಂದನ್ನು ತೆಗೆದು ಕಟುಕ ಕತ್ತರಿಸುತ್ತಿರುತ್ತಾನೆ, ಅದನ್ನು ನೋಡಿಕೊಂಡೂ, ನಮಗೂ ನಾಳೆ ಆ ಸ್ಥಿತಿಯೇ ಅಂತ ಗೊತ್ತಿದ್ದರೂ, ಪಂಜರದೊಳಗೇ ಒಂದನೊಂದನ್ನು ಕುಕ್ಕುತ್ತಾ, ಒಂದು ಮತ್ತೊಂದರ ಮೇಲೆ ಹೊಲಸು ಮಾಡುತ್ತಾ, ಕೇವಲ ಉಸಿರಾಡಲು ಹೊಡೆದಾಡುತ್ತಿರುತ್ತವೆ. ಪಂಜರದಿಂದ ಹೊರಬರಲು ಪ್ರಯತ್ನಿಸುವುದೇ ಇಲ್ಲ. ಕಥಾ ನಾಯಕ ಬಲರಾಮನ ಪ್ರಕಾರ ಭಾರತದ ಬಡಜನರ ಸ್ಥಿತಿಯೂ ಅದೇ. ಈ ಬಡಜನರು ಕೇವಲ ಬದುಕಲಿಕ್ಕಾಗಿ, ಜೀವಕ್ಕಾಗಿ ತಮ್ಮತಮ್ಮಲೇ ಹೊಡೆದಾಡಿಕೊಳ್ಳುವುದರಲ್ಲಿ ಎಷ್ಟು ಕಳೆದು ಹೋಗಿದ್ದಾರೆಂದರೆ, ಪಂಜರದಿಂದ ಹೊರಬಂದು ಸ್ವತಂತ್ರರಾಗಬೇಕೆಂಬ ಜ್ಞಾನವೇ ಇಲ್ಲ. ಇದೆಲ್ಲಾ ಎಷ್ಟು ನಿಜ ಅನ್ನಿಸಿಬಿಡುತ್ತದೆ. ನಾವೆಲ್ಲಾ ಪಂಜರದಲ್ಲಿ ಬಂದಿಯಾದ ಕೋಳಿಗಳಂತೆ ಅನ್ನಿಸತೊಡಗುತ್ತದೆ.
ನಮ್ಮ ನಾಯಕ ಪಂಜರದೊಳಗಿನ ಕೋಳಿಯಾಗೇ ಇರದೆ ಅಲ್ಲಿಂದ ಹೊರಬಂದು ವೈಟ್ ಟೈಗರ್ ಆಗುವುದು ಹೇಗೆಂಬುದನ್ನು ಹೇಳಿದರೆ, ಈಗಾಗಲೇ ಕಾದಂಬರಿ ಓದಿದವರಿಗೆ ಬೋರಾಗುತ್ತದೆ. ಓದದವರಿಗೆ ಹೇಳಿ ಆ ಸಸ್ಪೆನ್ಸ್ ಹಾಳು ಮಾಡುವುದು ಸರಿಯಲ್ಲ.
ನಮ್ಮ ದೇಶದ ಮಹಾ ನದಿಯ ಬಗ್ಗೆ ಹೇಳುತ್ತಾ ‘ಪ್ರಧಾನ ಮಂತ್ರಿಗಳೇ ಯಾವುದೇ ಕಾರಣಕ್ಕೂ ಗಂಗೆಯಲ್ಲಿ ಮುಳುಗು ಹಾಕಲು ಹೋಗಬೇಡಿ. ನಿಮಗೇನಾದರೂ ಮಲ, ಕಸ-ಕಡ್ಡಿ, ಮನುಷ್ಯನ ದೇಹದ ಭಾಗಗಳು, ಎಮ್ಮೆಯ ಹೊಲಸು ಮತ್ತು ಏಳು ಬೇರೆ ಬೇರೆ ರೀತಿಯ ಕೈಗಾರಿಕಾ ಆಮ್ಲಗಳನ್ನ ಬಾಯಲ್ಲಿ ತುಂಬಿಕೊಳ್ಲಬೇಕೆಂಬ ಆಸೆಯಿದ್ದರೆ ಹೋಗಿ ಮುಳುಗಬಹುದು.’ . (“No! – Mr Jiabao, I urge you not to dip in the Ganga, unless you want your mouth full of faeces, straw, soggy parts of human bodies, buffalo carrion, and seven different kinds of industrial acids.”) ಎನ್ನುವ ಮಾತುಗಳನ್ನು ಕೇಳಿದಾಗ ಅರವಿಂದ ಅಡಿಗರ ಮೇಲೆ ಸಿಟ್ಟುಬಂದರೂ ಆದು ಸತ್ಯವೇ ಆದ್ದರಿಂದ ಒಪ್ಪಿಕೊಳ್ಳದೆ ವಿಧಿಯಿಲ್ಲ.
ಬಲರಾಮ ತನ್ನ ಮಾಲೀಕ ಅಶೋಕ್ ಕಾಲನ್ನು ಮಸಾಜ್ ಮಾಡಿಕೊಳ್ಳುತ್ತಿರುವುದನ್ನು ನೋಡುತ್ತಾನೆ. ನೊಡುತ್ತಲೇ ಅಯ್ಯೋ ನೀವ್ಯಾಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಅವನೇ ಮಾಡಲು ಹೋಗಿ ಅಶೋಕ್ ನಿಂದ ಬೈಸಿಕೊಳ್ಳುತ್ತಾನೆ. ಈ ಘಟನೆಯ ಸಂದೇಶ ಸ್ಪಷ್ಟವಾಗಿಯೇ ತಿಳಿಯುತ್ತದೆ. ಬಲರಾಮನ ದಾಸ್ಯ ಪ್ರವೃತ್ತಿಯು ಎಷ್ಟೊಂದು ಗಾಢವಾಗಿತ್ತೆಂದರೆ ದಾಸನಾಗಿರುವುದು ಅವನಿಗೆ ಹುಟ್ಟಿಂದಲೇ ಬಂದಿತ್ತೇನೋ ರಕ್ತದಲ್ಲೇ ಇತ್ತೇನೋ..ಎನ್ನುವುದು. ಈ ಘಟನೆಯನ್ನ ಹೇಳಿ ಬಲರಾಮ ವಿಮರ್ಶೆಗೆ ತೊಡಗುತ್ತಾನೆ. ನನಗ್ಯಾಕೆ ಅವನ ಕಾಲ ಬಳಿಗೆ ಹೋಗಬೇಕನ್ನಿಸುತ್ತೆ? ಹೋಗಿ ಮುಟ್ಟಿ ಒತ್ತಿ ಅವರಿಗೆ ಹಾಯೆನ್ನಿಸಬೇಕೆನ್ನುವಂತೆ ಮಾಡಬೇಕು ಅನ್ನಿಸುತ್ತೆ? ಯಾಕೆಂದರೆ ದಾಸನಾಗಿರುವ ಆಸೆಯನ್ನ ನನ್ನ ತಲೆಗೆ ತುಂಬಿಸಲಾಗಿದೆ. ಒಂದಾದ ನಂತರ ಮತ್ತೊಂದರಂತೆ ಮೊಳೆ ಹೊಡೆದು ನನ್ನ ಬುರುಡೆಗೆ ತುಂಬಿಸಲಾಗಿದೆ. “Why did I feel that I had to go close to his feet, touch them and press them and make them feel good—why? Because the desire to be a servant had been bred into me: hammered into my skull, nail after nail.” ಅದು ಸತ್ಯವೂ ಹೌದು. ಅದೇ ರೀತಿಯಲ್ಲಿ ಕತ್ತಲೆ (ಹಳ್ಳಿಗಳ) ಪ್ರದೇಶಗಳ ಕಲ್ಪನೆಯನ್ನ, ಭಾರತ ದೇಶದ ಸಮಸ್ಯೆಗಳನ್ನ ಮತ್ತೆ ಮತ್ತೆ ಓದುಗನ ತಲೆಗೆ ತುರುಕುವ ಪ್ರಯತ್ನ ಮಾಡಲಾಗಿದೆ ಅನ್ನಿಸಲು ಶುರುವಾಗಿ ಹಿಂಸೆಯಾಗತೊಡಗುತ್ತದೆ. ಉದಾಹರಣೆಗೆ ಬಲರಾಮ್ ಗಾಡಿ ಓಡಿಸುತ್ತಲೇ ಕಾರಿನಲ್ಲಿದ್ದವರಿಗೆ ವಿಸ್ಕಿಯನ್ನ ಸುರಿದುಕೊಡುವ ವಿವರಣೆ ಇತ್ಯಾದಿ
ಏನೇ ಆಗಲಿ ಕೊನೆಗೆ ಮುಖ್ಯವಾಗುವುದೇನೆಂದರೆ ಅರವಿಂದ ಅಡಿಗ ಚಿತ್ರಿಸುವ ಭಾರತವೂ ಇದೆ ಎಂಬುದನ್ನ, ಆ ಭಾರತವು ಭಾರತದ ಪ್ರತಿಯೊಂದು ಭಾಗದಲ್ಲೂ ನೆಲೆಯೂರಿದೆ ಮತ್ತು ಈ ಭಾರತದ ಚಿತ್ರಣ ನಮಗಿಷ್ಟವಿಲ್ಲ ಎಂಬಕಾರಣಕ್ಕೆ ತಳ್ಳಿಹಾಕಲು ಸಾಧ್ಯವಿಲ್ಲ ಎಂಬ ಅರಿವು ಉಂಟಾಗಿದೆಯಾ ಎನ್ನುವುದು. ಕೇವಲ ಈ ಭಾರತವೇ ಇದೆ ಅಂತ ಅಲ್ಲ ಆದರೆ ಈ ಭಾರತವೂ ಇದೆ ಎಂಬುದರ ಅರಿವು ಕೆನೆ ಪದರದವರಿಗೂ ಇರಬೇಕು ಅಲ್ಲವಾ?
ಈ ಪುಸ್ತಕದಲ್ಲಿ ಅಡಿಗ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಭಾರತ ದೇಶದಲ್ಲಿನ ಬೂಟಾಟಿಕೆ, ಅಸಮಾನತೆಯನ್ನ, ತಮ್ಮ ತೀಕ್ಷ್ಣ ಮಾತುಗಳಿಂದ, ಕಟು ವ್ಯಂಗ್ಯದಿಂದ ಟೀಕಿಸುತ್ತಾ, ಇಲ್ಲಿನ ಇತ್ತೀಚಿನ ಆರ್ತಿಕ ಗೆಲುವುಗಳ ಕಠೋರ ಸತ್ಯಗಳನ್ನ, ಅದರ ಹಿಂದಿನ ಕೊಳಕನ್ನ ತೆರದಿಡುತ್ತಾ ದೇಶವು ಸುತ್ತಿಕೊಂಡಿರುವ ಹೊಳಪು ಪರದೆಯನ್ನ ಸರಿಸಲು ಪ್ರಯತ್ನಿಸುತ್ತಾರೆ.
ಒಟ್ಟಿನಲ್ಲಿ ‘ದಿ ವೈಟ್ ಟೈಗರ್’ ಓದುವುದು ಭಾರತದ ಸುತ್ತ ಒಂದು ರೋಮಾಂಚನಕಾರಿ ಪ್ರಯಾಣದಂತೆ ಅನ್ನಿಸಿದರೆ ಆಶ್ಚರ್ಯವಿಲ್ಲ. ಇಲ್ಲಿ ಹಳೆಯ ಕಾಲದ ಆಚರಣೆಗಳು ಪಟ್ಟಣದ ಕ್ರೌರ್ಯದೊಂದಿಗೆ ಸೇರಿಕೊಂಡು ಆಳುತ್ತದೆ. ಭಾರತವು ನಿಜವಾಗಲೂ ಪ್ರಜಾಪ್ರಭುತ್ವದ, ಭ್ರಷ್ಟಾಚಾರವಿಲ್ಲದ, ಸಮೃದ್ಧ ದೇಶ ಅಂದುಕೊಂಡಿರುವವರು ಕಾದಂಬರಿಯ ವಿರುಧ್ಧ ಕೂಗಾಡಬಹುದು. ಆ ಭ್ರಮೆ ಇಲ್ಲದವರಿಗೆ ಕಾದಂಬರಿ ಇಷ್ಟವಾಗುತ್ತದೆ.
ಅರವಿಂದ ಅಡಿಗ ಹೆಸರಿನಲ್ಲಿ ‘ಅಡಿಗ’ ಇರುವುದರಿಂದಲೋ ಏನೋ ಗೋಪಾಲ ಕೃಷ್ಣ ಅಡಿಗರ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತವೆ
ಉತ್ಸಾಹ ಉದ್ವೇಗ ಉದ್ರೇಕಗಳ ವೀರ
ಯುವಜನದ ನಾಡ ಗುಡಿಯು;
ಅದರ ಹಾರಾಟಕ್ಕೆ ಬಾನೇ ಗಡಿಯು,
ಬರಲು ಬಿಡವೆಂದಿಗೂ ಅದಕೆ ತಡೆಯು!
ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ,
ಕೆಡೆನುಡಿವ ಕೆಡೆಬಗೆವ ಕೆಡಕು ಜನರೇ ಬನ್ನಿ!
ಕೊಟ್ಟೆವಿದೋ ವೀಳೆಯವನು;
ನಿಮ್ಮೆಲ್ಲರನು ತೊಡೆದು ನಿಮ್ಮ ಮಸಣದ ಮೇಲೆ
ಕಟ್ಟುವೆವೆ ನಾವು ಹೊಸ ನಾಡೊಂದನು, – ಸುಖದ ಬೀಡೊಂದನು!
ಹೀಗಾಗಲೆಂದು ಮನಸು ಹರಸುತ್ತದೆ.

‍ಲೇಖಕರು avadhi

December 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

5 ಪ್ರತಿಕ್ರಿಯೆಗಳು

 1. SADASHIVA

  nice observation. liked it. the good thing: it’s not perverted like other reviews i read. thank u.

  ಪ್ರತಿಕ್ರಿಯೆ
 2. Sandeep Kamath

  ಅರವಿಂದ ಅಡಿಗನ ’ವೈಟ್ ಟೈಗರ್’ ಓದೋದಕ್ಕಿಂತ ವಾಸುದೇವ ಅಡಿಗರ ಅಡಿಗಾಸ್ ಗೆ ಹೋಗಿ ಮೆನು ಕಾರ್ಡ್ ಓದೋದೆ ಖುಶಿ ಕೊಡುತ್ತೆ.

  ಪ್ರತಿಕ್ರಿಯೆ
 3. ಬಾನಾಡಿ

  ಅರವಿಂದ ಅಡಿಗನಿಗೆ ಬೂಕರ್ ಅವಾರ್ಡ್ ಬಂದ ತಕ್ಷಣ ತಾ ಮುಂದು ನಾ ಮುಂದು ಎಂದು ಅಡಿಗನ ಕಾದಂಬರಿ ಕುರಿತು ಕನ್ನಡದ ಕುಖ್ಯಾತ ಅಂಕಣಕಾರರು, ವಿ-ಶೇಷ ವರದಿಗಾರರು ಬರೆದ ಲೇಖನಗಳಿಗಿಂತ ವೈಟ್ ಟೈಗರ್ ಕಾದಂಬರಿಯನ್ನು ಓದಿ ಬರೆದ ಈ ಟಿಪ್ಪಣಿ ಮತ್ತು ನಿಮಗೆ ಗೋಪಾಲಕೃಷ್ಣ ಅಡಿಗರ ಕವನಗಳ ಸಾಲುಗಳ ನೆನೆಪಾದುದು ಮುದ ನೀಡಿತು. ನಿರರ್ಗಳವಾಗಿ ಓದಿಸಿಕೊಂಡು ಹೋಗುವ ವೈಟ್ ಟೈಗರ್ ನನಗೆ ಕೆಲವೊಮ್ಮೆ ಕನ್ನಡದ ಬರಹಗಾರ ಕುಂ.ವೀ. ಅವರ ಬರವಣಿಗೆಯ ನೆನಪು ನೀಡಿತು. ಬಳ್ಳಾರಿ ಪರಿಸರದ ವಿವರಗಳನ್ನು ನೀಡುವ ಕುಂ.ವೀ. ತರನೇ ಅಡಿಗಾನು ‘darkness’ ಊರಿನ ವಿವರ ನೀಡುತ್ತಾನೆ. ನೀವಂದಂತೆ ರೂಸ್ಟರ್ ಕೂಪ್ ಈ ಕಾದಂಬರಿಯ ಅತ್ಯಂತ ಮನೋಜ್ಞವಾದ ರೂಪಕ. ಅಡಿಗನ ಬರಹಗಳಲ್ಲಿ ಇಂತಹ ಸಾಹಿತ್ಯಾಂಶಗಳನ್ನು ವಿಮರ್ಶಕರು ಕಂಡುಕೊಳ್ಳಲು ಪ್ರಯತ್ನಿಸಬೇಕಲ್ಲದೆ ಆತನು ಭಾರತವನ್ನು ಕೆಟ್ಟದಾಗಿ ಚಿತ್ರಿಸಿ ಬೂಕರ್ ಪ್ರಶಸ್ತಿ ಪಡೆದಿದ್ದಾನೆ ಎಂಬ ಮಾತು ನಮ್ಮ ಸಾಹಿತ್ಯಾಧ್ಯಯನದ ಅಲ್ಪತೆಯನ್ನು ತೋರಿಸುತ್ತದೆ.
  ಅಭಿನಂದನೆಗಳು ನಿಮಗೆ.
  ಒಲವಿನಿಂದ
  ಬಾನಾಡಿ

  ಪ್ರತಿಕ್ರಿಯೆ
 4. ಮಿಲನ್

  ಹಾಗಿದ್ದರೆ ಭಾರತ ತಪ್ಪು ಪ್ರಜಾಪ್ರಭುತ್ವದ, ಭ್ರಷ್ಟಾಚಾರವಿರುವ, ಸಮೃದ್ಧವಲ್ಲದ
  ದೇಶ ಅಂತ ಗೊತ್ತಿರುವವರು ಕಾದಂಬರಿಯ ವಿರುದ್ಧ ಮಾತಾಡಲು ಸಾಧ್ಯವಿಲ್ಲವಾ? ಏನೋ ಅವರವರ ಭಾವಕ್ಕೆ. !

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: