ಮತ್ತೆ ಹಗಲೆಲ್ಲ ಉಯ್ಯಾಲೆ ಆಟ!

ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ. ನೀಲಾಂಜನರ ಅಂದಿನ ದಿನದ ಒಂದು ಮೆಲುಕು ಇಲ್ಲಿದೆ. 

-ನೀಲಾಂಜನ 

ನಾನು ಚಿಕ್ಕವನಾಗಿದ್ದಾಗಿಂದ ಪರೀಕ್ಷೆ ಮುಗಿದು ಬರುವ ಬೇಸಿಗೆ ರಜೆಗೆ ಕಾಯುತ್ತಿರುತ್ತಿದ್ದೆ. ಏಕೆಂದರೆ, ವರ್ಷದಲ್ಲಿ ಒಮ್ಮೆ ಮಾಡುತ್ತಿದ್ದ ರೈಲ್ವೆ ಪ್ರಯಾಣ ಆಗ ಬರುತ್ತಿತ್ತು. ಎಲ್ಲ ಮಕ್ಕಳಿಗೂ, ರೈಲು ಪ್ರಯಾಣ ಎಂದರೆ ಹೆಚ್ಚೇ ಆಸೆ ಎಂದು ನನ್ನೆಣಿಕೆ. ಆದರೆ, ನನ್ನ ಈ ರೈಲು ಪ್ರಯಾಣ ಮಾತ್ರ ಬಹಳ ದೂರದ್ದಾಗಿರಲಿಲ್ಲ. ಆಗ ನಮ್ಮ ಊರಿಗೆ, (ಎಂದರೆ, ನನ್ನ ಪೂರ್ವಿಕರ ಊರಿಗೆ), ನನ್ನ ಊರಿಂದ (ಎಂದರೆ ಯಾವಾಗಲೂ ಯಾವಾಗಲೂ ನನ್ನ ಊರು ಯಾವುದು ಎಂದು ನಾನೆಂದುಕೊಳ್ಳುತ್ತೇನೋ) ಇದ್ದದ್ದು ಬರೀ ರೈಲು ಮಾತ್ರ. ಅರಸೀಕೆರೆಯಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಐದು ಆರು ಮೈಲಿ ದಾಟಿ ಸಿಕ್ಕುತ್ತಿದ್ದಿದ್ದೇ ನಮ್ಮ ಹಳ್ಳಿ. ನಮ್ಮ ಅಜ್ಜ ಅಜ್ಜಿ ವಾಸ ಮಾಡುತ್ತಿದ್ದ ಮನೆ ಇದೆ ಅಲ್ಲಿ. ನನಗೆ ನೆನಪಿದ್ದಾಗಿನಿಂದ, ಅವರು ನಮ್ಮ ಮನೆಯಲ್ಲೇ ಇದ್ದುದ್ದರಿಂದ, ನನಗೆ ಅದು ಅಜ್ಜ-ಅಜ್ಜಿ ಮನೆ ಅನ್ನಿಸದೇ, ಒಂದು ರಜಾ ಕಾಲದ ಮನೆಯಾಗಿರುತ್ತಿತ್ತು.

ಈ ಹದಿನೈದು ನಿಮಿಷದ ರೈಲು ಪ್ರಯಾಣಕ್ಕೆ ಯಾಕಪ್ಪಾ ಅಷ್ಟು ಉತ್ಸಾಹ ಎಂದಿರಾ? ಇನ್ನೆಲ್ಲಿಗೆ ಹೋಗಬೇಕಾಗಿದ್ದರೂ ಬಸ್ಸನ್ನೇ ಹಿಡಿಯುತ್ತಿದ್ದ ನಾವು ಇಲ್ಲಿಗೆ ಮಾತ್ರ ರೈಲು ಹಿಡಿಯುತ್ತಿದ್ದಿದ್ದು ಒಂದಾದರೆ, ಹಳ್ಳಿಯಲ್ಲಿ ಹೋಗಿ ಆರೆಂಟು ದಿನ ಇರುತ್ತೇವಲ್ಲ ಎನ್ನುವುದು ಇನ್ನೊಂದು ಕಾರಣ ಇರಬೇಕು. ಮತ್ತೆ ಅದಕ್ಕಿಂತ ಹೆಚ್ಚಿಗೆ, ಊರಿನಲ್ಲಿದ್ದ ನಮ್ಮ ಮನೆಯಲ್ಲಿ ವರ್ಷ ಪೂರ್ತಿ ಯಾರೂ ವಾಸ ಇರುತ್ತಿದ್ದಿಲ್ಲ. ಅದಕ್ಕೆ, ನಾವು ಎಂಟು ದಿನ ಒಂದು ಸಂಸಾರ ನಡೆಸಬೇಕಾದರೆ ಬೇಕಾಗುವಷ್ಟು ವಸ್ತುಗಳೆಲ್ಲ – ಅಂದರೆ ಪಾತ್ರೆ ಪರಟಿ, ದವಸ ದಿನಸಿ, ಉಪ್ಪು ಮೆಣಸು ಪ್ರತಿಯೊಂದನ್ನೂ ಕಟ್ಟಿಕೊಂಡು ಹೊರಡುತ್ತಿದ್ದೆವು. ಅದರ ಸಂಭ್ರಮವೇ ಸಂಭ್ರಮ ನನಗೆ! ಮತ್ತೆ ಮಧ್ಯಾಹ್ನ ಹತ್ತಿರದಲ್ಲೇ ಇದ್ದ ರಂಗೋಲಿ ಗುಂಡಿಯಲ್ಲಿ ಮಜೀದ್ ಸಾಬರನ್ನೋ, ಅವರ ಅಣ್ಣನನ್ನೋ ಹೋಗಿ, ಮೂರುಗಂಟೆಗೆ ಕುದುರೆಗಾಡಿಯೊಂದಿಗೆ ಬರಬೇಕು ಅಂತ ಕರೆದುಬರುತ್ತಿದ್ದೆ. ಆಗಿನ್ನೂ ಆಟೋರಿಕ್ಷಾಗಳೂ ಬಹಳ ಹೆಚ್ಚಿರಲಿಲ್ಲ. ಇದ್ದರೂ, ನಮ್ಮ ಎಂಟು ದಿನದ ಸಂಸಾರಕ್ಕೆ ಬೇಕಾಗುವ ಸಾಮಾನೆಲ್ಲ ಎತ್ತಿಕೊಂಡು ಹೋಗಲು ನಾಲ್ಕಾದರೂ ಆಟೋರಿಕ್ಷಾಗಳು ಬೇಕಾಗಿರುತ್ತಿದ್ದವೇನೋ! ಹಾಗಾಗಿ, ಮಜೀದ್ ಸಾಹೇಬರ ಕುದುರೆ ಗಾಡಿಯೇ ನಮಗೆ ಕಟ್ಟಿಟ್ಟದ್ದಾಗಿತ್ತು. ನನ್ನ ಅಜ್ಜ ತಾವು ಸಾಕಿದ್ದ ಕೊನೆಯ ಕೆಲವು ಕುದುರೆಗಳನ್ನೂ ಮಜೀದ್ ಸಾಬರ ತಂದೆಗೋ ಅಣ್ಣನಿಗೂ ಮಾರಿದ್ದೂ ಈ ನಂಟಿಗೆ ಕಾರಣವಾಗಿತ್ತೋ, ನನಗೆ ನೆನಪಿಲ್ಲ.

ಈ ಪ್ರಯಾಣವನ್ನು ನಾನು ಅಷ್ಟು ಹೆಚ್ಚು ಕಾಯುತ್ತಿದ್ದಿದ್ದಕ್ಕೆ ಇನ್ನೊಂದು ಕಾರಣವಿತ್ತು. ಊರಿನ ಮನೆಯಲ್ಲೊಂದು ಉಯ್ಯಾಲೆ ಮಣೆ ಇತ್ತು. ಪಟ್ಟಣವಾಸದ ನಮ್ಮ ಮನೆಯಲ್ಲಿ ಉಯ್ಯಾಲೆ ಎಲ್ಲಿ ಬರಬೇಕು? ಹಳ್ಳಿಯ ಮನೆಯಾದರೆ ದೇಶೋವಿಶಾಲವಾಗಿತ್ತು. ಹೋದ ಕೂಡಲೆ ಉಯ್ಯಾಲೆ ಹಾಕುವಂತೆ ನನ್ನ ತಂದೆಗೆ ದುಂಬಾಲು ಬೀಳುತ್ತಿದ್ದೆ ನಾನು. ಅದರಲ್ಲೋ, ಒಟ್ಟಿಗೆ ಇಬ್ಬರೋ ಮೂವರೋ ಕೂರಬಹುದಿತ್ತಷ್ಟೆ. ಹಾಗಾಗಿ, ಬೇರೆಯವರ ಜೊತೆ ಸ್ವಲ್ಪ ಜಗಳವಾಡೇ ಅಲ್ಲಿ ಅಧಿಕಾರ ಸ್ಥಾಪಿಸಿಕೊಳ್ಳುತ್ತಿದ್ದೆ ನಾನು. ಎಲ್ಲರಿಗಿಂತ ಕಿರಿಯವನಾಗಿದ್ದರಿಂದ, ನನ್ನ ಆಟವೂ ನಡೆಯುತ್ತಿತ್ತು ಎನ್ನಿ.

ನಮ್ಮ ಹಳ್ಳಿಯಲ್ಲಿ ಒಂದು ಲಕ್ಷ್ಮೀಕೇಶವನ ಗುಡಿ ಇದೆ. ಗುಡಿ ಸಾಧಾರಣದ್ದೇ ಆಗಿದ್ದರೂ, ದೇವರ ಮೂರ್ತಿ ಮಾತ್ರ ಬಹಳ ಸುಂದರ. ಇವೆಲ್ಲ ಹೊಯ್ಸಳರ ಕಾಲದ್ದೇ ಮೂರ್ತಿಗಳು ಅಂತ ಎಲ್ಲರೂ ಹೇಳ್ತಾರೆ. ಪ್ರತೀ ವರ್ಷ ಚೈತ್ರದ ಹುಣ್ಣಿಮೆಯ ದಿನ ಅಲ್ಲಿ ತೇರು. ತೇರಿಗೆ ಮೂರು ದಿವಸ ಮೊದಲು ಶುರುವಾಗುವ ಉತ್ಸವಗಳು, ಆಮೇಲೆ ಮತ್ತೊಂದು ವಾರದ ವರೆಗೂ ಇರುತ್ತವೆ. ನಾವು ಅಲ್ಲಿಗೆ ಹೋಗುತ್ತಿದ್ದಿದ್ದೂ ಇದೇ ಸಮಯದಲ್ಲೇ. ಹಾಗೇ ಸುಮಾರು ಎಲ್ಲರ ಮನೆಯಲ್ಲೂ ಊರಿನಿಂದ ಬಂದ ನೆಂಟರು ಇಷ್ಟರು ಇರುತ್ತಿದ್ದರು. ಹೀಗೆ, ವರ್ಷಕ್ಕೊಮ್ಮೆ ಸಿಕ್ಕುವ ಕೆಲವು ಗೆಳೆಯರಿದ್ದರು ನನಗೆ ಅಲ್ಲಿ.

ರಥೋತ್ಸವದ ದಿನ ಊರಿನಲ್ಲಿ ಸಡಗರವೋ ಸಡಗರ. ಎಲ್ಲ ಹೆಂಗೆಳೆಯರೂ ಮನೆಯಮುಂದೆ ಗುಡಿಸಿ ಸಾರಿಸಿ ರಂಗೋಲಿ ಹಾಕಿರುತ್ತಿದ್ದರು. ಆಗಿನ ನನ್ನ ಚಿಕ್ಕ ಕಣ್ಣುಗಳಿಗೆ, ಅವು ದೊಡ್ಡದಾಗಿ ತೋರುತ್ತಿದ್ದವೋ, ಅಥವಾ ನಿಜಕ್ಕೂ ಬಹಳ ದೊಡ್ಡ ರಂಗೋಲಿ ಚಿತ್ತಾರಗಳನ್ನು ಬಿಡಿಸುತ್ತಿದ್ದರೋ? ಯಾಕೋ ಬಗೆಹರಿಯುತ್ತಿಲ್ಲ. ಬೆಳಗ್ಗೆಯೇ ಒಂದು ಸಲ ದೇವರ ದರ್ಶನಕ್ಕೆ ಹೋಗಿರುತ್ತಿದ್ದೆವು. ನಂತರ ಅಲ್ಲೇ ಛತ್ರದಲ್ಲಿ ತಿಂಡಿ ತಿಂದು ಮನೆಗೆ ಬರುವಷ್ಟರಲ್ಲಿ ಬೇರೆ ಊರಿಂದ ರಥೋತ್ಸವಕ್ಕೆ ಬರುವ ಭಕ್ತರು ಊರಿಗೆ ಕಾಲಿಡತೊಡಗುತ್ತಿದ್ದರು. ಬಂದವರಿಗೆ ಊರಲ್ಲಿ ಯಾರದಾದರೂ ಪರಿಚಯವಿದ್ದರೆ ಅವರ ಮನೆಗೆ ಹೋದಾರು. ಇಲ್ಲದಿದ್ದರೂ ಚಿಂತೆಯಿಲ್ಲ. ತೇರಿನ ದಿನ, ಎಲ್ಲರ ಮನೆ ಬಾಗಿಲೂ ತೆರೆದೇ ಇರುವುದು. ಎಲ್ಲಿ ಹೋಗಿ ಬೇಕಾದರೂ ತಂಗಬಹುದು. ಬಂದವರಿಗೆಲ್ಲ ಆಯಾ ಮನೆಯವರ ಶಕ್ತ್ಯಾನುಸಾರ ಕಾಫಿಯದ್ದೋ ಪಾನಕದ್ದೋ ಸರಬರಾಜು ಆಗುತ್ತಲೇ ಇರುತ್ತಿತ್ತು. ನಮ್ಮ ಮನೆಗೂ ಹೀಗೇ ಐವತ್ತೋ ಅರವತ್ತೋ ಜನ ಬಂದಿರುತ್ತಿದ್ದರು. ಬಂದವರು ತಮ್ಮ ಚೀಲವನ್ನು ಇಟ್ಟು ದೇವರ ದರುಶನ ಮಾಡಿಕೊಂಡು ನಂತರ ಅಲ್ಲೇ ಜಗಲಿಯಲ್ಲೋ ಹಜಾರದಲ್ಲೋ ಹರಟುತ್ತ ಕೂತಿರುತ್ತಿದ್ದರು.

ಮಧ್ಯಾಹ್ನದ ವೇಳೆಗೆ ರಥ. ಊರಿನ ನಾಲ್ಕೂ ಬೀದಿಗಳಲ್ಲಿ ಅದರ ಸಂಚಾರ. ಸಾವಿರಾರು ಜನ ಸೇರಿ ಆ ಅಲಂಕರಿಸಿದ ಮಹಾರಥವನ್ನು ಎಳೆಯುವುದೇ ಒಂದು ರೋಮಾಂಚಕಾರಿ ಅನುಭವ. ಚಿಕ್ಕ ಹಳ್ಳಿಯ ರಸ್ತೆಯಾದ್ದರಿಂದ ಅದಕ್ಕೆ ಅಡೆತಡೆಗಳೂ ಹಲವು. ಜೋರಾಗಿ ಎಳೆದರೆ, ಒಂದು ಮೂಲೆಯಲ್ಲಿ ರಥ ಸುಮಾರು ಒಬ್ಬರ ಮನೆಯ ಮುಂದಿನ ತನಕ ಬಂದು ಬಿಡುತ್ತಿತ್ತು. ಇಷ್ಟೆಲ್ಲದರ ನಡುವೆಯೂ ರಥ ಊರಿನಲ್ಲಿ ಹೋಗುವಾಗ,

“ಡೋಲಾಯಮಾನಂ ಗೋವಿಂದಂ ಮಂಚಸ್ಥಂ ಮಧುಸೂಧನಂ
ರಥಸ್ಥ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ”

ಮಂಚದ ಮೇಲೋಲಾಡುತ್ತಿರುವಾ ಗೋವಿಂದನ ಮಧುವ ಮಡುಹಿದನ
ರಥದಲ್ಲಿರುವ ಕೇಶವನ ಕಂಡರೆ ಇರದೋ ಎಮಗೆ ಮರುಹುಟ್ಟು!

ಎಂದು ಹೇಳಿಕೊಳ್ಳುತ್ತಾ, ಹಿರಿಯರೆನ್ನದೆ ಕಿರಿಯರೆನ್ನದೆ ದೇವರಿಗೆ ಬಾಳೆ ಹಣ್ಣೆಸೆಯುವುದನ್ನು ನೋಡಿಯೇ ತೀರಬೇಕು.

ರಥೋತ್ಸವದ ಸಂಜೆಯ ಹೊತ್ತಿಗೆ ಬಂದವರೆಲ್ಲ ಹೊರಟಿರುತ್ತಿದ್ದರು. ನಂತರ ನನಗೆ ಉಳಿಯುತ್ತಿದ್ದುದು ದಿವಸಕ್ಕೆ ಮೂರು ಉತ್ಸವಗಳು, ಅವಕ್ಕೆ ಸಿಕ್ಕುತ್ತಿದ್ದ ಚರುಪು, ಮತ್ತೆ ಹಗಲೆಲ್ಲ ಉಯ್ಯಾಲೆ ಆಟ!

****

ಈ ವಾರ ಚಿತ್ರಾ ಪೂರ್ಣಿಮೆ. ಊರಿನಲ್ಲಿ ತೇರು ಎಂದಾಗ, ಈ ನೆನಪೆಲ್ಲ ಮತ್ತೆ ಮತ್ತೆ ಮರುಕಳಿಸಿ ಬಂತು. ನೆನಪುಗಳ ಮಾತು ಮಧುರ. ಅಲ್ಲವೆ?

‍ಲೇಖಕರು avadhi

May 15, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

17 ಪ್ರತಿಕ್ರಿಯೆಗಳು

 1. ಸುಪ್ತದೀಪ್ತಿ

  ನೆನಪುಗಳ ಮಾತು ಮಧುರ, ಅದರಲ್ಲೂ ಬಾಲ್ಯದ ಉತ್ಸವ-ತೇರುಗಳ ಮಾತಂತೂ ಮಧುರಾತಿ ಮಧುರ. ನನ್ನ ಬಾಲ್ಯದ ದಿನಗಳಲ್ಲಿ ನಮ್ಮಜ್ಜನ ಊರಿನಲ್ಲಿ ಬೆಂಕಿನಾಥೇಶ್ವರನ ತೇರಿನ ಮತ್ತು ಕಾರ್ತೀಕ ಮಾಸದಲ್ಲಿ ನಡೆಯುತ್ತಿದ್ದ ದೀಪೋತ್ಸವ, ಊರಭಜನೆ, ಏಕಭಜನೆಗಳ ನೆನಪು ಮರುಕಳಿಸಿತು. ಬರೆದದ್ದಕ್ಕೆ ಧನ್ಯವಾದಗಳು. ಲಿಂಕ್ ಕಳಿಸಿದ್ದಕ್ಕೆ ಮತ್ತೊಂದು.

  ಪ್ರತಿಕ್ರಿಯೆ
 2. DR. Meena Subbarao.

  matte hagalella ——- Odide. savinenapu manassige tuMbaa ahlaadakaravaagide. nanagU railu prayaaNada nenapu, tEru jaatregaLa nenapu marulaLisi baMtu bEre, bEreyaagi. haMchikoMDidakke dhanyavaadhagaLu! vishvaasagaLoMdige-meena.

  ಪ್ರತಿಕ್ರಿಯೆ
 3. Ramaprasad

  ಮತ್ತೊಮ್ಮೆ ನನ್ನ ಬಾಲ್ಯಕ್ಕೆ ಹೋಗಿ ಬಂದ ಹಾಗೆ ಆಯಿತು .
  ರಥೋತ್ಸವದ ಸಂಭ್ರಮ , ದೇವಸ್ಥಾನದಲ್ಲಿ ತಿಂದ ಪುಳಿಯೋಗೆರೆ
  ಇದೆಲ್ಲವನ್ನೂ ನೆನಪಿಸಿದ್ದಕ್ಕೆ ಧನ್ಯವಾದಗಳು.

  ಪ್ರತಿಕ್ರಿಯೆ
 4. ªÀÄzsÀÄ

  ಚೆನ್ನಾಗಿ ಮೂಡಿ ಬನ್ದಿದೆ. ಹೀಗೆ ಬರೆಯುತ್ತಾ ಇರಿ.

  ಪ್ರತಿಕ್ರಿಯೆ
 5. chetana chaitanya

  neelanjanara blog yAvattU special agE iratte.
  avadhiya OdugarigU parichayisiddakke, baLagakke thanx

  ಪ್ರತಿಕ್ರಿಯೆ
 6. Madhu Krishnamurthy

  ನೀಲಾಂಜನ,
  ಈ ಲೇಖನ ಓದುತ್ತ ನಾನೂ ಸಹ ನಿಮ್ಮ ಆ ರಮ್ಯ ಲೋಕಕ್ಕೆ ತೇಲಿ ಹೋಗಿಬಿಟ್ಟೆ.
  ನಮ್ಮ ಊರೂ ಸಹ ಅರಸಿಕೆರೆ ಮತ್ತು ಹಾಸನದ ನಡುವೆ ಇರುವ ಭಾಗೇಶಪುರ.
  ಅಲ್ಲಿಯ ಚಿಕ್ಕಗಿರಿ ರಂಗನಾಥ ನಮ್ಮ ಮನೆ ದೇವರು. ನಾವು ಬೆಂಗಳೂರಿನಿಂದ ಆಗಾಗ
  ರೈಲಿನಲ್ಲಿ ಹೋಗುತ್ತಿದ್ದುದು ನೆನಪಾಯಿತು. ಆ ಪ್ರಾಂತ್ಯದ ನೈಸರ್ಗಿಕ ಸೌಂದರ್ಯ
  ಬಹಳ ರಮಣೀಯವಾದುದು. ತೆಂಗಿನ ತೋಟದ ಹಸಿರು ಈಗಲು ಕಣ್ಣಿಗೆ ಕಟ್ಟುತ್ತಿದೆ.
  ಇದೆಲ್ಲ ನಿಮ್ಮ ಲೇಖನದಿಂದ ನೆನಪಾಯಿತು. ಧನ್ಯವಾದಗಳು.

  ಮಧು

  ಪ್ರತಿಕ್ರಿಯೆ
 7. Uma

  Tumba chennagi moodi bandide. Nanagu aa
  dinagalu nenapige banthu. Naanu omme nimmellara
  jothe bandu 5 – 6 dinagalu iddu kala kaledidde.

  ಪ್ರತಿಕ್ರಿಯೆ
 8. Pushpa

  ಬಹಳ ಸೊಗಸಾಗಿ ಬರೆದಿದ್ದೀರಿ. ಮಾಗಡಿ ರಂಗನಾಥನ (ತಿರುಮಲೈ) ರಥೋತ್ಸವ ನನಪಿಗೆ ಬಂತು. ARTICLE ಮತ್ತು WEBSITE, SHARE ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು.

  -ಪುಷ್ಪ

  ಪ್ರತಿಕ್ರಿಯೆ
 9. Sandhya MI

  Tumba chennada baraha. Nimma nenapina aleyalli nanoo telidantayitu. Rathotsava kannige kattidantide.

  ಪ್ರತಿಕ್ರಿಯೆ
 10. Sandhya MI

  Tumba chennada baraha. Nimma nenapina aleyalli nanoo telidantayitu. Rathotsava kannige kattidantide.

  ಪ್ರತಿಕ್ರಿಯೆ
 11. Sandhya MI

  Tumba chennada baraha. Nimma nenapina aleyalli nanoo telidantayitu. Rathotsava kannige kattidantide.

  ಪ್ರತಿಕ್ರಿಯೆ
 12. Sandhya MI

  Tumba chennada baraha. Nimma nenapina aleyalli nanoo telidantayitu. Rathotsava kannige kattidantide.

  ಪ್ರತಿಕ್ರಿಯೆ
 13. Balu

  Prasadi,
  I read your article. It is really good.
  It brougt each aspect of Kowshika’s life. I
  remeberd my visits to Holenarasipur in the
  similar way when I read this article.

  It is really nice.

  -Balu

  ಪ್ರತಿಕ್ರಿಯೆ
 14. ನೀಲಾಂಜನ

  ಪ್ರತಿಕ್ರಿಯಿಸಿದ ಎಲ್ಲರಿಗೂ,

  ಬಾಲ್ಯದ ನೆನಪುಗಳು ಎಲ್ಲರಿಗೂ ಬಹಳ ಕಾಡುತ್ತವೆ ಎನಿಸುತ್ತದೆ. ನಮ್ಮೂರ ತೇರಿನ ಬಗ್ಗೆ ಬರೆದ ಈ ಬರಹ, ಉತ್ತರಕನ್ನಡದಿಂದ, ತಮಿಳುನಾಡಿನ ಕೊಯಂಬತ್ತೂರಿನವರೆಗೆ ಹಲವಾರು ಊರುಗಳಲ್ಲಿ ನಡೆಯುವ ಉತ್ಸವಗಳನ್ನು ಓದಿದವರಿಗೆ ನೆನಪಿಸಿದ್ದು ಇದೇ ಕಾರಣದಿಂದ ಇರಬೇಕು!

  ನಿಮ್ಮ ಒಳ್ಳೆಯ ಮಾತುಗಳಿಗೆ ನನ್ನ ಧನ್ಯವಾದಗಳು.

  -ನೀಲಾಂಜನ

  ಪ್ರತಿಕ್ರಿಯೆ
 15. shari

  Balyada nenapugalu marukalisidavu.nammura
  bandihabbadalli belagge devara puje,chikka terina nantara kalasha hotta vyakti onde sama
  oduttiruttare.avara hinde nuraru jana.avarotti
  ge navu ododu.namma hinde nammura paddegalu
  oduttidudu nenapagi nagu bantu

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: