ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಬೇಕು..

ನಮ್ಮ ವೃತ್ತೀನೆ ಹೀಗೆ, ಎಲ್ಲೋ ಮನೆಗೆ ಮಗಳಿಗೆ ಹೆಚ್ಚಿನ ಸಮಯ ಕೊಟ್ಟಿಲ್ಲವೆಂಬ ಪಾಪಪ್ರಜ್ಞೆ ಕಾಡುತ್ತಲೇ ಇರುತ್ತದೆ.ಹಾಗಾಗಿ ಮಗಳ ಒಂದು ಆಸೆ ಪೂರೈಸಲು ಮುಂದಾಗಿದ್ದೆ.

ನವದೆಹಲಿಗೆ ಕರೆದುಕೊಂಡು ಹೋಗೆಂದು ಬಹಳ ಬಾರಿ ಮಗಳು ಕೇಳಿದ್ದಳು. ಈ ಬಾರಿ ಕರೆದುಕೊಂಡು ಹೋಗದಿದ್ರೆ ಖಂಡಿತ ನನ್ನನ್ನು ನಂಬಲ್ಲ ಅನ್ನೋದು ನಂಗೆ ಗೊತ್ತಾಯ್ತು. ಹಾಗಾಗಿ ಟಿಕೆಟ್ ಬುಕ್ ಮಾಡಿಸಿಯಾಗಿತ್ತು. ದೆಹಲಿಗೆ ಎರಡು ಬಾರಿ ಹೋಗಿದ್ರು ಯಾಕೋ ದೆಹಲಿಯನ್ನು ಸರಿಯಾಗಿ ನೋಡಿಲ್ಲ ಅನ್ನೋ ಅಪೂರ್ಣತೆ ಕಾಡುತ್ತಲೇ ಇತ್ತು. ಹಾಗಾಗಿ ಯಾವುದೇ ಒತ್ತಡವಿಲ್ಲದೆ ಈ ಬಾರಿ ಸರಿಯಾಗಿ ದೆಹಲಿಯನ್ನು ನೋಡಬೇಕೆಂದು ನಿರ್ಧಾರ ಮಾಡಿದ್ದೆ.

Jyothi column low resಮಗಳ ಜೊತೆಗೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದೆ. ತಲುಪಿದಾಗ ದೆಹಲಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಮತ್ತು ಆತ್ಮೀಯರು ಆದ ಡಾ. ಪುರುಷೋತ್ತಮ ಬಿಳಿಮಲೆ ಸರ್ ಪ್ರೀತಿಯಿಂದ ಬರಮಾಡಿಕೊಂಡ್ರು. ಹಿಂದಿ, ಇಂಗ್ಲೀಷ್ ಅಬ್ಬರದ ಮಧ್ಯೆ ಕನ್ನಡದ ಕಂಪಿನ ಅನುಭವ ಕೊಡುವ ದೆಹಲಿ ಕರ್ನಾಟಕ ಸಂಘ ತಲುಪಿದಾಗ ಅಪರಿಚಿತತೆ ಮಾಯವಾಗಿತ್ತು. ಕನ್ನಡ ಕನ್ನಡ ಎಲ್ಲೆಲ್ಲು ಕನ್ನಡದ ಕಂಪಿತ್ತು. ಹಗಲು ಇರುಳು ಕನ್ನಡಿಗರಿಗಾಗಿ ಕಟ್ಟಡವೊಂದನ್ನು ಕಟ್ಟುವ ಕನಸು ನನಸಾದ ಬಗ್ಗೆ ಬಿಳಿಮಲೆಯವರು ಹೇಳಿದಾಗ ಅವರ ತಾಯ್ನಾಡಿನ ಕುರಿತ ಪ್ರೇಮಕ್ಕೆ ಮೌನವಾಗಿಯೇ ಶಿರ ಬಾಗಿದ್ದೆ.

ನಮ್ಮಂತ ಅದೆಷ್ಟೋ ಕನ್ನಡಿಗರಿಗೆ ಮನೆಯಲ್ಲೇ ಇದ್ದ ಅನುಭವ ಕೊಡುವಂತೆ ಮಾಡಿದ ಮತ್ತು ದೂರದ ಊರಿನಲ್ಲಿದ್ರು ಆ ರೀತಿಯ ಆಲೋಚನೆ ಬರದಂತೆ ಮಾಡಿದ ಇಂತಹ ಉದಾರವಾದಿ ಕನ್ನಡಿಗರಿಗೆ ನಮ್ಮದೊಂದು ಸಲಾಮ್….
……………

ದೆಹಲಿ ತಲುಪಿದ ದಿನ ಸಂಜೆಯೇ ಕುತುಬ್ ಮಿನಾರ್ ಕಡೆ ಹೆಜ್ಜೆ ಹಾಕಿದ್ವಿ. ಕುತುಬ್ ಮಿನಾರ್ ನೋಡುತ್ತಿದ್ದಂತೆ ಇತಿಹಾಸ ಪುಟಗಳೊಳಗೆ ಕಳೆದುಹೋದ ಅನುಭವವಾಯ್ತು. ನವಿರಾಗಿ ಕುತುಬ್ ಮಿನಾರ್ ಕಟ್ಟಿದ ಬಗೆ ಹುಬ್ಬೇರುವಂತೆ ಮಾಡಿತು. ಕುತುಬ್ ಮಿನಾರ್ ಗೋಪುರದೆದುರು ನನ್ನ ಕುಬ್ಜತೆಯ ಅರಿವು ಮತ್ತಾಯಿತು. ಗುಲಾಮಸಂತತಿಯ ಮೊದಲ ಸುಲ್ತಾನ ಕುತುಬುದ್ದೀನ್ ಐಬಕ್ ಮೊದಲು ಕಟ್ಟಿದ ಆ ನಂತರ ಇತರ ಸುಲ್ತಾನರು ಕಟ್ಟಿರೋ ಬಗ್ಗೆ ಹಾಕಲಾಗಿದ್ದ ಮಾಹಿತಿಯ ಬಗ್ಗೆ ಕಣ್ಣು ಹರಿಸಿದ್ವಿ.

ಶಾಲಾ ದಿನಗಳಲ್ಲಿ ಗುಲಾಮ ಸಂತತಿಯ ಬಗ್ಗೆ ಓದಿದ್ದ ಸಾಲುಗಳು ಸ್ವಲ್ಪ ಸ್ವಲ್ಪ ನೆನಪಾಗತೊಡಗಿತು. ದಿಲ್ಲಿಯ ಸುಲ್ತಾನನಾಗಿದ್ದ ಕುತುಬುದ್ದೀನ್ ಐಬಕ್ ಕ್ರಿಸ್ತ ಶತಕ 1199 ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಿಸಿದ್ದ, ಅದರ ನಂತರ ಸುಲ್ತಾನ ಇಲ್ತ್ ಮುಷ್ 1230 ಸುಮಾರಿಗೆ ನಿರ್ಮಾಣವನ್ನು ಪೂರ್ಣಗೊಳಿಸಿದ. ಆಗ ನಾಲ್ಕು ಅಂತಸ್ತನ್ನು ಹೊಂದಿತ್ತು. ಫಿರೋಜ್ ಷಾ ತುಘಲಕ್ ನ ಕಾಲದಲ್ಲಿ ಸಿಡಿಲು ಬಡಿದು ನಾಲ್ಕನೆಯ ಅಂತಸ್ತು ನಾಶವಾಯಿತು. ಆಗ ಮೊದಲಿಗಿಂತ ಕಿರಿದಾದ ನಾಲ್ಕು ಅಂತಸ್ತುಗಳನ್ನು ನಿರ್ಮಿಸಿದ.

ಒಂದು ಕೋನದಲ್ಲಿ ನಿಂತು ನೋಡಿದಾಗ ಕುತುಬ್ ಮಿನಾರ್ ಸ್ವಲ್ಪ ಮಟ್ಟಿಗೆ ವಾಲಿದಂತೆಯು ಕಂಡಿತು. ನಾಲ್ಕನೆಯ ಶತಮಾನದಲ್ಲಿ ನಿರ್ಮಾಣವಾದ ಕಬ್ಬಿಣದ ಕಂಬ ಮಳೆ ಗಾಳಿಗೆ ಸವಾಲು ಹಾಕುವಂತೆ ಆಗಸದತ್ತ ದೃಷ್ಟಿ ಹರಿಸಿತ್ತು. ಇದರ ಮೇಲೆ ಚಂದ್ರಗುಪ್ತ ವಿಕ್ರಮದಾದಿತ್ಯರ ವಿಜಯವನ್ನು ಕೊಂಡಾಡುವ ಶಾಸನಗಳನ್ನು ಕೂಡ ಕೆತ್ತಲಾಗಿದೆ,

ಹೀಗೆ ಕುತುಬ್ ಮಿನಾರ್ ಸುತ್ತ ಓಡಾಡಿ ಹಳೆಯ ಕಾಲಕ್ಕೆ ಹೋದಂತಾಯ್ತು. ಅದೆಷ್ಟೋ ವರ್ಷಗಳ ಶ್ರಮಕ್ಕೆ ಸಿಕ್ಕ ಪ್ರತಿಫಲದಂತೆ ಕುತುಬ್ ಮಿನಾರ್ ಗೋಚರಿಸುತ್ತಿತ್ತು. ಕೆಳಗಡೆ ಓಡಾಡುವ ಫೋಟೋ ಕ್ಲಿಕ್ಕಿಸುತ್ತಿದ ಜನ ಇರುವೆಯಂತೆ ದೂರದಿಂದ ಕಾಣುತ್ತಿದ್ದರು. ಆಶ್ಚರ್ಯಗಳ ಆಗರ, ಇತಿಹಾಸದ ವೈಭವವನ್ನು ಬಿಂಬಿಸುವ, ವಿಶ್ವ ಪರಂಪರೆ ತಾಣ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕುತುಬ್ ಮಿನಾರ್ ನ್ನು ಮತ್ತೆ ಮತ್ತೆ ಹಿಂತಿರುಗಿ ನೋಡುತ್ತಲೇ ಹೆಜ್ಜೆ ಹಾಕತೊಡಗಿದೆವು.
…………………………………

ಮತ್ತೆ ನಮ್ಮ ಪಯಣ ಮುಂದುವರೆದಿದ್ದು ಆಗ್ರಾದ ಕಡೆಗೆ.. ಹಾಗೆ ಮಥುರಾದ ದಾರಿಯಲ್ಲಿ ಸಾಗುವಾಗ ಬೆಣ್ಣೆ ಕೃಷ್ಣ ಗೋವುಗಳ ಮಧ್ಯೆ ಕೊಳಲೂದುತ್ತಿರುವಂತ ಕಲ್ಪನೆ. ಸ್ವಲ್ಪ ಬಿಸಿಲಿನ ತಾಪದ ಅನುಭವವಾಗುತ್ತಿತ್ತು. ಆದರು ಹಿತವೆನಿಸುತ್ತಿತ್ತು. ಆಗ್ರಾ ಹತ್ತಿರವಾಗುತ್ತಿದ್ದಂತೆ ಟ್ರಾಫಿಕ್ ಬಿಸಿ ತಟ್ಟಿತು. ಅದುವರೆಗೆ ಬರ್ರೆಂದು ಬಂದ ನಮಗೆ ಕಡಿಮೆ ದೂರಕ್ಕೆ ಹೆಚ್ಚು ಸಮಯ ತಗೊಳ್ಳೋದಂದರೆ ಇದೇ ಅನ್ನಿಸಿತು.

kutub-minarಮೊದಲಿಗೆ ಕೆಂಪು ಕೋಟೆ ನೋಡುವ ತವಕ. ಸುಂದರವಾದ ಮತ್ತು ಭವ್ಯವಾದ ಕೆಂಪು ಕೋಟೆಯನ್ನು ನೋಡೋದೇ ಒಂದು ಸಂಭ್ರಮ. ಅದರ ವಿಶಾಲತೆ ನೋಡಿ ದಂಗಾಗಿ ನಿಂತು ಬಿಟ್ಟೆ. ಬಿಸಿಲಿನ ಝಳ ಸುತ್ತುವರಿದ ಅರಮನೆ.. ರಾಣಿಯರು ವಾಸಿಸುತ್ತಿದ್ದ ಜಾಗ.. ಮತ್ತೆ ಯಾರೋ ಸುಳಿದಾಡುವ ಭ್ರಮಾ ಲೋಕಕ್ಕೆ ಕೊಂಡೊಯ್ದಿತು. ಹೇಗಿದ್ದೀತು ಆಗಿನ ದಿನಗಳು ಎಂದು ಕಲ್ಪನೆಯನ್ನು ಪ್ರೀತಿಸುವ ಮನಸ್ಸು ಯೋಚಿಸತೊಡಗಿತು.

ಅಕ್ಬರ್ ತನ್ನ ಆಡಳಿತದ ಅವಧಿಯಲ್ಲಿ ರಾಜದಾನಿಯನ್ನು ದೆಹಲಿಯಿಂದ ವರ್ಗಾಯಿಸಿದ್ದರ ಬಗ್ಗೆ ಓದಿದ ನೆನಪಾಯಿತು. ಅಕ್ಬರನ ಮೊಮ್ಮಗ ಷಹಜಹಾನ್ ಕಾಲದಲ್ಲಿ ಶ್ವೇತ ಅಮೃತ ಶಿಲೆ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಬಳಕೆ ಮಾಡಲಾಯಿತು,

ಇನ್ನು ಅಧಿಕಾರದ ಲಾಲಸೆ ಏನೆಲ್ಲ ಮಾಡಿಸುತ್ತೆ ಅನ್ನೋದಕ್ಕೆ ಷಹಜಹಾನ್ ಮಗ ಔರಂಗಜೇಬನೇ ಸಾಕ್ಷಿ . ತನ್ನ ತಂದೆಯನ್ನೇ ಪದಚ್ಯುತಿಗೊಳಿಸಿ ಬಂಧನದಲ್ಲಿರಿಸಿದ ಅವನಿಗೆ ಏನನ್ನಬೇಕು? ಹಾಗಂತ ಇಂದಿಗು ತಂದೆತಾಯಿಯನ್ನು ಆಸ್ತಿಗಾಗಿ ಸತಾಯಿಸುವ ಸಾಯಿಸುವ ಮಕ್ಕಳಿಗೆ ಇಂದಿಗು ಕೊರತೆಯಿಲ್ಲ ಬಿಡಿ. ಆದ್ರೆ ಮುಸಮ್ಮನ್ ಬುರ್ಜ್ ಎಂಬ ಗೋಪುರದಲ್ಲಿ ಷಹಜಹಾನ್ ನಿಧನನಾಗಿದ್ದ. ಅಲ್ಲಿಂದಲೇ ಮುದ್ದಿನ ಮಡದಿ ಮುಮ್ತಾಜ್ ಗಾಗಿ ನಿರ್ಮಿಸಿದ ತಾಜ್ ಮಹಲ್ ನ್ನು ನೋಡುತ್ತಿದ್ದನಂತೆ.
………………………

ತಾಜ್ ಮಹಲ್ ಈ ಹಿಂದೆಯು ನೋಡಿದ್ದೆ. ಆದ್ರೆ ಪ್ರತಿ ಬಾರಿ ನೋಡಿದಾಗಲು ತಣಿಸದ ಬಾಯಾರಿಕೆಯಂತೆ ಗೋಚರಿಸುತ್ತದೆ ಈ ತಾಜ್ ಮಹಲ್.

ಷಹಜಹಾನ್ ತನ್ನ ಮುದ್ದಿನ ಮಡದಿ ಗೌಹಾರಾ ಬೇಗಂ ಗೆ ಜನ್ಮ ಕೊಟ್ಟು ಸಾವನ್ನಪ್ಪಿದಾಗ ಆ ಅಗಲಿಕೆಯನ್ನು ತಡೆದುಕೊಳ್ಳದ ಸ್ಥಿತಿಯಲ್ಲಿದ್ದ. ಪತ್ನಿಯ ಮೇಲಿನ ಪ್ರೀತಿಗಾಗಿ ತಾಜ್ ಮಹಲ್ ಕಟ್ಟಿಸಿದ್ದ.

ಶ್ವೇತ ಬಣ್ಣದಿಂದ ಸೆಳೆಯುವ ತಾಜ್ ಮಹಲ್ ಪ್ರೀತಿಯ ಶುಭ್ರತೆಗು ಪ್ರತಿಬಿಂಬದಂತೆ ಕಾಣುತ್ತದೆ, ಇದನ್ನು ಕಟ್ಟಿದವರ ಶ್ರದ್ಧೆ ಅಬ್ಬಾ ಅನ್ನುವಂತೆ ಮಾಡುತ್ತದೆ. ಅದಕ್ಕಾಗಿಯೇ ವರ್ಷವಿಡೀ ದೇಶ ವಿದೇಶಗಳಿಂದ ಬರೋ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ, ಫೋಟೋ ಕ್ಲಿಕ್ಕಿಸಲು ನಿಂತ್ರೆ ದೂರದಿಂದ ಸರತಿ ಸಾಲಲ್ಲಿ ಸಾಗೋ ಪ್ರವಾಸಿಗರು ಪುಟ್ಟದಾಗಿ ಇರುವೆ ಸಾಲು ಕಟ್ಟಿಕೊಂಡು ಹೋದಂತೆ ತೋರುತ್ತಾರೆ. ತಾಜ್ ಮಹಲ್ ಮತ್ತು ಸೂರ್ಯಾಸ್ತ ಇವೆರೆಡನ್ನು ಸೇರಿಸಿ ಫೋಟೋಗಳನ್ನು ಕ್ಲಿಕ್ಕಿಸೋದೆ ಒಂದು ಸಂಭ್ರಮ.

ಇವೆರಡಕ್ಕೂ ಅದೆಂತಾ ಕಾಂಬಿನೇಷನ್ ಅಂತಾ ಬಹಳ ಸರಿ ಅನ್ನಿಸಿರೋದಿದೆ. ಆದ್ರೆ ಇಷ್ಟೊಂದು ಪ್ರವಾಸಿಗರು ಬರ್ತಾ ಇದ್ರು ಎಲ್ಲೋ ಒಂದು ಕಡೆ ನಿರ್ವಹಣೆಯತ್ತ ಹೆಚ್ಚಿನ ಗಮನ ಹರಿಸಿದಂತೆ ಕಾಣೋದಿಲ್ಲ. ಶುಚಿತ್ತ್ವದತ್ತ ಯೋಚನೆ ಮಾಡಿಲ್ಲ. ಬರೋರು ಬರ್ತಾರೆ ಹೋಗೋರು ಹೋಗ್ತಾರೆ ಅನ್ನೋ ತರ ಇಲ್ಲಿ ಹೋಗಿ ಬರಬೇಕಾದರೆ ಅನ್ನಿಸುತ್ತೆ. ಆದ್ರು ತಾಜ್ ಮಹಲ್ ಮಾತ್ರ ಮತ್ತೆ ಮತ್ತೆ ಕರೆದ ಹಾಗೆ ಭಾಸವಾಗುತ್ತೆ.

ಪ್ರೇಮಿಗಳಿಗೆ ಪ್ರೇಮದ ಸಂಕೇತವಾಗಿ, ಸಾಮಾನ್ಯ ಜನತೆಗೆ ಭವ್ಯತೆಯ ಸಂಕೇತವಾಗಿ , ಹೀಗೆ ಅವರವರ ಕಲ್ಪನೆಗಳಿಗೆ ದಕ್ಕುವ ವಿಷಯವಾಗಿ ಎಲ್ಲಾ ಕಾಲದಲ್ಲು ಎಲ್ಲರನ್ನು ಸೆಳೆಯುವ ಸೌಧವಾಗಿ ತಾಜ್ ಮಹಲ್ ನಿಲ್ಲುತ್ತದೆ. ಯಮುನೆಯ ದಡದಲ್ಲಿ ದಟ್ಟವಾದ ನೆನಪೊಂದನ್ನು ಷಹಜಹಾನ್ ನ ಹೃದಯದಲ್ಲಿ ಬಿತ್ತಿದಂತೆ ಭಾಸವಾಗುತ್ತದೆ.
…………………..

AGRA, FEB 13 (UNI):-  A couple holds up a red rose with the Taj Mahal, symbol of eternal love in the backdrop on the eve of Valentine's Day in Agra on Wednesday. UNI PHOTO -19U

ದೆಹಲಿ ಅಂದ್ರೆ ತಕ್ಷಣ ನೆನಪಿಗೆ ಬರೋದು ಇಂಡಿಯಾ ಗೇಟ್ . ನವದೆಹಲಿಯ ಹೃದಯ ಭಾಗದಲ್ಲಿರೋ ಇಂಡಿಯಾ ಗೇಟ್ ರಾಷ್ಟ್ರೀಯ ಸ್ಮಾರಕವು ಹೌದು. 1971 ರಿಂದಲು ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿ ಯೋಧರಿಗೆ ಇಡೀ ದೇಶ ಸಲ್ಲಿಸುವ ಗೌರವದ ಪ್ರತೀಕವು ಹೌದ..

ರಾಜ್ ಘಾಟ್ ಗಾಂಧಿ ತತ್ತ್ವಗಳ ಪಾಠ ಕಿವಿಯಲ್ಲಿ ಉಸುರುವ ಜಾಗೆ

ಮಹಾತ್ಮ ಗಾಂಧಿ ಚಿಕ್ಕಂದಿನಿಂದಲು ನನ್ನ ಜೀವನದ ಮೇಲೆ ಬೀರಿದ ಪ್ರಭಾವ ಅಪಾರ. ಗಾಂಧಿ ಬಗ್ಗೆ ಮಾತಾಡಿದಾಗಲೆಲ್ಲಾ ಅದನ್ನು ವಿರೋಧಿಸುವ ಧ್ವನಿಗಳು ಇಲ್ಲಿವೆ. ಇಂತಹ ವಿರೋಧದ ಧ್ವನಿಗಳ ಚಿಂತನೆ ನನ್ನನ್ನು ಬಹಳವಾಗಿ ಕಾಡಿದ್ದು ಇದೆ. ಮಾನವೀಯತೆಯನ್ನು ಪ್ರತಿಪಾದಿಸಿದ ಈ ಶಕ್ತಿಯನ್ನು ಅಮೆರಿಕಾ ಸೇರಿದಂತೆ ಇತರ ದೇಶಗಳ ಮಹಾನ್ ನಾಯಕರು ಗೌರವಿಸುತ್ತಿದ್ರೆ, ನಮ್ಮ ಕೆಲವು ನಾಯಕರು ಗಾಂಧಿಯ ದೇಶಪ್ರೇಮದ ಬಗ್ಗೆ ಪ್ರಶ್ನೆಯನ್ನು ಎತ್ತುತಿರೋದು ದುರಂತ. ಇಂತಹ ರಾಜ್ ಘಾಟ್ ಗೆ ಭೇಟಿ ನೀಡಿದಾಗ ಗಾಂಧಿಯ ತತ್ತ್ವಗಳು ಮತ್ತಷ್ಟು ಹತ್ತಿರವಾದವು. ಸರಳ ಜೀವವೊಂದು ಎದ್ದು ಬಂದು ವಿರೋಧಿಸುವ ಧ್ವನಿಗಳತ್ತ ಮಂದಹಾಸ ಬೀರಿ ನಿರ್ಗಮಿಸಿದಂತೆ ಭಾಸವಾಯಿತು.

ಇಂದಿರಾಗಾಂಧಿ ಮ್ಯೂಸಿಯಂನಲ್ಲಿ ಕಾಡಿದ ಪ್ರಶ್ನೆ

ನವದೆಹಲಿಗೆ ಈಗಾಗಲೆ ಹೇಳಿದಂತೆ ಈ ಹಿಂದೆ ಕೂಡ ಭೇಟಿ ಕೊಟ್ಟ ನೆನಪಿದೆ. ಆದರೆ ಕೆಲವೊಂದು ಪ್ರಶ್ನೆಗಳು ನನ್ನನ್ನು ಕಾಡಿದ ನೆನಪಿಲ್ಲ.ಇಂಧಿರಾಗಾಂಧಿ ಮ್ಯೂಸಿಯಂ ನೋಡುತ್ತಿದ್ದಂತೆ ಸಹಜವಾಗಿ ಆಕೆಯ ದಿಟ್ಟತನ, ಬದುಕಿದ ರೀತಿ, ಸ್ಟೈಲ್, ಆಕೆ ಉಡುತ್ತಿದ್ದ ಕಾಟನ್ ಸೀರೆ, ಎಷ್ಟು ಸರಳವಲ್ಲ ಎಂದು ಯೋಚನೆಗೆ ಹಚ್ಚಿ ಆಕೆಯ ಬ್ಯಾಗ್ ಎಲ್ಲವು ಕಾಡತೊಡಗಿತು. ಅಲ್ಲಿದ್ದ ಪ್ರತಿ ವಸ್ತುವಲ್ಲಿ ಇಂದಿರಾ ಪ್ರಿಯಾದರ್ಶಿನಿಯ ಅಸ್ತಿತ್ತ್ವವಿತ್ತು.

ಹಾಗೆ ಆ ಕಾಲದಲ್ಲಿ ಪ್ರಕಟವಾದ ವೃತ್ತಪತ್ರಿಕೆಗಳತ್ತಲು ಕಣ್ಣು ಹೊರಳಿತು, ಬಹುತೇಕ ಎಲ್ಲಾ ಭಾಷೆಯ ಪತ್ರಿಕೆಗಳು ಅಲ್ಲಿದ್ದವು. ಆದರೆ ಕನ್ನಡದ ಯಾವುದೇ ಪತ್ರಿಕೆಗಳು ಅಲ್ಲಿರಲಿಲ್ಲ. ನಮ್ಮ ಕನ್ನಡದ ಪತ್ರಿಕೆಗಳನ್ನು ಹಾಕಿಸುವ ಯೋಚನೆಯೇ ಬಂದಂತಿಲ್ಲ. ಇಂತಹ ಸಂದರ್ಭದಲ್ಲಿ ಅದಕ್ಕಾಗಿ ಒತ್ತಾಯಿಸುವ ಪ್ರಯತ್ನವು ಕೂಡ ನಡೆಯಲಿಲ್ಲ. ಹಾಗಾಗಿ ಲಾಬಿ ನಡೆಸೋ ವಿಚಾರದಲ್ಲಿ ಎಲ್ಲೋ ಕನ್ನಡಿಗರು ಹಿಂದಿದ್ದಾರೆಯೇ ಎಂಬ ಪ್ರಶ್ನೆಯು ಕೂಡ ಪ್ರಸ್ತುತವಾಗುತ್ತೆ.

ಇಂತಹದ್ದೊಂದು ಚರ್ಚೆ ಕೂಡ ಅಲ್ಲಿ ಬಂದಿದ್ದ ಕನ್ನಡಿಗರಲ್ಲಿ ನಡೆದಿತ್ತು. ಅದು ಕೇವಲ ಇಂದಿರಾಗಾಂಧಿ ಮ್ಯೂಸಿಯಂ ನಲ್ಲಿ ಕನ್ನಡದ ವೃತ್ತಪ್ರತ್ತಿಕೆಗಳಿಗೆ ಸೀಮಿತವಾಗಿರಲಿಲ್ಲ ಬದಲಾಗಿ ಒಟ್ಟಾರೆ ನಮ್ಮನ್ನು ಬಿಂಬಿಸಿಕೊಳ್ಳುವ ಹಾಗೂ ಕೇಂದ್ರದಿಂದ ಸಿಗಬೇಕಾದ ಮಾನ್ಯತೆ ಮತ್ತು ಸೌಕರ್ಯಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲು ಇನ್ನು ಹೆಚ್ಚಿನ ಗಟ್ಟಿ ಧ್ವನಿಯಾಗಿ ಹೊರಹೊಮ್ಮೋ ಅಗತ್ಯತೆ ಇದೆ ಎಂಬಂತೆ ನನಗನಿಸಿತು.

ಪಾಂಡವರ ನೆನಪು

ದೆಹಲಿ ಅಂದ್ರೆ ಮಹಾಭಾರತ ನೆನಪಾಗದಿರದು. ಪಾಂಡವರ ರಾಜಧಾನಿ ಇಂದ್ರಪ್ರಸ್ಥವಿಲ್ಲೇ ಇದೆ. ಮಹಾಭಾರತದ 12231246_10203913135747329_1429811031_nಅವಧಿಯಲ್ಲಿ ಇದು ಸಂಪದ್ಭರಿತವಾದ ರಾಜಧಾನಿಯಾಗಿತ್ತು. ಅತ್ಯಂತ ಶ್ರೀಮಂತವಾದ ರಾಜಧಾನಿ ಇದಾಗಿತ್ತು. ಇತಿಹಾಸದ ಜಗತ್ತೊಳಗಡೆ ಕಳೆದುಹೋಗಿ ಮಹಾಭಾರತದ ಪಾತ್ರಧಾರಿಗಳನ್ನು ಕಲ್ಪಿಸಿಕೊಂಡಂತೆ ಈ ಐತಿಹಾಸಿಕ ಜಾಗಗಳಿಗೆ ಭೇಟಿ ಕೊಟ್ಟಾಗ..
…………….

ಹೀಗೆ ನಾಲ್ಕು ದಿನಗಳ ದೆಹಲಿ ಪ್ರಯಾಸ ಮುಗಿಸುವ ದಿನ ಬಂದಿತ್ತು. ದೆಹಲಿಯನ್ನು ಇನ್ನು ಅರಿತುಕೊಳ್ಳಬೇಕಾದರೆ ಇನ್ನು ಅದೆಷ್ಟು ದಿನಗಳು ಬೇಕು. ಆದಾಗ್ಯು ಎಲ್ಲವನ್ನು ಅರಿತುಕೊಳ್ಳಲು ಸಾಧ್ಯವಾಗೋಲ್ಲ. ಯಾಕಂದ್ರೆ ಪ್ರತಿ ಜಾಗಕ್ಕು ತನ್ನದೇ ಆದ ಕತೆಯಿರುತ್ತದೆ. ಮೌನ ಮಾತುಗಳಿರುತ್ತವೆ. ಕೆಲವುದರ ಬಗ್ಗೆ ಮಾಹಿತಿಯಿದ್ದರೆ ಇನ್ನು ಕೆಲವುದಕ್ಕೆ ಯಾವುದೇ ದಾಖಲೆಯಿರೋದಿಲ್ಲ.

ಜನನಿಬಿಡ ದೆಹಲಿಯಲ್ಲಿ ಈ ಬಾರಿ ಕಳೆದುಹೋಗಿಲ್ಲ. ಅಂದ್ರೆ ಆ ಭಾಗಗಳಿಗೆ ಈ ಬಾರಿ ಭೇಟಿ ನೀಡಿಲ್ಲ. ಆದ್ರೆ ಭೇಟಿ ನೀಡಿದ ತಾಣಗಳೆಲ್ಲವು ಮತ್ತೊಮ್ಮೆ ಭೇಟಿ ನೀಡಬೇಕೆನ್ನುವಷ್ಟು ಪರಿಣಾಮ ಬೀರಿದೆ. ಭಾರೀ ಚಳಿಯು ಅಲ್ಲದ ಬಿಸಿಲು ಅಲ್ಲದ ಹಿತವಾದ ವಾತಾವರಣದ ನಡುವೆ ದೆಹಲಿ ಭೇಟಿ ಈ ಹಿತವಾದ ಅನುಭವವನ್ನೇ ನೀಡಿದೆ.
ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಬೇಕು.. ಮತ್ತೆ ಸ್ವಲ್ಪ ಅರ್ಥಮಾಡಿಕೊಳ್ಳಬೇಕು..

‍ಲೇಖಕರು Admin

October 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ,...

ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…

ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

೧ ಪ್ರತಿಕ್ರಿಯೆ

  1. ಮಮತ

    ಸಾಕ್ಷಾತ್ ದೆಹಲಿ ನೋಡಿಬಂದ ಹಾಗಾಯ್ತು ..
    ಗುಡ್ ರೈಟಪ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: