ಮಲದ ಗುಂಡಿಯಲ್ಲಿ ಉಸಿರು ಸಿಕ್ಕಿಸಿಕೊಂಡು…

ಜಿ ಎನ್ ಮೋಹನ್

ಕೃಪೆ: ವಿಜಯ ಕರ್ನಾಟಕ

‘ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಒಂದು ಸಾವು ಸಂಭವಿಸಿದೆ ನೋಡಿ’ ಎನ್ನುವ ಎಸ್ ಎಂ ಎಸ್ ನ್ನು ಗೆಳೆಯ ಹರ್ಷಕುಮಾರ ಕುಗ್ವೆ ರವಾನಿಸಿದಾಗ ನನಗೆ ಇನ್ನಿಲ್ಲದ ಷಾಕ್ ಆಯಿತು. ಆತ ಮಾತನಾಡುತ್ತಿದ್ದುದು ಆಗ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರ ಜಿಲ್ಲೆಯ ಬಗ್ಗೆ. ದಕ್ಷಿಣ ಕನ್ನಡದಲ್ಲಿ ಸಂಭವಿಸಿದ ಈ ಒಂದು ಸಾವು ಖಂಡಿತಾ ನನ್ನನ್ನು ಕಾಡಿತ್ತು. ಯಾಕೆಂದರೆ ಅದು ಅಂತಿಂತಹ ಸಾವಲ್ಲ. ಮಲದ ಗುಂಡಿಯೊಳಗೆ ಸಿಲುಕಿ ಆದ ಸಾವು. ಅದೂ ಇಡೀ ದೇಶದಲ್ಲಿ ಯಾವ ಜಿಲ್ಲೆ ಮಲ ಹೊರುವ ಪದ್ದತಿಯ ವಿರುದ್ಧ ಧೃಡ ಮನಸ್ಸಿನಿಂದ ಹೋರಾಟ ನಡೆಸಿತ್ತೋ, ಮಲ ಹೊರುವ ಪದ್ದತಿಯನ್ನು ಇಲ್ಲವಾಗಿಸಿತ್ತೋ ಆ ಜಿಲ್ಲೆಯಲ್ಲಿ ಈ ಸಾವು ಸಂಭವಿಸಿತ್ತು. ನಟ ಅಮೀರ್ ಖಾನ್ ಪ್ರಧಾನಿಯ ಎದುರು ಕೂತು ಈ ಮಲ ಹೊರುವ ಪದ್ದತಿಯನ್ನು ನಿಷೇಧಿಸಿ ಎಂದು ಕಳಕಳಿಯಿಂದ ಮನವಿ ಮಾಡುತ್ತಿದ್ದಾಗ ನನ್ನ ಕಣ್ಣ ಮುಂದೆ ಸುಳಿದ ಚಿತ್ರ ಇದು. ಆಮೀರ್ ಖಾನ್ ‘ಸತ್ಯಮೇವ ಜಯತೆ’ಯಲ್ಲಿ ಮನುಷ್ಯ ಕುಲವೇ ನಾಚಿಕೆಯಿಂದ ತಲೆತಗ್ಗಿಸಬೇಕಾದ ಈ ಪದ್ದತಿಯ ವಿರುದ್ಧ ಮಾತನಾಡಿದ್ದಾರೆ. ದೇಶದ ಗಮನ ಸೆಳೆದಿದ್ದಾರೆ. ಇದರ ಮುಂದುವರಿಕೆಯಾಗಿ ಪ್ರಧಾನಿಗಳ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಆದರೆ ಅವರೊಬ್ಬರಿದ್ದರು- ಬಿ ಬಸವಲಿಂಗಪ್ಪ. ಇಂತಹ ಒಂದು ಹೀನ ಪದ್ಧತಿಯೊಂದು ಇದೆ ಎಂದು ಗುರುತಿಸಲು ದೇಶ ನಿರಾಕರಿಸುತ್ತಿದ್ದ ಸಮಯದಲ್ಲಿಯೇ ಮಲ ಹೊರುವ ಪದ್ದತಿಯ ವಿರುದ್ಧ ದನಿ ಎತ್ತಿದವರು. ಇಡೀ ರಾಜ್ಯದಲ್ಲಿ ಬರಿಗೈಯಲ್ಲಿ ಮಲವನ್ನು ಬಾಚಿ, ತಲೆಯ ಮೇಲೆ ಅದನ್ನು ಹೊತ್ತು ಸಾಗಿಸುವ ವ್ಯವಸ್ಥೆಯಿದೆಯಲ್ಲಾ ಎಂದು ನಾಚಿದವರು. ಈ ಪದ್ಧತಿಯೇ ಇಲ್ಲ ಎಂದು ಸಾಧಿಸುತ್ತಿರುವಾಗ ‘ಖಂಡಿತಾ ಇದೆ. ನಾವು ಮಲ ಹೊರುತ್ತಿದ್ದೇವೆ’ ಎಂದು ಬೆಳಗಾವಿ ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ಮಾಡಿದವರು. ಅಷ್ಟೇ ಅಲ್ಲ, ಅದನ್ನು ಆಧಾರವಾಗಿಟ್ಟುಕೊಂಡು ಇಡೀ ರಾಜ್ಯದಿಂದಲೇ ಮಲ ಹೊರುವ ಪದ್ದತಿಯನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಮೊದಲ ಕಾಯಿದೆ ರಚಿಸಿದವರು. 1993ರಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಕಿವಿ ಹಿಂಡಿದಾಗ ದೇಶದಲ್ಲಿ ಮಲ ಹೊರುವ ಪದ್ದತಿಯನ್ನು ಇಲ್ಲವಾಗಿಸುತ್ತೇನೆ ಎನ್ನುವ ವಾಗ್ದಾನವನ್ನು ನೀಡಿತು. ಅದಕ್ಕೂ 20 ವರ್ಷಗಳ ಮುಂಚೆಯೇ ಈ ಪದ್ಧತಿ ನಿಗ್ರಹಿಸುವ ನಿಟ್ಟಿನಲ್ಲಿ ಕಾಯಿದೆ ರಚನೆಗೆ ಮುಂದಾಗಿದ್ದು ಆಗ ಪೌರಾಡಳಿತ ಸಚಿವರಾಗಿದ್ದ ಬಿ ಬಸವಲಿಂಗಪ್ಪ. ಅಮೀರ್ ಖಾನ್ ದೇಶದ ಮುಂದೆ ಈ ಅನಿಷ್ಟ ಪದ್ದತಿಯನ್ನು ಬಿಚ್ಚಿಡುತ್ತಿರುವಾಗಲೇ ಕರ್ನಾಟಕದಲ್ಲಿ ಸಾವಿರಾರು ಜನ ಇನ್ನೂ ತಲೆ ಮೇಲೆ ಮಲ ಹೊರುತ್ತಿದ್ದಾರೆ. ಬರಿಗೈಯಲ್ಲಿ ಮಲ ಬಾಚುತ್ತಿದ್ದಾರೆ. ಮೂಗಿಗೆ ಮಾತ್ರ ಬಟ್ಟೆ ಕಟ್ಟಿಕೊಂಡು ಮಲದ ಗುಂಡಿಯೊಳಗೆ ಇಳಿಯುತ್ತಿದ್ದಾರೆ. ‘ಉತ್ತರ ಕರ್ನಾಟಕದ ಎಲ್ಲೆಡೆ ಇದು ರಾಜಾರೋಷವಾಗಿ ನಡೆಯುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಕದ್ದೂ ಮುಚ್ಚಿ ನಡೆಯುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ವಿಧಾನ ಸೌಧಕ್ಕೆ ತೀರಾ ಹತ್ತಿರದಲ್ಲಿರುವ ಸಂಪಂಗಿರಾಮನಗರದಲ್ಲೂ ಇದು ನಡೆಯುತ್ತಿದೆ ‘ ಎಂದು ರಾಜ್ಯದ ಸ್ತಿತಿಯನ್ನು ಬಿಚ್ಚಿಟ್ಟವರು ಈ ಬಗ್ಗೆ ಆಳ ಅಧ್ಯಯನ ಮಾಡಿರುವ ಟಿ ಕೆ ದಯಾನಂದ್. ಸವಣೂರಿನಲ್ಲಿ ಪೌರ ಕಾರ್ಮಿಕರು ತಲೆಯ ಮೇಲೆ ಮಲ ಸುರಿದುಕೊಂಡು ತಮ್ಮ ಹೀನಾಯ ಪರಿಸ್ಥಿತಿಯ ಬಗ್ಗೆ ಪ್ರತಿಭಟಿಸಿದಾಗ ಸಮಾಜ ಬೆಚ್ಚಿ ಬಿತ್ತು. ಮಲ ಎನ್ನುವ ಪದವೇ ಇಷ್ಟೊಂದು ಕಸಿವಿಸಿ ಉಂಟುಮಾಡುವಾಗ ಅದನ್ನು ತಲೆಯ ಮೇಲೆ ಸುರಿದುಕೊಂಡದ್ದು ಇಂತಹ ಪದ್ದತಿಯೊಂದು ಇದೆ ಎಂಬುದನ್ನು ಗೊತ್ತುಮಾಡಿಕೊಟ್ಟಿತು. ಈ ಪದ್ಧತಿ ಸವಣೂರು ಪ್ರಕರಣಕ್ಕೂ ಮುಂಚೆ ಇತ್ತು ಹಾಗೂ ಆ ನಂತರವೂ ಜೀವಂತವಾಗಿದೆ. 2011ರ ಗಣತಿ ಇಡೀ ದೇಶದಲ್ಲಿ 7 ಲಕ್ಷ ಮಲ ಹೊರುವವರು ಇದ್ದಾರೆ ಎಂಬುದನ್ನು ಪ್ರಕಟಿಸಿತು. ದೇಶದಲ್ಲಿ ನೀರು ಬಳಸದ ಒಣ ಶೌಚಾಲಯಗಳೇ 7 .94 ಲಕ್ಷ ಇದೆ ಎನ್ನುವ ಅಂಶವನ್ನು ಈ ಗಣತಿ ಬಯಲಿಗಿಟ್ಟಿದೆ. ಈ ಗಣತಿಯ ಪ್ರಕಾರ ಕರ್ನಾಟಕದಲ್ಲಿ ಇರುವ ಒಣ ಶೌಚಾಲಯಗಳ ಸಂಖ್ಯೆಯೇ 7740. ಅನಧಿಕೃತವಾಗಿ ಇರುವ ಶೌಚಾಲಯಗಳ ಅಂಕಿಯನ್ನು ಪಕ್ಕಕ್ಕಿಟ್ಟರೂ ಸರ್ಕಾರವೇ ಇಷ್ಟು ಶೌಚಾಲಯಗಳಲ್ಲಿ ಕೈನಲ್ಲಿ ಬಾಚಿ ತಲೆಯ ಮೇಲೆ ಮಲ ಹೊರುವ ಸ್ಥಿತಿ ಇದೆ ಎನ್ನುವುದನ್ನು ಒಪ್ಪಿದಂತಾಯಿತು. ಇದರ ಅರ್ಥ ಸರ್ಕಾರವೇ ತಾನು 1993ರಲ್ಲಿ ಇಂತಹ ಒಣ ಶೌಚಾಲಯವನ್ನು ನಿರ್ಮಿಸುವುದರ ವಿರುಧ್ಧ, ತಲೆಯ ಮೇಲೆ ಮಲ ಹೊರುವುದರ ವಿರುಧ್ಧ ರೂಪಿಸಿದ ಕಾಯಿದೆಯನ್ನು ಉಲ್ಲಂಘಿಸಿದೆ ಎಂದು. ಈ ಕಾಯಿದೆಯನ್ನು ಉಲ್ಲಂಘಿಸಿದರೆ ಒಂದುವರ್ಷ ಜೈಲು, ೨ ಸಾವಿರ ರೂ ದಂಡ. ಆದರೆ ಇಡೀ ದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದಿನವರೆಗೂ ಈ ಕಾಯಿದೆಯಡಿ ಒಂದೇ ಒಂದು ಮೊಕದ್ದಮೆ ದಾಖಲಾಗಿಲ್ಲ. ಯಾರೊಬ್ಬರೂ ಜೈಲಿಗೆ ಹೋಗಿಲ್ಲ. ಆದರೆ ಈಗಲೂ ಇಡೀ ದೇಶದಲ್ಲಿ ಈ ಕಾಯಿದೆಯಡಿ ಬಂಧನ ಆಗಿರುವುದು ಕರ್ನಾಟಕದಲ್ಲಿ ಮಾತ್ರವೇ. ಸವಣೂರು ಪ್ರಕರಣದ ನಂತರ ಕರ್ನಾಟಕದಲ್ಲಿ ಈ ಮಲ ಹೊರುವ ಪದ್ದತಿಯ ವಿರುದ್ಧ ಒಂದು ಜಾಗೃತಿ ಮೂಡಿದೆ. ಪಿ ಯು ಸಿ ಎಲ್ ರಾಜ್ಯದಲ್ಲಿರುವ ಈ ಪದ್ದತಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಈ ಪದ್ಧತಿ ಜಾರಿಯಲ್ಲಿರುವುದನ್ನು ದಾಖಲೆಗಳ ಸಮೇತ ಮುಂದಿಟ್ಟಿದೆ. ಸಾವುಗಳು ಸಂಭವಿಸಿರುವುದನ್ನು ಬೆಳಕಿಗೆ ತಂದಿದೆ. ಸವಣೂರು ಪ್ರಕರಣ ಹೊರಬಂದಾಗ ಅದರ ಸುತ್ತಮುತ್ತಲಿನ ಗ್ರಾಮಗಳನ್ನು ಅಧ್ಯಯನ ಮಾಡಲು ಹೊರಟ ತಂಡ ಕಂಡುಕೊಂಡ ಅಂಶಗಳು ಪರಿಸ್ಥಿತಿಯ ಭೀಕರತೆಯನ್ನು ಮನವರಿಕೆ ಮಾಡಿಕೊಟ್ಟವು. ಇದು ಇಡೀ ರಾಜ್ಯಕ್ಕೆ ಅಧ್ಯಯನವನ್ನು ವಿಸ್ತರಿಸಲು ಕಾರಣವಾಯಿತು. ರಾಜ್ಯದಲ್ಲಿ ಜರುಗಿದ 11 ಸಾವಿನ ಪ್ರಕರಣಗಳಲ್ಲೂ ಮೊಕದ್ದಮೆ ದಾಖಲಾಗಿದೆ. ಬಂಧನವೂ ಆಗಿದೆ. ಈ ಪದ್ದತಿಯ ವಿಡಿಯೋಗಳನ್ನು ದಾಖಲಿಸುವುದರ ಮೂಲಕ ಸಮಸ್ಯೆಯ ಭೀಕರತೆಯನ್ನು ಸರ್ಕಾರದ ಮುಂದೆಯೂ ಮಂಡಿಸಲಾಗಿದೆ. ಕಳೆದ ಮೂರು ವರ್ಷಗಳಿಂದೀಚೆಗೆ ಬೆಳಕಿಗೆ ಬಂದಿರುವ ಮಲದ ಗುಂಡಿಯಲ್ಲಿ ಸಿಕ್ಕು ಸಾವನ್ನಪ್ಪಿದವರ ಸಂಖ್ಯೆ 11 . ಈ ಪೈಕಿ ದಕ್ಷಿಣ ಕನ್ನಡದಲ್ಲಿಯೇ 5 ಸಾವು ಸಂಭವಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಉಡುಪಿ ಹಾಗೂ ಮಂಗಳೂರು ಪುರಸಭೆಗಳೇ ಈ ಮಲ ಹೊರುವ ಪದ್ದತಿಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಪಣ ತೊಟ್ಟಿದ್ದವು. ಬಿ ಬಸವಲಿಂಗಪ್ಪನವರು ತಂದ ಕಾಯಿದೆಯನ್ನು ಹಲ್ಲು ಕಚ್ಚಿ ಜಾರಿ ಮಾಡಿದ ನಗರಸಭೆಗಳು ಇವು. ಒಂದೆಡೆ ವಿ ಎಸ್ ಆಚಾರ್ಯ, ಇನ್ನೊಂದೆಡೆ ಬ್ಲೇಸಿಯಸ್ ಡಿಸೋಜಾ ಇಬ್ಬರೂ ಮಲ ಹೊರುವ ಪದ್ಧತಿ ಹಿಂದೆ ಸರಿಯಲು ಕಾರಣರಾಗಿದ್ದರು. ಆದರೆ ಈಗ ಅದೇ ಜಿಲ್ಲೆಯಲ್ಲಿ ಐದು ಸಾವುಗಳು ಸಂಭವಿಸಿದೆ. ಫ್ರಾನ್ಸ್ ನಲ್ಲಿ ಜರುಗಿದ ಆರನೆಯ ಜಾಗತಿಕ ಜಲ ಸಮಾವೇಶದಲ್ಲಿ ಮಾತನಾಡಲು ಅವಕಾಶ ಸಿಕ್ಕಿದ್ದು ಉಷಾ ಚಿನ್ಮಾವೋಗೆ. ಆಕೆ ರಾಜಸ್ಥಾನದ ಕುಗ್ರಾಮದಲ್ಲಿ ಹೇಗೆ ತಾನು ಮಲ ಬಳಿದೆ, ತಲೆ ಮೇಲೆ ಹೊತ್ತು ಸಾಗಿಸಿದೆ ಎನ್ನುವುದನ್ನು ಹೇಳುತ್ತಾ ಹೋದಂತೆ ‘ಭಾರತ ಪ್ರಕಾಶಿಸುತ್ತಿದೆ’ ಎಂದೇ ನಂಬಿದ್ದ ಜಗತ್ತಿನ ಮುಂದೆ ಅದರ ಇನ್ನೊಂದು ಮುಖವೂ ಅನಾವರಣಗೊಳ್ಳುತ್ತಾ ಹೋಯಿತು. ಹತ್ತನೆಯ ವಯಸ್ಸಿಗೆ ಮದುವೆಯಾಗಿ ಮಾವನ ಮನೆಗೆ ಬಂದ ಈಕೆ ಅವರು ತಲೆತಲಾಂತರದಿಂದ ಮಾಡಿಕೊಂಡು ಬಂದ ಮಲ ಬಾಚುವ ಕೆಲಸಕ್ಕೆ ಕೈ ಹಚ್ಹ್ಚಿದ್ದಳು. ದೇಶದ ಯಾವುದೇ ರಾಜ್ಯವನ್ನು ತೆಗೆದುಕೊಳ್ಳಿ ಇಂತಹ ಕಡೆ ಮಲ ಹೊರುವ ಪದ್ಧತಿ ಇಲ್ಲ ಎನ್ನಲು ಸಾಧ್ಯವೇ ಇಲ್ಲ. ವಾಣಿಜ್ಯ ನಗರಿ ಮುಂಬೈನಲ್ಲೂ ಇದೆ. ವಿಟೋಬಾನ ತವರು ಪುಣೆಯಲ್ಲಿಯೂ ಇದೆ. ಸುಂದರ ಕಾಶ್ಮೀರದಲ್ಲಿಯೂ ಇದೆ. ಕಾರ್ಮಿಕ ಹೋರಾಟದ ನೆಲೆ ಪಶ್ಚಿಮ ಬಂಗಾಳದಲ್ಲಿಯೂ ಇದೆ. ಐ ಟಿ- ಬಿ ಟಿ ಸ್ವರ್ಗ ಬೆಂಗಳೂರಿನಲ್ಲಿಯೂ ಇದೆ. 1992ರಿಂದಲೂ ತಾನು ಮಲ ಹೊರುವ ಪದ್ದತಿಯಿಂದ ಮುಕ್ತವಾದ ರಾಜ್ಯ ಎಂದು ಘೋಷಿಸಿಕೊಂಡಿದ್ದ ಗುಜರಾತ್ ಗಂತೂ 2011 ರ ಗಣತಿಯಿಂದ ಮುಖಭಂಗವಾಗಿದೆ. ಗುಜರಾತ್ ನ 2500 ಶೌಚಾಲಯಗಳಿಂದ ತಲೆಯ ಮೇಲೆ ಮಲ ಹೊತ್ತು ಸಾಗಿಸಲಾಗುತ್ತಿದೆ ಎನ್ನುವುದನ್ನು ಈ ಗಣತಿ ಬಯಲುಮಾಡಿದೆ. ಗುಜರಾತ್ ಹೈಕೋರ್ಟ್ ಸಹಾ ಇದನ್ನು ಗುರುತಿಸಿದೆ. ‘ಇದು ಕೇವಲ ಶುಚಿತ್ವದ ವಿಷಯವಲ್ಲ ಬದಲಿಗೆ ಗೌರವದಿಂದ ಬದುಕುವ ಮೂಲಭೂತ ಹಕ್ಕಿನ ಪ್ರಶ್ನೆ’ ಎನ್ನುತ್ತಾರೆ ರಾಷ್ಟ್ರೀಯ ಸಲಹಾ ಮಂಡಳಿಯ ಮಾಜಿ ಸದಸ್ಯ ಹರ್ಷ್ ಮಂದರ್. ಕರ್ನಾಟಕ ಉಚ್ಛ ನ್ಯಾಯಾಲಯ ಹೇಳುತ್ತಿರುವುದೂ ಇದನ್ನೇ. ರಾಜ್ಯದಲ್ಲಿ ಮಲ ಹೊರುವ ಪದ್ದತಿಯನ್ನು ತೊಡೆದು ಹಾಕಲು ಆಗದ ಬಗ್ಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಸಹಾ ಈ ಪದ್ದತಿಯನ್ನು ಇಲ್ಲವಾಗಿಸಿಲ್ಲ ಎನ್ನುವುದನ್ನು ವಿಚಾರಣೆಯ ವೇಳೆ ಕಂಡುಕೊಂಡ ನ್ಯಾಯಾಲಯ ‘ನೀವೇ ಏಕೆ ಈ ಮಲದ ಗುಂಡಿಗೆ ಇಳಿದು ಆ ಕೆಲಸಗಾರರು ಏನು ಅನುಭವಿಸುತ್ತಿದ್ದಾರೆ ಎಂಬುದನ್ನು ಅನುಭವಿಸಿ ನೋಡಬಾರದು’ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದೆ. ಕೆಂಡದ ಮೇಲೆ ನಡೆದವರಿಗೆ ಮಾತ್ರವೇ ಕೆಂಡದ ಬಿಸಿ ಗೊತ್ತಾಗಲು ಸಾಧ್ಯ ಎನ್ನುತ್ತಾರೆ ಕವಿ ಸು ರಂ ಎಕ್ಕುಂಡಿ.    ]]>

‍ಲೇಖಕರು G

July 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ಎಂಬ ‘ಜೋತಮ್ಮ’

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ...

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

-ಜಿ ಎನ್ ಮೋಹನ್ 'ಇದು ಕೇಳೋ ಪ್ರಶ್ನೆನಾ..' ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ 'ಎದೆ ತುಂಬಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This