ಮರಳಿ ಬಾರನೆ ಮತ್ತೆ ಚಂದಮಾಮ

ಕ್ಯಾಲಿಫೋರ್ನಿಯಾದ ಶಾಂತಲಾ ಬಂಡಿ ತಮ್ಮ ಬ್ಲಾಗ್ ಮೂಲಕ ಪ್ರತಿಯೊಬ್ಬರಿಗೂ ಚಿರಪರಿಚಿತ. ‘ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತದೆ’ ಎಂದು ತಮ್ಮನ್ನು ಪರಿಚಯಿಸಿಕೊಳ್ಳುವ ಶಾಂತಲಾ ತಮ್ಮ ಲಹರಿಯೊಂದನ್ನು ಪ್ರೀತಿಯಿಂದ ‘ಅವಧಿ’ಗೆ ಕಳಿಸಿಕೊಟ್ಟಿದ್ದಾರೆ.
ಶಾಂತಲಾ ಅವರಿಗೆ ಥ್ಯಾಂಕ್ಸ್ ಹೇಳುತ್ತಾ ಆ ಲಹರಿಗೆ ಬಾಗಿಲು ತೆರೆಯುತ್ತಿದ್ದೇವೆ.

ಶಾಂತಲಾ ಭಂಡಿ

 

 

 

ಕತ್ತಲೆಯ ಕಾನಂತೆ ಕಾಣಿಸುತ್ತಿದ್ದ ಮನೆಯ ಮುಂದಿನ ಅಂಗಳದಲ್ಲಿ ಕುಳಿತಿದ್ದೆ. ಪಕ್ಕದಲ್ಲಿ ಮಳೆಗಾಲದಲ್ಲಿ ಹಸಿರಾಗಿ ಹಬ್ಬಿದ್ದ ಸೌತೆಬಳ್ಳಿ ಬಿಸಿಲಿಗೆ ಅರ್ಧಂಬರ್ಧ ಒಣಗಿ, ಯಾವತ್ತಿನಂತೆ ಝರಿಸೀರೆಯ ಅಂಚಿನಂತೆ ಕಾಣಿಸದೇ, ಚಪ್ಪರದ ನಡುನಡುವೆ ಏದುಸಿರು ಬಿಡುತ್ತಿರುವಂತೆ ಅನಿಸುತ್ತಿತ್ತು. ಬೆಳಗ್ಗಿನ ಬಂಗಾರದ ಬಿಸಿಲಿಗೆ ಸೌತೆಕಾಯಿಯೊಂದು ಹಳದಿಯ ಹಣ್ಣಾಗಿ ಈಗಲೋ ಆಗಲೋ ಬೀಳುವಂತೆ ನೋವಾಗದಂತೆ ನವಿರಾಗಿ ನೇತಾಡುತ್ತಿತ್ತು. ಬೆಳಕೂ ತೀರ ಮಸುಕು,ಮನಸ್ಸಿಗೆ ಬಿದ್ದ ಕರಿಪರದೆಯ ಮುಸುಕಿನಂತೆ. ಇಷ್ಟುದ್ದ ಶ್ವಾಸ ಬಿಟ್ಟು, ತಟ್ಟನೆ ಮೇಲಕ್ಕೆ ನೋಡಿದರೆ ಅಷ್ಟಗಲ ಆಕಾಶ! ಇಷ್ಟೇ ಇಷ್ಟು ಚೂಪನೆಯ ಚಂದ್ರ. ಇನ್ನೊಮ್ಮೆ ನೋಡಲು ಯಾಕೋ ಇಷ್ಟ ಆಗಲಿಲ್ಲ. ಕತ್ತಲೆಯ ದೊಡ್ಡ ಹಜಾರದಲ್ಲಿಟ್ಟು ಸುಟ್ಟುಹೋಗುತ್ತಿದ್ದ ಪುಟ್ಟ ಮೇಣದಬತ್ತಿಯ ಹಾಗಿದ್ದ ಚಂದ್ರ. ಇವತ್ತಿನ ಮಸಿ ಹಿಡಿದ ಲಾಟೀನ್ ಹಾಗಿದ್ದ ಮನಸ್ಸಿಗೆ ಅದೆಲ್ಲ ಚಂದವೇ ಕಾಣದು. ತಟ್ಟನೇ ‘ಫಟಾರ್’ ಎಂದು ಬಡಿದು ಮೊಂಬತ್ತಿ ಆರಿಸುವಂತೆ, ಚಂದ್ರನನ್ನೂ ಆರಿಸಿ, ಪೂರ್ತಿ ಕತ್ತಲಲ್ಲಿ ಕೂತು, ಮನಸ್ಸನ್ನು ಅಲ್ಲೇ ಸೌತೆಚಪ್ಪರದ ಅಡಿಯಲ್ಲಿ ಹೂತು ಬಿಡಬೇಕು ಅನಿಸಿತ್ತು. 
ಅಲ್ಲಾ…? ಅವನ ಕನಸುಗಳನ್ನು ನಾನು ಕೊಂದಿದ್ದಾ? ಒಂದಿಷ್ಟು ಕನಸುಗಳನ್ನು ಕಂಡು ನನ್ನ ಕೈಯಲ್ಲಿ ತುರುಕಿ ಹೋದವ ಸಿಕ್ಕಿದ್ದು ನಿನ್ನೆ ಬೆಳಿಗ್ಗೆ! ನಾನಾದರೂ ಯಾಕೆ ಅವನ ಕನಸುಗಳನ್ನು ಹೊರಬೇಕಿತ್ತು? ನೆನಪುಗಳನ್ನೇ ಹೊರಲಾರದೇ ಹೊತ್ತು ಹೊತ್ತು ಹೈರಾಣಾಗಿದ್ದೇನೆ! “ನೆನಪುಗಳನ್ನೆಲ್ಲಾ ಹೊತ್ತು ನಡೆದ್ರೆ ಭಾರ ಜಾಸ್ತಿ ಬಿಟ್ರೆ….ಉಪಯೋಗ ಇಲ್ಲ,ನೆನಪಿನ ಛಿಂದಿನೆಲ್ಲ ಆಚೆ ಬಿಸಾಕಿ, ಒಂದಿಷ್ಟು ಕನಸು ನೋಡು,ಎಷ್ಟು ಚಂದ” ಅಂದುಬಿಟ್ಟನಲ್ಲ! ಆವತ್ತೇ ಅವನ ಕನಸುಗಳನ್ನೆಲ್ಲಾ ಅಲ್ಲೇ ಬೇಲಿಯಾಚೆಗಿನ ಕೆಳಗಿನ ಹರಿಯುವ ಹಳ್ಳಕ್ಕೆ ಸುರಿದು ಬಂದಿದ್ದರೆ, ಇವತ್ತು ಅವನಿಂದ ಅನಿಸಿಕೊಳ್ಳುವುದು ಇರುತ್ತಲೇ ಇರಲಿಲ್ಲ ಎನಿಸಿದ್ದು ಆ ಕ್ಷಣಕ್ಕೆ ಮಾತ್ರ. “ಇದೆಲ್ಲ ನಾ ಕಂಡ ಕನಸು, ನನ್ ಸ್ವಂತದ್ದು, ಯಾರಿಗೂ ಕೊಡಬೇಡ ಮತ್ತೆ!” ಅಂತ ಅವನು ಹೇಳಿದ್ದನ್ನು ಕೇಳಿದ್ದು ಬಿಟ್ಟರೆ ಹೆಚ್ಚಿನ ಮಾಹಿತಿ ನನಗೂ ಇಲ್ಲ. ಯಾರನ್ನು ಒಳಗಿಟ್ಟು ಅವನು ಕನಸು ಕಂಡಿದ್ದು ಅಂತ ನಾನೂ ಬಗ್ಗಿ ನೋಡದೇ, ವಿಧೇಯ ವಿದ್ಯಾರ್ಥಿನಿಯಂತೆ ಹೊತ್ತು ಬಂದಿದ್ದಷ್ಟೇ ಗುರಿ. ಇನ್ಯಾವ ಉದ್ದೇಶವೂ ಇರಲಿಲ್ಲ. ನನ್ನ ಬೊಗಸೆಯೊಳಗಿನ ಕನಸಲ್ಲಿ ನಾನೇ ಇದ್ದೆ ಅಂತ ಪೆದ್ದಿಗೆ ಗೊತ್ತಾಗಲೇ ಇಲ್ಲ. ಅವನೂ ಹೇಳಲಿಲ್ಲ,ಯಾಕೆ? ‘ಹೇಳಿದ್ರೆ ಅರ್ಥ ಆಗಲ್ಲ’ ಅಂತ ಅವನೂ ಹೇಳಲಿಲ್ಲ ಅನಿಸುತ್ತೆ.
ಅವನು ನನ್ನ ಹಾಗಲ್ಲ, ತುಂಬ ಹುಷಾರು ಬಿಡು, ಅವನ ಕಣ್ಣು ಇಷ್ಟಗಲ, ಎಷ್ಟೆಂದರೆ ಊರಾಚೆ ಇದೆಯಲ್ಲ, ದೊಡ್ಡ ತಿಳಿನೀರಿನ ಕೊಳ! ದೇವಿಕೆರೆ ಅಲ್ಲ, ಅದಕ್ಕೆಂತ ಹೆಸರು…..? ಅದಕ್ಕಿಂತ ದೊಡ್ಡದು! ಮಾಡಿನ ಮಧ್ಯೆ ಕಿಟಕಿ ಕಾಣಿಸ್ತಿದೆಯಲ್ಲ, ಆ ಕಿಟಕಿಯ ಗೂಡೇ ನನ್ನ ಮತ್ತು ಅವನ ಖಾಯಂ ಜಾಗ. ಅಲ್ಲಿ ಕೂತು, ‘ಪಟ’ ‘ಪಟ’‘ಪಟ’ ಮಾತು ಪಾಪ್ ಕಾರ್ನ್ ಅರಳಿದಂಗೆ. ಮಧ್ಯೆ ಮಧ್ಯೆ ನಾನು ‘ಹುಂ’ ಎಂದಿದ್ದು ಕೇಳಿಸುತ್ತಿತ್ತಾ ಅವನಿಗೆ? ನನಗೂ ಗೊತ್ತಿಲ್ಲಾ. ಒಂದೊಂದು ಸಲ ಅವನ ಆ ವಿಶಾಲ ಕಣ್ಣೊಳಗೆ ನನ್ನೀ ಪುಟ್ಟ ಮುಗ್ಧ ಕಣ್ಣುಗಳನ್ನು ನುಂಗಿಬಿಡುವಂತೆ ನೋಡುತ್ತಿದ್ದನಲ್ಲಾ? ಏನಿತ್ತು ಅಲ್ಲಿ? ಆವತ್ತು ಮಧ್ಯಾಹ್ನ ಮಾತನಾಡುತ್ತಾ ನನ್ನ ಕಣ್ಣು ಅವನ ಕಣ್ಣೊಳಗೆ ಪೂರ್ತಿ ಹುದುಗಿ ಹೋಯ್ತು. ಅದನ್ನು ಅವನು ಕಣ್ಣೊಳಗೇ ನುಂಗಿಬಿಟ್ಟಿದ್ದ! ನನ್ನ ಕಣ್ಣು ಅವನ ಕಣ್ಣೊಳಗೆ ಮೀನಂಗೆ ಈಜಿಕೊಂಡು, ಎಲ್ಲಾ ಕನಸು ನೋಡ್ಕೊಂಡು, ಆಚೆ ಬರಕ್ಕೆ ನೋಡಿದ್ರೆ….ಅವನು ಕಣ್ಣು ಮುಚ್ಕೊಂಡುಬಿಟ್ಟಿದ್ದ! ನನ್ನ ಕಣ್ಣಿಗೆ ತುಂಬಾ… ಭಯ ಆಗಿ, ಮುದುಡಿಕೊಂಡು ಕಣ್ಣಿನ್ ಬಾಗ್ಲಲ್ಲಿ ಆಚೆಬರಕ್ಕೆ ಕಾಯ್ತಾ….ಇತ್ತು. ಕನಸೆಲ್ಲಾ ಮುಗಿದ್ಮೇಲೆ ಕಣ್ಣುಬಿಟ್ಟ. ಆಚೆ ಬಂತು ನನ್ನ ಕಣ್ಣು, “ಅಬ್ಬಾ!ಅವನ ಕಣ್ಣಲ್ಲಿ ಎಷ್ಟು ಕನಸು ಗೊತ್ತಾ? ಮುಳ್ಗೋಗ್ತೀನಿ ಅಂತ ಭಯ ಆಗಿ ಎಲ್ಲಾ ನೋಡ್ಲಿಲ್ಲಾ, ಎದ್ರುಗಡೆ ಒಂದು ದೊಡ್ಡ ಲ್ಯಾಬ್ ಇದೆ. ಅವನ ಕಣ್ಣಲ್ಲಿ ಕೆಳಗಡೆ ಹೋದ್ರೆ ಯಾರೋ ನಿಂತಿದ್ದು ಕಾಣಸ್ತಿತ್ತು, ತುಂಬಾ ಆಳಕ್ಕೆ ಹೋಗಕ್ಕೆ ನನಗೆ ಭಯ ಆಯ್ತು.” ಅಂತು ನನ್ನ ಕಣ್ಣು. ಅಲ್ಲಿ ನಿಂತಿದ್ದು ನಾನೇ ಅಂತ ನಂಗೇ ಗೊತ್ತಿರಲಿಲ್ಲಾ. ಅದು ಹೇಗೆ ಅಷ್ಟು ಆಳದಲ್ಲಿ ನನ್ನ ನಿಲ್ಲಿಸಿಕೊಂಡು ಬಿಟ್ಟಿದ್ದ ಅವನು? ಒಂದೊಂದ್ಸಲ ಅದೇ ಕಿಟಕಿಯಲ್ಲಿ ಕುಳಿತು ಮಾತಾಡುವಾಗ ಅವನು ಹೇಳಿದ್ದು ಎಲ್ಲಾ ಅರ್ಥವಾಗಿತ್ತಾ ನನಗೆ? ಅವನಿಗೂ ಅದೆಲ್ಲ ಗೊತ್ತಾಗಿ ತಲೆಗೆ ಒಂದೊಂದು ಮೊಟಕಿ ನನ್ನ ತಲೆ ಒಳಗೆ ಅವನ ತಲೆ ತುಂಬಿದ್ದು ಸುಳ್ಳಾ? ಮತ್ತ್ಯಾಕೆ ನನ್ನ ಮನಸ್ಸಲ್ಲಿ ಅವನ ಮನಸ್ಸನ್ನ ತುಂಬ್ಲಿಲ್ಲ? ಬಹುಷಃ ಹೇಗೆ ತುಂಬೋದು ಅಂತ ಅವನಿಗೆ ಗೊತ್ತಾಗಲಿಲ್ಲ ಅನಿಸುತ್ತೆ, ಅಲ್ಲಾ?
“ಆ ಮನೆ ಹೆಂಚು ದಾಟಿ, ಅದರ ಮುಂದಿನ ದೊಡ್ಡಮಾವಿನ ಮರದ ಹಿಂದೆ,ಬೇಲಿಯಾಚೆ! ತೋಟದೊಳಗೆ ನೋಡು, ಅಲ್ಲೊಂದು ಬಾಳೆಲೆ ಗಿಡ ಇಲ್ಲವಾ….ಅದರಷ್ಟು ಚಂದ ಅವಳು, ಅದಕ್ಕೆ ನಂಗೆ ಅವಳು ಇಷ್ಟ.” ಅಂದವನು ಹೇಳಿದರೆ, “ಯಾವುದು ಇದಾ?” ಎಂದು ಅಣತಿ ದೂರದಲ್ಲಿ ಗರಿಗೆದರಿ ಒಣಗಿ ಪೀಚಾಗಿದ್ದ ಎದುರಿಗಿನ ತೆಂಗಿನ ಮರ ತೋರಿಸಿ ಕೇಳಿದಷ್ಟು ಹೆಡ್ಡಿ ನಾನು. ಅಯ್ಯೋ !ಎದುರಿಗೇ ಕಾಣುವ ತೆಂಗಿನ ಮರಕ್ಕೂ, ಬಾಳೆಲೆ ಗಿಡಕ್ಕೂ ವ್ಯತ್ಯಾಸ ಗೊತ್ತಾಗದವಳಿಗೆ ಒಳಗಿದ್ದ ಅವನ ಪ್ರೀತಿಯ ಸೆಲೆ ಹೇಗೆ ತಿಳಿಯಬೇಕು! ಕೋಪ ಬಂದು ಹಿರಿದಾದ ಕಣ್ಣನ್ನು ಇನ್ನೂ ಇಷ್ಟಗಲ ಹರಡಿಸಿ, ಮತ್ತೆ ಕನಿಕರದಿಂದ(ಅದು ಪ್ರೀತಿಯೇ ಆಗಿತ್ತೇನೋ) ಆ ಕಣ್ಣನ್ನೇ ಕಷ್ಟಪಟ್ಟು ಕುಗ್ಗಿಸಿ, ರೆಪ್ಪೆಗಳನ್ನೆಲ್ಲಾ ಮೊಗ್ಗಿನಂತೆ ಮುಚ್ಚಿಕೊಂಡು, ಮತ್ತೆ ಹೂವಿನಂತೆ ಅರಳಿಸಿಕೊಂಡಿದ್ದ. ಆವಾಗ ಕಣ್ಣು ಕಣ್ಣಂಗೆ ಕಂಡಿದ್ದು ಬಿಟ್ಟರೆ, ಹೂವಿನಂತೆ ಅನಿಸಿದ್ದು ಇವತ್ತು.
ಆ ದಿನ ಅದೇ ಕಿಟಕಿಯಲ್ಲಿ ಕುಳಿತು, “ನೋಡು, ರಸ್ತೆಯಲ್ಲೇ.. ಮುಂದೆ! ಒಂದು… ಎರಡು… ಮೂರಲ್ಲಾ…ನಾಲ್ಕನೇ ಕರೆಂಟುಕಂಬ ಇದೆಯಲ್ಲಾ, ಅದರ ಮೇಲೆ ಪುಟಾಣಿ ಜೋಡಿಹಕ್ಕಿ ! ನೋಡಿದ್ರೆ ನಾನು ಮತ್ತು ಅವಳು ಕುಳಿತು ಗಹನವಾದ ವಿಚಾರವನ್ನೆಲ್ಲಾ ಚರ್ಚೆ ಮಾಡ್ತಾ ಇರೋ ಹಾಗೆ ಕಾಣಿಸ್ತಿದೆಯಲ್ಲಾ!” ಎಂದವನು ಕೇಳಿದಾಗ, ’ಪಾಪ, ಹಕ್ಕಿಗಳಿಗೆ ಮನೆ ಇಲ್ವೋ ಏನೋ! ಇವತ್ತು ಕಾಳು ಸಿಕ್ಲಿಲ್ಲ ಅನ್ಸುತ್ತೆ, ಅದಿಕ್ಕೆ ಒಬ್ರು ಮುಖ ಒಬ್ರು ನೋಡ್ಕೊಂಡ್ ಕೂತಿದಾವೆ’ ಅಂದಷ್ಟೇ ಅನಿಸಿತ್ತು. ಅವನು ಹೇಳಿದ ಹಾಗೆ ಏನೂ ಅನಿಸಲೇ ಇಲ್ಲ. “ನಂಗೆ ಅದೆಲ್ಲಾ ಗೊತ್ತಾಗಲ್ಲ” ಅಂದುಬಿಟ್ಟಿದ್ದೆ ಮಂಕಾಗಿ.ಆ ಉತ್ತರದಲ್ಲಿ ಪ್ರಾಮಾಣಿಕತೆಯೂ ಇದ್ದಿತ್ತು. ಆಗ ಅವನು ನಿಂತು ನನ್ನನ್ನೂ ನಿಲ್ಲಿಸಿ, ಅವನ ಭುಜಕ್ಕೆ ನನ್ನನ್ನು ಆನಿಸಿಕೊಂಡು, “ನನ್ನ ಕಿವಿ ಮುಟ್ಟುವಷ್ಟು ಎತ್ತರ ಆಗ್ತೀಯಲ್ಲಾ, ಆಗ ನಿಂಗೆ ಇದೆಲ್ಲ ಅರ್ಥ ಆಗುತ್ತೆ.” ಎಂದು ಹೇಳಿದ್ದು ಇವತ್ತು ಅರ್ಥವಾಗುತ್ತಿದೆ ಯಾಕೆ? ಹೌದು, ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದು ಅವನೇ ಅಲ್ವಾ?
ಅಲ್ಲಿ ಕಾಣಿಸುತ್ತಿದೆಯಲ್ಲಾ ಎದುರಿಗಿನ ಗೋಡೆಯ ಮಧ್ಯದ ಕಿಟಕಿ ,ಅದೇ ನಮ್ಮಿಬ್ಬರ ಅರಮನೆ! ಅಲ್ಲಿ ಕುಳಿತುಕೊಳ್ಳುವಾಗ ಇದ್ದ ಅವನ ನಿಷ್ಕಲ್ಮಶ ಪ್ರೀತಿ ಅದು ಯಾವಾಗಿನಂತೆ ಫಿಲಾಸಾಫಿಯಾಗಿ, ಕೊನೆಯಲ್ಲಿ ನಿದ್ರೆ ಬಂದಂತಾಗಿ, ಅಲ್ಲೇ ಅವನ ಕಾಲಮೇಲೆ ಮಲಗಿ ನಿದ್ರಿಸಿದ್ದಕ್ಕೆ ಅವನಿಗೆ ನನ್ನ ಮೇಲೆ ಬೇಜಾರಿಲ್ಲವಾ? ಅವನು ತುಂಬಾ ಒಳ್ಳೆಯವನು. ಎಷ್ಟೆಂದರೆ ಅಮ್ಮನಷ್ಟು! ಏಕೆಂದರೆ ಎಚ್ಚರವಾಗುವತನಕ ಅವನ ಕಾಲಮೇಲೆ ಮಲಗಿಸಿಕೊಳ್ಳುತ್ತಾನಲ್ಲಾ ಯಾವಾಗಲೂ! ಆವತ್ತು ಮಾತ್ರ ಎಚ್ಚರಾದಾಗ ಭಯ. ಕಣ್ಣುಬಿಟ್ಟರೆ ಎದುರಿಗೆ ಅವನ ಕಣ್ಣುಗಳು. ತಲೆನೇವರಿಸುವ ನವಿರಾದ ಕೈಗಳು. ಕನಸನ್ನೆಲ್ಲಾ ಕಾದಿರಿಸುವ ಭರವಸೆ ಇತ್ತಾ ಅಲ್ಲಿ? ಕಿರುಗಣ್ಣಿಂದ ನೋಡಿ, ಕೋಪ ಇಲ್ಲ ಎಂದು ಗೊತ್ತಾಗಿ, ಸಮಾಧಾನದಿಂದ ಶ್ವಾಸವೊಂದನ್ನು ಶಬ್ಧವೇ ಇಲ್ಲದೇ ಜಾರಿಬಿಟ್ಟಿದ್ದು ಅವನಿಗೆ ಗೊತ್ತಾಗಿತ್ತಾ? ಆವತ್ತು ಮಾತ್ರ ಅವನ ಮುಖದಲ್ಲಿ ಕಂಡಿದ್ದು ಅಮ್ಮನೇ ಸರಿ. ಜೋರಾಗಿ ಅತ್ತು ಅವನ ಅಂಗೈ ಬೆವರಿನಲ್ಲಿ ನನ್ನ ಕಣ್ಣೀರುಹನಿ ಬೆರೆತು, ಎಲ್ಲ ಅವನ ಅಂಗೈ ಒಳಗೇ ಸೇರಿ ಸೆಲೆಯಾಗಿದ್ದಂತೂ ನೆನಪು. ಎಷ್ಟು ಒಳ್ಳೆಯವನು! ಅಪ್ಪನಷ್ಟು. ನನ್ನ ಕಣ್ಣೀರೆಲ್ಲಾ ಒರೆಸಿದ್ದನಲ್ಲಾ ! ಮತ್ತೆ ತೋಟದಾಚೆಯ ಹಿಂದಿನ ಗುಡ್ಡದ ಮೇಲಿನ ನನಗಿಷ್ಟವಾದ ಚಂದಮಾಮನನ್ನು ಯಾವತ್ತಿನಂತೆ ತೋರಿಸಿ ರಮಿಸಿದ್ದ. “ನೋಡು, ನೀನು ಅಳುವುದು ಯಾವುದಕ್ಕೆ? ಆ ಚಂದಮಾಮ ಎಷ್ಟು ಚಂದ ಇದ್ದಾನೆ ನೋಡು. ಬೆಳ್ಳಗೆ, ದುಂಡಗೆ, ಬೆಳ್ಳಿಯ ಬಟ್ಟಲಿನ ಹಾಗೆ! ಆ ಚಂದ್ರ ಯಾರು ಗೊತ್ತಾ? ಅವಳು. ಚಂದ್ರನೊಳಗೆ ಒಂದು ಜಿಂಕೆಯ ಚಿತ್ರ ಕಾಣಿಸಿತಾ ನಿನಗೆ? ಅದು ನಾನು. ಹಾಗೇ ನಾವಿಬ್ಬರು(?) ಅಷ್ಟು ಕಲೆತು ಹೋಗುವಂತೆ ಕಣ್ಣಲ್ಲೊಂದು ಕನಸಿದೆ ಗೊತ್ತಾ?” ಅನ್ನುವಾಗ ಥೇಟ್ ಅಮ್ಮನಂತೇ ಕಾಣಿಸಿದ್ದ. ನಾನು ಅಳುವನ್ನೆಲ್ಲಾ ಕಷ್ಟಪಟ್ಟು ಒಳಗೇ ಬತ್ತಿಸಿ, ಹೊರಗೆ ಉಸಿರಾಡಿದ್ದು ಮಾತ್ರ ಎಳೆದೆಳೆದು ಬಿಟ್ಟು ಚೂರಾಗಿಸಿದ ಬಾಳೆಯ ನಾರಿನಂತೆ ತುಂಡುತುಂಡಾಗಿ. ಅವನ ಮುಖದಲ್ಲಿ ಮತ್ತೆ ಅಮ್ಮ ಕಂಡು ನಿರಾಯಾಸವಾಗಿ ಶ್ವಾಸ ಬರಲೇ ಇಲ್ಲ. ಮೇಲೆ ನೋಡಿದರೆ ಅವನು ತೋರಿಸಿದ ಚಂದ್ರ ಬೆಳ್ಳಿತಟ್ಟೆಯಂತೆ ಕಾಣಲೇ ಇಲ್ಲ. ನಾಳೆ ಬರೆಯಲಿದ್ದ ಇಂಗ್ಲಿಷ್ ಪರೀಕ್ಷೆಯ ಪತ್ರಿಕೆಯನ್ನು ಗುಂಡಾಗಿ ಕತ್ತರಿಸಿಟ್ಟಂತೆ ಕಂಡು, ಮತ್ತೂ ಭಯವಾಗಿ ಅವನ ಬೊಗಸೆಯಲ್ಲೇ ಅತ್ತರೆ, ಮತ್ತೆ ಕಣ್ಣೀರನ್ನೆಲ್ಲಾ ಅವನ ಅಂಗೈಯಲ್ಲಿ ಇಂಗಿಸಿಕೊಂಡುಬಿಟ್ಟನಲ್ಲಾ! ಮತ್ತೆ ಒಳ್ಳೆಯವನೆನಿಸಿದ್ದ,ಅಪ್ಪನಂತೆ. ಧೈರ್ಯ ಮಾಡಿ ಕೇಳಿದೆ, “ಚಂದಮಾಮ(ಪ್ರೀತಿಯಿಂದ ಕರೆದ ಹೆಸರು), ನಿಂಗೆ ಕೋಪ ಬರಲ್ವಾ?” “ನಾನು ತಂಪಾಗಿದ್ದರೆ ನಿಂಗೆ ಇಷ್ಟ ಇಲ್ಲವಾ?” ಕೇಳಿದ್ದನಲ್ಲ! ಅರ್ಥ ಆಗದೇ “ಇಷ್ಟ” ಎಂದಿದ್ದೆ. ಅವನು ತಂಪು ಅಂದಾಗ ನೆನಪಾಗಿದ್ದು ಮಾತ್ರ ದಿನಾ ಮಧ್ಯಾಹ್ನ ಹನ್ನೆರಡುವರೆ ಗಂಟೆಗೆ ಬಂದು ‘ಪ್ಯಾಂ, ಪ್ಯಾಂ’ ಎಂದು ಹಾರನ್ ಮಾಡುವ ಐಸ್ ಕ್ಯಾಂಡಿವಾಲಾನ ಹಾಲಿನ ಐಸ್ಕ್ಯಾಂಡಿ.
ಅವನ ಕನಸುಗಳೆಲ್ಲ ಅರ್ಥವಾಗದಷ್ಟು ಚಿಕ್ಕವಳಾಗಿದ್ದೆ ಎನಿಸಿದ್ದು ಇವತ್ತು. ಮೇಲಕ್ಕೆ ನೋಡಿದರೆ ಮತ್ತದೇ ಎರಡು ಕೊಂಬಿನ ಚೂಪಿ ಚಂದ್ರ, ಕುಡಿದೀಪದಂತೆ, ಹಚ್ಚಿಟ್ಟ ಹಣತೆಯಂತೆ ಕಾಣಿಸಲೇ ಇಲ್ಲ. ಆವತ್ತು ಅವನು ತೋರಿಸಿದ ಆ ದುಂಡನೆಯ ಬೆಳ್ಳಿಯ ಚಂದ್ರ , ಸುತ್ತಲೂ ಕ್ಯಾನ್ವಾಸಿನಷ್ಟು ನವಿರಾದ ಬೆಳದಿಂಗಳು, ಆ ತಂಪೂ… ಇವತ್ತೂ ಇದ್ದಿದ್ದರೆ? ಆ ಕಿಟಕಿಯಲ್ಲಿ ಮತ್ತೆ ನಾನು, ಅವನೂ ಇಬ್ಬರೂ ಕುಳಿತಿದ್ದರೆ? ಇವತ್ತಿನ ಮನಸ್ಸಿನ ನೋವು ನಜೀಮ್ ಸಾಹೇಬರ ಲಾರಿಯಲ್ಲಿ ತುಂಬಿದರೂ ಮುಗಿಯದಷ್ಟು ರಾಶೀ ಇದೆ. ಅವನ ಬೊಗಸೆಯಲ್ಲಿ ಅತ್ತರೆ ಅವನ ಅಂಗೈ ಕರಗಿ, ಕಣ್ಣೀರಾಗಿ ನನ್ನ ಕಣ್ಣೊಳಗೇ ಮತ್ತೆ ಹರಿದು ಹೋಗುವಷ್ಟಿದೆ. ಕಳೆದ ಹಳೆಯ ದಿನಗಳಲ್ಲಿ,ಅಸಾಧ್ಯವಾದ ಒಂದೇ ಒಂದು ದಿನ ಸಿಕ್ಕರೂ ಸಾಕು, ಈ ಜನ್ಮ ಧನ್ಯ ಎನ್ನುವಷ್ಟು ನಿಸ್ಸಹಾಯಕ ಇರುಳು ಇದು ಅಂತ ಅನಿಸುತ್ತಿದೆ. ಆ ಹಳೆಯ ಒಂದು ದಿನ, ಅದೇ ದುಂಡಗಿನ ಬೆಳ್ಳಿಯ ಚಂದಮಾಮಾ….., ಆ ಕಿಟಕಿ, ಆವತ್ತಿನ ಅವನು, ಇವತ್ತಿನ ನಾನು, ಆವತ್ತು ನನ್ನ ಕಣ್ಣನ್ನೇ ನುಂಗಿದ್ದ ಆ ವಿಶಾಲ ಕಣ್ಣುಗಳು, ಅಪ್ಪನಂತಿರುವ ಅವನ ನವಿರಾದ ಬೊಗಸೆ, ಅಮ್ಮನಂತೆ ಕಾಣುವ ಅವನ ಮುಖ, ನನ್ನೊಳಗಿನ ಆವತ್ತಿನ ಮುಗ್ಧ ಕಣ್ಣೀರು ಎಲ್ಲ ಮತ್ತೆ ಈಡೇರದ ಬಯಕೆಗಳಾಗಿ ಬರುತ್ತಲಿವೆ. ಬಯಕೆಗಳನ್ನೆಲ್ಲಾ ನನ್ನೊಂದಿಗೇ ಬೆಳೆಸಿದ್ದ ಅವನೇ ಇಲ್ಲದ ಬದುಕು, ಮೇಲಿಂದ ಚಂದ ಕಾಣುವ ಬೇರಿಲ್ಲದೇ ವೇಸ್ ನಲ್ಲಿಟ್ಟ ಬಣ್ಣದ ಹೂವುಗಳಂತೆ! ಬದುಕು ಭಧ್ರತೆಯ ಬೇರು ಇಲ್ಲದೇ ಒಣಗಲು ಕಾಯುತ್ತಿರುವ ಮರದಂತೆ! ಅವನು ಮತ್ತೆ ಆ ಕಿಟಕಿಯಲ್ಲಿ ಬರಬೇಕಿತ್ತೆಂದು ಅಳುವ ಮನಸ್ಸು ಹೇಳುತ್ತದೆ.
ಕಿಟಕಿ ಇದೆ, ನಾನಿದ್ದೇನೆ, ಆ ಚಂದಮಾಮ ಮತ್ತು ಅವನು ಇಬ್ಬರೂ ಇಲ್ಲ. ಮತ್ತೊಮ್ಮೆ ಕಿಟಕಿಯ ಕಡೆ ನೋಡುತ್ತೇನೆ ಈಗಲೂ ಕಿಟಕಿ ಮಾತ್ರ ಇದೆ. ಅವನು ಇಲ್ಲ. ಈಗ ಮತ್ತೆ ಮನಸ್ಸು ಸೋತು ಹೋಗಿ ಅವನ ಬೊಗಸೆಯಲ್ಲಿ, ಕಂಗಳಲ್ಲಿ ಹುದುಗಿ ಹೋಗಿ, ಕಾಲಿನ ಮೇಲೆ ನಿದ್ರಿಸುವ ಆವತ್ತಿನ ನಾನೂ ಇಲ್ಲ ಎನಿಸುತ್ತಿದೆ. ನಾನು ಬದುಕಲ್ಲಿ ಬೇರೆಯೇ ದಾರಿಯಲ್ಲಿ ಮುಂದಡಿಯಿಟ್ಟು, ಈ ಎಲ್ಲ ನೆನಪುಗಳ ಜೊತೆ ಅವನ ಕನಸುಗಳಲ್ಲಿ ಕಳೆದು ಹೋಗಿದ್ದೇನೆ. ಪಕ್ಕದಲ್ಲಿದ್ದ ಹಣ್ಣೆಲೆಯೊಂದು ನನ್ನ ನೋವಿಗೆ ಸಾಕ್ಷಿಯೆಂಬಂತೆ ನರಳಿ ಹೊರಳಿ ಕೆಳಗೆ ಬೀಳುತ್ತದೆ. ಮುದಿಸೌತೆಕಾಯಿ ನನ್ನನ್ನು ನೋಡಿ ನಲುಗಿ, ಅಲುಗಾಡದೇ ಗಂಭೀರವಾಗಿ ನಗುತ್ತಿರುವಂತೆ ಭಾಸವಾಗುತ್ತದೆ. ಮೇಲೆ ಕಾರ್ಟೂನಿನ ಚಿತ್ರದಲ್ಲಿ ನಗುತ್ತಿರುವ ಬಾಯಂತೆ ಕಾಣುವ ಚಂದಮಾಮನ ಕಂಡು ಗೊತ್ತಿಲ್ಲದೇ ಕಣ್ಣೀರಿನ ತಾಳಕ್ಕೆ ಉಸಿರಿನ ಹಾಡಾಗಿ ನೆನಪಿಗೆ ಬಂದಿದ್ದು ಈ ಹಾಡಿನ ಸಾಲುಗಳು ಮಾತ್ರ ನನ್ನ ಪಾಲಿಗೆ….
“ಚಂದಮಾಮ.. ಚಕ್ಕುಲಿಮಾಮ ನನ್ನನು ನೋಡಿ ನಗುತಿರುವ……” 

‍ಲೇಖಕರು avadhi

November 1, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This