ಮನೆಕೆಲಸದವರಿಗೆ ವಂದನೆ

-ಎಂ ಎಸ್ ಪ್ರಭಾಕರ್

(ಕಾಮರೂಪಿ)

ಸನ್ ಸಾವಿರದೊಂಭೈನೂರರವತ್ನಾಲ್ಕನೇ ಇಸವಿಯಲ್ಲಿ ನಾನು ಮೊದಲಬಾರಿಗೆ ಮನೆಕೆಲಸಕ್ಕೆ ಸಹಾಯಕರನ್ನೊಬ್ಬರನ್ನು ಇಟ್ಟುಕೊಂಡಿದ್ದು. ಅದಕ್ಕೆ ಮುಂಚೆ ಮನೆಯ ಕೆಲಸಗಳನ್ನೆಲ್ಲಾ, ಅಂದರೆ ಕಸಗುಡಿಸುವುದು, ನೆಲ ಸಾರಿಸುವುದು, ಬಟ್ಟೆ ಒಗೆಯುವುದು, ಅಡುಗೆ, ಇತ್ಯಾದಿ ಎಲ್ಲಾ, ನಾನು ಮತ್ತು ನನ್ನ ಅಮ್ಮ, ಮತ್ತು ಕರ್ನಾಟಕ ಬಿಟ್ಟನಂತರ ನಾನೇ ಮಾಡುತ್ತಿದ್ದೆ. ಈ ಕಳೆದ ನಲವತ್ತೈದು ವರುಷಗಳಲ್ಲಿ (೧೯೬೪-೨೦೦೯) ನಾಲ್ಕು ಮಂದಿ ಮನೆಕೆಲಸದವರು ನನಗೆ ಸಹಾಯ ಮಾಡಿದ್ದಾರೆ. ಇಬ್ಬರು (ಗಂಡಸರು) ತುಂಟತನ ಮಾಡಿ ಕೆಲಸ ಬಿಟ್ಟರು.

ಮತ್ತಿಬ್ಬರು (ಹೆಂಗಸರು) ಯಾವುದೇ ರೀತಿಯ ರೀತಿ ಸಮಸ್ಯೆ ಸೃಷ್ಟಿ ಮಾಡದೆ ಸಹಾಯಮಾಡಿದ್ದಾರೆ. ಅವರಲ್ಲೊಬ್ಬರು ಈಗಲೂ ನನ್ನ ಗುವಾಹತಿಯ ಚಾತುರ್ಮಾಸದಲ್ಲಿ ಸಹಾಯ ಮಾಡುತ್ತಾರೆ. ಕಳೆದ ಕೆಲವು ದಿನಗಳಿಂದ ಐದನೆಯವರೊಬ್ಬರು (ಹೆಂಗಸು) ನನ್ನ ಕೊನೆಯ ವಾಸಸ್ಥಾನವಾದ ಕೋಲಾರದಲ್ಲಿನ ಅಪ್ಪ ಕಟ್ಟಿದ ಮನೆಯಲ್ಲಿ ಕೆಲಸಮಾಡಲು ಶುರು ಮಾಡಿದ್ದಾರೆ.

ಇವರೆಲ್ಲರಿಗೂ, ತುಂಟತನ ತರಳೆ ಮಾಡಿ ಕೆಲವಾರು ಸಮಸ್ಯೆಗಳನ್ನು ಉಂಟುಮಾಡಿದವರಿಗೂ, ಈ ಬರವಣಿಗೆ ವಂದನೆಗಳನ್ನು ಹೇಳುವ ಪ್ರಯತ್ನ.

682095137_11d7fcb578

ಸನ್ ಸಾವಿರದೊಂಭೈನೂರೈವತ್ತೇಳನೇ ಇಸವಿಯಲ್ಲಿ ಬೆಂಗಳೂರಿನ ಡಿಕ್ಟೇಷನ್ ಕಾರಖಾನೆಯೊಂದರಲ್ಲಿ ಪಾಠ ಮಾಡಲು ಕೆಲಸಕ್ಕೆ ಸೇರಿಕೊಂಡಾಗ ನನ್ನ ತಿಂಗಳ ಸಂಬಳ ಶುರುವಿನಲ್ಲಿ ಒಂದು ನೂರು ರೂಪಾಯಿ; ಒಂದು ವರುಷವಾದನಂತರ ಇನ್ನೂರು ರೂಪಾಯಿ. ನನ್ನ ವಿಧವೆ ಅಮ್ಮ ಮತ್ತು ನಾನು, ನಮ್ಮಿಬ್ಬರದೇ ಪುಟ್ಟ ಸಂಸಾರ, ಪುಟ್ಟ ಬಾಡಿಗೆ ಮನೆಯಲ್ಲಿ. ಬೆಂಗಳೂರಿನಲ್ಲಿದ್ದಾಗ ಅಕ್ಕನೊಬ್ಬಳು ಆ ಸಣ್ಣಮನೆಯಲ್ಲೇ ಆಸ್ಪತ್ರೆಯಲ್ಲಿನ ಹೆರಿಗೆ ಮತ್ತು ಮನೆಯಲ್ಲಿನ ಬಾಣಂತನದ ಕಾರ್ಯಕಲಾಪಗಳನ್ನು ತೀರಿಸಿಕೊಂಡಳು. ಅದಲ್ಲದೆ ಆಗಿಂದಾಗ ಇತರ ಅಕ್ಕಂದಿರು, ಸಂಬಂಧಿಗಳು ಬಂದು ಹೋಗುತ್ತಿದ್ದರು. ಅಂದಿನ ದಿನಗಳ ಸಂಬಳದಲ್ಲಿ ಮನೆಗೆಲಸಕ್ಕೆ ಚಾಕರರನ್ನು ಇಟ್ಟುಕೊಳ್ಳುವ ಆರ್ಥಿಕ ಕ್ಷಮತೆ ಸುತರಾಂ ಇರಲಿಲ್ಲ. ಅಮ್ಮ ಮತ್ತು ನಾನು ಮನೆಯ ಮಾಲಿಕರು ಮತ್ತು ಚಾಕರರೂ ಸಹ. ಎರಡು ವರುಷಗಳನಂತರ ಧಾರವಾಡಕ್ಕೆ ಪಲಾಯನ ಮಾಡಿದಾಗಲೂ ಇದೇ ಕತೆ.

ಸನ್ ಸಾವಿರದರವತ್ತೆರಡನೇ ಇಸವಿ ಜನವರಿಯ ಕೊನೆಯ ದಿನಗಳಲ್ಲಿ ಧಾರವಾಡ ಬಿಟ್ಟು ಗುವಾಹತಿ ಯೂನಿವರ್ಸಿಟಿ ಸೇರಿಕೊಂಡಾಗ ನನ್ನ ಒಬ್ಬಂಟಿಗ ಗುಂಡುಗೋವಿ ಜೀವನ ಆರಂಭವಾಯಿತು. ಮೊದಲದಿನಗಳಲ್ಲಿ ಪೇಯಿಂಗ್ ಗೆಸ್ಟ್. ನಂತರ ಸ್ವಯಂಪಾಕ. ಈ ರೀತಿ ಎರಡು ವರುಷಗಳು ಕಳೆದನಂತರ ಸನ್ ಸಾವಿರದೊಭೈನೂರರವತ್ನಾಲ್ಕನೇ ಇಸವಿಯ ಮಧ್ಯಭಾಗದಲ್ಲಿ ನಾನು ಮತ್ತು ನನ್ನಂತೆ ಇಬ್ಬರು ಗುಂಡುಗೋವಿ ಗೆಳೆಯ ಸಹಕರ್ಮಿಗಳು ಯೂನಿವರ್ಸಿಟಿಯ ಕ್ವಾರ್ಟರ್ಸ್ ಒಂದರಲ್ಲಿ ಒಟ್ಟಿಗೆ ವಾಸಿಸಲು ಆರಂಭಿಸಿದಿವಿ. ಆಗ ಮೊದಲನೆಯ ಬಾರಿ ಒಬ್ಬ fulltime ಮನೆಗೆಲಸದವನು ನಮಗೆ ಊಟ ತಿಂಡಿ ಕೊಡುತ್ತಿದ್ದ. ಆ ನೇಪಾಳಿ ಹುಡುಗನ ಬಹಾದ್ದೂರೀ ಸಾಹಸೀ ಜೀವನದ ಬಗ್ಗೆ ಇದೇ ಬ್ಲಾಗಿನಲ್ಲಿ ಬರೆದಿದ್ದೇನೆ. ಆದಕಾರಣ ಹೆಚ್ಚು ಹೇಳಬೇಕಾಗಿಲ್ಲ.

ಸನ್ ಸಾವಿರದೊಂಭೈನೂರರವತ್ತೈದು-ಅರವತ್ತಾರನೇ ಇಸವಿಗಳಲ್ಲಿ ನಾನು ವಿದೇಶದಲ್ಲಿದ್ದೆ. ಅಲ್ಲಿಂದ ವಾಪಸಾದಾಗ ನನ್ನ ಮನೆಭಾಗಿಗಳಿಬ್ಬರೂ ಬೇರೆ ಕಡೆ ಕೆಲಸ ಸಂಪಾದಿಸಿಕೊಂಡು ಗುವಾಹತಿ ಬಿಟ್ಟು ಹೋಗಿದ್ದರು. ವಾಪಸಾದ ಒಂದು ವರುಷದನಂತರ ಮೊದಲಬಾರಿಗೆ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ನಾನೊಬ್ಬನೇ ವಾಸವಿರಲು ಒಂದು ಕ್ವಾರ್ಟರ್ಸ್ ಮಂಜೂರಾಯಿತು. ಆವರೆಗೆ ತಕ್ಕಮಟ್ಟಿಗೆ ಪುಸ್ತಕಗಳು ಮತ್ತು ಇತರ ಸಾಮಾನು ಸರಂಜಾಮುಗಳನ್ನು ಜಮಾಯಿಸಿಕೊಂಡಿದ್ದೆ. ಮನೆಯನ್ನು ಚೊಕ್ಕವಾಗಿಡಲು ಮತ್ತು ನನಗೆ ಊಟ ಹಾಕಲು ಒಬ್ಬ ಸಹಾಯಕನ ಅಗತ್ಯ ಅನಿವಾರ್ಯವಾದ ಕಾರಣ ಮೊದಲಬಾರಿಗೆ ಸಹಾಯಮಾಡಲು ಚಾಕರನೊಬ್ಬನನ್ನು ಮನೆಗೆ ಸೇರಿಸಿದೊಂಡೆ. ಅವನ ಹೆಸರು ನೂರುದ್ದೀನ್. ವಯಸ್ಸು ಇಪ್ಪತ್ತೆರಡರ ಸುಮಾರು. ಅಸಾಮಿಯಾ ಭಾಷಿ. ಅಡುಗೆಊಟ ಮಾತ್ರವಲ್ಲ, ನಾನು ಅಂದಿನ ದಿನಗಳಲ್ಲಿ ಕಲಿತಿದ್ದ ಚೂರುಪಾರು ಅಸಾಮಿಯಾ ಭಾಷೆಯನ್ನು ಇನ್ನಷ್ಟು ಸ್ವಛ್ಹವಾಗಿ ಕಲಿಯುವುದರಲ್ಲೂ ಅವನಿಂದ ಸಹಾಯ ದೊರಕಿತು.

ನೂರುದ್ದೀನ್ ಬಹಳ ಬಡತನದಲ್ಲಿ ಬೆಳೆದವನು. ಅವನ ತಂದೆಯೇ ಅವನನ್ನು ನನ್ನ ಮನೆಯಲ್ಲಿ ಬಿಟ್ಟು ಹೋಗಿದ್ದರು. ಅವನಮೇಲೆ ಕೆಲಸದ ಒತ್ತಡ ಏನೂ ಹೇರಲಿಲ್ಲ. ಬೆಳೆಗಿನ ಚಹ ಎಂದಿನಂತೆ ನಾನೇ ಮಾಡಿಕೊಳ್ಳುತ್ತಿದ್ದೆ. ಅವನ ಕೆಲಸ ಮೂರುಹೊತ್ತು ಊಟ ಹಾಕುವುದು: ಬೆಳಿಗ್ಗೆ ತಿಂಡಿ, ಮಧ್ಯಾನ್ಹ ಮತ್ತು ಸಂಜೆ ಊಟ. ಯಾರಾದರೂ ಗೆಳೆಯರು ಅಥವಾ ವಿದ್ಯಾರ್ಥಿಗಳು ಬಂದರೆ ಚಹ ಮಾಡುವುದು. ಮನೆಯ ಸಾಮಾನುಗಳನ್ನು ನಾನೇ ತರುತ್ತಿದ್ದೆ. ಅವನು ಬೇಸಾಯ ಮಾಡುವ ಪರಿವಾರದವನಾಗಿದ್ದರಿಂದ ಮನೆಯ ಹಿತ್ತಲಿನಲ್ಲಿ ತರಕಾರಿ ಬೆಳೆಸುವ ಹವ್ಯಾಸ ಹಚ್ಚಿಕೊಂಡಿದ್ದ. ಆ ಹಿಂಭಾಗದಲ್ಲೇ ಅವನ ವಾಸ ಸಹ. ಅವನ ಆಧಿಪತ್ಯ ಅಡುಗೆಮನೆ, ಅದಕ್ಕೆ ಸೇರಿದಂತೆ ಇದ್ದ ಪ್ಯಾಂಟ್ರಿ, ಮಲಗುವ ಕೋಣೆ ಮತ್ತು ಟಾಯಿಲೆಟ್ ಸೇರಿಕೊಂಡಂತೆ ಬಚ್ಚಲುಮನೆ. ಸಂಬಳ ಎಂದಿನಂತೆ ಕ್ಯಾಂಪಸ್ ನ ಮಿಕ್ಕ ಮನೆಗೆಲಸಗಾರರು ಪಡೆಯುವುದರ ಎರಡರಷ್ಟು.

ಸುಮಾರು ಮೂರು ವರುಷಗಳೆಗೂ ಮೀರಿ ಏನೂ ಸಮಸ್ಯೆಇಲ್ಲದೆ ಕೆಲಸ ಮಾಡಿದ. ಆದರೆ ಅದೇನು ಕಾರಣವೋ ನನಗೆ ಈಗಲೂ ಅರ್ಥವಾಗುತ್ತಿಲ್ಲ, ಈ ಸಂಬಂಧ ಮುರಿಯಿತು. ಒಂದು ಮಧ್ಯಾನ್ಹ ಊಟದ ಸಮಯಕ್ಕೆ ಮನೆಗೆ ವಾಪಸಾದಾಗ ಕಾಂಪೌಂಡಿನ ಗೇಟು ಮತ್ತು ಮನೆಯ ಮುಂಬಾಗಿಲುಗಳು ತೆರೆದಿದ್ದುವು. ಮನೆ ಲೂಟಿಯಾಗಿತ್ತು. ನೂರುದ್ದೀನ್ ಪತ್ತೆ ಇಲ್ಲ. ಕೆಲವು ದಿನಗಳಂತರ ಅವನೇ ವಾಪಸಾಗಿ ಕೊಟ್ಟ ವಿವರಣೆಯ ಪ್ರಕಾರ ನಾನು ಕ್ಲಾಸು ತೆಗೆದುಕೊಳ್ಳಲು ಮನೆಬಿಟ್ಟನಂತರ ಅವನೂ ಹೊರಗೆ ಹೋಗಿದ್ದನಂತೆ. ಹನ್ನೊಂದರ ಸುಮಾರಿಗೆ ವಾಪಸಾದಾಗ ಗೇಟು ಮತ್ತು ಮನೆಬಾರಿಲು ತೆರೆದಿದ್ದು ನೋಡಿ ಭಯಗಾಬರಿಪಟ್ಟು ನೆಟ್ಟಗೆ ಅವನ ಹಳ್ಳಿಗೆ ಹೊರಟುಹೋದನಂತೆ. ನಂಬುವ ವಿವರಣೆಯೇ ಕಟ್ಟುಕತೆಯೇ ನನಗೆ ಗೊತ್ತಾಗಲಿಲ್ಲ. ಸರಿ, ಆದದ್ದಾಯಿತು, ನೀನು ನಿನ್ನ ಕೆಲಸ ಮಾಡಿಕೊಂಡು ಇನ್ನು ಮುಂದೆ ಹುಷಾರಾಗಿರು ಅಂದರೂ ಅವನು ಇಲ್ಲ, ನಾನು ನನ್ನ ಹಳ್ಳಿಗೆ ವಾಪಸಾಗ್ತೇನೆ ಅಂತ ಮನೆಗೆಲಸ ಬಿಟ್ಟ.

ತದನಂತರ ಸುಮಾರು ಇಪ್ಪತ್ತೈದು ವರುಷ ಮನೆಕೆಲಸಕ್ಕೆ ನಾನು ಯಾವರೀತಿಯ ಸಹಾಯಕರನ್ನೂ ತೆಗೆದುಕೊಳ್ಳಲಿಲ್ಲ, ಇದಕ್ಕೆ ಕಾರಣಗಳು ಅನೇಕ. ಬಹಾದ್ದೂರ್ ಮತ್ತು ನೂರುದ್ದೀನ್ ಇವರ ಪರಿಚಯ ಮತ್ತು ಅನುಭವ ಆದನಂತರ ಮತ್ತೆ ಗಣಪ್ಪನ ಮೂರ್ತಿಯ ಹೊಕ್ಕುಳಲ್ಲಿ ಬೆರಳಿಡುವ ಸಾಹಸ ಇರಲಿಲ್ಲ. ಮುಂಬೈನ ಎಂಟು ವರುಷಗಳಲ್ಲಿ ನಿದ್ದೆ ಮತ್ತು ಬೆಳಗಿನ ಕಾರ್ಯಕಲಾಪಗಳಾದನಂತರ ಮಿಕ್ಕ ದಿನವೆಲ್ಲಾ ಆಫೀಸಿನಲ್ಲಿ. ಊಟತಿಂಡಿಗಳೆಲ್ಲಾ ಹೊರಗೆ. ಸನ್ ಸಾವಿರದೊಂಭೈನೂರೆಂಭತ್ಮೂರರ ಮಧ್ಯಭಾಗದಲ್ಲಿ ಗುವಾಹತಿಗೆ ವಾಪಸಾದಾಗಲೂ ಇದೇ ನಿಯಮ ಮುಂದುವರಿಸಿಕೊಂಡು ಬಂದೆ. ತಿಂಗಳಿನಲ್ಲಿ ಹೆಚ್ಚು ಕಮ್ಮಿ ಹದಿನೈದುದಿನ ಈಶಾನ್ಯಭಾರತದ ದಿಕ್ಕುಮೂಲೆಗಳಲ್ಲಿ ಓಡಾಡುತ್ತಿದ್ದವನಿಗೆ ಮನೆಗೆಲಸಕ್ಕೆ ಒಬ್ಬರನ್ನು ನೇಮಕಾತಿ ಮಾಡುವುದರಲ್ಲಿ ಅರ್ಥವಿರಲಿಲ್ಲ. ತಾರುಣ್ಯದಲ್ಲಿ ಹೇಗೋ ಮಧ್ಯವಯಸ್ಸಿನಲ್ಲೂ ಹಾಗೇ ನಿಭಾಯಿಸಿಕೊಂಡೆ.

ಸನ್ ಸಾವಿರದೊಂಭೈನೂರತೊಂಭತ್ನಾಲ್ಕನೇ ಇಸವಿಯ ಮಧ್ಯಭಾಗದಲ್ಲಿ ದಕ್ಷಿಣ ಆಫ್ರಿಕದ ಜೊಹಾನೆಸ್ಬರ್ಗ್ ಶಹರಿಗೆ ಹೋದಾಗಲೂ ಇದೇ ನಿಯಮ ಪಾಲಿಸಿಕೊಂಡಿದ್ದೆ. ಅಲ್ಲಿ ಒಂದು ವರುಷ ಕಳೆದು ನನ್ನ ವಾಸ ಕೇಪ್ ಟೌನ್ ಗೆ ಬದಲಾಯಿಸಿದಾಗ ಮತ್ತೆ ಮನೆಕೆಲಸದವವರೊಬ್ಬರನ್ನು ನೇಮಿಸಿಕೊಳ್ಳಬೇಕಾಯಿತು. ಸುಮಾರು ಐವತ್ತು ವರುಷದ ಆ ಮಹಿಳೆಯ ಹೆಸರು ಕ್ರಿಸ್ಟೀನ್. ಆಕೆ ನಾನು ಬಾಡಿಗೆಮಾಡಿಕೊಂಡಿದ್ದ ಮನೆಯ ಮಾಲೀಕರ ಮನೆಯಲ್ಲಿ ಕೆಲಸಮಾಡುತ್ತಿದ್ದ್ದಳು. ಮನೆಯಾಕಿಯ ಸಲಹೆಯ ಪ್ರಕಾರ ಕ್ರಿಸ್ಟೀನ್ ನನ್ನ ಮನೆಯ ಕೆಲಸವನ್ನೂ ಮಾಡುತ್ತಿದ್ದಳು. ವಾರಕ್ಕೆ ಒಂದು ದಿನ ಮಾತ್ರ. ಪ್ರತಿ ಶನಿವಾರ ಬೆಳಿಗ್ಗೆ ಒಂಭತ್ತರ ಸುಮಾರಿಗೆ ಬಂದು ಹೆಚ್ಚು ಕಮ್ಮಿ ಎರಡು ಎರದೂವರೆ ಘಂಟೆ ಮನೆಯೆಲ್ಲಾ ಓರಣವಾಗಿ ಸಫಾ ಮಾಡುತ್ತಿದ್ದಳು. ಮನೆಗೆ ಬಂದವಳೇ Get out, Prab, ಅಂತ ಆರ್ಡರ್ ಮಾಡಿ ನನ್ನನ್ನು ಹೊರಗೆ ಹಾಕುತ್ತಿದ್ದಳು. ಹತ್ತಿರದ ಕೆಫೆಯೊಂದರಲ್ಲಿ ನಾನು ಪುಸ್ತಕವೋ ನ್ಯೂಸ್ ಪೇಪರೋ ಓದುತ್ತಾ ಬೆಳಗಿನ ತಿಂಡಿ ಚಹ ಮುಗಿಸುತ್ತಿದ್ದೆ. ಕೆಲಸ ಮುಗಿಸಿದನಂತರ ಮನೆಗೆ ಬೀಗ ಹಾಕಿ ನಾನು ಕಾದಿದ್ದ ಕೆಫೆಗೆ ಬಂದು, ’Okay Prab, here are your keys. Now, please, may I have a cup of tea? ಅಂದಾಗ ಅವಳಿಗೆ ತಿಂಡಿ ಚಹ ಆರ್ಡರ್ ಮಾಡಿ ನಾನೂ ಮತ್ತೊಂದು ಕಪ್ ಚಹ ಕುಡಿದು ಅವಳು ಅವಳ ದಾರಿ ಹಿಡಿದಮೇಲೆ ಮನೆಗೆ ವಾಪಸಾದಾಗ ಮನೆ ಚೊಕ್ಕಟ್ಟಿಗಿಂತಾ ಚೊಕ್ಕಟ್ಟು.

ಕ್ರಿಸ್ಟೀನ್ ಅತಿ ಕಷ್ಟ ಮತ್ತು ಬಡತನದಲ್ಲಿ ಬೆಳೆದ ಮಿಶ್ರಿತವರ್ಣದ ಸಮುದಾಯದ ಹೆಣ್ಣು. ದಕ್ಷಿಣ ಆಫ್ರಿಕದ ಅಶ್ವೇತ ಜನರನ್ನು ಸಾಧಾರಣವಾಗಿ ಮೂರು ಗುಂಪುಗಳಲ್ಲಿ ವಿಂಗಡಿಸುತ್ತಾರೆ. ಎಲ್ಲರಿಗಿಂತ ಬಹುಸಂಖ್ಯಾತ ಆಫ್ರಿಕನ್ ಕರಿಯರು, ಮಿಶ್ರಿತ ವರ್ಣದವರು ಮತ್ತು ಭಾರತದಿಂದ ವಲಸೆ ಹೋಗಿ ಅಲ್ಲಿನೆಲೆಸಿದ್ದ ಜನರ ಈಗಿನ ಪೀಳಿಗೆಯವರು. ಇವರೆಲ್ಲರಮೇಲೆ ದಬ್ಬಾಳಿಕೆಯ ಆಧಿಪತ್ಯ ಬಿಳಿಯ ಅಲ್ಪಸಂಖ್ಯಾತರು ನಡೆಸುತ್ತಿದ್ದರು. ಆದರೂ ಅಫ್ರಿಕನ್ ಕರಿಯರಲ್ಲಿ ಮತ್ತು ಹಿಂದುಸ್ತಾನೀ ವಲೆಸಗಾರರ ಪೀಳಿಗೆಯವರಲ್ಲಿ ತಾವು ಯಾರು, ತಮ್ಮ ಅಸ್ಥಿತ್ವ ಮತ್ತು ಸ್ವಪರಿಚಯದ ಬಗ್ಗೆ ಏನೇನೂ ಅನುಮಾನಗಳು, ಎಡಬಿಡಂಗಿತನದ ಭಾವನೆಗಳು ಎಂದೂ ಇರಲಿಲ್ಲ. ಏಕೆಂದರೆ ಆಫ್ರಿಕನ್ ಕರಿಯರು ಎಷ್ಟಾದರು ಅಲ್ಲಿನವರು; ಅವರ ಭೂಮಿಯನ್ನು ಬಿಳಿ ವಲಸೆಗಾರರು ಕದ್ದಮೇಲೂ ತಾವು ಭೂಮಿಪುತ್ರರರು ಅನ್ನುವ ಆತ್ಮವಿಶ್ವಾಸವನ್ನು ಅವರು ಕಳಚಿಕೊಳ್ಳಲಿಲ್ಲ. ಭಾರತೀಯ ವಲಸೆಗಾರರ ಪೀಳಿಗೆಯವರು, ಹೆಚ್ಚು ಭಾಗ ಕೂಲಿಗಾರ ಗುಲಾಮರಂತೆ ಭಾರತದಿಂಸ ಪಯಣಿಸಿದ್ದರೂ, ತಾವು ಈಗಲೂ ಭಾರತಮಾತೆಯ ಪುತ್ರರು ಅನ್ನುವ ಭ್ರಮೆ ತಕ್ಕಮಟ್ಟಿಗೆ ಸ್ವಾಭಿಮಾನ ಕೊಟ್ತಿತ್ತು. ಆದರೆ ಮಿಶ್ರಿತ ವರ್ಣೀಯರು? ಅವರ ಪೂರ್ವ ಮತ್ತು ವರ್ತಮಾನ ಪರಿಸ್ಥಿತಿ ಮಿಕ್ಕೆಲ್ಲ ಕರಿಯರಿಗಿಂತಲೂ ಶೋಚನೀಯ. ತಮ್ಮ ಬಗ್ಗೆ ತಮಗೇ ಮಿಕ್ಕೆಲ್ಲರೆಗಿಂತ ಮೀರಿ ಹೇಸಿಗೆ, ಇಂಗ್ಲಿಷ್ ನಲ್ಲಿ ಹೇಳಬೇಕೆಂದರೆ, ಅವರು real dregs of Soutrh African society, the detritus of the apartheid system.

ಕ್ರಿಸ್ಟೀನ್ ಇಂತಹ ಸಂಪ್ರದಾಯದಲ್ಲಿ ಬೆಳೆದವಳು. ಸ್ವಾಭಾವಿಕವಾಗಿಯೇ ಅವಳ ವ್ಯಕ್ತಿಗತ ಸಂಸಾರ ಜೀವನವೂ dysfunctional. ಎರಡು ಬಾರಿ ಮದುವೆ ಮಾಡಿಕೊಂಡಿದ್ದಳು; ಎರಡೂ ಬಾರಿ ತಾನೇ ಆ ಗಂಡಂದಿರನ್ನು ಬಿಟ್ಟು ತನ್ನ ಸ್ವಂತ ಜೀವನ ಮಾಡಿಕೊಂಡಿದ್ದಳು. ಇದ್ದ ಒಬ್ಬ ಮಗ ಕುಡುಕ ಮಾತ್ರವಲ್ಲ, ಮಾದಕ ದ್ರವ್ಯಗಳ ಚಟವನ್ನೂ ಹಚ್ಚಿಕೊಂಡಿದ್ದ. ಸೊಸೆ ತನ್ನ ಗಂಡನನ್ನು ಬಿಟ್ಟು ಬೇರೊಬ್ಬನೊಡನೆ ಮದುವೆಯಾಗದೆ ಮನೆಮಾಡಿಕೊಂಡಿದ್ದಳು. ಕ್ರಿಸ್ಟೀನ್ ಗೆ ಆವಳ ಮಗನಿಗಿಂತಾ ಸೊಸೆಯಮೇಲೇ ಪ್ರೀತಿ ಹೆಚ್ಚು. ಇದಕ್ಕೂ ಮೀರಿ ಅವಳ ಆರೇಳು ವರುಷ ವಯಸ್ಸಿನ ಮೊಮ್ಮಗಳನ್ನು ಕಂಡರೆ ಅವಳಿಗೆ ಪ್ರಾಣ. ಒಮ್ಮೊಮ್ಮೆ ಆ ಮಗುವನ್ನು ಕರೆದುಕೊಂಡು ಕೆಲಸಕ್ಕೆ ಬರುತ್ತಿದ್ದಳು. ಆಗ ನಾನು ಮನೆಯಾಚೆ ಹೋಗದೇ ಆ ಮಗುವಿನ ಜೊತೆ ಹರಟೆ ಹೊಡೆಯುತ್ತಾ ಕೂರುತ್ತಿದ್ದೆ.

ಒಟ್ಟಿನಲ್ಲಿ ಹೇಳಬೇಕಾದರೆ ಕ್ರಿಸ್ಟೀನ್ ನಾನು ಕೇಪ್ ಟೌನ್ ನಲ್ಲಿ ವಾಸವಾಗಿದ್ದ ಏಳು ವರುಷಗಳು ನನ್ನ ಮನೆಗೆಲಸ ಮಾಡಿದಳು. ಆ ಏಳು ವರುಷಗಳಲ್ಲಿ ನಾನು ನಾಲ್ಕು ಬಾರಿ ಮನೆ ಬದಲಾಯಿಸಿದೆ. ಪ್ರತಿಯೊಂದು ಮನೆಯಲ್ಲೂ ಅವಳು ನನಗೆ ಸಹಾಯ ಮಾಡಿದಳು. ಆವಳ ಕೈ ಅಂತೂ ಬಹಳ ಶುದ್ಧ. ಹಣದ ಬಗ್ಗೆ ನನಗೆ ಯಾವಾಗಲೂ ತಾತ್ಸಾರ. ಮೇಜಿನಮೇಲೆ, ಮೇಜಿನ ದ್ರಾಯರುಗಳಲ್ಲಿ, ಬಟ್ಟೆಗಳ ಜೋಬುಗಳಲ್ಲಿ, ನನಗೇ ನೆನಪಿಲ್ಲದ ಸಂದುಮೂಲೆಗಳಲ್ಲಿ ಚಿಲ್ಲರೆ ಹಣ, ದೊಡ್ಡ ಮೊತ್ತಗಳನ್ನು ಬಿಟ್ಟಿರುವ ಅಭ್ಯಾಸ. ಎಷ್ಟೋ ಬಾರಿ ಹಣ ಕಳೆದುಕೊಂಡಿದ್ದರೂ ಆ ಅಭ್ಯಾಸ ಹೋಗಿಲ್ಲ. ಆದರೆ ಆ ಏಳು ವರುಷಗಳು ಕ್ರಿಸ್ಟೀನ್ ಮನೆಕೆಲಸ ಮಾಡುತ್ತಿದ್ದಾಗ ಒಂದು ದಮಡಿ ಕಾಸೂ ಕಳೆದುಕೊಳ್ಳಲಿಲ್ಲ. ಎಷ್ಟೋ ಬಾರಿ ವಾಶಿಂಗ್ ಮೆಶಿನ್ ನಲ್ಲಿ ಒಗೆದಿಟ್ಟಿದ್ದ ಬಟ್ಟೆಗಳನ್ನು ಇಸ್ತ್ರಿಮಾಡುವಾಗ ಜೇಬುಗಳಲ್ಲಿ ಸಿಕ್ಕಿದ್ದ ನಾಣ್ಯಗಳನ್ನು ನನಗೆ ಏನೂ ಹೇಳದೆ ಡೈನಿಂಗ್ ಟೇಬಲ್ ಇಟ್ಟಿರುತ್ತಿದ್ದಳು. ಹಣದ ಪರ್ಸ್ ಯಾವಾಗಲೂ ಮೇಜಿನಮೇಲಿನ ಕಲಸುಮೇಲೋಗರದ ಮಧ್ಯೆ ಇರುತ್ತಿತ್ತು. ಅವಳಿಗೆ ವೈನ್ ಪ್ರಿಯ. ಆದರೆ ಅಗ್ಗಕ್ಕಿಂತ ಅಗ್ಗವಾದ plonk ಕೊಳ್ಳುವ ಕ್ಷಮತೆಯೂ ಅವಳಿಗಿರಲಿಲ್ಲ. ಆದರೂ ನನ್ನ ಊಟದ ಟೇಬಲ್ ಮೇಲಿನ ವೈನ್, ವೈನ್ ಕಪಾಟಿನಲ್ಲಿ ತುಂಬಿರುತ್ತಿದ್ದ ಅನೇಕ ಬಗೆಯ ವೈನ್ ಗಳ ಬಗ್ಗೆ ಅವಳು ಯಾವ ರೀತಿಯ ಆಸಕ್ತಿ ಅಥವಾ ಕುತೂಹಲ ವ್ಯಕ್ತಪಡಿಸಿರಲಿಲ್ಲ. ಒಮ್ಮೆ ಒಂದು ಬಾಟಲ್ ವೈನ್ ಕೊಟ್ಟಾಗ ’ಈಗ ಬೇಡ, ಬೇರೆ ಮನೆಯ ಕೆಲಸ ಬಾಕಿ ಇದೆ. ಮತ್ತೊಮ್ಮೆ..’ ಅಂದಳು. ಆ ಮತ್ತೊಮ್ಮೆ ಬರಲೇ ಇಲ್ಲ. ಭಾರತಕ್ಕೆ ವಾಪಸಾಗುವ ಹಿಂದಿನ ದಿನ ಬೆಳಿಗ್ಗೆ ಅವಳ ತಿಂಗಳ ಸಂಬಳದ ಮೇಲೆ ಮೂರು ತಿಂಗಳದ ಸಂಬಳ ಟಿಪ್ ಅಂತ ಕೊಟ್ಟಾಗ Prab! this calls for a drink! and come, let me give you a hug ಅಂದು ಒಂದು ಗ್ಲಾಸ್ ವೈನ್ ಸೇವಿಸಿ ಗುಡ್ ಬೈ ಹೇಳಿದಳು.

ಮತ್ತೆ ನನ್ನ ಗುವಾಹತಿಯ ಮನೆಕೆಲಸದವಳಾದ ರಾನು ಬಗ್ಗೆ ಏನು ಹೇಳಲಿ? ಗುವಾಹತಿಗೆ ವಾಪಸಾದಾಗೆಲ್ಲಾ ರಾನು ಮತ್ತೆ ಹಾಜರ್. ಈ ಬಾರಿ ಅಕ್ಟೋಬರಿನಲ್ಲಿ ಈ ಪ್ರಾಂತ್ಯದಲ್ಲಿ ಈಚೆಗೆ ಪರಿಚಯವಾಗಿರುವ ಮೂವರು ಗೆಳೆಯರು ನನ್ನ ಜೊತೆ ಗುವಾಗತಿಗೆ ಬರುವ ಸಂಭವವಿದೆ. ಸಂಭವ ಏಕೆ, ತಿಕೆಟ್ ಕೊಂಡಾಗಿದೆ. ಅವರಲ್ಲೇ ಯಾರಿಗಾದರೂ ರಾನು ಬಗ್ಗೆ ಈ ಬ್ಲಾಗಿನಲ್ಲಿ ಬರೆಯಲು ಕೇಳಿಕೊಳ್ಳುವೆ. ರಾನು ಇಬ್ಬರು ಮೊಮ್ಮಕ್ಕಳ ಅಜ್ಜಿ. ನನ್ನನ್ನು ಅವಳ ತಂದೆಯಂತೆ ವ್ಯವರಿಸಿಕೊಳ್ಳುತ್ತಾಳೆ. ಕ್ಯಾನ್ಸರ್ ಆಪರೇಷನ್ ನಂತರ ಮನೆಗೆ ವಾಪಸಾದಾಗ ನನ್ನ ಗೆಳೆಯರಿಗಿಂತ ಹೆಚ್ಚು ಮುತವರ್ಜಿ ತೆಗೆದುಕೊಂಡು ಸಹಾಯ ಮಾಡಿದಳು. ಹಣ? ಸಂಬಳ? ಇವಕ್ಕೆ ಏನಾದರೂ ಮೌಲ್ಯವಿದೆಯೇ? ಕ್ರಿಸ್ಟೀನ್ ಮತ್ತು ರಾನು ಅಂತಹ ಸಹಾಯಕರು ನನಗೆ ದೊರಕಿರುವುದು ನನ್ನ ಭಾಗ್ಯ. ಅವರಿಬ್ಬರು ನನೆಗಿಂತಾ ಸಣ್ಣವರಾದರೂ ಅವರಿಗೆ ನನ್ನ ಹೃದಯಾಂತರಾಳದ ವಂದನೆಗಳು, ನಮನಗಳು.

‍ಲೇಖಕರು avadhi

August 30, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This