‘ಮನಸ್ಸು ಕನ್ನಡಿ’ ವಿಶಿಷ್ಟ ಕೃತಿ: ಪ್ರೊ. ಮಲ್ಲೇಪುರಂ ಜಿ ವೆಂಕಟೇಶ

ಪ್ರೊ. ಮಲ್ಲೇಪುರಂ ಜಿ ವೆಂಕಟೇಶ

ಕನ್ನಡದಲ್ಲಿ ‘ಲಲಿತ ಪ್ರಬಂಧʼಗಳಿಗೆ ಮುಖ್ಯವಾದ ಸ್ಥಾನವಿತ್ತು. ಇಂಗ್ಲಿಷಿನ ‘ಎಸ್ಸೇ’ ಎಂಬ ಮಾತಿಗೆ ಸಂವಾದವಾಗಿ ‘ಪ್ರಬಂಧ’ ಎಂಬ ಪದರೂಪ ಬಳಕೆಯಾದರೂ ತನ್ನದೇ ಆದ ಅರ್ಥವ್ಯಾಪ್ತಿಯನ್ನು ಅದು ಪಡೆದುಕೊಂಡಿತ್ತು. ಆದರೆ, ಕಾಲಕ್ರಮೇಣ ಆ ಬಗೆಯ ಲಲಿತ ಪ್ರಬಂಧಗಳು ಕಡಿಮೆಯಾದುವು. ನವೋದಯ, ನವ್ಯ, ನವ್ಯೋತ್ತರ ಕಾಲಘಟ್ಟಗಳಲ್ಲಿ ಲಲಿತ ಪ್ರಬಂಧಗಳನ್ನು ನಮ್ಮ ಲೇಖಕರು ಆಸ್ಥೆಯಿಂದ ಬರೆದರು. ಆದರೆ, ಬಂಡಾಯ ಕಾಲಘಟ್ಟಕ್ಕೆ ಬಂದೊಡನೆ ‘ಲಲಿತ ಪ್ರಬಂಧ’ಗಳು ಹಾಗೂ ಹೀಗೂ ಕಣ್ಮರೆಯಾದವು. ಅಲ್ಲೊಮ್ಮೆ ಇಲ್ಲೊಮ್ಮೆ ಪ್ರಕಟವಾದದ್ದುಂಟು!

ಲಲಿತ ಪ್ರಬಂಧಗಳು ಹೆಸರೇ ಸೂಚಿಸುವಂತೆ, ಜೀವನದಲ್ಲಿ ಕಾಣಿಸಿಕೊಳ್ಳುವ, ನಡೆಯುವ ಸೂಕ್ಷ್ಮಸಂಗತಿಗಳನ್ನು ‘ವಾಸ್ತವ’ಕ್ಕೆ ಅನುಗುಣವಾಗಿ ಲೇಖಕನೊಬ್ಬ ಕಾಣಿಸುವ ಸಾಹಿತ್ಯರೂಪ. ಇದು ಒಂದೊಂದು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸುತ್ತದೆ.

ಶ್ರೀಮತಿ ಸುಮಾವೀಣಾ ಅವರು ಈಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಲೇಖಕಿ. ಅವರು ಈ ವರ್ಷ ಕಾಣಿಸಿಕೊಂಡ ಕೊರೊನಾ ಕಾಲದಲ್ಲಿ ಬರೆದ ಕೆಲವು ಪ್ರಬಂಧಗಳು ಇರುವಂತೆ; 2017ರ ನಂತರ ಬರೆದ ಇನ್ನಷ್ಟು ಪ್ರಬಂಧಗಳು ಇಲ್ಲಿವೆ. ಇಲ್ಲಿ ಒಟ್ಟು ಇಪ್ಪತ್ತೊಂದು ಪ್ರಬಂಧಗಳಿವೆ. ಎಲ್ಲಾ ಪ್ರಬಂಧಗಳೂ ಒಂದೇ ರೀತಿ ಇಲ್ಲ. ಅವು ಭಿನ್ನ ಭಿನ್ನ ಧಾಟಿಗಳನ್ನು ಹಿಡಿದಿವೆ.

ಇಲ್ಲಿಯ ಪ್ರಬಂಧಗಳ ವಸ್ತುವಿಷಯಗಳಂತೂ ಬೇರೆ ಬೇರೆಯೇ. ಕೊರೊನಾ ಸಂಬಂಧ ಎರಡು ಪ್ರಬಂಧಗಳಿದ್ದರೆ; ಇಡ್ಲಿ-ಕಾಫಿ-ಉಪ್ಪಿಟ್ಟು ಈ ವಿಷಯಗಳಿಗೆ ಸಂಬಂಧಿಸಿದ ಪ್ರಬಂಧಗಳೂ ಇಲ್ಲಿವೆ. ಅಜ್ಜಿಯ ಜತೆಗಿನ ನೆನಪನ್ನು ಕುರಿತ ಎರಡು ಪ್ರಬಂಧಗಳಲ್ಲಿ ‘ಅಜ್ಜಿಯ ರೈಲು ಚೆಂಬು’ ಮತ್ತು ‘ಹೋಗಿ ಬರುತ್ತೇವೆ ಆ ಬೆಟ್ಟಕೆ’ ನನಗೆ ಇಷ್ಟವಾದ ಪ್ರಬಂಧಗಳು.

ಪ್ರಬಂಧಗಳ ಭಾಷೆ, ನಿರೂಪಣೆ, ಸಂವಹನ ಓದುಗರನ್ನು ಸೆರೆಹಿಡಿದು ನಿಲ್ಲಿಸುತ್ತವೆ. ನಾವು ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಾದಾಗ ನಮ್ಮ ಅಜ್ಜಿಯರು ಕಣ್ಮರೆಯಾದರು. ನಮ್ಮ ನಮ್ಮ ಮನೆಗಳಲ್ಲಿ ಅಜ್ಜಿಯರಿಲ್ಲ. ಇದು ಆಧುನಿಕ ಪ್ರಪಂಚದ ಬಿಕ್ಕಟ್ಟು ಮತ್ತು ಇಕ್ಕಟ್ಟು. ಇನ್ನು ರಜೆ, ಹಾವು, ಕನ್ನಡಿ, ಕನಸು, ಎಲೆ ಅಡಿಕೆ ಚೀಲ-ಹೀಗೆ, ಹಲವು ವಿಷಯಗಳನ್ನು ಕುರಿತಾದ ಪ್ರಬಂಧಗಳೂ ಇಲ್ಲುಂಟು. ಜಾನಪದಕ್ಕೆ ಸಂಬಂಧಿಸಿದ ‘ಆಡಿ ಪದಿನೆಟ್ಟು’ ಓದಿನ ಕುತೂಹಲವನ್ನು ತಣಿಸುತ್ತದೆ. ಅನುಪಮಾ ನಿರಂಜನರು ಬರೆದ ‘ಮಾಧವಿ’ ಕಾದಂಬರಿ ಕುರಿತ ‘ವಿಮರ್ಶಾ ಪ್ರಬಂಧ’ ಸಾಕಷ್ಟು ದೀರ್ಘವಾಗಿದೆ.

ವಿದ್ಯಾರ್ಥಿಗಳು ಈಗ ಮೊಬೈಲು-ಕಂಪ್ಯೂಟರ್ ಗಳ ಬೆನ್ನು ಹತ್ತಿರುವುದರಿಂದ ಅವರು ಬರವಣಿಗೆಯ ಸಾಮರ್ಥ್ಯವನ್ನು ತುಸು ತುಸುವೇ ಕಳೆದುಕೊಳ್ಳುತ್ತಿದ್ದಾರೆ. ಇಂಥ ಆತಂಕ ಹಿರಿಯರಲ್ಲೂ ಪೋಷಕರಲ್ಲೂ ಉಂಟು! ಅದನ್ನು ಕುರಿತ ಸೂಕ್ಷ್ಮ ಸಂವೇದನೆಯ ಪ್ರಬಂಧ ನಮ್ಮ ಗಮನವನ್ನು ಸೆಳೆಯುತ್ತದೆ. ಕೊಡೆಯನ್ನು ಕುರಿತಾದ ಪ್ರಬಂಧವಂತೂ ಅಪೂರ್ವವಾಗಿದೆ!

ಶ್ರೀಮತಿ ಸುಮಾವೀಣಾ ಅಧ್ಯಯನಶೀಲರೆಂಬುದನ್ನು ಇಲ್ಲಿಯ ಪ್ರಬಂಧಗಳ ಮೂಲಕ ನಮ್ಮ ಅರಿಕೆಗೆ ಬರುತ್ತದೆ. ಇಲ್ಲಿಯ ಬರೆಹಗಳಲ್ಲಿ ವೈವಿಧ್ಯತೆ ಉಂಟು. ಇವು ನೇರವಾಗಿ ಶುದ್ಧ ಲಲಿತ ಪ್ರಬಂಧಗಳೆಂದು ಹೇಳ ಬರುವುದಿಲ್ಲ. ಇಲ್ಲಿಯ ಪ್ರಬಂಧಗಳಲ್ಲಿ ವಿಮರ್ಶಾತ್ಮಕ ಪ್ರಬಂಧರೂಪೀ ಬರೆಹ ಉಂಟು. ‘ಮಾಧವಿ’ ಕಾದಂಬರಿಯನ್ನು ಕುರಿತ ಪ್ರಬಂಧ ವಿಮರ್ಶಾತ್ಮಕ  ಪ್ರಬಂಧವಾಗಿಯೇ ಕಾಣಬರುತ್ತದೆ. ಸ್ತ್ರೀದೃಷ್ಟಿಕೋನದಿಂದಲೂ ಮಾನವೀಯ ನೆಲೆಯಿಂದಲೂ ಕೂಡಿರುವ ಬರೆಹ ಇದಾಗಿದೆ.

ಇನ್ನು ಜಾನಪದೀಯ ದೃಷ್ಟಿಯಿಂದ ಕೊಡವರ ಆಚರಣೆ ಕುರಿತ ʼಆಟಿ ಪದಿನಟ್ಟು..’ ಒಂದು ವಿಶಿಷ್ಟ ಪ್ರಬಂಧವೇ ಸರಿ. ಇಲ್ಲಿ ಲೇಖಕಿ ಆಷಾಢಮಾಸದ ಆಚರಣೆ ʼಕಕ್ಕಡ’ ಕುರಿತು ಹೇಳುವಾಗ ʼಕರ್ಕಾಟಕʼ ಮಾಸ ಇನ್ನೊಂದು ಹೆಸರೇ ಕಕ್ಕಡ (ಕರ್ಕಾಟ>ಕರ್ಕಡ>) ಎಂದು ಬಿಡಿಸಿ ಹೇಳಿದ್ದಾರೆ. ಇದು ಸಂಶೋಧನೆಗೆ ಸಂಬಂಧಿಸಿದ ವಿಷಯ. ಇದೇ ಬಗೆಯ ʼರಜಾ ಮಜಾ ರಜಾ ಸಜಾ’ ಎನ್ನುವ ಪ್ರಬಂಧದಲ್ಲಿ ವಾರಕ್ಕೊಮ್ಮೆ ಸರ್ಕಾರಿ ರಜೆ ಬರಲು ಕಾರಣವಾದ ಸಂದರ್ಭವೊಂದನ್ನು ಲೇಖಕಿ ಕಾಣಿಸುತ್ತಾರೆ.

ಲೇಖಕಿಯ ಮಾತುಗಳನ್ನೇ ಇಲ್ಲಿ ಉದ್ಧರಿಸಬಹುದು! ‘1848 ಮತ್ತು 1887ರ ಕಾಲಾವಧಿಯಲ್ಲಿ ಇದ್ದಂತಹ ವ್ಯಕ್ತಿ ಮೇಘಾಜಿ ಲೊಕೊಂಡೆ. ಇವರು ಸತ್ಯಶೋಧನಾ ಸಮಿತಿಯಲ್ಲಿ ಇರುತ್ತಾರೆ. ಜೊತೆಗೆ ಇವರು ಕಾರ್ಮಿಕ ನೌಕರರೂ ಹೌದು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ ವಾರವಿಡೀ ನಮಗೆ ಕೆಲಸ ಮಾಡಲಾಗುವುದಿಲ್ಲ. ಕನಿಷ್ಠ ಒಂದು ದಿನವಾದರೂ ರಜೆ ಬೇಕು-ಎಂದು ಕಾರ್ಮಿಕರು ಹೋರಾಟ ಮಾಡುತ್ತಾರೆ. ಅವರ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಾಗ ಅವರ ಒತ್ತಡಕ್ಕೆ ಮಣಿದು ಭಾನುವಾರದ ದಿನವನ್ನು ವಾರಾಂತ್ಯದ ರಜೆಯನ್ನಾಗಿ ಘೋಷಣೆ ಮಾಡುತ್ತಾರೆ.ʼ ಇದೊಂದು ಅಪೂರ್ವ ಮಾಹಿತಿ. ಈ ಪ್ರಬಂಧದ ಮೊದಲಿಗೆ ಇಪ್ಪತ್ತು ಬಗೆಯ ರಜೆಗಳ ಪಟ್ಟಿಯನ್ನು ಲೇಖಕಿ ನೀಡಿದ್ದಾರೆ. ಈ ಪಟ್ಟಿ ನೋಡಿದಾಗ ಅಚ್ಚರಿಯೂ ಖೇದವೂ ಒಮ್ಮೆಲೆ ಉಂಟಾಗುತ್ತದೆ.

ಈ ಪ್ರಬಂಧದಲ್ಲಿ ‘ಲಾಕ್‍ಡೌನ್’ ಶೀರ್ಷಿಕೆಯ ಪ್ರಬಂಧ ಇಲ್ಲ. ಆದರೆ, ಎರಡು ಮೂರು ಪ್ರಬಂಧಗಳು ಲಾಕ್‍ಡೌನ್ ಕುರಿತೇ ಪರೋಕ್ಷವಾಗಿ ಮಾತನಾಡುತ್ತವೆ. ನಾವು ಲಾಕ್‍ಡೌನ್ ಅವಧಿಯಲ್ಲಿ ಮೊಬೈಲ್-ವಾಟ್ಸ್ಅಪ್-ಫೇಸ್‍ಬುಕ್-ಟ್ವಿಟರ್ ಮೂಲಕ  ಆನ್‍ಲೈನ್ ಜಗತ್ತಿನ ಬೆನ್ನನ್ನು ಹತ್ತಿದೆವು. ನಮ್ಮ ಬೌದ್ಧಿಕ ಹಸಿವನ್ನು ಹಿಂಗಿಸುತ್ತಿದ್ದ ಪುಸ್ತಕಗಳನ್ನು ಮರೆತೆವು. ಅದಕ್ಕೂ ಮೊದಲು ‘ತಾಳೆಗರಿ’ಯಲ್ಲಿದ್ದ ಜ್ಞಾನಸಂಪತ್ತನ್ನು ದೂರೀಕರಿಸಿದೆವು. ಈ ವ್ಯಥೆ ಪ್ರಬಂಧಕಾರ್ತಿಯನ್ನು ಗಾಢವಾಗಿ ಕಾಡಿದೆ.

ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯ ಮೂಲಕ ಪಟ್ಟಣಗಳನ್ನು ತೊರೆದು, ಹಳ್ಳಿಯ ಕಡೆ ‘ಗುಳೇ’ಕಿತ್ತು ಹೊರಡುತ್ತಿರುವುದನ್ನು ಬಲು ಮಾರ್ಮಿಕವಾಗಿ ಲೇಖಕಿ ಪ್ರಸ್ತುತ ಪ್ರಬಂಧದಲ್ಲಿ ಕಟ್ಟಿಕೊಡುತ್ತಾರೆ. ನನಗೆ ತಿಳಿದಂತೆ ಒಂದು ಸಾಹಿತ್ಯಕೃತಿಯನ್ನು ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಿಕೊಂಡು ಬರೆಯುವ ಲಘುಧಾಟಿಯ ಮೂಲಕ; ಸಂಕೀರ್ಣಧಾಟಿಯ ಕಡೆ ನಮ್ಮನ್ನು ಕರೆದೊಯ್ಯುತ್ತಾರೆ. ಹಾಗಾಗಿ, ಪ್ರಬಂಧ ಎಂಬ ಮಾತಿನ ಅರ್ಥವ್ಯಾಪ್ತಿ ಇಂಥಲ್ಲಿ ಹಿಗ್ಗುತ್ತಾ ಹೋಗುತ್ತದೆ. ಲೇಖಕಿಯು ಬಹುವ್ಯಾಪ್ತಿಯುಳ್ಳ ಓದಿನ ವಿವಿಧ ಬಗೆಗಳೂ ಲೋಕಸಂಚಯದ ವಿವಿಧ ರಿವಾಜುಗಳೂ ಮಾಹಿತಿಲೋಕದ ನೂತನ ಸಂಗತಿಗಳೂ ಪ್ರಬಂಧಗಳೆಂಬ ಕೋಶದಲ್ಲಿ ಬಂದು ಸೇರುತ್ತವೆ. ಇದು ಈ ಸಂಕಲನದ ವಿಶೇಷವೆಂದು ಎತ್ತಿ ಹೇಳಬೇಕು!

ನಾನು ಇಲ್ಲಿಯ ಪ್ರಬಂಧಗಳನ್ನು ಸಾವಧಾನವಾಗಿ ಓದಿದ್ದೇನೆ. ಕಳೆದ ಶತಮಾನದ ಪ್ರಬಂಧಗಳಿಗೂ ಈ ಶತಮಾನದ ಪ್ರಬಂಧಗಳಿಗೂ ಹೋಲಿಸಲಾಗದ ಸಂಕೀರ್ಣ ಪ್ರಬಂಧಗಳು ಇವಾಗಿವೆ. ಸಮಾಜ-ಸಮುದಾಯ-ವ್ಯಕ್ತಿಗಳು ಕಾಲಮಾನಕ್ಕೆ ತಕ್ಕಂತೆ ಬದಲಾಗುವುದು ಉಂಟಷ್ಟೆ. ಈ ಬದಲಾವಣೆಯು ಲೇಖಕರ ಮೇಲೂ ಆಗುವುದುಂಟು. ಅಂಥ ಬದಲಾವಣೆಯ ಶಿಷ್ಟಸಂಗತಿಗಳೂ ವಿಶಿಷ್ಟ ಸಂಗತಿಗಳೂ ಲೇಖಕಿಯ ಮೇಲೆ ಆಗಿವೆ. ಇದು ಅನಿವಾರ್ಯ! ಹೀಗಾಗಿ, ಹಿಂದಿನ ಕಾಲದ ಲಲಿತ ಪ್ರಬಂಧಗಳಿಗೂ ಈ ಹೊತ್ತಿನ ಸಂಕೀರ್ಣ ಪ್ರಬಂಧಗಳಿಗೂ ಭಾಷೆ, ಧಾಟಿ, ಶೈಲಿ, ಲಯ, ವಿಷಯ, ನಿರೂಪಣೆ ಇವುಗಳಲ್ಲಿ ಬದಲಾವಣೆ ಹೆದ್ದಟ್ಟಾಗಿ ಕಾಣಿಸುವುದು ಸಹಜ! ಇದು ಇಲ್ಲಿಯ ಪ್ರಬಂಧಗಳ ಸಕಾರಾತ್ಮಕ ನೆಲೆಗಳಾಗಿವೆ.

ಶ್ರೀಮತಿ ಸುಮಾವೀಣಾ ಇವರ ಪ್ರಬಂಧಗಳನ್ನು ಓದಿ ನಾನು ಆನಂದಿಸಿದ್ದೇನೆ. ಇಲ್ಲಿಯ ಪ್ರಬಂಧದ ಆಪ್ತಭಾಷೆ ಎಂಥವರನ್ನೂ ಸೆಳೆಯುತ್ತದೆ. ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ ಈ ಸಂಕೀರ್ಣರೂಪದ ಪ್ರಬಂಧಗಳು “ಆಫ್‍ ಲೈನಿನಿಂದ ಆನ್‍ಲೈನಿಗೂ, ಆನ್‍ಲೈನಿನಿಂದ ಆಫ್‍ಲೈನಿಗೂ’’ ತೂಗಾಡುತ್ತವೆ. ಪ್ರಬಂಧ ಪ್ರಕಾರಕ್ಕೆ ಈ  ‘ಮನಸ್ಸು ಕನ್ನಡಿ’ ಕೃತಿ ವಿಶಿಷ್ಟ ಕೊಡುಗೆಯೆಂದೇ ನನ್ನ ನಂಬುಗೆ.

‍ಲೇಖಕರು Avadhi

January 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This