ಮಳೆ, ಮಲೆನಾಡು, ಮುಂಗಾರು…

ಕಾಡುವ ಕಾಡಲ್ಲಿ ಮಳೆಯ ಹಾಡು…

– ರಘುನಂದನ ಕೆ ಹೆಗಡೆ

ಮಳೆ ನಾಡಲ್ಲಿ ಸುರಿದ ಮಳೆಯ ಚಿತ್ರಗಳ ತಂಪು… ತೊಟ್ಟಿಕ್ಕುತ್ತಿದೆ ನೆನಪುಗಳ ರೂಪ ತಾಳಿ… ಛೆ, ಈ ಷಹರದಲ್ಲಿ ಮಳೆಯ ಸುಳಿವೇ ಇಲ್ಲ. ಮಲೆನಾಡ ನನಗೆ ಮಳೆಯಿಲ್ಲದ ಮಳೆಗಾಲವೆಂದರೆ ಬೇಜಾರು. ಒಮ್ಮೆ ಈ ನಗರದಲ್ಲಿ ಮಳೆ ಬಂದರೂ ಜರ್ರಂತ ಸುರಿದು ಪುರ್ರಂತ ಹಾರಿ ಹೋಗುತ್ತದೆ. ಇಲ್ಲಿನ ಜನರ ಪ್ರೀತಿಯಂತೆ. ಇಲ್ಲಿ ಮನಸೋ ಇಚ್ಛೆ ಮಳೆ ನೀರ ಪುಳಕವೂ ಇಲ್ಲ, ಕಪ್ಪೆಗಳ ಗುಟುರೂ ಇಲ್ಲ… ಮಳೆಯೊಳಗೆ ಇಳಿದು ನೆನೆಯುವುದಕ್ಕಾಗಿ, ಮನಸೊಳಗೆ ಮಳೆ ಹನಿಗಳ ತುಂಬಿಕೊಳ್ಳುವ ದಾಹಕ್ಕಾಗಿ, ಮಳೆಯ ಪ್ರೇಮಧಾರೆಯಲ್ಲಿ ತೋಯ್ದು ಹರ್ಷದಿಂದ ಕಂಗೊಳಿಸುವ ನಿಸರ್ಗದ ಸೊಬಗ ಸವಿಯುವ ಮೋಹಕ್ಕಾಗಿ, ನೆನೆದ ಮಣ್ಣ ಮೋಹದಲ್ಲಿ ಆಟವಾಡುವ ಸಂಭ್ರಮಕ್ಕಾಗಿ, ಉಂಬಳವೆಂಬ ಜೀವಿಯ ತುಟಿಯ ಪುಳಕಕ್ಕೆ ರಕ್ತ ಸುರಿಸುವ ಸುಖಕ್ಕಾಗಿ… ಪಯಣಿಸುವ ಖುಷಿಯ ಆಯ್ಕೆ ದಾಂಡೇಲಿ ಸಮೀಪದ ಗುಂದಾ. ಇಲ್ಲಿ ಸ್ವಚ್ಛಂದ ಹಸಿರಿನ ನಡುವೆ ಅಷ್ಟೇ ಸ್ವಚ್ಛ ಮನಸ್ಸಿನ ಮೊಗೆ ಮೊಗೆದು ಪ್ರೀತಿ ಕೊಡುವ ಮಾನವ ಜೀವಿಗಳಿದ್ದಾರೆಂದು ಗೊತ್ತೇ ಇರಲಿಲ್ಲ ಇದುವರೆಗೆ. ನನ್ನಂತೆ ಮಳೆಗೆ ದಾಹಗೊಂಡು ಸೆಟೆದು ಕಾಯ್ದು ಬಿದ್ದಿದ್ದ ಉಂಬಳದಂತಹ ಗೆಳೆಯರೊಂದಿಗೆ ನಡೆದದ್ದು ದಾಂಡೇಲಿಯ ಕಾಡಿನೆಡೆಗೆ… ಅಲ್ಲಿ ಸುರಿದ ಮಳೆ ಹನಿಗಳೊಂದಿಗಿನ ಕ್ಷಣಗಳ ಸ್ಮೃತಿ ಚಿತ್ರಗಳ ಅಕ್ಷರದಲ್ಲಿ ಹಿಡಿದಿಡುವ ಬಯಕೆಯೊಂದಿಗೆ ಇಲ್ಲಿ ನಾನು ನಿಮ್ಮೆದುರು…

* * * * * * * * *

ಅಂಗಳದಿಂದ ಹತ್ತು ಮೆಟ್ಟಿಲೆತ್ತರದ ಮನೆ, ಮನೆ ಮಾಡಿಗೆ ಜೋತು ಬಿದ್ದ ಕರೆಂಟಿಲ್ಲದ ಮಸಿ ಹಿಡಿದ ವಾಯರ್ ಗಳು, ಅವುಗಳಿಗೆ ಬೆಸೆದ ಜೇಡ ನಿವಾಸ, ಅದರ ಕೆಳಗೆ ಬದುಕುವ ಪ್ರೀತಿ ತುಂಬಿದ ಮಂದಿ, ಒಳಗೆ ಮಂತ್ರೋಚ್ಛಾರದ ರಿಂಗಣ, ಮನಸ್ಸು ಮಳೆ ಸುರಿವ ತೆರೆದ ಪ್ರಾಂಗಣ, ಹಂಚಿಕೊಂಡ ಕ್ಷಣಗಳಿಗೆ ಮಾತು ನಗುವಿನ ಮದರಂಗಿ, ಬೀಳ್ಕೊಡುಗೆಗೆ ಕಣ್ಣ ಹನಿಯ ಅಭಿಷೇಕ, ಮಳೆ ಹನಿಗೆ ಅಪ್ಪುವ ಪುಳಕ, ದೊಡ್ಡ ಅಂಗಳದಲ್ಲಿ ಹರಡಿಬಿದ್ದ ಹೆಜ್ಜೆ ಗುರುತು, ಅರಳಿ ನಿಂತ ದಾಸವಾಳದ ಹಾಡು, ಅಂಗಳದಂಚಿನ ತುಳಸಿಯೆದುರು ಕೆಂಬಣ್ಣದ ನೀರು, ಹೆಜ್ಜೆ ಇಟ್ಟರೆ ಜಾರುವ ಕಾಲು, ಬಿದ್ದರೆ ಮೋಡ ನಗುತ್ತದೆ, ನೀರು ತೂಗುತ್ತದೆ…

* * * * * * * * *

ಕಾಡೊಳಗಿನ ಅರಮನೆಯಂತ ಗೂಡಿಂದ ಮತ್ತೆ ಕಾಡೊಳಗೆ ನಡೆಯುವ ಆಟ, ಗದ್ದೆಯಾಚೆಗಿನ ಶಿವ ಮಂದಿರದಲ್ಲಿ ಘಂಟಾ ನಾದ, ನಡೆವ ದಾರಿಯಲಿ ಸಂಕ ದಾಟುವ ಮೋದ, ಮೊಳಕಾಲವರೆಗೆ ಹುಗಿವ ಗದ್ದೆಯ ರಾಡಿಯಲ್ಲಿ ಹೆಜ್ಜೆ ಹುಡುಕಬೇಕು, ಕಾಲೆತ್ತಿ ತಲೆವರೆಗೆ ಮಣ್ಣ ಸಿಡಿಸಿ ಓಡಬೇಕು, ನಾ ಮೊದಲೋ ನೀ ಮೊದಲೋ ಓಡಿ ಕೂಗಬೇಕು… ದಾರಿಗಡ್ಡ ಬಿದ್ದ ಮರಗಳ ಹಾರುತ್ತ ನಡೆಯಬೇಕು ಕಾಡುವ ಕಾಡ ಕಾಣಲು, ಜಿಟಿ ಜಿಟಿ ಹನಿವ ಮಳೆ, ಪಿಚಿ ಪಿಚಿ ರಾಡಿಯ ದಾರಿ, ಹೆಜ್ಜೆಗೊಂದು ಉಂಬಳ ತಲೆಯೆತ್ತಿ ಸ್ವಾಗತ ಕೋರಿ ಕಾಲೇರುತ್ತದೆ, ಮರೆತರೆ ತಲೆವರೆಗೂ ಸಾಗುತ್ತದೆ ಸರಾಗವಾಗಿ ಸದ್ದಿಲ್ಲದೆ, ಬಿಡದೆ ಸುರಿವ ವರ್ಷಧಾರೆಯಲ್ಲಿ ತೋಯ್ದು ಮೈ ಮನಸೆಲ್ಲ ಕರಗಿ ಹಗುರಾಗಿ ಸ್ವಚ್ಛ ಸ್ವಚ್ಛ… ಮಳೆ ನೀರ ಹಾಡಿಗೆ ಮನಸು ಕುಣಿಯಬೇಕು, ಹೃದಯ ಮೀಯಬೇಕು… ಕಾಡೊಳಗೊಂದು ಸೂರು, ಮೈ ಉರಿಸುವ ನೊರಜುಗಳ ಓಡಿಸಲು ಅಡಿಕೆ ಸಿಪ್ಪೆಯ ಹೊಗೆ ಹಾಕಿ ಕೆಮ್ಮಿದ್ದು ನಾವು, ಒಂದಿಷ್ಟು ಆಟ, ನೆನೆದ ಮನಸುಗಳ ಸೊಗಸುಗಾರಿಕೆಯ ಮಾಟ, ಯಕ್ಷಗಾನದ ಕುಣಿತ, ಗೆಜ್ಜೆ ಕಾಲ್ಗಳ ನೆಗೆತ.. ಬಾಲ್ಯ ಮರುಕಳಿಸಿದಂತೆ, ಕಾಡ ಹಸಿರು ಜೊತೆ ಸೇರಿ ಹಾಡಿದಂತೆ, ಹಸಿದ ಹೊಟ್ಟೆಗೆ ಹೊತ್ತು ನಡೆದಿದ್ದ ಆಹಾರಗಳ ಉಪಚಾರ, ಚಕ್ಕುಲಿಯ ಮುರಿತಕ್ಕೆ ಹಲ್ಲುಗಳ ಕೆನೆತ, ತಿಂದುಂಡು ಕುಣಿದಾಡಿ ತೋಯ್ದು ಮುದ್ದೆಯಾಗಿ ಒದ್ದೆಯಾಗಿ ಮರಳಿ ಗೂಡು ಸೇರಿದಾಗ ಕಾಡು ಕತ್ತಲ ಸೆರಗೊಳಗೆ… ರಾತ್ರಿಯೆಲ್ಲ ಮಳೆಯ ಜೋಗುಳ ಕೇಳಿ ಅದೆಷ್ಟು ಯುಗ ಸಂದಿತ್ತೋ… ಕಪ್ಪೆಗಳ ವಟರ್ ಗುಟರ್ ನಾದ, ಬೀಸುವ ಗಾಳಿಯ ಮೋದ, ಎಲ್ಲೊ ಮುರಿದು ಬಿದ್ದ ಟೊಂಗೆಯ ಸದ್ದು, ತುಂಬಿ ಹರಿವ ನೀರ ಜುಳು ಜುಳು, ಛಳಿಯ ಚಾದರ ಹೊದ್ದು ನಡಗುವ ಮೈಗೆ ಹಂಡೆ ತುಂಬಿದ ಬಿಸಿ ನೀರ ಜಳಕದ ಪುಳಕ, ಬಚ್ಚಲೊಲೆಯ ಬೆಂಕಿಯೆದುರು ಸುಡುವ ಮೊಣಕಾಲ ಮುಚ್ಚಿ ಉರಿಯ ಸುಖಿಸುವ ಬಯಕೆ, ಬಚ್ಚಲೊಳಗೆ ಕಣ್ಣುರಿದಿದ್ದು ಸಾಬೂನು ನೊರೆಯಿಂದಲಾ, ಹೊಗೆಯಿಂದಲಾ…?? ಅಲ್ಲೆಲ್ಲೊ ಮೂಲೆಯಲ್ಲಿ ಬಿದ್ದಿದ್ದ ಗೇರು ಬೀಜಗಳ ಚೀಲ ಹೊರಬಂತು ಈಗ, ಯಾವುದೋ ತಗಡಿನ ಮುಚ್ಚಳಕ್ಕೆ ತೂತು ಹೊಡೆದು ಗೇರು ಬೀಜ ಸುಡಬೇಕು, ಅದರ ಘಮಕ್ಕೆ ಮೂಗರಳಿಸಿ ಸುಖಿಸಬೇಕು, ಸಿಡಿವ ಸದ್ದಿಗೆ ಬೆಚ್ಚಿ ಹಾರಬೇಕು, ಕೈಯೆಲ್ಲ ಮಸಿಯಾಗಿಸಿಕೊಂಡು ಕಲ್ಲುಗುಂಡಿನಲ್ಲಿ ಒಡೆದು ಬೆಚ್ಚಗಿನ ಗೇರುಬೀಜವ ಬಾಯಿಗಿಟ್ಟರೆ ಆಹಾ… ಸೊನೆ ತಾಕಿದ ತುಟಿಗಳಿಗೆ ತಿಂದ ಬೀಜದ ಮಧುರ ವಿರಹ… ಕರೆಂಟಿಲ್ಲದ ಮಳೆಗಾಲದ ರಾತ್ರಿಗಳು, ಎಲ್ಲ ಚಿಮಣಿಗಳಿಗೆ ಎಣ್ಣೆ ತುಂಬಾಗಿದೆ, ಚಿಮಣಿಯ ಕೆಂಪು ಬೆಳಕಲ್ಲಿ ಕತ್ತಲು ಕರಗುತ್ತದೆ, ನೆಂಟರು ಬಂದಾಗ ಹಚ್ಚಲೆಂದು ಇಟ್ಟಿದ್ದ ಗ್ಯಾಸ್ ದೀಪದ ಬಲೂನು ಉದುರಿದೆ, ಹೊಸತ ಹುಡುಕಿ ಕಟ್ಟಲಾಗಿದೆ ಈಗ ಹರಸಾಹಸಪಟ್ಟು, ತಂಡಿ ಹಿಡಿದ ಬೆಂಕಿ ಪೆಟ್ಟಿಗೆಯ ಎಲ್ಲ ಕಡ್ಡಿಗಳ ಕಡಿದು ಅಂತೂ ಹಚ್ಚಿದಂತಾಯಿತು ಬೆಳಕ, ಆದರೆ ಪಂಪು ಹೊಡೆದರಷ್ಟೆ ಅದಕ್ಕೆ ಬೆಳಕು, ಬಿಟ್ಟರೆ ಉರಿಯೆನೆನ್ನುವ ಹಠ ಅದಕ್ಕೂ… ಎಷ್ಟಂತ ಬರೆಯಲಿ ಸುಖದ ಕ್ಷಣಗಳ ತುಣುಕುಗಳ, ಕಾಲನ ಕನವರಿಕೆಗಳ ಹಿಡಿಯಲು ಅಕ್ಷರ ಸೋಲುತ್ತದೆ… ಮಲೆನಾಡಿನ ಧೋ ಮಳೆ, ಎಲ್ಲೆಲ್ಲೂ ಹರಿವ ಜೀವ ಜಲ, ರಾಡಿ ಗದ್ದೆಯ ಹೊರಳಾಟ, ಕಂಬಳಿ ಕೊಪ್ಪೆ ತೊಟ್ಟು ನೆಟ್ಟಿ ಹಾಕುವ ಮಂದಿ, ತುಂಬಿ ತುಳಕುವ ಝರಿ ತೊರೆ ಒರತೆಗಳ ಗರ್ಭ, ಕಾಡುವ ಕಾಡು ಹಾಡುವ ಹಕ್ಕಿ, ಹಲಸಿನ ಕಾಯಿಯ ಹುಳಿ, ದಾಸವಾಳದ ಅಂದ ಕಾಡ ಕುಸುಮದ ಗಂಧ… ಊರೊಳಗಿನ ಮನೆ ಮನಗಳಲ್ಲಿ ಕಲರವ ಹರಡಿದ್ದು, ಜೋಕಾಲಿಯಲ್ಲಿ ಕುಳಿತು ನೆನಪುಗಳ ತೂಗಿದ್ದು, ಕತ್ತಲ ಗೂಡುನಲ್ಲಿನ ಡಬ್ಬಿಗಳ ಹುಡುಕಿ ಹಪ್ಪಳ ಸಂಡಿಗೆಗಳ ಕುರುಂ ಕುರುಂ ಸದ್ದು ಮಾಡುತ್ತ ಖಾಲಿ ಮಾಡಿದ್ದು, ಹೊಡತ್ಲು ಒಟ್ಟಿ ಬೆಚ್ಚಗೆ ಕುಳಿತು ಹರಟೆ ಹೊಡೆದಿದ್ದು, ಸಿಕ್ಕಾಪಟ್ಟೆ ಮಳೆಯಲ್ಲಿ ಬೈಕಿನಲ್ಲಿ ಕುಳಿತು ಛಳಿಯಾಗಿ ಕಂಪಿಸಿದ್ದು, ಜೊತೆ ನಿಂತು ಕ್ಯಾಮರಾದೊಳಗೆ ಬಂಧಿಯಾಗಿ ಚಿತ್ರವಾದದ್ದು, ತೋಟ ತಿರುಗಿ ಮನಸ್ಸು ಮೌನವಾಗಿ ಕಾಡಿದ್ದು, ಎರಡು ದಿನಗಳಲ್ಲಿ 25 ಕಿಲೊಮೀಟರ್ ಗೂ ಹೆಚ್ಚು ನಡೆದು ಪದ ಹೇಳುವ ಕಾಲ್ಗಳಿಗೆ ಸಾಂತ್ವನಿಸಿದ್ದು, ಉಂಬಳಗಳ ಕಿತ್ತು ಉಂಡೆ ಕಟ್ಟಿ ಎಸೆದಿದ್ದು, ಕಾಳಿ ನದಿಯ ಅಗಾಧತೆಯೆದುರು ಹಗ್ಗ ಜಗ್ಗಿ ದಡಗಳ ಬೆಸೆವ ತೆಪ್ಪದೊಳಗೆ ಕುಳಿತಿದ್ದು, ಹರಿವ ತೊರೆ ಝರಿಗಳಲ್ಲಿ ಆಟವಾಡಿದ್ದು… ಮುಖವಾಡಗಳಿಲ್ಲದ ಮನುಷ್ಯರ ನಿರ್ಮಲ ಪ್ರೀತಿ, ಅಕ್ಕರೆಗಳ, ಬೀಳ್ಕೊಡುಗೆಯ ಕಣ್ಣ ಬಿಂದುಗಳ ಭಾವಗಳಿಗೆ ಅಕ್ಷರಗಳ ಚೌಕಟ್ಟು ಬೇಕೇ..?? ಮಲೆನಾಡ ಮಳೆ ಸದಾ ಸುರಿಯುತ್ತಿರಲಿ ಹೀಗೆ ನಿರಂತರ, ಬತ್ತದಿರಲಿ ಸಹಜ ಪ್ರೇಮದ ಒರತೆ… ಬರೆದು ಮುಗಿಸಲಾಗದು ಅನುಭಾವದ ಸೊಗಸು, ಹಂಚಿಕೊಳ್ಳುವ ಖುಷಿಗೆ ಇಷ್ಟು ಸಾಕು…  ]]>

‍ಲೇಖಕರು G

September 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This