’ಮರೆತೇನಂದ್ರ ಮರಿಯಲಿ ಹ್ಯಾಂಗಾ…’ – ಪ್ರಜ್ಞ್ನಾ ಮತ್ತೀಹಳ್ಳಿ

ಕಮಲ ಹಿಡಿದು ದೇವರಾದವನ ಕತೆ

– ಪ್ರಜ್ಞಾ ಮತ್ತೀಹಳ್ಳಿ

ಅವನು ಅದೆಷ್ಟು ನರಪೇತಲನಾಗಿದ್ದನೆಂದರೆ ತುಂಬಾ ದಿನದಿಂದ ಉಪಯೋಗಿಸದೇ ಮೂಲೆಯಲ್ಲಿಟ್ಟ ಛತ್ರಿಗೆ ಪ್ಯಾಂಟು ,ಶಟರ್ು ತೊಡಿಸಿ ಕನ್ನಡಕ ಹಾಕಿದಂತೆ ಕಾಣುತ್ತಿದ್ದ. ಅದೇಕೋ ಏನೋ ಎಲ್ಲರಿಗಿಂತ ಒಂದು ತುತ್ತು ಹೆಚ್ಚಿಗೆ ತಿಂದುಂಡುಕೊಂಡಿದ್ದರೂ ಒಮ್ಮೆಯೂ ಅವನ ಮೈಯಲ್ಲಿ ಮಾಂಸ ತುಂಬಿಕೊಂಡಿರಲೇ ಇಲ್ಲ. ಹಾಗಂತ ಸ್ವಭಾವದಲ್ಲೊಂದು ಸಣ್ಣ ಸೈಜಿನ ಕೊಬ್ಬು ಇತ್ತು. ತನಗಿಂತ ದುರ್ಬಲರ ಮೇಲೆ ಸರಿಯಾಗಿಯೇ ಹರಿಹಾಯ್ದು ಟೆಬರು ತೋರಿಸುತ್ತಿದ್ದ. ಅದೇ ತನಗಿಂತ ದುಡ್ಡು, ಅಧಿಕಾರ ಅಂತಸ್ತಿನಲ್ಲಿ ಬಲಶಾಲಿಗಳೆನಿಸಿದವರೆದುರು ಕೆಲಸಕ್ಕೆ ಬಾರದಷ್ಟು ದೈನೇಸಿ ಸ್ಥಿತಿ ತಲುಪಿಬಿಡುತ್ತಿದ್ದ. ಮತ್ತು ಅದಕ್ಕಾಗಿಯೇ ನನಗೆ ವಿಪರೀತ ಕಿರಿಕಿರಿಯುಂಟು ಮಾಡುತ್ತಿದ್ದ. ಶುರುಶುರುವಿನಲ್ಲಿ ತಾಸಿಗೊಮ್ಮೆ ಸೇದುವ ಸಿಗರೇಟು, ಹಸಿಮೆಣಸು ಉಪ್ಪಿನೊ0ದಿಗೆ ನುರಿದು ತಿನ್ನುವ ಅತಿ ಚಪಲ, ವಾರಕ್ಕೆರಡು ಸಲ ಕುಡಿವ ಅಗ್ಗದ ಮದ್ಯ, ಮನೆತನಕ ಹುಡುಕಿಕೊ0ಡು ಬರುವ ಸಾಲಗಾರರು ಇವೆಲ್ಲಕ್ಕೂ ನಾನು ವಿಪರೀತ ರೇಗುತ್ತಿದ್ದೆ. ಅವನ ಮಗ ಅಂದರೆ ನನ್ನ ಗಂಡನನ್ನು ನಡುವೆ ಇಟ್ಟುಕೊಂಡು ಕೂಗಾಡುತ್ತಿದ್ದೆ. ಹಾಗೊಮ್ಮೆ ಬ್ಯಾಂಕಿನವರು ಬಂದಾಗ ಅಲ್ಲೇ ಪೇಪರೋದುತ್ತ ಕೂತ ಅವ ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟ. ಬನಿಯನ್ನಿನ ಮೇಲೆ ಎಲ್ಲಿ ಹೋಗಲು ಸಾಧ್ಯ ಅಂತ ಹುಡುಕಿ ಹುಡುಕಿ ಇಟ್ಟೆ. ಮನೆಯೆದುರು ನಡುರಸ್ತೆಯಲ್ಲಿ ಬಾವಿ. ತುಂಬಾ ನೀರು. ಎದೆ ನಡುಗತೊಡಗಿತು. ಡವಡವ ಉಸಿರೊಂದಿಗೆ ಹತ್ತಿರ ಹೋಗಿ ಹಣುಕಿದೆ. ನೀರಲ್ಲಿ ನನ್ನದೇ ಮುಖ ಕಂಡು ಅಣಕಿಸಿತು. ನಮ್ಮ ಮನೆ ಕಡೆ ನೋಡಿದೆ. ಟೆರೆಸಿನ ಮೇಲೆ ನೀರಿನ ಟ್ಯಾಂಕಿನ ಹಿಂದಿಂದ ಮುಖವೊಂದು ಹಗುರಕೆ ಹೊರ ಬಂತು. ಸರ್ರನೆ ಸಿಟ್ಟು ತಲೆಗೇರಿ ದಪದಪ ಹೆಜ್ಜೆಯಿಟ್ಟುಕೊಂಡು ಮನೆಗೆ ಬಂದೆ. ಅಂದು ರಾತ್ರಿ ನಾನು ನನ್ನ ಗಂಡ ಕೂಗಾಡಿದ್ದಾಯ್ತು. ಬೆಳಿಗ್ಗೆ ಇವ ಬ್ಯಾಗು ಎತ್ತಿಕೊಂಡು ಮಗಳ ಮನೆಗೆ ಹೋಗಿದ್ದಾಯ್ತು. ಅಲ್ಲಿ ನೌಕರಿಗೆ ಹೋಗುವ ಮಗಳಿಗೆ ಸಹಾಯ ಮಾಡುತ್ತ, ಶಿಶುವಾಗಿದ್ದ ಮೊಮ್ಮಗನ ಆರೈಕೆ ಮಾಡುತ್ತ ಎಲ್ಲ ಕೆಲಸ ಕಲಿತ. ಅಲ್ಲೇನೋ ಸಣ್ಣ ಮನಸ್ತಾಪವಾಗಿ ಅವ ತಿರುಗಿ ಮನೆಗೆ ಬಂದಾಗ ನಾನು ತುಂಬು ಗಭರ್ಿಣಿ. ಪ್ರಪಂಚದಲ್ಲಿರುವವರನ್ನೆಲ್ಲ ಕ್ಷಮಿಸಿಬಿಡುವ ಔದಾರ್ಯವನ್ನು ನನ್ನ ಸ್ತಿತಿ ನನಗೆ ತಂದು ಕೊಟ್ಟಿತ್ತು. ಮುಂದೆ ನನ್ನ ಮಗಳು ಹುಟ್ಟಿದ್ದೇ ಹುಟ್ಟಿದ್ದು ಎಲ್ಲಿಲ್ಲದ ಜವಾಬ್ದಾರಿ ತಂದುಕೊಂಡು ಬಿಟ್ಟ. ಅರ್ಧಕರ್ಧ ಮನೆಗೆಲಸ ಮಾಡಿಕೊಡುತ್ತಿದ್ದ. ನೌಕರಿ, ಮನೆಗೆಲಸ,ಚಾಕರಿ ಅಂತ ನಾನು ತಲ್ಲೀನಳಾಗಿದ್ದೆ. ಮೊಮ್ಮಗಳಿಗೆ ತಿನ್ನಿಸಿ, ಉಣ್ಣಿಸಿ, ಪಾಕರ್ು-ಪೇಟೆ ಸುತ್ತಿಸಿ ಅಪ್ಪಟ ದಾಯಿಯ ಪಾತ್ರವಹಿಸಿಬಿಟ್ಟ. ಬಂಧುಬಾಂಧವರು, ನೆರೆಹೊರೆಯವರು ಮಕ್ಕಳನ್ನು ಸಾಕುವುದಾದರೆ ಈ ಅಜ್ಜನಂತೆ ಸಾಕಬೇಕು ಎನ್ನುವಂತಾಯಿತು. ಅದೇ ತಾನೆ ಅರಳಿದ ಕಮಲದಂತೆ ಇದ್ದಳು ನನ್ನ ಮಗಳು. ಅವಳನ್ನೆತ್ತಿಕೊಡು ಓಡಾಡತೊಡಗಿದ್ದೇ ತಡ ಕಮಲ ಹಿಡಿದ ದೇವರಂತಾಗಿಬಿಟ್ಟ.

ಬೆಳಿಗ್ಗೆ ಹೊಗಿ ರಾತ್ರಿ ಮನೆಗೆ ಬರುವ ನನ್ನ ಗಂಡ ಸಂಸಾರದ ಆಗು ಹೋಗುಗಳ ವಿಷಯದಲ್ಲಿ ಥೇಟು ಕೆಸರಿನಲ್ಲಿರುವ ಕಮಲದಂತೆ ಏನೂ ಅಂಟಿಸಿಕೊಳ್ಳದ ಝಳಝಳ ಪದ್ಮಪುರುಷನಾದ ಕಾರಣ ಮನೆಯ ಎಲ್ಲ ಜಂಜಾಟಗಳನ್ನು ನಾನು ಅವನೊಂದಿಗೆ ಹಂಚಿಕೊಳ್ಳಬೇಕಿತ್ತು. ತಿಂಗಳಿನ ಯಾವುದೋ ದಿನ ಬಾಗಿಲು ತೆರೆವ ರೇಷನ್ ಅಂಗಡಿಯೆದುರು ಹೊಂಚು ಹಾಕಿ ಗಬಕ್ಕನೆ ಕಾಡರ್ು ಚೀಲ ಹಿಡಿದು ಪಾಳಿ ಹಚ್ಚುತ್ತಿದ್ದ. ವಾರಕ್ಕೊಮ್ಮೆ ನಡುರಾತ್ರಿ ಬಿಡುವ ನೀರಿಗೆ ಹೊತ್ತಲ್ಲದ ಹೊತ್ತಲ್ಲೆದ್ದು ತುಂಬಿಕೊಳ್ಳಲು ನನಗೆ ನಿದ್ದೆಗಣ್ಣಲ್ಲೇ ನೆರವಾಗುತ್ತಿದ್ದ. ಆಗಿನ ನಮ್ಮ ಹಣಕಾಸಿನ ಮುಗ್ಗಟ್ಟನ್ನು ನೆಂಟರಿಷ್ಟರಿಂದ ಮುಚ್ಚಿಡುವ ನನ್ನ ರಣತಂತ್ರಗಳಿಗೆ ಅವನೇ ಸೇನಾನಿ. ಇಷ್ಟೆಲ್ಲಾ ಆದರೂ ಅವನ ಚಟಗಳ ವಿಷಯದಲ್ಲಿ ನಾನು ಜಗಳವಾಡುತ್ತಲೇ ಇರುತ್ತಿದ್ದೆ. ಎಷ್ಟು ಮಹಾ ರೊಕ್ಕ ಖಚರ್ು ಮಾಡುತ್ತಿದ್ದೇನೆ ಎಂದು ಕಣ್ಣರಳಿಸಿ ಹೂಂಕರಿಸುತ್ತಿದ್ದ. ದುಡ್ಡು ಸಾಯ್ಲೊ ನಿನ್ನ ಆರೋಗ್ಯದ ಗತಿಯೇನು ನನ್ನ ಮಗಳಿಗೆ ಅಜ್ಜನನ್ನು ಎಲ್ಲಿಂದ ತಂದು ಕೊಡಲಿ ಎಂದು ಕೂಗಿದರೆ ಅಲ್ಲಿಂದ ಎದ್ದು ದಪದಪ ಹೆಜ್ಜೆ ಹಾಕುತ್ತ ಹೋಗಿಬಿಡುತ್ತಿದ್ದ. ತನ್ನ ವ್ಯಾಪಾರದಿಂದ ತಾನೇ ಸ್ವಯಂ ನಿವ್ರತ್ತಿ ಘೋಶಿಸಿಕೊಂಡು ಅಂಗಡಿಗೆ ಹೋಗುವುದನ್ನು ಬಿಟ್ಟ ಮೇಲೆ ಜಾತಕ ನೋಡುವ ಕಲೆಯನ್ನು ಕಲಿಯಲೆಂದು ಗೆಳೆಯನೊಬ್ಬನ ಬಳಿ ಹೋಗತೊಡಗಿದ. ಆ ಗೆಳೆಯನೋ ಬ್ಯಾಂಕಿನ ನೌಕರಿಯಿಂದಲೇ ಸ್ವಯಂ ನಿವ್ರತ್ತಿ ತೆಗೆದುಕೊಂಡು ಜ್ಯೋತಿಷ್ಯವನ್ನೇ ಗಂಭೀರವಾಗಿ ವ್ರತ್ತಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ. ದಿನಾಲೂ ಅವನ ಮನೆಗೆ ಹೋಗಿ ನೋಟ್ಸ ಬರೆದುಕೊಂಡು ಬರುತ್ತಿದ್ದ. ಎರಡು ಮೂರು ಪುಸ್ತಕ ಬೇರೆ ಕೊಂಡು ದಿನದ ಬಹು ಸಮಯ ಅದಕ್ಕಾಗೆ ಉಪಯೋಗಿಸುತ್ತಿದ್ದ. ತನ್ನ ಜ್ಞಾನ ಮಟ್ಟದ ಪ್ರಾಯೊಗಿಕ ಪರಿಕ್ಷೆಗಾಗಿ ಬಂಧುಗಳ ಜಾತಕ ಇಸಿದುಕೊಂಡು ನೋಡಿ ಫಲಾಫಲ ಬರೆದು ಕೊಡಲಾರಂಭಿಸಿದ. ನಾವು ಗಂಡ-ಹೆಂಡತಿ ಒಳಗೊಳಗೇ ನಗುತ್ತಿದ್ದೆವು. ಒಮ್ಮೆ ಮಗನ ಜಾತಕ ನೋಡುತ್ತಿದ್ದ. ಅದರಲ್ಲಿ ಕರ್ಮ ಅಧಿಕಾರ ಬ0ದಿದೆ ಅಂತ ಲೆಕ್ಕ ಹಾಕಿದವನೇ ನನ್ನನ್ನು ಕರೆದ. ಇನ್ನೆರಡು ತಿಂಗಳಲ್ಲಿ ತಾನು ಸಾಯುತ್ತೇನೆಂದೂ ಆಸ್ಪತ್ರೆ ಅಂತೆಲ್ಲ ಸುಮ್ಮನೆ ಖಚರ್ು ಮಾಡುವುದು ಬೇಡ ಅಂತಲೂ ಹೇಳಿದ. ನಾನು ಗದರಿಸಿ ಒಳಬಂದೆ. ರಾತ್ರಿ ಗಂಡನೆದುರು ಹೇಳಿದಾಗ ಅವನೂ ನಕ್ಕ. ನನಗೆ ಒಳಗೊಳಗೇ ಹೆದರಿಕೆ ಆಗಿತ್ತಿರಬೇಕು. ಅವನ ಹೆಣ್ಣು ಮಕ್ಕಳಿಗೆ ಅಂದರೆ ನನ್ನ ಅತ್ತಿಗೆಯರಿಗೆ ಫೋನು ಮಾಡಿದಾಗ ಹೇಳಿದೆ. ಅವರೂ ನಕ್ಕುಬಿಟ್ಟರು. ನಾನು ಮಾತ್ರ ಅವನು ಬೆಳಿಗ್ಗೆ ಏಳಲು ತಡ ಮಾಡಿದಾಗಲೆಲ್ಲ ಮಂಚದ ಹತ್ತಿರ ಹೋಗಿ ಹಣುಕುತ್ತಿದ್ದೆ. ಚಾದರದ ಮುಸುಕಿನೊಳಗೆ ಏರಿಳಿಯುವ ಆಕಾರ ಕಂಡ ಮೇಲೆ ತಿರುಗಿ ಬರುತ್ತಿದ್ದೆ. ಅವನ ಅನಾರೋಗ್ಯದ ಮುಖ್ಯ ಕಾರಣ ಅಂದರೆ ಸಿಗರೇಟಿನ ನಿರಂತರ ಸೇವನೆಯಿಂದ ಖಾಯಂ ಸಂಗಾತಿಯಾದ ಕಫ-ಕೆಮ್ಮು. ಆಗಾಗ ಜ್ವರ. ಮನೆ ಹತ್ತಿರವೇ ಇದ್ದ ಡಾಕ್ಟರ್ ಹತ್ತಿರ ಹೋಗಿ ಔಷಧಿ ಬರೆಸಿಕೊಂಡು ತೆಗೆದುಕೊಂಡ ಮೇಲೆ ಆರಾಂ ಆಗುತ್ತಿತ್ತು. ಆ ಡಾಕ್ಟರ್ರು ಪಕ್ಕಾ ಒರಟರು. ಏ ಬಿಡ್ರಿ ನಿಮ್ಗೆ ಏನಾಗೇತಿ. ಬಿಸಿ ಊಟಾ ಮಾಡಿ ಗುಳ್ಗಿ ತಗೊಂಡು ಹೊದ್ದು ಮಕ್ಕೊರಿ ನಾಳಂದ್ರ ಆರಾಂ ಆಕ್ಕಿರಿ ಎಂದು ಭುಜ ಚಪ್ಪರಿಸಿ ಕಳಿಸುತ್ತಿದ್ದರು. ಇವ ಮರುದಿನ ಆರಾಂ ಆಗಿಬಿಡುತ್ತಿದ್ದ. ಬೇರೆ ಯಾವ ಡಾಕ್ಟರ್ ಬಳಿ ಹೋದರೂ ಅವನಿಗೆ ಸರಿ ಆಗುತ್ತಿರಲಿಲ್ಲ. ಅವನಿಗೆ ಗುಳಿಗೆ ನುಂಗಲು ಬರುತ್ತಿರಲಿಲ್ಲ. ಅರ್ಧ ತುಂಡು ಮಾಡಿ ತಗೊಳ್ಳುತ್ತಿದ್ದ. ಕ್ಯಾಪ್ಸೂಲುಗಳನ್ನು ಹಾಗೆ ನುಂಗು ಅಂದರೆ ನೀರು ಕುಡಿಕುಡಿದು ಕೊನೆಯಲ್ಲಿ ವಾಯ್ಕ ಎಂದು ಹೊರಹಾಕಿ ಬೈಸಿಕೊಳ್ಳುತ್ತಿದ್ದ. ಒಂದು ಸಲ ಜ್ವರ ಬಂದಿತ್ತು. ಡಾಕ್ಟರನ ಕ್ಲಿನಿಕ ಸಮಯ ರಾತ್ರಿ ಏಳರ ಮೇಲೆ. ಅದೇ ಆಗ ಸಂಜೆಯಾಗಿತ್ತು. ಇದ್ದಕಿದ್ದ ಹಾಗೆ ಜೋರಾಗಿ ಕೂಗತೊಡಗಿದ. ಅವನಿಗೆ ಹೋಗಲು ಹೇಳು. ಪಾಪು ಸ್ವಲ್ಪ ದೊಡ್ಡದಾದ ಮೇಲೆ ಬರಲು ಹೇಳು. ನಾನು ಹೊರಗೆ ಬಂದು ನೋಡಿದೆ ಯಾರೂ ಇರಲಿಲ್ಲ. ಏನಾಯ್ತು ಯಾರ ಹತ್ರ ಮಾತಾಡಿದೆ ಅಂತ ಕೇಳಿದ್ರೆ ಕಣ್ಮುಚ್ಚಿ ಅಸ್ಪಸ್ಟವಾಗಿ ಗೊಣಗುತ್ತಿದ್ದ. ಹಣೆ ಸುಡುತ್ತಿತ್ತು. ತಣ್ಣೀರು ಪಟ್ಟಿ ಹಾಕಿದೆ. ಅವನಿಗೆ ಯಮ ಕಂಡಿರಬಹುದಾ ಅಂತ ಯೋಚಿಸಿದೆ. ಒಮ್ಮಿಂದೊಮ್ಮೆಲೆ ಮೈ ತಣ್ಣಗಾಯಿತು. ಅವನ ಸಾವು- ಅವನಿಲ್ಲದ ನಮ್ಮ ಸಂಸಾರ ಊಹಿಸಿಕೊಳ್ಳಲೂ ಕಷ್ಟವಾಗುತ್ತಾ ಇತ್ತು. ಗಂಡನಿಗೆ ಫೋನು ಮಾಡಿ ಕರೆಸಿ ಡಾಕ್ಟರ ಬಳಿ ಕಳಿಸಿದೆ. ಎರಡು ದಿನದಲ್ಲಿ ಆರಾಮಾದ. ಆದರೂ ಭೀತಿಯ ಮುಸುಕು ನನ್ನ ಬಿಟ್ಟಿರಲಿಲ್ಲ.

ಮುಂದೆ ಎರಡು ಮಕ್ಕಳನ್ನು ಬೆಳೆಸುತ್ತ ಮನೆ ಕಟ್ಟಿದೆವು. ನನ್ನ ಪಿಎಚ್ ಡಿ ಮುಗಿಯಿತು. ಹಣದ ಮುಗ್ಗಟ್ಟು ಕಡಿಮೆಯಾಗಿ ಬಂಧುಗಳಲ್ಲಿ ಒಡನಾಟ ಹೆಚ್ಚಾಗಿತ್ತು. ಮನೆಗೆಲಸಕ್ಕೆ ಅಂತಲೇ ಊರಿನ ಕಡೆಯ ವಿಧವೆಯೊಬ್ಬಾಕೆ ಬಂದು ಉಳಿದಿದ್ದಳು. ಮಕ್ಕಳೂ ಶಾಲೆಗೆ ಹೋಗುತ್ತಿದ್ದವು. ತುಂಬಾ ಹಾಯಾಗಿದ್ದ. ಹಲ್ಲುಗಳು ಬಹಳಷ್ಟು ಬಿದ್ದು ಹೋದ ಕಾರಣ ಅಜ್ಜ ಚಕ್ಕುಲಿ ತಿನ್ನುವುದಿಲ್ಲ ಅಂತ ನನ್ನ ಮಗಳ ಸಂಕಟ. ಅವಳಂತೂ ಅಜ್ಜನ ದೊಡ್ಡ ಭಕ್ತೆ. ಬೆಳಿಗ್ಗೆ ಅಜ್ಜನಿಗೆ ತಿಂಡಿ ಕೊಟ್ಟ ಹೊರತೂ ತಾನು ತಿನ್ನುತ್ತಿರಲಿಲ್ಲ. ಅವಳ ಕಾಟಕ್ಕೆ ಸಿಗರೇಟು ಬಿಟ್ಟಿದ್ದ. ಅವನ ಕಿಸೆ ಖಾಲಿಯಾಗಿದ್ದೇ ನಮಗೆ ಗಂಟು ಬಿದ್ದು ದುಡ್ಡು ಇಸಿದು ಹಾಕುತ್ತಿದ್ದಳು. ದಂತವೈದ್ಯರ ಹತ್ತಿರ ಕರೆದೊಯ್ದು ಹಲ್ಲು ಸೆಟ್ಟು ಮಾಡಿಸಿದೆ. ನಾನು ಇನ್ನು ಎಷ್ಟು ವರ್ಷ ಬದುಕುತ್ತೇನೆ ಸುಮ್ಮನೆ ದುಡ್ಡು ದಂಡ. ಅವನ ಅಂತಹ ಮಾತಿಗೆ ನಾವು ಸೊಪ್ಪು ಹಾಕುವುದು ಬಿಟ್ಟು ಬಹಳ ದಿನವಾಗಿತ್ತು. ಹೊಸ ಹಲ್ಲು ರೂಢಿಯಾಗಿ ನಾಲಕೈದು ತಿಂಗಳಾಗಿದ್ದಿರಬಹುದು. ಹಸಿವಾಗುವುದಿಲ್ಲ ಎನ್ನತೊಡಗಿದ. ಜೊರು ಮಳೆಯ ಜೂನ ತಿಂಗಳು. ಹೊರಗೂ ವಾಕಿಂಗು ಹೋಗುತ್ತಿರಲಿಲ್ಲ. ಸಹಜವಿದ್ದೀತು ಅಂದುಕೊಂಡೆ. ಆದರೂ ಅವನ ಕಾಯಂ ಡಾಕ್ಟರ್ ಹತ್ತಿರ ತೋರಿಸಿಕೊಂಡ. ಮೊದಲು ಚಪಾತಿ ಬಿಟ್ಟ. ಎರಡು ದಿನವಾದ ಮೇಲೆ ಅನ್ನವೂ ಬೇಡ ಅಂದ. ತಕ್ಷಣ ನಾನು ರಜೆ ಹಾಕಿ ಮೆಡಿಕಲ್ ಕಾಲೇಜಿಗೆ ಕರೆದೊಯ್ದೆ. ಎಕ್ಸರೆ ತೆಗೆದರು. ಅದೂ,ಇದೂ ಪರಿಕ್ಷೆಗಳಾದವು. ಡಾಕ್ಟರು ನನ್ನನ್ನು ಮಾತ್ರ ಒಳಗೆ ಕರೆದರು. ಲಿವರ ಮೇಲೆ ಗಂಟಿದೆ.ರೋಗಿಗೆ ವಯಸ್ಸಾಗಿರುವುದರಿಂದ ಆಪರೇಶನ್ ಕಷ್ಟ. ನಾವಿಲ್ಲಿ ಮಾಡುವುದಿಲ್ಲ. ಆ ಗಂಟನ್ನು ತೆಗೆದು ಬಯಾಪ್ಸಿ ಮಾಡಿದರೆ ಏನಾಗಿದೆ ಎಂದು ತಿಳಿಯುತ್ತದೆ. ಮುಂದೆ ಚಿಕಿತ್ಸೆ. ಅಂದರು. ಹೊರಗೆ ಬಂದೆ. ಪಿಳಿಪಿಳಿ ನೋಡಿದ ಮಾವ ಥೇಟು ಮಗುವಿನಂತೆ ಕಂಡ. ನಿನಗೇನು ಆಗಿಲ್ಲಂತೆ. ಎಲ್ಲಾ ನಾರ್ಮಲ್. ಎಂದು ಹೇಳಿದೆ. ಖುಷಿಯಿಂದ ನಕ್ಕ. ಮನೆಗೆ ಬಂದು ಗಂಡನಿಗೆ ಅವನ ಅಕ್ಕಂದಿರಿಗೆ ವಿಷಯ ಹೇಳಿದೆ. ರಿಪೋಟರ್ುಗಳ ಕಾಪಿ ಅವರಿಗೆ ಕಳಿಸಿಕೊಟ್ಟೆ. ಅವರೂ ತಮ್ಮ ಪರಿಚಯದ ಡಾಕ್ಟರುಗಳನ್ನು ಕೇಳಿ ಆಪರೇಶನ್ ಬೇಡ. ಪರಿಣಾಮಕಾರಿಯಾದ ಚಿಕಿತ್ಸೆ ಎಂದರೆ ಹೋಮಿಯೊಪಥಿ ಅಂದರು. ನಾನೇ ಕರೆದೊಯ್ದು ತೋರಿಸಿ ಔಷಧಿ ತಂದಾಯ್ತು. ಅವನ ಅನಾರೋಗ್ಯ ಮಕ್ಕಳ ಚಾಕರಿ ಇಪ್ಪತ್ತೈದು ಕಿಲೊಮೀಟರ್ ದೂರದ ನೌಕರಿ ಇವುಗಳ ನಡುವೆ ಯೋಚಿಸಲೂ ಆಗದಂತಾಗಿತ್ತು. ತನಗೆ ಮಲಗಿ ಮಲಗಿ ಬೇಜಾರಾಗಿದೆ. ಪುಸ್ತಕವನ್ನು ಓದಲಾಗುತ್ತಿಲ್ಲ. ಅಂತ ಒಂದು ದಿನ ಹೇಳಿದ. ಅಲ್ಲಿಯ ತನಕ ನಾವು ಟೀವಿ ತಂದಿರಲಿಲ್ಲ. ತರಬಾರದೆಂಬುದು ನನ್ನ ಆದರ್ಶವಾಗಿತ್ತು. ಆದರೆ ಅವನಿಗಾಗಿ ಈಗ ಕೊಳ್ಳಲೇ ಬೇಕಿತ್ತು. ಆವತ್ತು ಸಂಜೆಯೇ ಟೀವಿ ಬಂತು. ಹೋಮೆಯೋಪಥಿ ಗುಳಿಗೆಯಿಂದಾಗಿ ಅವನಿಗೆ ನೋವು ಅಥವಾ ಬೇರೆ ತೊಂದರೆ ಏನೂ ಇರಲಿಲ್ಲ. ಗಂಜಿ, ಸೂಪು,ಹಣ್ಣಿನ ರಸ ತೆಗೆದುಕೊಳ್ಳುತ್ತಿದ್ದ. ನನ್ನ ಮಗಳು ಅವನ ಕೈ ಹಿಡಿದು ಓಡಾಡಿಸುತ್ತಿದ್ದಳು. ಇಪ್ಪೈತ್ತೈದು ಕಿಲೊಮೀಟರ್ ಪ್ರಯಾಣದ ನೌಕರಿ,ಮನೆಗೆಲಸ,ಇವನ ಔಷಧ ಉಪಚಾರಗಳಲ್ಲಿ ಯೋಚನೆಗೆ ಅವಕಾಶವೇ ಇಲ್ಲದಂತಾಗಿಬಿಟ್ಟಿತ್ತು. ಅವನನ್ನು ನೋಡಲು ದೂರದ ಅಪರೂಪದ ನೆಂಟರು ಬರುತ್ತಿದ್ದರು. ಅವರನ್ನು ಉಪಚರಿಸುವುದೂ ಮುಖ್ಯವಾಗಿರುತ್ತಿತ್ತು. ಶ್ರಾವಣ ಮುಗಿಯುತ್ತ ಬಂದಿತ್ತು. ಸೆಪ್ಟೆಂಬರ್ ಮೊದಲ ವಾರ. ಮಾತಾಡುವುದನ್ನು ನಿಲ್ಲಿಸಿದ. ಸುಮ್ಮನೆ ಕಣ್ಮುಚ್ಚಿ ಮಲಗಿರುತ್ತಿದ್ದ. ಕಿವಿಯ ಬಳಿ ಕರೆದರೆ ಕಣ್ಣು ಬಿಡುತ್ತಿದ್ದ. ಬಾಯಿಗೆ ಚಮಚೆಯಿಂದ ಹಣ್ಣಿನ ರಸ, ಸೂಪು ಇತ್ಯಾದಿ ಹಾಕುತ್ತಿದ್ದೆ. ನಾಕು ಚಮಚೆಗೇ ಬಾಯಿ ಮುಚ್ಚಿ ಅಡ್ಡ ತಿರುಗಿ ಮಲಗುತ್ತಿದ್ದ. ಅವನ ಹೆಣ್ಣು ಮಕ್ಕಳು ಬಂದರು. ಗಣೇಶ ಚೌತಿಗೆ ಎರಡು ದಿನವಿತ್ತು. ನಾನು ರಜೆ ಹಾಕಿ ಮನೆಯಲ್ಲೇ ಇರತೊಡಗಿದ್ದೆ. ಬಹುಶ ಅವನ ಹೊಟ್ಟೆಯೊಳಗಿನ ಗಂಟು ಒಡೆದಿತ್ತೋ ಏನೋ ಬ್ಲೀಡಿಂಗ ಆಗತೊಡಗಿತು. ಹೆಂಗಸರ ನ್ಯಾಪಕಿನ್ ಹಾಕತೊಡಗಿದೆವು. ಆಶ್ಚರ್ಯವೆಂದರೆ ಒಂದಿನಿತೂ ನರಳಲಿಲ್ಲ. ತುಂಬಾ ಪ್ರಶಾಂತವಾಗಿ ಮಲಗಿರುತ್ತಿದ್ದ. ನನ್ನ ಅಪ್ಪ ಅಮ್ಮ ಹಾಗೂ ಅವನ ಅಳಿಯಂದಿರೂ ಬಂದರು. ಆವತ್ತು ಸಂಜೆ ಅವನ ಖಾಯಂ ಡಾಕ್ಟರ್ ಕರತಂದೆ. ಅವರು ಪರೀಕ್ಶೆ ಮಾಡಿ ಎಲ್ಲಾ ಔಷಧ ನಿಲ್ಲಿಸ್ರಿ ಅವರಿಗೆ ಆರಾಮಾಗಿ ಹೋಗ್ಲಿಕ್ಕೆ ಕೊಡ್ರಿ ಇಲ್ಲಾ ಅಂದ್ರೆ ನೀವು ಜಗ್ಗಿದಷ್ಟೂ ಅವರಿಗೆ ತ್ರಾಸು ಜಾಸ್ತಿ ಆಗ್ತದೆ ಅಂದ್ರು. ಅವತ್ತು ರಾತ್ರಿ ಎಲ್ಲರೂ ಉಂಡು ಮಲಗಿದರು. ಅವನಿಗೆ ಜಾಸ್ತಿ ಆದಾಗಿನಿಂದ ಅವನ ರೂಮಲ್ಲಿ ಹಾಸಿಕೊಂಡು ಮಲಗುವುದು ನನ್ನ ಪಾಳಿಯಾಗಿತ್ತು. ನನ್ನ ಗಂಡ ಹಗಲಿಡೀ ದಣಿದ ಕಾರಣ ಅವನಿಗೆ ಗಾಢ ನಿದ್ದೆ ಬಂದುಬಿಡುತ್ತಿತ್ತು. ಹಾಗಾಗಿ ಮಕ್ಕಳೊಂದಿಗೆ ಮಲಗುತ್ತಿದ್ದ. ಮರುದಿನ ಬೆಳಗಾದರೆ ಗೌರಿ ಹಬ್ಬ. ನಾದಿನಿ ತಾನು ಗೌರಿ ಪೂಜೆ ಮಾಡುತ್ತೇನೆಂದು ತಯಾರಿ ಮಾಡಿಕೊಂಡು ಮಲಗಿದಳು. ನನ್ನ ಜೊತೆ ನನ್ನ ಅಪ್ಪನೂ ಮಾವನ ರೂಮಲ್ಲೇ ಮಲಗಲು ಬಂದ. ಆವತ್ತು ಸೆಪ್ಟೆಂಬರ್ 5 ಅವನ ಉಸಿರಾಟ ಯಾಕೋ ಸಶಬ್ದವಾಗಿತ್ತು. ನಡುರಾತ್ರಿ ಎದ್ದು ನೋಡಿದೆ. ನೀರು ಹಾಕಿದೆ ಒಂದೆರಡು ಚಮಚ ಕುಡಿದ. ಅವನ ಡಾಕ್ಟರು ಹೇಳಿದ ಮಾತು ಕಿವಿಗೆ ಬಿದ್ದಿತ್ತೋ ಏನೋ. ತಾನು ಇನ್ನು ಬದುಕುವುದಿಲ್ಲ ಎಂದು ಗೊತ್ತಾಯಿತೇನೋ. ನಿಧಾನವಾಗಿ ಉಸಿರಾಟ ವೇಗವಾಗುತ್ತ ಹೋಯಿತು. ಯಾರನ್ನು ಎಬ್ಬಿಸಲು ಮನಸ್ಸಾಗಲಿಲ್ಲ. ನಾಕು ಗಂಟೆ ಮುಗಿದು ಐದರ ಹತ್ತಿರ ಬಂದಿತ್ತು. ನನ್ನ ಅರಿವಿಲ್ಲದೇ ದಣಿದ ದೇಹ ನಿದ್ರೆಗೆ ವಶವಾಗಿತ್ತು. ಅಂತಹ ಹೊತ್ತಿನಲ್ಲೂ ನಿದ್ರಿಸುವ ಸಾದ್ಯತೆ ನೆನಪಾದರೆ ಆಶ್ಚರ್ಯವಾಗುತ್ತದೆ. ಥಟ್ಟನೆ ಅಪ್ಪ ಕರೆದ. ಎದ್ದು ನೋಡಿದರೆ ಇನ್ನೊಬ್ಬ ಅಪ್ಪ ಸುಮ್ಮನಾಗಿದ್ದ.

ಉಳಿದೆಲ್ಲವೂ ಮಾಮೂಲಿಯಾಗಿ ಆಯಿತು. ಕ್ರಿಯಾವಿಧಿ ಅಂತೆಲ್ಲ ಮುಗಿದು ಎಲ್ಲರೂ ಊರಿಗೆ ಹೋದರು. ನಾನು ನೌಕರಿಗೆ ಹೋಗಿ ಸಂಜೆ ತಿರುಗಿ ಬಂದೆ. ಮೊದಲ ಬಾರಿ ಬೀಗ ಹಾಕಿದ ಮನೆಯ ಬಾಗಿಲೆದುರು ನಿಂತಿದ್ದೆ. ನಾನು ಬರುವುದನ್ನೇ ಕಾಯುತ್ತಿದ್ದ ಮಕ್ಕಳು ಪಕ್ಕದ ಮನೆಯಿಂದ ಬಂದವು. ಒಳ ಬಂದೊಡನೆ ಮನೆ ಗವ್ವನೆ ಎದುರಾಯಿತು. ಮುಖ ತೊಳೆಯಲು ಸಿಂಕಿಗೆ ಹೋದೆ. ನಲ್ಲಿಯ ಬದಲು ಕಣ್ಣು ಸುರಿಯತೊಡಗಿದವು. ಮೆಡಿಕಲ್ ಕಾಲೇಜಿನಲ್ಲಿ ಡಾಕ್ಟರ ಮಾತು ಕೇಳಿದಾಗಿನಿಂದ ಶೇಖರವಾಗತೊಡಗಿದ್ದ ನೋವು ಒಳಗೇ ಉಳಿದಿತ್ತು. ನನಗೇ ಅಚ್ಚರಿ. ಮೊದಲೆಲ್ಲ ನಾನವನನ್ನು ಎಷ್ಟು ದ್ವೇಷಿಸುತ್ತಿದ್ದೆ. ಜಗಳವಾಡುತ್ತಿದ್ದೆ. ಅವನನ್ನು ಹಚ್ಚಿಕೊಂಡಿದ್ದು ಯಾವಾಗಿನಿಂದ ಅಂತ ಅರಿವಿಗೇ ಬರಲಿಲ್ಲ. ಅವನ ಮಗ- ಮಗಳು ಎಲ್ಲರಿಗೂ ಅವರವರದೇ ಜಗತ್ತು ಇತ್ತು. ಆದರೆ ನನ್ನ ಮತ್ತು ನನ್ನ ಮಕ್ಕಳ ಜಗತ್ತಲ್ಲಿ ಅವನಿಲ್ಲದ ಶೂನ್ಯ ತುಂಬಿತ್ತು. ನಾವು ನಿಜವಾಗಿ ಅನಾಥರಾಗಿ ಹೋಗಿದ್ದೆವು. ಆ ನಂತರದಲ್ಲಿ ಎಂಟು ಗಣೇಶ ಚೌತಿಗಳೇ ಉರುಳಿವೆ. ಆದರೆ ಇವತ್ತಿಗೂ ಮನೆಗೆ ಬಂದು ಬೀಗ ತೆಗೆವಾಗ ಅಪ್ರಯತ್ನವಾಗಿ ಅವನು ನೆನಪಾಗುತ್ತಾನೆ. ಅವನಿದ್ದಾಗ ಏನೋ ಅನುಕೂಲದ ಅನಿವಾರ್ಯತೆಗೆ ಒಡನಾಡುತ್ತಿದ್ದೇನೆ ಎಂದುಕೊಂಡಿದ್ದೆ. ಇಷ್ಟು ವರ್ಷಗಳಾದರೂ ನೆನಪು ನುಗ್ಗಿ ಬರುವ ಹೊಡೆತಕ್ಕೆ ಅವಕ್ಕಾಗಿ ಅಂದುಕೊಳ್ಳುತ್ತೇನೆ ಅಷ್ಟೊಂದು ಹಚ್ಚಿಕೊಂಡಿದ್ದೆನಾ?

 

‍ಲೇಖಕರು G

September 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಹೆಚ್ ಎಸ್ ಈಶ್ವರ್ ಯಾವೊಬ್ಬ ವ್ಯಕ್ತಿಯ ಶಾಲಾಕಾಲೇಜು ದಿನಗಳು ಬಹುಪಾಲು ಸ್ಮರಣೀಯವಾಗಿರುತ್ತವೆ ಮತ್ತು ನಂತರದ ಬದುಕಿಗೆ ಅವಶ್ಯಕ ಬುನಾದಿಯನ್ನು...

5 ಪ್ರತಿಕ್ರಿಯೆಗಳು

 1. Swarna

  ದ್ವೇಷಿಸುತ್ತೇವೆ ಎಂದುಕೊಂಡವರೇ ಜಾಸ್ತಿ ನೆನಪಾಗ್ತಾರೆ.
  ನಮ್ಮ ದ್ವೇಷವೇ ಸುಳ್ಳೇನೋ ?
  ಬರಹ ಚೆನ್ನಾಗಿದೆ.
  ಸ್ವರ್ಣಾ

  ಪ್ರತಿಕ್ರಿಯೆ
 2. kln

  ಸಣ್ಣ ಸಣ್ಣ ವಾಕ್ಯಗಳು, ಸತ್ವಪೂರಿತವಾದ ತುಂಬು ಮನದ ಅನಿಸಿಕೆಗಳು, ಅನುಭವವನ್ನು ಕಥೆಯಾಗಿಸುವ ವಿಧಾನ ತುಂಬಾ ಹಿಡಿಸಿತು ಮ್ಯಾಡಮ್. ಧನ್ಯವಾದ. ಮನೆಯಲ್ಲಿ ಟಿವಿ ಬಂದ ಮೇಲೆ ಬದುಕನ್ನು “ಅನುಭವಿಸುವ” ಪರಿಯೂ ಬದಲಾಗಿದೆ. ಕಥೆಯಲ್ಲಿ, ಟಿವಿ ಇಲ್ಲದ ಮನೆಯಾದ್ದರಿಂದ ಕಧೆಯಲ್ಲಿ ವ್ಯಕ್ತವಾಗಿರುವ ಭಾವನೆಗಳಿಗೆ ಒಂಧರಾ ಅಥೆಂಟಿಸಿಟಿ ಇದೆ ಎನ್ನಿಸಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: