ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ…

ಚಿತ್ರ: ಮಿಲನ

ಗೀತೆರಚನೆ: ಜಯಂತ್ ಕಾಯ್ಕಿಣಿ

ಗಾಯನ: ಶ್ರೇಯಾ ಘೋಷಾಲ್

ಸಂಗೀತ: ಮನೋಮೂರ್ತಿ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ

ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾಡಿದೆ ||ಪ||

ಹೇಳುವುದು ಏನೋ ಉಳಿದುಹೋಗಿದೆ

ಹೇಳಲಿ ಹೇಗೆ ತಿಳಿಯದಾಗಿದೆ ||ಅ.ಪ.||

ನೋವಿನಲ್ಲಿ ಜೀವ ಜೀವ ಅರಿತಾ ನಂತರ

ನಲಿವೂ ಬೇರೆ ಏನಿದೆ ಪ್ರೀತಿ ಅಂತರ

ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ

ಒಂದೇ ಸಾರಿ ನೀ ಕೇಳೆಯಾ ಈ ಸ್ವರಾ

ಮನಸಲ್ಲಿ ಚೂರು ಜಾಗ ಬೇಕಿದೇ

ಕೇಳಲಿ ಹೇಗೆ ತಿಳಿಯದಾಗಿದೆ ||1||

ಕಣ್ಣು ತೆರೆದು ಕಾಣುವಾ ಆ ಕನಸೇ ಜೀವನಾ

ಸಣ್ಣ ಹಠವ ಮಾಡಿದೆ ಹೃದಯ ಈ ದಿನಾ

ಎದೆಯ ದೂರವಾಣಿಯಾ ಕರೆಯ ರಿಂಗಣಾ

ಕೇಳು ಜೀವವೇ ಏತಕೀ ಕಂಪನಾ

ಹೃದಯವು ಎಲ್ಲೋ ಕಳೆದುಹೋಗಿದೆ

ಹುಡುಕಲೇ ಬೇಕೆ ತಿಳಿಯದಾಗಿದೆ ||2||

JayanthKaikini1ಚಿತ್ರ: ದಿ ಸಂಡೇ ಇಂಡಿಯನ್

ಆರೆಂಟು ತಿಂಗಳ ಹಿಂದೆ, ಹಿರಿಯ ನಿರ್ದೇಶಕ ಗೀತಪ್ರಿಯ ಅವರೊಂದಿಗೆ ಮಾತನಾಡುತ್ತಿದ್ದಾಗ ಚಿತ್ರಗೀತೆಗಳ ವಿಷಯ ಬಂತು. ಈಗಿನ ಸಂದರ್ಭದ ಕೆಲವು ಅಬ್ಬರದ, ಅರ್ಥವಿಲ್ಲದ, ಆಪ್ತವಲ್ಲದ ಹಾಡುಗಳ ಬಗ್ಗೆ ಹೇಳುತ್ತಾ, `ಸರ್, ಮಧುರಗೀತೆಗಳ ಯುಗ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಅವರ ಕಾಲಕ್ಕೇ ಮುಗಿದುಹೋಯ್ತು ಅಲ್ಲವಾ’ ಎಂದು ಪ್ರಶ್ನಿಸಿದರೆ, ಗೀತಪ್ರಿಯ ತಕ್ಷಣವೇ ಹೇಳಿದರು: `ಈಗಲೂ ಒಳ್ಳೊಳ್ಳೆಯ ಹಾಡುಗಳು ಬರ್ತಾ ಇವೆ. ಅದರಲ್ಲೂ ಜಯಂತ್ ಕಾಯ್ಕಿಣಿ ಬರೀತಾರಲ್ಲ? ಅವರ ಹಾಡುಗಳು ವೆರೀ ಗುಡ್ ಅನ್ನುವಷ್ಟು ಚನ್ನಾಗಿರ್ತವೆ. ಅವರು ಬಳಸುವ ಒಂದೊಂದು ಪದದಲ್ಲೂ ಜೀವ ಇರುತ್ತೆ. ತೂಕ ಇರುತ್ತೆ. ಪ್ರೀತಿ ಇರುತ್ತೆ. ಬೆರಗಿರುತ್ತೆ. ಲಾಲಿತ್ಯ ಇರುತ್ತೆ. ಇಡೀ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸುವಂಥ ಶಕ್ತಿ ಜಯಂತ್ ಕಾಯ್ಕಿಣಿಯವರ ಹಾಡುಗಳಿಗಿರುತ್ತೆ. ಹಾಗಾಗಿ ಅವರನ್ನು `ಮಧುರಗೀತೆಗಳ ಸರದಾರ’ ಅಂತ ಧಾರಾಳವಾಗಿ ಕರೆಯಬಹುದು…’

ಅನುಮಾನವೇ ಬೇಡ. ಕನ್ನಡ ಸಿನಿಮಾ ಸಾಹಿತ್ಯಕ್ಕೆ ಒಂದು ಹೊಸ ಉಡುಗೆ ತೊಡಿಸಿದವರು ಜಯಂತ ಕಾಯ್ಕಿಣಿ. ಗೀತ ಸಾಹಿತ್ಯಕ್ಕೆ ಹೊಸತು ಎಂಬಂಥ ಪದಗಳನ್ನೂ, ಸಾಲುಗಳನ್ನೂ ಬಳಸಿ ಗೆದ್ದದ್ದು ಕಾಯ್ಕಿಣಿಯವರ ಹೆಚ್ಚುಗಾರಿಕೆ. ಉಳಿದೆಲ್ಲ ಗೀತೆರಚನೆಕಾರರಿಗಿಂತ ಜಯಂತ್ ಸ್ವಲ್ಪ ಡಿಫರೆಂಟ್ ಎಂಬುದಕ್ಕೆ ಹಾಡಿನಲ್ಲಿ ಬಳಸಿದ `ಕೊಲ್ಲು ಹುಡುಗೀ ಒಮ್ಮೆ ನನ್ನ ಹಾಗೇ ಸುಮ್ಮನೆ’ ಎಂಬ ಸಾಲೇ ಉದಾಹರಣೆ.

ಜಯಂತ್ ಕಾಯ್ಕಿಣಿಯವರು ಚಿತ್ರರಂಗಕ್ಕೆ ಬಂದದ್ದು ಡಾ. ರಾಜ್ ಕಂಪನಿ ತಯಾರಿಸಿದ `ಚಿಗುರಿದ ಕನಸು’ ಚಿತ್ರದ ಮೂಲಕ. ಅದಕ್ಕೂ ಮುನ್ನ ಅವರು ಟಿ.ವಿ.ಯ ಕಾರ್ಯಕ್ರಮ ನಿರೂಪಕರಾಗಿದ್ದರು. ಅದಕ್ಕೂ ಮುಂಚೆ ನಾಡಿನ ಅಷ್ಟೂ ಮಂದಿಯ ಮನಸ್ಸು ಗೆ(ಕ)ದ್ದ `ಭಾವನಾ’ ಮಾಸಿಕದ ಸಂಪಾದಕರಾಗಿದ್ದರು. ಅದಕ್ಕೂ ಸ್ವಲ್ಪ ಹಿಂದೆ ಮೋಹಕ ನಗೆ ಮತ್ತು ಮನಮೋಹಕ ಪದ್ಯಗಳಿಂದ ಹದಿಹರಯದ ಎಲ್ಲರ ಕಣ್ಮಣಿಯಾಗಿದ್ದರು!

`ಚಿಗುರಿದ ಕನಸು’ ಚಿತ್ರದ ಹಾಡುಗಳಲ್ಲಿ ಏನೋ ಒಂದು ತೆರನಾದ ಆಪ್ತಭಾವ ಇದ್ದುದನ್ನು ಎಲ್ಲರೂ ಗುರುತಿಸಿ, ಜಯಂತ್ ಹಾಡುಗಳು ಮಸ್ತ್ ಆಗಿವೆ ಎನ್ನುತ್ತಿದ್ದ ವೇಳೆಯಲ್ಲೇ ಬಂತುನೋಡಿ ಮುಂಗಾರು ಮಳೆ! ಆ ಚಿತ್ರಕ್ಕೆ ಜಯಂತ್ ಬರೆದ `ಅನಿಸುತಿದೆ ಯಾಕೋ ಇಂದು…’ ಹಾಡು ಎಲ್ಲ ಪ್ರೇಮಿಗಳ ಎದೆಯ ಹಾಡಾಯಿತು. ಪಿಸುಮಾತಾಯಿತು. ಎಲ್ಲರ ಮೊಬೈಲ್ ನ ರಿಂಗ್ ಟೋನ್ ಆಗಿ ವರ್ಷಗಟ್ಟಲೆ ದರ್ಬಾರು ಮಾಡಿತು. ಈ ಹಾಡು ಪಡೆದುಕೊಂಡ ಜನಪ್ರಿಯತೆ, ಕನ್ನಡಿಗರು ಅದನ್ನು ಸ್ವೀಕರಿಸಿದ ರೀತಿ ಕಂಡು ಬೆರಗಾಗಿ ಮುಂದೊಂದು ದಿನ ಜಯಂತ್ ಅವರೇ ಹೀಗೆ ಹೇಳಿದ್ದರು: `ಅನಿಸುತಿದೆ ಯಾಕೋ ಇಂದು ನೀವೆಲ್ಲಾ ನನ್ನವರೆಂದು…’

* * *

`ಮಿಲನ’ ಚಿತ್ರದ `ಮಳೆ ನಿಂತು ಹೋದ ಮೇಲೆ’ ಹಾಡು ಸೃಷ್ಟಿಯಾದದ್ದು ಹೇಗೆ ಎಂದು ಹೇಳುವ ಮುನ್ನ; ಆ ಹಾಡು ಬರೆದದ್ದು ಜಯಂತ್ ಅಂದುಬಿಡುವ ಮುನ್ನ ಕವಿ ಪರಿಚಯದ ನೆಪದಲ್ಲಿ ಇಷ್ಟೆಲ್ಲ ಹೇಳಬೇಕಾಯಿತು. ಹಾಡು ಹುಟ್ಟಿದ ಕತೆಯ ವಿವರಣೆ ಕಡೆಗಿರಲಿ. ಈಗ `ಮಿಲನ’ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

`ಮಿಲನ’ದಲ್ಲಿ ನಾಯಕ ಒಂದು ಹುಡುಗೀನ ಪ್ರೀತಿಸಿರ್ತಾನೆ. ಅವಳೂ ಇಷ್ಟಪಟ್ಟಿರ್ತಾಳೆ. ಆದರೆ ಅನಿವಾರ್ಯ ಕಾರಣಗಳಿಂದ ಆ ಮದುವೆ ನಡೆಯಲ್ಲ. ಮುಂದೆ, ಅಮ್ಮನ ಮಾತಿಗೆ ಕಟ್ಟುಬಿದ್ದು ಆಕೆ ನೋಡಿದ, ಮೆಚ್ಚಿದ ಹುಡುಗಿಯನ್ನೇ ನಾಯಕ ಮದುವೆಯಾಗುತ್ತಾನೆ. ಆದರೆ ಮೊದಲ ರಾತ್ರಿಯಂದೇ ಆ ಹುಡುಗಿ- `ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸಿದೀನಿ. ಅಪ್ಪನ ಒತ್ತಾಯಕ್ಕೆ ಮಣಿದು ನಿಮ್ಮನ್ನು ಮದುವೆಯಾದೆ. ನನಗೆ ಈಗಲೂ ಅವನೇ ಇಷ್ಟ. ಬದುಕು ಅನ್ನೋದೇ ಇದ್ರೆ ಅವನೊಂದಿಗೆ ಮಾತ್ರ. ನನಗೆ ತಕ್ಷಣವೇ ಡೈವೋರ್ಸ್ ಕೊಡಿ’ ಅನ್ನುತ್ತಾಳೆ.

ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ನಾಯಕ- `ಸರಿ.ನಿನ್ನ ಹಳೆಯ ಗೆಳೆಯನೊಂದಿಗೆ ನಿನ್ನನ್ನು ಸೇರಿಸುವ ಜವಾಬ್ದಾರಿ ನನ್ನದು. ಈ ವಿಷಯ ಈಗಲೇ ನಮ್ಮ ತಾಯಿಗೆ ಗೊತ್ತಾದ್ರೆ ಅವಳಿಗೆ ನೋವಾಗುತ್ತೆ. ಅವಳಿಗೆ ಈ ಕುರಿತು ಸಣ್ಣ ಸುಳಿವೂ ಸಿಗಬಾರದು. ಹೇಗಿದ್ರೂ ನಾನು ಬೆಂಗಳೂರಲ್ಲಿ ಕೆಲಸ ಮಾಡ್ತಿದೀನಲ್ಲ? ನಿನ್ನ ಹುಡುಗನನ್ನು ಹೇಗಾದ್ರೂ ಹುಡುಕಿಕೊಡ್ತೀನಿ’ ಎಂದು ಪ್ರಾಮಿಸ್ ಮಾಡ್ತಾನೆ. ನಂತರ ಅವರು ಸಮಾಜದ ದೃಷ್ಟೀಲಿ ಗಂಡ-ಹೆಂಡತಿ ಆಗಿರ್ತಾರೆ. ಆದ್ರೆ ಮನೇಲಿ ಫ್ರೆಂಡ್ಸ್ ಥರಾ ಬದುಕಿಬಿಡ್ತಾರೆ.

ಹೀಗಿದ್ದಾಗಲೇ ಅದೊಮ್ಮೆ ನಾಯಕಿಯ ಹಳೆಯ ಗೆಳೆಯ ಸಿಕ್ತಾನೆ. ವಿಷಯ ತಿಳಿದ ನಾಯಕಿ ಡೈವೋರ್ಸ್ ಗೆ ಸಿದ್ಧಳಾಗಿ, ಹಳೆಯ ಗೆಳೆಯನ ಬಳಿ ಓಡಿಹೋಗ್ತಾಳೆ. ಆದರೆ ಅವನೊಬ್ಬ ಅಯೋಗ್ಯ ಅನ್ನೋದು ನಾಯಕ-ನಾಯಕಿ ಇಬ್ಬರಿಗೂ ಒಂದು ಸಂದರ್ಭದಲ್ಲಿ ಗೊತ್ತಾಗಿಹೋಗುತ್ತೆ. ಈ ಸತ್ಯ ತಿಳಿದು ಕಂಗಾಲಾದ ನಾಯಕಿಗೆ ಧೈರ್ಯ ತುಂಬುವ ನಾಯಕ- `ಹೆದರಬೇಡ. ಕಾಲೇಜಿಗೆ ಸೇರ್ಕೋ. ಚೆನ್ನಾಗಿ ಓದು. ವಿದೇಶಕ್ಕೂ ಹೋಗಿ ಬಾ’ ಅನ್ನುತ್ತಾನೆ. ಈ ಸಂಬಂಧವಾಗಿ ಅವಳಿಗೆ ಎಲ್ಲ ರೀತಿಯ ಸಹಾಯವನ್ನೂ ಮಾಡ್ತಾನೆ.

ಇಷ್ಟೆಲ್ಲ ಸದ್ಗುಣಗಳನ್ನು ಹೊಂದಿರುವ ನಾಯಕನ ಮೇಲೆ ಕಡೆಗೂ ನಾಯಕಿಗೆ ಪ್ರೀತಿ ಮೂಡುತ್ತೆ. ತನ್ನ ದುಡುಕು ವರ್ತನೆಯ ಬಗ್ಗೆ ಪಶ್ಚಾತ್ತಾಪ ಆಗುತ್ತೆ. ಹಳೆಯ ಗೆಳೆಯನೇ ನನ್ನ ಆಯ್ಕೆ ಎಂದು ಈ ಹಿಂದೆಯೇ ಹೇಳಿ, ಈಗ ಅವನು ಬೇಡ, ನೀನೇ ಬೇಕು ಅನ್ನುವುದು ಹೇಗೆ ಎಂಬ ಸಂಕಟ ಎದುರಾಗುತ್ತದೆ. ಇನ್ನೊಂದು ಕಡೆಯಲ್ಲಿ ಡೈವೋರ್ಸ್ ಸಿಗುವ ದಿನ ಹಾಗೂ ವಿದ್ಯಾಭ್ಯಾಸದ ನೆಪದಲ್ಲಿ ಅವಳು ವಿದೇಶಕ್ಕೆ ಹೋಗಬೇಕಾದ ದಿನವೂ ಸಮೀಪಿಸುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ನಾಯಕನ ಪ್ರೀತಿ ಹೆಜ್ಜೆಹೆಜ್ಜೆಗೂ ಕೈಹಿಡಿದು ನಿಲ್ಲಿಸುತ್ತಿರುತ್ತದೆ. ಅವನೊಂದಿಗೆ ನಕ್ಕ, ಜಗಳವಾಡಿದ, ಮುನಿದು ಕೂತ ಕ್ಷಣಗಳು ಜತೆಯಾಗಿ ಕಾಡುತ್ತವೆ. ಎಲ್ಲವನ್ನೂ ಗಮನಿಸಿದ ನಾಯಕಿಯ ತಂದೆ ಕೂಡ `ಯಾಕಮ್ಮಾ ಹೀಗೆ ಮಾಡಿಬಿಟ್ಟೆ? ಅಂಥ ಒಳ್ಳೆಯ ಹುಡುಗನ ಬದುಕಿಂದ ಎದ್ದುಬರ್ತೀನಿ ಅನ್ನೋ ನಿರ್ಧಾರಾನ ಯಾಕೆ ತಗೊಂಡೆ?’ ಎಂದು ನೋವಿನಿಂದ ಕೇಳುತ್ತಾನೆ. ಆ ಕ್ಷಣದಲ್ಲಿ ಅಪರಾಭಾವ, ಅವನ ಸವಿನೆನಪು, ಅವನ ಒಳ್ಳೆಯತನ, ಅಂಥವನನ್ನು ಬಿಡಲೇಬೇಕಾದ ಸಂದರ್ಭದಲ್ಲಿ `ಐ ಲವ್ ಯೂ’ ಎಂದು ಚೀರಿಹೇಳಲು ಬಯಸುವ ಒಳಮನಸ್ಸಿನ ರಾಗವಾಗಿ ಮೂಡಿಬರುತ್ತದೆ ಹಾಡು: `ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೇ…’

* * *

ಈ ಹಾಡು ಬರೆದ ಸಂದರ್ಭ ಹೇಗಿತ್ತು? ಎಂಥ ಕ್ಷಣದಲ್ಲಿ ಈ ಹಾಡು ಸೃಷ್ಟಿಯಾಯ್ತು ಎಂಬ ಪ್ರಶ್ನೆಗೆ ಜಯಂತ್ ಕಾಯ್ಕಿಣಿ ಹೀಗೆಂದರು: `ಮುಂಗಾರು ಮಳೆ’ಯ `ಅನಿಸುತಿದೆ ಯಾಕೋ ಇಂದು…’ ಹಾಡು ಸೂಪರ್ಹಿಟ್ ಆಗಿದ್ದ ಸಂದರ್ಭ ಅದು. ಪ್ರೇಕ್ಷಕರು ಮಾತ್ರವಲ್ಲ, ನಿರ್ಮಾಪಕ ನಿರ್ದೇಶಕರೂ ಕೂಡ ಅಂಥದೇ ಇನ್ನೊಂದು ಹಾಡು ಬರೆದರೆ ಚೆನ್ನಾಗಿರುತ್ತೆ ಎಂದು ನನಗೇ ಹೇಳಿದ್ದರು. ಆದರೆ, ನನಗದು ಇಷ್ಟವಿರಲಿಲ್ಲ. ಆ ಹಾಡಿನ ಗುಂಗಿನಿಂದ ಹೊರಬರಬೇಕು, ಅದಕ್ಕಿಂತ ಭಿನ್ನವಾದ ಇನ್ನೊಂದು ಚೆಂದದ ಹಾಡು ಬರೀಬೇಕು ಅನ್ನೋದು ನನ್ನ ಆಸೆಯಾಗಿತ್ತು. ಆದರೆ, ಆ ಹಾಡನ್ನು ಎಷ್ಟು ಮರೆಯಲು ಪ್ರಯತ್ನಿಸ್ತಾ ಇದ್ದೆನೋ ಅಷ್ಟಷ್ಟೇ ಜಾಸ್ತಿ ನೆನಪಾಗ್ತಾ ಇತ್ತು. ಅದರಲ್ಲೂ ಆ ಹಾಡಿಗೆ ಬಳಸಿದ ಟ್ಯೂನ್ ನನ್ನನ್ನು ವಿಪರೀತ ಕಾಡಿತ್ತು.

ಹೀಗಿದ್ದಾಗಲೇ `ಮಿಲನ’ಕ್ಕೆ ಹಾಡು ಬರೆಯಬೇಕಿತ್ತಲ್ಲ? ಆ ಸಂದರ್ಭವನ್ನು ನೆನಪು ಮಾಡಿಕೊಂಡೆ. ಹೊಸ ಹಾಡಿನ ಧ್ಯಾನದಲ್ಲಿರುವಾಗಲೇ ಮತ್ತೆ `ಅನಿಸುತಿದೆ…’ಯ ಟ್ಯೂನ್ ನೆನಪಾಯಿತು. ಇದೊಳ್ಳೆ ಕತೆಯಾಯ್ತಲ್ಲ? `ಮುಂಗಾರು ಮಳೆ’ ಸಿನಿಮಾದ ಅಬ್ಬರ ಕಡಿಮೆಯಾದ್ರೂ ಈ ಹಾಡು ನನ್ನನ್ನು ಬಿಡ್ತಾ ಇಲ್ಲವಲ್ಲ ಅಂದುಕೊಳ್ತಾನೇ- `ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ/ ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ’ ಎಂದು ಬರೆದು ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಗೆ ಹಾಡಿ ತೋರಿಸಿದೆ. ಅವರು `ವಾಹ್ ವಾಹ್, ಚೆನ್ನಾಗಿದೆ’ ಚೆನ್ನಾಗಿದೆ ಅಂದರು.

ಈ ಸಂದರ್ಭದಲ್ಲೇ ಒಂದು ತಮಾಷೆ ನಡೀತು. ಎರಡು ಸಾಲು ಬರೆದು ಹಾಡಿ ತೋರಿಸಿದ ನಂತರ – ಮನೋಮೂರ್ತಿ ಅವರಿಗೆ `ಸರ್, ಈ ಹಾಡಿನಲ್ಲಿ ಅನುಪಲ್ಲವಿ ಉಳಿದುಹೋಗಿದೆ’ ಎಂದು ಹೇಳಿದೆ. ಅವರು ಅದನ್ನು ಕೂಡ ಹಾಡಿನ ಸಾಲೇ ಎಂದು ಭಾವಿಸಿ- `ವಾಹ್, ತುಂಬಾ ಚೆನ್ನಾಗಿದೆ, ತುಂಬಾ ಚೆನ್ನಾಗಿದೆ’ ಅಂದುಬಿಟ್ಟರು. ತಕ್ಷಣಕ್ಕೆ ನಗು ಬಂತು. ನಗುತ್ತಲೇ `ಸಾರ್, ಈಗ ಹೇಳಿದ್ದು ಹಾಡಿನ ಸಾಲಲ್ಲ. ಪಲ್ಲವಿ ಆಗಿದೆ, ಅನುಪಲ್ಲವಿ ಉಳಿದುಹೋಗಿದೆ. ಅದನ್ನು ಬರೆಯಬೇಕು’ ಅಂದೆ. ಮನೋಮೂರ್ತಿಯವರು ಆಗ ಕೂಡ `ನೀವು ಹಿಂದೆ ಹೇಳಿದ್ದೇ ಚೆನ್ನಾಗಿದೆ’ ಅಂದರು. ತಕ್ಷಣವೇ ನನಗೆ- `ಹೇಳುವುದು ಏನೋ ಉಳಿದು ಹೋಗಿದೆ’ ಎಂಬ ಸಾಲು ಹೊಳೆಯಿತು. ಹಿಂದೆಯೇ `ಹೇಳಲಿ ಹೇಗೆ ತಿಳಿಯದಾಗಿದೆ’ ಎಂಬ ಇನ್ನೊಂದು ಸಾಲೂ ಕೈ ಜಗ್ಗಿತು. ಅದನ್ನೇ ಅನುಪಲ್ಲವಿಯಾಗಿ ಬರೆದೆ.

ನಂತರ, ಪಲ್ಲವಿ-ಅನುಪಲ್ಲವಿಯನ್ನು ನೋಡಿದರೆ- ಅದು `ಮಿಲನ’ ಚಿತ್ರದ ಸನ್ನಿವೇಶಕ್ಕೆ ಬೊಂಬಾಟಾಗಿ ಹೊಂದಿಕೊಳ್ಳುತ್ತೆ ಅನ್ನಿಸ್ತು. ನಂತರ ನಾಯಕಿಯ ಮನಸಿನ ತೊಳಲಾಟ, ಸಂಕಟ, ಅಪರಾ ಭಾವ, ಅವನು ಬೇಕು ಅನ್ನೋ ತುಡಿತ… ಹೀಗೆ ಒಂದೊಂದೊಂದೊಂದೇ ಪದಗಳ ರೂಪದಲ್ಲಿ ಬಂದು ಜಾಗ ಪಡೆದುಕೊಂಡವು. ನನಗೆ ಗೊತ್ತಿಲ್ಲದಂತೆಯೇ ಒಂದು ಮಧುರ ಗೀತೆ ಸಿದ್ಧವಾಗಿಹೋಯಿತು…’

ಇಷ್ಟು ಹೇಳಿ ನಸುನಕ್ಕರು ಜಯಂತ್. ಅದನ್ನು ಕಂಡಾಗ ಚಂದಿರನ ತುಂಬು ನಗೆ ನೆನಪಾಯಿತು ಮತ್ತು, ಕಾಡುವ ಹಾಡುಗಳ ಹಿಂದೆ ಒಂದು ಕತೆ ಇರುತ್ತೆ ಎಂಬ ಮಾತು ಚಂದಿರನಾಣೆಗೂ ನಿಜವಾಯಿತು!

‍ಲೇಖಕರು avadhi

June 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

3 ಪ್ರತಿಕ್ರಿಯೆಗಳು

 1. Ramesh Aroli

  ಕಡೆಯ ಪಕ್ಷ ಮುಂದಿನ ತಲೆಮಾರೊಂದು ಕನ್ನಡ ಚಿತ್ರ ಗೀತೆಗಳೆಡೆಗೆ ಕಿವಿ ಕೊಟ್ಟಲ್ಲಿ
  ಒಂದಿಷ್ಟು ಗುಣುಗಿಕೊಳ್ಳಲು ಮಧುರವಾದ ಹಾಡುಗಳನ್ನು ಬರೆದಿರಿ. ಇಲ್ಲವಾದಲ್ಲಿ
  ಮತ್ತೊಂದು ಜನರೇಷನ್ನು ಶಾಪ ಹಾಕುವುದು ಖಚಿತವಿತ್ತು.

  ಬರಿ ಅಬ್ಬರವೇ ತುಂಬಿರುವ ಎಲ್ಲೆಲ್ಲೂ ಸೊಗಸಾದ ಪದಪುಂಜಗಳಿಂದ ‘ಅವನು’
  ಮತ್ತು ‘ಅವಳು’ ಮೆಚ್ಚುವ ನವಿರಾದ ಹಾಡು ಬರೆದುಕೊಟ್ಟ ಕಾಯ್ಕಿಣಿ ಸಾರ್ ಇಡೀ
  ನನ್ನ ವಾರಿಗೆ ಗೆಳೆಯರ ಪರವಾಗಿ ಇದೋ ನಿಮಗೆ ಧನ್ಯವಾದ.

  ನಿಮ್ಮ ಮನೆಯೆದುರಿನ

  ಮಲ್ಲಿಗೆ ಬಳ್ಳಿ ಇಂದು ಎಂದಿಗಿಂತ

  ಹೆಚ್ಚು ಹೂ ಬಿಡಲಿ;

  ಕಾತರಿಸುವ ಎದೆ ಕಿವಿಗಳನು

  ಇನ್ನೆಷ್ಟು ಕಾಯಿಸದೆ ಘಮ ಘಮಿಸುವ

  ಹಾರವನು ಮೊಗ್ಗಲ್ಲೇ ಪೋಣಿಸಿ ಕೊಡಲಿ!

  ರಮೇಶ ಅರೋಲಿ.

  ಹೈದರಾಬಾದ್.

  ಪ್ರತಿಕ್ರಿಯೆ
 2. ರಂಜಿತ್

  ಇಂತಹ ಅದ್ಭುತ ಹಾಡಿನ ಹುಟ್ಟಿನ ಸಂಧರ್ಭದ ಕುರಿತು ಕಾಯ್ಕಿಣಿ ರೂಪತಾರ ದ ತಮ್ಮ ಅಂಕಣದಲ್ಲೇ ಬರೆದುಕೊಂಡಿರಲಿಲ್ಲ. ಮಣಿಕಾಂತ್ ಸರ್ ಗೆ ನನ್ನ ಸಾವಿರ ಥ್ಯಾಂಕ್ಸ್!

  -ರಂಜಿತ್

  ಪ್ರತಿಕ್ರಿಯೆ
 3. h n eshakumar

  ಜಯಂತ್ಹ್ರವರ ಹಾದುಗಳಲಿ ಇರೋ ಲಾಲಿತ್ಯ ಎಂತವರ ಮಾನವನು ಕಾಡುವುದು
  ಸಾವಿರ ಸಾವಿರಸಲ ಗುನುಗುನಿಸಿದರು ಮತ್ತೆ ಮತ್ತೆ ಹಾಡಿಸಿಕೊಳ್ಳುವ ಅವರ ಹಾಡುಗಳು ಸಹೃದಯಿಯ ಭಾವಲೋಕದಲಿ ರಾರಾಜಿಸುತ್ತಿವೆ……

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: