ಮರದೊಳಡಗಿದ ಬೆ೦ಕಿಯ೦ತೆ ….

ಹೊತ್ತಿಕೊಂಡ ಬೆಳಕು ಮತ್ತು ಬೆಂಕಿ

– ಭಾರತಿದೇವಿ. ಪಿ

ಮರಕ್ಕೆ ಮರ ಮಥನಿಸಿದಾಗ ಹುಟ್ಟುವ ಕಿಡಿ ಬದುಕನ್ನು ಬೆಳಗಬೇಕಾದದ್ದು. ಆದರೆ ಅದೇ ಕಿಡಿಗೆ ಅಸಹನೆಯ ಗಾಳಿ ಊದಿ ವಿಷದ ಜ್ವಾಲೆಯಾಗಿ ಹಬ್ಬುವಂತೆ ಮಾಡುವ ಫ್ಯಾಸಿಸ್ಟ್ ಶಕ್ತಿಗಳಿರುವಾಗ ಬೆಳಕೂ ಬೆಳಗಲು ಹಿಂಜರಿಯುತ್ತದೆ. ತಾನು ಅನುಮಾನಿತ ಸತ್ಯವನ್ನು ಮುಂದಿಡುತ್ತಿದ್ದೇನೆ ಎಂಬ ನಮ್ರತೆಯಿಂದ ಬಂಜಗೆರೆ ಜಯಪ್ರಕಾಶ್ ಅವರು ಹೊರತಂದ ’ಆನುದೇವಾ ಹೊರಗಣವನು’ ವಾಗ್ವಾದಗಳಿಗೆ ಬದಲಾಗಿ ವಾದವಿವಾದಗಳಿಗೆ ಕಾರಣವಾಯಿತು. ಪ್ರಜಾಪ್ರಭುತ್ವಕ್ಕೆ ಅವಹೇಳನ ಮಾಡುವ ರೀತಿಯಲ್ಲಿ ಬಹುಸಂಖ್ಯೆಯ ಜನ ಬಸವಣ್ಣ ಮಾದಿಗನಿರಬಹುದೇ ಎಂಬ ಪ್ರಶ್ನೆಯನ್ನು ಎದುರಿಸುವಷ್ಟೂ ಸಹ್ಯಭಾವ ತೋರದೇ ಹೋದರು. ಇವರ ವಾದವನ್ನು ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ಮುಖಾಮುಖಿಯಾಗುವ ಬದಲಿಗೆ ವಿಚಾರಶೂನ್ಯ ಆವೇಶದ ನಡವಳಿಕೆಗಳು ಕಂಡುಬಂದವು. ಅಂತಿಮವಾಗಿ ಬಂಜಗೆರೆಯವರು ಕೃತಿಯನ್ನು ಹಿಂತೆಗೆದುಕೊಂಡರು. ಮರುದಿನವೇ ಕೃತಿಯನ್ನು ಸರ್ಕಾರ ನಿಷೇಧಿಸಿತು. ಈ ಕೃತಿ ಈಗ ಅಲಭ್ಯವಾಗಿದ್ದರೂ ಆಗಿನ ಸಂದರ್ಭದಲ್ಲಿ ನಡೆದ ವಾದವಿವಾದ ವಾಗ್ವಾದಗಳನ್ನು ’ಮರಕ್ಕೆ ಮರ ಮಥನಿಸಿ’ ಎಂಬ ಪುಸ್ತಕದ ರೂಪದಲ್ಲಿ ದಾಖಲಿಸುವ ಚಾರಿತ್ರಿಕವಾಗಿ ಮಹತ್ವಪೂರ್ಣ ಕೆಲಸವನ್ನು ಪ್ರೊ.ಶಿವರಾಮಯ್ಯ ಮತ್ತು ಆರ್.ಸುಧೀಂದ್ರ ಕುಮಾರ್ ಮಾಡಿದ್ದಾರೆ. ಸ್ವಾತಂತ್ರ್ಯ ದೊರೆತ ಆರಂಭದ ವರ್ಷಗಳಿಂದ ಹಿಡಿದು ಜಾತಿ ವಿನಾಶದ ದಿಕ್ಕಿನಲ್ಲಿ ಯಾವೆಲ್ಲ ಬಗೆಯ ಪ್ರಯತ್ನಗಳು ನಡೆದರೂ ಜಾತಿ ಬೇರೆ ಬೇರೆ ಬಗೆಯಲ್ಲಿ, ರೂಪದಲ್ಲಿ ನಮ್ಮ ನಡುವೆ ಇದೆ. ಆಧುನಿಕತೆಗೆ ತೆರೆದುಕೊಳ್ಳುತ್ತಾ ಮುಂದುವರಿಯುತ್ತಿವೆ ಎಂದು ಭಾವಿಸಲಾದ ಸಮುದಾಯಗಳು ಯಾವ ಯಾವ ಬಗೆಯಲ್ಲಿ ಜಾತಿಯನ್ನು ತಮ್ಮ ಅಸ್ಮಿತೆಯಾಗಿ ಸ್ಥಾಪಿಸಿಕೊಳ್ಳಬಯಸುತ್ತಿವೆ ಎಂಬುದು ಸಮಾಜಶಾಸ್ತ್ರೀಯ ನೆಲೆಯಿಂದ ಅತ್ಯಂತ ಕುತೂಹಲಕಾರಿ. ಇಡೀ ಪುಸ್ತಕದಲ್ಲಿನ ಬರೆಹಗಳನ್ನು ಗಮನಿಸಿದರೆ ಎರಡು ಅಂಶಗಳು ಗೋಚರಿಸುತ್ತವೆ. ಲಿಂಗಾಯತ ಸಮುದಾಯದವರು ಬಸವಣ್ಣನನ್ನು ತಮ್ಮ ಅರಿವಿನ ಭಾಗವಾಗಿ ಮಾಡಿಕೊಂಡದ್ದಕ್ಕಿಂತ ಕುರುಹಾಗಿ ಬಳಸಿಕೊಂಡರು ಎಂಬುದು. ಆ ನೆಲೆಯಲ್ಲಿ ಮಾತೆ ಮಹಾದೇವಿ, ದಯಾನಂದ ಸ್ವಾಮಿ, ಭೀಮಣ್ಣ ಖಂಡ್ರೆ ಮುಂತಾದವರ ಆಕ್ರೋಶದ ಮಾತುಗಳು ಬಸವಣ್ಣನ ಹೆಸರು ಬಳಸಿ ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಕಡೆಗಿವೆ. ಅದೇ ಬಂಜಗೆರೆಯವರ ’ಅನುಮಾನಿತ ಸತ್ಯ’ ಅದು ಸತ್ಯವೇ ಆಗಿದ್ದಲ್ಲಿ ’ಶೋಷಿತ ನೆಲೆಗಳ ಕೀಳರಿಮೆ ಅಳಿದು ಅವುಗಳಿಗೆ ಆತ್ಮಗೌರವ, ಘನತೆಗಳು ಪ್ರಾಪ್ತವಾಗಬಹುದು’ ಎಂದು ಭಾವಿಸುವವರು, ಹಾರೈಸುವವರು ಇನ್ನೊಂದು ಕಡೆಗಿದ್ದಾರೆ. ಇದು ಎರಡು ಸಮುದಾಯಗಳ ಮಾತಾದರೆ ವಿದ್ವತ್ ವರ್ಗ ಬಹುತೇಕ ಈ ಇಡೀ ವಾದ ವಿವಾದದ ಹಿಂದೆ ಕೆಲಸ ಮಾಡುತ್ತಿರುವ ಮನಸ್ಥಿತಿ ಎಂಥದ್ದು ಎಂಬ ಜಿಜ್ಞಾಸೆಗೆ ತೊಡಗಿದೆ. ಬಂಜಗೆರೆಯವರ ವಾದ ಬಸವಣ್ಣನವರಿಗೆ ಅಪಚಾರ ಮಾಡುವಂಥದ್ದು ಎಂಬವರ ವಾದವನ್ನು ಇವರು ಒಪ್ಪುವುದಿಲ್ಲ. ಹಾಗೆಯೇ ಬಂಜಗೆರೆಯವರ ಸಂಶೋಧನೆ ಪ್ರಶ್ನಾತೀತವಾದುದೂ ಅಲ್ಲ. ಆದರೆ ಕೃತಿಯೊಂದು ಹೊಸ ವಿಚಾರ ಮಂಡಿಸುವಾಗ ಅದಕ್ಕೆ ತೆರೆದುಕೊಂಡು ಸಂವಾದ ನಡೆಸಿ ಸರಿಯೆನಿಸದಿದ್ದಲ್ಲಿ ಸಾಧಾರವಾಗಿ ನಿರೂಪಿಸುವ ದಾರಿಯಲ್ಲಿ ಸಾಗಬೇಕಲ್ಲದೆ ನಿಷೇಧ ಮುಂತಾದ ಪರಿಭಾಷೆ ಸರಿ ಇಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ. ಇಷ್ಟೆಲ್ಲ ನಡೆದ ಬಳಿಕ ಸಂಶೋಧಕ ಬಂಜಗೆರೆಯವರ ಬಳಿ ಕೇಳಬೇಕೆನಿಸಿದ ಒಂದು ಪ್ರಶ್ನೆ ಹಾಗೇ ಇದೆ. ಹೊಸ ವಿವಾದ ಸೃಷ್ಟಿಸಲೆಂದಾಗಲೀ ಅಥವಾ ಪ್ರಚಾರ ಸಿಗಲಿ ಎಂದು ಅವರು ಈ ವಿಚಾರ ಮಂಡಿಸಿಲ್ಲ ಎಂಬುದು ಅವರನ್ನು ಬಲ್ಲ ಎಲ್ಲರಿಗೂ ತಿಳಿದಿದೆ. ಆದರೆ ಧರ್ಮಕಾರಣ, ಮಹಾಚೈತ್ರ ಕೃತಿಗಳಿಗೊದಗಿದ ಸ್ಥಿತಿ ಕಣ್ಣೆದುರಿಗಿರುವಾಗ ಈ ಕೃತಿ ವಾದವಿವಾದಗಳಿಗೆ ಕಾರಣವಾಗಬಹುದು ಎಂಬ ಗ್ರಹಿಕೆ ಅವರಿಗಿರಲಿಲ್ಲ ಎನ್ನಬಹುದೇ? ಅಥವಾ ಸತ್ಯಶೋಧಕನೊಬ್ಬ ಅನಿವಾರ್ಯವಾಗಿ ಒಳಗೊಳ್ಳಲೇಬೇಕಾದ ಸತ್ವಪರೀಕ್ಷೆ ಇದು ಎಂದು ತಿಳಿದು ಅವರು ವಿಚಾರ ಮಂಡಿಸಿದರೇ? ನಂತರದ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಈ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವಾಗುವುದಿಲ್ಲ. ನಾನು ಈ ಪ್ರಶ್ನೆಯನ್ನು ಎತ್ತಿಕೊಳ್ಳುತ್ತಿರುವುದು, ಅವರು ತಾವಾಗಿಯೇ ಅನುಮಾನಿತ ಸತ್ಯ ಎಂದು ಕರೆದುಕೊಳ್ಳುತ್ತಿರುವುದನ್ನು ಇನ್ನಷ್ಟು ಆಳವಾದ ಸಂಶೋಧನೆ, ಹೆಚ್ಚಿನ ಆಧಾರಗಳೊಂದಿಗೆ ಪ್ರಕಟಪಡಿಸಬಹುದಾಗಿತ್ತು ಎಂಬ ಕೆ.ವಿ.ನಾರಾಯಣ ಅವರ ಮಾತಿನ ಹಿನ್ನೆಲೆಯಲ್ಲಿ. ಹೀಗಾಗಿದ್ದರೆ ಅವರು ಹೊತ್ತಿಸಬಯಸುವ ಕಿಡಿ ಅಸಹನೆಯ ಬಿರುಗಾಳಿಗೆ ಸಿಕ್ಕಿ ಜ್ವಾಲೆಯಾಗುವುದನ್ನು ಆಧಾರಗಳ ಆವರಣದ ಮೂಲಕ ತಪ್ಪಿಸಬಹುದಿತ್ತು. ಕೃತಿಯ ಪುಟಗಳಿಂದ “… ಕೃತಿಯ ಮೇಲೆ ಓದಿ ಪ್ರತಿಕ್ರಿಯೆ ನೀಡಿದ್ದಕ್ಕಿಂತ ಕೃತಿಕಾರರನ್ನೇ ಮುಂದಿರಿಸಿಕೊಂಡು ಹುಟ್ಟಿದ ವಾಗ್ವಾದ, ಪ್ರತಿಕ್ರಿಯೆಗಳೇ ಹೆಚ್ಚು ಬಂದವು. ಈ ಧೋರಣೆಯಿಂದಾಗಿ ಕೃತಿಯನ್ನು ಸ್ವೀಕರಿಸುವ ಇಲ್ಲವೇ ನಿರಾಕರಿಸುವ ಪ್ರಕ್ರಿಯೆ ಮಾತ್ರ ಸಾಧ್ಯವಾಯಿತು. ಅಂತಹ ಬರಹಗಳು ಈ ಸಂಕಲನದಲ್ಲಿವೆ. ಹೀಗಿದ್ದೂ ಆನುದೇವಾ ಹೊರಗಣವನು ಒಡಲಲ್ಲಿನ ಹಲವು ಸಿಕ್ಕುಗಳ ಬಗೆಗೆ, ಸಾಧ್ಯತೆಯ ಬಗೆಗೆ, ಭಿನ್ನ ಶೋಧದ ಬಗೆಗೆ ನಮ್ಮ ನಾಡಿನ ವಿದ್ವಾಂಸರು ಶಾಂತ ಮನಸ್ಸಿನಿಂದ ಚರ್ಚಿಸಿರುವ, ಪ್ರಶ್ನಿಸಿರುವ ಬರಹಗಳೂ ಇಲ್ಲಿವೆ…” ಕೃತಿ : ಮರಕ್ಕೆ ಮರ ಮಥನಿಸಿ ಸಂಪಾದಕರು : ಪ್ರೊ.ಶಿವರಾಮಯ್ಯ, ಆರ್.ಸುಧೀಂದ್ರಕುಮಾರ್ ಪ್ರಕಾಶಕರು : ಧಾತ್ರಿ ಪುಸ್ತಕ, ಬೆಂಗಳೂರು ಪುಟಗಳು : ೩೩೨ ಬೆಲೆ : ರೂ. ೨೦೦ ಕೃಪೆ : ದ ಸ೦ಡೆ ಟೈಮ್ಸ್]]>

‍ಲೇಖಕರು G

April 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This