ಮಾತಾಡು ಇಂಡಿಯಾ, ಮಾತಾಡು!

ಜಿ ಎನ್ ಮೋಹನ್

ಕೃಪೆ : ವಿಜಯ ಕರ್ನಾಟಕ

‘ಈ ದೇಶದ ಪ್ರತಿಯೊಬ್ಬ ಬಡವನಿಗೂ ಒಂದು ಮೊಬೈಲ್’ ಎಂದು ಸರ್ಕಾರ ನಿರ್ಧರಿಸಿದಾಗ ದೇಶಕ್ಕೆ ದೇಶವೇ ಹುಬ್ಬೇರಿಸಿತು. ಬಡವರ ಹೊಟ್ಟೆಗೆ ಅನ್ನ ನೀಡದ, ದುಡಿಯುವ ಕೈಗೆ ಕೆಲಸ ನೀಡದ , ಸರಿಯಾಗಿ ಕೂಲಿ ನೀಡದ ಸರ್ಕಾರ ಮೊಬೈಲ್ ನೀಡಲು ಹೊರಟಿದೆ ಎಂದು ಆಡಿಕೊಂಡು ನಕ್ಕರು, ಸರ್ಕಾರವನ್ನು ಟೀಕಿಸಿದರು, ಮೊಬೈಲ್ ಕೊಟ್ಟೀರಿ ಜೋಕೆ ಎಂದು ಎಚ್ಚರಿಸಿದರು. ಆದರೆ ಆ ಒಂದು ರಾಜ್ಯವಿತ್ತು- ಛತ್ತೀಸ್ ಗಢ. ಅಲ್ಲಿ ಯಾರೊಬ್ಬರೂ ನಗಲಿಲ್ಲ, ಹುಬ್ಬೇರಿಸಲಿಲ್ಲ. ಟೀಕಿಸಲಿಲ್ಲ, ಬದಲಿಗೆ ‘ಮೊಬೈಲ್ ಕೊಡಿ, ಬೇಗ ಕೊಡಿ’ ಎಂದು ಆಗ್ರಹಿಸಿದರು. ಅವರಿಗೆ ಮೊಬೈಲ್ ಎನ್ನುವುದು ಕೇವಲ ಮೊಬೈಲ್ ಆಗಿರಲಿಲ್ಲ, ಅದು ಅವರ ದುಡಿಯುವ ಕೈಗಳಿಗೆ ಕೆಲಸ ಕೊಡಿಸುವ, ಹಸಿದ ಹೊಟ್ಟೆಗೆ ಅನ್ನ ನೀಡುವ, ಸರಿಯಾಗಿ ಕೂಲಿ ಸಿಗುವಂತೆ ಮಾಡುವ ಅಷ್ಟೇ ಅಲ್ಲ, ಅತ್ಯಾಚಾರ, ಬಂದೂಕು ದಾಳಿ ತಡೆಯುವ, ಕೆರೆ ಭಾವಿ ತೋಡಿಸುವ, ಗಣಿ ಧಣಿಗಳ ಹುಟ್ಟಡಗಿಸುವ, ಶಾಲೆಗೆ ಆಹಾರ ತಂದಿಳಿಸುವ, ನೋವಿನ ಗೆರೆಗಳನ್ನೇ ಹೊತ್ತವರ ಮುಖದಲ್ಲಿ ಆಗೀಗಲಾದರೂ ಒಂದಿಷ್ಟು ಸಂತಸ ಕಾಣಿಸುವಂತೆ ಮಾಡುವ ಸಾಧನವಾಗಿತ್ತು. ಅದು ಕೇವಲ ಮೊಬೈಲ್ ಆಗಿರಲಿಲ್ಲ, ನಿಜಕ್ಕೂ ಬೇಕಾದದ್ದನ್ನು ಎದುರು ತಂದಿಳಿಸುವ ಮಾಯಾ ಪಾತ್ರೆಯೇ ಆಗಿತ್ತು. ಅದು ಕೇವಲ ಹರಟೆ ಹೊಡೆಯುವ ಸಾಧನವಾಗಿರಲಿಲ್ಲ, ಬದಲಾವಣೆಯ ಅಸ್ತ್ರವೂ ಆಗಿತ್ತು.

ಈ ದೇಶದ ಮಾಧ್ಯಮದಲ್ಲಿ ಎಷ್ಟು ಮಂದಿ ಬುಡಕಟ್ಟು ಜನಾಂಗದ ಪತ್ರಕರ್ತರಿದ್ದಾರೆ ಎಂದು ಯಾವಾಗಲಾದರೂ ನಾವು ಯೋಚಿಸಿದ್ದೆವಾ? ‘ಚರಕ’ ಎನ್ನುವ ದೆಹಲಿ ಮೂಲದ ಮಾಧ್ಯಮ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಬುಡಕಟ್ಟು ಜನಾಂಗದ ಸುದ್ದಿಗಳಿಗೆ ಸಿಗುವ ಆದ್ಯತೆ ಶೇಖಡಾ 2 ಕ್ಕಿಂತ ಕಡಿಮೆ. ಓದು ಬರಹ ಗೊತ್ತಿಲ್ಲದ, ಹೊರ ಜಗತ್ತಿಗೆ ಗೊತ್ತೂ ಆಗದ ಭಾಷೆ ಮಾತನಾಡುವ ಈ ಬುಡಕಟ್ಟು ಜನಾಂಗದ ನೋವಾಗಲೀ ನಲಿವಾಗಲೀ ಯಾರ್ಯಾರಿಗೂ ಗೊತ್ತಾಗುವುದಿಲ್ಲ. ಹಾಗಿರುವಾಗಲೇ ಈ ಜನಾಂಗ ಕೈಗೆತ್ತಿಕೊಂಡದ್ದು ಮೊಬೈಲ್ ಗಳನ್ನು. ಓದುವ ಬರೆಯುವ ಬದಲು, ಮಾತಾಡುವ ಕೇಳುವ ಪರಂಪರೆಯ ಈ ಜನಕ್ಕೆ ಮೊಬೈಲ್ ನಮ್ಮ ಮಾಧ್ಯಮ ಎಂದು ಗೊತ್ತಾಗಿ ಹೋಯಿತು. ಮೊಬೈಲ್ ಕಿವಿಗಿಟ್ಟವರೆ ಮಾತನಾಡುತ್ತಾ ಹೋದರು, ಮಾತನಾಡಿದವರ ಮಾತು ಕೇಳುತ್ತಾ ಹೋದರು. ಅವರ ಹೊಟ್ಟೆಯೊಳಗೆ ದಶಕಗಳಿಂದ ಅಡಗಿದ್ದ ಸಂಕಟ ಹೊರಬರಲು ಆರಂಭವಾಯಿತು. ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದು ಯಾರು ಎಂದು ಕಣ್ಣೀರಿಟ್ಟರು. ಕೇಂದ್ರ ಸರ್ಕಾರ ಕೆರೆ ಕಟ್ಟಿಸಲು ಹಣ ಮಂಜೂರು ಮಾಡಿದ್ದರೂ ಲಂಚ ಕೊಡಲಿಲ್ಲ ಎನ್ನುವ ಕಾರಣಕ್ಕೆ ಆ ಹಣವನ್ನೇ ಹಿಂದಕ್ಕೆ ಕಳಿಸಿದ ನಿಜ ಸ್ಥಿತಿ ಬಯಲು ಮಾಡಿದರು. ನಕ್ಸಲೈಟರ ಹುಟ್ಟಡಗಿಸಲು ಕಾಡೊಳಗೆ ನುಗ್ಗಿ ಬಂದ ಪೊಲೀಸರು ಎಸಗಿದ ದೌರ್ಜನ್ಯಗಳ ಬಗ್ಗೆ ಮಾತನಾಡಿದರು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾಡಿದ ಕೆಲಸಕ್ಕೆ ಕೂಲಿ ನೀಡದೆ ಅಲೆಸುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾನ್ಹದ ಬಿಸಿ ಊಟಕ್ಕೆ ಕಲ್ಲು ಹಾಕಿದ ಕಥೆ ಹೇಳಿದರು. ಬೋರ್ ವೆಲ್ ಗಳಿಲ್ಲದೆ ಹತ್ತಾರು ಮೈಲು ನೀರಿಗೆ ಅಲೆಯುತ್ತಿರುವುದನ್ನು ಹಂಚಿಕೊಂಡರು.

ಛತ್ತೀಸ್ ಗಢದ ಆ ಕುಗ್ರಾಮಗಳಿಂದ ಮೊಬೈಲ್ ಮೂಲಕ ಎದ್ದು ಬಂದ ದನಿ ಸರ್ಕಾರವನ್ನು ಬೆಚ್ಚಿ ಬೀಳುವಂತೆ ಮಾಡಿತು. ಅಧಿಕಾರಿಶಾಹಿ ಮೊತ್ತ ಮೊದಲ ಬಾರಿಗೆ ಕಿವಿಗೊಟ್ಟು ಕೇಳುವಂತೆ ಆಯಿತು. ಕತ್ತಲ ಕೂಪದಲ್ಲಿದ್ದ ಹಲವು ಹಳ್ಳಿಗಳಲ್ಲಿ ಬದಲಾವಣೆಯ ಒಂದು ಕ್ಷೀಣ ಬೆಳಕು ಕಾಣಿಸಲಾರಂಭಿಸಿತು. ಅದಕ್ಕೆ ಕಾರಣವಾಗಿದ್ದು ಇನ್ನಾರೂ ಅಲ್ಲ, ‘ಭಾರತ ಪ್ರಕಾಶಿಸುತ್ತಿದೆ’ ಎನ್ನುವ ಘೋಷಣೆಯೂ ಅಲ್ಲ, ಬದಲಿಗೆ ‘ಮೊಬೈಲ್’. .

ದೇಶದಲ್ಲೆಡೆ ಮೊಬೈಲ್ ಜ್ವರ ಹರಡಿದೆ. ಟೆಲಿವಿಷನ್ ಜ್ವರಕ್ಕಿಂತ ತೀವ್ರವಾದ ಜ್ವರ ಇದು. ಇಂಟರ್ ನೆಟ್ ಇನ್ನೂ ತೆವಳುತ್ತಾ ಸಾಗುತ್ತಿದೆ. ಆದರೆ ಮೊಬೈಲ್ ಇಡೀ ದೇಶವನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳುತ್ತಾ ಸಾಗಿದೆ. ನಗರಗಳ ಮಾತು ಬಿಡಿ ಗ್ರಾಮಾಂತರ ಪ್ರದೇಶದಲ್ಲಿಯೇ ಶೇಖಡಾ 39 ರಷ್ಟು ಜನಸಂಖ್ಯೆಯನ್ನು ಮೊಬೈಲ್ ವ್ಯಾಪಿಸಿದೆ. ಈ ಹೊಸ ಮಾತಾಡುವ ದಾಹವನ್ನು ಮೊದಲು ಸರಿಯಾಗಿ ಅರ್ಥ ಮಾಡಿಕೊಂಡವರು ಶುಬ್ರಾಂಶು ಚೌಧುರಿ. ಬಿ ಬಿ ಸಿ ಯಲ್ಲಿ ಹಿರಿಯ ಪತ್ರಕರ್ತರಾಗಿದ್ದ ಶುಬ್ರಾಂಶು ಛತ್ತೀಸ್ ಗಢದ ಬುಡಕಟ್ಟು ಶಾಲೆಗಳಲ್ಲಿ ಓಡಿ ಬೆಳೆದವರು. ತನ್ನ ರಾಜ್ಯ ಏಕೆ ನಕ್ಸಲೈಟರ ತಾಣವಾಗುತ್ತಿದೆ ಎನ್ನುವುದನ್ನು ಅರಿಯಲು ತಾವು ಹುಟ್ಟಿ ಬೆಳೆದ ಊರಿಗೆ ಹೊಕ್ಕಾಗ ಅವರಿಗೆ ಕಂಡದ್ದು ಸಮಸ್ಯೆಗಳ ನೋವಿನ ಸರಮಾಲೆ. ಒಂದೆಡೆ ನಕ್ಸಲೈಟರು, ಇನ್ನೊಂದೆಡೆ ಪೊಲೀಸರು, ಸದಾ ನಿರ್ಲಕ್ಷಿಸುವ ರಾಜಕಾರಣಿಗಳು, ಇದರ ಜೊತೆಗೆ ಬೆಟ್ಟ ಗುಡ್ಡಗಳಲ್ಲಿದ್ದ ಖನಿಜ, ಅರಣ್ಯ ಸಂಪತ್ತಿಗಾಗಿ ಬರುತ್ತಿರುವ ಉದ್ದಿಮೆಗಳು ಎಲ್ಲವೂ ಈ ಜನರನ್ನು ದುಕ್ಕದ ಅಂಚಿಗೆ ದೂಡಿತ್ತು. ಈ ಜನರ ನೋವು ದೇಶದ ಕಿವಿಗೆ ಮುಟ್ಟಿಸಬೇಕು ಎಂದಾಗ ಅವರಿಗೆ ಹೊಳೆದದ್ದು ಸಮುದಾಯ ರೇಡಿಯೋ. ಆದರೆ ದೇಶದ ಕಾನೂನು ಕಟ್ಟಲೆಗಳು ಬುಡಕಟ್ಟು ಜನರು ರೇಡಿಯೋ ಆರಂಭಿಸಲು ಬರೀ ತೊಡಕುಗಳನ್ನೇ ಮುಂದು ಮಾಡಿತು. ಆಗ ಶುಬ್ರಾಂಶು ಕೈಗೆತ್ತಿಕೊಂಡದ್ದು ಆನ್ ಲೈನ್ ಮಾಧ್ಯಮವನ್ನು. ಪತ್ರಿಕೆ ಟೆಲಿವಿಷನ್ ಸಿಗದ ನೆಲದಲ್ಲಿ ಇಂಟರ್ ನೆಟ್ ಸಹಾ ಸಿಗುವುದಿಲ್ಲ ಎಂದು ಗೊತ್ತಾದಾಗ ಅವರಿಗೆ ಕಣ್ಣಿಗೆ ಬಿದ್ದದ್ದು ಮೊಬೈಲ್.

‘ಸಿ ಜಿ ನೆಟ್ ಸ್ವರ’ ( CGnet Swara) ಛತ್ತೀಸ್ ಗಢದ ಜನರಿಗೆ ಸುರಪರಿಚಿತ. ಮೊಬೈಲ್ ನ ಗುಂಡಿ ಒತ್ತಿ (+91-80-4113 ೭೨೮೦) ಅಲ್ಲಿ ತಮಗೆ ಆದ ಅನ್ಯಾಯ ಹೇಳಿಕೊಳ್ಳಬಹುದು. ಅದು ದೂರದ ಬೆಂಗಳೂರಿಗೆ ಹಾರಿ ಬರುತ್ತದೆ. ಬೆಂಗಳೂರಿನಲ್ಲಿ ಕುಳಿತ ಪತ್ರಕರ್ತರು ಅದನ್ನು ದ್ವನಿಮುದ್ರಿಸಿಕೊಂಡು, ಅದರ ಸತ್ಯಾಸತ್ಯತೆ ಪರಿಶೀಲಿಸಿ, ಪರಿಷ್ಕರಿಸಿ ರೇಡಿಯೋ ವಿಕಿ ತಂತ್ರಜ್ಞಾನ ಬಳಸಿ ಕೇಳಲು ಸಿದ್ಧಪಡಿಸುತ್ತಾರೆ. ಈಗ ಮೊಬೈಲ್ ಗೆ ಕರೆ ಮಾಡಿ ಯಾರು ಬೇಕಾದರೂ ನೊಂದವರ ಕಥೆ ಕೇಳಬಹುದು. ಇಲ್ಲಿಯವರೆಗೆ 30 ಸಾವಿರ ಕರೆಗಳು ಬಂದಿವೆ. 9 ಸಾವಿರ ಬಳಕೆದಾರರಿದ್ದಾರೆ. 750 ಸುದ್ದಿ ಪ್ರಕಟವಾಗಿದೆ.

‘ಮಾತಾಡು ಇಂಡಿಯಾ, ಮಾತಾಡು’ ಎಂದು ಯಾರು ಘೋಷಣೆ ರೂಪಿಸಿಕೊಟ್ಟರೋ ಆದರೆ ಛತ್ತೀಸ್ ಗಢ ಮಾತ್ರ ನಿಜಕ್ಕೂ ಮೊಬೈಲ್ ಹಿಡಿದು ಮಾತನಾಡಲು ಆರಂಭಿಸಿಯೇಬಿಟ್ಟಿತು. ಮೊದಲು ತಮ್ಮ ಅಳಲನ್ನು ಮಾತ್ರ ಹೇಳುತ್ತಾ ಹೋದವರು. ಆ ನಂತರ ಪ್ರತಿಯೊಂದನ್ನು ಪ್ರಶ್ನಿಸಲು ಆರಂಭಿಸಿದರು. ಛತ್ತೀಸ್ ಗಡದ ಶಾಸಕರೆಲ್ಲರೂ ಸರ್ಕಾರಿ ಖರ್ಚಿನಲ್ಲಿ ಹರಿದ್ವಾರದ ಕುಂಭ ಮೇಳದಲ್ಲಿ ಭಾಗವಹಿಸಿದ್ದು ಏಕೆ? ಎಂದು ಪ್ರಶ್ನಿಸಿದಾಗ ರಾಜಕಾರಣಿಗಳೂ ಬೆಚ್ಚಿ ಬಿದ್ದರು. ಓದಲು ಬರೆಯಲು ಬರದ ನಾಲ್ಕು ಮಂದಿ ಮೊಬೈಲ್ ನಲ್ಲಿ ಏನೋ ಮಾತನಾಡಿಕೊಳ್ಳುತ್ತಾರೆ ಎಂದು ಮಾತ್ರ ಅಂದುಕೊಂಡಿದ್ದ ರಾಜಕಾರಣಿಗಳು ಈಗ ನಿಜಕ್ಕೂ ಸುಸ್ತಾದರು. ಮೊಬೈಲ್ ನಲ್ಲಿ ಮಾತನಾಡಲು ಆರಂಭಿಸಿದ್ದನ್ನು ಕೇಳಲು ಆರಂಭಿಸಿದ್ದು ಕೇವಲ ಅದೇ ಬುಡಕಟ್ಟು ಜನಾಂಗ ಮಾತ್ರವಾಗಿರಲಿಲ್ಲ. ರಾಷ್ತ್ರೀಯ ಮಾನವ ಹಕ್ಕುಗಳ ಮಂಡಳಿ ಕೇಳಿಸಿಕೊಂಡಿತು. ಸುಪ್ರೀಂ ಕೋರ್ಟ್ ಕೇಳಿಸಿಕೊಂಡಿತು. ಅದರ ಫಲ ಪೋಲೀಸ್ ದೌರ್ಜನ್ಯ ನಡೆದಾಗ, ಮಾನವ ಹಕ್ಕುಗಳ ಉಲ್ಲಂಘನೆಯಾದಾಗ, ಬದುಕುವ ಹಕ್ಕಿನಿಂದ ವಂಚಿತರಾದಾಗ ಕಾನೂನು ರಕ್ಷಿಸಲು ಆರಂಭಿಸಿತು.

ಕಲ್ಲಿದ್ದಲು, ವಿಧ್ಯುತ್ ಹಾಗೂ ಉಕ್ಕು ಲಾಬಿಯಿಂದ ಸದಾ ಮಣಿಸಲ್ಪಡುತ್ತಿದ್ದ ಛತ್ತೀಸ್ ಗಡ ಸರ್ಕಾರವನ್ನು ಮೊತ್ತಮೊದಲ ಬಾರಿಗೆ ಯಾರೂ ಕೇಳದ ಗೊಂಡಿ. ಕುರುಕ್ ಭಾಷೆಗಳೂ ಮಣಿಸಲು ಆರಂಭಿಸಿದವು. ಮಾಹಿತಿ ತಂತ್ರಜ್ಞಾನ ಸಮಾಜವನ್ನು ಒಡೆದು ಹಾಕಿಬಿಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದಾಗ ಇದೇ ತಂತ್ರಜ್ಞಾನ ಸಮಾಜವನ್ನು ಬೆಸೆಯುತ್ತಾ ಹೋಯಿತು. ಜನರ ಕಥೆಯನ್ನು ಈ ‘ಸಿ ಜಿ ನೆಟ್ ಸ್ವರ’ದ ಮೂಲಕ ಮುಖ್ಯ ವಾಹಿನಿಯ ಮಾಧ್ಯಮಗಳೂ ಕೈಗೆತ್ತಿಕೊಂಡವು. ಈ ಎಲ್ಲವೂ ನಿಜವಾದ ಬದಲಾವಣೆಗೆ ಕಾರಣ ಮಾಡಿದವು. ಮೊತ್ತ ಮೊದಲ ಬಾರಿಗೆ ಅಧಿಕಾರಿಗಳು ಈ ಹಳ್ಳಿಗಳತ್ತ ಬಂದರು, ಇದೇ ಮೊಬೈಲ್ ಬಳಸಿ ಸಮಸ್ಯೆಗಳ ಬಗ್ಗೆ ವಿಚಾರಿಸಿಕೊಂಡರು, ಕೈಗೊಂಡ ಕ್ರಮಗಳನ್ನು ಪ್ರಕಟಿಸಿದರು, ರಾಜಕಾರಣಿಗಳು ಸಮಸ್ಯೆಗೆ ಕಿವಿಗೊಟ್ಟರು.

ಭಾರತದಲ್ಲಿ ಸುಮಾರು 10 ಕೋಟಿ ಬುಡಕಟ್ಟು ಜನರಿದ್ದಾರೆ. ಆದರೆ ಇದುವರೆಗೂ ಅದರ ದನಿ ಕೇಳಿದವರೇ ಕಡಿಮೆ. ಒಂದು ಮೊಬೈಲ್ ಈಗ ಕೇಳಿರದ ದನಿಯನ್ನು ಕೇಳಿಸುತ್ತಿದೆ. ಆಣೆಕಟ್ಟು ಕಟ್ಟಲು ಜಾಗ ತೆರವು ಮಾಡಿ ಎಂದು ಸರ್ಕಾರ ಹೇಳಿದ್ದೆ ತಡ ಬುಡಾನ್ ಎನ್ನುವ ಬುಡಕಟ್ಟು ಮಹಿಳೆ ಮೊಬೈಲ್ ನ ಗುಂಡಿ ಒತ್ತಿದಳು. ತನ್ನ ಗಟ್ಟಿ ದನಿಯಲ್ಲಿ ‘ಜಾಗ ಖಾಲಿ ಮಾಡಬೇಕಾದವರು ನಾವಲ್ಲ, ನೀವು’ ಎಂದು ಕೇಳಿದಳು. ಅಷ್ಟೇ ಅಲ್ಲ ‘ಈ ನಾಡು ನಮ್ಮದು, ಈ ಕಾಡು ನಮ್ಮದು, ಈ ನದಿಯೂ ನಮ್ಮದು/ ಸರ್ಕಾರ ನಿಮ್ಮದು, ಪೋಲೀಸು ನಿಮ್ಮದು, ಕಾನೂನು ನಿಮ್ಮದು/ ಆದರೆ ನಾವು ಜಗ್ಗುವುದಿಲ್ಲ ನೀವೇ ಜಾಗ ಖಾಲಿ ಮಾಡಿಬಿಡಿ’ ಎಂದು ಹಾಡತೊಡಗಿದಳು. ಆ ಹಾಡು ಅನುದಿನದ ಅಂತರಗಂಗೆಯಂತೆ ಮೊಬೈಲ್ ಗುಂಡಿ ಒತ್ತಿದ ಎಲ್ಲರ ಕಿವಿಗೂ ಹರಿಯುತ್ತಿದೆ. ನೀವೂ ಗುಂಡಿ ಒತ್ತಿ ನೋಡಿ

‍ಲೇಖಕರು G

October 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ಎಂಬ ‘ಜೋತಮ್ಮ’

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ...

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

-ಜಿ ಎನ್ ಮೋಹನ್ 'ಇದು ಕೇಳೋ ಪ್ರಶ್ನೆನಾ..' ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ 'ಎದೆ ತುಂಬಿ...

2 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ ಮಂಸೋರೆCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: