ಮತ್ತೆ ಮತ್ತೆ ಡಬ್ಬಿ೦ಗ್..

ಡಬ್ಬಿ೦ಗ್ ಕುರಿತಾದ ಮತ್ತೊ೦ದು ಗ೦ಭೀರ ಚರ್ಚೆ ನಡೆದಿದೆ, ಅದನ್ನು ಫ಼ೇಸ್ ಬುಕ್ ನಲ್ಲಿ ಹ೦ಚಿಕೊ೦ಡವರು ಚೈತನ್ಯ ಕರೇಹಳ್ಳಿ.

ನನ್ನ ಸ್ನೇಹಿತರಾದ ಸುಬ್ರಹ್ಮಣ್ಯ ಹಾಗು ಬಿ. ಸುರೇಶ ಡಬ್ಬಿಂಗ್ ಪರ – ವಿರೋಧ ವಾದ ಮಂಡಿಸಿದ್ದಾರೆ. ಇಬ್ಬರೂ ತಮ್ಮ ಅನಿಸಿಕೆಗಳನ್ನೂ ಯಾವುದೇ ಕೊಂಕು, ಅತಿರೇಕ ಇಲ್ಲದೆ ಮುಂದಿಟ್ಟಿದ್ದಾರೆ. ನನ್ನಂತೆಯೇ ಡಬ್ಬಿಂಗ್ ವಿರೋಧಿಸುವ ಅನೇಕರ ಮಾತನ್ನು ಸುರೇಶ ಕೂಲಂಕುಶವಾಗಿ ಹೇಳಿದ್ದಾರೆ. ಇದನ್ನು ಓದಿ, ನಿಮ್ಮ ಅಭಿಪ್ರಾಯ ನೀವು ಹಂಚಿಕೊಳ್ಳಿ.     Ganesh Chetan : Its good to see that the media and the intellectuals are protesting against the vigilante groups for their moral policing. There is one more type of culture police in Karnataka which prevents dubbing content to Kannada and denies millions of Kannadigas their basic right to news, information & entertainment in their own language. Request the media and intellectuals to highlight this issue too and liberate millions of Kannadigas from the clucthes of this culture police. — Subramanya MK : ಭಾಷೆಯ ಬಗ್ಗೆ ನಿಜವಾದ ಕಾಳಜಿ ಇರುವವರಿಗೆ ಮಾತ್ರ ಈ ಅಸಾಂವಿಧಾನಿಕ ಡಬ್ಬಿಂಗ್ ನಿಷೇಧದಿಂದ ಆಗಿರುವ ಅನಾಹುತ ಅರ್ಥವಾಗಲು ಸಾಧ್ಯ. ಮುಂದೆ ಆಗುವುದನ್ನು ತಡೆಯುವ ಮನಸ್ಸು ಮಾಡಲು ಸಾಧ್ಯ. ಎದುರಿಗೆ ಕಾಣಿಸುತ್ತಿರುವುದನ್ನು ಅರ್ಥ ಮಾಡಿಕೊಳ್ಳುವ ಯತ್ನ ಮಾಡದ ಕಪಟ ಭಾಷಾಭಿಮಾನಿಗಳಿಗೆ ಈಗಾಗಲೇ ಆಗಿರುವ ದುರಂತದ ಅರಿವು ಬೇಗನೆ ಆಗಲಿ ಎಂದು ಆಶಿಸುತ್ತೇನೆ. Beesu Suresha : ‎Subramanya MK ನಿಮ್ಮ ಒಕ್ಕಣೆ ಅಭಿಪ್ರಾಯ ಓದಿದೆ. ನಾನು ಡಬ್ಬಿಂಗ್ ಎಂಬ ಕೃತಕ ದನಿಲೇಪನದ ವಿರೋಧಿ. ಹಾಗೆಂದು ನೀವು ನನ್ನನ್ನು ಕನ್ನಡ ವಿರೋಧಿ ಎನ್ನುತ್ತೀರಾ… ನೀವು ಹಾಗೆ ಹೆಸರಿಟ್ಟರೂ ಚಿಂತೆ ಇಲ್ಲ… ನನಗೆ ಬರುವುದು ಒಂದೇ ಭಾಷೆ. ಅದು ಕನ್ನಡ… ಆ ಭಾಷೆಯೇ ನನಗೆ ಊಟ ಹಾಕುತ್ತಾ ಇದೆ… ನಾನು ಎಂದೆಂದಿಗೂ ಈ “ಡಬ್ಬಿಂಗ್” ಎಂಬ ರೋಗವನ್ನು ವಿರೋಧಿಸುತ್ತಲೇ ಇರುತ್ತೇನೆ. ಅದನ್ನು ಬೆಂಬಲಿಸುವ ಎಲ್ಲ ನನ್ನ ಮಿತ್ರರಿಗೂ ಒಳಿತಾಗಲಿ ಎಂದು ಹಾರೈಸುತ್ತೇನೆ. Subramanya MK : ‎Beesu Suresha: ಕ್ಷಮಿಸಬೇಕು. ನನ್ನ ಪ್ರತಿಕ್ರಿಯೆ ಸುದೀರ್ಘವಾಗಿದೆ. ಭಾಷೆಯ ಮೇಲಿನ ಪ್ರೀತಿ ಹೀಗೆ ಮಾಡಿಸಿದೆ. ಇದು ಭಿನ್ನಾಭಿಪ್ರಾಯ, ವಿರೋಧವಲ್ಲ. ನಮ್ಮ ನಡುವಿನ ಸ್ನೇಹಕ್ಕೆ ಕುಂದು ಬಾರದಿರಲಿ. ಸ್ವತಂತ್ರ ಭಾರತದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ಹೊಂದಿರುವುದಕ್ಕೆ ಮತ್ತು ಅದನ್ನು ಮಂಡಿಸುವುದಕ್ಕೆ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ನಿಮ್ಮ ಅಭಿಪ್ರಾಯದ ಬಗ್ಗೆ ನನಗೆ ಖಂಡಿತ ಗೌರವ ಇದೆ. ಆದರೆ ಕೆಲವು ವ್ಯಕ್ತಿಗಳು ಸೇರಿಕೊಂಡು, ಅವರ ಅಭಿಪ್ರಾಯಗಳನ್ನು “ಇದೇ ಸರಿ” ಎಂದು ಜನಸಮೂಹದ ಮೇಲೆ ಅಸಾಂವಿಧಾನಿಕವಾಗಿ, ದೌರ್ಜನ್ಯದಿಂದ ಹೇರುತ್ತಿರುವುದಕ್ಕೆ ಖಂಡಿತ ನನ್ನ ಮನ್ನಣೆ ಇಲ್ಲ. ನೀವು ಕನ್ನಡ ವಿರೋಧಿ ಎಂದು ಖಂಡಿತ ನಾನು ಭಾವಿಸಿಲ್ಲ, ಭಾವಿಸುವುದೂ ಇಲ್ಲ. ನನ್ನ ಆಕ್ಷೇಪ ಇರುವುದು ಕನ್ನಡಕ್ಕೆ ಒಳ್ಳೆಯದು ಮಾಡುತ್ತೇವೆ ಎಂದು ಘೋಷಿಸಿಕೊಳ್ಳುತ್ತ, ಆದರೆ ಕನ್ನಡ ಅವಗಣನೆಗೆ ಗುರಿಯಾಗುವುದಕ್ಕೆ ಮೂಲ ಕಾರಣ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಅದನ್ನು ನೋಡದ ಗಣ್ಯವ್ಯಕ್ತಿಗಳ ಬಗ್ಗೆ. ನೀವು ಅಂತಹವರಲ್ಲೊಬ್ಬರು ಅಲ್ಲ ಎಂದು ನನಗೆ ಗೊತ್ತಿದೆ. ನಾನು ಬೆಂಗಳೂರಿನಲ್ಲಿ ಬೆಳೆದಿರುವುದರಿಂದ ಮತ್ತು ಈ ಡಬ್ಬಿಂಗ್ ನಿಷೇಧದಿಂದಾಗಿ ಪರಭಾಷೆಯಲ್ಲಿಯೇ ಚಿತ್ರಗಳನ್ನು ನೋಡಿ ಆನಂದಿಸುವ ಪ್ರವೃತ್ತಿ ಬೆಳೆದಿರುವುದರಿಂದ ನಾನು ಹಲವಾರು ಭಾಷೆಗಳನ್ನು ಅನಿರ್ವಾಯವಾಗಿ ಕಲಿತುಕೊಳ್ಳುವ ಒತ್ತಡಕ್ಕೆ ಸಿಕ್ಕಿಬಿದ್ದೆ. ಹಾಗಾಗಿ ನನಗೆ ಕನ್ನಡದ ಜೊತೆಗೆ ಇತರ ಭಾಷೆಗಳು ಬರುತ್ತದೆ. ಈ ನಾಡಿನಲ್ಲಿ ಹುಟ್ಟಿದ ಕಾರಣ ಉಸಿರಷ್ಟೆ ಸಹಜವಾಗಿ ಕನ್ನಡವನ್ನು ನಾನು ಉಪಯೋಗಿಸುತ್ತಿದ್ದೇನೆ. ಹಾಗಾಗಿ ನಾನು ಚಿಕ್ಕವನಿರುವಾಗ ಇದ್ದಂತಹ ನನ್ನ ಪ್ರೀತಿಯ ಭಾಷೆಯ ಮಾನ್ಯತೆ, ಬಳಕೆ ಈಗ ಅತಿ ಕಡಿಮೆ ಎನ್ನುವಷ್ಟರ ಮಟ್ಟಿಗೆ ಹೋಗುತ್ತಿರುವುದನ್ನು ನೋಡಿ ಹೌಹಾರಿ, ಕನ್ನಡದ ಬಳಕೆ ಹೆಚ್ಚು ಮಾಡಬೇಕು, ಅದರಲ್ಲೂ ಮಕ್ಕಳಿಗೆ ಕನ್ನಡ ಸಹಜವಾಗಿ ‘ಇದು ನಮ್ಮ ಭಾಷೆ’ ಎನ್ನುವ ಅರಿವು ಉಂಟಾಗಬೇಕು ಎಂದು ಚಿಂತಿಸಿ, ಮಕ್ಕಳೊಡನೆ ಮಾತಾಡುವಾಗ ನನಗೆ ಗೊತ್ತಾದ ವಿಷಯಗಳನ್ನು ಮಂಡಿಸಲು ಈ ಫೇಸ್‌ಬುಕ್‌ ಅನ್ನು ಬಳಸುತ್ತಿದ್ದೇನೆ. (ಇದುವರೆಗೂ ನನ್ನ ಊಟಕ್ಕೆ ಕನ್ನಡ ಭಾಷೆಯನ್ನು ನಾನು ಅವಲಂಬಿಸಿಲ್ಲ. ಇದರಿಂದ ನನಗೆ ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಹೆಮ್ಮೆ ಕಡಿಮೆ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ) “ಡಬ್ಬಿಂಗ್‌” ಅನ್ನು ರೋಗ ಎಂದು ಘೋಷಿಸಿದ್ದೀರಿ. ಈ ತೀರ್ಮಾನದ ಹಿನ್ನೆಲೆಗೆ ಯಾವುದಾದರೂ ಭಾಷೆಯಲ್ಲಿ, ಜನಸಮೂಹದ ನಡುವೆ ಏನಾದರೂ ಅಧ್ಯಯನ ನಡೆದಿದೆಯಾ? ಅಥವಾ ಇದು ಕೇವಲ ನಿಮ್ಮ ಕಲ್ಪನೆಯಾ? Beesu Suresha: ನನಗೆ ತಿಳಿದಿರುವಂತೆ ೬೭ನೇ ಇಸವಿಯಲ್ಲಿ ಒಂದು ಕ್ಷುಲ್ಲಕ ಕಾರಣಕ್ಕಾಗಿ ಈ ಅಸಾಂವಿಧಾನಿಕ “ಡಬ್ಬಿಂಗ್ ನಿಷೇಧ” ಜಾರಿಗೆ ಬಂತು. ಜನಸಾಮಾನ್ಯರಿಗೆ ಚಲನಚಿತ್ರಗಳು ಕೇವಲ ಮನರಂಜನೆಯ ಮಾಧ್ಯಮವಾದುದರಿಂದ ಸಾಮಾನ್ಯ ಜನರು ಈ ತೀರ್ಮಾನದ ಬಗ್ಗೆ ಸ್ವಲ್ಪವೂ ಚಿಂತಿಸಲಿಲ್ಲ. ಮೊದಲಿನಿಂದಲೂ ಚಲನಚಿತ್ರಗಳು ಎಂದರೆ ಮಡಿವಂತಿಕೆಯಿಂದ ದೂರ ಇರುವ ಸಾಹಿತಿಗಳು/ಪಂಡಿತರು ಈ ನಿಷೇಧದ ಪರಿಣಾಮದ ಬಗ್ಗೆ ಸ್ವಲ್ಪವೂ ಯೋಚಿಸಲಿಲ್ಲ. ಅಲ್ಲದೆ ಕೇವಲ ಚಿತ್ರಮಂದಿರದ ವ್ಯಕ್ತಿಗಳನ್ನು ಬೆದರಿಸಿದರೆ ಈ ನಿಷೇಧವನ್ನು ಜನಸಮೂಹದ ಮೇಲೆ ಹೇರಲು ಸುಲಭವಾದುದರಿಂದ ಇದು ದಶಕಗಳ ಕಾಲದಿಂದ ನಡೆದುಕೊಂಡು ಬಂದು ಈಗ ಪುರಾತನ ಸಂಪ್ರದಾಯ ಎಂಬಂತೆ ಆಗಿ ಹೋಗಿದೆ. ಈಗ ಈ ಬೆದರಿಕೆಯ ಪಟ್ಟಿಗೆ ಉಪಗ್ರಹವಾಹಿನಿಗಳನ್ನು ಸೇರಿಸಲಾಗಿದೆ. ಆದರೆ ಇಷ್ಟು ವರ್ಷಗಳ ನಂತರವಾದರೂ ಈ ಹೇರುವಿಕೆಯಿಂದ ಕನ್ನಡಕ್ಕೆ ಒಳ್ಳೆಯದಾಗಿದೆಯಾ ಇಲ್ಲವಾ ಎನ್ನುವುದನ್ನು ಪರಿಶೀಲಿಸುವುದು ಭಾಷೆಯ ಬಗ್ಗೆ ಕಾಳಜಿ ವಹಿಸಿರುವವರ ಕರ್ತವ್ಯ ಅಲ್ಲವೇ? ಮೊದಲಿಗೆ ಈ ನಿಷೇಧ ಜಾರಿಗೆ ಬಂದ ನಂತರದ ೨ ದಶಕಗಳಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ವಿನೂತನ ಚಿತ್ರಗಳು ಪ್ರದರ್ಶನಗೊಂಡು ಜನರ ಮನಸ್ಸನ್ನು ಸೂರೆ ಗೊಂಡಿದ್ದು ಅಲ್ಲದೆ, ನಮ್ಮ ಭಾಷೆಯ ಚಿತ್ರಗಳನ್ನು ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಪುನರ್ನಿರ್ಮಾಣ ಮಾಡುತ್ತಿದ್ದರು. ಆದರೆ ನಂತರ ದೂರದರ್ಶನ ಮತ್ತು ಉಪಗ್ರಹವಾಹಿನಿಗಳು ಪ್ರಾರಂಭವಾದ ನಂತರ ಇದು ಬದಲಾಯಿತು. ಈಗ ನಾವು ಪರಭಾಷೆಯ ಚಿತ್ರಗಳನ್ನು ಪುನರ್ನಿರ್ಮಾಣ ಮಾಡುವ ದೈನ್ಯ ಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಕಾರಣ ಏನೆಂದು ಕ್ಷಣಕಾಲ ಯೋಚಿಸುವಿರಾ? ಅಸ್ಪ್ರಶ್ಯತೆ, ವಿಧವಾ ವಿವಾಹ ನಿಷೇಧ ಮುಂತಾದ ಪದ್ಧತಿಗಳನ್ನು ತಲತಲಾಂತರದಿಂದ ಅನುಸರಿಸಿಕೊಂಡು ಬಂದಿದ್ದ ನಾವು, ಆ ಪದ್ಧತಿಗಳನ್ನು ಅನುಸರಿಸುವುದರಿಂದ ಆಗುವ ದುಷ್ಪರಿಣಾಮಗಳನ್ನು ಕಂಡುಕೊಂಡ ನಂತರ ಇಂತಹ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಿದ್ದೇವೆ. ಹಾಗಿರುವಾಗ ಈ “ಡಬ್ಬಿಂಗ್‌ ನಿಷೇಧ”ದಿಂದ ಆಗಿರುವ ದುಷ್ಪರಿಣಾಮವನ್ನು ಗುರುತಿಸಲು ಹಿಂಜರಿಕೆ ಏಕೆ? ದಕ್ಷಿಣ ಭಾರತದ ತೆಲುಗು, ತಮಿಳು ನಾಡುಗಳಲ್ಲಿ ಡಬ್ಬಿಂಗ್‌ ನಿಷೇಧವಿಲ್ಲ. ನಮ್ಮ ಕರ್ನಾಟಕದಲ್ಲಿ ಮಾತ್ರ ಇದೆ. ಆದರೆ ನಮ್ಮ ಚಿತ್ರರಂಗದ ಸಮಕಾಲೀನವಾದ ಆ ಭಾಷೆಗಳ ಚಿತ್ರೋದ್ಯಮ ಹೇಗೆ ಬೆಳೆದಿದೆ, ನಮ್ಮ ಕನ್ನಡ ಚಲನಚಿತ್ರೋದ್ಯಮ ಹೇಗೆ ಸೊರಗಿದೆ ಎನ್ನುವುದು ಪ್ರತ್ಯಕ್ಷವಾಗಿ ಕಾಣಿಸುತ್ತಿದೆಯಲ್ಲ. ಇದಕ್ಕೆ ಮೂಲ ಕಾರಣ ನಮ್ಮ ಚಿತ್ರೋದ್ಯಮದಿಂದ ಕನ್ನಡತನ ಮಾಯವಾಗಿರುವುದು, ಅಲ್ಲವೇ? ‎Beesu Suresha: ತೆಲುಗು, ತಮಿಳು ನಾಡಿನ ಮಕ್ಕಳು ಬೆಳೆಯುವ ಹಂತದಲ್ಲಿ ಪಡೆದುಕೊಳ್ಳುವ ಎಲ್ಲಾ ಮನರಂಜನೆಯನ್ನು ತಮ್ಮ ಭಾಷೆಗಳಲ್ಲಿಯೇ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಆ ಮಕ್ಕಳಿಗೆ ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಸಹಜವಾಗಿ ಇರುತ್ತದೆ ಮತ್ತು ಅವರಿಗೆ ತಮ್ಮ ಭಾಷೆಯಲ್ಲಿ ಗೊತ್ತಿರುವ ಪದಗಳ ಸಂಖ್ಯೆಯೂ ಹೆಚ್ಚುತ್ತದೆ. ಬೆಳೆದು ವಯಸ್ಕರಾದ ನಂತರ ಅವರು ಮನರಂಜನೆಯನ್ನು ತಮ್ಮ ಭಾಷೆಯಲ್ಲಿ ಪಡೆದು ಆನಂದಿಸುವ ಹಂತಕ್ಕೆ ತಲುಪಿರುತ್ತಾರೆ. ಅನಿರ್ವಾಯವಾದರೆ ಮಾತ್ರ ಪರಭಾಷೆಯನ್ನು ವ್ಯವಹಾರಕ್ಕೆ ಉಪಯೋಗಿಸುತ್ತಾರೆ. ಈ ರೀತಿ ಬೆಳೆದು ದೊಡ್ಡವರಾದವರು ಹೆಮ್ಮೆಯಿಂದಲೇ ಅವರವರ ಭಾಷೆಯ ಚಲನಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡು ಆ ಭಾಷೆಯ ಚಲನಚಿತ್ರೋದ್ಯಮದ ವ್ಯಾವಹಾರಿಕ ಪರಿಧಿಯನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿಯೇ ತೆಲುಗು, ತಮಿಳು ಚಲನಚಿತ್ರಗಳು ಇಂದು ವಿಶ್ವದಾದ್ಯಂತ ಪ್ರದರ್ಶನಗೊಳಗಳುತ್ತ ಯಶಸ್ಸನ್ನು ಅನುಭವಿಸುತ್ತಿರುವುದು, ಅಲ್ಲವೇ? ನಮ್ಮ ಕನ್ನಡ ನಾಡಿನ ಮಕ್ಕಳು ಮನರಂಜನೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವ ಅವಕಾಶವನ್ನು ಈ ಅಸಾಂವಿಧಾನಿಕ “ಡಬ್ಬಿಂಗ್‌ ನಿಷೇಧ” ಕಿತ್ತುಕೊಂಡಿದೆ. ಹೀಗಾಗಿ ಬೆಳೆಯುವ ಹಂತದಲ್ಲಿ ನಮ್ಮ ಕನ್ನಡದ ಮಕ್ಕಳು ಶಾಲೆ ಮತ್ತು ಪೋಷಕರ ಜೊತೆ ಇಂಗ್ಲೀಶ್‌ನಲ್ಲಿ ವ್ಯವಹರಿಸುತ್ತ, ಕನ್ನಡವನ್ನು ಕೇವಲ ಅಜ್ಜ-ಅಜ್ಜಿಯ ಜೊತೆ ಅಥವಾ ಮನೆಯ ಕೆಲಸದವರ ಜೊತೆ ಬಳಸುವುದಕ್ಕೆ ಸೀಮಿತಗೊಳಿಸಿಕೊಳ್ಳುವ ಅನಿರ್ವಾಯತೆಗೆ ಸಿಕ್ಕಿರುವುದರಿಂದ, ನಮ್ಮ ಕನ್ನಡದ ಮಕ್ಕಳಿಗೆ ಗೊತ್ತಿರುವ ಕನ್ನಡದ ಪದಗಳ ಸಂಖ್ಯೆ ಬಹು ಕಡಿಮೆ ಎನ್ನುವುದು ತಮ್ಮ ಗಮನಕ್ಕೆ ಬಂದಿಲ್ಲವೇ? ಮಕ್ಕಳು ಅತಿ ಇಷ್ಟಪಟ್ಟು ನೋಡುವ ಮನರಂಜನೆಗಳು ಪರಭಾಷೆಯಲ್ಲಿಯೇ ಇರುವುದರಿಂದ, ನಮ್ಮ ಮಕ್ಕಳು ಸಹಜವಾಗಿ ಪರಭಾಷೆಯನ್ನು ಕಲಿಯುತ್ತಿದ್ದಾರೆ. ಇಂದು ಪಟ್ಟಣಗಳಲ್ಲಿ ಆಗುತ್ತಿರುವ ಈ ಬೆಳವಣಿಗೆ ಕ್ರಮೇಣ ಹಳ್ಳಿಗಳನ್ನು ಆವರಿಸಿಕೊಂಡಾಗ ಕನ್ನಡ ಭಾಷೆಗೆ ಕುತ್ತಾಗುವುದಿಲ್ಲವೇ? ಈ ರೀತಿ ಬೆಳೆದು ದೊಡ್ಡವರಾಗಿರುವವರು ಪರಭಾಷೆಯ ಚಲಚಿತ್ರಗಳಿಂದ ಪ್ರಭಾವಿತರಾಗಿ, ಕನ್ನಡ ಭಾಷೆಯ ಚಲನಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿರುವುದರಿಂದಲೇ ನಮ್ಮ ಭಾಷೆಯ ಬಹಳಷ್ಟು ಚಿತ್ರಗಳು ಪರಭಾಷಾ ಚಿತ್ರಗಳು ನಕಲಿನಂತೆ ಕಾಣುತ್ತಿದೆಯಲ್ಲವೇ? ಅಲ್ಲದೇ ರೀಮೇಕ್‌ ಹಾವಳಿಗೆ ಇದೂ ಒಂದು ಕಾರಣ ಅಲ್ಲವೇ? ಪ್ರಪಂಚದಾದ್ಯಂತ ಮನರಂಜನೆಯನ್ನು ತಾಯಿನುಡಿಯಲ್ಲಿ ಪಡೆದುಕೊಳ್ಳುವುದು ಸ್ವಾಭಾವಿಕ ಹಕ್ಕು ಎಂದು ಭಾವಿಸುತ್ತಿರುವಾಗ, ನಮ್ಮ ನಾಡಿನಲ್ಲಿ ಮಾತ್ರ ಮನರಂಜನೆಯನ್ನು ಪರಭಾಷೆಯಲ್ಲಿ ಪಡೆದುಕೊಳ್ಳುವಂತೆ ಮಾಡಿ, ಪರಭಾಷೆಯನ್ನು ಕಲಿಯುವಂತೆ ಮಾಡುತ್ತಿರುವುದರಿಂದ, ಕನ್ನಡದ ಬಳಕೆ ಕಡಿಮೆಯಾಗಿ, ಪರಭಾಷೆಯ ಬಳಕೆ ಹೆಚ್ಚುತ್ತಿದೆ. ಇದನ್ನು ತಾವು ಗಮನಿಸಿಲ್ಲವೇ? ಎಪ್ಪತ್ತರ ದಶಕದಲ್ಲಿ ಕನ್ನಡ, ತೆಲುಗು, ತಮಿಳು ರಾಜ್ಯಗಳಲ್ಲಿ ಪ್ರದರ್ಶನವಾಗುತ್ತಿದ್ದ ಪರಭಾಷೆಯ ಚಿತ್ರಗಳು ಕೇವಲ ಹಿಂದಿ ಮತ್ತು ಇಂಗ್ಲೀಶ್ ಭಾಷೆಯದ್ದಾಗಿದ್ದವು. ನಮ್ಮ ನಾಡಿನಲ್ಲಿ ಕೆಲವೇ ಕೆಲವು ತಮಿಳು/ತೆಲುಗು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ ಈಗ ನಮ್ಮ ನಾಡಿನಲ್ಲಿ ಕನ್ನಡದ ಚಲನಚಿತ್ರಗಳಿಗೆ ಸವಾಲು ಹಾಕುವಂತೆ ಪರಭಾಷೆಯ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ, ಹಣ ಸಂಪಾದಿಸುತ್ತಿವೆ. ಇದಕ್ಕೆ ಕಾರಣ ಕನ್ನಡದವರಿಗೆಲ್ಲ ಪರಭಾಷೆಯನ್ನು ಕಲಿಯುವಂತೆ ಮಾಡಿದ ಈ “ಡಬ್ಬಿಂಗ್‌ ನಿಷೇಧ” ಅಲ್ಲವೇ? Beesu Suresha: ತೆಲುಗು/ತಮಿಳು ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಚಿತ್ರಗಳು ಕೇವಲ ಬೆರಳೆಣಿಕೆಯಷ್ಟು ಮತ್ತು ಅವು ಹಾಕಿರುವ ಬಂಡವಾಳವನ್ನು ಸಹ ಹಿಂದಿರುಗಿಸುತ್ತಿಲ್ಲ. ಇದಕ್ಕೆ ಕಾರಣ ಆ ರಾಜ್ಯಗಳಲ್ಲಿನ ಜನರು ಮನರಂಜನೆಗೆ ತಮ್ಮದೇ ನುಡಿಯ ಮೇಲೆ ಅವಲಂಬಿತವಾಗಿರುವುದು, ಅಲ್ಲವೇ? ” ನಾನು ಡಬ್ಬಿಂಗ್ ಎಂಬ ಕೃತಕ ದನಿಲೇಪನದ ವಿರೋಧಿ” ಎಂದು ಬರೆದಿದ್ದೀರಿ. ಆದರೆ ನಮ್ಮ ಎಲ್ಲಾ ಕನ್ನಡದ ಚಲನಚಿತ್ರಗಳಿಗೂ ದನಿಯನ್ನು ಕೃತಕವಾಗಿಯೇ ಮರು ಲೇಪನ ಮಾಡುತ್ತಿರುವುದು. ಇದನ್ನು ತಾವು ಗಮನಸಿಲ್ಲವೇ? ಅಥವಾ ಕೃತಕ ದನಿಲೇಪನದಿಂದ ತುಟಿಚಾಲನೆಗೂ, ಧ್ವನಿಗೂ ಹೊಂದಾಣಿಕೆಯಾಗುವುದಿಲ್ಲ ಎನ್ನುವುದು ನಿಮ್ಮ ಮಾತನ ಅರ್ಥವಾಗಿದ್ದರೆ, ಈ ತೊಂದರೆ ಇರುವುದು ಕೇವಲ “ಪ,ಫ,ಬ,ಭ,ಮ” ಅಕ್ಷರಗಳಿಗೆ ಮಾತ್ರ. ಕನ್ನಡದ ಪದಭಂಡಾರ ಹೊಂದಿರುವವರಿಗೆ ಇದಕ್ಕೆ ಸೂಕ್ತವಾಗುವಂತೆ ಮಾತುಗಳನ್ನು ಬರೆಯುವುದು ಬಲು ಸುಲಭ, ಅಲ್ಲವೇ? ಪರದೆಯ ಮೇಲಿನ ದೃಶ್ಯವನ್ನು ನೋಡುತ್ತ ಭಾವದಲ್ಲಿ ತಲ್ಲೀನನಾಗಿರುವ ಪ್ರೇಕ್ಷಕ ದನಿಯನ್ನು ಕೇಳಿಸಿಕೊಳ್ಳುತ್ತಾನೆಯೇ ಹೊರೆತು, ತುಟಿ ಚಾಲನೆಗೂ ದನಿಗೂ ವ್ಯತ್ಯಾಸ ಇದೆಯೋ/ಇಲ್ಲವೋ ಎಂದು ಪರೀಕ್ಷಕನಂತೆ ಚಲನಚಿತ್ರವನ್ನು ನೋಡುವುದಿಲ್ಲ, ಅಲ್ಲವೇ? ಅಕಸ್ಮಾತ್‌ ಪ್ರೇಕ್ಷಕನಿಗೆ ಈ ವ್ಯತ್ಯಾಸ ಗೊತ್ತಾಗುವ ಹಾಗಿದ್ದರೆ, ಈಗ ಬರುತ್ತಿರುವ ನಮ್ಮ ಕನ್ನಡದ ಚಲನಚಿತ್ರಗಳಲ್ಲಿ ಢಾಳಾಗಿ ಇರುವ ಈ ವ್ಯತ್ಯಾಸವನ್ನು ಯಾವ ಪ್ರೇಕ್ಷಕನೂ ಏಕೆ ಗುರುತಿಸುತ್ತಿಲ್ಲ? ಚಿತ್ರೋದ್ಯಮಕ್ಕೆ ಕಿಂಚಿತ್ತೂ ಸಹಾಯ ಮಾಡದ, ಕೋಟಿಗಿಂತ ಕಡಿಮೆ ತೆಗೆದುಕೊಂಡರೆ ಘನತೆಗೆ ಕಡಿಮೆ ಎನ್ನುವಂತೆ ವರ್ತಿಸಿ ಹಣ ಸಂಪಾದಿಸಿಕೊಳ್ಳುತ್ತ, ಕನ್ನಡವನ್ನು ಓದಿಕೊಳ್ಳದ ನಮ್ಮ ಚಲನಚಿತ್ರದ ಕೆಲವು ನಟರು, ಕನ್ನಡ ಭಾಷೆಯ ಬಗ್ಗೆ ಹೇಳಿಕೆಗಳನ್ನು ನೀಡುತ್ತ, ಅಭಿಮಾನಿಗಳನ್ನು ಕೆರಳಿಸುತ್ತ ಇರುವುದನ್ನು ನೋಡಿಯೂ ಸುಮ್ಮನಿದ್ದರೆ ಕನ್ನಡಿಗನ ಸೌಜನ್ಯತೆಯನ್ನು ನಿಶ್ಯಕ್ತಿ ಎಂದು ಭಾವಿಸುವುದಿಲ್ಲವೇ? ಗಡಿನಾಡಿನ ಕನ್ನಡದ ಮಕ್ಕಳಿಗೆ ಕನ್ನಡ ಪ್ರಾಧಿಕಾರದಿಂದ ಪ್ರೋತ್ಸಾಹಧನ ಕೊಡಿಸುತ್ತ ಕನ್ನಡ ಭಾಷೆಯ ಸೇವೆ ಸಲ್ಲಿಸುತ್ತಿರುವ ನೀವು, ಈ ಪರಿಸ್ಥಿತಿ ಹೀಗೆಯೆ ಮುಂದುವರೆದರೆ, ಇನ್ನು ಕೆಲವೇ ವರ್ಷಗಳಲ್ಲಿ ಒಳನಾಡಿನ ಮತ್ತು ರಾಜಧಾನಿಯ ಕನ್ನಡದ ಮಕ್ಕಳಿಗೆ ಪ್ರೋತ್ಸಾಹಧನ ಕೊಡಿಸುವಂತೆ ಆಗಬಹುದು. ಇದು ನಿಜಕ್ಕೂ ಅತ್ಯಂತ ಕಳವಳಕಾರಿ ಎನ್ನುವುದು ನನ್ನ ಕಾಳಜಿ. ನನಗೆ ನನ್ನ ಭಾಷೆಯ ಮೇಲಿನ ಪ್ರೀತಿ ಹೆಚ್ಚು. ಹಾಗೆಂದು ಭಿನ್ನಾಭಿಪ್ರಾಯ ಇರುವವರನ್ನು ದ್ವೇಷಿಸುವವನಲ್ಲ. ಆಗಿರುವ ಅನಾಹುತ, ಮುಂದೆ ಆಗಬಹುದಾದ ದುರಂತದ ಬಗ್ಗೆ ಚರ್ಚಿಯಾಗಬೇಕು. ಚರ್ಚೆಯಿಂದ ಒಳ್ಳೆಯದು ಹೊರಹೊಮ್ಮಲಿ. ನಮ್ಮೆಲ್ಲರ ಪ್ರೀತಿಯ, ಹೆಮ್ಮೆಯ ಕನ್ನಡ ಭಾಷೆಯ ಬಳಕೆ ಹೆಚ್ಚುವಂತೆ, ಬೆಳೆಯುವಂತೆ ಆಗಲಿ. ಕನ್ನಡಭಾಷೆಗೆ ಗೆಲುವಾಗಲಿ. ಕನ್ನಡ ಭಾಷೆಯನ್ನು ಪ್ರೀತಿಸುವ ಎಲ್ಲರಿಗೂ ಒಳ್ಳೆಯದಾಗಲಿ. Anand Enguru ಸುಬ್ರಮಣ್ಯ ಸಾರ್,ಇದು ಒಂದೆಡೆ ದಾಖಲಾಗಲಿ. ಒಂದು ನೋಟ್ ಮಾಡಿ ಹಾಕಿ ಸಾರ್! ನೀವು ಪವರ್ಗದ ಬಗ್ಗೆ ಮಾತಾಡಿ ಅದು ತೊಂದರೆ ಕೊಡದಂತೆ ಡಬ್ ಮಾಡಬಹುದು ಎಂದಿದ್ದೀರಿ. ಹಾಗೆ ಅದು ಹೊಂದಿಕೆಯಾಗದಿದ್ದರೆ ಅಂಥವನ್ನು ಸ್ವೀಕರಿಸುವ/ ತಿರಸ್ಕರಿಸುವ ಅವಕಾಶವನ್ನು ನೋಡುಗರಿಗೇ ಬಿಡುವುದು ಸರಿಯಲ್ಲವೇ? Beesu Suresha ‎Subramanya MK ನೀವು ಬರೆದ ಸುದೀರ್ಘ ಒಕ್ಕಣೆಯನ್ನು ಓದಿದೆನಾದರೂ ಉತ್ತರಿಸುವಷ್ಟು ಸಮಯ ಸಿಕ್ಕಿರಲಿಲ್ಲ. ಹಾಗಾಗಿ ನಿಮ್ಮ ಅಭಿಪ್ರಾಯಗಳಿಗೆ ನನ್ನ ಅಭಿಪ್ರಾಯಗಳನ್ನು ಪ್ರತಿಕ್ರಿಯೆಯಾಗಿ ನೀಡುತ್ತಾ ಇದ್ದೇನೆ. ಸ್ವಲ್ಪ ಸುದೀರ್ಘವಾಗಿದೆ… ಬೇಸರಿಸದೆ ಓದಿಕೊಳ್ಳಿ… Beesu Suresha ಮೊದಲಿಗೆ: ನಿಮ್ಮ ಅಭಿಪ್ರಾಯಗಳ ಕಾರಣವಾಗಿ ನನ್ನ ನಿಮ್ಮ ಸ್ನೇಹ ಎಂದಿಗೂ ಹಾಳಾಗದು. ಭಿನ್ನಾಭಿಪ್ರಾಯಗಳು ಸಹಜ ಮತ್ತು ಸ್ವೀಕಾರಾರ್ಹ. ಹಾಗಾಗಿ ನಮ್ಮ ಸ್ನೇಹ ಹಾಳಾಗುವುದು ಎಂಬ ಭಯ ಬೇಕಾಗಿಲ್ಲ ಎರಡು: ೧೯೬೭ರಲ್ಲಿ ಕ್ಷುಲ್ಲಕ ಕಾರಣಕ್ಕೆ “ಡಬ್ಬಿಂಗ್ ನಿಷೇಧ” ಜಾರಿಗೆ ಬಂದಿತು ಎಂದಿದ್ದೀರಿ. ಇದು ಕನ್ನಡ ಹೋರಾಟಗಾರರ ಚರಿತ್ರೆಗೆ ಮಾಡುವ ಅಪಮಾನವಾದೀತು. ಈ ಬಗ್ಗೆ ವಿವರವಾಗಿ ಸುಧಾ ವಾರಪತ್ರಿಕೆಯಲ್ಲಿ ಚ.ಹ.ರಘುನಾಥ ಅವರು ಬರೆದಿರುವ ಲೇಖನವಿದೆ. ಅಥವಾ ಕನ್ನಡ ಸಿನಿಮಾ ಚರಿತ್ರೆ ಎಂಬ ಸಂಪುಟದಲ್ಲಿ ಅರವತ್ತರ ದಶಕದ ಕನ್ನಡ ಸಿನಿಮಾ ಹೋರಾಟ ಕುರಿತ ಸುದೀರ್ಘ ಲೇಖನವಿದೆ. ತಾವು ಓದಬಹುದು. ಆದರೂ ಇಲ್ಲಿರುವ ಇತರರ ಅನುಕೂಲಕ್ಕಾಗಿ ಸ್ಥೂಲವಾಗಿ ಕೆಲವು ವಿವರ ನೀಡುತ್ತೇನೆ. ೧೯೬೦ರಲ್ಲಿ ಮಣಿಪಾಲದಲ್ಲಿ ಆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅ.ನ.ಕೃಷ್ಣರಾಯರು ಮೊದಲಿಗೆ “ಡಬ್ಬಿಂಗ್ ಸಿನಿಮಾ” ಕುರಿತು ಮಾತಾಡಿ, ಇದು ಕನ್ನಡಕ್ಕೆ ಮಾರಕ ರೋಗ ಎಂದರು. ಅಲ್ಲಿಂದಾಚೆಗೆ ಹತ್ತು ವರ್ಷಗಳ ಅಂತರದಲ್ಲಿ ನಡೆದ ಐದೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕೆ ಯಾವುದೇ ಸಿನಿಮಾ ಡಬ್ ಆಗುವುದನ್ನು ವಿರೋಧಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಅಷ್ಟಾದರೂ ಯಾವ ಬದಲಾವಣೆಯೂ ಆಗಿರಲಿಲ್ಲ. ೧೯೭೦ರಲ್ಲಿ ಅ.ನ.ಕೃ. ರಾಮಮೂರ್ತಿ, ವಾಟಾಳ್ ನಾಗರಾಜ್ ಮುಂತಾದ ಕನ್ನಡಿಗರು ಬೀದಿಗಿಳಿದು ನಡೆಸಿದ ಪ್ರತಿಭಟನೆಗಳಿಗೆ ಕನ್ನಡ ಸಿನಿಮಾದ ಕೆಲವು ದಿಗ್ಗಜರೂ ಸಹ (ರಾಜ್‌ಕುಮಾರ್, ಜಿ.ವಿ.ಅಯ್ಯರ್, ಬಾಲಣ್ಣ, ನರಸಿಂಹರಾಜು, ಮುಂತಾದವರು) ಸೇರಿಕೊಂಡರು. ಆಗ ಕನ್ನಡದ ಜನರೆಲ್ಲ ಒಟ್ಟಾಗಿ ಮಾಡಿದ ಪ್ರತಿಭಟನೆಯ ಫಲವಾಗಿ ಕರ್ನಾಟಕದ ಸಿನಿಮಾ ವಿತರಕರು ಮತ್ತು ಪ್ರದರ್ಶಕರ ಪ್ರತಿನಿಧಿಗಳು “ನಾವು ಡಬ್ ಆದ ಕನ್ನಡ ಸಿನಿಮಾ ವಿತರಿಸುವುದಿಲ್ಲ ಹಾಗೂ ಪ್ರದರ್ಶಿಸುವುದಿಲ್ಲ” ಎಂದು ವಾಗ್ದಾನ ಕೊಟ್ಟರು. ಅಲ್ಲಿಂದಾಚೆಗೆ ಕನ್ನಡಕ್ಕೆ ಇತರ ಭಾಷೆಯ ಸಿನಿಮಾಗಳು ಡಬ್ ಆದರೂ ಬಿಡುಗಡೆಯಾಗುವುದು ನಿಂತಿತು. ೧೯೭೦ರಲ್ಲಿ ಬಿಡುಗಡೆಯಾದ ‘ಮಾಯಾಬಜಾರ್” ಈ ಸಾಲಿನಲ್ಲಿ ಬಿಡುಗಡೆಯಾದ ಕಟ್ಟಕಡೆಯ ಸಿನಿಮಾ. ಇದಾವುದು ಕ್ಷುಲ್ಲಕವಾಗಿರಲಿಲ್ಲ. ಕನ್ನಡಿಗರೇ ಮಾಡಿದ ಹೋರಾಟಕ್ಕೆ ಆಗಿನ ಪ್ರದರ್ಶಕರು ಮತ್ತು ವಿತರಕರು ಮಾಡಿಕೊಂಡ ಒಪ್ಪಂದ ಇದಾಗಿತ್ತು. Subramanya MK ನಿಮ್ಮ ಪ್ರಕಾರ ಅ.ನ.ಕೃ., ರಾಮಮೂರ್ತಿ ಅಥವಾ ಡಾ.ರಾಜ್‌ಕುಮಾರ್, ಮುಂತಾದವರು ಕ್ಷುಲ್ಲಕ ಎಂದಾಗಿದ್ದರೆ ಅದು ನಿಮ್ಮ ಸಂಕುಚಿತ ಮತ್ತು ಪೂರ್ವಗ್ರಹಗಳಿಂದ ಕೂಡಿದ ದೃಷ್ಟಿಕೋನವನ್ನಷ್ಟೇ ತೋರಿಸುತ್ತದೆ. ಮೂರು: “ಈ ನಿಷೇಧವನ್ನು ಜನಸಮೂಹದ ಮೇಲೆ ಹೇರಲು ಸುಲಭವಾದುದರಿಂದ ಇದು ದಶಕಗಳ ಕಾಲದಿಂದ ನಡೆದುಕೊಂಡು ಬಂದು ಈಗ ಪುರಾತನ ಸಂಪ್ರದಾಯ ಎಂಬಂತೆ ಆಗಿ ಹೋಗಿದೆ.” ನೀವು ಹೀಗೆಂದಿದ್ದೀರಿ. ಮೊದಲಿಗೆ ಇಲ್ಲಿ ಯಾವುದೇ ನಿಷೇಧ ಇಲ್ಲ ಎಂಬುದು ಮತ್ತು ಸಿನಿಮಾ ವ್ಯಾಪಾರದಲ್ಲಿ ತೊಡಗಿದ್ದ ಜನರು ಇಂತಹ ಒಂದು ವಾಗ್ದಾನವನ್ನು ಕನ್ನಡಿಗರಿಗೆ ನೀಡಿ, ಡಬ್ಬಿಂಗ್ ಸಿನಿಮಾಗೆ ಬಿಡುಗಡೆ ಇಲ್ಲ ಎಂಬ ಅಭ್ಯಾಸವನ್ನು ಜಾರಿಗೆ ತಂದರು ಎಂಬುದನ್ನು ತಾವು ಮನಗಾಣಬೇಕು. ನಮ್ಮ ನಾಡಲ್ಲಿ ಯಾವುದೇ ನಿಷೇಧ ಯಾರಿಗೂ ಹೇರಿಲ್ಲ. ಮಾತುಕೊಟ್ಟವರು ವ್ಯಾಪಾರಿಗಳು. ಆ ಮಾತನ್ನು ಉಳಿಸಿಕೊಳ್ಳಬೇಕಾದವರೂ ಆ ವ್ಯಾಪಾರಿಗಳೇ. ನಾಲ್ಕು: “ಈಗ ಈ ಬೆದರಿಕೆಯ ಪಟ್ಟಿಗೆ ಉಪಗ್ರಹವಾಹಿನಿಗಳನ್ನು ಸೇರಿಸಲಾಗಿದೆ.” ಎಂಬುದು ನಿಮ್ಮ ಮತ್ತೊಂದು ಸಾಲಿನ ಅಭಿಪ್ರಾಯ. ಯಾರನ್ನಾದರೂ ಯಾರಾದರೂ ಬೆದರಿಸಿ ಬದುಕುವ ಅವಶ್ಯಕತೆ ಯಾವ ಕನ್ನಡಿಗನಿಗೂ ಇಲ್ಲ. ಹೀಗಾಗಿ ಇಲ್ಲಿ ಯಾರೂ ಯಾರನ್ನೂ ಬೆದರಿಸುವ ಅವಕಾಶ ಬಂದೇ ಇಲ್ಲ. ವ್ಯಾಪಾರಿಗಳು ತಮ್ಮ ವ್ಯಾಪಾರದ ನಿಯಮಗಳನ್ನು ನಂತರ ಬಂದ ಉಪಗ್ರಹವಾಹಿನಿಯವರಿಗೂ ತಿಳಿಸಿದ್ದಾರೆ. ಅಂತೆಯೇ ಆ ಅಲಿಖಿತ ನಿಯಮವನ್ನು ಉಪಗ್ರಹವಾಹಿನಿಯಲ್ಲಿನ “ವ್ಯಾಪಾರಸ್ಥರು” ಸಹ ಪಾಲಿಸುತ್ತಾ ಇದ್ದಾರೆ. ಐದು: “ಈ ಹೇರುವಿಕೆಯಿಂದ ಕನ್ನಡಕ್ಕೆ ಒಳ್ಳೆಯದಾಗಿದೆಯಾ ಇಲ್ಲವಾ ಎನ್ನುವುದನ್ನು ಪರಿಶೀಲಿಸುವುದು ಭಾಷೆಯ ಬಗ್ಗೆ ಕಾಳಜಿ ವಹಿಸಿರುವವರ ಕರ್ತವ್ಯ ಅಲ್ಲವೇ?” ಎಂದು ತಾವು ಪ್ರಶ್ನಿಸಿದ್ದೀರಿ. ಖಂಡಿತಾ ಒಳ್ಳೆಯದಾಗಿದೆ ಎಂಬುದು ನನ್ನ ಅಭಿಪ್ರಾಯ ಮತ್ತು ಬಹುತೇಕ ಕನ್ನಡಿಗರ ಅಭಿಪ್ರಾಯ. ಆದರೆ ನಿಮ್ಮ ಪ್ರಶ್ನೆಯಲ್ಲಿ ಇರುವ “ಹೇರುವಿಕೆ” ಎಂಬ ಪದ ಬಳಕೆ ಸಂಪೂರ್ಣ ತಪ್ಪು. ಇಲ್ಲಿ ಯಾವುದನ್ನೂ ಯಾರ ಮೇಲೂ ಹೇರಲಾಗಿಲ್ಲ. ಆಯಾ ವ್ಯಾಪಾರಗಳಲ್ಲಿ ಇರುವ ಅಲಿಖಿತ ನಿಯಮಗಳು ಅಲ್ಲಲ್ಲಿ ಚಾಲ್ತಿಯಲ್ಲಿವೆ. ಇನ್ನು ಕನ್ನಡಿಗರಿಗೆ ಹೇಗೆ ಒಳ್ಳೆಯದಾಗಿದೆ ಎಂಬುದಕ್ಕೆ ಸಾಕ್ಷಿ ನಗರದಲ್ಲಿ ಮಾತ್ರವೇ ಅಲ್ಲ ಕರ್ನಾಟಕದಾದ್ಯಂತ ಉಸಿರಾಡುತ್ತಾ ಇರುವ ಕನ್ನಡವೇ ಸಾಕ್ಷಿ. ಇದಕ್ಕೆ ಸಧ್ಯಕ್ಕೆ ಸಾವು ಅಥವಾ ರೋಗವೋ ಬರದಷ್ಟರ ಮಟ್ಟಿಗೆ ಕನ್ನಡ ಉಳಿದಿದೆ. ಹಾಗಾಗಿಯೇ ವರ್ಷಕ್ಕೆ ಲಕ್ಷಾಂತರ ಕನ್ನಡ ಪುಸ್ತಕಗಳ ಮಾರಾಟ ಆಗುತ್ತಾ ಇದೆ, ೧೫೦ಕ್ಕೂ ಹೆಚ್ಚು ಕನ್ನಡ ಸಿನಿಮಾ ತಯಾರಾಗುತ್ತಾ ಇದೆ, ೬೮ಕ್ಕೂ ಹೆಚ್ಚು ದೈನಿಕ ಧಾರಾವಾಹಿಗಳು ಪ್ರಸಾರವಾಗುತ್ತಾ ಇವೆ. ೧೨ಕ್ಕೂ ಹೆಚ್ಚು ಕನ್ನಡ ಉಪಗ್ರಹವಾಹಿನಿಗಳು ಪ್ರಸಾರ ಮಾಡುತ್ತಾ ಇವೆ. ಇನ್ನೂ ಎರಡು ವಾಹಿನಿ ಆರಂಭವಾಗಲಿಲದೆ. ಕನ್ನಡಿಗರು ಇದ್ದಾರೆ ಎಂಬ ಕಾರಣಕ್ಕೆ ಇದೆಲ್ಲವೂ ಆಗುತ್ತಾ ಇದೆ. ಇದೆಲ್ಲವೂ ಡಬ್ಬಿಂಗ್ ಕಾರ್ಯಕ್ರಮಗಳು ಇಲ್ಲ ಎಂಬ ಕಾರಣಕ್ಕೆ ಮಾತ್ರ ಆದುದಲ್ಲ. ಆದರೆ ಅದು ಸಹ ಈ ಬೆಳವಣಿಗೆಗ ಪರೋಕ್ಷವಾಗಿ ಕಾರಣವಾಗಿದೆ ಎಂಬುದಂತೂ ಸತ್ಯ. ಆರು: ” ಈಗ ನಾವು ಪರಭಾಷೆಯ ಚಿತ್ರಗಳನ್ನು ಪುನರ್ನಿರ್ಮಾಣ ಮಾಡುವ ದೈನ್ಯ ಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಕಾರಣ ಏನೆಂದು ಕ್ಷಣಕಾಲ ಯೋಚಿಸುವಿರಾ?” ಈ ಪುನರ್‌ನಿರ್ಮಾಣ ಕೇವಲ ಕನ್ನಡ ಸಿನಿಮಾಗೆ ಮಾತ್ರ ಸಂಬಂಧಿಸಿದ ಸಮಸ್ಯೆ ಅಲ್ಲ. ಜಗತ್ತಿನ ಎಲ್ಲಾ ಭಾಷೆಗಳಲ್ಲೂ ರಿಮೇಕ್ ಸಿನಿಮಾಗಳು ತಯಾರಾಗುತ್ತಿವೆ. ಯಾವುದೋ ಭಾಷೆಯಲ್ಲಿ ಯಶಸ್ವಿಯಾಗಿದ್ದನ್ನು ಮತ್ತೊಂದು ಭಾಷೆಯಲ್ಲಿ ಮಾಡುವುದರಿಂದ ಸುಲಭವಾಗಿ ಲಾಭ ಮಾಡಬಹುದು ಎಂಬ ಕಾರಣಕ್ಕಾಗಿ ಇಂತಹ ಸಿನಿಮಾಗಳನ್ನು ನಿರ್ಮಾಪಕರು ತಯಾರಿಸುತ್ತಾರೆ. ಕನ್ನಡದಲ್ಲಂತೂ ಬಹುತೇಕ ನಾಯಕ ನಟರಿಗೆ ಕತೆಯನ್ನು ಕೇಳುವ ಅಥವಾ ಆ ಬಗ್ಗೆ ನಿರ್ಧರಿಸುವ ಚಾಣಕ್ಷತೆ ಇಲ್ಲ. ಅಂತಹ ನಾಯಕರು ೧೯೮೦ರ ದಶಕದ ಆರಂಭದಿಂದಲೇ ರಿಮೇಕ್ ಸಿನಿಮಾಗಳನ್ನು ಮಾಡತೊಡಗಿದರು. ಇದು ಹೊಸ ಕತೆಯನ್ನು ಕಟ್ಟುವ ಮತ್ತು ಸಾಹಸ (ರಿಸ್ಕ್) ತೆಗೆದುಕೊಳ್ಳುವ ಧೈರ್ಯ ಇಲ್ಲದ ಕೆಲವರಿಂದ ಆರಂಭವಾಗಿ, ಉಳಿದವರಲ್ಲಿ ಬಹುತೇಕರು ಅಂತಹವರನ್ನೇ ಹಿಂಬಾಲಿಸುವಂತೆ ಆಯಿತು. ಇಷ್ಟಾದರೂ ಇಲ್ಲಿ ಅನುವಾದ ಪ್ರಕ್ರಿಯೆ ಎಂಬುದೊಂದು ಆಗುತ್ತದೆ. ಮತ್ತೊಂದು ಭಾಷೆಯ ವಿವರವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸ ನಡೆಯುತ್ತದೆ. ಜೊತೆಗೆ ಅಂತಹ ಸಿನಿಮಾಗಳಲ್ಲಿ ಕನ್ನಡಿಗರೂ ನೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸಿನಿಮಾ ತಯಾರಿಯ ಅವಧಿಯುದ್ಧಕ್ಕೂ ದುಡಿಯುತ್ತಾರೆ. ಹೀಗಾಗಿ ಕನ್ನಡಿಗರಿಗೆ ಆಗಲಿ ಅಥವಾ ಇನ್ನಿತರ ಭಾಷೆಗಳವರಿಗೇ ಆಗಲಿ ಪುನರ್ ನಿರ್ಮಿತ ಸಿನಿಮಾಗಳಿಂದ ದೊಡ್ಡ ಅಪಾಯವಾಗಿಲ್ಲ. ಆ ಸಿನಿಮಾಗಳ ನಡುವೆ ಸೃಜನಶೀಲ ಶಕ್ತಿ ಮತ್ತು ಸಾಹಸ ಪ್ರವೃತ್ತಿ ಇರುವ ಜನ ಹೊಸ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಅದು ಎಂದಿಗೂ ನಿಂತಿಲ್ಲ. ನಿಲ್ಲುವುದೂ ಇಲ್ಲ. ಏಳು – “ದಕ್ಷಿಣ ಭಾರತದ ತೆಲುಗು, ತಮಿಳು ನಾಡುಗಳಲ್ಲಿ ಡಬ್ಬಿಂಗ್‌ ನಿಷೇಧವಿಲ್ಲ. ನಮ್ಮ ಕರ್ನಾಟಕದಲ್ಲಿ ಮಾತ್ರ ಇದೆ. ಆದರೆ ನಮ್ಮ ಚಿತ್ರರಂಗದ ಸಮಕಾಲೀನವಾದ ಆ ಭಾಷೆಗಳ ಚಿತ್ರೋದ್ಯಮ ಹೇಗೆ ಬೆಳೆದಿದೆ, ನಮ್ಮ ಕನ್ನಡ ಚಲನಚಿತ್ರೋದ್ಯಮ ಹೇಗೆ ಸೊರಗಿದೆ ಎನ್ನುವುದು ಪ್ರತ್ಯಕ್ಷವಾಗಿ ಕಾಣಿಸುತ್ತಿದೆಯಲ್ಲ. ಇದಕ್ಕೆ ಮೂಲ ಕಾರಣ ನಮ್ಮ ಚಿತ್ರೋದ್ಯಮದಿಂದ ಕನ್ನಡತನ ಮಾಯವಾಗಿರುವುದು, ಅಲ್ಲವೇ?” ನೀವು ಹೀಗೊಂದು ಪ್ರಶ್ನೆ ಕೇಳಿದ್ದೀರಿ. ಇದು ಎತ್ತಣಿಂದೆತ್ತಣ ಸಂಬಂಧವಯ್ಯ ಎಂಬ ಹಾಡನ್ನು ನೆನಪಿಸುತ್ತಿದೆ. ಕನ್ನಡ ಸಿನಿಮಾ ಮಾರುಕಟ್ಟೆ ಇತರ ರಾಜ್ಯ ಹಾಗೂ ದೇಶದಲ್ಲಿ ವಿಸ್ತರಿಸದೆ ಇರುವುದಕ್ಕೆ ಕಾರಣ ಆಯಾ ಪ್ರದೇಶದಲ್ಲಿನ ಕನ್ನಡಿಗರ ಅಭಿಮಾನ ಶೂನ್ಯತೆ ಮಾತ್ರ. ಚೆನ್ನೈ ನಗರ ಒಂದರಲ್ಲೇ ಹತ್ತು ಲಕ್ಷಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಮಧುರೈ ಸುತ್ತಮುತ್ತ ಒಕ್ಕಲಿಗರು (ಗೌಂಡರ್) ಎಂದು ಕರೆಸಿಕೊಳ್ಳುವ ಕನ್ನಡಿಗರಿದ್ದಾರೆ. ಇವರೆಲ್ಲರೂ ೮೦ರ ದಶಕದ ವರೆಗೆ ಕನ್ನಡ ಸಿನಿಮಾಗಳನ್ನು ಅಲ್ಲಿಯೂ ನೋಡುತ್ತಾ ಇದ್ದವರು. ಅವರ ಮುಂದಿನ ತಲೆಮಾರುಗಳು ಕನ್ನಡದಿಂದ ದೂರ ಉಳಿದುದರಿಂದ ಇಂದು ಅಲ್ಲಿನ ಕನ್ನಡ ಮಾರುಕಟ್ಟೆ ತಟಸ್ಥವಾಗಿದೆ. ಇದು ಬಹುತೇಕ ಕನ್ನಡ ಸಾಂದ್ರೆತೆ ಇರುವ ಇತರ ರಾಜ್ಯಗಳಿಗೆ ಸತ್ಯ. ಅಪರೂಪಕ್ಕೊಮ್ಮೆ ಮಾತ್ರ ಈ ಕನ್ನಡಿಗರ ಕನ್ನಡತನ ಜಾಗೃತವಾಗುತ್ತದೆ. ರಾಜ್ಯೋತ್ಸವವನ್ನೋ ಕರ್ನಾಟಕದಿಂದ ಒಬ್ಬ ಅತಿಥಿಯನ್ನೀ ಕರೆಸಿ ಕಾರ್ಯಕ್ರಮ ಮಾಡಿ, ಆ ಊರಿನ ನಲವತ್ತು ದಾಟಿದ ಕನ್ನಡಿಗರು ಮಾತ್ರ ಸೇರಿ ಚಪ್ಪಾಳೆ ಹೊಡೆದು ಮನೆ ಸೇರುತ್ತಾರೆ. ಇಂತಹ ಕನ್ನಡಿಗರಿಂದಾಗಿ ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತಾರವಾಗಿಲ್ಲವೇ ಹೊರತು ಮತ್ಯಾವ ಕಾರಣವೂ ಇಲ್ಲ. ಬದಲಿಗೆ ತೆಲುಗರು, ತಮಿಳರು, ಮಲೆಯಾಳದವರು ತಾವು ಎಲ್ಲಿಯೇ ಇರಲಿ ತಮ್ಮ ಭಾಷೆಯ ಸಿನಿಮಾವನ್ನು ನೋಡುತ್ತಾರೆ. ಹೀಗಾಗಿ ಆಯಾ ಭಾಷೆಗೆ ಬೃಹತ್ ಲಾಭವಾಗಿದೆ. ನೀವು ಪರರಾಜ್ಯಕ್ಕೆ ಹೋದಿರಿ. ಕೆಲವು ವರ್ಷಗಳ ಹಿಂದೆ ಫೋರಮ್ ಮಾಲ್‌ನಲ್ಲಿ ಇಡಿಕಿರಿದು ನಡೆಯುತ್ತಿದ್ದ ಕನ್ನಡ ಸಿನಿಮಾಗಳು ಈಗ ಅಲ್ಲಿ ಒಂದು ವಾರವೂ ನಿಲ್ಲುತ್ತಿಲ್ಲ. ಇದು ಸಿನಿಮಾ ಉದ್ಯಮದಲ್ಲಿಯೇ ಇರುವ ತಮಗೂ ತಿಳಿದ ಸಂಗತಿಯಾದ್ದರಿಂದ ವಿಸ್ತರಿಸದೆ ಮುಮದಿನ ವಿಷಯಕ್ಕೆ ಸಾಗುತ್ತೇನೆ. ಎಂಟು: “ತೆಲುಗು/ತಮಿಳು ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಚಿತ್ರಗಳು ಕೇವಲ ಬೆರಳೆಣಿಕೆಯಷ್ಟು ಮತ್ತು ಅವು ಹಾಕಿರುವ ಬಂಡವಾಳವನ್ನು ಸಹ ಹಿಂದಿರುಗಿಸುತ್ತಿಲ್ಲ. ಇದಕ್ಕೆ ಕಾರಣ ಆ ರಾಜ್ಯಗಳಲ್ಲಿನ ಜನರು ಮನರಂಜನೆಗೆ ತಮ್ಮದೇ ನುಡಿಯ ಮೇಲೆ ಅವಲಂಬಿತವಾಗಿರುವುದು, ಅಲ್ಲವೇ?- ಎಂಬುದು ನಿಮ್ಮ ಮತ್ತೊಂದು ಪ್ರಶ್ನೆ. ಈ ಪ್ರಶ್ನೆಗೆ ಭಾಗಶಃ ಉತ್ತರ ಹಿಂದಿನ ಪ್ರಶ್ನೆಯಲ್ಲಿಯೇ ಇದೆ. ಹೊರನಾಡಲ್ಲಿ ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ಆಗಬೇಕಿದೆ. ವಿಶೇಷವಾಗಿ ವಲಸೆ ಹೋದವರ ನಂತರದ ತಲೆಮಾರುಗಳನ್ನು ಕನ್ನಡ ಲೋಕದಲ್ಲಿ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಆ ಪ್ರಯತ್ನಗಳು ಆಗಬೇಕು. ಇದಕ್ಕೆ ಅಲ್ಲಿನ ಸರ್ಕಾರಗಳು ಕಡ್ಡಾಯವಾಗಿ ಅಲ್ಲಿನ ರಾಜ್ಯಭಾಷೆಯನ್ನು ಪ್ರಥಮ ಭಾಷೆಯಾಗಿಯೇ ಓದಬೇಕು ಎಂಬ ನಿಯಮ ತಂದುದು ಸಹ ಕಾರಣವಾಗಿದೆ. ನಮ್ಮಲ್ಲಿ ನಮ್ಮ ರಾಜ್ಯದ ಒಳಗಡೆಯೇ ಅಂತಹ ನಿಯಮ ಮಾಡಿದರೂ ಜಾರಿಗೆ ತರುವುದು ಸಾಧ್ಯವಾಗಿಲ್ಲ. ತಮಿಳು, ತೆಲುಗು, ಮಲೆಯಾಳ ರಾಜ್ಯಗಳಲ್ಲಿ ಯಾವುದೇ ಮಾತೃಭಾಷಿಕನಾದರೂ ಅಲ್ಲಿಯ ರಾಜ್ಯಭಾಷೆಯನ್ನು ಕಡ್ಡಾಯವಾಗಿ ಕಲಿಯುತ್ತಾನಾದ್ದರಿಂದ ಅಲ್ಲಿ ತಯಾರಾಗುವ ಆ ಭಾಷೆಯ ಮನರಂಜನೆಗೂ ಆಯಾ ಹೊಸಬನು ಸೇರಿಕೊಳ್ಳುತ್ತಾನೆ. ಕರ್ನಾಟಕದಲ್ಲಿ ಹಾಗಾಗಿಲ್ಲ. ಇದು ಹೊರದೇಶಗಳಲ್ಲಿಯೂ ಇರುವ ಪರಿಸ್ಥಿತಿ. ಅಲ್ಲಿ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನಗಳು ಆಗುತ್ತಿವೆಯಾದರೂ ಹಾಗೆ ಕನ್ನಡ ಕಲಿತವರನ್ನು ಕನ್ನಡದಲ್ಲಿ ತಯಾರಾದ ಮನರಂಜನೆಯನ್ನು ನೋಡುವಂತೆ ಮಾಡುವುದು ಕಷ್ಟವಾಗಿದೆ. ಅಲ್ಲಿನ ಹೊಸ ತಲೆಮಾರಿನವರು ಕನ್ನಡ ಹಾಡುಗಳನ್ನು ಕಲಿಯುತ್ತಾರೆ. ಆದರೆ ಕನ್ನಡ ಸಿನಿಮಾ ಅಥವಾ ಇನ್ನಿತರ ಮನರಂಜನೆಯನ್ನು ಸ್ವೀಕರಿಸುವುದು ಅತ್ಯಂತ ಕಡಿಮೆ. (ಇವುಗಳನ್ನು ನಾನು ಖುದ್ದಾಗಿ ಕಣ್ಣಾರೆ ಕಂಡು ಹೇಳುತ್ತಾ ಇದ್ದೇನೆ) ಒಂಬತ್ತು: “ನಮ್ಮ ಕನ್ನಡ ನಾಡಿನ ಮಕ್ಕಳು ಮನರಂಜನೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವ ಅವಕಾಶವನ್ನು ಈ ಅಸಾಂವಿಧಾನಿಕ “ಡಬ್ಬಿಂಗ್‌ ನಿಷೇಧ” ಕಿತ್ತುಕೊಂಡಿದೆ. ಹೀಗಾಗಿ ಬೆಳೆಯುವ ಹಂತದಲ್ಲಿ ನಮ್ಮ ಕನ್ನಡದ ಮಕ್ಕಳು ಶಾಲೆ ಮತ್ತು ಪೋಷಕರ ಜೊತೆ ಇಂಗ್ಲೀಶ್‌ನಲ್ಲಿ ವ್ಯವಹರಿಸುತ್ತ, ಕನ್ನಡವನ್ನು ಕೇವಲ ಅಜ್ಜ-ಅಜ್ಜಿಯ ಜೊತೆ ಅಥವಾ ಮನೆಯ ಕೆಲಸದವರ ಜೊತೆ ಬಳಸುವುದಕ್ಕೆ ಸೀಮಿತಗೊಳಿಸಿಕೊಳ್ಳುವ ಅನಿರ್ವಾಯತೆಗೆ ಸಿಕ್ಕಿರುವುದರಿಂದ, ನಮ್ಮ ಕನ್ನಡದ ಮಕ್ಕಳಿಗೆ ಗೊತ್ತಿರುವ ಕನ್ನಡದ ಪದಗಳ ಸಂಖ್ಯೆ ಬಹು ಕಡಿಮೆ ಎನ್ನುವುದು ತಮ್ಮ ಗಮನಕ್ಕೆ ಬಂದಿಲ್ಲವೇ?” ಇದು ತಮ್ಮ ಮತ್ತೊಂದು ಪ್ರಶ್ನೆ. ಅದಾಗಲೇ ಹೇಳಿದ್ದನ್ನು ಮತ್ತೊಮ್ಮೆ ಹೇಳುವುದಾದರೆ ವ್ಯಾಪಾರಿಗಳು ಮತ್ತು ಕನ್ನಡಿಗರ ನಡುವೆ ಆಗಿರುವ ವಾಕ್-ಒಪ್ಪಂದ ಇದು. ಇದಕ್ಕೂ ಸಂವಿಧಾನಕ್ಕೂ ಸಂಬಂಧ ಇಲ್ಲ. ಹಾಗಾಗಿ “ಅಸಂವಿಧಾನಿಕ” ಎಂಬ ಪದ ಬಳಕೆಯೇ ತಪ್ಪು. ಇನ್ನು ಈ ನಾಡಿನ ಮಕ್ಕಳು ಇಂಗ್ಲೀಷ್ ಹೆಚ್ಚಾಗಿ ಕಲಿತದ್ದು ಅವರೆದುರಿಗೆ ಆದ ಐಟಿ-ಬಿಟಿ ಬೂಮ್‌ನಿಂದ. ನಮ್ಮ ಮಕ್ಕಳು ಇಂಗ್ಳೀಷ್ ಕಲಿತರೆ ಮಾತ್ರ ಹೆಚ್ಚು ಸಂಬಳದ ಕೆಲಸ ಅಥವಾ ವಿದೇಶಿ ಕೆಲಸ ಸಿಗುತ್ತದೆ ಎಂದು ನಂಬಿದ ಪೋಷಕರು ಎರಡು ದಶಕಗಳಿಂದ ಮಾಡಿದ ತಪ್ಪು ನಿರ್ಧಾರಗಳಿಂದ ಇಂದು ಕೆ.ಎಸ್.ನರಸಿಂಹಸ್ವಾಮಿಯಂತಹ ಪ್ರಖ್ಯಾತ ಕನ್ನಡ ಕವಿಯ ಮೊಮ್ಮಗನಿಗೆ ಕನ್ನಡ ಓದಲು ಬರೆಯಲು ಬಾರದ ಸ್ಥಿತಿ ತಲುಪಿದ್ದೇವೆ. ಅಂತಹವರ ಸಂಖ್ಯೆಯ ಜೊತೆಗೆ ಕಳೆದ ಮೂರು-ನಾಲ್ಕು ವರ್ಷಗಳಿಂದ ಆಗುತ್ತಿರುವ ಜಾಗೃತಿಯ ಪ್ರಯತ್ನವಾಗಿ ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎಂಬುದು ಸಹ ತಾವು ಗುರುತಿಸಿಕೊಳ್ಳಬೇಕಾದ ವಿಷಯ. ಈ ಪ್ರಕ್ರಿಯೆಯು ಕರ್ನಾಟಕದಾದ್ಯಂತ ಹೆಚ್ಚಾಗಿರುವುದರಿಂದ ೨೦೦೬ರಲ್ಲಿ ಇದ್ದ ಶೇಕಡಾ ೬೫ ರಷ್ಟು ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ಸ್ಥಿತಿಯಿಂದ ಇಂದು ನಾವು ಶೇಕಡಾ ೮೦ರಷ್ಟು ಮಕ್ಕಳು ಕನ್ನಡ ಕಲಿಯುವ ಹಂತಕ್ಕೆ ಬಂದಿದ್ದೇವೆ. ಈ ಸ್ಥಿತಿ ಬರುವುದಕ್ಕೆ ಅನೇಕ ಕನ್ನಡ ಚಳುವಳಿಗಾರರು, ಕರವೇ ಯಂತಹ ಸಂಸ್ಥೆಗಳು ಮತ್ತು ಇನ್ನಿತರ ಇಂತಹ ಅನೇಕರ ಕೆಲಸಗಳು ಕಾರಣವಾಗಿವೆ. ಆದ್ದರಿಂದ ಅಜ್ಜ-ಅಜ್ಜಿಯರ ಜೊತೆಗೆ ಮಾತ್ರ ಕನ್ನಡ ಮಾತಾಡುವ ಮಕ್ಕಳ ಸಂಖ್ಯೆ ಖಂಡಿತವಾಗಿ ಕಡಿಮೆಯಾಗಲಿದೆ. ಆ ಬಗ್ಗೆ ನನಗಂತೂ ಯಾವುದೇ ಅನುಮಾನಗಳಿಲ್ಲ. ಒಂಬತ್ತು ಮುಂದುವರಿಕೆ: ಹಾಗಾಗಿ ಇಂಗ್ಲೀಷ್ ಕಲಿಯುತ್ತಿರುವ ಮಕ್ಕಳನ್ನು ಕನ್ನಡಕ್ಕೆ ಡಬ್ಬಿಂಗ್ ತಂದು ಮರಳಿ ಕನ್ನಡಕ್ಕೆ ತರುತ್ತೇವೆ ಎಂದೆನ್ನುವುದು ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗೆ. ಒಮ್ಮೆ ಬೇರೆಯ ಭಾಷೆಯನ್ನು ಆತುಕೊಂಡ ವ್ಯಕ್ತಿಯು ಆತನೆದುರಿಗೆ ಕೇವಲ ಕನ್ನಡ ನುಡಿ ಇರುವ ಮನರಂಜನೆ ಇಡುತ್ತೇನೆ ಎಂದಾಗಲೂ “ಇದು ಹೇರಿಕೆ” ಎನ್ನಬಹುದು. ಅದರಿಂದಾಗಿ ಈಗ ಈ ವೇದಿಕೆಯಲ್ಲಿ ಕನ್ನಡ ಉಳಿಸುವ ಮಾತಾಡುತ್ತಾ, ಗ್ರಾಹಕ ಸಂಬಂಧಿ ಮಾತಾಡುತ್ತಾ ಇರುವವರು, ಆ ಗ್ರಾಹಕನು ಕೇಳುವ ಆಯ್ಕೆಯನ್ನೂ ಎದುರಿಗೆ ಇಟ್ಟಾಗ ಕನ್ನಡ ಬಲ್ಲವನಿರಲಿ, ಬಾರದವನಿರಲಿ ಯಾವುದೇ ಮನರಂಜನೆಯನ್ನು ಮೂಲಭಾಷೆಯಲ್ಲಿ ನೋಡುತ್ತಾನೆ ಎಂಬುದು ಸಹ ತಮಗೆ ತಿಳಿದಿರಬೇಕು. ಹೀಗಾಗಿ ನೀವು ಬಯಸುತ್ತಾ ಇರುವ ‘ಡಬ್ಬಿಂಗ್’ ಎಂಬುದು ನೀವು ಬಯಸುವಂತಹ ಲಾಭ ತರಲಾರದು ಎಂಬುದು ಸ್ಪಷ್ಟ. (ನಾನೇ ಖುದ್ದಾಗಿ ತಮಿಳುನಾಡಲ್ಲಿ ಕಂಡಂತೆ ಎಲ್ಲಾ ಶ್ರೀಮಂತ ಮಧ್ಯಮವರ್ಗದವರ ಮನೆಯಲ್ಲಿ ಇರುವ ಮಕ್ಕಳು ತಮಿಳು ಭಾಷೆಯಲ್ಲಿ ಡಬ್ ಆದ ಕಾರ್ಟೂನ್ ಲಭ್ಯವಿದ್ದರೂ ಅವುಗಳನ್ನು ಇಂಗ್ಲೀಷಿನಲ್ಲಿಯೇ ನೊಡುತ್ತಾರೆ. ಅದಕ್ಕಾಗಿಯೇ ಆ ಹಣ ಇರುವ ಜನ ತಮ್ಮ ಮನೆಗಳಿಗೆ ಡಿಶ್ ಹಾಕಿಸಿಕೊಂಡಿರುತ್ತಾರೆ. ಇಂತಹ ಡಿಶ್ ಕೊಳ್ಳುವ ಶಕ್ತಿ ಇಲ್ಲದ ಬಡವನ ಮನೆಯಲ್ಲಿ ಮಾತ್ರ ತಮಿಳು ಕಾರ್ಯಕ್ರಮ ಬರುತ್ತಾ ಇರುತ್ತದೆ. ಹೀಗಾಗಿ ದುಡ್ಡಿರುವವರಿಗೆ ಒಂದು, ಇಲ್ಲದವರಿಗೆ ಮತ್ತೊಂದು ಎಂಬುದು ನಿರಂತರವಾಗಿ ಮುಂದುವರೆಯುತ್ತಾ ಇರುವುದನ್ನು ನಾನು ಖುದ್ದಾಗಿ ಚೆನ್ನೈ, ತಿರುವನಂತಪುರ, ಹೈದರಾಬಾದ್‌ಗಳಲ್ಲಿ ಕಂಡಿದ್ದೇನೆ) ಹತ್ತು: ” ಇಂದು ಪಟ್ಟಣಗಳಲ್ಲಿ ಆಗುತ್ತಿರುವ ಈ ಬೆಳವಣಿಗೆ ಕ್ರಮೇಣ ಹಳ್ಳಿಗಳನ್ನು ಆವರಿಸಿಕೊಂಡಾಗ ಕನ್ನಡ ಭಾಷೆಗೆ ಕುತ್ತಾಗುವುದಿಲ್ಲವೇ? ಈ ರೀತಿ ಬೆಳೆದು ದೊಡ್ಡವರಾಗಿರುವವರು ಪರಭಾಷೆಯ ಚಲಚಿತ್ರಗಳಿಂದ ಪ್ರಭಾವಿತರಾಗಿ, ಕನ್ನಡ ಭಾಷೆಯ ಚಲನಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿರುವುದರಿಂದಲೇ ನಮ್ಮ ಭಾಷೆಯ ಬಹಳಷ್ಟು ಚಿತ್ರಗಳು ಪರಭಾಷಾ ಚಿತ್ರಗಳು ನಕಲಿನಂತೆ ಕಾಣುತ್ತಿದೆಯಲ್ಲವೇ? ಅಲ್ಲದೇ ರೀಮೇಕ್‌ ಹಾವಳಿಗೆ ಇದೂ ಒಂದು ಕಾರಣ ಅಲ್ಲವೇ?” ಇದು ತಮ್ಮ ಮತ್ತೊಂದು ಪ್ರಶ್ನೆ. ಅದಾಗಲೇ ಈ ಪ್ರಶ್ನೆಯಲ್ಲಿ ಅರ್ಧ ಭಾಗಕ್ಕೆ ಉತ್ತರಿಸಿ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಕುರಿತು ಹೇಳಿದ್ದೇನೆ. ಎರಡನೆಯ ಭಾಗದಲ್ಲಿ ಇರುವ “ನಮ್ಮ ಚಿತ್ರಗಳು ಪರಭಾಷಾ ಚಿತ್ರಗಳ ನಕಲಿನಂತೆ ಕಾಣುತ್ತಿಲ್ಲವೇ?” ಎನ್ನುವ ಮಾತಿಗೆ ನಮ್ಮಲ್ಲಿ ಸಿನಿಮಾ ತಯಾರಿಕೆಯಲ್ಲಿ ನನಗಿಂತ ಹೆಚ್ಚು ತೊಡಗಿಕೊಂಡಿರುವ ನಿಮ್ಮಂತಹವರೇ ಉತ್ತರ ಹೇಳಬಹುದು. ಆದರೂ ಒಳಗಿದ್ದೇ ಇಂತಹ ಪ್ರಶ್ನೆ ನೀವು ಕೇಳುತ್ತಾ ಇರುವುದರಿಂದ ನನಗೆ ತಿಳಿದ ಸತ್ಯಗಳನ್ನು ಹೇಳುತ್ತೇನೆ. ಕನ್ನಡ ಸಿನಿಮಾಗಳು ಆರಂಭದಲ್ಲಿ ರಂಗಭೂಮಿಯ ನಕಲುಗಳಾಗಿದ್ದವು. ಸಿನಿಮಾ ಭಾಷೆಯನ್ನು ಕನ್ನಡ ಸಿನಿಮಾ ತಯಾರಕ ಪಕ್ವಗೊಳಿಸಿಕೊಳ್ಳುವ ಹೊತ್ತಿಗೆ ಹಾಲಿವುಡ್ ಸಿನಿಮಾಗಳ ಪ್ರಭಾವ ಆತನ ಮೇಲೆ ಎಷ್ಟಾಗಿತ್ತು ಎಂದರೆ ಆತ ಅದೇ ಸಿನಿಮಾ ಭಾಷೆ ಮತ್ತು ಕಥನ ಕಟ್ಟಡವನ್ನು ತನ್ನ ಸಿನಿಮಾಗಳಿಗೆ ಬಳಸತೊಡಗಿದ. ಹಾಗಾಗಿಯೇ ನಮ್ಮಲ್ಲಿ ಸೂಪರ್ ಸ್ಟಾರ್‌ಗಳ ಉದಯವೂ ಆಯಿತು. ಇದನ್ನು ಮೆಟ್ಟಿ ನಿಂತು ನಿರ್ದೇಶಕ ಪ್ರಧಾನ ಸಿನಿಮಾಗಳು ತಯಾರಾದಗೆಲ್ಲಾ ಅಂತಹ ನಿರ್ದೇಶಕರನ್ನು ನಾಯಕ ಮಣಿಗಳೇ ವ್ಯವಸ್ಥಿತವಾಗಿ ತುಳಿದುದನ್ನು ನಾವು ಕೇವಲ ಕನ್ಡಡವಲ್ಲ ನೆರೆಯ ಎಲ್ಲಾ ಭಾಷೆಗಳಲ್ಲೂ ಕಾಣುತ್ತೇವೆ. ಕನ್ನಡದಲ್ಲಿ ಪುಟ್ಟಣ್ಣ ಅವರು ದಶಕಗಳ ಕಾಲ ಈ ಒತ್ತಡ ತಪ್ಪಿಸಿಕೊಂಡರು. ನಂತರ ಆ ಚಳುವಳಿ ಇಲ್ಲಿ ಮುಂದುವರೆಯಲಿಲ್ಲ. ಬದಲಿಗೆ ನೆರೆಯ ತಮಿಳುನಾಡಲ್ಲಿ ಭಾರತೀರಾಜ, ಭಾಗ್ಯರಾಜ ಅವರಿಂದ ನಿರ್ದೇಶಕ ಪ್ರಧಾನ ಸಿನಿಮಾ ಚಳುವಳಿ ಮುಂದುವರೆಯಿತು. ಆದರೆ ೯೦ರ ದಶಕದ ಅಂತ್ಯದಲ್ಲಿಯೇ ಇಂತಹ ಎಲ್ಲಾ ನಿರ್ದೇಶಕರನ್ನೂ ನಾಯಕ ಪ್ರಧಾನ ಸಿನಿಮಾಗಳಿಗೆ ಸೆಳೆದುಕೊಳ್ಳಲಾಯಿತು. ಇದರಿಂದಾಗಿ ಕಳೆದ ದಶಕದ ಅಂತ್ಯದಲ್ಲಿ ಬಂದ ಹೊಸ ತಲೆಮಾರಿನ ನಿರ್ದೇಶಕರು ಸೊಗಡುಗಳನ್ನು ಹಿಡಿದು ಸಿನಿಮಾ ಕಟ್ಟತೊಡಗಿದರು. ಸಧ್ಯಕ್ಕೆ ತಮಿಳುನಾಡಿನ ಅತ್ಯಂತ ಸೃಜನಶೀಲ ಶಕ್ತಿಗಳು ಆ ಚಳುವಳಿಯಲ್ಲಿ ವರ್ಷಕ್ಕೆರಡರಂತೆ ಪ್ರಯತ್ನ ಮಾಡುತ್ತಿವೆ. ಅಂತಹ ಪ್ರಯೋಗ ನಮ್ಮಲ್ಲಿಯೂ ಆಗುತ್ತಿದೆ. ಅದಕ್ಕೆ “ದುನಿಯಾ”, “ಪಂಚರಂಗಿ” ಯಂತಹ ಸೊಗಡುಗಳ ಮೂಲಕವೇ ಕಟ್ಟಿದ ಸಿನಿಮಾಗಳನ್ನು ಉದಾಹರಿಸಬಹುದು. ನಂತರ “ಸಿದ್ಲಿಂಗು” ತರಹದ ಕೆಲವು ಪ್ರಯತ್ನಗಳಾಗಿವೆ. ಈಚೆಗೆ “ಗೋವಿಂದಾಯ ನಮಃ”, “ಒಲವೇ ಮಂದಾರ”ದಂತಹ ಪ್ರಯತ್ನಗಳಲ್ಲಿ ಇಂತಹ ಹೊಸತನದ ಪ್ರವೇಶವಾಗಿದೆ. ನಾಯಕ ಮಣಿಗಳ ಶಕ್ತಿಯ ಮೇಲೆಯೇ ನಿಂತಿರುವ ಉದ್ಯಮವೊಂದರಲ್ಲಿ ಪ್ರಯೋಗ ಪ್ರಿಯತೆ ಚಳುವಳಿಯಾಗಿಯೇ ಬರಬೇಕು. ಆ ನಿಟ್ಟಿನಲ್ಲಿ ನಾನಂತೂ ಆಶಾವಾದಿ. ಹತ್ತರ ಮುಂದುವರಿಕೆ: ಆದರೆ ಪರಭಾಷಾ ಚಿತ್ರಗಳ ಪ್ರಭಾವದಿಂದ ಕನ್ನಡದಲ್ಲಿ ಪುನರವತರಣಿಕೆ ಹೆಚ್ಚಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಪುನರವತರಣಿಕೆ ಯಾಕಾಗುತ್ತದೆ? ಯಾರಿಂದ ಆಗುತ್ತದೆ ಎಂಬುದನ್ನು ಹಿಂದೆಯೇ ವಿವರವಾಗಿ ತಿಳಿಸಿದ್ದೇನೆ. ಪುನರವತರಣಿಕೆ ಎಂಬುದು ಉದ್ಯಮದಲ್ಲಿ ಒಂದಷ್ಟು ಜನಕ್ಕೆ ಕೆಲಸ ಕೊಡುತ್ತದೆಯಾದರೂ ಅದು ಸೃಜನಶೀಲತೆಯ ಸಾವೇ… ಅಂತಹದನ್ನು ತಪ್ಪಿಸಲು ನಮ್ಮಲ್ಲಿ ಬರುತ್ತಿರುವ ಹೊಸ ತಲೆಮಾರಿನ ಸಿನಿಮಾ ಕತೆಗಾರರು ಸಿದ್ಧವಾಗಬೇಕಿದೆ. ಈಗಂತೂ ಡಿಜಿಟಲ್ ಕ್ರಾಂತಿಯೇ ಆಗುತ್ತಾ ಇರುವದರಿಂದ ನಾಯಕ ಮಣಿಗಳ ಹಂಗಿಲ್ಲದೆ ತಯಾರಾಗುವ ಅನೇಕ ಸಿನಿಮಾಗಳು ಬರುವುದು ಸಾಧ್ಯ. ಅದರೊಂದಿಗೆ ನೀವು ಭಯ ಪಡುತ್ತಾ ಇರುವ ಅಂಶಗಳು ದೂರ ಸರಿಯುತ್ತವೆ. ಹನ್ನೊಂದು: “ಪ್ರಪಂಚದಾದ್ಯಂತ ಮನರಂಜನೆಯನ್ನು ತಾಯಿನುಡಿಯಲ್ಲಿ ಪಡೆದುಕೊಳ್ಳುವುದು ಸ್ವಾಭಾವಿಕ ಹಕ್ಕು ಎಂದು ಭಾವಿಸುತ್ತಿರುವಾಗ, ನಮ್ಮ ನಾಡಿನಲ್ಲಿ ಮಾತ್ರ ಮನರಂಜನೆಯನ್ನು ಪರಭಾಷೆಯಲ್ಲಿ ಪಡೆದುಕೊಳ್ಳುವಂತೆ ಮಾಡಿ, ಪರಭಾಷೆಯನ್ನು ಕಲಿಯುವಂತೆ ಮಾಡುತ್ತಿರುವುದರಿಂದ, ಕನ್ನಡದ ಬಳಕೆ ಕಡಿಮೆಯಾಗಿ, ಪರಭಾಷೆಯ ಬಳಕೆ ಹೆಚ್ಚುತ್ತಿದೆ. ಇದನ್ನು ತಾವು ಗಮನಿಸಿಲ್ಲವೇ?” ಇದು ತಮ್ಮ ಮತ್ತೊಂದು ಪ್ರಶ್ನೆ. ತಾಯಿನಿಡಿಯಲ್ಲಿಯೇ ಪ್ರಾಥಮಿಕ ಶಿಕ್ಷಣವಾಗಬೇಕು ಎಂಬುದನ್ನೇ ಇನ್ನೂ ಜಾರಿಗೆ ತರಲು ಆಗಿಲ್ಲ ನಮಗೆ ಎಂಬುದು ತಮಗೆ ಕಂಡಿಲ್ಲವೇ… ಹೀಗಿರುವಾಗ ಮೂಲಭೂತ ಹಕ್ಕಾದ ಶಿಕ್ಷಣದಲ್ಲಿ ಜಾರಿಯಾಗದ್ದನ್ನು ಮೂಲಭೂತ ಹಕ್ಕಲ್ಲದ ಮತ್ಯಾವುದಕ್ಕೋ ಆರೋಪಿಸಿ ಮಾತಾಡುವುದು ಸರಿಯೇ… ಹೀಗೆ ಹೇಳಿದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಂತೆ. ಆದರೆ ಅಷ್ಟಕ್ಕೇ ನಿಲ್ಲಿಸದೆ ಮುಂದುವರೆದು ತಮಗೆ ಕೆಲವು ಸತ್ಯಗಳನ್ನು ತಿಳಿಸುತ್ತೇನೆ. ಈ ನಾಡಿನ ಅಶಿಕ್ಷಿತರು ಇಂಗ್ಲೀಷ್ ಅಥವಾ ಇನ್ಯಾವುದೇ ಭಾಷೆಯನ್ನು ಕಲಿತಿರುವುದೇ ಮನರಂಜನಾ ಮಾಧ್ಯಮದಿಂದ. ಹಾಗಾಗಿಯೇ ಅಶಿಕ್ಷಿತರು ಎಷ್ಟೋ ಜನರಿಗೆ ಕೇವಲ ಇತರ ಭಾಷೆಗಳು ಬರುತ್ತವೆ ಎಂಬ ಕಾರಣಕ್ಕಾಗಿಯೇ ಕೆಲಸ-ಕೂಲಿ ದೊರಕಿಸಿಕೊಂಡಿದ್ದಾರೆ. ಇಂದು ಮನರಂಜನೆ ಪಡೆಯಲು ಸಿನಿಮಾ ಮಂದಿರಕ್ಕೆ ಹೋಗುವವರಲ್ಲಿ ಅಂತಹ ಅಶಿಕ್ಷಿತರೇ ಬಹುಸಂಖ್ಯಾತರು. ಅವರಿಗೆ ಬದುಕಿನ ದಾರಿಯನ್ನು ಕೊಟ್ಟ ಭಾಷಾ ಕಲಿಕೆಯನ್ನು ಕಿತ್ತುಕೊಳ್ಳುವುದು ಸರಿಯೇ? ಕಾರ್ಮೆಲ್ ಶಾಲೆಯಲ್ಲೋ ಅಥವಾ ಇನ್ನಾವುದೋ ಶಾಲೆಯಲ್ಲೋ ಇಂಗ್ಲೀಷ್ ಕಲಿಯುತ್ತಾ ಇರುವ ಮಗುವಿಗೆ ತಾಯಿನುಡಿಯಲ್ಲಿ ಮನರಂಜನೆ ಸಿಗಲಿ ಎಂಬ ನಿಮ್ಮ ಉದ್ದೇಶವು ಇದೇ ಸಮಾಜದ ಶಾಲೆಗೆ ಹೋಗುವ ಶಕ್ತಿ ಇಲ್ಲದ ಕಾರ್ಮಿಕನ ಮಗುವಿಗೆ ಭಾಷೆಯನ್ನು ಕಲಿತು ಡಿ ಹುದ್ದೆಗೆ ಅಥವಾ ಚಾಲಕನೋ, ಹೋಟೆಲ್ಲಿನ ಸಣ್ಣ ಪುಟ್ಟ ಕೆಲಸಗಾರನೋ ಆಗುವ ಅವಕಾಶವನ್ನು ಕಿತ್ತುಕೊಳ್ಳುತ್ತಾ ಇಲ್ಲವೇ… ಈ ಸಮಾಜದಲ್ಲಿ ಬಹುಸಂಖ್ಯಾತರು ಅಂತಹ ಬಡವರೇ… ಅವರಿಗೆ ಬದುಕುವ ಮಾರ್ಗಗಳನ್ನು ಮುಚ್ಚುವುದು ಎಂದಿಗೂ ಸರಿಯಲ್ಲ. (ರಜನೀಕಾಂತನ ಸಿನಿಮಾ ನೋಡಿ ತಮಿಳು ಕಲಿತವನೊಬ್ಬ ನನ್ನ ಕಣ್ಣೆದುರಿಗೆ ಹೊಸೂರಿಗೆ ನಿತ್ಯ ಪಯಣಿಸಿ ಕಾರ್ಖಾನೆಯೊಂದರಲ್ಲಿ ಮಾಲಿ ಆಗಿದ್ದಾನೆ. ನಾನು ಆ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಸಲಹೆಗಾರ. ಇದು ತಮಗೂ ಗೊತ್ತಿರುವ ಸಂಗತಿ. ಹಿಂದಿ ಸಿನಿಮಾಗಳನ್ನು ನೋಡಿ ಹಿಂದಿ ಕಲಿತಿರುವ ಅಕ್ಷರ ಜ್ಞಾನವೇ ಇಲ್ಲದ ಕನ್ನಡದ ಹುಡುಗನೊಬ್ಬ ನಾನು ಬದುಕುತ್ತಿರುವ ಬೀದಿಯಲ್ಲೇ ಶ್ರೀಮಂತ ಸಿಂದಿಗಳ ಮನೆಯಲ್ಲಿ ಕೆಲಸ ಮಾಡುತ್ತಾ ಇದ್ದಾನೆ. ………. And the arguement continues…]]>

‍ಲೇಖಕರು G

August 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

೧ ಪ್ರತಿಕ್ರಿಯೆ

  1. Radhika

    Too very lengthy to read. It all started because of Satya Meva Jayate. And it’s over now! And those of us who wanted the dubbing have forgotten about it and haven’t missed anything as we watched the original. Just that anti-dubbing activists deprived the show for many people who would actually have been benefited by watching the show in kannada.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ RadhikaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: