ಮದ್ಯದ ಸೀಸೆ ಮಾರಿದರೆ ಹಸಿವು ನೀಗುತ್ತಿತ್ತು…

 ಹೈವೇ 7

———–

ಕೇರಳದ ಆ ಪಾದ್ರಿ ವಿಪರೀತ ಕುಡಿದು ಸಂಜೆಯಷ್ಟೊತ್ತಿಗೆ ಚರ್ಚ್ ಗೇಟಿನ ಬಳಿ ಬಂದು ಬಿದ್ದಿರುತ್ತಿದ್ದ ಅಥವಾ ಸಿಲ್ವರ್ ಮರಗಳ ಕಾಡಿನಲ್ಲಿ ಬಿದ್ದುಕೊಂಡಿರುತ್ತಿದ್ದ. ನಾವು ಅವನ ಕೋಣೆಯ ಹಿಂದೆ ಬಂದು ಅವನು ಕುಡಿದೆಸೆದ ಮದ್ಯದ ಸೀಸೆಗಳನ್ನು ಕದಿಯಲು ಬೆಳಗಿನ ಜಾವದಲ್ಲಿ ಹೋಗುತ್ತಿದ್ದೆವು. ಅದರಿಂದ ಬಂದ ಹಣದಲ್ಲಿ ನಮ್ಮ ಒಂದು ದಿನದ ಹಸಿವು ನೀಗುತ್ತಿತ್ತಲ್ಲದೆ ಅಪ್ಪನಿಗೆ ಸಾರಾಯಿಗೂ ಆಗುತ್ತಿತ್ತು.

* * *

  ಭಾಗ : ಎರಡು

hoovu.jpg

ವಿ ಎಂ ಮಂಜುನಾಥ್ 

ಡಿಸೆಂಬರ್ ಬಂತೆಂದರೆ ಅದೆಂಥಾ ಖುಷಿ, ಸಂಭ್ರಮ, ನೋವಿನ ಹರ್ಷೋಲ್ಲಾಸದಲ್ಲಿ ಲೀನರಾಗಿಬಿಡುತ್ತಿದ್ದೆವು! ಕುಡುಕ ಪಾದ್ರಿ, ಕ್ರೈಸ್ತ ಸನ್ಯಾಸಿನಿಯರು, ನಿರ್ಗತಿಕ ಹೆಣ್ಣುಗಳನ್ನೊಳಗೊಂಡ ಇಡೀ ಚರ್ಚನ್ನು ಹಾದರ ಮತ್ತು ಮದ್ಯದಿಂದಲೇ ಹೆಬ್ಬಾವಿನಂತೆ ನುಂಗಿ ಹಾಕಿ ತೇಗಿದ ಸ್ಟೀಫನ್ ನಮ್ಮನ್ನೆಲ್ಲ ಜೊತೆಗಿಟ್ಟುಕೊಂಡು ದೇವಾಲಯದ ಒಳಾಂಗಣವನ್ನು ಅಲಂಕರಿಸುತ್ತಿದ್ದ. ಕ್ರಿಸ್ ಮಸ್ ಮರಗಳಿಗೆ ಹೂದೀಪಗಳನ್ನು ಕಟ್ಟಲು, ರಕ್ತದಂತೆ ಬೆಳಗುವ ನಕ್ಷತ್ರ ದೀಪವನ್ನು ತೂಗಿಬಿಡಲು ನಮ್ಮನ್ನು ತುದಿಗೆ ಏರಿಸುತ್ತಿದ್ದ. ತಪ್ಪು ಮಾಡಿದರೆ ಹೊಡೆದು ಹೊರಕ್ಕೆ ಅಟ್ಟುತ್ತಿದ್ದ. ಮ್ಯಾಕ್ ಡೊವೆಲ್ ವಿಸ್ಕಿ ತರಲು ಎಂಥಾ ರಾತ್ರಿಯಲ್ಲೂ ಕಳುಹಿಸುತ್ತಿದ್ದ. ಹಾವುಗಳು ಹೇರಳವಾಗಿ ಓಡಾಡುವ ಸಿಲ್ವರ್ ಮರಗಳ ಕಾಡಿನ ಮಧ್ಯೆ ಈ ಪಾದ್ರಿಯ ಕೋಣೆ ಇತ್ತು. ಅಲ್ಲಲ್ಲಿ ಗೇರುಮರಗಳು, ಪೈನ್ ಮರಗಳು, ಸಂಪಗೆ ಮರಗಳು, ತೊಗರಿ ಗಿಡಗಳ ಸಾಲು, ಈಜಿ ಮರಗಳು, ಫರಂಗಿ ಗಿಡಗಳು, ತೆಂಗಿನಮರಗಳೂ ಇದ್ದವು. ಜೇನನ್ನು ಸಾಕುವ ಹವ್ಯಾಸ ಇಟ್ಟುಕೊಂಡಿದ್ದ ಆ ಪಾದ್ರಿ ತನ್ನ ಕೋಣೆಯ ಎದುರಿಗೆ ಸಣ್ಣ ಕೊಳವೊಂದನ್ನು ಕಟ್ಟಿಸಿ ಅದರಲ್ಲಿ ಬಾತುಕೋಳಿಗಳು ಮತ್ತು ಮೀನುಗಳನ್ನು ಸಾಕುವುದರೊಂದಿಗೆ ತಾವರೆ ಗಿಡಗಳನ್ನೂ ಬೆಳೆಸಿಕೊಂಡಿದ್ದ. ಅಮ್ಮ ನೀರು ಕಾಯಿಸಲು ತರಗೆಲೆಗಾಗಿ ಸಿಲ್ವರ್ ಕಾಡಿಗೆ ಬಂದಾಗ ತಾವರೆ ಪಕಳೆಗಳನ್ನು ಕದ್ದು ತರುತ್ತಿದ್ದಳು. ಕಾಲಿಗೆ ತೊಡರುವ ಜರೋಪಾತ ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡು, ತುಟಿಯಲ್ಲಿ ಸಿಗರೇಟು ಕಚ್ಚಿಕೊಂಡು ದೊಣ್ಣೆಯಿಂದ ತಲೆ ಜಜ್ಜಿ ಸಾಯಿಸುವುದರಲ್ಲಿ ನಿಷ್ಣಾತನಾದ ಈತ, ಸನ್ಯಾಸಿನಿಯರ ಮಡಿಲಿನಲ್ಲಿ ತುಂಟಮಗುವಿನಂತೆ ಮಲಗಿಕೊಂಡು ವಿನೋದಿಸುತ್ತಿದ್ದ. ಕೇರಳದ ಆ ಪಾದ್ರಿ ವಿಪರೀತ ಕುಡಿದು ಸಂಜೆಯಷ್ಟೊತ್ತಿಗೆ ಚರ್ಚ್ ಗೇಟಿನ ಬಳಿ ಬಂದು ಬಿದ್ದಿರುತ್ತಿದ್ದ ಅಥವಾ ಸಿಲ್ವರ್ ಮರಗಳ ಕಾಡಿನಲ್ಲಿ ಬಿದ್ದುಕೊಂಡಿರುತ್ತಿದ್ದ. ನಾವು ಅವನ ಕೋಣೆಯ ಹಿಂದೆ ಬಂದು ಅವನು ಕುಡಿದೆಸೆದ ಮದ್ಯದ ಸೀಸೆಗಳನ್ನು ಕದಿಯಲು ಬೆಳಗಿನ ಜಾವದಲ್ಲಿ ಹೋಗುತ್ತಿದ್ದೆವು. ಅದರಿಂದ ಬಂದ ಹಣದಲ್ಲಿ ನಮ್ಮ ಒಂದು ದಿನದ ಹಸಿವು ನೀಗುತ್ತಿತ್ತಲ್ಲದೆ ಅಪ್ಪನಿಗೆ ಸಾರಾಯಿಗೂ ಆಗುತ್ತಿತ್ತು. ಆಗ ಅವನು ಬಂದೂಕು ಹಿಡಿದುಕೊಂಡು ಅಲ್ಲೇ ಸನ್ಯಾಸಿನಿಯರ ಕಕ್ಕಸುಕೋಣೆಯ ಹಿಂದೆ, ಗೇರು ಮರದ ಒಳಗೆ ಎಲ್ಲಾದರೂ ನಮಗಾಗಿ ಹೊಂಚು ಹಾಕುತ್ತ ಅಡ್ಡಾಡುತ್ತ ನಿಂತಿರುತ್ತಿದ್ದ. ಮೈಯೆಲ್ಲಾ ಬಿಳಿಕೂದಲನ್ನು ಹುಲುಸಾಗಿ ಬೆಳೆಸಿಕೊಂಡಿದ್ದ ಅವನು ಸಂಪೂರ್ಣ ಬೆತ್ತಲಾಗಿರುತ್ತಿದ್ದ. ನಾವು ಕೂಡ ಅವನಷ್ಟೇ ಜಾಗರೂಕರಾಗಿ ಕಳ್ಳಹೆಜ್ಜೆಗಳಲ್ಲಿ ಕಕ್ಕಸುಕೋಣೆಯ ಗಟಾರದಂಚಿನಿಂದ ಒಳಸರಿಯುತ್ತಿದ್ದೆವು. ನಮ್ಮ ಗದ್ದಲದಿಂದ ಏಳುವ ವಿಷದ ಸೊಳ್ಳೆಗಳ ಆಕಾರವೇ ವಿಚಿತ್ರವಾದದ್ದು. ಕೆಂಪು, ಕಪ್ಪು ಮತ್ತು ಹಸಿರುಬಣ್ಣದಾಗಿರುತ್ತಿದ್ದ ಅವು ಜೇನ್ನೊಣಗಳ ಗಾತ್ರದವು. ಕಚ್ಚಿದರೆ ಮೂರ್ನಾಲ್ಕು ದಿನಗಳಾದರೂ ಬೊಬ್ಬೆಗಳು ಆರುತ್ತಿರಲಿಲ್ಲ. ಸಣ್ಣ ಮಕ್ಕಳಾದರಂತೂ ಪ್ರಜ್ಞೆ ತಪ್ಪಿ ಬೀಳುತ್ತಿದ್ದರು.

ಆಶ್ರಮದ ಅರೆಹುಚ್ಚರು, ಸನ್ಯಾಸಿನಿಯರು

ಬೆಳಗ್ಗೆ ಮೂರು ಗಂಟೆಗೆ ನಮ್ಮನ್ನು ಎಚ್ಚರಿಸುತ್ತಿದ್ದದ್ದು ಆಶ್ರಮದ ಅರೆಹುಚ್ಚರ, ಮಾನಸಿಕ ರೋಗಿಗಳ ರೋದನ. ಅವರು ಊಳಿಡುತ್ತಿದ್ದ ಬಗೆ ಇವೊತ್ತಿಗೂ ನಮ್ಮ ಕಿವಿಗಳಲ್ಲಿ ಗುಗ್ಗೆಯಂತೆ ಮಡುಗಟ್ಟಿದೆ. ಅವರ ಶುಶ್ರೂಶೆಗಾಗಿ ಬರುತ್ತಿದ್ದ ಸನ್ಯಾಸಿನಿಯರು, ಅವರು ಹೇಳಿದ ಮಾತು ಕೇಳದೇ ಹೋದಾಗ ಬಿದಿರುದೊಣ್ಣೆಗಳಿಂದ ಅವರ ತಲೆ, ಮೊಣಕಾಲುಗಳಿಗೆ, ಗೇಣುಗಳಿಗೆ ರಕ್ತ ಸುರಿಯುವಂತೆ ಬಾರಿಸುತ್ತಿದ್ದರು. ತೀರಾ ಕೃಶರಾದವರು ಬಿಸಿಲು ಬರುವಷ್ಟರಲ್ಲಿ ಚರ್ಚ್ ಹಿಂದಿನ ಫರಂಗಿ ತೋಟದ ಗೋರಿಗಳಲ್ಲಿ ತಣ್ಣಗೆ ನಿದ್ರಿಸುತ್ತಿದ್ದರು.

ಕೆಲವರು ಚುರುಕಾದವರು ತಪ್ಪಿಸಿಕೊಂಡು ಹೈವೇಯಲ್ಲಿ ಹಾದುಹೋಗುವ ಲೈಲ್ಯಾಂಡ್ ಟ್ರಕ್ ಹತ್ತಿ ಎಲ್ಲೋ ಪರಾರಿಯಾದ ಲೆಕ್ಕವಿಲ್ಲದಷ್ಟು ವೃತ್ತಾಂತಗಳು.

ಹಾಗೆ ಸನ್ಯಾಸಿನಿಯರಿಂದ ಕೊಲೆಯಾದವರಲ್ಲಿ ನಮ್ಮ ಜೊತೆ ನಾಲ್ಕನೆ ತರಗತಿವರೆಗೆ ಓದಿದ ಜೇಮ್ಸ್ ಮತ್ತು ಶ್ರೀನಿವಾಸ ಜ್ಞಾಪಕದಲ್ಲಿದ್ದಾರೆ. ಇವರಿಬ್ಬರಲ್ಲಿ ಜೇಮ್ಸ್ ಗೆ ಸೊಂಟ ಇರಲಿಲ್ಲ, ಅವನು ಟ್ರೈಸೈಕಲ್ ನಲ್ಲಿ ಬರುತ್ತಿದ್ದ. ಪೋಲಿಯೋ ಪೀಡಿತ ಶ್ರೀನಿವಾಸ ನಡೆದುಕೊಂಡೇ ಬರುತ್ತಿದ್ದ. ಈ ಇಬ್ಬರು ನಮಗೆಲ್ಲ ಚರ್ಚಿನಿಂದ ಬಿಸ್ಕತ್ತು, ಹಾಲುಪೌಡರ್, ಬಟ್ಟೆ, ನಲ್ಲಿಕಾಯಿ, ಆಟದ ಸಾಮಾನನ್ನು ತಂದು ಕೊಡುತ್ತಿದ್ದರು. ಇವರಿಬ್ಬರಲ್ಲಿ ಜೇಮ್ಸ್ ನನ್ನು ಬಹುದಾರುಣವಾಗಿ ಕೊಂದು ನೇಣು ಹಾಕಿದರೆಂದು ಅಲ್ಲಿ ಕೂಲಿಗೆ ಹೋಗುತ್ತಿದ್ದವರ್ಯಾರೋ ಹೇಳಿದ ನೆನಪು. ನೆನೆಸಿಕೊಂಡರೆ ಅವರಿಬ್ಬರೂ ನನ್ನನ್ನು ಅಳಿಸುತ್ತಾರೆ, ಈಗಲೂ ಅವರು ತೋರಿದ ಪ್ರೀತಿ ನನ್ನ ಎದೆಯಾಳದಲ್ಲಿದೆ, ಹಾಡಾಗಿ. ಅಲ್ಲಿನ ಗಿಡಮರಗಳಲ್ಲಿ ಹಕ್ಕಿಯೊಂದು ಗುಟುರು ಹಾಕಿದರೂ ಹನಿ ಕಣ್ಣೀರು ಬೀಳದೇ ಇರದು.

ಆ ನಿರ್ಗತಿಕರು ಮರದ ಕೆಳಗೆ ಸತ್ತು ಹೋಗುತ್ತಿದ್ದರು…

ನಿರ್ಗತಿಕರು, ಮನೋವಿಕಲರು, ಅಂಗವೈಕಲ್ಯದಿಂದ ನರಳುವವರು, ನಿವೃತ್ತ ಮುದಿವೇಶ್ಯೆಯರು, ಕೆಮಿಕಲ್ ನಿಂದ ಮುಖ, ಮೈ ಸುಟ್ಟುಕೊಂಡವರು, ನರನಾಡಿಗಳೇ ಇಲ್ಲದ ಕ್ರಿಮಿನಲ್ ಗಳು ಇಲ್ಲಿ ಬಂದು ದಾಖಲಾಗುತ್ತಿದ್ದರು. ಅದು ಇಲ್ಲಿನ ಚರ್ಚ್ ನವರಿಗೆ ಪ್ರಭಾವಿ ಜನವರ್ಗ ಪರಿಚಯವಿದ್ದು ಅವರು ಸೇರಿಸಿದರೆ ಮಾತ್ರ ಯಾರನ್ನಾದರೂ ಸೇರಿಸಿಕೊಳ್ಳುತ್ತಿದ್ದರು. ಸಾಮಾನ್ಯ ಜನರ್ಯಾರಾದರೂ ಬಂದರೆ ಸೇರಿಸಿಕೊಳ್ಳುತ್ತಿರಲಿಲ್ಲ, ಗದರಿಸಿ ಕಳುಹಿಸುತ್ತಿದ್ದರು. ಆಗ ಸ್ಥಳೀಯರಾದ ನಾವು ಅಂಥವರಿಗೆ ಚರ್ಚ್ ಒಳಗೆ ಇರುವ ಸಂಪಗೆ ಮರದ ಹತ್ತಿರ ಆ ಜನರನ್ನು ಬಿಟ್ಟುಹೋಗುವ ಉಪಾಯ ಹೇಳಿಕೊಡುತ್ತಿದ್ದೆವು. ಆಗ ಅವರನ್ನು ಬೇರೆ ದಾರಿಯಿಲ್ಲದೆ ಒಳ ಕರೆದುಕೊಳ್ಳುತ್ತಾರೆಂದು. ಆದರೆ ಅಲ್ಲಿ ನಡೆಯುತ್ತಿದ್ದದೇ ಬೇರೆ. ಸನ್ಯಾಸಿನಿಯರು ಬಂದವರೇ ಅವರನ್ನು ಹೊರಹೋಗಲು ಸೂಚಿಸುತ್ತಿದ್ದರು. ಅಳುತ್ತಾ ಗೋಗರೆದರೆ ಕಾಲಿನಿಂದ ತಳ್ಳಲೆತ್ನಿಸುತ್ತಿದ್ದರು. ಅದೂ ಸಾಧ್ಯವಾಗದೆ ಹೋದಾಗ ಅಲ್ಲಿನ ಹುಚ್ಚರ ಸಹಾಯದಿಂದ ಅವರನ್ನು ಹಿಡಿದು ಚರ್ಚ್ ನಿಂದ ಹೊರಗೆಳೆದು ರಸ್ತೆಗೆ ಬಿಸಾಡುತ್ತಿದ್ದರು. ಅವರು ಚರ್ಚ್ ನ ಕಡೆಗೆ ನೋಡುತ್ತಾ ಅವರು ಗೋಳಾಡುವುದನ್ನೇ ಸಹಿಸಲಾಗದೆ ನಾವು ಅವರಿಗೆ ಅಲ್ಲೇ ಹುಣಸೆಮರದ ಕೆಳಗೆ ಮಲಗಲು ಜಾಗ ಮಾಡಿಕೊಟ್ಟು ರೊಟ್ಟಿ, ನೀರನ್ನು ನೀಡುತ್ತಿದ್ದೆವು. ಎಷ್ಟೋ ದಿನಗಳವರೆಗೆ ಅಲ್ಲೇ ಇರುತ್ತಿದ್ದ ಅವರು ಯಾವಾಗಲೋ ನಮಗೆ ಗೊತ್ತಿಲ್ಲದಂತೆ ಸತ್ತು ಹೋಗಿರುತ್ತಿದ್ದರು.

ಚೀಟಿಗಾಗಿ ಹಾತೊರೆಯುತ್ತಿದ್ದೆವು..

ನಮ್ಮ ಮನೆಯ ಎದುರಿಗೇ ಇದ್ದ ಈ ರೋಮನ್ ಕ್ಯಾಥೋಲಿಕ್ ಚರ್ಚ್ ಗೆ ಸ್ಕೂಲು ಬಿಟ್ಟೊಡನೆ ಅಕ್ಕ, ಅಣ್ಣಂದಿರು, ಗ್ರಾಮದ ಗೆಳೆಯರ ಜೊತೆಗೂಡಿ ಚೀಟಿಗಾಗಿ ಅಲ್ಲಿಗೆ ಓಡಿಹೋಗುತ್ತಿದ್ದೆವು. ಹಬ್ಬದ ದಿನ ಆ ಚೀಟಿ ತೆಗೆದುಕೊಂಡು ಹೋದರೆ ಒಳಗೆ ಬಿಡುತ್ತಿದ್ದರು. ವಿಧವಿಧವಾದ ಆಟ ಆಡಿಸಿ, ಗೆದ್ದವರಿಗೆ ಬಹುಮಾನ ನೀಡುವುದರ ಜೊತೆಗೆ ಸೋಪಿನ ಡಬ್ಬ, ಟವೆಲು, (ಈಗಲೂ ನನ್ನಲ್ಲಿ ಇದರಲ್ಲಿ ಕೆಲವು ವಸ್ತುಗಳನ್ನು ಸುರಕ್ಷಿತವಾಗಿಟ್ಟುಕೊಂಡಿದ್ದೇನೆ) ಬಟ್ಟೆ, ಬ್ರೆಡ್ಡು, ಬಿಸ್ಕತ್ತು, ಬತುಕೋಳಿ ಮೊಟ್ಟೆ, ದವಸಧಾನ್ಯವನ್ನೂ ಕೊಟ್ಟು ಕಳುಹಿಸುತ್ತಿದ್ದರು. ರಾತ್ರಿ ಕ್ರಿಸ್ತನ ಕುರಿತಾದ ಸಿನೆಮಾ ತೋರಿಸುತ್ತಿದ್ದರು. ಇದಕ್ಕಾಗಿ ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರು ಜನ ಬಡಬಗ್ಗರು, ರೋಗಗ್ರಸ್ತರು, ಅಂಗವಿಕಲರು, ನನ್ನ ತಾಯಿ ಕಡೆಯ ಸಂಬಂಧಿಕರಾದ ಇದ್ದಿಲು ಮಾರುವ ಹೆಂಗಸರು, (ನನ್ನ “ಲೆವೆಲ್ ಕ್ರಾಸಿಂಗ್” ಕೃತಿಯಲ್ಲಿ ಇವರ ಕುರಿತಾದ ಕವಿತೆ ಇದೆ) ಮತ್ತು ಅವಳ ತಾಯಿಯ ದೂರದ ಹಳ್ಳಿಯ ಕುಷ್ಠ ರೋಗಿಗಳೂ ಇರುತ್ತಿದ್ದರು. ಇದೆಲ್ಲ ಆದ ನಂತರ ಇಂಡಿಯನ್ ಏರ್‍ ಫೋರ್ಸಿನ ಸಿನಿಮಾ ಥಿಯೇಟರ್ ಗೆ ಕರೆದುಕೊಂಡು ಹೋಗಿ ವಿದೇಶಿ ಚಲನಚಿತ್ರವನ್ನು ತೋರಿಸುತ್ತಿದ್ದರು. ಹಾಗೆ ನೆನಪಿರುವ ಚಿತ್ರ “ಆಫ್ರಿಕನ್ ಸಫಾರಿ”. ಈ ಹಬ್ಬಕ್ಕೆ ಮುಂಚಿತವಾಗಿ ಡಿಸೆಂಬರ್ ತಿಂಗಳಿನ ಪ್ರಾರಂಭದಲ್ಲೇ ಚೀಟಿ ಹಂಚಲು ತೊಡಗುತ್ತಿದ್ದರು. ನಮ್ಮ ಮನೆಗಳಿಗೆ ಬಂದು ಚೀಟಿ ಕೊಡುತ್ತಿದ್ದರೂ ನಾವು ಇನ್ನೂ ಹೆಚ್ಚಿನ ಚೀಟಿಗಳಿಗಾಗಿ ಗೋಗರೆಯುತ್ತಿದ್ದೆವು. ಯಾಕೆಂದರೆ, ಎರಡನೇ ಸರದಿಗೆ ಒಳಹೋಗಿ ಪ್ಯಾಕೇಜುಗಳನ್ನು ಪಡೆಯುವುದಕ್ಕಾಗಿ. ಕ್ರೈಸ್ತ ಸನ್ಯಾಸಿನಿಯರು ಗೇಟಿನಲ್ಲಿ ನಿಂತುಕೊಂಡು ನಮ್ಮ ಗುಂಪನ್ನು ಸಂಭಾಳಿಸಲು ಸಜ್ಜಾಗಿ ನಿಂತಿರುತ್ತಿದ್ದರು ಕೈಗಳಲ್ಲಿ ಬಿದಿರು ದೊಣ್ಣೆಗಳನ್ನು ಹಿಡಿದುಕೊಂಡು ತಿರುಗಿಸುತ್ತಾ. ಸಿಸ್ಟರ್, ಸಿಸ್ಟರ್, ಸಿಸ್ಟರ್… ಎಂದು ಗೇಟಿನಿಂದ ಅವರತ್ತ ಕೈ ತೋರಿಸಿ ಅಂಗಲಾಚುತ್ತಿದ್ದೆವು. ಆಗ ಅವರು ರೋಸಿ, ಬಿದಿರುದೊಣ್ಣೆಗಳಿಂದ ನಮ್ಮ ಎಳೆ ಕೈಗಳಿಗೆ ಬಾರಿಸುತ್ತಿದ್ದರು. (ಈಗ ಬರೆಗಳ ಗುರುತಿಲ್ಲವಾದರೂ ಅದರ ಸುಖವಿನ್ನೂ ಹೃದಯದಲ್ಲಿ ಬೇರೂರಿದೆ) ನಂತರ ನಮ್ಮನಮ್ಮಲ್ಲೇ ನಾಲ್ಕೈದು ಗುಂಪು ಮಾಡಿ ದೇವಾಲಯ, ಆಶ್ರಮ, ಕಾಂಪೌಂಡಿನ ಸುತ್ತಮುತ್ತಲೂ ಕಾಡಿನಂತೆ ಬೆಳೆದುಕೊಂಡಿದ್ದ ಪಾರ್ಥೇನಿಯಮ್ ಸಸಿಗಳನ್ನು ಕೀಳಲು ಕಳುಹಿಸುತ್ತಿದ್ದರು. ಈ ಕೆಲಸ ಮುಗಿಸಿದ ನಂತರ ನಲ್ಲಿಕಾಯಿ ಮರ ಇರುವ ಸಣ್ಣ ಗುಡಿಯ ಹತ್ತಿರದ ಹುಲ್ಲು ಮೈದಾನದಲ್ಲಿ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕತ್ತರಿಗಳು, ಕೀವುರಕ್ತದಿಂದ ಒರೆಸಿ, ಹಿಂಡಿದ ಬ್ಯಾಂಡೇಜ್ ಬಟ್ಟೆ, ಸಿರಂಜ್ ಗಳು, ಯಾವ್ಯಾವುದೋ ಕಾಯಿಲೆಯ ಸೀಸೆಗಳು, ಮುಲಾಮು ಡಬ್ಬಿಗಳು – ಇವೆಲ್ಲವನ್ನೂ ಒಟ್ಟು ಮಾಡಿ ಗುಂಡಿಗೆ ಹೊತ್ತು ಹಾಕಿ ಬೆಂಕಿ ಇಟ್ಟು, ತಿರುಗಿ ಬರುವಷ್ಟೊತ್ತಿಗೆ ಸಂಜೆ ಕಳೆದು ಸರಿಸುಮಾರು ರಾತ್ರಿಯಾಗಿರುತ್ತಿತ್ತು.

(ಮುಂದುವರಿಯುವುದು)

‍ಲೇಖಕರು avadhi

January 1, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

  1. ಜೋಮನ್

    ಕುಡುಕ ಪಾದ್ರಿ,ಕ್ರೈಸ್ಥ ಸನ್ಯಾಸಿನಿಯರು,ಅವರೆಲ್ಲರ ರೋಮನ್ ಕ್ಯಾಥೋಲಿಕ್ ಚರ್ಚ್, ಅಲ್ಲಿನ ಆಶ್ರಮ, ದಿಕ್ಕಿಲ್ಲದ ನಿರ್ಗತಿಕರು,ಎಲ್ಲವನ್ನೂ ನೋಡುತ್ತಾ ಹೈವೆ7ನಲ್ಲಿ ಹಾಗೆಯೇ ನಿಂತು ಬಿಟ್ಟೆ. ಒಳ್ಳೆಯ ಬರವಣಿಗೆ.

    ಧನ್ಯವಾದಗಳು.
    ಜೋಮನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: