
ಚಂದ್ರು ಎಂ ಹುಣಸೂರು
ನಾನು ತಾಯತ ಕಟ್ಟಿಕೊಂಡು
ಉಡುದಾರ ಬಿಗಿಸಿಕೊಂಡು
ತಲೆಯ ಬಳಸಿ ಕಿವಿಯ ಮುಟ್ಟಿ
ಕ್ರಾಪು ತೆಗೆಯುವ ಕಾಲಮಾನದಲ್ಲಿ
ನಮ್ಮ ಮನೆಯಲೊಬ್ಬ ಜೀತದಾಳು
ಕೆಲಸಕ್ಕೆ ಸೇರಿದ ದಿನ
ಒಂದೇ ಏಟಿಗೆ ಸೌದೆ ಪಕಡ ಮಾಡುತ್ತಿದ್ದ
ಯಾರೂ ಇಲ್ಲದಾಗ ನನ್ನ ಕರೆದು ಮುದ್ದಿಸುತ್ತಿದ್ದ
ಅವನ ತುಟಿಯ ಎಂಜಲ ಕರುಣೆಗೆ
ಹೊಲದಲ್ಲಿ ಹುಟ್ಟಿದ ಕರುವನ್ನು
ಹೆಗಲಲ್ಲಿ ಹೊತ್ತು ತರುವ ಭಾಗ್ಯ ಅವನಿಗೆ ಲಭಿಸಿತ್ತು
ಯಾವಾಗಲೋ ಅವನ ಅಪ್ಪ ಬರುವ
ದಿಢೀರನೆ ಸಾವು ಬರುವಂತೆ
ಒಡೆದ ಹಿಮ್ಮಡಿ ಕಂಡು
ಹರಿದ ಅಂಗಿಯ ನೋಡಿ
ಅವನ ಕರುಳು ಸಾಲ ಕೊಟ್ಟು ಪೀಡಿಸುವವರನ್ನು
“ಸೂಳೆಮಕ್ಕಳ” ಅಂದಿರಬಹುದು
ಇನ್ನು ಮೂರು ವರ್ಷ ಹೀಗೆ
ಜೀತ ಮಾಡಿಬಿಡು ಮಗ
ನಾನು ಸಾಯುವುದರೊಳಗೆ
ನಾನು ಮಾಡಿಕೊಂಡ ಋಣ ಅಳಿಯಲಿ
ಹಬ್ಬಕ್ಕೆಂದು ಅವಗೆ ಹೊಸ ಬಟ್ಟೆ ಕೊಟ್ಟರು
ತಣ್ಗೆಯ ತುಂಬಾ ಬಿಸಿ ಪಾಯಸ ಬಿಟ್ಟರು
ಅವ್ವ ಕಡೆವ ಬೆಣ್ಣೆಯಲ್ಲಿ
ಅವಗೂ ಒಂದು ಪಾಲು
ಅವನೆ ಕರೆವ ಕರೀ ಹಸುವ
ಬಿಗಿ ಮೊಲೆಯ ಹಾಲು
ಎಲ್ಲ ಇರುವರಂತೆ ಅವಗೆ
ಯಾವುದೋ ಅವನ ಊರು
ಹೊರಟ ಅವನ ಕಿಸೆಯ ಕಡೆಗೆ
ತಳ್ಳಿರಪ್ಪ ನೂರು
ಅವನಿಗೂ ಹಾದಿಯಲಿ ಸಂತೆ ಸಾವಿರಾರು

ಹುಲ್ಲಿನ ಹೊರೆಯಲಿ
ಹಾವನ್ನೆ ಹೊತ್ತು ತಂದು
ಕೊಟ್ಟಿಗೆಯಲಿ ಅದು ನರ್ತಿಸಿತು
ಮಂಕು ದೀಪದ ಬೆಳಕಲಿ
ದನ ಕಟ್ಟಿ
ಹಜಾರದ ಚಾಪೆಯಲಿ ಒರಗುತ್ತಿದ್ದ
ಯಾರೊ ಒಮ್ಮೆ ಆಳಿನದು ಊಟ ಆಯ್ತಾ? ಎಂದಾಗ
ಅವ್ವ ಕೋಣೆಯಿಂದ ಓಡಿಬಂದು
ಆಳು ಎನ್ನಬೇಡ ನೊಂದುಕೊಂಡಾನು
ಇಡೀ ದಿನ ಉತ್ತು ಬಂದರೂ
‘ಕಾಪಿ ಕೊಡಿ ಅವ್ವಾರೆ’ ಅಂದಾನು
ಹಸುವನ್ನೊಮೆ ಮೂವತ್ತು ಮೈಲಿ ನಡೆದೇ ಹೊಡೆದುಕೊಂಡು ಹೋದ ನೆಂಟರ ಮನೆಗೆ
ಅಲ್ಲಿನ ಉಪ್ಪೆಸರಿಗೆ ತುಸು ಹೆಚ್ಚೇ ಖಾರ ಹಾಕಿಸಿಕೊಂಡ
ಮದುವೆ ಆಗಬೇಕು ಎಂದು ಅಲ್ಲೆಲ್ಲ ಹೇಳಿ ಬಂದ
ಮಲ್ಲಿಗೆ ಕಂಡಾಗಲೆಲ್ಲ ಅವಳನ್ನೊಮ್ಮೆ ನೆನೆದ
ಎಲ್ಲಿರುವನೋ ಅವಡುಗಚ್ಚಿ ಹೊಲವ ಅಗೆದ ಭೂಪ
ಅವನ ನೆನಪ ಸಾಗರದಲ್ಲಿ ನನ್ನ ಹೃದಯ ದ್ವೀಪ
0 ಪ್ರತಿಕ್ರಿಯೆಗಳು