ಮಳೆ, ಸಾಲ ಮತ್ತು ವಿನೋದ…

ಬೇಲೂರು ರಾಮಮೂರ್ತಿ

ಸೋಮು ಹೆಚ್ಚು ಸಾಲ ಮಾಡಿದವನಲ್ಲ. ಏನೋ ಆಗಾಗ ಸ್ನೇಹಿತರ ಬಳಿ ಕೈ ಸಾಲ ಅಂತ ಮಾಡ್ತಿದ್ದ. ಅದನ್ನು ಸಂಬಳ ಬಂದಾಗ ತೀರಿಸಿಬಿಡ್ತಿದ್ದ. ಆದರೆ ಮನುಷ್ಯ ಅಂದ ಮೇಲೆ ಏನಾದರೂ ತಾಪತ್ರಯ ಬಂದೇ ಬರುತ್ತಲ್ಲ.

ಒಂದು ಸಾರಿ ಸೋಮಿ ಅವನ ಬಳಿ ಬಂದು “ ರೀ ನಮ್ಮಪ್ಪ ನಿಮಗೆ ಚಿನ್ನದಂತಹ ಹುಡುಗಿನ ಕೊಟ್ಟಿದಾರೆ, ಅವರಿಗೆ ನೀವು ಏನು ಕೊಟ್ಟಿದೀರ” ಅಂತ ಕೇಳಿದಳು.

ಸೋಮು ಭುಜ ಕುಣಿಸಿ “ ಅವರು ನನಗೆ ಕೋಲಾರದ ಚಿನ್ನ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ನಾನು ಅವರಿಗೆ ಭದ್ರಾವತಿ ಚಿನ್ನ ಕೊಡ್ತೀನಿ” ಅಂದ.

ಸೋಮು ಜೋಕಿಗೆ ಸೋಮಿ ನಗಲಿಲ್ಲ. ಅವನಿಗೆ ಇನ್ನಷ್ಟು ಒತ್ತಿ ಕೂತು

“ರೀ ನಮ್ಮಪ್ಪ ಈಗ ತೊಂದರೇಲಿ ಸಿಕ್ಕಿಕೊಂಡಿದ್ದಾರೆ. ಅವರಿಗೆ ಅರ್ಜಂಟಾಗಿ ಐದು ಲಕ್ಷ ರೂಪಾಯಿ ಬೇಕು. ನೀವು ಹೇಗಾದರೂ ಹಣ ಹೊಂದಿಸಿ ಕೊಟ್ಟು ಮರ್ಯಾದೆ ಕಾಪಾಡ್ಕೊಳಿ” ಅಂದಳು.

“ಲೇ, ನಾನು ನಿಮ್ಮಪ್ಪನ ಹತ್ತಿರ ಸಾಲ ಮಾಡಿ ವಾಪಸ್ ಕೊಡದೇ ಇದ್ದರೆ ಸಾಲ ವಾಪಸ್ ಕೊಟ್ಟು ಮರ್ಯಾದೆ ಕಾಪಾಡ್ಕೊಳೋ ಮಾತು ಸರಿ. ನಾನು ನಿಮ್ಮಪ್ಪನಿಗೆ ಸಾಲ ಕೊಟ್ಟು ನಾನೆಂಥದೇ ಮರ್ಯಾದೆ ಕಾಪಾಡ್ಕೊಳೋದು” ಅಂದ.

“ಅದೇ ರೀ ನಮ್ಮಪ್ಪನಿಗೆ ಆಪತ್ತಿನಲ್ಲಿ ಸಹಾಯ ಮಾಡಿ ನೀವು ಅಳಿಯ ಅನ್ನೋ ಮರ್ಯಾದೆನ ಕಾಪಾಡ್ಕೊಳಿ ಅಂದೆ” ಅಂದು ಸೋಮಿಯೂ ನಕ್ಕಳು.

ಪಾಪ ಸೋಮು ಮಾವ ಅವನನ್ನು ಯಾವತ್ತೂ ಸಾಲ ಕೇಳಿರಲಿಲ್ಲ. ಆದರೆ ಕೊಡೋಕೆ ಸೋಮು ಹತ್ರ ಐದು ಲಕ್ಷ ರೂಪಾಯಿ ಇರಲಿಲ್ಲ. ಅವನು ಇನ್ನೊಬ್ಬರ ಹತ್ತಿರ ಸಾಲ ಮಾಡಬೇಕಾಗಿ ಬಂತು.

ಖಜಾನೆ ರಾಜಣ್ಣ ಎಲ್ಲರಿಗೂ ಸಾಲ ಕೊಡ್ತಿದ್ದ. ಸೋಮುನೂ ಅವನನ್ನೇ ಕೇಳಿದ್ದಕ್ಕೆ

“ಏನ್ ಸೋಮಣ್ಣ ಹೀಗನ್ತೀಯ ನಿನಗೆ ನಾನು ಇಲ್ಲ ಅಂತೀನಾ. ಇವತ್ತು ಸಾಯಂಕಾಲನೇ ನಿಮ್ಮನೆಗೇ ದುಡ್ಡು ತಂದುಕೊಡ್ತೀನಿ. ಬಡ್ಡಿ ಸರಿಯಾಗಿ ಕೊಟ್ಬಿಡು, ಸಾಲ ಮಾತ್ರ ಒಂದು ವರ್ಷದಲ್ಲಿ ಹಿಂದಕ್ಕೆ ಕೊಟ್ಟುಬಿಡಬೇಕು” ಅಂತ ಖಡಾಖಂಡಿತವಾಗಿ ಹೇಳಿದ್ದ.

ಆದರೆ ಅವತ್ತು ಅದೆಂಥಾ ಕುಂಭದ್ರೋಣ ಮಳೆ ಬಂತು ಅಂದರೆ ಇನ್ನೇನು ಊರೇ ಮುಳುಗಿ ಹೋದೀತು ಅನ್ನುವಂಥ ಮಳೆ. ಸರಿ ಇವತ್ತು ಖಜಾನೆ ರಾಜಣ್ಣ ಬಂದ ಹಾಗೇ ಅಂದುಕೊಂಡ ಸೋಮು. ಆದರೆ ಎಂಟು ಗಂಟೆಗೆ ಸರಿಯಾಗಿ ಖಜಾನೆ ರಾಜಣ್ಣ ರೈನ್ ಕೋಟು ಹಾಕಿಕೊಂಡು ಬಂದು ಸೋಮುಗೆ ಗರಿಗರಿಯಾದ ನೋಟುಗಳನ್ನು ಕೊಟ್ಟ. ಸೋಮು ಸಂತಸದಿಂದ ಖಜಾನೆ ರಾಜಣ್ಣನ ಕಾಲಿಗೆ ಬೀಳೋದೊಂದು ಬಾಕಿ.

“ನನ್ನದು ಮಾತು ಅಂದರೆ ಮಾತು ಸೋಮಣ್ಣ, ಮಳೆ ಆಗ್ಲಿ, ಬಿಸಿಲು ಆಗ್ಲಿ, ಮಾತಿಗೆ ತಪ್ಪಬಾರ್ದು ಗೊತ್ತಾ” ಅಂದ. ಸೋಮಿ ಗರಿಗರಿಯಾದ ಹಪ್ಪಳ ಸುಟ್ಟು ಬಿಸಿಬಿಸಿ ಕಾಫಿ ತಂದುಕೊಟ್ಟಳು.

ಮರುದಿನವೇ ಸೋಮು ಸೋಮಿ ಇಬ್ಬರೂ ಹೋಗಿ ಮಾವನಿಗೆ ದುಡ್ಟು ಕೊಟ್ಟು ಬಂದರು. ಸೋಮಿ ಮಾವ ಸೋಮುನ ತಬ್ಬಿ “ಇದ್ದರೆ ನಿನ್ನಂಥ ಅಳಿಯ ಇರಬೇಕು.” ಅಂದರು. ಅವರಿಬ್ಬರೂ ಮನಸ್ಸಿನಲ್ಲೇ ನಿನ್ನಂಥ ಮಾವ ಇಲ್ಲಾ, ನಿನ್ನಂಥ ಅಳಿಯಾ ಇಲ್ಲಾ ಅಂತ ಹಾಡಿಕೊಂಡರು.

“ನೋಡಿ ಮಾವ, ಖಜಾನೆ ರಾಜಣ್ಣ ಬಹಳ ಕಟ್ಟುನಿಟ್ಟಿನ ವ್ಯಕ್ತಿ. ಒಂದು ವರ್ಷದ ಒಳಗೆ ಅವನ ಸಾಲ ತೀರಿಸಬೇಕು” ಅಂದ.

“ಅದಕ್ಕೇನು ಅಳಿಯಂದಿರೇ ಆರು ತಿಂಗಳಿನಲ್ಲೇ ತೀರಿಸಿಬಿಡೋಣ ಬಿಡಿ” ಅಂದು ನಕ್ಕರು.

ಆದರೆ ವರುಷ ಮುಗಿಯುತ್ತಾ ಬಂದರೂ ಸೋಮಿ ಮಾವ ಸಾಲ ತೀರಿಸುವ ಸೂಚನೆಯೇ ಇರಲಿಲ್ಲ. ಸೋಮುನೇ ಒಂದೆರಡು ಸಾರಿ ಫೋನ್ ಮಾಡಿದಾಗ ಮುಂದಿನ ವಾರ ಬರ್ತೀನಿ, ದುಡ್ಡು ತರ್ತೀನಿ ಅಂದಿದ್ದರೇ ಹೊರತು ಅವರು ಬರಲೂ ಇಲ್ಲ ದುಡ್ಡು ತರಲೂ ಇಲ್ಲ.

“ಸೋಮಿ ಏನೇ ನಿಮ್ಮಪ್ಪ ನಾನು ಅವರ ಮರ್ಯಾದೆ ಕಾಪಾಡಿದರೆ ಅವರು ನನ್ನ ಮರ್ಯಾದೆ ಕಳಿಯೋಕೆ ಹೊರಟಿರೋ ಹಾಗಿದೆ ನೀನೂ ಫೋನ್ ಮಾಡೇ” ಅಂದ. ಸೋಮಿ ಫೋನ್ ಮಾಡಿದರೂ ಅದೇ ಉತ್ತರ. ಕಡೆಗೊಂದು ದಿನ “ಅಳಿಯಂದಿರೇ ನಾನು ಏನೋ ತಾಪತ್ರಯದಲ್ಲಿ ಸಿಕ್ಕಿಹಾಕಿಕೊಂಡಿದ್ದೀನಿ, ನಿಮ್ಮ ಖಜಾನೆ ರಾಜಣ್ಣನಿಗೆ ಹೇಳಿ ಇನ್ನೊಂದು ವರ್ಷ ಟೈಮ್ ತಗೊಳಿ” ಅಂದರು. ಸೋಮು ನೆಲಕ್ಕೆ ಬಿದ್ದ.

ಅವತ್ತು ಸಂಜೆಯೇ ಖಜಾನೆ ರಾಜಣ್ಣ ಮನೆಗೆ ಬಂದ. “ನೋಡು ಸೋಮಣ್ಣ ನಾನು ಮಳೆ ಬಂದರೂ ಲೆಕ್ಕಿಸದೇ ನಿಮ್ಮ ಮನೆಗೆ ಬಂದು ದುಡ್ಡು ಕೊಟ್ಟಿದೀನಿ. ಅದೇ ರೀತಿ ನೀನೂ ನನ್ನ ಮನೆಗೆ ಬಂದು ಹಣ ವಾಪಸ್ ಕೊಡಬೇಕಾಗಿತ್ತು. ಆದರೆ ನೀನು ಮಾತ್ರ ನನ್ನನ್ನೇ ನಿಮ್ಮನೆ ಬಾಗಿಲಿಗೆ ಅಲೆಯೋ ಹಾಗೆ ಮಾಡಿದೀಯ ಇದು ಸರಿಯಲ್ಲ ಅಂತ ರೇಗಿದ.

ಸೋಮು ಏನೋ ಸಮಜಾಯಿಷಿ ಹೇಳಿ ಕಳಿಸಿದ. ಆದರೆ ಖಜಾನೆ ರಾಜಣ್ಣನ ಬಲವಂತ ಜಾಸ್ತಿಯಾಯಿತು.

ಇದೇ ಯೋಚನೇಲಿ ಆಫೀಸಿನಲ್ಲಿ ತಲೆ ಕೆಡಿಸಿಕೊಂಡು ಕೂತಿದ್ದಾಗ ರಾಗಿಣಿ “ಏನ್ ಸೋಮು ಸರ್, ನೀವು ಹೀಗಿದೀರ, ನಿಮ್ಮನ್ನು ನೋಡೋಕೆ ಆಗ್ತಿಲ್ಲ. ನಿಮ್ಮ ಸಮಸ್ಯೆ ನನ್ನ ಹತ್ರ ಹೇಳ್ಕೊಳಿ ಸರ್, ನಾನು ಪರಿಹಾರ ಕೊಡ್ತೀನಿ” ಅಂದಳು. “ನನ್ನ ಸಮಸ್ಯೆ ಐದು ಲಕ್ಷ ಕಣ್ರೀ” ಅಂದ. “ಅಯ್ಯೋ ನಮ್ಮತ್ರ ಇರೋದೇ ಎರಡು ಲಕ್ಷ ಅಲ್ವಾ ಸರ್, ನನ್ನ ಲಕ್ಷ ನಿಮ್ಮ ಕಡೆ, ನಿಮ್ಮ  ಲಕ್ಷ ನನ್ನ ಕಡೆ” ಅಂದು ಹುಬ್ಬು ಕುಣಿಸಿದಳು. “ಅಯ್ಯೋ ಅದಲ್ರೀ” ಅಂದು ತನ್ನ ತಾಪತ್ರಯ ಹೇಳಿಕೊಂಡ.

“ಸರ್. ನನ್ನತ್ರ ಅಷ್ಟು ದುಡ್ಡಿದ್ದಿದ್ರೆ ನೀವು ಕೇಳೊ ಮುಂಚೆನೇ ಕೊಟ್ಟುಬಿಡ್ತಿದ್ದೆ ಸರ್. ಒಂದ್ಕೆಲ್ಸ ಮಾಡಿ, ನನಗೆ ನಾಳೆವರೆಗೂ ಟೈಮ್ ಕೊಡಿ, ನಿಮಗೆ ದುಡ್ಡು ಹೊಂದಿಸಿ ಕೊಡ್ತೀನಿ ಇಲ್ಲದಿದ್ರೆ ನಾನು ಒಂದು ಸಖತ್ ಐಡಿಯಾ ಕೊಡ್ತೀನಿ” ಅಂದಳು. ಸೋಮು ರಾಗಿಣಿಯ ಕೈ ಕುಲುಕಿ ಅಷ್ಟರಲ್ಲೇ ಸಮಾಧಾನ ಹೊಂದಿದ.

ಈಗೀಗ ಖಜಾನೆ ರಾಜಣ್ಣ ದಿನಕ್ಕೆ ಇಪ್ಪತ್ತು ಸಾರಿ ಫೋನ್ ಮಾಡ್ತಿದ್ದ. ಈಗ ಮರ್ಯಾದೆ ಬಿಟ್ಟು ಮಾತಾಡೋದೂ ಷುರು ಮಾಡಿದ್ದ. ನನ ಮಗನೇ ಇವತ್ತು ಸಾಯಂಕಾಲದೊಳಗೆ ದುಡ್ಡು ಮಡಗ್ಲಿಲ್ಲ ಅಂದ್ರೆ ನಾನು ನಿನ್ನ ಮತ್ತು ನಿನ್ನ ಹೆಂಡ್ರ ಕುತ್ತಿಗೆಗೆ ಕತ್ತಿ ಮಡಗ್ತೀನಿ ಅಂದ.

ಸೋಮು ಮಾವನಿಗೆ ಫೋನ್ ಮಾಡಿ ಇಲ್ಲಿನ ತಾಪತ್ರಯ ಹೇಳಿದರೆ ಅಯ್ಯೋ ಅಳಿಯಂದಿರೇ ನೀವು ಹೇಗಾದರೂ ನಿಭಾಯಿಸಿ ಅಂದರು. ಅವತ್ತು ಸಂಜೆ ನಿಜವಾಗಿಯೂ ಖಜಾನೆ ರಾಜಣ್ಣ ದೊಡ್ಡ ಕತ್ತಿ ತಗೊಂಡು ಬಂದಿದ್ದ.

ಸೋಮು “ನೋಡು ರಾಜಣ್ಣ ನೀನು ನನ್ನನ್ನು ಸಾಯಿಸಿದರೆ ನಿನಗೆ ದುಡ್ಡು ಕೊಡೋರು ಯಾರು. ಸ್ವಲ್ಪ ಅರ್ಥ ಮಾಡ್ಕೊ ಇನ್ನೊಂದು ವಾರ ಟೈಮ್ ಕೊಡು ಖಂಡಿತಾ ನಿನ್ನ ಸಾಲ ವಾಪಸ್ ಕೊಡ್ತೀನಿ” ಅಂತ ತಲೆ ಸವರಿ ಕಳಿಸಿದ.

“ಲೇ ಸೋಮಿ ನೋಡೇ ನಿಮ್ಮಪ್ಪ ಎಂಥಾ ಕೆಲಸ ಮಾಡಿದಾರೆ ಅವರ ಮರ್ಯಾದೆ ಕಾಪಾಡ್ಕೊಂಡು ಅಳಿಯನ ಮರ್ಯಾದೆ ತೆಗಿತಾ ಇದಾರೆ” ಅಂದ.

ಅದಕ್ಕೆ ಸೋಮಿ “ಅಲ್ಲಾರೀ, ಮಾವನಿಗೋಸ್ಕರ ಒಂದು ಐದು ಲಕ್ಷ ಹೊಂದಿಸೋಕೆ ಆಗಲ್ಲ ಅಂದ್ರೆ ನೀವೆಂಥಾ ಅಳಿಯಾರೀ” ಅಂದು ಸೋಮುನೇ ಮೂದಲಿಸಿದಳು. “ಲೇ ಏನಾದರೂ ಐಡಿಯಾ ಕೊಡೆ” ಅಂತ ಕೇಳಿದರೆ “ನಿಮ್ಮಾಫೀಸಿನಲ್ಲಿ ಸಾಲ ತಂದು ಖಜಾನೆ ರಾಜಣ್ಣಂಗೆ ಕೊಟ್ಬಿಡಿ” ಅಂದಳು.

ಸೋಮು ಯಥಾ ಪ್ರಕಾರ ಆಫೀಸಿನಲ್ಲಿ ತಲೆ ಮೇಲೆ ಕೈಹೊತ್ತು ಕೂತಿದ್ದ. ರಾಗಿಣಿ ಅವತ್ತು ಅಚ್ಚ ಹಸಿರಿನ ಸೀರೆ ಉಟ್ಟು ಬಿಳೀ ಮಲ್ಲಿಗೆ ಮುಡಿದು, ಕೆಂಪು ರಂಗನ್ನು ತುಟಿಗೆ ಸವರಿಕೊಂಡು ಬಂದಿದ್ದಳು. ಸೋಮು ಸರ್ ಅಂದು ಅವನ ಕೈ ಕುಲುಕಿದಳು.

“ನಿಮ್ಮ ಸಮಸ್ಯೆಗೆ ನನ್ನ ಬಳಿ ಸರಿಯಾದ ಪರಿಹಾರ ಇದೆ ಬನ್ನಿ ಸರ್” ಅಂದು ರೆಕಾರ್ಡ್ ರೂಮಿಗೆ ಕರ್ಕೊಂಡು ಹೋದಳು. “ಸ್ವಲ್ಪ ಹತ್ರ ಬನ್ನಿ ಸರ್” ಅಂದು ಅವಳ ತುಟಿ ಅವನ ಕೆನ್ನೆಗೆ ತಗುಲುವ ಹಾಗೆ ಅವನ ಕಿವಿಯಲ್ಲಿ ಪರಿಹಾರ ಸೂಚಿಸಿದಳು. ಸೋಮು ಕುಣಿದಾಡಿದ.

“ಏನ್ರೀ ಇದು ಇಷ್ಟು ಸುಲಭದ ಪರಿಹಾರ ಹೇಳಿದೀರ” ಅಂದು ಏನಾದರಾಗಲಿ ಅಂದು ರಾಗಿಣಿಯನ್ನು ಬಲವಾಗಿ ತಬ್ಬಿ

“ರೀ ನೋಡ್ರೀ ನನ್ನ ಅರ್ಧಾಂಗಿ ಅನಿಸಿಕೊಂಡ ಸೋಮಿ ಇಂಥಾ ಪರಿಹಾರ ಸೂಚಿಸಬೇಕಾಗಿತ್ತು. ಆದರೆ ನೀವು ನನ್ನ ಆರ್ಧ ಅಂಗಿನೂ ಅಲ್ಲ ಪೂರ್ತ ಅಂಗೀನೂ ಅಲ್ಲ ಆದರೂ ಎಂಥಾ ಸೂಪರ್ ಸೂಪರ್ ಐಡಿಯಾ ಕೊಟ್ಟಿದೀರ” ಅಂದ.

“ಸೋಮು ಸರ್ ಇನ್ನೊಂದು ಸ್ವಲ್ಪ ಹೊತ್ತು ಹೀಗೆ ತಬ್ಕೊಂಡಿರಿ ಸರ್” ಅಂದಳು. ಅದಕ್ಕೆ ಸೋಮು “ಯಾವುದು ಹೆಚ್ಚಾದರೂ ಅದು ವಿಷ” ಅಂದು ಅವಳ ಕೆನ್ನೆ ಸವರಿ ಹೊರಬಂದ. ಮರುದಿನ ರಾಜಣ್ಣ ಸಂಜೆ ಮನೆಗೆ ಬಂದ. ಕತ್ತಿನೂ ತಂದಿದ್ದ. “ಏನ್ ಸೋಮಣ್ಣ ಇವತ್ತಾದರೂ ನನ್ನ ಹಣ ಎಣಿಸ್ತೀಯ ಇಲ್ಲಾ ನಾಳೆ ಬೆಳಗ್ಗೆ ಪೋಲೀಸಿನವರು ಬಂದು ನಿನ್ನ ಹಣ ಎಣಿಸಬೇಕಾ” ಅಂತ ಕೇಳಿದ.

ಸೋಮು ನಗುತ್ತಾ “ಇಲ್ಲ ರಾಜಣ್ಣ ಬನ್ನಿ ಕೂತ್ಕೊಳಿ, ಲೇ ಸೋಮಿ ರಾಜಣ್ಣ ಬಂದಿದಾರೆ ಹಪ್ಪಳ ಕರಿದು ಕಾಫಿ ಜೊತೆ ತಗೊಂಡ್ಬಾರೆ” ಅಂದ. ರಾಜಣ್ಣ ಸಿಟ್ಟಿನಿಂದ “ನಿನ್ನ ಹಪ್ಪಳದ ಮನೆ ಹಾಳಾಯ್ತು ಮೊದಲು ನನ್ನ ಹಣ ಎತ್ತು ಇಲ್ಲದಿದ್ದರೆ ನಿನ್ನನ್ನೇ ಹಪ್ಪಳ ಮಾಡಿಬಿಡ್ತೀನಿ” ಅಂದು ಕತ್ತಿ ಎತ್ತಿದ.

ಸೋಮು ಸ್ವಲ್ಪ ಹತ್ತಿರ ಕೂತು “ನೋಡು ರಾಜಣ್ಣ ನನ್ನ ಉದ್ದೇಶ ಏನೂ ಅಂದ್ರೆ ನೀನು ನನಗೆ ಹೇಗೆ ಸಾಲ ಕೊಟ್ಟೆಯೋ ನಾನೂ ಹಾಗೇ ವಾಪಸ್ ಕೊಡಬೇಕು ಅಂತ. ನೀನು ನನ್ನ ಮನೆಗೆ ಬಂದು ಸಾಲ ಕೊಟ್ಟೆ, ನಾನು ನಿನ್ನ ಮನೆಗೆ ಬಂದು ಸಾಲ ವಾಪಸ್ ಕೊಡ್ತೀನಿ. ಅಲ್ಲೀವರೆಗೂ ನೀನು ತಾಳ್ಮೆಯಿಂದ ಇರಬೇಕು” ಅಂದ.

ರಾಜಣ್ಣ “ಸರಿ ಹಾಗೇ ಆಗ್ಲಿ, ಈಗ ನೀನು ನನ್ನ ಜೊತೆನೇ ನನ್ನ ಮನೆಗೆ ಬಾ ಸಾಲ ಹಿಂದಕ್ಕೆ ಕೊಡು” ಅಂದ.

ಸೋಮು “ಅದು ಹೇಗೆ ಆಗುತ್ತೆ ರಾಜಣ್ಣ, ನೀನು ನನಗೆ ಸಾಲ ವಾಪಸ್ ಕೊಟ್ಟಾಗ ಯಾವ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತೀಲಿ ನಾನು ಸಾಲ ವಾಪಸ್ ಕೊಡ್ತೀನಿ” ಅಂದ.

“ಹಂಗಂದ್ರೇನು” ಅಂತ ರಾಜಣ್ಣ ಕೇಳಿದರೆ “ ನೋಡು ರಾಜಣ್ಣ ನೀನು ನನಗೆ ಸಾಲ ಕೊಟ್ಟ ದಿನ ಕುಂಭದ್ರೋಣ ಮಳೆ ಬರ್ತಿತ್ತು. ಅವತ್ತು ನೀನು ನನಗೆ ಮಳೆಸಾಲ ತಂದುಕೊಟ್ಟೆ. ಮತ್ತೆ ಅಂಥದೇ ಮಳೆ ಬರಲಿ, ಅವತ್ತು ನಾನೂ ನಿನ್ನ ಹಾಗೆ ಮಳೇಲಿ ನೆನ್ಕೊಂಡು ಬಂದು ನಿಮ್ಮನೇಲಿ ಗರಿಗರಿ ನೋಟು ಎಣಿಸ್ತೀನಿ” ಅಂದ.

ರಾಜಣ್ಣ “ಈಗ ಮಳೆಗಾಲ ಮುಗೀತಲ್ಲ ಮತ್ತೆ ಅಂಥ ಮಳೆ ಈಗೆಲ್ಲಿ ಬರ್ತದೆ.” ಅಂತ ಕೇಳಿದರೆ,

ಸೋಮು “ ಈಗಲ್ದಿದ್ರೆ ಏನು ಮಳೆಗಾಲದಲ್ಲಿ ಬಂದೇ ಬರುತ್ತಲ್ಲ. ಪಂಚಾಂಗದಲ್ಲಿ ಮುಂದಿನ ವರ್ಷ ನಮ್ಮೂರಿನಲ್ಲಿ ಕುಂಭದ್ರೋಣ ಮಳೆ ಅಂತ ಈಗಲೇ ಭವಿಷ್ಯ ನುಡಿದ್ದಿದ್ದಾರೆ. ಈಗ ಹೋಗು, ಮಳೆ ಬಂದ ದಿನ ನಾನೇ ನಿಮ್ಮನೆಗೆ ಬಂದು ನಿನ್ನ ಸಾಲ ತೀರಿಸ್ತೀನಿ” ಅಂದ.

ಸೋಮು ಮಾತು ಕೇಳಿಸಿಕೊಂಡು ಕೂತಿದ್ದ ಖಜಾನೆ ರಾಜಣ್ಣನಿಗೆ ಅದೆಲ್ಲಿತ್ತೋ ಸಿಟ್ಟು, ಮೈ ಮೇಲೆ ದೇವರು ಬಂದಂತೆ ಎದ್ದು ನಿಂತು ಕೆಂಪು ಕಣ್ಣುಬಿಟ್ಕೊಂಡು ಕತ್ತಿಯನ್ನು ಬಲವಾಗಿ ಎತ್ತಿ ಸೋಮು ಮೇಲೆ ಬೀಸಿದ.

ಸೋಮು “ ಅಯ್ಯೋ ಅಯ್ಯೊ ರಾಜಣ್ಣ ನನ್ನ ಸಾಯಿಸಬೇಡ, ನಿನ್ನ ಮಳೆ ಸಾಲನ ಮಳೆ ಬಂದ ದಿನವೇ ತೀರಿಸ್ತೀನಿ, ನನ್ನ ಸಾಯಿಸಬೇಡ, ನನ್ನ ಸಾಯಿಸಬೇಡ” ಅಂತ ಕಿರುಚಿದ.

ಬೆನ್ನ ಮೇಲೊಂದು ಹೊಡೆತ ಬಿತ್ತು. ಅಯ್ಯೋ ನಾನಿನ್ನೂ ಸತ್ತೇ ಇಲ್ವಾ ಅಂತ ಸೋಮು ಕಣ್ಣು ಬಿಟ್ಟ. ಎರುರಿಗೆ ರಾಜಣ್ಣ ಇರಲಿಲ್ಲ ಬದಲಿಗೆ ಸೋಮಿ ಇದ್ದಳು. ಅವಳ ಕಣ್ಣೂ ಕೆಂಪಗಿತ್ತು. ಕೈಯಲ್ಲಿ ಕತ್ತಿ ಇರಲಿಲ್ಲ, ಸೌದೆ ಇತ್ತು.

:ಗಂಟೆ ಏಳಾಗ್ತಾ ಬಂತು ಎಂಥದ್ರೀ ಅದು ಮಳೆ ಸಾಲ, ಯಾವ ಮಳೆ ಸಾಲ, ಏನು ದರಿದ್ರದ ಕನಸು ನಿಮ್ಮದು” ಅಂದಳು.

ಸೋಮು ಅಗಲಿಸಿ ಕಣ್ಣು ಬಿಟ್ಟ, ಹೊರಗೆ ಇನ್ನೂ ಸೋನೆ ಮಳೆ ಬರ್ತಿತ್ತು. ಖಜಾನೆ ರಾಜಣ್ಣನೂ ಇಲ್ಲ ಯಾರೂ ಇಲ್ಲ. ಅಬ್ಬಾ ಎಂಥಾ ಬ್ರಮೆ ನನ್ನದು ಅಂದ್ಕೊಂಡ.

ಆದರೂ ಕನಸಿನಲ್ಲಿ ಬಂದು ಸಖತ್ ಐಡಿಯಾ ಕೊಟ್ಟ ರಾಗಿಣಿಗೆ ಇವತ್ತು ಏನಾದರೂ ಬಹುಮಾನ ಕೊಡಬೇಕು ಅಂತ ಹಾಸಿಗೆಯಿಂದ ಎದ್ದು ಸೋಮಿ ಬೆನ್ನ ಮೇಲೆ ಕೈ ಹಾಕಿ ಅದೇನಾಯ್ತು ಗೊತ್ತಾ ಅಂದಾಗ ಸೋಮಿ ಮೂತಿ ತಿರುವಿ ಅದೇನಾಯ್ತು ಅನ್ನೋದನ್ನು ಬ್ರಷ್ ಮಾಡ್ಕೊಂಡು ಬಂದು ಹೇಳಿ ದರಿದ್ರ ವಾಸನೆ ಅಂದು ಒಳಗೆ ಹೊರಟಳು.

‍ಲೇಖಕರು Avadhi

November 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This