ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಹೆಚ್ ಎಸ್ ಈಶ್ವರ್

ಯಾವೊಬ್ಬ ವ್ಯಕ್ತಿಯ ಶಾಲಾಕಾಲೇಜು ದಿನಗಳು ಬಹುಪಾಲು ಸ್ಮರಣೀಯವಾಗಿರುತ್ತವೆ ಮತ್ತು ನಂತರದ ಬದುಕಿಗೆ ಅವಶ್ಯಕ ಬುನಾದಿಯನ್ನು ಒದಗಿಸುತ್ತವೆ. ನನ್ನ ಶಿಕ್ಷಣದ ಅವಧಿಯನ್ನು ನಾಲ್ಕು ಹಂತಗಳಲ್ಲಿ ನೆನಪಿಸಿಕೊಳ್ಳುತ್ತೇನೆ. ಶಾಲೆಗಳೇ ಇಲ್ಲದ ಹಳ್ಳಿಯಲ್ಲಿ ಹುಟ್ಟಿ ಮನೆಯಲ್ಲಿಯೇ ಕಲಿತು ನೇರವಾಗಿ ತೀರ್ಥಹಳ್ಳಿಯ ಸರ್ಕಾರಿ ಮಾಧ್ಯಮಿಕ ಶಾಲೆಯ ಏಳನೆಯ ತರಗತಿಗೆ ದಾಖಲಾದದ್ದು ಆರಂಭದ ಹಂತ.

ನಂತರ ಅದೇ ಶಾಲೆಯಲ್ಲಿ ಆಗಿನ ಲೋಯರ್ ಸೆಕಂಡೆರಿ ಪರೀಕ್ಷೆ ಮತ್ತು ತೀರ್ಥಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ತನಕದ ಓದು ಇನ್ನೊಂದು ಘಟ್ಟ. ಮುಂದೆ ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಅಂದಿನ ಇಂಟರ್‍ಮಿಡಿಯಟ್ ಮುಗಿಸಿ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪಡೆದುಕೊಂಡದ್ದು ಮತ್ತೊಂದು ಹಂತ. ಅಮೆರಿಕದ ಪ್ರತಿಷ್ಠಿತ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ಪಿಹೆಚ್.ಡಿ. ಪದವಿ ಸಂಪಾದಿಸಿದ್ದು ನನ್ನ ಸಾಂಪ್ರದಾಯಕ ಶಿಕ್ಷಣ ಕೊನೆಯ ಘಟ್ಟ.

ಈ ಕೊನೆಯ ಎರಡು ಘಟ್ಟಗಳ ಓದು ಮತ್ತು ತರಬೇತಿ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಮತ್ತು ನನ್ನ ಜೀವನ ಮಾರ್ಗ ಸೃಷ್ಟಿಸುವಲ್ಲಿ ನೆರವಾದವು ಎನ್ನುವುದು ನನ್ನ ನಂಬಿಕೆ. ನಾನು ಉನ್ನತ ಶಿಕ್ಷಣ ಪಡೆದ ಮಹಾರಾಜಾ ಕಾಲೇಜು ಮತ್ತು ವಿಸ್ಕಾನ್ಸಿನ್ ವಿಶ್ವವಿದ್ಯಾಲಯ ಎರಡೂ ಘನತೆವೆತ್ತ ಶಿಕ್ಷಣ ಸಂಸ್ಥೆಗಳು ಎನ್ನುವ ಹೆಮ್ಮೆ ನನ್ನದು. ಆ ಎರಡೂ ಸಂಸ್ಥೆಗಳ ಬಗ್ಗೆ ಯಾವತ್ತೂ ಒಂದು ಬಗೆಯ ಆತ್ಮೀಯ ಭಾವನೆ ನನ್ನಲ್ಲಿ ಬೆಳೆದು ಬಂದಿದೆ; ನಮ್ಮದೇ ಆದ ಮಹಾರಾಜಾ ಕಾಲೇಜಿನ ಬಗ್ಗೆ ತುಸು ಹೆಚ್ಚಿನ ಒಲವು.

ನಾನು ಇಂಟರ್‍ಮಿಡಿಯಟ್ ಓದುತ್ತಿದ್ದಾಗ ಮತ್ತು ನಂತರದ ಕಾಲೇಜು ದಿನಗಳಲ್ಲಿ ಮಹಾರಾಜಾ ಕಾಲೇಜು ಹಾಸ್ಟೆಲಿನಲ್ಲಿ ವಾಸವಾಗಿದ್ದೆ. ಹಾಸ್ಟೆಲಿನಿಂದ ಯುವರಾಜಾ ಕಾಲೇಜಿಗೆ ಹೋಗುವಾಗಲೆಲ್ಲ ಪಕ್ಕದ ಮಹಾರಾಜಾ ಕಾಲೇಜನ್ನು ದಾಟಿಯೇ ಹೋಗಬೇಕಿತ್ತು. ಮಹಾರಾಜಾ ಕಾಲೇಜಿನ ಕೀರ್ತಿ, ವೈಭವಗಳಿಗೆ ಮಾರುಹೋಗಿದ್ದ ನನಗೆ ಆ ಕಾಲೇಜಿನಲ್ಲಿ ಓದುವ ಹಂಬಲ; ಅದು ಎಂದು ಸಿದ್ಧಿಸೀತು ಎನ್ನುವ ತವಕ. ಅದು ಬೇಗನೆ ಸಾಧ್ಯವಾಯಿತು ಎನ್ನುವ ಸಮಾಧಾನ.

ಇಂಟರ್ ಪಾಸಾದಾಗ ಕನಸಿನ ಕಾಲೇಜಿನಲ್ಲಿ ಬಿ.ಎ. ಅಥವಾ ಬಿ. ಎ. (ಆನರ್ಸ್) ಓದುವ ಆಯ್ಕೆ ನನ್ನ ಮುಂದಿತ್ತು. ಆನರ್ಸ್ ಪ್ರತಿಷ್ಠೆಯ ಕೋರ್ಸ್ ಮತ್ತು ನನ್ನ ಅಣ್ಣ ಹಾ ಮಾ ನಾಯಕರು ಸಹ ಆನರ್ಸ್  ಓದಿದ್ದರು. ಆನರ್ಸ್ ಅಧ್ಯಯನ ಆಯ್ಕೆ ಮಾಡಿಕೊಳ್ಳಲು ಅಷ್ಟು ಕಾರಣ ಸಾಕಿತ್ತು. ಆನರ್ಸ್ ಓದಲು ಆಯ್ಕೆ ಮಾಡಿಕೊಂಡಾಗ, ಯಾವ ವಿಷಯದಲ್ಲಿ ಎನ್ನುವ ನಿರ್ಧಾರ ಮಾಡಬೇಕಿತ್ತು.

ಓದಬೇಕು ಎನ್ನುವ ನಿರ್ಧಾರ ಬಿಟ್ಟರೆ, ಇಂಥದೇ ವಿಷಯ ಓದಬೇಕು ಎನ್ನುವ ಆಸಕ್ತಿಯಾಗಲೀ, ಆ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಪಕ್ವತೆಯಾಗಲೀ ನನ್ನ ಆ ವಯಸ್ಸಿಗೆ ಇರಲಿಲ್ಲ. ಇತಿಹಾಸ, ಅರ್ಥಶಾಸ್ತ್ರ, ತರ್ಕಶಾಸ್ತ್ರಗಳು ಇಂಟರ್‍ಮಿಡಿಯಟ್‍ನಲ್ಲಿ ನನ್ನ ಐಚ್ಚಿಕ ವಿಷಯಗಳು. ಇವುಗಳಿಗೆ ಸಂಬಂಧಿಸಿದ ಯಾವುದಾರರೂ ವಿಷಯಗಳಲ್ಲಿ ಆನರ್ಸ್ ಅಧ್ಯಯನ ಮಾಡುವ ಸಾಧ್ಯತೆ ಇತ್ತು.

ಬರುವ ದಿನಗಳಲ್ಲಿ ಅರ್ಥಶಾಸ್ತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಇರುವ ಸಂಭವ, ಅರ್ಥಶಾಸ್ತ್ರವನ್ನೇ ಓದುವಂತೆ ನನಗೆ ಗೊತ್ತಿದ್ದ ಒಬ್ಬರು ಅಧ್ಯಾಪಕರು ಸಲಹೆ ಕೊಟ್ಟರು. ಅರ್ಥಶಾಸ್ತ್ರದಲ್ಲಿ ನನಗೆ ಎಷ್ಟು ಅಂಕಗಳು ಬಂದಿವೆ ಎನ್ನುವುದನ್ನು ಸಹ ಯೋಚಿಸದೆ, ಆ ವಿಷಯದ ಆನರ್ಸ್ ಕೋರ್ಸಿಗೆ ಅರ್ಜಿ ಹಾಕಿ, ಅಲ್ಲಿ ನನಗೆ ಪ್ರವೇಶ ದೊರಕಿಯೇ ಬಿಟ್ಟಿತು ಎನ್ನುವ ಸಂತೋಷದಲ್ಲಿ ಓಡಾಡಿಕೊಂಡು ಇದ್ದೆ.

ಆದರೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಹಿಂದೆ ಸಲಹೆ ಕೊಟ್ಟಿದ್ದ ಅಧ್ಯಾಪಕರನ್ನು ಪುನಃ ಭೆಟ್ಟಿಯಾಗಿ, ಅವರ ಸಲಹೆ ಕೇಳಿದೆ. ಮನಶ್ಯಾಸ್ತ್ರ ವಿಭಾಗಕ್ಕೆ ಅರ್ಜಿ ಬದಲಾಯಿಸಿ ಕೊಡುವಂತೆ ಕಾಲೇಜು ಕಛೇರಿಯಲ್ಲಿ ಮನವಿ ಮಾಡಿಕೊಳ್ಳುವಂತೆ ಅವರು ಇನ್ನೊಂದು ಸಲಹೆ ಕೊಟ್ಟರು.

ಸರಿ, ಯಾವುದಾದರೇನು? ಮಹಾರಾಜಾ ಕಾಲೇಜಿನಲ್ಲಿ ಆನರ್ಸ್ ಓದುವುದಷ್ಟೇ ಆಗಿನ ನನ್ನ ಗುರಿ. ಅವರ ಸಲಹೆಯಂತೆ ಕಾಲೇಜು ಆಫೀಸಿಗೆ ಹೋಗಿ ನನ್ನ ಅಹವಾಲನ್ನು ಕಛೇರಿಯ ಮುಖ್ಯಸ್ಥರ ಮುಂದೆ ಹೇಳಿಕೊಂಡೆ. ಬಹುಶಃ ಆಗಿನ ಜನ ಇಂದಿಗಿಂತ ಸ್ವಲ್ಪ ಹೆಚ್ಚಿನ ಸಹಕಾರಿ ಮನೋಭಾವ ಹೊಂದಿದ್ದರು ಎನ್ನುವುದು ನನ್ನ ತಿಳುವಳಿಕೆ.

ಸಂಬಂಧಪಟ್ಟ ಗುಮಾಸ್ತರು ನನ್ನ ಅರ್ಜಿಯನ್ನು ಮನಶಾಸ್ತ್ರ ವಿಭಾಗಕ್ಕೆ ಬದಲಾಯಿಸಿ ಕೊಟ್ಟಿದ್ದಷ್ಟೇ ಅಲ್ಲದೆ, “ಆ ವಿಭಾಗದ ಮುಖ್ಯಸ್ಥ ಪ್ರೊ. ಕುಪ್ಪುಸ್ವಾಮಿಯವರು ನಾಳೆ ಹೊರದೇಶಕ್ಕೆ ಹೋಗುವವರಿದ್ದಾರೆ. ನೀನು ಈಗಲೇ ಹೋಗಿ ಅವರನ್ನು ಕಾಣು” ಎನ್ನುವ ಸಲಹೆಯನ್ನೂ ಕೊಟ್ಟರು. ಅಂದು ಡಾ. ಕುಪ್ಪುಸ್ವಾಮಿಯವರನ್ನು ಕಂಡ ಸಂದರ್ಭ ಇನ್ನೂ ನನ್ನ ಸ್ಮೃತಿಯಲ್ಲಿ ಉಳಿದುಕೊಂಡು ಬಂದಿದೆ.

ಅವರಾದರೋ ಪ್ರಖ್ಯಾತ ಮನೋವಿಜ್ಞಾನಿ, ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು, ಬಹಳಷ್ಟು ಎತ್ತರದ ವ್ಯಕ್ತಿ; ನಾನು ಸರಿಯಾಗಿ ಮಾತಾನಾಡಲೂ ತಿಳಿಯದ ಒಬ್ಬ ಹಳ್ಳಿಯ ಹುಡುಗ, ಅವರ ಅನುಗ್ರಹ ನಿರೀಕ್ಷೆಯಲ್ಲಿ ಅವರನ್ನು ಬೇಟಿಯಾಗಲು ಹೋಗುತ್ತಿರುವವನು. ಹೆದರಿಕೊಂಡು ಅವರ ಕೊಠಡಿಯೊಳಗೆ ಹೋಗಿ, ನನಗೆ ತೋಚಿದಂತೆ ನನ್ನ ಸಮಸ್ಯೆಯನ್ನು ಹೇಳಿಕೊಂಡೆ.

ನನ್ನ ಅರ್ಜಿ ಮತ್ತು ಅದಕ್ಕೆ ಲಗತ್ತಿಸಿದ್ದ ಅಂಕ ಪಟ್ಟಿಯನ್ನು ಪರಿಶೀಲಿಸಿದರು. “ ಚರಿತ್ರೆ, ತರ್ಕಶಾಸ್ತ್ರಗಳಲ್ಲಿ ಒಳ್ಳೆ ಅಂಕ ಗಳಿಸಿದ್ದೀಯ. ಅರ್ಥಶಾಸ್ತ್ರದಲ್ಲಿ ನಿನಗೆ ಏನಾಯಿತು?” ಎಂದು ಅವರದೇ ಗಂಭೀರ ಧ್ವನಿಯಲ್ಲಿ ಪ್ರಶ್ನಿಸಿದರು. ನನ್ನ ಉತ್ತರಕ್ಕೂ ಕಾಯದೆ, ನನ್ನ ಅರ್ಜಿಯ ಮೇಲೆ ‘ಅಡ್ಮಿಟ್’ ಎಂದು ಬರೆದು ಕೊಟ್ಟರು. ಕುಪ್ಪುಸ್ವಾಮಿಯವರ ‘ಅಡ್ಮಿಟ್’ ಆದೇಶ ನನ್ನನ್ನು ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯನ್ನಾಗಿಸಿತು. ಅಂದಿನ ನನ್ನ ಅರ್ಥಶಾಸ್ತ್ರದಲ್ಲಿನ ಕಳಪೆ ಪ್ರದರ್ಶನ ನನ್ನ ಮುಂದಿನ ಬದುಕಿನ ಆರ್ಥಿಕ ಅವ್ಯವಸ್ಥೆಯ ಪೂರ್ವಸೂಚಕ ಇದ್ದಿರಲೂ ಬಹುದು!

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳುತ್ತಿದ್ದ ಕಾಲಕ್ಕೆ ಮಹಾರಾಜಾ ಕಾಲೇಜು ಸಾಹಿತ್ಯ, ತತ್ವಶಾಸ್ತ್ರ, ಸಮಾಜ ವಿಜ್ಞಾನ ಇವೇ ಮೊದಲಾದ ವಿಷಯಗಳಲ್ಲಿ ಮಹತ್ವದ ಶಿಕ್ಷಣ ಕೇಂದ್ರವಾಗಿದ್ದು, ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ.

ಭಾರತದ ಆಕ್ಸ್ ಪರ್ಡ್ ಎಂದೇ ಪ್ರಖ್ಯಾತಿ ಹೊಂದಿದ್ದ ಈ ಕಾಲೇಜಿನಲ್ಲಿ ಹಲವು ಅತಿರಥ ಮಹಾರಥರು ಪ್ರಾಧ್ಯಾಪಕರಾಗಿದ್ದರು. ಅವರ ಪಟ್ಟಿಯನ್ನು ಅವಲೋಕಿಸಿದರೆ ಸಾಕು, ಕಾಲೇಜಿನ ಪ್ರತಿಷ್ಠತೆಯ ಅರಿವಾಗುತ್ತದೆ; ಪ್ರೊ. ಎಸ್. ರಾಧಾಕೃಷ್ಣನ್, ಸಿ.ಆರ್. ರೆಡ್ಡಿ, ಕೆ.ಟಿ. ಷಾ, ಎ.ಆರ್. ವಾಡಿಯಾ, ಎಂ. ಹಿರಿಯಣ್ಣ, ಕೆ. ವಿ. ಪುಟ್ಟಪ್ಪ, ಎಂ. ವಿ. ಗೋಪಾಲಸ್ವಾಮಿ ಹೀಗೆ ಬೆಳೆಯುತ್ತಲೇ ಸಾಗುತ್ತದೆ ಆ ಆಚಾರ್ಯರ ಯಾದಿ. ಇಲ್ಲಿ ತಯಾರಾದ ವಿದ್ಯಾರ್ಥಿಗಳು ಸಹ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತ ನಾಮರು.

ಬರಿಯ ಪಠ್ಯ ಮತ್ತು ಪರೀಕ್ಷೆಗಳಿಗೆ ಮಾತ್ರವೇ ಸೀಮಿತವಾಗಿರದೆ, ಒಬ್ಬ ವ್ಯಕ್ತಿಯ ಸಮಗ್ರ ವ್ಯಕ್ತಿತ್ವವನ್ನು ಬೆಳೆಸುವ ಪಠ್ಯೇತರ ಚಟುವಟಿಕೆಗಳಿಗೂ ಸಮಾನವಾದ ಒತ್ತು ಕೊಡುತ್ತಿದ್ದುದು ಈ ಕಾಲೇಜಿನ ಹೆಗ್ಗಳಿಕೆ. ಆ ಕಾಲೇಜಿನ ಜೂನಿಯರ್ ಮತ್ತು ಸೀನಿಯರ್ ಬಿ. ಎ. ಹಾಲ್‍ಗಳಲ್ಲಿ ಸದಾ ಒಂದಲ್ಲ ಒಂದು ಕಾರ್ಯಕ್ರಮ, ಹೆಚ್ಚು ಕಡಿಮೆ ಪ್ರತಿ ಸಂಜೆ, ನಡೆದೇ ತೀರುತ್ತಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.

ನಾನಾ ಬಗೆಯ ಭಾಷಣಗಳು, ಚರ್ಚಾಸ್ಪರ್ಧೆಗಳು, ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತಿದ್ದವು; ಅವುಗಳಿಗೆ ಜನರು ಕಿಕ್ಕಿರಿದು ನೆರೆಯುತ್ತಿದ್ದರು. ಇನ್ನೂ ವಿಶೇಷ ಕಾರ್ಯಕ್ರಮಗಳಾದರೆ ಅವು ಕಾಲೇಜಿನ ಪ್ರಾಂಗಣದಲ್ಲಿ ನೆರವೇರುತ್ತಿದ್ದವು; ಇಂಗ್ಲಿಷ್ ಇತಿಹಾಸಕಾರ ಅರ್ನಾಲ್ಡ್ ಟಾಯನ್‍ಬೀ, ವಿ.ಕೆ. ಕೃಷ್ಣಮೆನನ್ ಮುಂತಾದ ಪ್ರಖ್ಯಾತರ ಭಾಷಣಗಳನ್ನು ನಾನು ಕೇಳಿದ್ದು ಈ ಪ್ರಾಂಗಣದಲ್ಲಿಯೇ.

ಕಾಲೇಜು ಕುರಿತು ಹೇಳುವಾಗ ನನ್ನ ಓದಿಗೆ ಆಯ್ಕೆ ಮಾಡಿಕೊಂಡಿದ್ದ ಮನಶಾಸ್ತ್ರ ವಿಭಾಗದ ಬಗೆಗೂ ಕೆಲವು ಮಾತುಗಳನ್ನು ಹೇಳುವುದು ಉಚಿತವೇ ಆಗಿದೆ. 1924ರಲ್ಲಿ ಆರಂಭವಾದ ಮಹಾರಾಜ ಕಾಲೇಜಿನ ಮನಶಾಸ್ತ್ರ ವಿಭಾಗ, ಕಲ್ಕತ್ತಾದ ನಂತರ, ಭಾರತದಲ್ಲಿ ಎರಡನೆಯದು. ಆ ಮೊದಲು ತತ್ವಶಾಸ್ತ್ರದ ಒಂದು ಭಾಗವಾಗಿ ಭೋದಿಸಲ್ಪಡುತ್ತಿದ್ದ ಮನಶಾಸ್ತ್ರ ಒಂದು ಸ್ವತಂತ್ರ ಇಲಾಖೆಯಾಗಿ ರೂಪ ತಾಳಿದ್ದು ಇದೇ ಕಾಲೇಜಿನಲ್ಲಿ.

ಅದರ ನೇತೃತ್ವ ವಹಿಸಿದವರು ಡಾ. ಎಂ.ವಿ. ಗೋಪಾಲಸ್ವಾಮಿ. ಅವರು ಇಂಗ್ಲೆಂಡ್‍ನಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ಡಾ. ಚಾರ್ಲ್ಸ್ ಸ್ಪಿಯರ್‍ಮನ್ ಎಂಬ ಪ್ರಖ್ಯಾತ ಮನೋವಿಜ್ಞಾನಿಯ ವಿದ್ಯಾರ್ಥಿಯಾಗಿದ್ದು, ಆತನ ಜೊತೆಯಲ್ಲಿ ಕೆಲಸ ಮಾಡಿ ತಮ್ಮ ಪಿಎಚ್. ಡಿ. ಪದವಿ ಪಡೆದುಕೊಂಡಿದ್ದರು. ಅದೊಂದು ಶ್ರೀಮಂತ ಪರಂಪರೆ. ಸ್ಪಿಯರ್‍ಮನ್ ಓದಿದ್ದು ಜರ್ಮನಿಯ ಲೀಪ್‍ಜಿಗ್ ವಿಶ್ವವಿದ್ಯಾಲಯದಲ್ಲಿ, ವಿಲ್ಹೆಲ್ಮ್ ವೂಂಟ್ ಸ್ಥಾಪಿಸಿದ್ದ ಪ್ರಪಂಚದ ಮೊಟ್ಟಮೊದಲ ಮನಶಾಸ್ತ್ರದ ಪ್ರಯೋಗಾಲಯದಲ್ಲಿ. ಲೀಪ್‍ಜಿಗ್ ಪರಂಪರೆಯನ್ನು ಮುಂದುವರಿಸಿದ ಡಾ. ಗೋಪಾಲಸ್ವಾಮಿ ಮಹಾರಾಜಾ ಕಾಲೇಜಿನಲ್ಲಿ ಒಂದು ಉತ್ಕೃಷ್ಠ ಮಟ್ಟದ ಮನೋವಿಜ್ಞಾನ ಪ್ರಯೋಗಾಲಯವನ್ನು ರೂಪಿಸಿದರು.

ಈ ಪ್ರಯೋಗಾಲಯದ ಗುಣಮಟ್ಟವನ್ನು ಕುರಿತು, 1950ರ ದಶಕದಲ್ಲಿ ಭಾರತದಲ್ಲಿ ಪ್ರವಾಸ ಮಾಡಿದ ಅಮೆರಿಕದ ಮನೋವಿಜ್ಞಾನಿಯೊಬ್ಬನ ಅಭಿಪ್ರಾಯ ಹೀಗಿದೆ: “ಮೈಸೂರಿನಲ್ಲಿ (ಮಹಾರಾಜಾ ಕಾಲೇಜಿನಲ್ಲಿ) ಬಹುಶಃ ಭಾರತದಲ್ಲೇ ಅತ್ಯುತ್ತಮವಾದುದೆಂದು ಪರಿಗಣಿಸಬಹುದಾದ ಪ್ರಯೋಗಾಲಯವನ್ನು ಕಾಣುವ ಸುಯೋಗ ನನಗೆ ಸಿಕ್ಕಿತು; ಈ ಪ್ರಯೋಗಾಲಯ ವ್ಯಾಪಕ ಬಳಕೆಯಲ್ಲಿ ಸಹ ಇತ್ತು” (ಡಬ್ಲು. ಲೆಸ್ಲಿ ಬ್ಯಾರೆಟ್, 1955). ನನ್ನ ಇಲಾಖೆಯ ಶೈಕ್ಷಣಿಕ ಅಂತಃಸ್ಥನ್ನು ಗುರುತಿಸಲು ಈ ಒಂದು ಹೇಳಿಕೆ ಸಾಕು. ನಾನು ವಿದ್ಯಾರ್ಥಿಯಾಗಿ ಈ ಇಲಾಖೆಗೆ ಸೇರಿಕೊಳ್ಳುವ ಸಮಯಕ್ಕೆ ಗೋಪಾಲಸ್ವಾಮಿ ನಿವೃತ್ತರಾಗಿ, ಆ ಸ್ಥಾನದಲ್ಲಿ ಡಾ. ಕುಪ್ಪುಸ್ವಾಮಿಯವರು ಇದ್ದರು.

ನಾನು ಮಹಾರಾಜಾ ಕಾಲೇಜು ಪ್ರವೇಶ ಮಾಡುವ ಕಾಲಕ್ಕೆ ಸರಿಯಾಗಿ, ಅದುವರೆಗೆ ಅಲ್ಲಿ ಪ್ರಿನ್ಸಿಪಾಲರಾಗಿದ್ದ ಕುವೆಂಪು, ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಅವರ ಸ್ಥಾನಕ್ಕೆ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಸಿ.ಡಿ. ನರಸಿಂಹಯ್ಯ ಅಧಿಕಾರ ವಹಿಸಿಕೊಂಡಿದ್ದರು. ಅವರ ಆಕರ್ಷಕ ವ್ಯಕ್ತಿತ್ವ, ಶೈಲಿ, ವೇಶ ಭೂಷಣಗಳು, ಜೊತೆಗೆ ಆ ಹೊತ್ತಿಗೆ ಅವರು ಗಳಿಸಿದ್ದ ಇಂಗ್ಲಿಷ್ ಸಾಹಿತ್ಯದ ವಿದ್ವಾಂಸ ಎಂಬ ಹೆಸರು –ಈ ಎಲ್ಲವೂ ಸೇರಿ ಅವರ ಬಗೆಗೆ ನಮ್ಮ ಮೆಚ್ಚುಗೆ ಅಪಾರವಾಗಿತ್ತು.

ಅವರಿಗೆ ವಿದ್ಯಾರ್ಥಿಗಳ ಬಗೆಗೆ ಪ್ರೀತಿಯಿತ್ತು, ವಿದ್ಯಾರ್ಥಿಗಳ ಕಷ್ಟ ಸುಖಗಳಿಗೆ ಅವರು ಯಾವತ್ತೂ ಸ್ಪಂದಿಸುತ್ತಿದ್ದರು. ಅವರ ವಿದ್ಯಾರ್ಥಿಗಳ ಯೋಗ್ಯತೆಯಲ್ಲಿ ಅವರಿಗೆ ಬಹಳಷ್ಟು ನಂಬಿಕೆ, ಗೌರವಗಳು ಇದ್ದುವು. ಮುಂದೊಂದು ದಿನ ನಾನು ವಿದೇಶಿ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕುವ ಸಲುವಾಗಿ ಅವರಿಂದ ನನ್ನ ಇಂಗ್ಲಿಷ್ ಬಳಕೆಯ ಸಾಮರ್ಥ್ಯದ ಬಗ್ಗೆ ಒಂದು ಸರ್ಟಿಫಿಕೇಟ್ ಕೇಳಿಕೊಂಡು ಹೋದಾಗ ಅವರು ಹೇಳಿದ ಮಾತು ನನಗೆ ಇನ್ನೂ ನೆನಪಿದೆ: “ಈ ಅಮೆರಿಕಾದ ವಿಶ್ವವಿದ್ಯಾಲಯಗಳು ನಮ್ಮ ವಿದ್ಯಾರ್ಥಿಗಳ ಇಂಗ್ಲಿಷ್ ಸಾಮರ್ಥ್ಯದ ಬಗ್ಗೆ ಸರ್ಟಿಫಿಕೇಟ್ ನಿರೀಕ್ಷೆ ಮಾಡಬಾರದು.” ಅವರೇನೂ ನನ್ನ ಇಂಗ್ಲೀಷ್ ಸಾಮರ್ಥ್ಯದ ಯಾವುದೇ ಪರೀಕ್ಷೆ ಮಾಡದೆ, ಅವಶ್ಯಕ ಸರ್ಟಿಫಿಕೇಟ್ ಬರೆದು ಶುಭ ಕೋರಿದರು. ಅದು ಸಿಡಿಎನ್ ರೀತಿ.

ಅರವತ್ತು ವರ್ಷಗಳಿಗೂ ಹಿಂದಿನ ಮಹಾರಾಜಾ ಕಾಲೇಜಿನ ನಾಲ್ಕು ವರ್ಷಗಳ—ಮೂರು ವರ್ಷ ಆನರ್ಸ್ ಮತ್ತು ಒಂದು ವರ್ಷ ಎಂ. ಎ.– ವಿದ್ಯಾರ್ಥಿ ಜೀವನವನ್ನು ಮೆಲಕು ಹಾಕಿದಾಗ ಹತ್ತು ಹಲವಾರು ಸಂದರ್ಭಗಳು, ಘಟನೆಗಳು ನೆನಪಿಗೆ ಬರುತ್ತವೆ. ಎಷ್ಟೋ ವಿವರಗಳು ಮರೆತು ಹೋಗಿದ್ದರೂ, ಇನ್ನೂ ಹೇಳಲಿಕ್ಕೆ ಸಾಕಷ್ಟು ವಿಚಾರಗಳು ಸಿಗುತ್ತವೆ. ಅವುಗಳಲ್ಲಿ ಉಲ್ಲೇಖಾರ್ಹನವಾದ  ಕೆಲವನ್ನು ಮಾತ್ರ ದಾಖಲಿಸುತ್ತಿದ್ದೇನೆ.

ಆನರ್ಸ್ ತರಗತಿಗಳಲ್ಲಿ ಸಾಮಾನ್ಯವಾಗಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುತ್ತಿದ್ದರು. ಕೆಲವು ಕಡೆ ಕೇವಲ 4-5, ಇನ್ನು ಹೆಚ್ಚೆಂದರೆ 20-25. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಅಧ್ಯಾಪಕರ ನೇರ ನಿಗಾವಣೆಯಲ್ಲಿದ್ದು, ಅವರ ಕುಚೇಷ್ಟೆಗಳಿಗೆ ಹೆಚ್ಚಿನ ಅವಕಾಶಗಳು ಇರುತ್ತಿರಲಿಲ್ಲ. ಮಿಗಿಲಾಗಿ ಆನರ್ಸ್ ಕೋರ್ಸುಗಳಲ್ಲಿ ಫೇಲ್ ಆದರೆ ಕತೆ ಮುಗಿದಂತೆಯೇ, ಯಾಕೆಂದರೆ ಪುನಃ ಪರೀಕ್ಷೆ ಕಟ್ಟಿ ಪಾಸು ಮಾಡಲು ಅವಕಾಶ ಇರಲಿಲ್ಲ. ಹಾಗಾಗಿ ಈ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾಡುತ್ತಿರಲಿಲ್ಲ.

ನಿಜವಾಗಿಯೂ ಅಧ್ಯಾಪಕರು ಅವಿಧೇಯ ವಿದ್ಯಾರ್ಥಿಗಳನ್ನು ದಂಡಿಸುತ್ತಿದ್ದರೋ ಇಲ್ಲವೋ ಎಂದು ನಿಖರವಾಗಿ ಹೇಳಲಾಗದು; ಹಾಗಾದರೂ ವಿದ್ಯಾರ್ಥಿಗಳು ಮಾತ್ರ ಆ ಬಗೆಯ ಗ್ರಹಿಕೆ ಹೊಂದಿದ್ದು, ವಿಧೇಯರಾಗಿ ಶಿಸ್ತಿನಿಂದ ವರ್ತಿಸುತ್ತಿದ್ದರು. ಅಷ್ಟರಮಟ್ಟಿಗೆ ಅವರು ತಮ್ಮ ಹುಡುಗಾಟಿಕೆಯ ನಡವಳಿಕೆಗಳಿಂದ ವಂಚಿತರಾಗಿರುತ್ತಿದ್ದರು. ಇದಕ್ಕೆ ಅಪವಾದ ಎಂದರೆ ಇಂಗ್ಲಿಷ್ ಮತ್ತು ಕನ್ನಡ ತರಗತಿಗಳು. ಈ ಭಾಷಾ ಅಧ್ಯಯನಗಳು ಮೊದಲ ಎರಡು ವರ್ಷ ಆನರ್ಸ್ ತರಗತಿಗಳಿಗೆ ಕಡ್ಡಾಯವಾಗಿದ್ದು, ಅವುಗಳ ಪಾಠಗಳಿಗೆ ಎಲ್ಲ ಆನರ್ಸ್ ವಿದ್ಯಾರ್ಥಿಗಳು ಒಟ್ಟಾಗಿ ಜೂನಿಯರ್ ಅಥವಾ ಸೀನಿಯರ್ ಬಿ. ಎ. ಹಾಲ್‍ಗಳಲ್ಲಿ ಕಳೆಯುತ್ತಿದ್ದೆವು.

ಇಲ್ಲಿ ನೂರಕ್ಕು ಹೆಚ್ಚು ಜನ ಸೇರುತ್ತಿದ್ದುದರಿಂದ, ನಮಗೆ ಹೆಚ್ಚಿನ ಸ್ವಾತಂತ್ರ್ಯ ಅನುಭವಿಸಲು ವಿಪುಲ ಅವಕಾಶಗಳು ಇರುತ್ತಿದ್ದವು. ಹುಡುಗಿಯರ ವಿಚಾರಕ್ಕೆ ಬಂದರೆ ಮಹಾರಾಜಾ ಕಾಲೇಜು ಒಂದು ವಿಶಾಲ ಮರುಭೂಮಿ, ಬೇರೆ ಬೇರೆ ಆನರ್ಸಗಳಲ್ಲಿ ಓದುತ್ತಿದ್ದ ಸಣ್ಣ ಸಂಖ್ಯೆಯ ವಿದ್ಯಾರ್ಥಿನಿಯರು ಈ ಮರಳುಗಾಡಿನ ಓಯಸಿಸ್‍ಗಳು. ಅವರೆಲ್ಲ ಒಟ್ಟಾಗಿ ಇಂಗ್ಲಿಷ್ ಮತ್ತು ಕನ್ನಡ ತರಗತಿಗಳಲ್ಲಿ ಇರುತ್ತಿದ್ದುದು ಅಲ್ಲಿನ ಒಂದು ಹೆಚ್ಚಿನ ಆಕರ್ಷಣೆ. ಇನ್ನು ಆ ವಿಷಯಗಳನ್ನು ಪಾಠ ಹೇಳುತ್ತಿದ್ದ ಅಧ್ಯಾಪಕರಾದರೋ ಮಹಾಮಹಿಮರು. ನಮಗೆ ಪಾಠ ಹೇಳುತ್ತಿದ್ದವರಲ್ಲಿ ಎಸ್. ವಿ. ಪರಮೇಶ್ವರ ಭಟ್ಟರು, ಸುಜನಾ, ಎಂ. ರಾಮರಾಯರು, ಸಿ.ಡಿ. ಗೋವಿಂದರಾಯರು ಮೊದಲಾದವರು ಅತ್ಯಂತ ಜನಪ್ರಿಯ ಅಧ್ಯಾಪಕರಾಗಿದ್ದರು. ಅವರುಗಳಿಗೆ ಅವರದೇ ಆದ ವೈಲಕ್ಷಣಗಳಿದ್ದವು.

ಸಿ.ಡಿ. ಗೋವಿಂದರಾಯರ ತರಗತಿಯಲ್ಲಿ ನಾನೇ ಸೃಷ್ಟಿಸಿದ್ದ ಒಂದು ಲಘು ಪ್ರಸಂಗ ನನಗೆ ಇನ್ನೂ ನೆನಪಿದೆ. ಸಿಡಿಜಿ ನಮಗೆ ನೆಹರೂ ಅವರ ‘ಡಿಸ್ಕವರಿ ಆಪ್ ಇಂಡಿಯಾ’ ಪಠ್ಯವನ್ನು ಬೋಧಿಸುತ್ತಿದ್ದರು. ಅದೊಂದು ಗಹನವಾದ ಕೃತಿ; ಮಹತ್ವದ ಕೃತಿಯೊಂದನ್ನು ಸಮರ್ಥರಾದ ಅಧ್ಯಾಪಕರಿಂದ ಕಲಿತದ್ದು ನಮ್ಮ ಅದೃಷ್ಟ. ಸಿಡಿಜಿ ತುಂಬಾ ಗಂಭೀರ ಪ್ರವೃತ್ತಿಯ ಮನುಷ್ಯ, ಅವರೊಡನೆ ಲಘುವಾಗಿ ನಡೆದುಕೊಳ್ಳುವುದು ಆಪತ್ತಿಗೆ ಆಹ್ವಾನ ಕೊಟ್ಟಂತೆ.

ವಿದ್ಯಾರ್ಥಿಗಳ ಹಾಜರಿ ಪಡೆದುಕೊಳ್ಳುವಾಗ ಯಾವುದಾದರೂ ಹುಡುಗಿ ಹಾಜರಿಗೆ ಉತ್ತರಿಸದಿದ್ದರೆ, “ಈಸ್ ದಟ್ ಯಂಗ್ ಗರ್ಲ್ ಹಿಯರ್?” ಎಂದು ಕೇಳುವುದು ಗೋವಿಂದರಾಯರ ಒಂದು ಅಭ್ಯಾಸ. ಒಂದು ದಿನ ಹಾಜರಿ ತೆಗೆದುಕೊಳ್ಳುತ್ತಿದ್ದಾಗ ಒಬ್ಬ ಹುಡುಗಿ ಉತ್ತರಿಸಲಿಲ್ಲ. ಸಿಡಿಜಿ ತಮ್ಮ ಎಂದಿನ ಪ್ರಶ್ನೆ ಉಚ್ಚರಿಸುವ ಮೊದಲೇ ತರಗತಿಯ ಮಧ್ಯದಲ್ಲಿ ಕುಳಿತಿದ್ದ ನಾನು, “ಈಸ್ ದಟ್ ಯಂಗ್ ಗರ್ಲ್ ಹಿಯರ್?” ಎಂದು ನಿಧಾನವಾಗಿ ಕೇಳಿದೆ.

ಹಾಗಾದರೂ ಅದು ಸಿಡಿಜಿ ಕಿವಿಗೆ ಬಿದ್ದು ಕೆಂಡಾಮಂಡಲವಾದರು. ಅವರು ಎಷ್ಟು ಒಳ್ಳೆಯ ಮೇಷ್ಟ್ರು ಆಗಿದ್ದರೋ ಅಷ್ಟೇ ಸಿಡುಕರು ಎನ್ನಿಸಿಕೊಂಡಿದ್ದರು. ನನ್ನ ಕಡೆ ಕೈ ತೋರಿಸುತ್ತಾ, “ಸ್ಟ್ಯಾಂಡ್ ಅಪ್” ಎಂದು ಕಿರಿಚಿದರು. ನಾನು ಎದ್ದು ನಿಲ್ಲಲಿಲ್ಲ. ಪುನಃ ಅದೇ ಮಾತು ಹೇಳಿದರು. ನನ್ನ ಆಚೆ ಈಚೆ ಕುಳಿತವರು ಎದ್ದು ನಿಂತರು. ನಾನು ಮಾತ್ರ ಏನೂ ಮಾಡದವನಂತೆ ಸುಮ್ಮನೆ ಕುಳಿತೇ ಇದ್ದೆ.

“ಸೀ ದಟ್ ಫೆಲೋ ಸಿಟ್ಟಿಂಗ್ ಯಾಸ್ ಇಫ್ ಹಿ ಹ್ಯಾಸ್ ನಾಟ್ ಡನ್ ಎನಿಥಿಂಗ್”ಎಂದು ರೇಗಿಕೊಂಡು, ಹಾಜರಿ ಮುಂದುವರಿಸಿದರು. ತರಗತಿ ಮುಗಿದ ನಂತರ ನನ್ನ ಅಕ್ಕಪಕ್ಕದವರು ನನ್ನನ್ನು ತರಾಟೆಗೆ ತೆಗೆದುಕೊಂಡರು: “ನೀನು ಕೇಡಿ ಇದ್ದೀಯಾ ಕಣೋ. ನೀನು ಕುಚೇಷ್ಟೆ ಮಾಡಿ ನಮ್ಮನ್ನು ನಗೆಪಾಟಲಿಗೆ ಗುರಿ ಮಾಡಿದೆ” ಎಂದು.

ಆದರೆ ಕ್ಲಾಸಿನ ಬಹುಪಾಲು ಜನರಿಗೆ ಇದು ಯಾರು ಮಾಡಿದ್ದು ಎಂದು ಗೊತ್ತಾಗಲೇ ಇಲ್ಲ. ಇದರಿಂದ ನಾನು ಕಲಿತ ಜೀವನದ ಒಂದು ವ್ಯವಹಾರಿಕ ಸೂತ್ರ ಎಂದರೆ ನಾವು ಯಾವುದೇ ತಪ್ಪು ಮಾಡಿದರೂ ಅದನ್ನು ನಾವು ಮಾಡಿಲ್ಲ ಎನ್ನುವಂತೆ ಉದ್ಧಟತನ ಪ್ರದರ್ಶಿಸುವುದು ಮತ್ತು ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಮುಗ್ದತೆಯನ್ನು ಮೆರೆಯುವುದು.

ಭಾಷಾ ತರಗತಿಗಳನ್ನು ಕುರಿತು ಹೇಳುವಾಗ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರನ್ನು ಪ್ರಸ್ತಾಪಿಸಲೇ ಬೇಕು. ಅವರೊಬ್ಬ ಅದ್ಭುತ ಗುರುಗಳು; ಉನ್ನತ ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿ. ಅವರ ಉಪನ್ಯಾಸಗಳಲ್ಲಿ ಅವರ ವಿದ್ವತ್ತು ರಸವತ್ತಾಗಿ ಹರಿದು ಬರುತ್ತಿತ್ತು. ಅವರು ನಮಗೆ ಸೊಪ್ರೊಕ್ಲಿಸ್ ಮಹಾಕವಿಯ ‘ಅಂತಿಗೊನೆ’ ಮತ್ತು ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಗಳ ಬಗ್ಗೆ ಪಾಠ ಮಾಡುತ್ತಿದ್ದರು. ‘ಅಂತಿಗೊನೆ’ಯಂತಹ ಗಂಭೀರ ನಾಟಕವನ್ನು ಸಹ ವಿದ್ಯಾರ್ಥಿಗಳ ಆಸಕ್ತಿಗೆ ಚ್ಯುತಿ ಬಾರದ ಹಾಗೆ ಬೋಧಿಸುತ್ತಿದ್ದರು.

‘ಕಾನೂರು ಹೆಗ್ಗಡತಿ’ ಪಾಠ ಹೇಳುವಾಗ ಹಾಸ್ಯದ ಹೊನಲು ಹರಿಯುತ್ತಿತ್ತು. ಆ ಕಾದಂಬರಿಯಲ್ಲಿ ಕಡಗೋಲು ಪ್ರಸಂಗವೊಂದು ಬರುತ್ತದೆ. ಕಡಗೋಲಿಗೆ ಮಾತಾಡುವ ಶಕ್ತಿ ಇದ್ದಿದ್ದರೆ ಎಂತೆಂಥ ಸಂಗತಿಗಳು ಹೊರಬೀಳುತ್ತಿದ್ದುವು ಎನ್ನುವ ಕುರಿತು ಅವರ ಕಲ್ಪನೆಗಳು ಸಾಮಾನ್ಯರಿಗೆ ನಿಲುಕಲಾರವು. ಭಟ್ಟರ ತರಗತಿಗಳಿಗೆ ವಿದ್ಯಾರ್ಥಿಗಳು ಚಕ್ಕರ್ ಹಾಕುತ್ತಿದ್ದುದು ಬಹಳ ಅಪರೂಪ; ಇಲ್ಲವೇ ಇಲ್ಲ ಎಂದರೂ ಅತಿಶಯೋಕ್ತಿಯಲ್ಲ.

ಇಲ್ಲಿ ಇನ್ನಿಬ್ಬರು ಅಧ್ಯಾಪಕರುಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವುದು ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ. ಒಬ್ಬರು ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ. ನಾರಾಯಣರಾವ್ ನಿಕ್ಕಂ, ಮುಂದೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾದವರು. ಮತ್ತೊಬ್ಬರು ನನ್ನ ಮನಶಾಸ್ತ್ರದ ಗುರುಗಳೂ, ಮಾರ್ಗದರ್ಶಕರೂ ಆಗಿದ್ದ ಪ್ರೊ. ಬಿ. ಕುಪ್ಪುಸ್ವಾಮಿಯವರು. ಅವರೂ ಸಹ ನಿವೃತ್ತಿಯ ನಂತರದಲ್ಲಿ ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರಿನ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿದವರು.

ನಿಕ್ಕಂ ನಮಗೆ ಮೆಟಫಿಸಿಕ್ಸ್ ಪಾಠ ಹೇಳುತ್ತಿದ್ದರು. ಅವರು ಒಂದು ಬಗೆಯ ಉದಾರವಾದಿಗಳು; ಅವರು ವಿಧ್ಯಾರ್ಥಿಗಳನ್ನು ಡ್ರಿಲ್ ಮಾಡಿಸುವುದೇ ಇಲ್ಲ ಎನ್ನುವ ಪ್ರತೀತಿ ಇತ್ತು. ಆಗಿನ ಕಾಲಕ್ಕೆ ಇನ್ನೂ ಸಮಾಜಶಾಸ್ತ್ರ ತತ್ವಶಾಸ್ತ್ರ ಇಲಾಖೆಯ ಭಾಗವೇ ಆಗಿದ್ದು, ನಿಕ್ಕಂ ಆ ಎರಡೂ ವಿಷಯಗಳಿಗೆ ಮುಖ್ಯಸ್ಥರಾಗಿದ್ದರು. ಹಾಗಾಗಿ ಆ ಇಲಾಖೆಯ ವಿದ್ಯಾರ್ಥಿಗಳಿಗೆ “ಗಾಂಧಿ ಪಾಸ್” ಸಿಗುತ್ತದೆ ಎಂದು ಇತರರು ತಮಾಷೆ ಮಾಡುವುದು ಸಾಮಾನ್ಯವಾಗಿತ್ತು.

ನಮಗೆ ಮೆಟಫಿಸಿಕ್ಸ್ ಕಲಿಸುತ್ತಿದ್ದ ಅವರು ಯಾವುದೇ ಪಠ್ಯ ಪುಸ್ತಕಗಳನ್ನಾಗಲಿ, ಪರಾಮರ್ಶನ ಗ್ರಂಥಗಳನ್ನಾಗಲಿ ಓದುವಂತೆ ಹೇಳಿದ್ದು ನೆನಪಿಲ್ಲ; “ನಾನು ಕ್ಲಾಸಿನಲ್ಲಿ ಹೇಳುವುದಷ್ಟನ್ನೇ ಅರ್ಥಮಾಡಿಕೊಂಡು ಬರೆದರೆ ಸಾಕು” ಎಂದು ಹೇಳಿದ ನೆನಪು. ಅವರ ವಿದ್ವತ್ತು ಆ ಮಟ್ಟದ್ದಾಗಿತ್ತು. ನಿಕ್ಕಂ ಅವರ ಮಗಳು ಶೈಲಜಾ, ಮುಂದೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ, ಮನಶ್ಯಾಸ್ತ್ರ ಆನರ್ಸಿನಲ್ಲಿ ನಮಗೆ ಸಹಪಾಠಿಯಾಗಿದ್ದರು. ಶೈಲಜಳ ಸಹಪಾಠಿಗಳು ಎನ್ನುವ ಕಾರಣಕ್ಕೆ ನಮಗೆ ಹೆಚ್ಚಿನ ಉದಾರತೆ ತೋರಿದ್ದಿರಲೂಬಹುದು.

ಮನಶ್ಯಾಸ್ತ್ರ ಪ್ರಾಧ್ಯಾಪಕ ಕುಪ್ಪುಸ್ವಾಮಿಯವರದು ಇನ್ನೊಂದು ರೀತಿ. ಅವರಲ್ಲಿ ತಮ್ಮ ವಿದ್ಯಾರ್ಥಿಗಳ ಬಗ್ಗೆ ಪ್ರೀತಿಗೇನೂ ಕೊರತೆ ಇರಲಿಲ್ಲ. ಆದರೆ ಘನ ಗಂಭೀರತೆ, ಶಿಸ್ತಿನ ವಿಚಾರದಲ್ಲಿ ಅತಿಯಾದ ಕಟ್ಟುನಿಟ್ಟು, ತನ್ನ ಶಿಷ್ಯರಿಂದ ಉತ್ತಮ ಸಾಧನೆಯ ನಿರೀಕ್ಷೆ ಇವು ಅವರ ವೈಶಿಷ್ಟ್ಯಗಳು. ನಾವು ಮಾಡುವ ಸಣ್ಣ ಪುಟ್ಟ ಸಾಧನೆಗಳನ್ನು ಪ್ರೋತ್ಸಾಹಿಸುತಿದ್ದರು, ಮೆಚ್ಚಿಕೊಳ್ಳುತ್ತಿದ್ದರು.

ಅವರ ಬಗ್ಗೆ ನಮಗೆ ಹೆಚ್ಚಿನ ಪ್ರೀತಿ ಮತ್ತು ಗೌರವಗಳು ಇದ್ದುವು. ಇದಕ್ಕೆ ಒಂದು ನಿದರ್ಶನ ಎಂದರೆ ಅವರು ಕಾಲೇಜಿನ ಮರದ ಮೆಟ್ಟಿಲುಗಳನ್ನು ಏರಿ ಬರುವಾವ, ಅವರ ಷೂಗಳ ಸದ್ದು ಅವರ ಬರುವಿಕೆಯ ಸುಳಿವನ್ನು ನೀಡುತ್ತಿತ್ತು. ಆ ಕ್ಷಣದಲ್ಲೇ ಕಾರಿಡಾರಿನಲ್ಲಿ ಅಡ್ಡಾಡುತ್ತಿದ್ದ ನಾವು ಪಕ್ಕದ ಕೊಠಡಿಗಳಿಗೆ ಸೇರಿ ಮಾಯವಾಗುತ್ತಿದ್ದೆವು.

ಕಾರಿಡಾರಿನಲ್ಲಿ ಅವರೊಬ್ಬರೇ ಗಂಭೀರವಾಗಿ ನಡೆದು ಹೋಗಿ ಅದರ ತುದಿಯಲ್ಲಿದ್ದ ಅವರ ಕೊಠಡಿ ಒಳಹೊಕ್ಕ ನಂತರದೆಲ್ಲೇ ನಾವು ಮತ್ತೆ ಪ್ರತ್ಯಕ್ಷವಾಗುತ್ತಿದ್ದದ್ದು. ನಮ್ಮ ಈ ನಡವಳಿಕೆಗೆ ಕಾರಣ ಕುಪ್ಪುಸ್ವಾಮಿಯವರ ಬಗೆಗೆ ನಮಗೆ ಭಯವಿತ್ತೆಂದಾಗಲಿ ಅಥವಾ ಅವರು ನಾವು ಕಾರಿಡಾರಿನಲ್ಲಿ ಕೂಡಿರುವುದನ್ನು ಆಕ್ಷೇಪಿಸುತ್ತಿದ್ದರೆಂದಾಗಲೀ ಅಲ್ಲ. ಅದು ನಾವು ಅವರಿಗೆ ತೋರುತ್ತಿದ್ದ ಗೌರವ ಅಷ್ಟೇ.

ಮಹಾರಾಜಾ ಕಾಲೇಜಿನ ಎರಡು ಸಾಮಾಜಿಕ ತಾಣಗಳ ವಿಚಾರವನ್ನು ಅವಶ್ಯಕವಾಗಿ ನಮೂದಿಸಲೇಬೇಕು. ಒಂದು ಕಾಲೇಜಿನ ‘ಲೇಡಿಸ್ ವೆಯ್ಟಿಂಗ್ ರೂಂ,’ ಮತ್ತೊಂದು ಕಾಲೇಜಿನ ಕ್ಯಾಂಟೀನ್. ಈ ಮೊದಲೇ ಹೇಳಿದಂತೆ ಮಹಾರಾಜಾ ಕಾಲೇಜಿನಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ. ಪದವಿ ತರಗತಿಗಳಲ್ಲಿ ಇರುತ್ತಲೇ ಇರಲಿಲ್ಲ.

ಹಾಗಾದರೂ ಹತ್ತಿರದ ಮಹಾರಾಣಿ ಕಾಲೇಜಿನಲ್ಲಿ ಯಾವುದಾದರೂ ವಿಷಯವನ್ನು ಓದಲಿಕ್ಕೆ ಅವಕಾಶ ಇಲ್ಲದಿದ್ದರೆ, ಆ ವಿಷಯ ಓದಲು ಇಚ್ಛಿಸುವ ವಿದ್ಯಾರ್ಥಿನಿಯರು ನಮ್ಮ ಕಾಲೇಜಿಗೆ ಸೇರಿಕೊಳ್ಳುತ್ತಿದ್ದರು. ಜೊತೆಗೆ ಆನರ್ಸ್ ಓದುವ ವಿದ್ಯಾರ್ಥಿನಿಯರಂತೂ ಇದ್ದೇ ಇರುತ್ತಿದ್ದರು. ಎಲ್ಲ ಕೂಡಿದರೂ ವಿದ್ಯಾರ್ಥಿನಿಯರ ಸಂಖ್ಯೆ ಅಂತಹ ದೊಡ್ಡದೇನೂ ಇರಲಿಲ್ಲ.

ಪದವಿ ತರಗತಿ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಹುಡುಗಿಯರ ಅಭಾವ ಕಾಲೇಜಿನ ಒಂದು ಕೊರತೆಯಾಗಿತ್ತು. ಹಾಗಾಗಿ ಲೇಡಿಸ್ ವೆಯ್ಟಿಂಗ್ ರೂಂ ಸಹಜವಾಗಿಯೇ ಒಂದು ಆಕರ್ಷಣೆಯ ಕೇಂದ್ರವಾಗಿತ್ತು. ಆ ಕೊಠಡಿ ಪಕ್ಕದ ಯೂನಿಯನ್ ಕಟ್ಟಡದಲ್ಲಿದ್ದು, ಎದುರಿನ ಮರಗಳ ನೆರಳಿನಲ್ಲಿ ಹುಡುಗ-ಹುಡುಗಿಯರ ಜೋಡಿಗಳ ಸಮಾಗಮ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತಿತ್ತು.

ಕೆಲವು ಕೇವಲ ಔಪಚಾರಿಕ, ವ್ಯಾವಹಾರಿಕ ಭೆಟ್ಟಿಗಳು–ನೋಟ್ಸ್ ಬದಲಾಯಿಸಿಕೊಳ್ಳುವುದು, ಪುಸ್ತಕಗಳನ್ನು ಎರವಲು ಪಡೆಯುವುದು, ಇನ್ಯಾವುದೋ ಸಂದೇಶವನ್ನು ರವಾನಿಸಿವುದು ಮುಂತಾದ ಸಾಮಾನ್ಯ ಸಂಗತಿಗಳಿಗೆ ಮೀಸಲಾದವು. ಪ್ರತಿನಿತ್ಯ ತಾಸುಗಟ್ಟಲೆ ನಿಂತು ಹರಟುತ್ತಾ ಒಂದು ಬಗೆಯ ತಲ್ಲೀನತೆಯನ್ನು ಮೆರೆಯುವ ನಿರ್ಧಿಷ್ಟ ಜೋಡಿಗಳು ಹೆಚ್ಚು ಸ್ವಾರಸ್ಯಕರವಾದವು. ಅಂತಹ ಹಲವು ಪ್ರಖ್ಯಾತ ಜೋಡಿಗಳು ನಮ್ಮ ಕಾಲಕ್ಕೆ ಇದ್ದು ಕಾಲೇಜಿನ ವಿದ್ಯಾರ್ಥಿಗಳ ಚರ್ಚೆಯ ಸಂಗತಿಗಳಾಗಿದ್ದವು.

ಕೆಲವು ಬಾಂಧವ್ಯಗಳು ಬಹಳಷ್ಟು ದಿನಗಳವರೆಗೆ ಮುಂದುವರಿದುಕೊಂಡು ಹೋಗುತ್ತಿದ್ದವು. ಇನ್ನು ಕೆಲವು ಕೆಲವೇ ದಿನಗಳಲ್ಲಿ ಕಳಚಿಕೊಂಡು ಮಾಯವಾಗುತ್ತಿದ್ದುವು. ಇಂಥಹ ಪ್ರಕರಣಗಳ ಮಾದರಿಯಾಗಿ ಒಂದು ಸ್ವಾರಸ್ಯಕರ ಪ್ರಸಂಗವನ್ನು ಇಲ್ಲಿ ಉದ್ಧರಿಸಬಹುದು. ಪ್ರಸ್ತುತದಲ್ಲಿ ನಾವು ಸಿನೆಮಾ ಅಥವಾ ಟಿ.ವಿ.ದಾರಾವಾಹಿಗಳಿಂದ ಪ್ರೇರಿತವಾದ ಪ್ರೇಮ ಪ್ರಕರಣಗಳ ಬಗೆಗೆ ಸಾಕಷ್ಟು ಕೇಳಿದ್ದೇವೆ. ಆದರೆ ನಾನು ಹೇಳುವ ಘಟನೆಗೆ ಪ್ರೇರಣೆಯಾದದ್ದು ನಮಗೆ ಪಠ್ಯವಾಗಿದ್ದ ಷೇಕ್ಸಪಿಯರ್ ಮಹಾಕವಿಯ ಹ್ಯಾಮ್ಲೇಟ್ ನಾಟಕ.

ನಮ್ಮ ಸ್ನೇಹಿತನೊಬ್ಬ ತನ್ನನ್ನು ಹ್ಯಾಮ್ಲೆಟ್ ಸ್ಥಾನದಲ್ಲಿ ಊಹಿಸಿಕೊಂಡು ನಮ್ಮ ಸಹಪಾಠಿ ವಿದ್ಯಾರ್ಥಿನಿಯೊಬ್ಬಳನ್ನು ಓಫಿಲಿಯಾ ಎಂದು ಕಲ್ಪಿಸಿಕೊಂಡು ಬಹಳ ದಿನಗಳವರೆಗೆ ತನ್ನದೇ ಭ್ರಮಾಲೋಕದಲ್ಲಿ ತೇಲುತ್ತಿದ್ದ. ವಾಸ್ತವದಲ್ಲಿ ಅದು ಏಕಮುಖಿ ಪ್ರೇಮವಾಗಿದ್ದು ಸದರಿ ಹುಡುಗಿ ಪ್ರತಿಯಾಗಿ ಇವನ ಪ್ರೇಮವನ್ನು ಯಾವತ್ತೂ ಒಪ್ಪಿಕೊಂಡಿರಲಿಲ್ಲ.

ಹಾಗಾದರೂ ನಮ್ಮ ಸ್ನೇಹಿತ ತನ್ನ ಭ್ರಮೆಯನ್ನೇ ವಾಸ್ತವವೆಂದು ನಂಬಿ, ಅವಳು ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ನಾಚಿಕೊಳ್ಳುತ್ತಿದ್ದಾಳೆ ಎಂದೋ ಅಥವಾ ಆಕೆಯ ಮನೆಯವರ ಒತ್ತಾಸೆಗೆ ಕಟ್ಟುಬಿದ್ದು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾಳೆ ಎಂದೋ ತನ್ನದೇ ತರ್ಕಕ್ಕೆ ಮೋಸಹೋಗಿದ್ದ.

ನಿಜ ಹೇಳಬೇಕೆಂದೆರೆ ಅವನು ಮಾನಸಿಕ ಅಸ್ವಸ್ತತೆಯ ಎಲ್ಲ ಲಕ್ಷಣಗಳನ್ನು ಹೊಂದಿದ್ದು, ತನ್ನ ಪ್ರಿಯತಮೆಯ ಪ್ರೇಮ ನಿರಾಕರಣೆಯ ಕಾರಣ ಆಕೆಯೊಂದಿಗೆ ಕ್ರೋಧಾವೇಶದಿಂದ ನಡೆದುಕೊಳ್ಳಲು ಆರಂಭಿಸಿದ್ದ. ಇದು ಅತಿರೇಕಕ್ಕೆ ಹೋದ ಒಂದು ಸಂದರ್ಭದಲ್ಲಿ ಅವನು ನೇರವಾಗಿ ವೆಯ್ಟಿಂಗ್ ರೂಂ ಮುಂದೆ ಹೋಗಿ ಅವಳನ್ನು ಹೊರಕ್ಕೆ ಕರೆದು, ತಾನು ಕಂಠಪಾಠ ಮಾಡಿದ್ದ ಹ್ಯಾಮ್ಲೆಟ್ ನಾಟಕದ “ಗೋ ಟು ನನ್ನೆರಿ” ದೃಶ್ಯದಲ್ಲಿ ಒಫಿಲಾಳಿಗೆ ಹ್ಯಾಮ್ಲೆಟ್ ನುಡಿಯುವ ಭರ್ತ್ಸನೆಯ ಸಾಲುಗಳನ್ನು ಕಿರುಚಿದ:

Get thee to a nunnerygoFarewell. Or, if thou wilt needs marrymarry a fool, for wise men know well enough what monsters you make of them. o a nunnerygo, and quickly tooFarewell. (Hamlet, Act 3. Scene 1)

ಸುಮಾರು ಎರಡು ವರ್ಷಗಳಕಾಲ ಅವಿರತವಾಗಿ ಸಾಗಿಬಂದ ನಮ್ಮ ಸ್ನೇಹಿತನ ಸ್ವಕಲ್ಪಿತ ಪ್ರೇಮ ಪ್ರಸಂಗ ಈ ಬಗೆಯಲ್ಲಿ ಪರ್ಯಾವಸಾನಗೊಂಡದ್ದು ನಮಗೆ ಒಂದು ಬಗೆಯ ನಿರಾಶೆಯನ್ನು ತಂದಿತ್ತು. ಇದಕ್ಕೂ ಮಿಗಿಲಾದ ದುರಂತ ಎಂದರೆ ಆತ ತನ್ನ ಮುಂದಿನ ಬದುಕಿನಲ್ಲಿ ಈ ಆಘಾತದಿಂದ ಹೊರಬಾರದೆ ಹೋದದ್ದು ಮತ್ತು ಕೆಲ ಮಟ್ಟದ ಮಾನಸಿಕ ಅಸ್ಥತ್ವತೆಯನ್ನು ಅನುಭವಿಸುತ್ತಲೇ ತೀರಿಕೊಂಡದ್ದು.

ನನ್ನ ನೆನಪಿನಲ್ಲಿ ಸದಾ ಹಸಿರಾಗಿರುವ ನಮ್ಮ ಕಾಲೇಜಿನ ಇನ್ನೊಂದು ಸಾಮಾಜಿಕ ಕೇಂದ್ರ ಅಲ್ಲಿನ ಕ್ಯಾಂಟೀನ್. ನಾಲ್ಕು ದಿಕ್ಕುಗಳಿಗೂ ತೆರೆದಿದ್ದು, ಬಳ್ಳಿಗಳಿಂದ ಆವೃತವಾಗಿದ್ದ ವಿಶಾಲ ವಾತಾವರಣ. ಇದು ಕೇವಲ ಉಪಹಾರ ಗೃಹ ಮಾತ್ರವೇ ಆಗಿರಲಿಲ್ಲ. ವಿದ್ಯಾರ್ಥಿಗಳ ಹರಟೆಯ ಕಟ್ಟೆ, ಸಂತೋಷ ಕೂಟಗಳನ್ನು ಏರ್ಪಡಿಸುವ ಸ್ಥಳ, ಗುರು-ಶಿಷ್ಯರ ನಡುವಣ ಚರ್ಚೆ, ವಿಚಾರ ವಿನಿಮಯ ಮೊದಲಾದ ವಿವಿಧ ಬಗೆಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭೌದ್ಧಿಕ ಚಟುವಟಿಕೆಗಳ ನೆಚ್ಚಿನ ತಾಣವಾಗಿತ್ತು.

ನನ್ನ ನೆನಪು ಸರಿಯಾಗಿದ್ದರೆ, ಸಿಡಿಎನ್ ಪ್ರಿನ್ಸಿಪಾಲರಾಗಿದ್ದಾಗ ‘ಟ್ಯುಟೋರಿಯಲ್ ಸಿಸ್ಟಮ್’ ಎನ್ನುವ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದ್ದರು. ಹತ್ತು ಜನ ವಿದ್ಯಾರ್ಥಿಗಳನ್ನು ಒಬ್ಬ ಅಧ್ಯಾಪಕರಿಗೆ ವಹಿಸಿ, ಆ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಟ್ಯೂಟರ್ ಜೊತೆಯಲ್ಲಿ ಚರ್ಚಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಸಹಾಯ ಮಾಡುವುದು ಆ ವ್ಯವಸ್ಥೆಯ ಉದ್ದೇಶವಾಗಿದ್ದಿತು. ಮಿಗಿಲಾಗಿ, ಈ ವ್ಯವಸ್ಥೆಯ ಅಡಿಯಲ್ಲಿ ಕ್ಯಾಂಟೀನ್‍ನಲ್ಲಿ ಬಳಸಬಹುದಾದ ಪುಕ್ಕಟೆ ಉಪಹಾರದ ಚೀಟಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು.

ಈ ಟ್ಯುಟೋರಿಯಲ್ ಗುಂಪುಗಳು ಕ್ಯಾಂಟೀನ್‍ನಲ್ಲಿ ಆಗಾಗ ಭೆಟ್ಟಿಯಾಗುತ್ತಿದ್ದವು. ‘ಕ್ಯಾಂಟೀನ್‍ನಲ್ಲಿ ಮೀಟ್ ಮಾಡೋಣ’ ಎಂದು ಒಪ್ಪಂದ ಮಾಡಿಕೊಂಡ ಸ್ನೇಹಿತರ ಗುಂಪುಗಳು, ಹುಡುಗ-ಹುಡುಗಿಯರ ಜೋಡಿಗಳು ಹೀಗೆ ವಿವಿಧ ಉದ್ದೇಶಿತ ಗುಂಪುಗಳಿಂದ ಕೂಡಿ ಕಾಲೇಜು ಕ್ಯಾಂಟೀನ್ ಸದಾ ಜನಜಂಗುಳಿಗಳಿಂದ ತುಂಬಿಕೊಂಡಿರುತ್ತಿತ್ತು. ಕಾಲೇಜಿಗಿಂತ ಕ್ಯಾಂಟೀನ್ ಹೆಚ್ಚು ಪ್ರಿಯವಾದ ಜಾಗವಾಗಿತ್ತು ಎಂದರೆ ಅದೊಂದು ಅತಿಶಯೋಕ್ತಿ ಎಂದು ಭಾವಿಸುವ ಅಗತ್ಯವಿಲ್ಲ.

ಮಹಾರಾಜಾ ಕಾಲೇಜಿನ ವಿದ್ಯಾರ್ಥಿನಿಲಯದ ಬಗ್ಗೆ ಕೆಲವು ಮಾತುಗಳನ್ನು ಬರೆಯದಿದ್ದರೆ ಈ ನನ್ನ ನಾಸ್ಟ್ಯಾಲ್ಜಿಯ ಅಪೂರ್ಣವಾಗುತ್ತದೆ. ವಿದ್ಯಾರ್ಥಿನಿಲಯದ ವೈವಿಧ್ಯಮಯ ಬದುಕು ಸಹ ಕಾಲೇಜು ಅನುಭವಗಳಷ್ಟೇ ಅವಿಸ್ಮರಣೀಯ. ಅಲ್ಲಿನ ಶ್ರೀಮಂತ ಊಟ ತಿಂಡಿ, ಭಾನುವಾರದ ‘ಸಂಡೆ ಸ್ಪೆಷಲ್’ಗಳು, ತಿಂಗಳ ಕೊನೆಯ ‘ಮೇಜರ್ ಫೀಸ್ಟ್’ ಇವುಗಳನ್ನು ನೆನೆಸಿಕೊಂಡಾಗಲೆಲ್ಲಾ ನನ್ನ ತಂದೆ ಅವರ ಆರ್ಥಿಕ ಸಂಕಷ್ಟಗಳ ನಡುವೆಯೂ ನನಗೆ ಈ ಬಗೆಯ ಐಶಾರಾಮಿ ಬದುಕನ್ನು ಒದಗಿಸಿ ಕೊಟ್ಟದ್ದು ನನ್ನ ಪಾಲಿನ ಅದೃಷ್ಟ ಎನ್ನುವ ಧನ್ಯತೆಯ ಭಾವನೆ ನನ್ನನ್ನು ಕಾಡುತ್ತದೆ.

ಊಟ ತಿಂಡಿಗಳಿಗೆ ನಾವು ಪಾವತಿಸುತ್ತಿದ್ದ ‘ಮೆಸ್ ಬಿಲ್’ ತಿಂಗಳಿಗೆ ಸುಮಾರು 35-36 ರೂಪಾಯಿಗಳು. ಆ ಕಾಲಕ್ಕೆ ಅದು ದೊಡ್ಡ ಮೊತ್ತದ ಹಣವೇ! ಅಪ್ಪಿತಪ್ಪಿ ಯಾವುದಾದರೂ ತಿಂಗಳು ಆ ಬಿಲ್ ಮೊತ್ತ ಒಂದೆರಡು ರೂಪಾಯಿಗಳಷ್ಟು ಜಾಸ್ತಿಯಾದರೆ, ಆ ತಿಂಗಳ ‘ಪ್ರೀಫೆಕ್ಟ್’ ದುಡ್ಡು ತಿಂದಿದ್ದಾನೆ ಎಂದು ಅಪಾದಿಸಿ, ಗಲಾಟೆ ನಡೆಯುತ್ತಿತ್ತು. ಆ ಕಾಲದಲ್ಲೂ ದುಡ್ಡು ತಿನ್ನುವ ಮಾತು ಕೇಳಿ ಬರುತ್ತಿತ್ತು ಎಂದರೆ ಭ್ರಷ್ಟತೆ ಒಂದು ಮಾನವ ಸಹಜ ಲಕ್ಷಣವೇನೋ!

ವಿದ್ಯಾರ್ಥಿ ನಿಲಯದ ಇನ್ನೊಂದು ಪ್ರಮುಖ ಅಂಶ ಅಲ್ಲಿನ ವಾರ್ಷಿಕ ಚುನಾವಣೆಗಳು, ಈ ಚುನಾವಣೆಗಳು ಪ್ರಮುಖವಾಗಿ ‘ಮಂಡ್ಯ’ ಮತ್ತು ‘ದಾವಣಗೆರೆ’ ಗುಂಪುಗಳ ನಡುವೆ ನಡೆಯುತ್ತಿದ್ದುವು; ಆ ಕಾಲದಲ್ಲೂ ಈ ಚುನಾವಣೆಗಳು ಜಾತಿಯ ಆಧಾರದ ಮೇಲೆಯೇ ನಡೆಯುತ್ತಿದ್ದವು ಎನ್ನುವುದು ಮಾತ್ರ ಸತ್ಯ. ನಾನು ಎಸ್. ಎಸ್. ಎಲ್. ಸಿ. ಮುಗಿಸಿ ಮೈಸೂರಿಗೆ ಬರುವವರೆಗೂ ನನಗೆ ಈ ಜಾತಿಗಳ ಬಗ್ಗೆ ಅರಿವೇ ಇರಲಿಲ್ಲ. ಮೈಸೂರಿಗೆ ಬಂದು ಕಾಲೇಜು ವಿದ್ಯಾರ್ಥಿಯಾದ ನಂತರದಲ್ಲೇ ಈ ಜಾತಿಯ ಪ್ರಜ್ಞೆ ನನ್ನನ್ನು ಕಾಡ ತೊಡಗಿದ್ದು. 

ಜನ ಹೆಚ್ಚು ಹೆಚ್ಚು ವಿದ್ಯಾವಂತರಾದಂತೆಲ್ಲ ಅವರಲ್ಲಿ ಜಾತಿಯ ಭಾವನೆಗಳು ಹೆಚ್ಚು ಹೆಚ್ಚು ಜಾಗೃತವಾಗುತ್ತವೆ ಎನ್ನುವುದು ನನ್ನ ಅನುಭವಕ್ಕೆ ಬಂದ ಇನ್ನೊಂದು ಸತ್ಯ. ನನ್ನ ಕಾಲದಲ್ಲಿ ವಿದ್ಯಾರ್ಥಿನಿಲಯದ ವಾರ್ಡನ್ ಆಗಿದ್ದವರು ಕೂಡಾ ಪ್ರಮುಖರೇ: ಇಂಗಿಷ್ ಇಲಾಖೆಯ ಓ ಕೆ ನಂಬಿಯಾರ್, ತತ್ವಶಾಸ್ತ್ರದ ಎಂ. ಯಾಮುನಾಚಾರ್ಯ, ಕನ್ನಡ ಇಲಾಖೆಯ ಉ. ಕ.ಸುಬ್ಬರಾಯಾಚಾರ್ಯ, ನನ್ನ ಗುರುಗಳೇ ಆಗಿದ್ದ ಮನಶ್ಯಾಸ್ತ್ರದ ಬಿ. ಕೃಷ್ಣನ್ ಇವರುಗಳು ಆಗಿನ ವಾರ್ಡನ್‍ಗಳಾಗಿದ್ದರು.

ಇವರಲ್ಲಿ ಉಕಾಸು ತುಂಬಾ ವಿಶಿಷ್ಟವಾದವರು. ಅವರು ಕುವೆಂಪು ಅವರ ಆತ್ಮೀಯ ಶಿಷ್ಯರು, ರಾಮಕೃಷ್ಣರ ಪರಮ ಭಕ್ತರು. ಅವರದ್ದು ಒಂದು ಬಗೆಯ ನಿಷ್ಕಾಮಕರ್ಮ. ಉಕಾಸು ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಹಾಸ್ಟೆಲಿನ ಒಂದು ಸುತ್ತು ಹಾಕುತ್ತಿದ್ದರು. ಕೆಲವು ವಿದ್ಯಾರ್ಥಿಗಳನ್ನು ಆ ಹೊತ್ತಿಗೆ ಎಬ್ಬಿಸಿ ಅವರನ್ನು ಓದಿಗೆ ಹಚ್ಚುತ್ತಿದ್ದರು. ಅಂಥಹ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಾನೂ ಸೇರಿದ್ದು, ಅದರಿಂದ ನಾನು ಉಪಕೃತನಾಗಿದ್ದೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಕುಂದು ಕೊರತೆಗಳತ್ತ ಅವರು ವೈಯಕ್ತಿಕ ಗಮನ ಹರಿಸುತ್ತಿದ್ದರು, ಹಲವು ವಿಚಾರಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಕೆಲವರಾದರೂ ಅವರ ಮಾತುಗಳಿಗೆ ಪ್ರತಿಸ್ಪಂದಿಸುತ್ತಿದ್ದರು ಎನ್ನುವುದು ನನ್ನ ಅನ್ನಿಸಿಕೆ. ಸುಬ್ಬರಾಯಾಚಾರ್ಯಾರು ವಾರ್ಡನ್ ಆಗಿದ್ದಷ್ಟು ಕಾಲ ಬೆಳಗಿನ ಹೊತ್ತಿನಲ್ಲಿ ಭಗವದ್ಗೀತೆಯ ಪಠಣ ಮತ್ತು ವ್ಯಾಖ್ಯಾನ ಸಭೆಯೊಂದನ್ನು ನಡೆಸುತ್ತಿದ್ದರು.

ಅಲ್ಲಿ ಬರುತ್ತಿದ್ದವರ ಸಂಖ್ಯೆ ಅಷ್ಟೇನೂ ದೊಡ್ಡದಿರಲಿಲ್ಲ—ಒಂದು ಆರೆಂಟು ಜನ ಮಾತ್ರ; ಅವರಲ್ಲಿ ನಾನೂ ಒಬ್ಬನಾಗಿದ್ದೆ. ಅಂದು ನನಗೆ ಭಗವದ್ಗೀತೆ ಆಸಕ್ತಿಯ ವಿಷಯವೂ ಆಗಿರಲಿಲ್ಲ; ಅರ್ಥವೂ ಆಗುತ್ತಿರಲಿಲ್ಲ. ಓದಿನಿಂದ ಬಿಡುಗಡೆ ಪಡೆಯುವ ಒಂದು ಹವ್ಯಾಸ ಮಾತ್ರವೇ ಆಗಿತ್ತು. ಕೊನೆಯಲ್ಲಿ ಉಕಾಸು ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲರಿಗೂ ಒಂದು ಬಾಳೆಹಣ್ಣು ಹಂಚುತ್ತಿದ್ದರು.

ಇದೂ ಒಂದು ಸಣ್ಣ ಪ್ರೇರಣೆ ಇದ್ದಿದ್ದಿರಬಹುದು! ಆದರೆ ನನ್ನ ಬದುಕಿನ ಈ ಶರತ್ಕಾಲದಲ್ಲಿ ಭಗವದ್ಗೀತೆಯನ್ನು ಸ್ವಲ್ಪ ಮಟ್ಟಿನ ಅಧ್ಯಯನ ಮಾಡುತ್ತಿದ್ದೇನೆ—ಯಾವುದೇ ಭಕ್ತಿಭಾವನೆಯಿಂದಲ್ಲ, ಗೀತೆಯ ಸಂದೇಶದ ಅರ್ಥವನ್ನು ಹುಡುಕುವ ಕಾರಣಕ್ಕಾಗಿ. ಇದು ನಾನು ಸುಬ್ಬರಾಯಾಚಾರ್ಯರಿಗೆ ಸಲ್ಲಿಸುವ ಗೌರವ ಕೂಡಾ.

ಹಾಸ್ಟೆಲಿನ ಕೆಲವರಾದರೂ ಸ್ನೇಹಿತರು, ಒಡನಾಡಿಗಳನ್ನು ಇಲ್ಲಿ ಸ್ಮರಿಸಿಕೊಳ್ಳುವುದು ನನ್ನ ಕರ್ತವ್ಯ. ನಮ್ಮ ತಾಲೂಕಿನವರೇ ಆಗಿದ್ದು ನನಗಿಂತ ಹಿರಿಯರಾದ ಕೆ. ಎಂ. ಶ್ರೀನಿವಾಸ್, ಮುಂದೆ ಶಿವಮೊಗ್ಗ ಜಿಲ್ಲೆಯ ಕಮ್ಯೂನಿಸ್ಟ್ ಪಕ್ಷದ ನೇತಾರರಾಗಿ ಹೆಸರು ಮಾಡಿದವರು, ನನಗೆ ಆತ್ಮೀಯರಾಗಿದ್ದರು. ಅವರ ಪ್ರಭಾವದಿಂದ ನನ್ನ ಕಾಲೆಜು ದಿನಗಳಲ್ಲಿ ಕಮ್ಯೂನಿಸಂ ಬಗ್ಗೆ ಸ್ವಲ್ಪ ಮಟ್ಟಿನ ಆಸಕ್ತಿ, ಒಲವುಗಳನ್ನು ಬೆಳೆಸಿಕೊಂಡಿದ್ದು, ಇವತ್ತಿಗೂ ಅದು ಎಲ್ಲೋ ನನ್ನ ಅಂತರಾಳದಲ್ಲಿ ಸುಪ್ತವಾಗಿ ಕೆಲಸ ಮಾಡುತ್ತಲೇ ಇದೆ.

ಮುಂದೆ ಕರ್ನಾಟಕದ ರಾಜಕೀಯದಲ್ಲಿ ಹೆಸರು ಮಾಡಿ ಸಚಿವರೂ ಆಗಿದ್ದ ಹೆಚ್. ಎನ್. ನಂಜೇಗೌಡರು ನನ್ನ ಪಕ್ಕದ ಕೊಠಡಿಯಲ್ಲಿ ಇರುತ್ತಿದ್ದರು. ಅವರ ಕೊಠಡಿ ಅವರ ಸ್ನೇಹಿತರಿಂದ ತುಂಬಿಕೊಂಡು ಯಾವತ್ತೂ ಗಲಾಟೆ ಗೌಜುಗಳಿಂದ ಕೂಡಿರುತ್ತಿತ್ತು ಮತ್ತು ಅದರಿಂದ ನನ್ನ ಅಭ್ಯಾಸಕ್ಕೆ ತೊಂದರೆಯೂ ಆಗುತ್ತಿತ್ತು. ಹಾಗಾದರೂ ಗೌಡರು ಒಬ್ಬ ಸಜ್ಜನ ವ್ಯಕ್ತಿ; ಅವರದ್ದೆಲ್ಲ ಸಭೆ ಮುಗಿದು ಹೊರಗೆ ಹೊರಡುವ ಮುನ್ನ ನನ್ನ ಕೊಠಡಿಯೊಳಕ್ಕೆ ಹಣಕುಹಾಕಿ, “ಸಾರಿ ಈಶ್ವರ್, ನೀವೆಲ್ಲಾ ಆನರ್ಸ್ ವಿದ್ಯಾರ್ಥಿಗಳು; ನಮ್ಮಿಂದ ನಿಮಗೆ ತೊಂದರೆಯಾಗುತ್ತಿದೆ” ಎಂದು ಉಪಚಾರದ ಮಾತನ್ನು ಹೇಳಿ ಹೋಗುತ್ತಿದ್ದರು.

ಅವರ ಸ್ನೇಹ ನಂತರದ ದಿನಗಳಲ್ಲೂ ಮುಂದುವರಿದುಕೊಂಡು ಹೋಗಿ, ಯಾವಾಗಲಾದರೊಮ್ಮೆ ಭೆಟ್ಟಿಯಾದಾಗ ಆತ್ಮೀಯವಾಗಿ ನಡೆಸಿಕೊಳ್ಳುತ್ತಿದ್ದರು. ತೇಜಸ್ವಿ ಹಾಸ್ಟೆಲಿನಲ್ಲಿ ಇರಲಿಲ್ಲ, ಆದರೂ ಅವರು ತಮ್ಮ ಹೆಚ್ಚಿನ ಸಮಯವನ್ನು ಅವರ ಸ್ನೇಹಿತರಾಗಿದ್ದ ಕಡಿದಾಳು ಶ್ಯಾಮಣ್ಣ ಜೊತೆಯಲ್ಲಿ ಹಾಸ್ಟೆಲಿನಲ್ಲಿ ಕಳೆಯುತ್ತಿದ್ದರು.

ಆಗಾಗ ನಮ್ಮ ರೂಂಗೆ  ದಾಳಿ ಮಾಡಿ, “ಅದು ಏನ್ರೀ, ಯಾವಾಗಲೂ ಓದು ಓದು ಅಂತ ಸಾಯ್ತೀರ? ಬನ್ನಿ ಹೋಗೋಣ” ಎಂದು ಎಲ್ಲಾದರೂ ಎಳೆದುಕೊಂಡು ಹೋಗುತ್ತಿದ್ದರು. ತೇಜಸ್ವಿ, ಶ್ಯಾಮಣ್ಣ, ಕೋಣಂದೂರು ಲಿಂಗಪ್ಪ, ಕೆ. ಎಚ್. ಶ್ರೀನಿವಾಸ ಮೊದಲಾದವರು ಅಂದಿನ ದಿನಗಳ ಒಡನಾಡಿಗಳು.

ಇನ್ನು ಹಾಸ್ಟೆಲಿನ ಜೀವನಕ್ಕೆ ಸಂಬಂಧಿಸಿದಂತೆ ಎರಡು ವಿಚಾರಗಳನ್ನು ದಾಖಲಿಸಲೇಬೇಕು. ತಮ್ಮ ಆನರ್ಸ್ ಪದವಿಯ ನಂತರ ಯು. ಆರ್. ಅನಂತಮೂರ್ತಿಯವರು ಕೆಲವು ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿ ತಮ್ಮ ಎಂ. ಎ. ಪದವಿಗೆ ಓದಲಿಕ್ಕೆ ಮೈಸೂರಿಗೆ ವಾಪಾಸು ಬಂದಿದ್ದರು. ಅವರು ಮತ್ತು ನ. ರತ್ನ ಒಟ್ಟಾಗಿ ಹಾಸ್ಟೆಲಿನ ಕೊಠಡಿಯಲ್ಲಿ ಇದ್ದರು. ಆ ಸಂದರ್ಭದಲ್ಲಿ ನನಗೆ ಈ ಇಬ್ಬರು ಹಿರಿಯರ ಜೊತೆ ಬಹಳಷ್ಟು ಸಮಯ ಕಳೆಯುವುದು ಸಾಧ್ಯವಾಯಿತು.

ಅನಂತಮೂರ್ತಿಯವರು ಸದಾ ನನ್ನ ಬಗ್ಗೆ ಪ್ರೀತಿಯನ್ನು ಹೊಂದಿದ್ದು, ನಂತರದ ದಿನಗಳಲ್ಲೂ ನನ್ನನ್ನು ವಿಶ್ವಾಸದಿಂದ ಕಂಡು, ಸದಾ ನನ್ನ ಹಿತೈಸಿಗಳಾಗಿದ್ದರು. ಯಾವತ್ತೂ ನನ್ನ ಶ್ರೇಯಸ್ಸನ್ನು ಬಯಸುತ್ತಿದ್ದ ಅವರು, ನಮ್ಮಿಬ್ಬರ ಭೆಟ್ಟಿಯಾದಗಲೆಲ್ಲ,  “ಈಶ್ವರ, ನೀನು ಬುದ್ಧಿವಂತ ಇದ್ದೀ ಕಣೋ. ಯಾಕೋ ಏನೂ ಬರವಣಿಗೆ ಮಾಡೋಲ್ಲ?” ಎಂದು ಅಪಾದಿಸುತ್ತಿದ್ದರು.

ಅದು ಅನಂತಮೂರ್ತಿಯವರು ತಮ್ಮ ವಿಶ್ವಾಸವನ್ನು ವ್ಯಕ್ತ ಪಡಿಸುತ್ತಿದ್ದ ರೀತಿ; ನನ್ನ ಬಗೆಗಿನ ಅವರ ಆಸ್ಥೆಯ ದ್ಯೋತಕ. ವಿದ್ಯಾರ್ಥಿನಿಲಯದ ನನ್ನ ಜೀವನದ ಮಹತ್ತರ ಅಂಶವೊಂದನ್ನು ಕೊನೆಗೆ ಉಳಿಸಿಕೊಂಡಿದ್ದೇನೆ. ಅದೆಂದರೆ ನನ್ನ ಅಣ್ಣ ಹಾ ಮಾ ನಾಯಕರ ಒಡನಾಟದಲ್ಲಿ ಒಂದು ವರ್ಷ ಕಾಲ ಹಾಸ್ಟೆಲಿನಲ್ಲಿ ಒಂದೇ ಕೊಠಡಿಯಲ್ಲಿ ಜೊತೆಯಾಗಿ ಬದುಕಿದ್ದು.

ನಾನು ಜೂನಿಯರ್ ಇಂಟರ್ ಓದಲು ಬಂದಾಗ ಅವರು ಅಂತಿಮ ವರ್ಷದ ಆನರ್ಸ್ ಓದುತ್ತಿದ್ದರು. ನಾವಿಬ್ಬರೂ ಒಟ್ಟಾಗಿ ಕಳೆದ ಆ ದಿನಗಳಲ್ಲಿ ನನಗೆ ಅವರು ನೀಡಿದ ಮಾರ್ಗದರ್ಶನ ಮತ್ತು ಮಾದರಿ ನನ್ನ ಮೇಲೆ ಅಗಾಧವಾದ ಪ್ರಭಾವ ಮಾಡಿತು ಎನ್ನುವುದು ನನ್ನ ಸೌಭಾಗ್ಯ. ಅವರ ಕೆಲವು ಗುಣಗಳು ಮತ್ತು ಮೌಲ್ಯಗಳನ್ನು ನಾನು ರೂಢಿಸಿಕೊಂಡೆ. ಅವರ ಮೂಲಕ ಹಲವಾರು ಸಾಹಿತಿಗಳ ಪರಿಚಯ ನನ್ನ ಆ ಎಳೆಯ ವಯಸ್ಸಿಗೆ ಸಾಧ್ಯವಾಯಿತು; ಅವರ ಅನೇಕ ಸ್ನೇಹಿತರು ನನಗೂ ಸ್ನೇಹಿತರಾದರು. ಈ ಸಂಪರ್ಕಗಳು ನನಗೆ ಅನಾಯಸವಾಗಿ ಒದಗಿಬಂದ ಸುಯೋಗ.

ಕೊನೆಯ ಮಾತು: ನಾನು 1960ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಎಂ. ಎ. ಮುಗಿಸಿದೆ. ನಾನು ಆ ಕಾಲೇಜಿನ ಸ್ನಾತಕೋತ್ತರ ತರಗತಿಗಳ ಕೊನೆಯ ಬ್ಯಾಚ್ ವಿದ್ಯಾರ್ಥಿ. ಅದೇ ವರ್ಷ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಸ್ನಾತಕೋತ್ತರ ಕೇಂದ್ರ ಆರಂಭವಾಗಿ, ಮಹಾರಾಜಾ ಕಾಲೇಜಿನ ಎಂ ಎ ತರಗತಿಗಳು ಅಲ್ಲಿಗೆ ವರ್ಗಾಯಿಸಲ್ಪಟ್ಟವು.

ನಾನು ಗಂಗೋತ್ರಿಯ ಮೊದಲ ತಂಡದ ಸಂಶೋಧನಾ ವಿದ್ಯಾರ್ಥಿ ಕೂಡಾ ಹೌದು. ನಂತರದ ಕೆಲವು ವರ್ಷಗಳು ಮಹಾರಾಜಾ ಕಾಲೇಜು ಪ್ರತಿಷ್ಠಿತ ಪದವಿ ಕಾಲೇಜಾಗಿ ತನ್ನ ಅನನ್ಯತೆಯನ್ನು ಕಾಪಾಡಿಕೊಂಡಿತು ಎನ್ನುವುದು ನನ್ನ ನಂಬಿಕೆ. ಆದರೆ ಕಾಲ ಸರಿದಂತೆ ಅದು ತನ್ನ ಮಹತ್ವ ಕಳೆದುಕೊಂಡಿತೇನೋ ಎನ್ನುವ ಕೊರಗು ಸಹಜವಾಗಿಯೇ ಕಾಡುತ್ತದೆ. ಸರಿ ಸುಮಾರು ಮುಕ್ಕಾಲು ಶತಮಾನ ನಾಡಿನ ಪ್ರತಿಷ್ಠ ಶಿಕ್ಷಣ ಸಂಸ್ಥೆಯಾಗಿ ಮೆರೆದ ಮಹಾರಾಜಾ ಕಾಲೇಜಿನ ಶೋಭಾಯಮಾನ ದಿನಗಳು ಇತಿಹಾಸದ ಪುಟಗಳನ್ನು ಸೇರಿಕೊಂಡದ್ದು ಆ ಸಂಸ್ಥೆಯೊಂದಿಗೆ ಅತೀವ ಪ್ರೀತಿ ಬೆಳೆಸಿಕೊಂಡಿದ್ದ ನನ್ನಂಥವರಿಗೆ ವಿಷಾದದ ಸಂಗತಿ.        

‍ಲೇಖಕರು Avadhi

November 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This