ಮತ್ತೆ ಹಾಡಿಕೊಳ್ಳುತ್ತಿದ್ದೇನೆ..ಎಲ್ಲೋ ಮಳೆಯಾಗಿದೆಯೆಂದು..

ಎಲ್ಲೋ ಮಳೆಯಾಗಿದೆಯೆಂದು….
ಜೋಮನ್ ವರ್ಗೀಸ್
ಮಳೆಹನಿ
20071022024218_blue umbrella in the rain 700
ಮೊನ್ನೆ U2 ನೋಡುತ್ತಿದ್ದೆ. ಮನಸಾರೆ ಚಿತ್ರದ “ಎಲ್ಲೋ ಮಳೆಯಾಗಿದೆಯೆಂದು….” ಹಾಡು ಬರುತ್ತಿತ್ತು. ಹೌದು. ಹಾಡು ಕೇಳುತ್ತಿದ್ದಂತೆ ಇದರಲ್ಲಿ ಏನೋ ವಿಶೇಷವಿದೆ ಅನಿಸತೊಡಗಿತು. ವಿಮರ್ಶೆ ಓದಿ ಚಿತ್ರ ನೋಡುವರ ಸಾಲಿಗೆ ಸೇರಿದವನು ನಾನು. ಕೆಲವೊಮ್ಮೆ ಈ ವಿಮರ್ಶೆಗಳೇ ಚಿತ್ರಕ್ಕಿಂತ ಹೆಚ್ಚಿನ ಮನೋರಂಜನೆ ಒದಗಿಸುತ್ತದೆ. ಮನಸಾರೆ ‘ಮೆಂಟಲ್‌ಗಳ’ ಚಿತ್ರ ಎಂದು ಚಿತ್ರ ನೋಡಿ ಬಂದ ಕೆಲವು ಗೆಳೆಯರು ಹೇಳಿದ್ದರಿಂದ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದೆ. ಆದರೆ ಈ ಹಾಡು ಮಾತ್ರ ತೀವ್ರವಾಗಿ ಕಾಡತೊಡಗಿತು. ಆಫೀಸಿಗೆ ಹೋದವನೇ ಯೂಟ್ಯೂಬ್‌ನಲ್ಲಿ ಹಾಡನ್ನು ಹುಡುಕಿ ಮತ್ತೆ ಕೇಳಿಸಿಕೊಂಡೆ. ಕಾಯ್ಕಿಣಿ ಕವಿತೆ ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳತೊಡಗಿತು.
ಹೌದು. ಕಳೆದ ಒಂದು ವಾರದಿಂದ, ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತ್ತಿದೆ, ಇಲ್ಲೇ ಒಲವಾಗಿದೆಯೆಂದು ಕನಸೊಂದು ಬೀಳುತ್ತಿದೆ… ಎಂದು ಗುನುಗುನಿಸಿಕೊಂಡು ಓಡಾಡುತ್ತಿದ್ದೇನೆ. ನಮ್ಮ ಕಾಯ್ಕಿಣಿ ಎಂತಹ ಅದ್ಭುತ ಕಲೆಗಾರ. ಅವರ ಕಾವ್ಯ ಕುಸುರಿಗೆ ಮಾರು ಹೋಗದವರಿಲ್ಲ. “ಕಾಯ್ಕಿಣಿ ಎಂತಹ ಕಲೆಗಾರನೆಂದರೆ, ಅವರ ಕಿವಿಯ ಹತ್ತಿರ ಶಂಖ ಹುಳುವೊಂದನ್ನು ಹಿಡಿದರೆ, ಆ ಪುಟಾಣಿ ಹುಳುವಿನ ಹೃದಯಕ್ಕೆ ಎಷ್ಟು ಕವಾಟುಗಳಿವೆ ಎನ್ನುವುದನ್ನು ಹೇಳಬಲ್ಲಷ್ಟು ಸೂಕ್ಷ್ಮ ಕಲೆಗಾರ” ಎಂದು ಬೊಗಸೆಯಲ್ಲಿ ಮಳೆಗೆ ಬೆಳಗೆರೆ ಬೆನ್ನುಡಿ ಬರೆದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.
ನಿಜವಾಗಿಯೂ ತಲೆಸುತ್ತುವ ಗೀತೆಗಳಿಂದ ಬೇಸೆತ್ತು ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಸುಂದರ ಮಳೆಗೀತೆಗಳನ್ನೂ, ಕನ್ನಡ ಭಾಷೆಯ ಮಾಧುರ್ಯವನ್ನೂ ಪರಿಚಯಿಸಿದವರು ಕಾಯ್ಕಿಣಿ. ಅಷ್ಟರ ಮಟ್ಟಿಗೆ ನಮ್ಮ ಕಿ(ಕ)ವಿಗಳು ಕಾಯ್ಕಿಣಿಗೆ ಖುಣಿಯಾಗಿರಬೇಕು. ಯಾಕೋ ಮನಸ್ಸು, ತುಂಬಾ ವರ್ಷಗಳ ಹಿಂದಕ್ಕೆ ಓಡುತ್ತಿದೆ. ಅಂಗನವಾಡಿಯಲ್ಲೋ, ಒಂದನೆಯ ತರಗತಿಯಲ್ಲೋ ಇರಬೇಕು. “ಪುಣ್ಯಕೋಟಿ ಗೋವಿನ ಹಾಡು”. ಬಹುಶಃ ಯಾವುದೇ ವ್ಯಕ್ತಿ ತನ್ನ ಜೀವಮಾನದುದ್ದಕ್ಕೂ ಮರೆಯಲಾಗದ ಪದ್ಯ ಇದು. ಈ ಪದ್ಯ ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಇದು ಮಕ್ಕಳು ಓದಬೇಕಾದ, ಹಿರಿಯರು ಧ್ಯಾನಿಸಬೇಕಾದ ಪದ್ಯ. ಸರಳ, ಸುಂದರ ವಾಕ್ಯರಚನೆಗಳಿಂದ ಸುಲಭವಾಗಿ ಅರ್ಥವಾಗುವ ಅಚ್ಚಗನ್ನಡದ ಈ ಪದ್ಯವನ್ನು ಕಾವೇರಿ ಟೀಚರ್ ಸುಶ್ರಾವ್ಯವಾಗಿ ಹಾಡುತ್ತಾ ಪಾಠ ಮಾಡುತ್ತಿದ್ದರೆ, ನಮ್ಮ ಕಣ್ಣುಗಳಿಂದ ನಮಗೆ ಗೊತ್ತಿಲ್ಲದಂತೆಯೇ ಕಣ್ಣೀರು ತೊಟ್ಟಿಕ್ಕುತ್ತಿತ್ತು. ಅಷ್ಟೊಂದು ಮಹೋನ್ನತ ಮೌಲ್ಯಗಳಿಂದ ಕೂಡಿದ ಪದ್ಯ ಅದು.
ಇಂದಿಗೂ ಪುಣ್ಯಕೋಟಿ ಗೋವಿನ ಹಾಡು ಕಿವಿಯಲ್ಲಿ ಇಂಗದ ಅನುರಣನ. ಮತ್ತೆ ಮತ್ತೆ ನೆನಪಾಗಿ, ಬಾಲ್ಯವನ್ನು ನೆನಪಿಸಿ, ಕಣ್ಣೀರು ತರಿಸುವ ಈ ಪದ್ಯದ ಪ್ಯಾರಾವೊಂದು ಇಲ್ಲಿದೆ. “ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು” ಎಂದು ಹೇಳಿದ ಪುಣ್ಯಕೋಟಿ ಹುಲಿಯ ಗವಿಯ ಬಾಗಿಲು ಹೊಕ್ಕು..
‘ಖಂಡವಿದಕೋ, ಮಾಂಸವಿದಕೋ,
ಗುಂಡಿಗೆಯ ಬಿಸಿರಕ್ತವಿದಕೋ,
ಉಂಡು ಸಂತಸಗೊಂಡು ನೀ
ಭೂಮಂಡಲದೊಳು ಬಾಳಯ್ಯನೆ’ ಎಂದು ಹೇಳುತ್ತದೆ. ಮುಂದೆ ನಾವು ಮಾತಾಡುತ್ತಿರಲಿಲ್ಲ. ಕೆನ್ನೆಯ ಮೇಲೆ ಕಣ್ಣೀರು ಹರಿಯಲು ಪ್ರಾರಂಭವಾಗುತ್ತಿತ್ತು. ಅನಾಮಿಕ ಕವಿಯೊಬ್ಬ ಬರೆದ ಈ ಕವಿತೆಯಲ್ಲಿ ಎಷ್ಟೊಂದು ಮೌಲ್ಯವಿದೆ.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ನಮ್ಮ ಬದುಕಿನ ಪುಟ್ಟ ಪುಟ್ಟ ಸಂತೋಷ ಹಾಗೂ ವಿಸ್ಮಯಗಳಿಗೆ ನಾವು ಸ್ಪಂದಿಸದೇ ಹೋದರೆ ಈ ಬದುಕಿನ ಎಷ್ಟೊಂದು ಖುಷಿಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು. ಕವನ ರಚನೆ ಅಥವಾ ಬರೆಹ ಕೂಡ ಹೀಗೆ. ಬರೆಹ ಅಥವಾ ಕವಿತೆಯಲ್ಲಿ ಹೃದಯದ ಸ್ಪಂದನವನ್ನು ಗುರುತಿಸದೇ ಹೋದರೆ, ಅದು ಯಾರ ಮನಸ್ಸಿನಲ್ಲಿಯೂ ಧೀರ್ಘಕಾಲ ನೆಲೆನಿಲ್ಲುವುದಿಲ್ಲ. ಯಾರ ಮನಸ್ಸನ್ನೂ ತಟ್ಟಿ ಬೆರಗುಗೊಳಿಸುವುದಿಲ್ಲ.
ಇಂತಹ ಸ್ಪಂದನ ಇಲ್ಲದೇ ಹೋಗಿರುವುದರಿಂದಲೇ ನಮ್ಮ ಬದುಕು ಇಂದು ಹೀಗಾಗಿದೆ. ಮುಗ್ಧತೆ ಕಳೆದುಹೋದ ಮನುಷ್ಯನ ಮನಸ್ಸಿನಲ್ಲಿ ಅಂಧಕಾರ ಬಿಟ್ಟು ಇನ್ನೇನು ಉಳಿಯುತ್ತದೆ? ಯಾಕೋ ಇದು ಸ್ಪಲ್ಪ ಗಂಭೀರವಾಗುತ್ತಿದೆ ಅನಿಸುತ್ತಿದೆ. ನಿಲ್ಲಿಸುತ್ತೇನೆ. ಪ್ರಾಸವೇ ಪದ್ಯವೆಂದು ತಿಳಿದು ಕವಿತೆ ರಚಿಸುವ ಈಗಿನ ಕಾಲದಲ್ಲಿ ಕಾಯ್ಕಿಣಿ ಕವಿತೆಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಮನಸ್ಸಿಗೆ ಹಿತವೆನಿಸುತ್ತದೆ. ಮತ್ತೆ ಹಾಡಿಕೊಳ್ಳುತ್ತಿದ್ದೇನೆ..
ಎಲ್ಲೋ ಮಳೆಯಾಗಿದೆಯೆಂದು….

‍ಲೇಖಕರು avadhi

October 23, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: