ಮನದೊಳಗೆ ಕೂಗುವ ಶಕುನದ ಹಕ್ಕಿ…

door_number142.jpg“ಡೋರ್ ನಂ. 142”

 

ಬಹುರೂಪಿ

ಕ್ಷಿ ಕೂಗಿದ್ದು ಕೇಳಿಸಿತು. ಹಾಲಿನವನ ಸ್ಕೂಟರ್ ಸದ್ದು, ಮೆಟ್ಟಿಲು ಏರುತ್ತಿರುವ ಸರ ಬರ, ಎದುರುಗಡೆ ಮನೆಯವರ ಮಾತು ಎಲ್ಲಾ ನಿದ್ದೆಯ ಮಂಪರಿನ ತೆರೆ ಸರಿಸಿತು. ಕಣ್ಣು ಬಿಟ್ಟು ಹೊಸದೇ ದಿನವನ್ನು ಪ್ರವೇಶಿಸಲು ಸಜ್ಜಾದೆ. ಕಣ್ಣು ಬಿಡಲು ಹೋದವನಿಗೆ ಯಾಕೋ ತಲೆಯ ಮೇಲೆ ಗುದ್ದಿದಂತಾಯಿತು. ಬುದ್ಧಿ ಬಂದವನಂತೆ ಮನಸ್ಸಿನಲ್ಲೇ ಕಿಟಕಿ ಇರುವ ದಿಕ್ಕು ಗುರುತಿಸಿಕೊಂಡೆ. ಆ ಕಿಟಕಿಗೆ ನೇರವಾಗಿ ಹಸಿರು ಮರ ಇರುವುದು ಗೊತ್ತಿತ್ತು. ನಿಧಾನವಾಗಿ ಕಣ್ಣು ಬಿಟ್ಟೆ. ಹಸಿರು ಕಣ್ಣಿನ ಮೂಲಕ ಮನಸ್ಸನ್ನು ಆವರಿಸಿಕೊಂಡಿತು.

ಎದ್ದೇಳಲು ಹೋದೆ. ತಕ್ಷಣ ಅಮ್ಮನ ಅಶರೀರವಾಣಿ. ಬಲಗಡೆ ನೋಡ್ಕೊಂಡು ಎದ್ದೇಳು. ತಕ್ಷಣ ಸರಕ್ಕನೆ ಬಲಗಡೆಗೆ ಹೊರಳಿಕೊಂಡೆ. ಅಮ್ಮಮ್ಮಾ ಎನಿಸಿತು.

shakuna.jpg

ದೇವರ ಫೋಟೋ ನೋಡ್ಕೊಂಡು ಎದ್ದೇಳು, ಎದ್ದ ತಕ್ಷಣ ಅಂಗೈ ದರ್ಶನ ಮಾಡು, ಬೆಕ್ಕು ಅಡ್ಡ ಬಂತು ಎರಡು ಕ್ಷಣ ನಿಂತು ಮುಂದೆ ಹೋಗು, ಹಲ್ಲಿ ಲೊಚಗುಟ್ಟಿತು ನಿನ್ನ ಕೆಲಸ ಹಾಳು, ಹೆಣ ಅಡ್ಡ ಬಂತು ಇವತ್ತು ಒಳ್ಳೆ ದಿನ, ಗಂಟೆ ಸದ್ದು ಮಾಡಿತು ನೀನು ಹೇಳಿದ್ದು ನಿಜ, ಇಮ್ಮಿಡಿಯೇಟ್ ಕರೆಂಟು ಬಂತು ನೀನು ಹೇಳಿದ್ದು ಖಂಡಿತಾ ನಿಜ… ಎಷ್ಟೊಂದು ನಂಬಿಕೆಗಳು. ಆದರೆ ನಾನು ಯಾವಾಗ್ಲೂ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ರಾಹು ಕಾಲ, ಗುಳಿಕ ಕಾಲ, ಯಮಗಂಡ ಕಾಲ ಆಗ್ಲೂ ಗೊತ್ತಿರಲಿಲ್ಲ, ಈಗ್ಲೂ ಗೊತ್ತಿಲ್ಲ. ಸಂಖ್ಯಾ ಶಾಸ್ತ್ರ ನೋದಿ ಕೆಲಸ ಮಾಡೋದಕ್ಕೆ ನಾನು ಮಾಥ್ಸನ್ನ ರಿಲೇ ರೇಸ್ ಥರಾ ಉಸ್ಸಪ್ಪಾ ಅಂತಾ ಪಾಸಾದವ. ಬಲಗಾಲು ಎಡಗಾಲು ಎರಡೂ ಬಳಕೆಗೆ ಬರುತ್ತೆ ಅಂತಾ ನಂಬಿದವ. ಬಲಗೈ ಎಡಗೈ ನಡುವೆ ವ್ಯತ್ಯಾಸ ಗೊತ್ತಿರೋದು ಒಂದೇ ಒಂದು ಕೆಲಸದಲ್ಲಿ ಮಾತ್ರ. ದೇವರ ಫೋಟೋ ನೋಡು ಅಂತಾ ಹೇಳಿದ್ರೂ ಆಮೇಲೆ ಮನೇನಲ್ಲಿ ಭೂತಗನ್ನಡಿ ಹಾಕಿ ಹುಡುಕಿದ್ರೂ ಒಂದು ಫೋಟೋ ಇರಲಿಲ್ಲ.

ಹೆಂಡ್ತೀನ ಮೆಚ್ಚಿಸೋಕೆ, ಅವಳ ಬೆಳಗೂ ಸಹಾ ಒಂದು ನಸುನಗೆಯಿಂದ ಆರಂಭವಾಗೋದಕ್ಕೆ ಮಾತ್ರ ಹಾಸಿಗೆಯಲ್ಲಿ ಕಣ್ಣುಬಿಟ್ಟುಕೊಂಡು ಅರ್ಧ ಗಂಟೆ ಸೂರು ನೋಡಿದ್ರೂ ಕಾಫಿ ವಾಸನೆ ಗಂ ಅಂತ ಅಡಿಗೆ ಮನೆಯಿಂದ ರೂಮಿಗೆ ಹೊಕ್ಕರೆ ಕಣ್ಣು ಇನ್ನೂ ಮುಚ್ಚಿಕೊಂಡಿದ್ದೇನೆ ಅನ್ನೋ ನಾಟ್ಕಾ ಮಾಡ್ತಾ ಎಡವ್ತಾ ಬೀಳ್ತಾ ಗೋಡೆ ಹಿಡ್ಕೊಳ್ತಾ ಹೋಗಿ ಹೆಂಡ್ತಿ ಮುಖ ನೋಡ್ತಿದ್ದೆ. ಇದೆಲ್ಲಾ ಸುಮ್ನೆ ಕಳ್ಳಾಟ ಅಂತ ಗೊತ್ತಿದ್ರೂ ಕಳ್ಳ ಬೆಕ್ಕು ಮೆಳ್ಳಗಣ್ಣು ಬಿಡ್ತಿತ್ತು ಅನ್ನೋ ಹಾಗೆ ಕಳ್ಳ ಬೆಕ್ಕಿಗೆ ಬೇಕಾದ್ದೆಲ್ಲಾ ಕೊಡ್ತಿದ್ಲು. ಇಂತಾ ನಾಟಕಕ್ಕೆ ಮಾತ್ರ ಎಂತಾ ಶಕುನಾನೂ ಬಳಸಿಕೊಳ್ತಿದ್ದೆ.

ಆಫೀಸಲ್ಲಿ ರಜೆ ಬೇಕು ಅಂತಾದಾಗ ಕುಲುಮನಾಲಿನಲ್ಲಿ ಹಿಮದ ಕಣಿವೆ ಏರಿಳಿತಿದ್ರೂ ಬಾಸ್ ಗೆ ದೇವರಾಣೆ ನಮ್ಮತ್ತೆಗೆ ಹುಷಾರಿಲ್ಲ ಸಾರ್ ಅಂತಿದ್ದೆ. ನನ್ನಾಣೆ ನಮ್ಮ ಮಾವ ಹಾಸಿಗೆ ಹಿಡಿದು ಮಲಗಿಬಿಟ್ಟಿದಾರೆ ಸಾರ್ ಅಂತಿದ್ದೆ. ಆಗ ಅವ್ರೇ ನಿಮ್ಮ ಮಾವ ಸತ್ತು ಒಂದು ವರ್ಷ ಆಗೋಯ್ತಲ್ರಿ ಅಂತಾ ಜ್ಞಾಪಿಸೋರು. ಇತ್ತೀಚೆಗಂತೂ ಫೋನಿನಲ್ಲಿ ಮಾತಾಡ್ತಾ ನಿಮ್ಮಾಣೆ ಅನ್ನೋದನ್ನ ಬಳಸ್ತೀನಿ. ಆ ಕಡೆ ಇದ್ದೋರು ಯಾಕ್ರೀ ನಾನು ಸಾಯ್ಲಿ ಅಂತಾನಾ ಅಂತ ಮರುಪ್ರಶ್ನೆ ಕೇಳೇ ಕೇಳ್ತಾರೆ. ಅನುಕೂಲ ಆಗುತ್ತೆ ಅನ್ನೋದಾದ್ರೆ ಯಾರ ಮೇಲೂ ಆಣೆ ಮಾಡೋಕೆ ಸಹ ಯಾವಾಗ್ಲೂ ರೆಡಿ.

ನೋಡ್ರಿ ಬೇಕಾದ್ರೆ ಇವತ್ತು ಮಳೆ ಬರಲ್ಲ, ನಮ್ಮ ಪ್ರೋಗ್ರಾಮ್ ಸಕ್ಸಸ್ ಆಗುತ್ತೆ ಅಂತಾ ಯಾರಾದ್ರೂ ಹೇಳಿದ್ರೆ ಅದೆಂಗೆ? ಅನ್ನೋ ಹಾಗೆ ಮುಖ ಮಾಡಿಕೊಳ್ತಿದ್ದೆ. ಅವರು ಪರಮಾತಿ ಪರಮ ದಡ್ಡನಿಗೆ ವಿವರಿಸೋ ಹಾಗೆ ಪ್ರೋಗ್ರಾಂ ಇರೋದು ಎಷ್ಟು ಗಂಟೆಗೆ ಹೇಳಿ. ೯ ಗಂಟೆಗೆ ಅಲ್ವಾ. ೯ ಅದೃಷ್ಟದ ಸಂಖ್ಯೆ ಅನ್ನೋರು.

ಯಾವುದೋ ಇಂಪಾರ್ಟೆಂಟ್ ಕೆಲಸಕ್ಕೆ ಅಂತಾ ಫೋನ್ ಹತ್ತಿದ್ದೆ. ಫೋನ್ ಬಂತು ನಿಮ್ಮ ಸೀಟ್ ನಂಬರ್ ಎಷ್ಟು ಅಂತ. ನಾನು ಕಕ್ಕಾಬಿಕ್ಕಿ ಫ್ಲೈಟ್ ಸೀಟ್ ನಂಬರ್ ಕಟ್ಕೊಂಡು ಇವನೇನಪ್ಪಾ ಮಾಡ್ತಾನೆ ಅಂತ. ೧೮ ಅಂದೆ. ವಾರೆವಾ ವೆರಿಗುಡ್ ನಿಮ್ಮ ಕೆಲಸ ಸಕ್ಸಸ್ ಅಂದ್ರು. ನಂದು ಅದೇ ಭಾವ. ಅದೆಂಗೆ ಅಂತಾ? ಅವರೇ ಹೇಳಿದ್ರು ೧+೮ ಎಷ್ಟು ಹೇಳಿ. ೯ ಅಂದೆ. ನೋಡಿ ಅದೇ ಅದೇ ೯ ಬಂತಲ್ವಾ ಅಂದ್ರು.

ಇದನ್ನೆಲ್ಲಾ ಒಳ್ಳೆ ಜೋಕ್ ಥರಾ ಎಂಜಾಯ್ ಮಾಡೋ ನಾನು ಯಾಕೆ ಕಣ್ಣು ಬಿಟ್ಟ ತಕ್ಷಣ ಹಸಿರು ನೋಡಬೇಕು, ಬಲಗಡೇನೇ ಎದ್ದೇಳಬೇಕು, ಮಂಗಳವಾರ ಹೊಸಾ ಕೆಲಸಕ್ಕೆ ಕೈಹಾಕಬಾರದು ಅನ್ನೋದಕ್ಕೆ ಗಂಟುಬಿದ್ದಿದೀನಿ? ಯಾಕೆ ಅನ್ನೋ ಪ್ರಶ್ನೆ ಫ್ರೆಂಡ್ಸ್ ಮುಂದೆ ಇಟ್ಟರೆ ಏ ಅದು ಶಕುನ ಅಲ್ಲಾ ಅದರ ಹಿಂದೆ ಸೈಂಟಿಫಿಕ್ ರೀಸನ್ ಇದೆ. ಬಲಗಡೆ ಎದ್ದರೆ ಗ್ರಾವಿಟಿ. ನೀನು ಯಾವ ದಿಕ್ಕಿನಲ್ಲಿ ತಲೆಹಾಕಿ ಮಲಗ್ತಿಯಾ ಅದರ ಹಿಂದೆ ಮ್ಯಾಗ್ನೆಟಿಸಂ  ಅಂತೆಲ್ಲಾ…

ಆದರೂ ನಾನು ಇದನ್ನೆಲ್ಲಾ ಟೆಸ್ಟ್ ಮಾಡಬೇಕು ಅಂತಾ ಎಡಗಡೆ ಎದ್ದಿದೀನಿ. ಆದರೆ ಇಡೀ ದಿನ ಲಬ್ ಡಬ್ ಲಬ್ ಡಬ್ ಅನ್ನೋ ಸೌಂಡು ಕೇಳ್ತಾನೇ ಇರುತ್ತೆ. ಯಾರ ಮೇಲಾದ್ರೂ ಸಣ್ಣಗೆ ಗುರ್ ಅಂದ್ರೂ ನೋಡು ಎಡಗಡೆ ಎದ್ದೆಯಲ್ಲ ಅನುಭವಿಸು ಅನ್ನುತ್ತೆ. ಪ್ರತೀ ದಿನಾ ಒಂದಲ್ಲಾ ನೂರು ಸಲ ಸಿಕ್ಕಸಿಕ್ಕವರನ್ನೆಲ್ಲಾ ಗುರ್ ಅಂದು ಪರಚಿರ್ತೀನಿ ಕೂಡಾ. ಆದ್ರೆ ಆವಾಗ ಈ ಎಡಗಡೆ ಬಲಗಡೆ ಲೆಕ್ಕಕ್ಕೆ ಬಂದಿರಲ್ಲಾ. ಆದ್ರೆ ಇವಾಗ ಮಾತ್ರ ಓಹ್!

ಇವತ್ತು ಮಂಗಳವಾರ ಕಣೋ ಯಾವ ಕೆಲಸಾನೂ ಶುರು ಮಾಡ್ಬೇಡ ಅಂತಾ ಅಮ್ಮ ಹೇಳಿದ್ದು ಓಬೀರಾಯನ ಕಾಲದಲ್ಲಿ. ಆದರೆ ಐ. ಟಿ. ಕಾಲದಲ್ಲೂ ಅದು ನನ್ನ ತಲೇಲಿ ನಿಂತಿದೆ.

ಐ. ಟಿ. ಅಂದ ತಕ್ಷಣ ಜ್ಞಾಪಕಕ್ಕೆ ಬಂತು. ನಮ್ಮನೆ ಎದುರಿಗೆ ಒಬ್ಬ ಐ. ಟಿ. ಸಿ ಇ ಒ ಇದ್ದಾನೆ. ದಿನ ಬೆಳಗಾದ್ರೆ ಗಂಟೆ ಅಲ್ಲಾಡಿಸ್ಕೊಂಡು ಗಂಟೆಗಟ್ಟಲೆ ಮಂತ್ರ ಹೇಳ್ಕೊಂಡು ಮಡಿ ಉಟ್ಕೊಂಡು ಯಾರಿಗೆ ಬೇಕಪ್ಪಾ ಶಿವ ಶಿವಾ ಇವನ ಸಹವಾಸ ಅನ್ನೋ ಹಾಗೆ ಮಾಡಿಬಿಡ್ತಾನೆ.

ಮಾತುಮಾತಿಗೆ ನಾನು ಶಿವ ಶಿವಾ ಅಂತೀನಿ. ಅದೇನು ಸುಮ್ನೆ ಉದುರುತ್ತೆ ಬಾಯಲ್ಲಿ. ಆದ್ರೆ ನಮ್ಮತ್ತೆಗೆ ಭಾರೀ ಖುಷಿ. ನಾನು ದೇವರ ಪೂಜೆ ಮಾಡಲ್ಲ, ಶಾಸ್ತ್ರ ಇಲ್ಲ, ರೀತಿ ನೀತಿ ಇಲ್ಲ ಅಂತ ಗೊತ್ತಿರೋ ಅತ್ತೆಗೆ ಇದೆಲ್ಲಾ ಇಲ್ಲದಿದ್ರೂ ನನಗೆ ಅಂತ ಕೆಟ್ಟದೇನೂ ಆಗಿಲ್ಲ ಅನ್ನೋದು ಕಾಡುತ್ತೇನೋ. ಅದಕ್ಕೆ ಅವರೇ ಒಂದು ಉತ್ತರ ಕಂಡುಹಿಡಕೊಂಡಿದಾರೆ. ನೀವು ನಿಮಗೆ ಗೊತ್ತಿಲ್ದೀರ ಶಿವ ಶಿವಾ ಅಂತೀರಲ್ವ. ಅದೇ ಅದೇ ನಿಮಗೆ ಗೊತ್ತಿಲ್ದೆ ನಿಮ್ಮನ್ನ ಕಾಪಾಡಿರೋದು. ಅಯ್ಯೋ ಶಿವನೆ? ಅಂತ ಅನ್ಕೊಳ್ತೀನಿ.

ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಾಲಿ… ಅನ್ನೋ ಹಾಡು ಕಿವಿಗೆ ಬಿದ್ದಾಗ, ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತೀ… ಅನ್ನೋ ಸುಭಾಷಿತ ಕೇಳಿದಾಗ ದಢಕ್ಕಂತ ನನ್ನ ಈ ಎಲ್ಲಾ ಶಕುನ ನೆನಪಾಗುತ್ತೆ.

ಆಮೇಲೆ ನಾನೇ ಸಮಾಧಾನ ಮಾಡ್ಕೊಳ್ತೀನಿ. ಅಮ್ಮಾ ಏನೇನೋ ಹೇಳಿದ್ರೂ ಯಾವುದೂ ಪಾಲಿಸ್ಲಿಲ್ಲ. ಹೋಗ್ಲಿ ಬಿಡು ಅಮ್ಮನ ಮಂಗಳವಾರಾನಾದ್ರೂ ಕರೆಕ್ಟಾಗಿ ಪಾಲಿಸ್ತಿದೀನಲ್ಲ ಅಂತ.

ಮಂಗಳ ಅನ್ನೋ ಹೆಸರಿಟ್ಕೊಂಡಿರೋ ಮಂಗಳವಾರವೇ ಅಪಶಕುನ ಆಗಿದ್ದಾದ್ರೂ ಹೇಗೆ ಅನ್ನೋ ಪ್ರಶ್ನೆ ಮಾತ್ರ ಇನ್ನೂ ತಲೇನಲ್ಲಿ ಗಿರ್ ಅಂತಾನೇ ಇದೆ.

‍ಲೇಖಕರು avadhi

November 6, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This