ಮತ್ತೊಂದು ಮಹಾನಗರ !

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’ಯನ್ನು ‘ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ‘ವಿಜಯ ಕರ್ನಾಟಕ’ದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಈ ಹಿಂದೆ ಯಾವಾಗ ಕಾಲ್ ಮಾಡಿದ್ದನೆಂಬುದು ಸ್ಪಷ್ಟವಾಗಿ ನೆನಪಿಲ್ಲದ ಗೆಳೆಯನೊಬ್ಬನ ನಂಬರ್ ನಿಂದ ಕಾಲ್ ಬಂತು. ಎರಡೋ ,ಮೂರೋ ವರ್ಷವಾಗಿದ್ದಿರಬೇಕು ಅವನೊಂದಿಗೆ ಮಾತನಾಡಿ.     

‘ ಹೇಗಿದ್ದೀಯಾ ? ‘ ‘How is life ‘ ಎಂಬರ್ಥದ ಪ್ರಶ್ನೋತ್ತರಗಳು ಔಪಚಾರಿಕವಾಗಿ ಮುಗಿದ ಮೇಲೆ ನಮ್ಮಿಬ್ಬರ ನಡುವೆ ನಡೆದ ದೂರವಾಣಿ ಸಂಭಾಷಣೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ . ‘ ಮತ್ತೆ ? ಎಷ್ಟು ವರ್ಷ ಆಯ್ತು ನೀನು ಅಲ್ಲಿಗೆ ಹೋಗಿ ?’ 

‘ ಇದು ಹತ್ತನೇ ವರ್ಷ ಮಾರಾಯ ‘ 

‘ ಹಾಗಾದರೆ ಅಲ್ಲಿಯ ಜೀವನಕ್ಕೆ ಅಡ್ಜಸ್ಟ್ ಆಗಿರ್ಬೇಕು ಅಲ್ವಾ ? ‘ 

‘ ಒಂಥರಾ ಆಗಿದ್ದೇನೆ. ಒಂಥರಾ ಆಗಿಲ್ಲ ‘

‘ ಯಾಕೋ ಹಾಗಂತೀಯ? ‘ 

‘ ಏನಿಲ್ಲ ಬಿಡು … ನೀನು ಆ ಸಿಟಿಗೆ ಹೋಗಿ ಹಲವಾರು ವರ್ಷಗಳಾಗಿರಬೇಕು ಅಲ್ವಾ ? ‘ 

‘ ಹೌದು. ಇದೇ ಊರಲ್ಲಿ ಒಂದು ಸೈಟು ತೆಗೆದುಕೊಳ್ಳುವಷ್ಟು ಹಳಬ ಆಗಿದ್ದೀನಿ ನೋಡು ‘ 

‘ ಅಂದ್ರೆ ರಿಟೈರ್ಮೆಂಟ್ ಲೈಫ್ ಕೂಡ ಅಲ್ಲೇ ಪ್ಲಾನ್ ಮಾಡ್ಬಿಟ್ಟಿದೀಯಾ ಅಂದಂಗಾಯ್ತು ‘ 

‘ ಅದೇನೋ ಗೊತ್ತಿಲ್ಲ . ಆದರೆ ಇಲ್ಲಿ ನಗರದ ಹೊರಗೆ ಹೊಸ ಹೊಸ ಲೇಔಟ್ ಗಳು ಆಗ್ತಾ ಇದಾವೆ. ಒಳ್ಳೆ ಇನ್ವೆಸ್ಟ್ ಮೆಂಟ್ ಅಂತ ಎಲ್ರೂ ಹೇಳ್ತಾರೆ ಅದಕ್ಕೆ ತಗೊಂಡೆ ‘ 

‘ ಒಳ್ಳೆಯದಾಯ್ತು ಬಿಡು. ನಾನೂ ಈ ವರ್ಷ ತಗೋಬೇಕು’ 

‘ ಅಲ್ಲಿ ಫುಡ್ ಹೇಗೆ ? ನಿನಗೆ ಅಡ್ಜೆಸ್ಟ್ ಆಗಿದ್ಯಾ ?’ 

‘ ಈಗೇನು ಮಗಾ , ಎಲ್ಲಿದ್ರೇನು ಸೂಪರ್ ಮಾರ್ಕೆಟ್ ಗಳಿದಾವಲ್ಲ. ಅಲ್ಲಿ ನಮಗೆ ಬೇಕಾದ್ದನ್ನು ಕೊಂಡು ನಮ್ಮ ಊರಿನ ಶೈಲಿಯ ಫುಡ್ ನೆ ನಾವು ತಿನ್ನೋದು ‘ 

‘ ಅಲ್ವೋ ಅಷ್ಟು ವರ್ಷ ಆಯ್ತು ಅಲ್ಲಿಯ ಆಹಾರಾಭ್ಯಾಸ ನಿನಗೆ ಇನ್ನೂ ಒಗ್ಗಿಲ್ವ ?’ 

‘ ಕೆಲವರಿಗೆ ಒಗ್ಗುತ್ತೆ . ಕೆಲವರಿಗೆ ಒಗ್ಗಲ್ಲ ಕಣೋ. ಊಟ ಹುಟ್ಟಿಸಿಕೊಳ್ಳಲು ಇಲ್ಲಿಗೆ ಬಂದ ಮಾತ್ರಕ್ಕೆ ಇವರದ್ದೇ ಊಟ ಮಾಡಬೇಕು ಅಂತೇನಿಲ್ಲ ತಾನೆ ?’ 

‘ ಅದು ನಿಜ ಬಿಡು. ಅಲ್ಲಿಯ ಟ್ರಾಫಿಕ್ ಹೇಗಿದೆ ? ‘ 

‘ ಅದನ್ನ ಮಾತ್ರ ಕೇಳಬೇಡ. ಜನರು ರಸ್ತೆಯಲ್ಲೇ ಸಂಸಾರ ಮುಗಿಸಿಬಿಡ್ತಾರೇನೋ ಅನ್ನುವಷ್ಟು ಕಾಲ ರಸ್ತೆ ಮೇಲೆ ಇರ್ತಾರೆ ನೋಡು‌. ಯಾಕೆ ಅಲ್ಲಿ ಟ್ರಾಫಿಕ್ ಇಲ್ಲವಾ ?’ 

‘ ಅಯ್ಯೋ. ಇಲ್ಲ ಅಂತೀಯಾ ? ನನ್ನ ಆಫೀಸಿನಿಂದ ಮನೆಗೆ ಟ್ರಾವೆಲ್ ಮಾಡೋಕೆ ಮೂರು ತಾಸು ಬೇಕಾಗ್ತಿತ್ತು ಅದಕ್ಕೆ ನಾನು ಆಫೀಸ್ ಹತ್ರನೆ ಒಂದು ಸಣ್ಣ  ಮನೆ ಮಾಡಿದ್ದೀನಿ. ವೀಕೆಂಡ್ ಲ್ಲಿ ಮಾತ್ರ ಮನೆಗೆ ಹೋಗ್ತೀನಿ.’ 

‘ ಏನೋ ಹಾಗಂದ್ರೆ ? ಮತ್ತೆ ನಿನ್ನ ಹೆಂಡ್ತಿ ಜೊತೆ ಅದೇ ಮನೆಯಲದಲಿರ್ಬೋದಲ್ಲ?’ 

‘ ಅವಳ ಆಫೀಸಿಗೆ ಇಲ್ಲಿಂದ ಮೂರು ತಾಸು ಆಗುತ್ತೆ‌ ಮಾರಾಯ’ 

‘ ಓಹ್ ಹಾಗಾದ್ರೆ ಈ ಪ್ಲಾನ್ ಸರಿ ಇದೆ‌. ಆದರೆ…ಅಲ್ಲಾ…’ 

‘ ಹಾಗಾದ್ರೆ ಪೊಲ್ಯೂಷನ್ ಇದೆ ಅನ್ನು ‘ 

‘ ಪೊಲ್ಯೂಷನ್ನು ಅನ್ನೋದು ಪಾಪ್ಯುಲೇಶನ್ನಿನ ಕಾನ್ಸಿಕ್ವೆನ್ಸ್  ಅಲ್ವೇನೋ’ 

‘ ಅಂದ್ರೆ ಅಲ್ಲಿ ಪಾಪ್ಯುಲೇಶನ್ ಜಾಸ್ತಿ ಇದೆ ಅಂತಾಯ್ತು ‘ 

‘ ಪಾಪ್ಯುಲೇಶನ್ ಬೆಳ್ದಂಗೆ ನಗರಾನೂ ಬೆಳೀತಿದೆ ಕಣೋ’ 

‘ ಹೇ … ನೀನು ಯಾವತ್ತಾದರೂ ನೀನಿರೋ ಸಿಟಿಯ ಒಂದು ತುದಿಯಿಂದ ಇನ್ನೊಂದು ತುದಿನ ಸಂಪೂರ್ಣವಾಗಿ ಸುತ್ತಿದಿಯಾ ? ‘ 

‘ ಇಲ್ಲ ಕಣೋ . ಅದರ ಅವಶ್ಯಕತೆ ಇನ್ನೂ ಬಂದಿಲ್ಲ. ಯಾಕೆ ನೀನು ಸುತ್ತಿದ್ದೀಯಾ ? ‘ 

‘ ನಾನೂ ಸುತ್ತಿಲ್ಲ ಆ ರೀತಿ. ಆದರೆ ನಾವಿರೋ ಊರು ಎಷ್ಟು ದೊಡ್ಡದು ಅಥವಾ ವಿಸ್ತಾರವಾದದ್ದು ಅನ್ನೋದನ್ನ ತಿಳ್ಕೊಳ್ಳೋದು ಬೇಡ್ವಾ ? ‘ 

‘ ಅದೇನು ನಮ್ಮೂರೇನೋ ಹಾಗೆ ತಿಳ್ಕೊಳ್ಳೇಕೆ ? ಇಲ್ಲಿ ಎಲ್ಲರನ್ನೂ , ಎಲ್ಲವನ್ನೂ ತಿಳಿದುಕೊಳ್ಳದಿರುವುದೇ ಒಳ್ಳೆಯದು ‘ 

‘ ಅಲ್ವೋ ನಮ್ಮೂರಲ್ಲಿ ಎಲ್ರೂ ಎಲ್ರಿಗೂ ಗೊತ್ತಿರ್ತಾರೆ ಏನೇ ಪ್ರಾಬ್ಲಂ ಆದರೂ ಎಲ್ರೂ ಇರ್ತಾರೆ ತಾನೆ ? ‘ 

‘ ಹೌದು ಕಣೋ. ಆದರೆ ಹಾಗೆ ಏನಾದ್ರೂ ಅವಮಾನ ಮಾಡೋಕು ಎಲ್ರೂ ಇರ್ತಾರಲ್ವಾ? ‘ 

‘ ಅದು ನಿಜ. ನಮ್ಮದಲ್ಲದ ಈ ಊರುಗಳಲ್ಲಿ ನಾವು ಬದ್ಕಿದೀವೋ ,ಇಲ್ವೋ ಅಂತ ಕೇಳೋಕೂ ಯಾರೂ ಇರೋಲ್ಲ. ನಾವು ಗೆದ್ರೂ ,ಸೋತ್ರೂ ನಮ್ ಮನೆಯವರಿಗಷ್ಟೆ ಸಂಭ್ರಮ ಮತ್ತು ಸಂಕಟ ಆಗುತ್ತೆ ಅಷ್ಟೆ ‘ 

‘ ಯಾಕೋ ನಿನಗೆ ಇಷ್ಟು ವರ್ಷಗಳಲ್ಲಿ ಅಲ್ಲಿ ಗೆಳೆಯರು ಅಂತ ಸಂಪಾದನೆ ಮಾಡಿಲ್ವೇನೋ ? ‘ 

‘ ಸರಿಯಾಗಿ ಹೇಳಿದೆ ನೋಡು. ‌ಸಂಪಾದನೆ ಮಾಡೋ ಸಮಯದಲ್ಲಿ ಕೆಲವು ಗೆಳೆಯರು ಜೊತೆಯಾಗ್ತಾರೆ. ಇಲ್ಲ ಅಂತ ನಾನು ಹೇಳಲ್ಲ. ಆದ್ರೂ ಅವರೆಲ್ಲ ಮನದಾಳದ ಮಾತುಗಳಿಗೆ ಕಿವಿಯಾಗಲಾರರು ಕಣೋ‌’ 

‘ ಯೆಸ್. ಈ ಬಗ್ಗೆ ನನ್ನ ಅಭಿಪ್ರಾಯವೂ ಇದೆ. ಅವರು ಪ್ರಾಮಾಣಿಕರೇ ಪಾಪ  ‘ 

‘  ಅಲ್ಲಿಯೂ ಸಾಕಷ್ಟು ಮಾಲ್ ಗಳಿವೆಯಾ ? ‘ 

‘ ಹುಂ ‘ 

‘ ಮೆಟ್ರೋ ಟ್ರೇನ್ ?’ 

‘ ಇದೆ ‘ 

‘ಫುಡ್ ಡೆಲಿವರಿ ಆ್ಯಪ್ ಗಳು ಫಂಕ್ಷನಿಂಗ್ ಲಿ ಇದಾವಾ? ‘ 

‘ ಇದಾವೆ . ಆದರೆ ಸ್ಟ್ರೀಟ್ ಫುಡ್ ಗೆ ಜನ ಮುಗಿಬಿದ್ದು ತಿಂತಾರೆ ಕಣೋ ‘ 

‘ ವೀಕೆಂಡ್ ನಲ್ಲಿ ಜನ ಏನ್ ಮಾಡ್ತಾರೆ ? ‘ 

‘ ಎಲ್ಲಾ ನಗರಗಳಲ್ಲಿ ಏನ್‌ ಮಾಡ್ತಾರೋ ಅದನ್ನೆ ಇಲ್ಲೂ ಮಾಡ್ತಾರೆ ಕಣೋ. ಏನ್ ಮಾಡೊಲ್ಲ ಅಂತ ಕೇಳು ? ‘ 

‘ ಏನ್ ಮಾಡೊಲ್ಲ ? ‘ 

‘ ಬಹಳ ಜನ ವೀಕೆಂಡ್ ಗಳಲ್ಲಿ ಮನೆಲಿ ಅಡುಗೆ ಮಾಡಲ್ಲ’ 

‘ ಹ್ಹ …ಹ್ಹ…ಹ್ಹ…’ 

‘ ಹ್ಹ … ಹ್ಹ…ಹ್ಹ…’ 

‘ ಅದಿರ್ಲಿ, ಪುಸ್ತಕ ಓದೋ ಜನ ಇದಾರಾ ? ‘ 

‘ ಇದಾರೆ. ಆದ್ರೆ ಆ ಬಗ್ಗೆ ನಾನು ಗಮನ ಕೊಟ್ಟಿಲ್ಲ ಮಾರಾಯ. ನಾನಂತೂ ಡಿಗ್ರಿಲಿ ಓದಿದ್ದೇ ಕೊನೇ ಪುಸ್ತಕ ನೋಡು’ 

‘ ಮತ್ತೆ ಏನೇನ್ ಮಾಡ್ತಾರೆ ಜನ ಅಲ್ಲಿ ? ‘ 

‘ ಜಿಮ್ , ಯೋಗ , ವಾಯುವಿಹಾರ , ಸಿನಿಮಾ , ನಾಟಕ‌, ಸ್ಟ್ರೈಕು , ಮ್ಯಾರಥಾನ್ ಓಟಗಳು , ರಿಯಾಲಿಟಿ ಷೋಗಳು, ಸಿನಿಮಾ ಶೂಟಿಂಗ್ ಅಂತ ಏನೇನೋ ಮಾಡ್ತಾ ಇರ್ತಾರೆ ಕಣೋ ‘ 

‘ ಮದುವೆ ,ಮಿಲನ ,ಸರಸ-ವಿರಸ , ಡೈವೋರ್ಸ್ ಗಳೆಲ್ಲ ಆಗ್ತಾ ಇರ್ತಾವೇನೋ ?’ 

‘ ಇವೆಲ್ಲ ವೈಯುಕ್ತಿಕ ಮಾರಾಯ. ಹೆಂಗೆಂಗೋ ನಡೀತಾ ಇರ್ತಾವೆ ‘ 

‘ ಇಲ್ಲೂ ಅಷ್ಟೆ. ಮಿಲನದಲ್ಲಿ ಜನ ಹಿಂದೆ ಬಿದ್ದಿಲ್ಲ. ಅದಕ್ಕೆಲ್ಲ ಹಗಲು ರಾತ್ರಿಯ ಭೇದವನ್ನೂ ಎಣಿಸುವುದಿಲ್ಲ ‘ 

‘ ಇಲ್ಲೂ ಹಾಗೆಯೇ …’

‘ ಸರಿ, ಏನ್ ಸಮಾಚಾರ ಕಾಲ್ ಮಾಡಿದ್ದು‌ ? ಬಹಳ ದಿನ ಆದ್ಮೇಲೆ ?’ 

‘ ನಿಜ ಹೇಳ್ತೀನಿ ಕಣೋ. ಕೆಲಸದ ಮಧ್ಯೆ ಕಳೆದ ಹೋದಾಗ  ಏನೂ ನೆನಪಾಗಲ್ಲ . ಯಾರೂ ಬೇಕು ಅನ್ಸಲ್ಲ . ಆದರೆ ಒಮ್ಮೊಮ್ಮೆ ಎಲ್ಲಾ ಬಿಟ್ಟು ಓಡೋಗ್ಬೇಕು ಅನ್ಸುತ್ತೆ ನೋಡು. ನನ್ನ ಹತ್ರ ಮೂರು ಸಾವಿರ ಮೊಬೈಲ್ ನಂಬರ್ ಇದಾವೆ . ಆದ್ರೆ ಆ ನಂಬರ್ ಗಳೆಲ್ಲ ಅನ್ ವಾಂಟೆಡ್ ಅನ್ಸುತ್ತೆ. ಯಾಕೋ ನಿನ್ ಜೊತೆ ಮಾತಾಡಬೇಕು ಅನ್ನಿಸ್ತು. ಅದ್ಕೆ ಮಾಡ್ದೆ. ಎಲ್ಲಾ ಫೋನ್ ಕಾಲ್ ಗಳಿಗೆ ಕಾರಣ ಇರಲೇಬೇಕೆಂದಿಲ್ಲ ಅಲ್ವಾ ‘ 

‘ ಹೌದು‌‌. ನಾವು ನಮ್ಮ ಬಗ್ಗೆ ಏನೂ‌ ಮಾತಾಡ್ಲಿಲ್ಲ ‌‌. ನಮ್ಮ ನಮ್ಮ ಮಹಾನಗರಗಳ ಚದುರಿದ ಚಿತ್ರಗಳಂತೆ ಮಾತಾಡಿದ್ವಿ . ಅವು ನಮ್ಮನ್ನು ಸಾಕುತ್ತವೆ . ಸಾಕುಸಾಕಾಗುವಂತೆಯೂ ಮಾಡುತ್ತವೆ ಅಲ್ವಾ ? ‘ 

‘ ನಿಜ ಕಣೋ‌. ಥ್ಯಾಂಕ್ಸ್ ಫಾರ್ ಟೇಕಂಗ್ ಮೈ ಕಾಲ್ . ಬೆಳಗ್ಗೆ ಕ್ಯಾಬ್ ಐದೂವರೆಗೆ ಬರುತ್ತೆ . ಮಲಗ್ಬೇಕು . ಗುಡ್ ನೈಟ್ ‘ 

‘ ಓಕೆ . ಆಗಾಗ ಕಾಲ್ ಮಾಡ್ತಿರು ‘ 

‘ ನಿಜವಾಗ್ಲೂ ಮಾತಾಡ್ಬೇಕು ಅನ್ಸಿದಾಗ ಮಾಡ್ತಿನಿ ಕಣೋ’ 

‘ ಅದು ಒಳ್ಳೇದು … ಆವಾಗ್ಲೆ ಮಾಡು …. ಬಾಯ್ ‘ 

ಎಂದು ಕಾಲ್ ಕಾಟ್ ಮಾಡಿದೆ …

ಮೊಬೈಲಲ್ಲಿರೋ ಮೂರು ಸಾವಿರ ನಂಬರ್ ಗಳಲ್ಲಿ ಯಾರಿಗೆ ಕಾಲ್ ಮಾಡಲಿ ಎಂಬ ಗೊಂದಲ ಅವನದ್ದಾದರೆ‌. ಲಾಕ್ ಡೌನ್ ಸಮಯದಲ್ಲಿ ದೀರ್ಘಾವಧಿ ರಜೆ ನಿಮಿತ್ತ ನಮ್ಮ ಹಳ್ಳಿಯಲ್ಲಿ ಉಳಿದಾಗ ಸಮಯ ಕಳೆಯಲೆಂದು ಒಬ್ಬ ಆತ್ಮೀಯ ಗೆಳೆಯ ನನಗಿಲ್ಲವಲ್ಲ ಎಂಬ ಕೊರಗು ನನ್ನದು. ಮತ್ತೊಂದು ಮಹಾನಗರದಲ್ಲಿ ವಾಸಿಸುವ ಅವನೂ , ನಾನೂ ಇದಕ್ಕಿಂತ ಬೇರೆ ಏನನ್ನಾದರೂ ಜೀವನದಲ್ಲಿ ಕಾಣಬಲ್ಲೆವೆ  ಎಂದು ಯೋಚಿಸುತ್ತ ಮಲಗಿದೆ. 

ಅವನು ಮತ್ತೆ ಕಾಲ್ ಮಾಡುತ್ತಾನೋ ಇಲ್ಲವೋ ? 

October 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

4 ಪ್ರತಿಕ್ರಿಯೆಗಳು

 1. Purushothama

  This is exactly I feel most of the days. Thanks for putting my feelings in writing.

  ಪ್ರತಿಕ್ರಿಯೆ
 2. Purushothama Bilimale

  Lovely writing. I am at Delhi and feels the same. The style of writing is also very fresh

  ಪ್ರತಿಕ್ರಿಯೆ
 3. T S SHRAVANA KUMARI

  ಒಳಗುದಿಗಳನ್ನು ಹರಿಬಿಟ್ಟ ಬರಹ, ಚೆನ್ನಾಗಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: