ಮಧ್ಯಾಹ್ನದ ಬಣ್ಣ

l-626003094.jpg

ಭೂಮಿ ವತ್ಸಲ

ಟ ಮಟ ಮಧ್ಯಾಹ್ನ!

ಬೆಳಗು-ಬೈಗುಗಳ ಸೊಗಸಿನ ಬಗ್ಗೆ ಯಾರು ಏನೇ ಹೇಳಲಿ, ನನಗಂತೂ ಮಧ್ಯಾಹ್ನದ ಆ ಅಷ್ಟು ಕ್ಷಣಗಳೇ ಇಷ್ಟ.

ನಾವು ಸಣ್ಣವರಿರುವಾಗ, ರಾತ್ರಿ ಯಕ್ಷಗಾನ ನೋಡಲು ಹೋಗಿ ಬಂದವರು ಬೆಳಗ್ಗೇನೇ ಚೆನ್ನಾಗಿ ತಿಂದು ಮಲಕ್ಕೊಂಡು ಬಿಡುತ್ತಿದ್ದೆವು. ಮಧ್ಯಾಹ್ನದ ಹೊತ್ತಿಗೆ ಎಚ್ಚರಾಗೋದು. ಕಣ್ಣು ಬಿಟ್ಟವರಿಗೆ ಹೊರಗೆ ಝಳಝಳ ಸುರಿಯುತ್ತಿರುವ ಬಿಸಿಲು ಕಾಣಿಸಿ, “ಅರೆ, ಎಷ್ಟು ಬೆಳಕಾಗಿ ಬಿಟ್ಟಿದೆಯಲ್ಲ, ಇಷ್ಟು ಹೊತ್ತಿನವರೆಗೂ ಮಲಗಿಯೇ ಇದ್ದೆನಲ್ಲಾ” ಎನ್ನಿಸಿ ದಡಬಡ ಎದ್ದು, ಹಲ್ಲುಜ್ಜಲು ಒಲೆಯಲ್ಲಿ ಇದ್ದಿಲು ಹುಡುಕುತ್ತಿದ್ದೆವು. ಬೆಳಗ್ಗೆ ಹಲ್ಲುಜ್ಜಿದ್ದು, ತಿಂದಿದ್ದು ಎಲ್ಲಾ ಮರೆತೇ ಹೋಗಿ, ಈಗಲೇ ಬೆಳಗಾಯಿತು ಎಂದು ಭ್ರಮೆಯಲ್ಲಿ ಸಿಲುಕಿರುತ್ತಿದ್ದೆವು. ನಮ್ಮ ನಿದ್ದೆಗಣ್ಣಿನ ಮಧ್ಯಾಹ್ನಕ್ಕೆ ಸಿಕ್ಕುವ “ಮತ್ತೊಂದು ಬೆಳಗು” ಅದಾಗುತ್ತಿತ್ತು.

ಚಿಕ್ಕವರಿರುವಾಗ ಮಧ್ಯಾಹ್ನವನ್ನು ಪ್ರೀತಿಸಲು ಪ್ರಮುಖವಾಗಿ ಕಾರಣವಾಗುತ್ತಿದ್ದ ಸಂಗತಿಯೆಂದರೆ, ದೊಡ್ಡವರ ಕಣ್ತಪ್ಪಿಸಿ ನಮ್ಮ ಪ್ರೀತಿಯ ಆಟಗಳನ್ನು ಆಡಲು ಸಾಧ್ಯವಾಗುತ್ತಿದ್ದುದು. ನಮ್ಮ ಬಯಕೆಗೆ, ಆಸೆಗೆ, ಆಸಕ್ತಿಗೆ, ಮನಸ್ಸಿಗೆ ಹತ್ತಿರವಾಗಲು ಇದಕ್ಕಿಂತ ಪ್ರಶಸ್ತವಾದ ಸಮಯವೊಂದು ಆ ದಿನಗಳಲ್ಲಿ ಬೇರೆ ಕಂಡಿರಲಿಲ್ಲ.

ಒಂದು ಮಧ್ಯಾಹ್ನವನ್ನು ಹೇಗೆಲ್ಲಾ ಕಣ್ಣಲ್ಲಿ ತಂದುಕೊಳ್ಳಬಹುದೆಂದು ಯೋಚಿಸುವಾಗ ನೆನಪುಗಳು ನುಗ್ಗಿ ಬರುತ್ತಿವೆ. ಊರಲ್ಲಿ ಹಬ್ಬವಾಗುವುದು. ಜಗತ್ತಿನಲ್ಲಿರುವ ದೇವರುಗಳೆಲ್ಲಾ ನನ್ನೂರಲ್ಲೇ ಇವೆಯೇನೋ ಅನ್ನುವಷ್ಟು ದೇವರುಗಳು – ನಾಸ, ಬ್ಯಾಟೆಬೀರ, ಜಟಗ, ಭೂತ, ಮರಡಿಬೋಳ, ಬೊಮ್ಮಯ್ಯ ಇತ್ಯಾದಿ ಇತ್ಯಾದಿ. ಎಲ್ಲವೂ ನಾನ್ ವೆಜಿಟೇರಿಯನ್ ದೇವರುಗಳೆಂಬುದೊಂದಗ್ಗಳಿಕೆ. ಈ ದೇವರುಗಳಿಗೆಲ್ಲ ಕೋಳಿ ಬಲಿ ಕೊಡುವ ಹಬ್ಬ ವರ್ಷಕ್ಕೊಮ್ಮೆ ಬರುವುದು. ಅಂಥ ಹಬ್ಬಗಳು ಆಗುತ್ತಿದ್ದುದು ಮಧ್ಯಾಹ್ನದಲ್ಲೇ. ಅಂಕೋಲೆ ಬಂಡಿಹಬ್ಬ ಎದ್ದಿತೆಂದರೆ ಅನಂತರ ಆ ಎಲ್ಲ ದೇವರುಗಳ ಹಬ್ಬ ಸಾಲಿನಲ್ಲೇ ಬರುವುದು. ಒಂದೊಂದು ದೇವರಿಗೂ ಹಬ್ಬವಾಗುವಾಗ ವಾರದಿಂದಲೂ ಸುದ್ದಿಯಿರುತ್ತಿತ್ತು. ಹಬ್ಬದ ದಿನ ನಾವು-ಹುಡುಗರೆಲ್ಲಾ ಖುಷಿಯ ತೀರದಲ್ಲೇ ಬೆಳಗಿನಿಂದಲೂ ಇರುತ್ತಿದ್ದೆವು. ಹೂವು-ಕುಂಕುಮಾಲಂಕಾರದಿಂದ ಸಿಕ್ಕಾಪಟ್ಟೆ ಕೆಂಪಾಗುವ ದೇವರನ್ನು ಕಂಡು ಭಯ-ಭಕ್ತಿ ಆವರಿಸುವುದು. ಕ್ರಮೇಣ ಅಂಥ ಹಬ್ಬಗಳೆಂದರೆ, ಏನಿಲ್ಲವೆಂದರೂ ಒಂದು ಕೋಳಿ ಸಾರಿನ ಊಟ ಎಂಬ ಮಟ್ಟಿಗೆ ಮಾತ್ರ ಕಾಯುವಷ್ಟಕ್ಕೆ ಬದಲಾದೆವು. ಇಂಥ ಹಬ್ಬಗಳೆಂದರೆ ಮೊದಮೊದಲು ಇರುತ್ತಿದ್ದ ಉತ್ಸಾಹ, ಖುಷಿ ಆಮೇಲಾಮೇಲೆ ನಮ್ಮ ಭಾಗದಿಂದ ಬಿಟ್ಟುಹೋಯಿತು. ದೇವರಿಗೊಂದು ತೆಂಗಿನಕಾಯಿ ಒಡೆಸಿಕೊಂಡು ಬರಲು ಒಪ್ಪುವುದಕ್ಕೂ ರಂಪಗಳಾಗಿ ಬಿಡುತ್ತಿದ್ದವು. ದೇವರ ಭಯಕ್ಕಿಂತ ದೊಡ್ಡವರ ಭಯದಿಂದ ಹೋಗುವಾಗ ನಮಗೆ ಅದೊಂದು “ಕೆಲಸದ ಭಾರ” ಮಾತ್ರವಾಗುತ್ತಿತ್ತು. “ಭಕ್ತಿ ಮಾರ್ಗ”ವಂತೂ ಅದಾಗಿರುತ್ತಲೇ ಇರಲಿಲ್ಲ.

ಹೀಗೆ ನಮ್ಮ ಭಾವನೆಗಳು ಬದಲಾಗತೊಡಗಿದ ಘಳಿಗೆಗಳಿಗೆ, ನಮ್ಮ ಬೆಳವಣಿಗೆಯ ವಿವಿಧ ಹಂತಗಳಿಗೆ ಮಧ್ಯಾಹ್ನದ ಸಾಕ್ಷಿಯಿದೆ.

ಎಷ್ಟೆಲ್ಲ ಕಥೆಗಳನ್ನು ಓದಿ ತಲೆ ತುಂಬ ತುಂಬಿಕೊಂಡದ್ದು ಈ ಮಧ್ಯಾಹ್ನಗಳಲ್ಲೇ. ಒಂದು ವಿಚಿತ್ರ ನಿಶ್ಶಬ್ದದ ಹಿನ್ನೆಲೆಯಲ್ಲಿ ಓದಿಕೊಳ್ಳುತ್ತಿದ್ದಾಗ ಏರ್ಪಡುತ್ತಿದ್ದ ಒಂದು ಬೇರೆಯೇ ಪ್ರಪಂಚದ ನೆನಪು ಈಗಲೂ ಅದೇ ತಾಜಾತನದೊಂದಿಗಿದೆ. ಓದಿನ ಖುಷಿಗಾಗಿ ಓದುವುದನ್ನು ನಾವು ಬಹಳಷ್ಟು ಮಂದಿ ನಮಗೆ ಗೊತ್ತಿಲ್ಲದೆಯೇ ಕಲಿತುಕೊಂಡದ್ದು ಅಲ್ಲಿಯೇ.

ಮಧ್ಯಾಹ್ನಕ್ಕೆ ಬಗೆಗಳಿಲ್ಲ. ಆದರೆ ನಾವು ಒಡೆದುಕೊಂಡ ಜಗತ್ತಿನಲ್ಲಿ ಅದು ಛಿದ್ರವಾಗಿದೆ. ಒಡೆದ ಕನ್ನಡಿಯಲ್ಲಿ ಒಂದೇ ಬಿಂಬ ಹಲವು ಕೋನಗಳಲ್ಲಿ ಕಲಸಿ ಹೋಗಿರುವಂತೆ ಕಾಣಿಸುತ್ತದಲ್ಲ, ಹಾಗೇ ಒಡೆದ ಊರುಗಳ-ಅಹಂಕಾರ, ಆಡಂಬರ, ಈರ್ಷ್ಯೆ, ದ್ವೇಷಗಳು ತುಂಬಿದ ಊರುಗಳ ಅಸ್ವಸ್ಥತೆಯಲ್ಲಿ ಮಧ್ಯಾಹ್ನಗಳು ಅಸ್ತವ್ಯಸ್ತವಾದಂತೆ ಕಂಡರೆ ಅಚ್ಚರಿಯಿಲ್ಲ. ಆದರೆ ನಮ್ಮ ನೆನಪುಗಳಲ್ಲಿ ಕದಲುವ ಆ ಮಧ್ಯಾಹ್ನಗಳ ಬಣ್ಣ ಒಂದಿಷ್ಟೂ ಮಾಸಿಲ್ಲ.

ಎಲ್ಲರನ್ನೂ ಒಂದು ತೆರನ ಬಿಗುಮಾನವಲ್ಲದ ಮೌನದಲ್ಲಿ ಪಳಗಿಸುವ ಶಕ್ತಿಯ ಮಧ್ಯಾಹ್ನವು ಏಕಾಂತ, ಎಂಥದೋ ವಿಷಾದ, ತಣಿವು ಮತ್ತು ಮೋಸಗೊಳಿಸದ ಸ್ವಪ್ನಗಳನ್ನು ಧರಿಸಿದೆ. ಒಂದು ನಿರುಮ್ಮಳವನ್ನು ದಯಪಾಲಿಸಬಲ್ಲ ಶಕ್ತಿ ಮಧ್ಯಾಹ್ನದ ಮಡಿಲಲ್ಲಿದೆ.

ನನ್ನ ನೆನಪಿನಲ್ಲಿರುವ ಮಧ್ಯಾಹ್ನಗಳೇ, ನನಗಿಷ್ಟು ಬಣ್ಣ ಕೊಡಿ.

‍ಲೇಖಕರು avadhi

March 24, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

  1. Tina

    ಭೂಮಿವತ್ಸಲ,
    ನಿಮ್ಮ ಹಾಗೇ ನಾನೂ ಮಧ್ಯಾಹ್ನಪ್ರಿಯೆ. ಬಹಳ ಚೆನ್ನಾದ ಬರಹ. ಮನೆಮಂದಿಯೆಲ್ಲ ಮಧ್ಯಾಹ್ನ ಉಂಡು ಮಲಗಿರುವಾಗ ಪಡಸಾಲೆಯಲ್ಲಿ ಬಿದ್ದುಕೊಂಡು ಓದಿದ್ದು, ಮೊದಲ ಸಿಲ್ಲಿ ಕವಿತೆಗಳನ್ನು ಬರೆದುಕೊಂಡಿದ್ದು, ಹರೆಯವನ್ನು ಧ್ಯಾನಿಸಿದ್ದು..ನಿಮ್ಮ ಪದಗಳು ಆಪ್ತವೆನ್ನಿಸಿದವು.
    -ಟೀನಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: