ಮನ ಬೆಳಗುವ ಹಣತೆ – ಮುಂಬೈ

ಕಲಾ ಭಾಗ್ವತ್

ಯಾರಜೊತೆ ಯಾವಾಗ ಎಲ್ಲಿ  ಹೇಗೆ ಕನೆಕ್ಷನ್ ಆಗುವುದೋ ಎನ್ನುವುದು ಬಹಳ ಸೋಜಿಗದ ವಿಷಯ. ಋಣಾನುಬಂಧ ಎನ್ನುವ ಶಬ್ದದ ಅರಿವು ನನಗಾದದ್ದು ಮಾಯಾನಗರಿ ಮುಂಬಯಿಗೆ ಕಾಲಿಟ್ಟಾಗ. ನಾಲ್ಕು ವರ್ಷ ಕಳೆದ ಮೇಲೆ ವಾಪಸ್ ತಾಯ್ನಾಡಿಗೆ ಬರುವ ಕರಾರಿನ ಮೇಲೆ ಪತಿಯೊಡನೆ ಆಗ ಹೊರಡಲು ಸಿದ್ಧಳಾಗಿದ್ದೆ. ಹೌದು..

“ಮುಂಬೈಲಿ ಇರುವವನಿಗೆ ಮಗಳನ್ನು ಕೊಡುವದಿಲ್ಲ” ಎಂದು ಪದೇ ಪದೇ ಕಿವಿಯ ಮೇಲೆ ಹಾಯುತ್ತಿರುವ ಅಪ್ಪನ ಮಾತುಗಳು ಮೊದಲು ನನ್ನನ್ನು  ಒಪ್ಪದ ಹಾಗೇ ಮಾಡಿದ್ದು ನಿಜ. ಅವರು ಹಾಗೆ ಹೇಳುವುದಕ್ಕೆ ಕಾರಣವೂ ಇತ್ತು ಎನ್ನಿ. ಆಗ ಮುಂಬೈಗೆ ಹೋದವರ  ಮುಖವನ್ನು ಕಾಣುವುದು ವರ್ಷಕ್ಕೆ ಒಮ್ಮೆ ಅಷ್ಟೇ ಆಗಿತ್ತು.

ಅಬ ಶುಭ ವಿಚಾರಿಸಬೇಕೆಂದರೆ ಅಷ್ಟು ದೂರ ಪ್ರಯಾಣ ಮಾಡಿ ಹೋಗುವುದು ಕಷ್ಟಕರ ಎಂಬ ಭಾವನೆ ಕರ್ನಾಟಕದ ಹಳ್ಳಿಯವರಾದ ಅವರಿಗೆ ಇರುವುದು ಸಹಜವೇ. ಆದರೂ ಅನಿವಾರ್ಯತೆಯಿಂದ ಅವರ ಬಾಯಿ ಕಟ್ಟಿತ್ತು. ಕನ್ನಡ, ಇಂಗ್ಲಿಷ್ ಬಿಟ್ಟರೆ ಮುರುಕಲು ಹಿಂದಿ ಭಾಷೆ ನನ್ನದು.

ಮಹಾನಗರಿಗೆ ಬಂದ ಆರಂಭದ ದಿನಗಳಲ್ಲಿ ಜನರೊಡನೆ ನನ್ನ ಮಾತಿಗಿಂತ ಅಭಿನಯವೇ ಹೆಚ್ಚು. ಕೆಲವೊಮ್ಮೆಯಂತೂ  ಮೌನಗೌರಿಯಾಗುತ್ತಿದ್ದೆ. ಮುಂಬೈ ಗೆ ಬರುವ ಮೊದಲು ಸೇವೆಯಲ್ಲಿದ್ದ  ನನಗೆ ಕೆಲಸ ಬಿಟ್ಟು, ಹೊಸ ಜಾಗಕ್ಕೆ ಬಂದು,ಮನೆ ಚಾಕರಿ ಮುಗಿಸಿ ಹರಟುತ್ತಾ ಕುಳಿತುಕೊಳ್ಳಲು ಮನಸ್ಸಾಗಲಿಲ್ಲ. ಅಪ್ಪ ಅಮ್ಮನ ಶಿಕ್ಷಕ ವೃತ್ತಿಯ ಪ್ರಭಾವವೋ ಏನೋ…

ನನ್ನನ್ನು ಮಕ್ಕಳಿಗೆ ಪಾಠ ಹೇಳಲು ಪ್ರೇರೇಪಿಸಿತು. ನಾನಿರುವ ಮಹಾನಗರದ ಪರಿಸರದಲ್ಲಿ ನನಗೆ ಬಹುಭಾಷೀಯ ಜನರೊಡನೆ ಬೆರೆತು ಕೊಳ್ಳಲು ಸಹಾಯಕವಾದದ್ದು ಮನೆಪಾಠ. ಹೊಟ್ಟೆಪಾಡಿಗಾಗಿ ದುಡಿಯುವ ಎಷ್ಟೋ ಶ್ರಮಿಕರ ಮಕ್ಕಳಿಗೆ ಯಾವ ಗಳಿಕೆಯ ಅಪೇಕ್ಷೆ ಇಲ್ಲದೆಯೆ ಪಾಠ ಹೇಳುವುದನ್ನು ನಾನು ರೂಢಿಸಿಕೊಂಡೆ. ಅವರು ತೋರುವ ಸ್ನೇಹ ಪ್ರೀತಿ ವಿಶ್ವಾಸಗಳೇ ನನಗೆ ಗುರುದಕ್ಷಿಣೆ.

ಅವರೊಡನೆ ಕೆಲವು ಸ್ಥಿತಿವಂತರ ಮಕ್ಕಳನ್ನೂ ಸೇರಿಸಿಕೊಂಡೆ. ಆ ಮಕ್ಕಳ ಪಾಲಕರು ಕೊಡುತ್ತಿದ್ದ ಕಾಸು, ಇಲ್ಲದವರ ಮಕ್ಕಳ ಪಠ್ಯ ಪುಸ್ತಕಗಳಿಗೆ ವ್ಯಯವಾಗುತ್ತಿತ್ತು.ಆ ಮುಗ್ಧ ಮಕ್ಕಳ ಸಾಮರಸ್ಯದ ಸ್ನೇಹ ನನಗೆ ಅತ್ಯಂತ ಖುಷಿ ನೀಡಿತು. ಇದಕ್ಕಿಂತ ದೊಡ್ಡ ಗಳಿಕೆಯುಂಟೇ ಅನಿಸಿತು.

ಬೆಳೆದ ಪರಿಸರ, ಕಲಿತ ವಿದ್ಯೆ, ಸರಿಯಾಗಿದ್ದರೆ ಎಂದಿಗೂ ನಮ್ಮ ಸಹಾಯಕ್ಕೆ ಬರುವುದೆಂಬ ಸತ್ಯದ ಅರಿವಾಯಿತು. 

ನಾವು ವಾಸಿಸುವ ಅಪಾರ್ಟಮೆಂಟಿನಲ್ಲಿ

ನಲವತ್ತೆರಡು ಮನೆಗಳು. ಎಲ್ಲರೂ ಬೇರೆ ಬೇರೆ ರಾಜ್ಯ, ಭಾಷೆ, ಸಂಸ್ಕೃತಿಯವರು. ಅದಾವುದೂ ವಿಷಯವಲ್ಲವೆಂಬಂತೇ ಪರಸ್ಪರ ನೋವು ನಲಿವುಗಳಲ್ಲಿ ಭಾಗಿಯಾಗುವ ಸ್ನೇಹಮಯಿಗಳು ಮುಂಬೈ ಜನ.

ಇಲ್ಲಿಯ ಪ್ರಮುಖ ಹಬ್ಬ ಗಣೇಶಚತುರ್ಥಿಯ ಆಚರಣೆ ಒಂದು ಅಪೂರ್ವ ಅನುಭವ ನನಗೆ. ಹೆಚ್ಚಾಗಿ ಎಲ್ಲರ ಮನೆಯಲ್ಲೂ ಗಣೇಶನ ವಿವಿಧ ಭಂಗಿ. ಸಾರ್ವಜನಿಕ ಸ್ಥಳಗಳಲ್ಲಿ  ಕುಳಿತುಕೊಳ್ಳುವ ಗಣಪತಿಯನ್ನು ತಲೆ ಎತ್ತಿ ನೋಡಿದರೆ ಕಾಣುವುದು ಪಾದವೊಂದೇ. ಮಹಾಕಾಯನು ಮಾತನಾಡುವನೋ ಎನಿಸುವಷ್ಟು ಸಹಜತೆ. ಜನರ ಭಕ್ತಿಯ ಪರಾಕಾಷ್ಟೆ, ಬಣ್ಣದೋಕುಳಿ.

ನವರಾತ್ರಿಯಲ್ಲಂತೂ ಮನೆಮನೆಗಳಲ್ಲಿ ಪೂಜೆ, ಭಜನೆಗಳು. ನವ ರಾತ್ರಿ ನವ ವರ್ಣಗಳಲ್ಲಿ ತಮ್ಮನ್ನು ಅಲಂಕರಿಸಿಕೊಂಡು  ನವದುರ್ಗೆಯರ ಎದುರು ಕೋಲಾಟ,ಕ್ರಿಸ್ಮಸ್ ಹಬ್ಬದಲ್ಲಿ ಸಾಂತಾನ ಮೆರವಣಿಗೆ, ಕಾಣಿಕೆ. ಈದ್ ಹಬ್ಬದಲ್ಲಿ ಸಿಹಿತಿಂಡಿ ಹಂಚುವಿಕೆ ಇವೆಲ್ಲವನ್ನೂ ಎಲ್ಲರೂ ಸೇರಿ ಮೊದಲೇ ಯೋಜಿಸಿ ಆಚರಿಸುವ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆಗೆ ಸಾಕಿ ಸಲಹಿ ಯೋಗ್ಯರನ್ನಾಗಿ ಮಾಡಿದ ತವರು, ಪ್ರೀತಿ ಅಕ್ಕರೆಯ ತೋರಿ ಆತ್ಮಸ್ಥೈರ್ಯ ಹೆಚ್ಚಿಸಿದ  ಮನೆಯವರಿಂದ ದೂರವವಿರುವ ನೋವು.

ಪ್ರಯತ್ನ ಪೂರ್ವಕವಾಗಿ ಮನಸ್ಸನ್ನು ಸಮದೂಗಿಸಿಕೊಳ್ಳಲು ರೂಢಿಸಿಕೊಳ್ಳಬೇಕಾಯಿತು.” ಅನೇಕತೆಯಲ್ಲಿ ಏಕತೆ” ಎಂದು ಪಠ್ಯದಲ್ಲಿ ಓದಿದ್ದ ವಿಷಯದ ಮನವರಿಕೆಯಾದದ್ದು ನನಗೆ ಈ ಮಾಯಾನಗರಿಯಲ್ಲಿ.

ಮುಂಬೈ  ನಗರದ ಹೊರಗಿನ ಪ್ರಪಂಚಕ್ಕೆ ಹೋದರೆ ಜೀವನದ ಎಲ್ಲ ಮೆಟ್ಟಿಲುಗಳ ನೈಜ ದೃಶ್ಯ. ತುತ್ತು ಅನ್ನ ಬೊಗಸೆ ನೀರು, ತುಂಡು ಬಟ್ಟೆಗಾಗಿ ಚಡಪಡಿಸುವವರು, ಅನಕ್ಷರಸ್ಥರು, ದಿನ ದೂಡಲು ಎಷ್ಟು ಬೇಕೋ ಅಷ್ಟೇ ಇಟ್ಟುಕೊಂಡು ಮಿತಿಯಲ್ಲಿ ಸಾಗುವವರು, ಇಡಲು ಜಾಗವಿಲ್ಲದೇ ಕೊಡುವ ಮನಸ್ಸಿಲ್ಲದೇ ದುಂದುವೆಚ್ಚ ಮಾಡುವವರು, ಸಮಾಜಮುಖಿಯಾಗಿ ಸಾಗುವವರು ಹತ್ತು ಹಲವಾರು ಬಗೆಯವರು. 

ರಸ್ತೆಯ ಇಕ್ಕೆಲಗಳಲ್ಲಿ  ಸೂಪರ್ ಮಾರ್ಕೆಟ್ಟು, ಬಟ್ಟೆ ಮಳಿಗೆಗಳು, ಫ್ಯಾನ್ಸಿ ಸ್ಟೋರ್ಸ್ ಗಳು, ಇತ್ಯಾದಿ ಹವಾನಿಯಂತ್ರಿತ ಅಂಗಡಿಗಳ ಗಲ್ಲಾಪೆಟ್ಟಿಗೆಯಲ್ಲಿ ಕುಳಿತು ಹೊಸ ಹೊಸ ನೋಟುಗಳನ್ನು ಎಣಿಸುತ್ತಾ ಕುಳಿತಿರುವ ಮಾಲಿಕರ ಗತ್ತು ಗಮ್ಮತ್ತು. ಅಲ್ಲೇ ಬದಿಯ ಫುಟ್ ಪಾತ್ ಗಳಲ್ಲಿ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಗಟ್ಟಿ ಮುಟ್ಟಾಗಿಸಿ, ಘಮ್ಮೆನ್ನುವ ಸುಗಂಧವನ್ನು ಸಿಂಪಡಿಸಿ ‘ ಕೇವಲ ನೂರು ರೂಪಾಯಿ’ ಎಂದು ಕೂಗಿ ಗಿರಾಕಿಗಳನ್ನು ಕರೆಯುವ ವ್ಯಾಪಾರಿಗಳು, ಕೊಂಡ ಬಟ್ಟೆಗಳನ್ನು ಮೈ ಅಳತೆಗೆ ತಕ್ಕಂತೆ ಐದು ನಿಮಿಷದಲ್ಲಿ ಗರ್ರ್ರನೆ ಮಿಷನ್ ಒತ್ತಿ ಹೊಂದಿಸಿಕೊಟ್ಟು ಖುಷಿಪಡಿಸುವ ಹೊಲಿಗೆ ಮಾಸ್ಟರ್ ಗಳು, ಬದಲಿ ಚಾವಿಗಳನ್ನು ಮಾಡಿಕೊಡುವ ಭಯ್ಯಾ, ಇಂತಹ ಅನೇಕರು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಿರುವುದಂತೂ ಸತ್ಯ.

ಎಲ್ಲ ವರ್ಗದವರ ಹಸಿವು ತಣಿಸುವ, ನಾಲಿಗೆಯ ಗ್ರಂಥಿಗಳನ್ನು ಚುರುಕುಗೊಳಿಸುವ ವಡಾಪಾವ್, ಮಿಸಲ್ ಪಾವ್, ಸಮೋಸ, ಪಾನಿಪುರಿಯಂತಹ ತಿನಿಸುಗಳ ಅಂಗಡಿಗಳು ಮುಂಬೈನ ವಿಶೇಷತೆ.  

ನಡುರಾತ್ರಿಯಲ್ಲೂ ಹಗಲೆಂಬಂತೆ ಅನಿಸುವ ಮುಂಬೈ ನಿದ್ರಿಸದ ಕ್ರಿಯಾಶೀಲ ನಗರ. 

ಬೆಳಗಾಯಿತೆಂದರೆ ಮತ್ತದೇ ವ್ಯಸ್ತ ಜೀವನ. ಒಂದು ಕೈಯಲ್ಲಿ ಬ್ಯಾಗ್ ಹಿಡಿದು ಇನ್ನೊಂದು ಕೈಯಲ್ಲಿ ಸೇಬುಹಣ್ಣನ್ನು ತಿನ್ನುತ್ತಾ ಮುಗುಳು ನಗೆಬೀರಿ ಲೋಕಲ್ ಟ್ರೈನ್ ಹಿಡಿದು ಕೆಲಸಕ್ಕೆ ಹೋಗುವವರ ಧಾವಂತ. ವಿಶೇಷವೆಂದರೆ ಕೆಲಸ ಮುಗಿಸಿ ಬರುವಾಗಲೂ ಅದೇ ಚೈತನ್ಯ ಅವರ ಮುಖದಲ್ಲಿ ಕಾಣುವುದು.

ಟ್ರೈನಿನ ಮಹಿಳಾ ಬೋಗಿಯ ಜನಜಂಗುಳಿಯ ನೂಕುನುಗ್ಗಲಿನಲ್ಲಿ ಅಜ್ಜಿ, ಒಂದು ಕೈಯಲ್ಲಿ ಮೀನು ಬುಟ್ಟಿ ಹಿಡಿದು ಬಗಲಿಗೆ ಮೊಮ್ಮಗಳ ಭಾರದ ಬ್ಯಾಗ್ ಹಾಕಿ ಕೈ ಹಿಡಿದು ಜೋಪಾನವಾಗಿ ಅವಳನ್ನು ಟ್ರೈನ್ ಹತ್ತಿಸುವ ಸಾಹಸ ದಿನವೂ ಕಾಣುವಂಥದ್ದು. ಅವಳನ್ನು ಶಾಲೆಗೆ ತಲುಪಿಸಿ ತನ್ನ ವ್ಯಾಪಾರಕ್ಕೆ ಕುಳಿತುಕೊಳ್ಳುವ ಅವಳು ಮೊಮ್ಮಗಳ ತರಗತಿ ಮುಗಿಯುವ ತನಕ ವ್ಯಾಪಾರ ಮಾಡಿ, ಅವಳನ್ನು ಶಾಲೆಯಿಂದ ಕರೆದುಕೊಂಡು ಬರುವಳು.

ಇಳಿ ವಯಸ್ಸಿನಲ್ಲೂ ತನ್ನ ದುಡಿಮೆ ಮೊಮ್ಮಗಳ ಪಠ್ಯಪುಸ್ತಕಕ್ಕಾದರೂ ಆದೀತು ಎನ್ನುವ ಮನೋಭಾವದ ಇಂತಹ ತಾಯಿಯ ಮಮತೆಗೆ, ಛಲಕ್ಕೆ ನಮೋ ಎನ್ನಬೇಕು. ಭೋಗಿಯೊಳಗೆ ಕಿತ್ತಳೆ ತುಂಬಿದ ಪ್ಲಾಸ್ಟಿಕ್ ಅನ್ನು ಕುಳಿತವರ ಕೈಯಲ್ಲಿ ಜಬರದಸ್ತಿ ಹಿಡಿಸಿ ಹಣ ಪಡೆಯುವ ಇವಳಷ್ಟೇ ವಯಸ್ಸಿನ ಹೆಣ್ಣು ಮಗು ಓರೆಗಣ್ಣಲ್ಲಿ ನಖದಿಂದ ಶಿಖದವರೆಗೆ ಅಜ್ಜಿಯ ಜೊತೆಗಿರುವ ಇವಳನ್ನುನೋಡುವಾಗ ಅವಳಿಗೂ ಇಂತಹ ಅಜ್ಜಿ ಇದ್ದಿದ್ದರೆ ಎಂದು ಅನ್ನಿಸದಿರದು.

ಕುತ್ತಿಗೆಗೆ ಚಿನ್ನದ ಸರಪಳಿ ಹಾಕಿಕೊಂಡು ಎ.ಸಿ ರೂಮಿನಲ್ಲಿ ಕಾಫಿ ಹೀರುವವರು ಹಾಗೂ ತಿಂಗಳಿಗೊಮ್ಮೆ ಐದು ಆರು ತಾಸು ಬ್ಯೂಟಿ ಪಾರ್ಲರ್ ನಲ್ಲಿ ಸಮಯ ಕಳೆದು, ಹಣ ಸುರಿದು ಬರುವವರದ್ದು ಇನ್ನೊಂದು ಬಗೆಯ ಜೀವನ. 

ನಗರದ ಸಿಗ್ನಲ್ ಗಳಲ್ಲಂತೂ, ಕಂಕುಳಲ್ಲಿ ಒಂದು, ಜೋಳಿಗೆಯಲ್ಲಿ ಇನ್ನೊಂದು ಮಗುವನ್ನು ಇಟ್ಟುಕೊಂಡು ಕಾರಿನ ಗಾಜಿಗೆ ಬಡಿದು ‘ನೀಡಿ’ ಎಂದು ಗೋಗರೆಯುವಾಗ, ಆಗಷ್ಟೇ ಕಾಲು ಗಟ್ಟಿಯಾಗಿರುವ ಪುಟ್ಟ ಮಗು ‘ದೀದೀ’ ಎಂದು ಕೈ ಚಾಚುವಾಗ ಕರುಳು ಚುರ್ ಎನ್ನುವುದು. ಆ ಪುಟ್ಟ ಮಕ್ಕಳಿಗೆ ಶ್ರೀಮಂತರ ಮಕ್ಕಳು ಬಿಟ್ಟ ಶಾಲೆಯ ಸಮವಸ್ತ್ರದ ಅಂಗಿಯನ್ನಷ್ಟೇ ಧರಿಸುವುದು ಗೊತ್ತು.

ಶಿಕ್ಷಣವೆಂಬುದನ್ನು ತಲೆತಲಾಂತರದಿಂದ ಕಾಣದಿರುವ ಕುಟುಂಬದವರು ಅವರು. ಅವರನ್ನು ತಂದು ಕೂರಿಸಿ ಅಕ್ಷರವನ್ನು ಕಲಿಸುವುದಾದರೂ ಹೇಗೆ? ನಗರ ಪಾಲಿಕೆಯವರು ಅವರಿಗೆಂದೇ ಉಚಿತ ಶಾಲೆಯನ್ನು ತೆರೆದರೆ! ಹೃದಯ ವೈಶಾಲ್ಯವಿರುವ ಶಿಕ್ಷಕರು ನಿರಪೇಕ್ಷರಾಗಿ ಮಮತೆಯಿಂದ ಆ ಮಕ್ಕಳಿಗೆ ಕಲಿಸಿದರೆ! ಇವೆಲ್ಲ ವಿಚಾರಗಳು ನನ್ನ ಮನದ ಪಟಲದಲ್ಲಿ ಸದಾ ಸುಳಿದಾಡುತ್ತಲೇ ಇರುತ್ತವೆ. ‘ಇದೊಂದು ಪರಿಹಾರವಿಲ್ಲದ ಸಮಸ್ಯೆ ಎನ್ನಬೇಕೇ?

ಮುಂಬಯಿಯ ಹವಾಮಾನವು ಎಲ್ಲರಿಗೂ ಒಗ್ಗುವಂತದ್ದು. ಹೈಫೈ ಜೀವನಕ್ಕೆ ಒಗ್ಗಿಕೊಂಡು ಕೋಣೆಗೊಂದು ಏರ್ ಕಂಡಿಶನರ್ ಹಾಕಿಸುವ ಜನರಿಂದ ಹಿಡಿದು, ಜೋಪಡಿಯ ಒಂದೇ ಕೋಣೆಯಲ್ಲಿ ಎಲ್ಲವನ್ನೂ ನಿಭಾಯಿಸುವ ಜನರೂ ಇದ್ದಾರೆ. ವಿದ್ಯುತ್ ಕಡಿತವಂತೂ ಇಲ್ಲವೇ ಇಲ್ಲ ಎನ್ನಬಹುದು.

ಮೋಸ, ವಂಚನೆ ಕಳ್ಳತನ ಅವ್ಯವಹಾರಗಳೂ ಮುಂಬಯಿಯಲ್ಲಿ ಕಡಿಮೆಯೇನಿಲ್ಲ. ಇವೆಲ್ಲವೂ ಇಡೀ ದೇಶದ ಸಮಸ್ಯೆಯಾಗಿರುವುದರಿಂದ ಎಲ್ಲೆಡೆಗಳಿಂದ ವಲಸೆ ಬರುವ ಜನಜಂಗುಳಿಯಿಂದ ತುಂಬಿರುವ ದ್ವೀಪನಗರಿಯಲ್ಲಿ ಮಾತ್ರ ಹೀಗೆ ಎನ್ನುವುದರಲ್ಲಿ ತಿರುಳಿಲ್ಲ ಅಲ್ಲವೇ?

ವಾಣಿಜ್ಯ ನಗರಿಯಲ್ಲಿ ರಮಣೀಯ, ನೈಸರ್ಗಿಕ, ಐತಿಹಾಸಿಕ, ಧಾರ್ಮಿಕ ಸ್ಥಳಗಳು ಸಾಕಷ್ಟಿವೆ. ಜಗತ್ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿವೆ. ಬಾಲಿವುಡ್ ಚಿತ್ರೋದ್ಯಮವಿದೆ. ವಿಧ ವಿಧವಾದ ಹೊಸ ವಿನ್ಯಾಸದ ಬಟ್ಟೆ-ಬರೆ ಗಳು ಮೊದಲು ಬರುವುದು ಮುಂಬೈನ ಮಾರುಕಟ್ಟೆಗೆ.

ನೀರಿನಲ್ಲಿ ತೇಲಿ ಬಿಟ್ಟ ಹಣತೆಯಂತೆ ಕಂಗೊಳಿಸುವ, ವೈವಿಧ್ಯಮಯವಾದ ಜನಜೀವನವನ್ನು ಹೊಂದಿರುವ, ಎಷ್ಟೋ ಕೋಟಿಗಟ್ಟಲೆ ಜನರಿಗೆ ಆಸರೆ ನೀಡಿ ಸಲಹುವ ಮುಂಬೈ ನಗರಕ್ಕೆ ಬಂದ ನನಗೆ ನಾಲ್ಕು ವರ್ಷಗಳ ನಂತರ ವಾಪಸ್ಸಾಗುವ ಮಾತು ಮರೆತುಹೋಗಿತ್ತು. ಜೀವನದ ಪಾಠ ಕಲಿಸಿತ್ತು.

ತಾಯ್ನಾಡಿನ ಬಂಧುಗಳನ್ನು ಆಗಾಗ ಆವ್ಹಾನಿಸಿ ,ಉಪಚರಿಸಿ, ಸಂಭ್ರಮಿಸುವ ಕಲೆಯೇ ಮುಂದೆ ನನಗೆ ಕರಗತವಾಯಿತು. ‘ಆಮ್ಚಿ ಮುಂಬೈ’ ಎನ್ನುವ ಉದ್ಗಾರ ಊರಿಗೆ ಹೋದರೂ ಬಾಯಿಂದ ಹೊರ ಬರುವಂತಾಗಿತ್ತು.’ಯೇ ಹೈ ಮುಂಬೈ ಮೇರಿ ಜಾನ್’ಎನ್ನುವ ಚಿತ್ರಗೀತೆ ಆಪ್ತವಾಯಿತು.

ಕಲಾ ಭಾಗ್ವತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ದವರು. ಪ್ರಸ್ತುತ ಮುಂಬೈ ನಿವಾಸಿ. ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಎಂ.ಎ ಅಧ್ಯಯನ ನಿರತರಾಗಿರುವ ಇವರ ಲೇಖನ, ಪ್ರಬಂಧ,ಕಥೆ, ಕವನಗಳು ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿವೆ.ಲೇಖನಗಳಿಗೆ ಬಹುಮಾನವೂ ದೊರೆತಿದೆ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು...

3 ಪ್ರತಿಕ್ರಿಯೆಗಳು

  1. Shyamala Madhav

    ನಮ್ಮ ಪ್ರಿಯ ಮುಂಬೈಯನ್ನು ಬಲು ಆಪ್ತವಾಗಿಯೇ ತೆರೆದು ತೋರಿಸಿದ್ದೀರಿ, ಕಲಾ.‌ ನೀವು ತೆರೆಮರೆಯಲ್ಲಿಟ್ಟ ಈ ವಿದ್ಯಾಪ್ರಸಾರ ಸೇವೆಯ ಬಗ್ಗೆ ತಿಳಿದಿರಲಿಲ್ಲ. ಅಭಿನಂದನೆಗಳು, ಕಲಾ.

    ಪ್ರತಿಕ್ರಿಯೆ
  2. Ahalya Ballal

    ಚೆನ್ನಾಗಿದೆ ಅನುಭವ. ಓದಿ ಖುಶಿಪಟ್ಟೆ, ಕಲಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: