ಮರುಕಳಿಸುತ್ತಿರುವ ಮಹಾಭಾರತದ ರೂಪಕಗಳು…

gali.gif“ಗಾಳಿ ಬೆಳಕು”

 

 

 

ನಟರಾಜ್ ಹುಳಿಯಾರ್

ಮೊನ್ನೆ ಪ್ರೊಫೆಸರೊಬ್ಬರು, “ಎಂ ಪಿ ಪ್ರಕಾಶ್ ತಮ್ಮ ಈ ಕೊನೆಗಾಲದಲ್ಲಾದರೂ ಒಂಚೂರು ಸಿಡಿದು ನಿಂತು ತಮ್ಮ ಗತ್ತು ತೋರಲಿ” ಎಂದರು. ಈಗ ನಮ್ಮ ರಾಜಕಾರಣದಲ್ಲಿ ಮಹಾಭಾರತದ ಪಾತ್ರಗಳು, ರೂಪಕಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದನ್ನು ನೆನಪಿಸಿದ ಆ ಪ್ರೊಫೆಸರ್ “ಪ್ರಕಾಶ್ ಮಹಾಭಾರತದ ವಿದುರನ ಹಾಗೆ ಕೊನೆಗೊಂದು ಸಲ ಎದ್ದು ನ್ಯಾಯದ ಪರವಾಗಿ ನಿಲ್ಲಲಿ” ಎಂದರು.

ಮೊನ್ನೆ ತಾನೇ ಜೆಡಿಎಸ್ ಬಿಜೆಪಿಗೆ ಕೈ ಕೊಟ್ಟಾಗ ಇದೇ ಎಂ ಪಿ ಪ್ರಕಾಶ್ ಕುಮಾರಸ್ವಾಮಿಯವರನ್ನು ಸಮರ್ಥನೆ ಮಾಡುತ್ತಾ, “ಧರ್ಮರಾಯ ಕೂಡ ಅಧಿಕಾರಕ್ಕಾಗಿ ಸುಳ್ಳು ಹೇಳಿದ” ಎಂದು ಹೇಳಲು ಹೋಗಿ ಜನರಿಂದ ಬೈಸಿಕೊಂಡರು. ಎಂ ಪಿ ಪ್ರಕಾಶ್ ಎಂಬ ಬುದ್ಧಿಜೀವಿ ಈ ಮಹಾಭಾರತದ ಶಬ್ದವ್ಯೂಹದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಪ್ರಕಾಶ್ ಅರೆ ಸಾಹಿತಿಗಳ ಹಾಗೆ ಆಗಾಗ್ಗೆ ಯಾವಯಾವುದೋ ಉಪಮೆಗಳನ್ನು ಗ್ಯಾಲರಿಗೆ ತಕ್ಕಂತೆ ಎಸೆದು ಪುಳಕಗೊಳ್ಳಲು ಯತ್ನಿಸುತ್ತಿರುವುದನ್ನು ನೀವು ಗಮನಿಸಿರಬಹುದು. ೨೦೦೪ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ, ರಾಮನಗರದ ಸಭೆಯೊಂದರಲ್ಲಿ ಪ್ರಕಾಶ್ ದೇವೇಗೌಡರನ್ನು ಮೆಚ್ಚಿಸಲು ಮಹಾಭಾರತದ ಹೋಲಿಕೆಯೊಂದನ್ನು ಬಳಸಿ ಬೇಸ್ತು ಬಿದ್ದಿದ್ದರು. ೧೬-೯-೨೦೦೪ರ ಪ್ರಜಾವಣಿಯ ಈ ವರದಿ ನೋಡಿ:

…ದೇವೇಗೌಡರು ಸಮ್ಮಿಶ್ರ ಸರ್ಕಾರದ ಭೀಷ್ಮರಿದ್ದಂತೆ ಎಂದು ಕಂದಾಯ ಸಚಿವ ಪ್ರಕಾಶ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌಡರು, “ನಾನಿನ್ನೂ ಶರಶಯ್ಯೆಯ ಮೇಲೆ ಮಲಗಿಲ್ಲ. ನನ್ನಲ್ಲಿ ಇನ್ನೂ ಚೈತನ್ಯವಿದೆ. ಕೆಲವೊಮ್ಮೆ ಕಣ್ಣು ಮಂಜಾದರೂ ಸಮ್ಮಿಶ್ರ ಸರ್ಕಾರ ಉಳಿಸಿ, ಐದು ಕೋಟಿ ಜನರಿಗೆ ಆಗುವ ಅನ್ಯಾಯ ತಡೆಯಬೇಕೆಂಬ ವ್ಯಾಮೋಹದಿಂದ ಹೊರಬಂದಿಲ್ಲ” ಎಂದರು.

ದೇವೇಗೌಡರು ತಮಗೆ ಬೇಕಾದ ಹಾಗೆ ಎಲ್ಲವನ್ನೂ ಓದಬಲ್ಲ “ಪ್ರತಿಭಾಶಾಲಿ ರಾಜಕೀಯ ವಿಮರ್ಶಕ”ರಾದ್ದರಿಂದ ಅವರ ಮಹಾಭಾರತದ “ಮರುಓದು” ಅವತ್ತು ಹೀಗೆಯೇ ಮುಂದುವರಿದಿತ್ತು. ಸಚಿವ ಸಂಪುಟ ವಿಸ್ತರಣೆಗಾಗಿ ಜೆಡಿಎಸ್ ಶಾಸಕರು ತೋರುತ್ತಿದ್ದ “ವ್ಯಾಮೋಹ”ವನ್ನು ವಿಮರ್ಶಿಸುತ್ತಾ ದೇವೇಗೌಡರು ಅದೇ ಸಭೆಯಲ್ಲಿ ಹೇಳಿದ್ದು:

“…ಅದು ಅತಿಯಾಗಬಾರದು. ಕುಂತಿ ಮಗನನ್ನು ಪಡೆದದ್ದರಿಂದ ತನ್ನ ಮಕ್ಕಳಿಗೆ ಎಲ್ಲಿ ರಾಜ್ಯ ತಪ್ಪುತ್ತದೋ ಎಂಬ ಅತಿ ವ್ಯಾಮೋಹದಿಂದ ಗಾಂಧಾರಿ ಗರ್ಭ ಹಿಸುಕಿಕೊಂಡು ನೂರು ಮಕ್ಕಳನ್ನು ಪಡೆದು ವಿಪತ್ತು ತಂದುಕೊಂಡ ಸ್ಥಿತಿ ನಮ್ಮ ಸರ್ಕಾರಕ್ಕೆ ಬರಬಾರದು.”

ಎಂ ಪಿ ಪ್ರಕಾಶರ ಮಹಾಭಾರತದ ಪೆದ್ದು ಗ್ರಹಿಕೆಗೆ ಗೌಡರ ಪೆದ್ದು ಗ್ರಹಿಕೆ ಸೈಡ್ ಹೊಡೆಯಲೆತ್ನಿಸುತ್ತಿದೆ! ಇದೆಲ್ಲ ಆದ ಮೇಲೂ ಎಂ ಪಿ ಪ್ರಕಾಶ್ ಮಾತ್ರ ತಮ್ಮ ಮಹಾಭಾರತದ ಪಾಂಡಿತ್ಯ ಪ್ರದರ್ಶನದ ಒಣ ಚಪಲದಿಂದ ಹೊರಬರಲಿಲ್ಲ. ಕಳೆದ ವರ್ಷ ಪೇಜಾವರ ಸ್ವಾಮಿಗಳಿದ್ದ ಸಭೆಯಲ್ಲಿ ಅವರನ್ನು ಮೆಚ್ಚಿಸಲು “ಸ್ವಾಮಿಗಳೇ, ಸಮಕಾಲೀನ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ಸಭಾಪರ್ವವನ್ನು ವ್ಯಾಖ್ಯಾನಿಸಿ” ಎಂದು ಪ್ರಕಾಶ್ ವಿನಮ್ರರಾಗಿ ಬಿನ್ನವಿಸಿಕೊಂಡರು. ಅದಕ್ಕೆ ಪ್ರತಿಯಾಗಿ ಆ ಸ್ವಾಮೀಜಿ, ಕೃಷ್ಣನ ಆದರ್ಶದ ಬಗ್ಗೆ ಏನೋ ಬುರುಡೆ ಹೊಡೆದದ್ದು ಕೂಡ ಪತ್ರಿಕೆಯಲ್ಲಿ ವರದಿಯಾಗಿದೆ. ಅದನ್ನು ಕೇಳಿ ಎಂ ಪಿ ಪ್ರಕಾಶರು ತಲೆದೂಗಿದ ಶೈಲಿಯನ್ನು ನೀವು ಕುಳಿತಲ್ಲೇ ಊಹಿಸಿಕೊಳ್ಳಬಹುದು.

ತಾನು ಮಾಡುವ ಅನಾಚಾರ ಹಾಗೂ ವಿಕೃತಿಗಳಿಗೆ ಎಲ್ಲಿಂದ ಬೇಕಾದರೂ ಉಪಮೆ, ಉದಾಹರಣೆಗಳನ್ನು ತಂದು ಸಮರ್ಥಿಸಿಕೊಳ್ಳುವ ರಾಜಕಾರಣಿಯೊಬ್ಬ ವಿದುರನಂತೆ ಒಮ್ಮೆಯಾದರೂ ನ್ಯಾಯದ ಪರವಾಗಿ ಸಿಡಿದು ನಿಲ್ಲಲಿ ಎಂದ ನಮ್ಮ ಪ್ರೊಫೆಸರೊಬ್ಬರ ಮುಗ್ಧ ಆಶಯ ಮಾನವನ ಒಳ್ಳೆಯತನದ ಬಗ್ಗೆ ಅವರಿಗಿರುವ ಅಂತಿಮ ನಂಬಿಕೆಯನ್ನೇನೋ ಸೂಚಿಸುತ್ತದೆ. ಆದರೆ ಮಹಾಭಾರತದ ಉಪಮೆಗಳನ್ನು ಬೇಕೆಂದಾಗ ಬಳಸುವ ನಮ್ಮ ಹರಕು ನಾಲಗೆಯ ನಾಯಕರು ಅಂಥ ನಂಬಿಕೆಗೆ ಅರ್ಹರಾಗುವ ಯಾವ ಸಾಧ್ಯತೆಯನ್ನೂ ಇವತ್ತು ಉಳಿಸಿಕೊಂಡಿಲ್ಲ ಎನ್ನುವುದು ಈ ಆಧುನಿಕ ಭಾರತದ ದುರಂತ ಸತ್ಯ ಅಲ್ಲವೇ?

‍ಲೇಖಕರು avadhi

November 3, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

  1. trasi nagendra

    ನಾಗೇಂದ್ರ ತ್ರಾಸಿ.

    ಮರುಕಳಿಸುತ್ತಿರುವ ಮಹಾಭಾರತದ ರೂಪಕಗಳು ಲೇಖನದಲ್ಲಿ ನಟರಾಜ್ ಹುಳಿಯಾರರು, ರಾಜಕಾರಣಿಗಳು ಸಮಯಸಾಧಕ ಹೇಳಿಕೆಯನ್ನು ನೀಡುವಾಗ ಬಳಸಿಕೊಳ್ಳುವ ಉಪಮೆ ಮತ್ತು ಪೆದ್ದುತನದ ಬಗ್ಗೆ ವಿಶ್ಲೇಷಿಸಿರುವುದು ಚೆನ್ನಾಗಿ ಮೂಡಿ ಬಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: