ಮನುಷ್ಯರನ್ನು ಹೊಗಳಿದ ಕೂಡಲೇ ಮೂರ್ತಿಗಳು ಸೃಷ್ಟಿಯಾಗುತ್ತವೆ

ಡಾ. ಎಚ್.ಎಸ್.ಅನುಪಮ ಮೇಡಂ ಅನುವಾದಿಸಿದ ಭಗತ್ ಸಿಂಗ್ ಜೈಲ್ ಡೈರಿಯ ಪುಟಗಳು

– ಹರ್ಷ ಕುಮಾರ್ ಕುಗ್ವೆ

  ಎಲ್ಲಿ ಕೆಳವರ್ಗವೊಂದಿದೆಯೋ, ನಾನದರಲ್ಲಿದ್ದೇನೆ. ಎಲ್ಲಿ ಅಪರಾಧಿ ಚೇತನವಿದೆಯೋ, ನಾನು ಅದೇ ಆಗಿದ್ದೇನೆ. ಯಾವುದೇ ಜೈಲಿನಲ್ಲೊಂದು ಆತ್ಮವಿದ್ದರೂ, ನಾನು ಸ್ವತಂತ್ರನಲ್ಲ. – ಯೂಜೀನ್.ವಿ.ಡೆಬ್ಸ್   ಯೂಜೀನ್ ವಿಕ್ಟರ್ ಡೆಬ್ಸ್(೧೮೫೫-೧೯೨೬), ಅಮೆರಿಕದ ಸೋಶಿಯಲಿಸ್ಟ್ ನಾಯಕ. ಮೊದಲ ಮಹಾಯುದ್ಧವನ್ನು ಪ್ರತಿಭಟಿಸಿ ೧೯೧೮ರಲ್ಲಿ ಭಾಷಣ ಮಾಡಿ ಬಂಧನಕ್ಕೊಳಗಾದ. ೧೦ ವರ್ಷ ಕಠಿಣ ಸಜೆ ಮತ್ತು ಜೀವಾವಧಿ ಪೌರತ್ವ ರದ್ದು ಮಾಡಲಾಯಿತು. ಈ ಮಾತುಗಳನ್ನು ಆತ ತನ್ನ ವಿಚಾರಣೆ ಸಮಯದಲ್ಲಿ ಹೇಳಿದ. ಸ್ವಾತಂತ್ರ್ಯ ಆ ತರುಣರ ಶವಗಳು, ನೇಣುಗಂಬದಲ್ಲಿ ನೇತಾಡಿದ ಹುತಾತ್ಮರು, ಉಕ್ಕಿನ ಭರ್ಚಿಯಿಂದ ಇರಿತಕ್ಕೊಳಗಾದ ಹೃದಯಗಳು ನಿಶ್ಚಲವಾಗಿ ತಣ್ಣಗಿರುವಂತೆ ತೋರಬಹುದು. ಆದರೆ ಅವು ಕೊಲ್ಲಲಾಗದ ಜೀವಚೈತನ್ಯವಾಗಿ ಎಲ್ಲೆಲ್ಲೂ ಬದುಕಿವೆ. ಬೇರೆ ತರುಣರಲ್ಲಿ ಅವರು ಬದುಕುಳಿದಿದ್ದಾರೆ, ಓ ದೊರೆಗಳೇ! ಮತ್ತೆ ನಿಮ್ಮನ್ನೆದುರಿಸಲು ಸಜ್ಜಾಗಿರುವ ಸೋದರರಾಗಿ ಬದುಕಿ ಬಂದಿದ್ದಾರೆ! ಅವರನ್ನು ಸಾವು ಶುದ್ಧಗೊಳಿಸಿದೆ – ಪಾಠ ಹೇಳಿ, ಅವರನ್ನು ಉತ್ತೀರ್ಣಗೊಳಿಸಿದೆ.! *** ಸ್ವತಂತ್ರ ಬಯಸಿ ಕೊಲೆಯಾದವರಿಗೆ ಒಂದು ಗೋರಿಯೂ ಇಲ್ಲ ಆದರೂ ಸ್ವತಂತ್ರದ ಬೀಜ ಮೊಳೆತು ಬೆಳೆದು, ತಾನು ಬೀಜ ಕಟ್ಟುವ ಸಮಯಕ್ಕಾಗಿ ಕಾಯುತ್ತದೆ. ಗಾಳಿ ಅವನ್ನು ಬಹುದೂರ ಒಯ್ದು, ಮತ್ತೆ ಬಿತ್ತಿ ಮಳೆ ಮಂಜು ಹಿಮಗಳು ಆರೈಕೆ ಮಾಡುತ್ತವೆ. ದ್ರೋಹಿ ಅಸ್ತ್ರಗಳು ದೇಹಗಳಿಂದ ಪ್ರಾಣ ಹೊರಗೆಳೆಯುವುದೇ ತಡ ಅದು ಭೂಮಿ ಮೇಲೆ ಎದೆಯುಬ್ಬಿಸಿ ಅಜೇಯವಾಗಿ ತಿರುಗುತ್ತ್ತದೆ ಪಿಸುಗುಟ್ಟುತ್ತ, ಉಪದೇಶಿಸುತ್ತ, ಎಚ್ಚರಿಸುತ್ತ.. – ವಾಲ್ಟ್ ವಿಟ್‌ಮನ್( ಲೀವ್ಸ್ ಆಫ್ ಗ್ರಾಸ್)   ಅಜಾತಶತ್ರು? ಏನೆನ್ನುವುದು ನೀನು? ಶತ್ರುಗಳಿಲ್ಲವೇ ನಿನಗೆ? ಆಹಾ! ನನ್ನ ಗೆಳೆಯನೇ, ಇದು ಅತಿ ಕೆಟ್ಟ ಬಿರುದು; ಧೈರ್ಯವಂತರಷ್ಟೇ ಸಹಿಸಬಲ್ಲ ಕರ್ತವ್ಯದ ಹೋರಾಟದಲ್ಲಿ ಯಾರು ಮುಳುಗಿರುವರೋ ಅವರು ಶತ್ರುಗಳನ್ನು ಗಳಿಸಿರಲೇಬೇಕು ನಿನಗಂಥವರಾರೂ ಇಲ್ಲವೆಂದರೆ ನೀನು ಮಾಡಿದ್ದು ಏನೂ ಅಲ್ಲವೆಂದೇ ಅರ್ಥ. ಯಾವ ದೇಶದ್ರೋಹಿಯ ಕುಂಡೆಗೂ ನೀನು ಒದೆಯಲಿಲ್ಲ, ಸುಳ್ಳಾಡುವ ತುಟಿಗಳಿಂದ ಬಟ್ಟಲು ಕಿತ್ತುಕೊಳ್ಳಲಿಲ್ಲ, ತಪ್ಪನ್ನು ಸರಿಗೊಳಿಸಲು ಎಂದೂ ಪ್ರಯತ್ನಿಸಲಿಲ್ಲ, ಯುದ್ಧದಲ್ಲಿ ಹೇಡಿಯಾಗೇ ಉಳಿದುಬಂದಿರುವೆ.. – ಚಾರ್ಲ್ಸ್ ಮೆಕೆ (ಚಾರ್ಲ್ಸ್ ಮೆಕೆ(೧೮೧೪-೧೮೮೯) ಬ್ರಿಟಿಷ್ ಕವಿ ಮತ್ತು ಪತ್ರಕರ್ತ)   ಬಿಡುಗಡೆಗೊಳಿಸಲು ಬಂದರು ಕೊನೆಗೂ ನನ್ನನ್ನು ಬಿಡುಗಡೆಗೊಳಿಸಲು ಅವರು ಬಂದರು; ಏಕೆಂದು ಕೇಳಲಿಲ್ಲ, ಎಲ್ಲಿಗೆಂದು ಗಮನ ಹರಿಸಲಿಲ್ಲ ಹಾಗೆ ನೋಡಿದರೆ ನನಗೆಲ್ಲವೂ ಒಂದೇ, ಬಂಧನದಲ್ಲಿರುವುದು, ಬಂಧನದಿಂದ ಬಿಡುಗಡೆಗೊಳ್ಳುವುದು; ನಾನು ನಿರಾಶೆಯನ್ನೇ ಪ್ರೀತಿಸಲು ಕಲಿತಿದ್ದೇನೆ. ಅದಕ್ಕೇ ಇರಬೇಕು, ಅಂತೂ ಅವರು ಬಂದು ನನ್ನ ಬೇಡಿ, ಸರಪಳಿಗಳನ್ನೆಲ್ಲ ಬಿಡಿಸಿದಾಗ ಈ ಜೈಲಿನ ದಪ್ಪ ಗೋಡೆಗಳೂ ಋಷಿಯ ಆಶ್ರಮವಾಗಿ ಬೆಳೆದಿದ್ದವು – ನನ್ನದೇ ಆಶ್ರಮವಾಗಿ. – ಲಾರ್ಡ್ ಬೈರನ್( ಪ್ರಿಸನರ್ ಆಫ್ ಷಿಲಾನ್)   ಜಿನೀವಾ ಸರೋವರದ ತಟದಲ್ಲಿರುವ ಷಿಲಾನ್ ಕೋಟೆಯಲ್ಲಿ ಬಂಧಿತನಾಗಿದ್ದ ಫ್ರಾಂಕೋಸ್ ಬೊನಿವಾರ್ಡ್(೧೪೯೬-೧೫೭೦) ನೆನಪಿಗೆ ೧೮೧೬ರಲ್ಲಿ ಬರೆದ ದೀರ್ಘ ಕವನದ ಕೆಲ ಸಾಲುಗಳು. ಕ್ರಾಂತಿಕಾರಿಯ ಉಯಿಲು ’ನನ್ನ ಗೆಳೆಯರು ನನ್ನ ಕುರಿತು ಸ್ವಲ್ಪವೇ ಮಾತಾಡಲಿ ಅಥವಾ ಏನೂ ಆಡದೇ ಇದ್ದರೂ ಒಳ್ಳೆಯದು ಎನ್ನುವುದು ನನ್ನ ಹಾರೈಕೆ, ಏಕೆಂದರೆ ಮನುಷ್ಯರನ್ನು ಹೊಗಳಿದ ಕೂಡಲೇ ಮೂರ್ತಿಗಳು ಸೃಷ್ಟಿಯಾಗುತ್ತವೆ ಹಾಗೂ ಮಾನವಕುಲದ ಭವಿಷ್ಯದ ದೃಷ್ಟಿಯಿಂದ ಇದು ತುಂಬ ಕೆಟ್ಟದ್ದು. .. .. ಯಾರೇ ಮಾಡಿದ್ದಾದರೂ ಆಗಿರಲಿ, ಹೊಗಳಿಕೆ ತೆಗಳಿಕೆ ಯಾವುದನ್ನೇ ಪಡೆದುಕೊಂಡಿರಲಿ, ಕಾರ್ಯಗಳನ್ನು – ಕಾರ್ಯಗಳನ್ನು ಮಾತ್ರವೇ – ಪರಿಶೀಲಿಸಬೇಕು. ಯಾವುದೇ ಕಾರ್ಯವನ್ನು ಹೊಗಳಬಹುದು, ಸಮಷ್ಟಿಯ ಹಿತಕ್ಕಾಗಿ ಅವಶ್ಯವೆನಿಸಿದಾಗ ಮತ್ತೆ ಅವುಗಳಲ್ಲಿ ತೊಡಗಿಕೊಳ್ಳಲಾದೀತು; ಅಥವಾ ತೆಗಳಿ ನಿಷೇಧಿಸಬಹುದು, ಸಮಾಜದ ಆರೋಗ್ಯಕ್ಕೆ ಅಪಾಯಕಾರಿಯೆನಿಸಿದಲ್ಲಿ ಪುನರಾವರ್ತನೆಯಾಗುವುದಾದರೂ ತಪ್ಪೀತು. ನನ್ನ ಆಸೆಯಿದು: ಯಾವುದೇ ಸಂದರ್ಭದಲ್ಲೂ, ಈಗಲೋ ಅಥವಾ ಕಾಲಾನಂತರದಲ್ಲೋ, ಯಾವುದೇ ಕಾರಣಕ್ಕಾದರೂ ಸರಿಯೆ, ನನ್ನ ಮೃತ ಅವಶೇಷದೆದುರು ಯಾವುದೇ ರಾಜಕೀಯ ಅಥವಾ ಧಾರ್ಮಿಕ ಆಚರಣೆಗಳು ನಡೆಯಕೂಡದು. ನನ್ನ ಪ್ರಕಾರ ಮೃತರ ಸಲುವಾಗಿ ವ್ಯರ್ಥವಾಗಿ ಸಮಯ ಕಳೆಯುವುದಕ್ಕಿಂತ ಬದುಕುಳಿದವರ ಅವಶ್ಯಕತೆಯ ಸಲುವಾಗಿನ ಹೋರಾಟಕ್ಕೆ ಅದೇ ಸಮಯವನ್ನು ವ್ಯಯಿಸಬೇಕು. ಏಕೆಂದರೆ ಅವರಿಗೇ ಆ ಸಮಯದ ಅತಿ ಹೆಚ್ಚು ಅವಶ್ಯಕತೆಯಿದೆ.’ – ಫ್ರಾನ್ಸಿಸ್ಕೋ ಫೆರರ್ ಬರೆದಿಟ್ಟ ಉಯಿಲು. (ಫ್ರಾನ್ಸಿಸ್ಕೋ ಫೆರರ್ ಇ ಗಾರ್ಡಿಯಾ(೧೮೫೯-೧೯೦೯), ಅರಾಜಕತಾವಾದಿ, ಶಿಕ್ಷಣತಜ್ಞ, ಮುಕ್ತ ಚಿಂತನೆಗಳ ವಿಚಾರವಾದಿ. ಅವನನ್ನು ಬಂಧಿಸಿ, ಆರೋಪ ಹೊರಿಸಿ, ಯಾವ ಸಾಕ್ಷಿಯಿಲ್ಲದಿದ್ದರೂ ಮರಣದಂಡನೆ ವಿಧಿಸಲಾಯಿತು. ಬಾರ್ಸಿಲೋನಾ ದಂಗೆಯ ನಂತರ ಪುರೋಹಿತಶಾಹಿ ಶತ್ರುಗಳ ಒಳಸಂಚಿಗೆ ಬಲಿಯಾದ. ವ್ಯಾಪಕವಾಗಿ ಅವನ ಸಾವನ್ನು ‘ನ್ಯಾಯಾಂಗದಿಂದ ಕೊಲೆ ಎಂದೇ ಪರಿಗಣಿಸಿ ಪ್ರತಿಭಟನೆಗಳು ನಡೆದವು.) *** ‘ದಾನ ಎನ್ನುವುದು ಇಬ್ಬಗೆಯ ಶಾಪ. ಅದು ಕೊಡುವವನನ್ನು ಕಠೋರನನ್ನಾಗಿಯೂ, ಪಡೆದುಕೊಳ್ಳುವವನನ್ನು ಮೃದುವಾಗಿಯೂ ಪರಿವರ್ತಿಸುತ್ತದೆ. ಬಡವನಿಗೆ ಶೋಷಣೆಗಿಂತ ದಾನವೇ ಹೆಚ್ಚು ಅಪಾಯಕಾರಿ. ಏಕೆಂದರೆ ಅದು ಅವನನ್ನು ಶೋಷಿತನಾಗಲು ಸಿದ್ಧಗೊಳಿಸುತ್ತದೆ. ದಾನ ಗುಲಾಮತನವನ್ನು ಬೆಳೆಸುತ್ತದೆ ಮತ್ತು ಅದು ನೈತಿಕ ಆತ್ಮಹತ್ಯೆಯಲ್ಲದೆ ಬೇರೇನಲ್ಲ. ಸಿರಿವಂತರ ತುಂಬಿದ ಥೈಲಿಗಳಿಗೆ ಜೀಸಸ್ ಒಂದೇ ಅವಕಾಶ ನೀಡಿದ್ದಾನೆ ಅದೆಂದರೆ ಅವರದನ್ನು ಕ್ರಾಂತಿಕಾರಿ ವಿಚಾರಗಳ ಪ್ರಚಾರ ಕಾರ್ಯಕ್ಕೆ ಬಳಸಬಹುದು, ಆಗ ಅವು ಅಸಾಧ್ಯವಾದುದನ್ನೇ ನಿರಂತರವಾಗಿ ಮಾಡುತ್ತ ಹೋಗುತ್ತವೆ…’ – ಬಕ್ ವೈಟ್, (ಬಕ್ ವೈಟ್ (೧೮೭೪-೧೯೫೧), ಅಮೆರಿಕದ ಸೋಶಿಯಲಿಸ್ಟ್, ಬರಹಗಾರ ಪಾದ್ರಿ. *** ‘ದುಃಖದ ಘಳಿಗೆಗಳನ್ನೂ ಸುಖದ ಕ್ಷಣವೆಂಬಂತೆ ಕಳೆಯಬಲ್ಲ ಗಟ್ಟಿ ಮನಸಿನ ಹೃದಯ ಕೊಡು ಓ ದೇವರೇ, ಆಸೆಗಳ ಶವವಾಹನ ಸೋಲಿನ ಹೂಗಳಿಂದ ಅಲಂಕರಿಸಲ್ಪಟ್ಟಿದೆ ದುಃಖಿ ನನ್ನ ಜೊತೆಗಾರ ಗೆಳೆಯ ಅದನೇ ಒಡೆದ ನನ್ನೆದೆಯಲ್ಲಿಟ್ಟಿದ್ದಾನೆ! ಪ್ರೀತಿಪಾತ್ರರ ಶೋಕದ ಕತೆಯೊಂದಿಗೆ ಮಾತು ಶುರುಮಾಡಬೇಡ ಮರೆತ ಕ್ಷಣಗಳನ್ನೆಲ್ಲ ಮತ್ತೇಕೆ ನೆನಪಿಸಬೇಕು ಓ ದೇವತೆಯೇ? ‘ – ಭಗತ್ ಸಿಂಗ್]]>

‍ಲೇಖಕರು G

June 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This