ನನ್ನ ಹೆಸರೇ ‘ರೈಸ್ ಮೆಷೀನ್’..

ಇವರು ನೀಲಗಿರಿ. ನಿಜ ಹೆಸರು ನೀವೇ ಹುಡುಕಿ. ಅವರ ಪ್ರಕಾರ ಅವರ ಪರಿಚಯ ಹೀಗೆ-  ನನ್ನ ನ್ಯೂಜಿಲೆಂಡ್ ಅನುಭವಗಳು. ಊರಿಗೂ ಇಲ್ಲಿಗೂ ಹೋಲಿಸಿಕೊಂಡು, ಕಡೆಗೆ ನಮ್ಮೂರೇ ಚೆಂದ ಎಂಬ ಭಾವನೆ ತಳೆದಿರುವವಳು.ಇಲ್ಲಿದೆ ಅವರ ತಿನ್ನಿರಿ, ತಿಂತಾ ಇರಿ, ಥಿನ್ನಾಗಿರಿ ಅನುಭವ. ಜೋಗಿ ಲೇಖನದ ಬೆನ್ನಲ್ಲೇ ನೀಲಗಿರಿ ಅವರ ಸೆಳೆಯುವ ಒಂದು ಬರಹ..

ಮೊನ್ನೆ ಹಬ್ಬಕ್ಕೆ, ನಮ್ಮಮ್ಮ ಊರಿನಿಂದ ಕಳಿಸಿದ್ದ ಡ್ರೆಸ್ಸು ಯಾಕೋ ಟೈಟಾಗಿದೆ ಎನ್ನಿಸಿತ್ತು. ಟೈಲರಿಗೆ ಇಲ್ಲಿದ್ದ ನಿನ್ನ ಹಳೇ ಡ್ರೆಸ್ಸಿನ ಅಳತೆಯನ್ನೇ ಕೊಟ್ಟು ಹೊಲಿಸಿದ್ದೇನೆಂದು ಹೇಳಿದ್ದರು. ಅಂದರೂ ಇಷ್ಟು ಬಿಗಿಯೇಕಾಯಿತು? ನನ್ನ ಪ್ರಕಾರ ನಾನೇನೂ ಭಾರೀ ತೂಕದವಳಲ್ಲ! ಊರಿನಿಂದ ಇಲ್ಲಿಗೆ ತಂದಿದ್ದ, ಕೇವಲ ಒಂದೇ ವರ್ಷದ ಹಿಂದಿನ ಬಟ್ಟೆಗಳೂ ” ನಾ ತಾಳಲಾರೆ” ಎಂಬಂತೆ ಬಿಗಿಯಾಗುತ್ತಿದೂ, ನೆನಪಿಗೆ ಬಂದು, ’ ಓಹೋ ನಾನು ದಪ್ಪವಾಗುತ್ತಿದ್ದೇನೆ! ಹೇಗಾದರೂ ಮೈ ಭಾರ ಕಡಿಮೆ ಮಾಡಲೇ ಬೇಕು ‘ಇಲ್ಲದಿದ್ದರೆ ನನಗೂ ಡ್ರಮ್,ಮಿನಿ ಡ್ರಮ್ ಎಂದು ಹೆಸರಿಡುತ್ತಾರೆಷ್ಟೇ ’ ಎನಿಸಿತು. ದಪ್ಪವಾಗಿದ್ದೇನೆ ಎಂದು ಮೊದಲಿಗೆ ಗೊತ್ತಿದ್ದರೂ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಮನಸ್ಸಿಗೆ ದಪ್ಪ ಅನ್ನಿಸಿದ ದಿನ ಒಂದೊತ್ತು ಊಟ ಬಿಟ್ಟು ಶೋಕ ಆಚರಿಸಿಕೊಂಡು ಮುಂದಿನ ಹೊತ್ತಿಗೆ ಸರಿಯಾಗಿ ಬಾರಿಸುತ್ತಿದ್ದರಿಂದ ನನ್ನ ಸೋರಿ ಹೋದ ತೂಕ ಅಷ್ಟೇ ವೇಗದಲ್ಲಿ ತುಂಬಿಕೊಳ್ಳುತ್ತಿತ್ತು.

ನನ್ನ ದುಃಖವನ್ನು ಸ್ನೇಹಿತರ ಬಳಿ ತೋಡಿಕೊಂಡರೆ ಅವರೋ ” ನೀವು ಅನ್ನ ತಿನ್ನುವುದು ಕಡಿಮೆ ಮಾಡಿ..” ಎಂದು ನನ್ನ ಅತೀ ಪ್ರಿಯವಾದ ಅನ್ನದ ಮೇಲೆ ಕಲ್ಲು ಹಾಕುವ ಸಲಹೆ ಕೊಟ್ಟಿದ್ದು ನನಗೇನೋ ಇಷ್ಟವಾಗಲಿಲ್ಲ. ದಿನಕ್ಕೊಂದು ಪಲಾವ್, ಭಾತ್ , ಚಿತ್ರಾನ್ನ, ಪುಳಿಯೋಗರೆ ಮಾಡಿಕೊಂಡು ತಿನ್ನುತ್ತಿದ್ದ ನನಗೆ, ಅನ್ನ ತಿನ್ನಬೇಡಿ ಎಂದರೆ ಮತ್ತೇನು ತಿನ್ನುವುದು? ನಮ್ಮ ಮನೆಯಲ್ಲಂತೂ ನನ್ನನ್ನು ” ರೈಸ್ ಮೆಷೀನ್ ” ಎಂದೇ ಕರೆಯುತ್ತಿದುದು:) ರಾತ್ರಿ ಊಟಕ್ಕೆ ಮುದ್ದೆ ಅಥವಾ ಚಪಾತಿ ಮಾಡಿದರೂ ನನಗೆ ಒಂದು ಬಟ್ಟಲು ಅನ್ನವಂತೂ ಬೇಕೇ ಬೇಕು. ಅಂತಹುದರಲ್ಲಿ ” ಅನ್ನವನ್ನು ಬಿಟ್ಟು ಬಿಡಿ” ಎಂದರೆ ಅವರಿಗಿನ್ನೆಂತ ಶಾಪ ಹಾಕಲಿ?

ಮೈಸೂರಿನಲ್ಲಿದ್ದಾಗ ಬೆಳಗಿನ ತಿಂಡಿಗೆ, ಚಿತ್ರಾನ್ನ, ಟೊಮೋಟೋ ಭಾತ್ , ವೆಜಿಟೇಬಲ್ ಭಾತ್ , ಹುಳಿಯನ್ನ…ಹೀಗೆ ಬರೀ ಅನ್ನಗಳದ್ದೇ ಸಾಲು ಸಾಲು. ಬೆಳಿಗ್ಗೆ ತಿಂಡಿಗೂ ಅನ್ನ, ಮಧ್ಯಾಹ್ನ ಅನ್ನ-ಸಾರು, ರಾತ್ರಿಗೆ ಮುದ್ದೆ/ಚಪಾತಿ- ಪಲ್ಯ, ಅನ್ನ-ಸಾರು ಹೀಗೆಯೇ ಆರಾಮವಾಗಿ ಅಮ್ಮ ಮಾಡಿಹಾಕುತ್ತಿದ್ದನ್ನು ತಿಂದುಕೊಂಡಿದ್ದೆ. ಆದರೂ ಇಂತಾ ಪರಿ ದಪ್ಪಗಾಗಿರಲಿಲ್ಲ. ಸಣ್ಣಗೆ ಒಣಕಲ ಕಡ್ಡಿಯಂತಿದ್ದೆ. ” ಸೀರೆ ಉಟ್ಟುಕೊಂಡರೆ, ಮಡಿಕೋಲಿಗೆ ಸುತ್ತಿದಂತಿರುತ್ತದೆ, ಸ್ವಲ್ಪ ದಪ್ಪವಾಗೆ” ಎಂದು ಅಕ್ಕಂದಿರು ನನಗೆ ಸೀರೆ ಉಡಿಸುವುದನ್ನು ಕಲಿಸುವಾಗಲೂ ಬೈಯುತ್ತಿದ್ದರು. ಸಣ್ಣಗಿದ್ದರೇನು, ದಪ್ಪವಿದ್ದರೇನು ಒಟ್ಟಿನಲ್ಲಿ ಆರೋಗ್ಯದಿಂದರಷ್ಟೇ ಸಾಕು ಎಂಬ ಪಾಲಿಸಿ ನಂದಾಗಿದ್ದರಿಂದ, ಬಹುಷಃ ನಾನು ಇನ್ನು ಜನ್ಮದಲ್ಲಿ ದಪ್ಪವಾಗುವುದಿಲ್ಲವೇನೋ ಅನ್ನಿಸಿತ್ತು.

ಮದುವೆಯಾದ ಮೇಲೆಯೇ ನನಗೆ ನಿಜಕ್ಕೂ ಸಂಕಟಕಾಲ ಶುರುವಾಗಿದ್ದು. ಮದುವೆಯಾಗಿದ್ದು ಗುಲ್ಬರ್ಗದ ಗಂಡಿಗೆ! ಅಲ್ಲಿ ಬೆಳಗಿನ ತಿಂಡಿಗೆ ಅನ್ನದ ಸುದ್ದಿಯೇ ಇಲ್ಲ! ಬೆಳಿಗ್ಗೆ ಅವಲಕ್ಕಿ ಇಲ್ಲವೇ ಉಪ್ಪಿಟ್ಟು, ಮಧ್ಯಾಹ್ನಕ್ಕೆ ಜೋಳದ ರೊಟ್ಟಿ ಇಲ್ಲವೇ ಚಪಾತಿ- ಬದನೇಕಾಯಿ, ಅಥವಾ ಪುಂಡೀ ಪಲ್ಯ, ರಾತ್ರಿಗೂ ಡಿಟ್ಟೋ! ನಮ್ಮಲ್ಲಿ ಬೆಳಗಿನ ತಿಂಡಿಗೆ ಚಪಾತಿ ತಿಂದಷ್ಟೇ ಅಭ್ಯಾಸ. ಇಲ್ಲಿ ಅವಲಕ್ಕಿ ಬಿಟ್ಟರೆ ಉಪ್ಪಿಟ್ಟು ಅದೂ ಬಿಟ್ಟರೆ,ಸೂಸಲ! ಅವಲಕ್ಕಿ, ಉಪ್ಪಿಟ್ಟಿಗೆ ತರಾವರೀ ಹೆಸರುಗಳನ್ನಿಟ್ಟು ಅವುಗಳನ್ನು ವಾರಕ್ಕೊಮ್ಮೆಯಷ್ಟೇ ಮಾಡಬೇಕು ಎಂದು ಅಮ್ಮನಿಗೆ ಜೋರು ಮಾಡುತ್ತಿದ್ದುದೆಲ್ಲಾ ನೆನಪಿಸಿಕೊಂಡು ” ದೇವರೇ ಇದೆಲ್ಲಿಗೆ ನನ್ನನ್ನು ತಂದು ಬಿಟ್ಟೆ” ಎಂದು ಹಲುಬುತ್ತಿದ್ದೆ. ಊಟಕ್ಕೆ ಕೂತಾಗ, ಎಲ್ಲರೂ ರೊಟ್ಟಿ, ಚಪಾತಿಗಳನ್ನು ತಿಂದು ಕಡೆಗೆ ಅನ್ನ ಬರುತ್ತಿದ್ದರೂ ಎಲ್ಲರೂ ತಿನ್ನುವ ಅನ್ನದ ಪ್ರಮಾಣ ಕಡಿಮೆಯಿರುತ್ತಿದ್ದರಿಂದ , ಅನಿವಾರ್ಯವಾಗಿ ನಾನೂ ತಟ್ಟೆ ಬಿಟ್ಟು ಏಳಲೇ ಬೇಕಾಗುತ್ತಿತ್ತು. ಒಮ್ಮೊಮ್ಮೆ ಯಜಮಾನರಿಗೆ ನಾನು ” ಅನ್ನದ ಪ್ರಿಯೆ” ಎಂದು ನೆನಪಿಗೆ ಬಂದು, ನನಗೆ ಅನ್ನವನ್ನೇ ಬಡಿಸಲು ಹೇಳಿದುದೂ ಉಂಟು! ಮೈಸೂರಿನಲ್ಲಿ ಬಗೆಬಗೆಯ ಅನ್ನಗಳಿಗೆ ಒಗ್ಗಿಹೋಗಿದ್ದ ನನ್ನ ನಾಲಿಗೆಗೆ ಅನ್ನ-ಬೇಳೆ ಸಾರು ಯಾವುದಕ್ಕೂ ಸಾಲುತ್ತಿರಲಿಲ್ಲ. ಹಾಗೆಂದು ನನಗಿಷ್ಟವಾದ ಅಡಿಗೆಗಳನ್ನು ಮಾಡಿಸಿಕೊಳ್ಳಲೂ ಭಯ. ಹೇಳಿ ಕೇಳಿ ಒಟ್ಟು ಸಂಸಾರ. ನನಗೊಬ್ಬಳಿಗೆ ಮಾಡಿಹಾಕುವುದಂತೂ ಸಾಧ್ಯವಿಲ್ಲ, ನಾನೇ ಮಾಡಿಕೊಳ್ಳೋಣವೆಂದರೆ ನನಗೆ ಅಡಿಗೆಯೇ ಬರುತ್ತಿರಲಿಲ್ಲ!

ಇಲ್ಲಿಗೆ ಬಂದ ಮೇಲೆ ಹಾಗೂ ಹೀಗೂ ಅಡಿಗೆ ಕಲಿತು,(ಯಜಮಾನರ ಮೇಲೆ ಪ್ರಯೋಗ ಮಾಡಿ :D) ಅನ್ನದ ಬರವನ್ನು ನೀಗಿಸಿಕೊಳ್ಳುವಂತೆ ತಿನ್ನುತ್ತಿದ್ದರಿಂದ, ದಿನದಿನಕ್ಕೆ ದುಂಡಾಗುತ್ತಾ ಹೋದೆ. “ಈ ಜನ್ಮದಲ್ಲಿ ನೀನು ದಪ್ಪವಾಗಲ್ಲ ಬಿಡು” ಎಂದು ಹೇಳಿದವರೆಲ್ಲಾ, ” ಪರವಾಗಿಲ್ಲವೇ, ಕೆಲವರಿಗೆ ಅವರವರ ಕೈ ಅಡಿಗೆ ಒಗ್ಗುವುದಿಲ್ಲ, ನಿನಗೇ ಸರಿಯಾಗಿ ಒಗ್ಗಿಹೋದಂತಿದೆ,” ಎನ್ನುವಂತಾದೆ. ಸಿಕ್ಕಾಪಟ್ಟೆ ಚಳಿಯೂ ಇರುತ್ತಿದ್ದರಿಂದ, ವಾಕಿಂಗೂ ಇಲ್ಲಾ ! ಊರಲ್ಲಿ, ಅತ್ತೆಮನೆಯಲ್ಲಿ ಅಷ್ಟೋ ಇಷ್ಟೋ ಕೆಲಸವಾದರೂ ಇರುತ್ತಿತ್ತು. ಇಲ್ಲಿ ನನ್ನದೇ ಮನೆ, ಹೇಳುವವರೂ ಇಲ್ಲ, ಕೇಳುವವರೂ ಇಲ್ಲ! ಬಿಸಿ ಬಿಸಿ ಅಡಿಗೆ ಮಾಡಿಕೊಂಡು ತಿನ್ನುವುದು, ಚಳಿಗೆ ಹೊದ್ದು ಮಲಗುವುದು ಇದೇ ನನ್ನ ದಿನಚರಿಯನ್ನಾಗಿ ಮಾಡಿಕೊಂಡಿದ್ದರಿಂದ ನೋಡು ನೋಡುತ್ತಲೇ ಕುತ್ತಿಗೆಯ ಸುತ್ತ, ಸೊಂಟದ ಸುತ್ತ ಟೈರುಗಳು ಬರತೊಡಗಿದ್ದವು. ಊರಿನಿಂದ ಬರುವಾಗ ತಂದಿದ್ದ ಡ್ರೆಸ್ಸುಗಳು ” ನಾ ಒಲ್ಲೆ” ಅನ್ನತೊಡಗಿದ್ದವು. ಒಂದತ್ತು ಹೆಜ್ಜೆ ನಡೆಯುವಷ್ಟರಲ್ಲಿ ಉಸ್ಸ್ ಉಸ್ಸೆಂದು ಏದುಸಿರು ಬಿಡುವ ಹಾಗಾಗುತ್ತಿತ್ತು. ನನಗೂ ನನ್ನ ಮುಖ ಕನ್ನಡಿಯಲ್ಲಿ ನೋಡಿಕೊಳ್ಳಲು ಮುಜುಗರವಾದರೂ, ಸಣ್ಣವಾಗುವುದು ಹೇಗೆ? ಊಟ ಬಿಟ್ಟರೆ ಯಾರೂ ಸಣ್ಣವಾಗುವುದಿಲ್ಲವೆಂದು ಎಲ್ಲೋ ಓದಿದ್ದರಿಂದ ಊಟ ಬಿಡುವ ವಿಚಾರ ಅಲ್ಲಿಗೇ ಬಿಟ್ಟಿದ್ದೆ. ಇನ್ನು ತಿಂಗಳಿಗೊಮ್ಮೆ ಮಾಡುವ ಸಂಕಷ್ಟಿ ಉಪವಾಸ! ಅದಾದರೂ ಏನು? ಅನ್ನ ಒಂದು ಬಿಟ್ಟು ಮಿಕ್ಕೆಲ್ಲಾ ತಿನ್ನುತ್ತಿದ್ದರಿಂದ ಅಂತಹ ಭಾರೀ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಅಲ್ಲಲ್ಲಿ ತೂಕ ಇಳಿಸುವ ಲೇಖನಗಳನ್ನು ಓದಿದಾಗ, ” ನಾನೂ ಸಣ್ಣವಾಗಲೇ ಬೇಕು,” ಎಂದುಕೊಂಡರೂ ಮರುಕ್ಷಣದಲ್ಲಿ ಮರೆತೂ ಹೋಗುತ್ತಿದ್ದೆ.

ಅದೇ ಸಮಯಕ್ಕೆ ದಟ್ಸ್ ಕನ್ನಡದಲ್ಲಿ “ಮಾಡಿ ನೋಡಿ ತೂಕ ಇಳಿಸು ಸಪ್ತಾಹ” ಲೇಖನ ಓದಿದಾಗ, ಟ್ರೈ ಮಾಡಿಯೇ ಬಿಡೋಣವೆಂದು ನಿರ್ಧರಿಸಿದೆ. ಯಜಮಾನರಿಗೂ ನನ್ನ ನಿರ್ಧಾರವನ್ನು ಸಾರಿದೆ. ಅವರೂ ಇಂತಹ ಅದೆಷ್ಟೋ ನನ್ನ ತೂಕ ಇಳಿಸಿದ್ದ, ಅಷ್ಟೇ ವೇಗದಲ್ಲಿ ತೂಕ ಏರಿಸಿಕೊಂಡಿದ್ದ ” ನಿರ್ಧಾರ”ಗಳನ್ನು ನೋಡಿದ್ದರಿಂದ, ಇದೂ ಹತ್ತರಲ್ಲಿ ಒಂದು ಎಂಬಂತೆ ತಲೆಯಾಡಿಸಿದ್ದರು. ಲೇಖಕರು ಉಪವಾಸ ಮಾಡಬೇಕಿಲ್ಲವೆಂದು ಹೇಳಿದ್ದೂ ನನ್ನ ನಿರ್ಧಾರಕ್ಕೆ ಮುಖ್ಯ ಕಾರಣವಾಗಿತ್ತು. ವಾರದ ಏಳು ದಿನಗಳಲ್ಲಿ ಏನೇನೇನು ತಿನ್ನಬೇಕೆಂದು ಅವರು ಹೇಳಿದ್ದೆಲ್ಲವನ್ನೂ ಬರೆದಿಟ್ಟುಕೊಂಡೆ. ಒಂದು ವಾರ ಕಟ್ಟುನಿಟ್ಟಾಗಿ ಮಾಡಿಯೇ ಬಿಡೋಣ, ನೀನು ಸಣ್ಣವಾಗೋಲ್ಲ ಬಿಡು, ಎಂದು ಛೇಡಿಸಿದವರಿಗೆ ಬುದ್ಧಿ ಕಲಿಸಿಯೇ ಬಿಡೋಣ…ಹಾಗೆ….ಹೀಗೆ ಎಂದೆಲ್ಲಾ ಮನಸ್ಸನ್ನು ಗಟ್ಟಿಮಾಡಿಕೊಂಡೆ. ಶನಿವಾರದ ಮಾರುಕಟ್ಟೆಯಲ್ಲಿ ಸಿಗುವ ಹಣ್ಣು-ತರಕಾರಿಗಳನ್ನು ತರಲು ಬೆಳಿಗ್ಗೆ ಬೇಗ ಎದ್ದು ಯಜಮಾನರಿಗೂ ಚಹಾ ಆಸೆ ತೋರಿಸಿ ಎಬ್ಬಿಸಿದೆ. ಇಲ್ಲಿ ಬೆಳಿಗ್ಗೆ ಎಂಟಕ್ಕೆಲ್ಲಾ ಮಾರುಕಟ್ಟೆ ಖಾಲಿಯಾಗುವುದರಿಂದ ಆದಷ್ಟೂ ಬೇಗ ಹೋದರೆ ಒಳ್ಳೆಯದು. ಯಜಮಾನರಿಗೂ ನನ್ನ ಸಡಗರ ನೋಡಿ ಸ್ವಲ್ಪ ನಂಬಿಕೆ ಬಂತೆನೋ, ಅವರೂ ಉತ್ಸಾಹದಿಂದಲೇ ಏನೇನು ತರಕಾರಿ, ಏನೇನು ಹಣ್ಣು ಎಂದು ಲಿಸ್ಟ್ ಓದುತ್ತಾ ರೆಡಿಯಾದರು. ಮೊದಲನೇ ದಿನ ಕರಬೂಜ ಅಥವಾ ಕಲ್ಲಂಗಡಿ ಹಣ್ಣನ್ನು ತಿನ್ನಿ ಎಂದಿದ್ದರಿಂದ, ಇಲ್ಲಿ ಕಲ್ಲಂಗಡಿ ಕಾಲ ಇನ್ನೂ ಬಂದೇ ಇಲ್ಲ! ಸರಿ ಕರಬೂಜ ಕೊಳ್ಳುವ ಎಂದು ಇದ್ದಿದುದರಲ್ಲೇ ದೊಡ್ಡ ಸೈಜಿನ ಕರಬೂಜ ಕೊಂಡೆ. ಎಲ್ಲಾ ಹಣ್ಣುಗಳೂ, ತರಕಾರಿಗಳ ವ್ಯಾಪರವೂ ಆಯಿತು. ಇನ್ನು ನನ್ನ ಸಪ್ತಾಹ ಆಚರಿಸುವುದೊಂದೇ ಬಾಕಿ! ಶನಿವಾರ-ಭಾನುವಾರ ಪೂರ್ತಿ ಏನೇನು ಆಸೆಗಳಿದ್ದವೋ ಅದೆಲ್ಲವನ್ನೂ ತಿಂದು ಪೂರೈಸಿಕೊಂಡೆ.

ಸೋಮವಾರ- ಮೊದಲನೆ ದಿನ – ಬೆಳಿಗ್ಗೆ ಏಳುವಾಗಲೇ ಇವತ್ತಿಂದ ನನ್ನ ನಾನ್ ಸ್ಟಾಪ್ ತಿನ್ನಾಟವಿಲ್ಲ, ಇವತ್ತು ಬರೀ ಕರಬೂಜ ಹಣ್ಣು ಎಂದು ಚಿಂತಿಸುತ್ತಲೇ ಎದ್ದೆ. ದೊಡ್ಡ ಸೈಜಿನ ಹಣ್ಣು ತಂದಿದ್ದರಿಂದ ಹೊಟ್ಟೆಗೇನೂ ಮೋಸವಾಗಲಾರದು ಎಂದು ಸಮಾಧಾನ ಮಾಡಿಕೊಂಡೆ. ಮೂರು ಹೊತ್ತಿಗೂ ಹಣ್ಣನ್ನೇ ತಿಂದು ಯಶಸ್ವಿಯಾಗಿ ಮೊದಲನೇ ದಿನ ಮುಗಿಸಿದೆ. ” ಹೇ…ಇಷ್ಟೇ ತಾನೆ? ಸಕತ್ ಈಸಿ…” ಎನಿಸಿತು. ಯಜಮಾನರೂ , ” ನೀನೇನು ಅಡಿಗೆ ಮಾಡಬೇಡ, ಏನಾದರೂ ನೂಡಲ್ಸ್ ನಾನೇ ಮಾಡಿಕೊಳ್ಳುತ್ತೇನೆಂದು” ನನ್ನ ಸಪ್ತಾಹಕ್ಕೆ ಬೆಂಬಲ ಕೊಟ್ಟಿದ್ದರು.

ಮಂಗಳವಾರ – ಎರಡನೇ ದಿನ – ಇವತ್ತು ಯಾವುದಾದರೂ ತರಕಾರಿಗಳನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಿರೆಂದು ಹೇಳಿದ್ದರು. ಹಸಿಯಾಗಿ ತಿನ್ನಲೆಂದು ಕ್ಯಾರೆಟ್, ಬೀನ್ಸ್ ( ನನ್ನ ಕೈತೋಟದ್ದೇ ಇತ್ತು ), ಲೆಟ್ಯೂಸ್, ಸೌತೆಕಾಯಿ ರೆಡಿಮಾಡಿಕೊಂಡೆ. ಆಲೂಗೆಡ್ಡೆ, ಕ್ಯಾಬೇಜುಗಳನ್ನು ಬೇಯಿಸಿ ತಿಂದರಾಯಿತು ಎಂದುಕೊಂಡೆ. ಬೆಳಿಗ್ಗೆಗೆ ಆಲೂಗೆಡ್ಡೆ ಬೇಯಿಸಿ ತಿಂದೆ. ಎರಡನೇ ದಿನ ಸ್ವಲ್ಪ ಕುಂಟುತ್ತಲೇ ಸಾಗುತ್ತಿದೆ ಅನ್ನಿಸಿತು. ಯಜಮಾನರು ಪಾಸ್ತಾಕ್ಕೆ ಗಮ್ ಎನ್ನುವ ಬಗೆಬಗೆಯ ಮಸಾಲೆಗಳನ್ನು ಮಿಕ್ಸು ಮಾಡಿಕೊಂಡು ತಿನ್ನುತ್ತಿದ್ದನ್ನು ಕಂಡು, ” ನಾನ್ಯಾಕೆ ಹೀಗೆ ದನ ತಿಂದಂತೆ ಹಸೀ ತರಕಾರಿಗಳನ್ನು ತಿನ್ನಬೇಕು? ಎಂದು ಸಿಟ್ಟುಬರತೊಡಗಿತ್ತು. ಆದರೂ ಮನಸಲ್ಲಿದ್ದ ನಿರ್ಧಾರ ಇಷ್ಟಕ್ಕೆಲ್ಲಾ ಬಿಟ್ಟರೆ ಹೇಗೆಂದು ಇನ್ನಷ್ಟು ಗಟ್ಟಿ ಮಾಡಿಕೊಂಡು, ತಟ್ಟೆ ಖಾಲಿ ಮಾಡಿದೆ. ಎರಡನೇ ದಿನವೂ ಮುಗಿದಾಗ ” ಇನ್ನು ಗೆದ್ದೆ!” ಎನಿಸಿತು.

ಬುಧವಾರ – ಮೂರನೆಯ ದಿನ – ಇವತ್ತು ಅಲೂಗೆಡ್ಡೆ ಬಿಟ್ಟು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ದಿನ. ಆದರೆ ನನಗೆ ಮೊದಲೆರಡು ದಿನ ಹಣ್ಣು, ತರಕಾರಿಗಳನ್ನು ತಿಂದು, ಇವತ್ತೂ ಇದೇ ತಿನ್ನಬೇಕು ಎನಿಸಿದಾಗ, ನಾನ್ಯಾಕೆ ಸಣ್ಣವಾಗಬೇಕು? ತೂಕ ಜಾಸ್ತಿಯಾದರೆ ಮೈ ಹೊತ್ತುಕೊಂಡು ತಿರುಗುವವಳು ನಾನು ತಾನೆ? ಈ ಸಪ್ತಾಹನೂ ಬೇಡ, ಗಿಪ್ತಾಹನೂ ಬೇಡ, ಅಚ್ಚುಕಟ್ಟಾಗಿ ಅನ್ನ-ಸಾರು-ಪಲ್ಯಗಳನ್ನು ತಿನ್ನವುದು ಬಿಟ್ಟು ಇದೆಂತಹ ವನವಾಸ ನನ್ನದು? ಎನಿಸತೊಡಗಿತ್ತು. ಆದರೂ ಮಧ್ಯದಲ್ಲೇ ಬಿಟ್ಟರೆ ನನ್ನ ಘೋಷಣೆಗಳೆಲ್ಲಾ ಮಣ್ಣುಪಾಲು ಮಾಡಿದಂತಾಗುವುದಿಲ್ಲವೇ? ಒಂದು ಸೊಟ್ಟ ಸಪ್ತಾಹ ಮಾಡಲೂ ನಿನ್ನಿಂದ ಆಗಲಿಲ್ಲ ಎಂದು ಯಜಮಾನರು ಆಡಿಕೊಳ್ಳುವುದಿಲ್ಲವೇ? ಕೂಡದು…ಕೂಡದು…ಸಪ್ತಾಹ ಬಿಡಕೂಡದು ಎಂದು ಇನ್ನೂ ಗಟ್ಟಿಯಾದೆ. ಪರಿಣಾಮ, ಸಣ್ಣ ಪುಟ್ಟದಕ್ಕೆಲ್ಲಾ ಯಜಮಾನರ ಮೇಲೆ ರೇಗತೊಡಗಿದ್ದೆ. ನನ್ನ ಸಪ್ತಾಹದ ವಿಷಯ ಗೋಪ್ಯವಾಗಿಟ್ಟದ್ದರಿಂದ, ಊರಿಗೆ ಫೋನ್ ಮಾಡಿದರೆ ನಮ್ಮಮ್ಮ ಹಸೀ ತೊಗರಿಕಾಯಿ ಹುಳಿಯನ್ನು ಬಣ್ಣಿಸಿ ಬಣ್ಣಿಸಿ ಹೇಳುತ್ತಿದ್ದರೆ ನನಗೆ ಸಿಟ್ಟು ಒದ್ದುಕೊಂಡು ಬರುತ್ತಿತ್ತು. ರಾತ್ರಿ ಮಲಗಿದರೆ ಬರೀ ರಾಶಿ ರಾಶಿ ಚಿತ್ರಾನ್ನ, ಪುಳಿಯೋಗರೆ ತಿಂದಂತೆ ಕನಸು.

ಗುರುವಾರ – ನಾಲ್ಕನೆಯ ದಿನ – ಇವತ್ತು ಬರೀ ಬಾಳೆಹಣ್ಣುಗಳು ಜೊತೆಗೆ ತರಕಾರಿ ಸೂಪು ತಿನ್ನುವ ದಿನ – ಆದರೆ ಮೊದಲಿನಂತೆ ಮನಸ್ಸಿನಲ್ಲಿ ಏನೇನೋ ತಿಂದು ಬಿಡಬೇಕೆನ್ನುವ ಆಸೆ ಬರುತ್ತಿಲ್ಲ. ಬಾಯಿ ಚಪಲ ನಿಜಕ್ಕೂ ಕಡಿಮೆಯಾಗಿದೆ. ಯಜಮಾನರು ಪಕ್ಕದಲ್ಲೇ ಚಿಪ್ಸು ತಿನ್ನುತ್ತಿದ್ದರೂ ನಾನೂ ಕೈ ಹಾಕಬೇಕೆಂದೆನಿಸುತ್ತಿಲ್ಲ! ರಾತ್ರಿಗೆ ತರಕಾರಿ ಸೂಪು ಕುಡಿದು, ಆರಾಮವಾಗಿ ಮಲಗಿದೆ.

ಶುಕ್ರವಾರ- ಐದನೇ ದಿನ – ಇವತ್ತು ಒಂದು ಬಟ್ಟಲು ಅನ್ನ, ಆರು ಟೊಮೋಟೊಗಳು. ಮನಸ್ಸಿಗೆ, ದೇಹಕ್ಕೆ ನಿಜಕ್ಕೂ ಬದಲಾವಣೆಯಾಗಿದೆ. ಕುತ್ತಿಗೆಯ ಸುತ್ತ ಇದ್ದ ಕೊಬ್ಬು ಇಳಿದಂತೆ ಕಾಣಿಸುತ್ತಿದೆ! ಹೀಗೆಯೇ ಮಾಡಿದರೆ ಇನ್ನುಳಿದ ಕೊಬ್ಬೂ ಕರಗುವುದರಲ್ಲಿ ಸಂಶಯವೇ ಇಲ್ಲ! ಆದರೆ ವೀಕ್ ನೆಸ್ ಗೆ ಇರಬೇಕು, ಕೈ ಬೆರಳುಗಳು ಒಮ್ಮೊಮ್ಮೆ ಅದುರುತ್ತಿದ್ದವು. ಇಲ್ಲಿಯ ಚಳಿಯೂ ಜೊತೆಗೆ ಸೇರಿದ್ದರಿಂದ, ಈ ದಿನದ ಮೆನುಗೆ ಯಜಮಾನರ ಸಲಹೆಯಂತೆ, ರಾತ್ರಿ ಒಂದು ಗ್ಲಾಸು ಬಿಸಿ ಹಾಲು ಕುಡಿಯುವ ಅಭ್ಯಾಸ ಮಾಡಿಕೊಂಡೆ. ಒಂದು ದಿನವನ್ನೂ ನೀನು ನೆಟ್ಟಗೆ ಮಾಡುವುದಿಲ್ಲ ಬಿಡು ಎಂದು ನನ್ನನ್ನು ಛೇಡಿಸಿದ್ದ ಯಜಮಾನರೇ ’ ಪರವಾಗಿಲ್ವೆ? ನೋಡು ನೋಡುತ್ತಿದ್ದಂತೆ ಐದು ದಿನ ಕಳೆದೇ ಬಿಟ್ಟಲ್ಲಾ’ ಎನ್ನುವಂತಾದರು.

ಶನಿವಾರ – ಆರನೇ ದಿನ – ಒಂದು ಬಟ್ಟಲು ಅನ್ನದೊಂದಿಗೆ ಇಷ್ಟ ಬಂದ ತರಕಾರಿಗಳನ್ನು ಹಸಿಯಾಗಿ ಮತ್ತು ಬೇಯಿಸಿ ತಿನ್ನುವ ದಿನ. ಅನ್ನ ಬೇರೆ ತರಕಾರಿ ಬೇರೆ ಯಾಕೆ ಬೇಯಿಸುವುದೆಂದು ಅಕ್ಕಿಯೊಟ್ಟಿಗೆ, ಕ್ಯಾರೆಟ್, ಬೀನ್ಸ್, ಹಸಿ ಬಟಾಣಿಯನ್ನು ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ಕೂಗಿಸಿದೆ. ಆಶ್ಚರ್ಯ! ಮಸಾಲೆ ಬೇಕೆಂದು ನಾಲಿಗೆ ಬೇಡುತ್ತಿಲ್ಲ! ಒಂದು ರೀತಿಯಲ್ಲಿ ದೇಹ ಮೊದಲಿಂದಲೂ ಹೀಗೆಯೇ ಇದ್ದಿತೇನೋ ಎಂಬಂತೆ ಒಗ್ಗಿಹೋಗುತ್ತಿದೆ.

ಭಾನುವಾರ- ಏಳನೇ ದಿನ – ಒಂದು ಬಟ್ಟಲು ಅನ್ನದೊಂದಿಗೆ ಹಣ್ಣಿನ ಜ್ಯೂಸು, ಹಾಗೂ ತರಕಾರಿಗಳನ್ನು ತಿನ್ನುವ ದಿನ. ಆರು ದಿನಗಳನ್ನು ಮುಗಿಸಿದ ಮೇಲೆ ಏಳನೆ ದಿನವೇನು ಲೆಕ್ಕವೇ? ಲೀಲಾಜಾಲವಾಗಿ ಮುಗಿಸುತ್ತೇನೆಂಬ ಆತ್ಮವಿಶ್ವಾಸ! ಹಣ್ಣಿನ ಜ್ಯೂಸಿಗೆ ಇಲ್ಲಿನ ಕಿತ್ತಳೆಹಣ್ಣುಗಳನ್ನು ನಾನು ತಿನ್ನುತ್ತಿಲ್ಲವಾದ್ದರಿಂದ, ಅಂಗಡಿಯಿಂದ ತಂದಿದ್ದ ಆಪೆಲ್ ಜ್ಯೂಸಿಗೆ ಮೊರೆ ಹೋದೆ. ಒಂದು ವಾರದ ಹಿಂದೆ ಮಾರುಕಟ್ಟೆಯಿಂದ ತಂದಿದ್ದ ಹಣ್ಣು- ತರಕಾರಿಗಳೆಲ್ಲವೂ ಫಿನಿಶ್! ಬಿಸಿಲು ಬಿದ್ದ ದಿನ ವಾಕಿಂಗೂ ಹೋಗುತ್ತಿದ್ದರಿಂದ, ನೋಡಿದವರಿಗೆ ” ಸಣ್ಣವಾಗಿದ್ದಾಳೆ” ಎನ್ನುವಷ್ಟರಮಟ್ಟಿಗಾದೆ.

ಲೇಖಕರು ಎರಡು ಸಪ್ತಾಹಗಳ ನಡುವೆ ನಾಲ್ಕು ದಿನ ಅಂತರ ಕೊಡುವುದು ಉತ್ತಮವೆಂದು ಹೇಳಿದ್ದಾರೆ. ನಾನು ಒಂದು ವಾರ ಗ್ಯಾಪ್ ಕೊಟ್ಟು ಮತ್ತೆ ಒಂದು ವಾರ ಮಾಡಿದೆ. ಮೊದಲಿನ ಸಪ್ತಾಹದಷ್ಟು ಎರಡನೆ ವಾರ ಕಷ್ಟವಾಗಲಿಲ್ಲ. ಮುಂಚಿನಂತೆ ಬಗೆಬಗೆಯ ಅನ್ನಗಳನ್ನು ಮಾಡಿಕೊಂಡು ತಿನ್ನಬೇಕೆನಿಸುತ್ತಿಲ್ಲ. ಎಣ್ಣೆ ಪದಾರ್ಥಗಳು ಮೊದಲಿಂದಲೂ ಎಷ್ಟು ಬೇಕೋ ಅಷ್ಟೇ ತಿನ್ನುತ್ತಿದ್ದರಿಂದ, ಈಗ ಆದಷ್ಟೂ ಚಪಲ ಕಡಿಮೆಯಾಗಿದೆ. ಕೊಬ್ಬು ಕೊಂಚ ಕರಗಿ, ಮುಖ ನಳನಳಿಸುವಂತಿದೆ :). ಮುಖ್ಯವಾಗಿ, ಈಗ ದಿನವೂ ತೂಕ ನೋಡಿಕೊಳ್ಳಲು ನಾಚಿಕೆಯಾಗುವುದಿಲ್ಲ! ನಮ್ಮ ಸ್ನೇಹಿತರಿಗೂ ಈ ಸಪ್ತಾಹವನ್ನು ತಿಳಿಸಿ ಹೇಳಿಕೊಟ್ಟೆ. ಅವರೂ ಉತ್ಸಹದಿಂದ ಮಾಡಿ 4 ಕೆ.ಜಿ ಕಳೆದರಂತೆ! ದೊಡ್ಡ ಥ್ಯಾಂಕ್ಸ್ ಹೇಳಿದರು.

ಬಹುಷಃ ನಾವಿಬ್ಬರೇ ಇರುವುದರಿಂದ, ನನ್ನ ಸಪ್ತಾಹಕ್ಕೆ ಯಜಮಾನರ ಬೆಂಬಲವೂ ಇದ್ದರಿಂದ ಯಶಸ್ವಿಯಾಯಿತೆಂದು ಅನ್ನಿಸುತ್ತದೆ. ಇಲ್ಲದಿದ್ದರೆ ” ನಿನ್ನ ಸಪ್ತಾಹ ನೀನು ಮಾಡಿಕೋ, ಉಳಿದವರಿಗೆ ಅಡಿಗೆ ಮಾಡು ” ಎಂದಿದ್ದರೆ ನನ್ನ ತೂಕ ಇಳಿಸುವ ಕೆಲಸ ಮೊದಲನೇ ದಿನವೇ ಟುಸ್ ಅನ್ನುತ್ತಿತ್ತೋ ಏನೋ?!

ಲೇಖಕರಿಗೆ ವೈಯುಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸೋಣವೆಂದರೆ ಅವರ ವಿಳಾಸ ನನ್ನಲ್ಲಿಲ್ಲ. ಆದ್ದರಿಂದ ಬರೆದ ಲೇಖಕರಿಗೆ, ಪ್ರಕಟಿಸಿದ ದಟ್ಸ್ ಕನ್ನಡದ ಸಂಪಾದಕರಿಗೆ ಇಲ್ಲಿಂದಲೇ ನನ್ನ ವಂದನೆಗಳು

‍ಲೇಖಕರು avadhi

May 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

  1. Rajani

    Hmmm, nangoo spoorthi sikkante annistide. Naanu haagu akka e bagge serious aagi discuss maadtidivi. Thanks Nilagiri 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: