ಮನಸ್ಸನ್ನು ತೇವಗೊಳಿಸುವ ’ನಡುವೆ ಸುಳಿವಾತ್ಮನ ಬದುಕು-ಬಯಲು’ – ಹರ್ಷ ಕುಗ್ವೆ

ಮನಸ್ಸನ್ನು ತೇವಗೊಳಿಸುವ ’ನಡುವೆ ಸುಳಿವಾತ್ಮನ ಬದುಕು-ಬಯಲು’

– ಹರ್ಷ ಕುಗ್ವೆ

ಹಸಿರೆಲೆ “ಅಮ್ಮಾ ನನಗ್ಯಾಕೆ ಈ ಸಂಕಟ? ಯಾಕೆ ಇಂತ ಪರೀಕ್ಷೆಗೆ ನನ್ನ ಒಳಪಡಿಸ್ತಿದೀಯ? ನಿನ್ನ ನಂಬಿದವರಿಗೆ ಎಲ್ಲವನ್ನೂ ನೀನು ಕೊಡ್ತೀಯ ಅಂತಾರೆ. ಆದರೆ ನನಗೆ ನೀನು ಕೊಟ್ಟಿರೋದು ನೀನು ಬರೀ ನೋವನ್ನಷ್ಟೆ. ನಾನು ಮಾಡಿರೋ ತಪ್ಪಾದರೂ ಏನು? ಗಂಡಸಿನ ರೂಪದಲ್ಲಿ ಹೆಣ್ಣಿನ್ ಭಾವನೆ ತುಂಬಿ ಸೃಷ್ಟಿ ಮಾಡಿರೋಳು ನೀನೇ. ನಿನ್ನ ತಪ್ಪಿಗೆ ನಿನ್ನದೇ ದೇವಸ್ಥಾನದಲ್ಲಿ ನನಗೆ ಶಿಕ್ಷೆಯಾಗುತ್ತಿದೆ. ನೀನು ಹೆಣ್ಣಲ್ವ? ಇನ್ನೊಂದು ಹೆಣ್ಣಿನ ಭಾವನೆ ನಿನಗೆ ಅರ್ಥ ಆಗಲ್ವ? ನಿನಗೆ ಕನಿಕರ ಇಲ್ವಾ? ಮುಂದಿನ ವರ್ಷ ಇದೇ ದಿನದ ಹೊತ್ತಿಗೆ ನಿನ್ನ ಹಾಗೆ ನನ್ನನ್ನೂ ಹೆಣ್ಣಾಗಿ ಮಾಡ್ಬೇಕು. ಆಗಲಿಲ್ಲ ಆಂದ್ರೆ ಪೂರ‍್ತಿ ಗಂಡಸಾಗಿಯಾದ್ರೂ ಮಾಡೇ…..” ಎಂದು ದೊರೈಸ್ವಾಮಿಯನ್ನು ಸಮಯಾಪುರದ ದೇವಸ್ಥನದಲ್ಲಿ ಆತನ ತಲೆಗೂದಲನ್ನು ಬೋಳಿಸುವಾಗ ನೋವು, ಹತಾಶೆ, ಸಿಟ್ಟಿನಿಂದ ಹೇಳಿಕೊಂಡ ಮಾತುಗಳನ್ನು ರಂಗದ ಮೇಲೆ ಕೇಳಿದ ನಮಗೆಲ್ಲಾ ಇಷ್ಟು ದಿನದ ನಮ್ಮ ಅರಿವಿನ ಮೂಲಗಳೆಲ್ಲಾ ಪತರಗುಟ್ಟಿದಂತಹ ಅನುಭವ. ಕಿಕ್ಕಿರಿದ ಪ್ರೇಕ್ಷಕರ ಎದುರು ನೆನ್ನೆ ಶಿವಮೊಗ್ಗದ ಡಿ.ವಿ.ಎಸ್. ರಂಗಮಂದಿರಲ್ಲಿ ಪ್ರದರ್ಶನವಾದ ’ನಡುವೆ ಸುಳಿವಾತ್ಮನ ಬದುಕು-ಬಯಲು’ ನಾಟಕದ ಒಂದು ದೃಶ್ಯ ಇದು.   ಶಿವಮೊಗ್ಗದ ಕ್ರಿಯಾಶೀಲ ರಂಗ ಸಂಘಟನೆಯಾದ ’ರಂಗ ಬೆಳಕು’ ತಂಡವು ಆಯೋಜಿಸಿದ್ದ ಹೆಗ್ಗೋಡಿನ ’ಜನಮನದಾಟ’ ತಂಡದ ಈ ನಾಟಕ ಎ.ರೇವತಿಯವರ ಟ್ರೂತ್ ಎಬೌಟ್ ಮಿ- ಎ ಹಿಜ್ರಾ ಲೈಫ್’ ಕೃತಿಯ ಅನುವಾದಿತ ಕೃತಿಯಾದ ’ಬದುಕು=ಬಯಲು’ ಕೃತಿಯ ಕೆಲವು ಭಾಗಗಳ ರಂಗರೂಪ. ತಮಿಳುನಾಡಿನ ಸೇಲಂ ಜಿಲ್ಲೆಯ ನಾಮಕ್ಕಂ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಗೌರವಾನ್ವಿತ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ದೊರೈಸ್ವಾಮಿ ಎಂಬ ಬಾಲಕ ಬೆಳೆಬೆಳೆಯುತ್ತಾ ತನ್ನೊಳಗಿನ ಭಾವನೆಗಳಿಗೂ ತನ್ನ ದೇಹದ ಸಂರಚನೆಗೂ ಇರುವ ವೈರುಧ್ಯವನ್ನು ಕಂಡುಕೊಳ್ಳುತ್ತಾ ವಿಚಿತ್ರ ತಳಮಳಗಳಿಗೊಳಗಾಗುತ್ತಾ ಹೋಗುತ್ತಾನೆ. ದೊರೈಸ್ವಾಮಿಯ ಹೆಣ್ಣು ನಡವಳಿಕೆಗಳು ವ್ಯಕ್ತಗೊಳ್ಳುತ್ತಾ ಹೋದಂತೆ, ಮೇಲುಗಡೆಯ ಗಂಡಿಗಿಂತಲೂ ಒಳಗಡೆಯ ಹೆಣ್ಣು ಗಟ್ಟಿಗೊಳ್ಳುತ್ತಾ ಹೋದಂತೆ ಅದನ್ನು ಕುಟುಂಬದ ಅಣ್ಣನ ದ್ವೇಷ, ಹೊರಗಿನ ಸಮಾಜದ ಅಪಹಾಸ್ಯಗಳಿಗೆ ಈಡಾಗುತ್ತಾ ಹೋಗುತ್ತಾನೆ. ಕುಟುಂಬ ಇಂತಹ ಮಗನ ಹೆಣ್ಣು ನಡವಳಿಕೆಯಿಂದ ಸಮಾಜದಿಂದ ಎದುರಾಗುವ ಅವಮಾನಗಳನ್ನು ನೆನೆಸಿಕೊಂಡು ಕುಗ್ಗುತ್ತದೆ. ದೊರೈಸ್ವಾಮಿಯನ್ನು ಗಂಡಾಗಿಯೇ ಉಳಿಸಲು ಇನ್ನಿಲ್ಲದ ಹರಸಾಹಸ ನಡೆಯುತ್ತದೆ. ಆಗ ದೊರೈ ಸ್ವಾಮಿಗೆ ಎದುರಾಗುವ ಮೊದಲ ಪ್ರಶ್ನೆ ಹೀಗಿರುವುದು ತಾನೊಬ್ಬನೆಯಾ ಅಥವಾ ಇನ್ನೂ ಬೇರೆಯವರೂ ಇರಬಹುದಾ? ಎಂಬುದು. ಈ ಹುಡುಕಾಟದಲ್ಲಿ ಇನ್ನಿತರ ಹಿಜ್ರಾ ಸಮುದಾಯದೊಳಕ್ಕೆ ದೊರೈ ಸ್ವಾಮಿಯ ಪ್ರವೇಶವಾಗುತ್ತದೆ. ಮನೆಬಿಟ್ಟು ಹೋಗಿ ಕೆಲದಿನ ಅವರೊಂದಿಗೆ ಇರುವ ದುರೈಸ್ವಾಮಿ ಮನೆಗೆ ಬಂದಾಗ ಮತ್ತದೇ ಹೊಡೆತ, ಬಡಿತ, ಹೀಯಾಳಿಕೆ, ಅವಮಾನ. ಆಗ ದೆಹಲಿಗೆ ತನ್ನ ಹಿಜ್ರಾ ಗುರುವನ್ನು ಆರಿಸಿಕೊಂಡು ಹೋಗಿ ಅಲ್ಲಿ ಆಕೆಯ ’ಚೇಲಾ’ ಆಗಿ ನಿರ‍್ವಾಣವನ್ನೂ ( ಅಪರೇಷನ್) ಮಾಡಿಸಿಕೊಳ್ಳುವ ದೊರೈಸ್ವಾಮಿ ’ರೇವತಿ’ಯಾಗುತ್ತಾಳೆ. ಪೂರ್ತಿ ಹೆಣ್ಣಾಗಿ ಸೀರೆಯುಟ್ಟುಕೊಂಡು ಬರುವ ರೇವತಿಯನ್ನು ಕಂಡು ಮನೆಯವರು ’ಇದೇನಿ ವೇಷ ಹಾಕ್ಕೊಂಡು ಬಂದಿದೀಯಾ?’ ಎಂದು ಗದರಿಸುವ ಮನೆಯವರಿಗೆ ’ಈಗ ನಿಮ್ಮೆದುರಿಗಿರುವುದೇ ನನ್ನ ನಿಜ ರೂಪ. ಇಷ್ಟು ದಿನ ಇದ್ದಿದ್ದು ವೇಷದಲ್ಲಿ’ ಎಂದು ತಿರುಗಿ ನಿಂತು ಬಿಡುತ್ತಾಳೆ. ’ನಿನ್ನ ಪಾಲಿನ ಆಸ್ತಿ ಬೇಕಾದರೆ ಒಂದು ದಿನದ ಮಟ್ಟಿಗಾದರೂ ನೀನು ನ್ಯಾಯಾಲಯದಲ್ಲಿ ಗಂಡುಮಗನಂತೆ ನಿಲ್ಲಬೇಕು’ ಎನ್ನು ವಕೀಲರ ಬೇಡಿಕೆಯನ್ನು ರೇವತಿ ಧಿಕ್ಕರಿಸಿ ಬಿಡುತ್ತಾಳೆ. ಮತ್ತೆ ದೆಹಲಿಯಿಂದ ಮುಂಬೈ ಹೋಗುವ ರೇವತಿ ತನ್ನ ಸಮುದಾಯದೊಂದಿಗೆ ಸೆಕ್ಸ್‌ವರ್ಕ್ ಅನಿವಾರ್ಯವಾಗುವಂತ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗುತ್ತದೆ. ಕ್ರಮೇಣ ತನ್ನ ಸಮುದಾಯದ ವಾಸ್ತವತೆಗಳು, ತನ್ನ ಸಮುದಾಯವನ್ನು ನಡೆಸಿಕೊಳ್ಳುವ ರೀತಿ ರಿವಾಜುಗಳು, ಇಬ್ಬಂದಿತನಗಳೆಲ್ಲಾ ಆಕೆಯ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಹಿಜ್ರಾ ಸಮುದಾಯದ ಗುರುವಿನಲ್ಲಿ ಹೊಸ ತಾಯಿಯೊಬಬ್ಳನ್ನು ಕಾಣುವ; ಮೊದಲ ಬಾರಿಗೆ ಸೀರಿಯುಟ್ಟು ಕನ್ನಡಿಯಲ್ಲಿ ತನ್ನ ಸೌಂದರ್ಯ ನೋಡಿ ಸಂಭ್ರಮ ಪಡುವ; ವಿಕೃತನೊಬ್ಬನ ಕಾಮದಾಹಕ್ಕೆ ಅತ್ಯಾಚಾರಕ್ಕೊಳಗಾಗುವ; ತಮ್ಮ ಸಮುದಾಯಕ್ಕೆ ರಾಮಾಯಣದಲ್ಲಿ ಇರುವ ಪ್ರಾಮಖ್ಯತೆಯನ್ನು ಕೇಳುವ; ಸಮಯಾಪುರ ದೇವಸ್ಥನದಲ್ಲಿ ದೇವರನ್ನು ಪ್ರಶ್ನಿಸುವ; ಅಣ್ಣನೆದುರು ತನ್ನತನವನ್ನು ರಾಜಾರೋಷವಾಗಿ ಘೋಷಿಸಿಕೊಳ್ಳುವ ದೊರೈಸ್ವಾಮಿ-ರೇವತಿಯ ಚಿತ್ರಗಳು ಪ್ರೇಕ್ಷಕರನ್ನು ಬಹುಕಾಲ ಕಾಡುವಂತವು. ನಾಟಕದ ಕೊನೆಯ ಭಾಗದಲ್ಲಿ ರೇವತಿಯ ತಂದೆ ವಾಸ್ತವವನ್ನು ಒಪ್ಪಿಕೊಂಡು ಆಕೆಗೆ ಎಲ್ಲೂ ನೋವಾಗದಂತೆ ಇರಲು ಹೆಂಡತಿ ಮತ್ತು ಹಿರಿಯ ಮಗನಿಗೆ ಹೇಳುವ ದೃಶ್ಯವೇ ಇಡೀ ನಾಟಕದ ಆಶಯವನ್ನು ಬಿಂಬಿಸುತ್ತದೆ. ಆ ತಂದೆ ’ರೇವತಿ’ಗೆ ತೋರುವ ಮಮತೆಯನ್ನು ಇಡೀ ಸಮಾಜ ಮತ್ತು ಆಳುವವರು ’ಹಿಜ್ರಾ’ ಸಮುದಾಯಕ್ಕೆ ತೋರಬೇಕೆಂದು ಎಂಬ ಸಂದೇಶವನ್ನು ಪ್ರೇಕ್ಷಕರಿಗೂ ದಾಟಿಸುವಲ್ಲಿ ನಿರ್ದೇಶಕರಾದ ಗಣೇಶ್ ಮೇಸ್ಟ್ರು ಸಫಲರಾಗಿದ್ದಾರೆ. ಆದರೆ ನಾಟಕದ ಮುಕ್ತಾಯ ಕೊಂಚ ತರಾತುರಿಯಲ್ಲಾದಂತೆ ಅನ್ನಿಸುತ್ತದೆ. ಬದುಕು- ಬಯಲು ಕೃತಿ ಬಯಲು ಮಾಡುವ ಮತ್ತಷ್ಟು ನಗ್ನ ಸತ್ಯಗಳನ್ನು ಈ ನಾಟಕದಲ್ಲಿ ಸೇರಿಸುವ ಅಗತ್ಯವಿದೆ ಅನ್ನಿಸುತ್ತದೆ.   ಇಂತಹದೊಂದು ವಸ್ತುವಿಷಯದ ಕತೆಯನ್ನು ರಂಗದ ಮೇಲಿಳಿಸುವ ಕೆಲಸ ನಿಜಕ್ಕೂ ಸವಾಲಿನದೇ ಸರಿ. ಆದರೆ ಈ ಸಾವಾಲನ್ನು ಸ್ವೀಕರಿಸಿರುವ ’ಜನಮನದಾಟ’ ಸಂಪೂರ್ಣ ಯಶಸ್ಸೂ ಕಂಡಿದೆ. ಪ್ರಾಯಶ: ಹಿಜ್ರಾಗಳ ಬದುಕನ್ನು ಹೇಳುವ ನಾಟಕವೊಂದು ಕನ್ನಡದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲೆಂದು ಕಾಣುತ್ತದೆ. ನಾಟಕದ ಪ್ರಮುಖ ಪಾತ್ರವಾದ ರೇವತಿಯ ಪಾತ್ರದಲ್ಲಿ ಚಂದ್ರು ಆ ಪಾತ್ರವೇ ತಾವಾಗಿದ್ದಾರೆನ್ನುವಷ್ಟರ ಮಟ್ಟಿಗೆ ಅಭಿನಯಿಸಿದ್ದಾರೆ. ಬಾಲಕ ದೊರೈಸ್ವಾಮಿ ಮತ್ತು ಹಿಜ್ರಾ ಗುರುವಿನ ಪಾತ್ರಧಾರಿಗಳೂ ಅಷ್ಟೇ ಸಮರ್ಥವಾಗಿ ಅಭಿನಯಿಸಿದ್ದಾರೆ. ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರುಬರು, ಗಡ್ಡ ಮೀಸೆ ಬಂದೊಡೆ ಗಂಡೆಂಬರು, ನಡುವೆ ಸುಳಿವಾತ್ಮನು ಹೆಣ್ಣೂ ಅಲ್ಲ ಗಂಡ ಅಲ್ಲ’ ಎಂಬ ಜೇಡರ ದಾಸಿಮಯ್ಯನ ವಚನವನ್ನು ನಾಟಕದುದ್ದಕ್ಕೂ ಬಳಸಿಕೊಂಡಿರುವುದು ಮಾರ್ಮಿಕವಾಗಿದೆ. ನೆನ್ನೆ ರಂಗಮಂದಿರದಲ್ಲಿ ನಾಟಕ ನೋಡಲು ಹಿಜ್ರಾ ಸಮುದಾಯದ ಏಳಂಟು ಮಂದಿ ಕುಳಿತಿದ್ದರು. ಈ ನಾಟಕದ ಪ್ರತಿದೃಶ್ಯದಲ್ಲೂ ತಮ್ಮ ಬದುಕನ್ನು ಕಾಣುತ್ತಿದ್ದ ಅವರು ಪ್ರತಿ ದೃಶ್ಯಕ್ಕೂ ’ಚಪ್ಪಾಳೆ’ ಹೊಡೆಯುತ್ತಿದ್ದುದು ವಿಶೇಷವಾಗಿತ್ತು. ಮಾತ್ರವಲ್ಲ ಕಡೆಕಡೆಗೆ ಅವರು ಕಣ್ಣಿರು ಹಾಕುತ್ತಿದ್ದರು. ನಡುನಡುವೆ ತಡೆಯಲಾರದೆ ಕಮೆಂಟ್ ಹಾಕುತ್ತಿದ್ದರು. ಅಂತಿಮವಾಗಿ ಇವರ ’ಚಪ್ಪಾಳೆ’ಗಳೂ ಇತರೆಲ್ಲ ಗಂಡು ಹೆಣ್ಣುಗಳ ಚಪ್ಪಾಳೆಗಳೂ ಒಂದಾಗಿ ರಂಗಮಂದಿರದಲ್ಲಿ ಮಾರ್ದನಿಸಿದವು. ಇಂತಹ ಒಂದು ನಾಟಕವನ್ನು ಆಯೋಜಿಸಿದ ಶಿವಮೊಗ್ಗದ ’ರಂಗಬೆಳಕು’ ಮತ್ತು ಪ್ರದರ್ಶಿಸಿದ ಹೆಗ್ಗೋಡಿನ ’ಜನಮನದಾಟ’ ಎರಡೂ ತಂಡಗಳು ಬಹು ಕ್ರಿಯಾಶೀಲ ಮತ್ತು ಸಮಾಜಮುಖಿ ರಂಗ ತಂಡಗಳು. ಎರಡೂ ತಂಡಗಳಿಗೆ ಅಭಿನಂದನೆಗಳು.]]>

‍ಲೇಖಕರು G

June 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

2 ಪ್ರತಿಕ್ರಿಯೆಗಳು

  1. prasad raxidi

    ದಿನಾಂಕ 14/6/20120 ಗುರುವಾರ ಸಂಜೆ 7 ಕ್ಕೆ ಬೆಳ್ಳೇಕೆರೆಯ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ “ನದುವೆ ಸುಳಿವಾತ್ಮನ ಬದುಕು ಬಯಲು” ನಾಟಕ ಪ್ರದರ್ಶನ ಇದೆ.. ಬನ್ನಿ..

    ಪ್ರತಿಕ್ರಿಯೆ
  2. Mallikarjuna Hosapalya

    ಇದೇ ಜೂನ್ ೯ ರಂದು ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಇದೇ ನಾಟಕವಿದೆ, ಜೆನ್ ಟೀಮ್ ವತಿಯಿಂದ, ಬಿಡುವು ಮಾಡಿಕೊಂಡು ಬನ್ನಿ, ಈ ಲೇಖನ ನಾಟಕ ನೋಡಲು ಪೂರ್ವಾಬ್ಯಾಸವಾದಂತಾಯಿತು. ಥ್ಯಾಂಕ್ಸ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: