ಮಾತುಗಳು ಸೋತಾಗ…

ಹೃದಯವಂತರು!

~ಎಸ್.ಜಿ.ಶಿವಶಂಕರ್

ಮಡದಿ ತವರಿಗೆ ಹೋದಾಗ ಉದರ ಪೋಷಣೆಗೆ ಗಂಡಸರಿಗೆ ಎರಡು ಮಾರ್ಗಗಳಿರುತ್ತವೆ. ಒಂದು ಮೈಕೈ ಸುಟ್ಟುಕೊಂಡು ರುಚಿಯಿಲ್ಲದ್ದು ಬೇಯಿಸಿಕೊಂಡು ತಿನ್ನುವುದು, ಎರಡನೆಯದು ಹೋಟೆಲನ್ನು ಆಶ್ರಯಿಸುವುದು. ಅಡಿಗೆ ಬಾರದ ಬಹುತೇಕ ಗಂಡಸರಿಗೆ ಹೋಟೆಲ್ಲೇ ಪ್ರಿಯ! ಇಂತ ಒಂದು ಸಂದರ್ಭದಲ್ಲಿ, ದಿನ ಬೆಳಿಗಿನ ಉಪಹಾರವನ್ನು ಸ್ವತಃ ಮಾಡಿಕ್ಕೊಳ್ಳುವುದಕ್ಕೆ ಮೈಬಗ್ಗದೆ, ಕಾಲೇಜಿಗೆ ಹೋಗುವ ದಾರಿಯಲ್ಲಿ ಸಿಗುವ ಹೋಟೆಲನ್ನು ಪ್ರವೇಶಿಸಿದೆ. ತಿಂಡಿಯನ್ನು ಆರ್ಡರ್ ಮಾಡಿ ಕಾಯುತ್ತಿದ್ದಾಗ ಆಚೆ ವಯಸ್ಸಾದ ಮುದುಕಿಯೊಬ್ಬಳು ಭಿಕ್ಷೆ ಬೇಡುತ್ತಿರುವುದು ಕಂಡಿತು. ಕೃಶವಾದ, ಜರ್ಜರಿತವಾದ ದೇಹದ ಆಕೆಗೆ ಹೆಚ್ಚು ಹೊತ್ತು ನಿಲ್ಲಲೂ ತ್ರಾಣವಿಲ್ಲದಂತೆ ಕಂಡಿತು. ಹೋಟೆಲಿಂದ ಈಚೆ ಬರುವ ಎಲ್ಲರ ಬಳಿಯೂ ಹೋಗಿ ಬೇಡಲು ಆಕೆ ಶ್ರಮಪಡುತ್ತಿರುವಂತೆ ಕಂಡಿತು. ಫೆಬ್ರವರಿ ತಿಂಗಳ ಬೆಳಗ್ಗೆ ಒಂಬತ್ತರ ಬಿಸಿಲನ್ನೂ ತಡೆಯಲಾರದ ಆಕೆ, ಮೋಟಾರ್ಬೈಕ್ ಒಂದರ ನೆರಳಲ್ಲಿ ಆಗಾಗ್ಗೆ ಕೂರುತ್ತಿದ್ದಳು. ಆಚೆ ಹೋಗುವಾಗ ಆಕೆಗೆ ಒಂದು ರೂಪಾಯಿ ಕೊಡುವ ಮನಸ್ಸು ಮಾಡಿದ ನಾನು ಉಪಹಾರದ ಕಡೆ ಗಮನ ಹರಿಸಿದೆ. ಪಕ್ಕದ ಟೇಬಲ್ಲಿನಲ್ಲಿ ಒಬ್ಬ ದಢೂತಿಯಾದ ಕಪ್ಪು ಮೈಯಿನ ಸುಮಾರು ಇಪ್ಪತ್ತೈದರ ಯುವಕನೊಬ್ಬ ದೋಸೆ ತಿನ್ನುತ್ತಿದ್ದ. ಆತ ಒರಟನಂತೆ ಕಾಣುತ್ತಿದ್ದ. ಆಟ ತಿನ್ನುವ ರೀತಿಯಲ್ಲಿಯೂ ಒರಟುತನ ಕಾಣಿಸುತ್ತಿತ್ತು. ಆತನ ಚರ್ಯೆ ಗಮನಿಸಿದರೆ ಆತನೊಬ್ಬ ಸಾಫ್ಟ್ವೇರ್ ಉದ್ಯೋಗಿಯಂತೆ ಕಂಡ. ಹೋಟೆಲಿನ ಎದುರಿನಲ್ಲೇ ಒಂದು ಇಂಜಿನಿಯರಿಂಗ್ ಕಾಲೇಜು ಸಹ ಇದ್ದುದರಿಂದ ಹೋಟೆಲಿನಲ್ಲಿ ಜನ ತುಂಬಿದ್ದರು. ಕಳೆದ ಐದಾರು ವರ್ಷಗಳಿಂದ ಮೈಸೂರಿನಲ್ಲಿ ಸಾಫ್ಟ್ವೇರ್ ಉದ್ಯಮ ಬೆಳೆಯುತ್ತಿದ್ದು, ಉದ್ಯೋಗಕ್ಕಾಗಿ ಬಂದು ನೆಲಸಿರುವ ಉತ್ತರ ಭಾರತ, ದಕ್ಷಿಣ ಭಾರತ ಮತ್ತಿತ್ತರ ಕಡೆಯ ಯುವಕ ಯುವತಿಯರೂ ಸೇರಿ ಹೋಟೆಲಿನ ಜನಸಂದಣಿಯನ್ನು ಹೆಚ್ಚಿಸಿದ್ದರು. ನನ್ನ ಗಮನ ಅಗಾಗ್ಗೆ ಭಿಕ್ಷೆ ಬೇಡುತ್ತಿದ್ದ ಮುದುಕಿಯತ್ತ ಹೊರಳುತ್ತಿತ್ತು. ಆಕೆಯ ಬಟ್ಟೆಗಳು ಸ್ವಚ್ಛವಾಗಿದ್ದವು. ಬಣ್ಣ ಮಾಸಿದೆ ಹಸಿರು ಬಣ್ಣದ ಸೀರೆಗೆ ಕೆಂಪು ಬಣ್ಣದ ಬಾರ್ಡರಿತ್ತು. ಆ ಸೀರೆಯನ್ನು ಯಾರೋ ಅಯುಸ್ಸು ತೀರುವವರೆಗೆ ಉಪಯೋಗಿಸಿ ನಂತರ ಈ ಮುದುಕಿಗೆ ದಯಪಾಲಿಸಿರಬಹುದೆಂದು ಊಹಿಸಿದೆ; ಅಸಹ್ಯ ಬರುವಂತೆ ಕಾಣಿಸುವ ಭಿಕ್ಷುಕರಿಗಿಂತೆ ಭಿನ್ನವಾಗಿದ್ದಳು. ಆಕೆ ಬಹಳ ಕಾಲದಿಂದ ಈ ವೃತ್ತಿಯಲ್ಲಿಲ್ಲ ಎನಿಸಿತು. ಭಿಕ್ಷೆ ಬೇಡುವ ಅನಿವಾರ್ಯತೆಯಿರುವ ಆಕೆಯ ಪರಿಸ್ಥಿಯನ್ನು ಊಹಿಸುತ್ತಿದ್ದೆ. ಮನೆಯಲ್ಲಿರುವ ಜನರು ಆಕೆಗೆ ಎರಡು ಹೊತ್ತು ಆಹಾರ ನೀಡಲಾರರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಹೋಟೆಲಿಂದ ಆಚೆ ಹೋಗುವ ಬಹುತೇಕ ಯುವಜನರು ಆಕೆಯ ಮುಂದೆ ಹೋಗದಂತೆ ತಪ್ಪಿಸಿಕ್ಕೊಳ್ಳುತ್ತಿದ್ದರು. ನಾನು ಉಪಾಹಾರ ಮುಗಿಸುವ ಹೊತ್ತಿಗೆ ಆಕೆಗೆ ಒಂದಿಬ್ಬರು ಹಣ ಕೊಟ್ಟಿದ್ದು ಕಂಡಿತು. ನನ್ನ ಪಕ್ಕದಲ್ಲಿದ್ದ ದಢೂತಿ ಯುವಕ ಎದ್ದು ಹೊರಡಲನುವಾದ. ಸಪ್ಲೈಯರ್ ಅವನ ಕೈಗೆ ಪಾರ್ಸಲ್ ಕೊಟ್ಟ. ಆತ ಅದನ್ನು ಮನೆಗೆ ಒಯ್ಯಬಹುದೆಂದು ತಿಳಿದೆ. ಈ ಒರಟನೂ ಆ ಭಿಕ್ಷುಕಿಯನ್ನು ಅವಾಯ್ಡ್ ಮಾಡಬಹುದೆನ್ನಿಸಿತು. ಅವನು ಕ್ಯಾಷ್ ಕೌಂಟರಿನ ಬಳಿ ಹಣ ಕೊಟ್ಟು ಹೊರಗೆ ಹೋಗುವುದನ್ನು ಕೆಲ ಕ್ಷಣ ಗಮನಿಸಿದೆ. ಆಚೆ ಕಾಲಿಟ್ಟ ಆತ ನೇರವಾಗಿ ಭಿಕ್ಷುಕಿ ಮುದುಕಿಯ ಬಳಿಗೇ ಹೋದ. ಕೈಯಲ್ಲಿದ್ದ ಪಾರ್ಸಲನ್ನು ಆಕೆಗೆ ಕೊಟ್ಟುಬಿಟ್ಟ! ನನಗೆ ಪರಮಾಶ್ಚರ್ಯವಾಗಿತ್ತು! ಆತ ಆಕೆಯನ್ನು ಅವಾಯ್ಡ್ ಮಾಡುತ್ತಾನೆಂದು ನೆನಸಿದ್ದೇ ತಪ್ಪಾಗಿತ್ತು! ಎಲಾ…? ಒರಟನಂತೆ ಕಂಡವನ ಹೃದಯ ಹೀಗೆ ಮೃದುವಾಗಿರಬಹುದೆನ್ನುವುದು ನನಗೆ ನಿಜಕ್ಕೂ ನಂಬಲಾರದ ವಿಷಯವಾಗಿತ್ತು! ಆತ ನಿರ್ಭಾವದಿಂದ ತನ್ನ ಮೋಟಾರ್ಬೈಕ್ ಹತ್ತಿ ಹೋದ. ಪಾರ್ಸಲ್ ಬ್ಯಾಗು ಸಿಕ್ಕಿದ್ದರಿಂದ ಆಕೆ ಅದನ್ನು ಅಲ್ಲಿಯೇ ಕೂತು ತಿನ್ನಬಹುದೆಂದು ಊಹಿಸಿದ್ದ ನನಗೆ ಮತ್ತೊಂದು ಅಚ್ಚರಿ ಕಾದಿತ್ತು. ಆ ಮುದುಕಿ ಆ ಬ್ಯಾಗನ್ನು ಆನತಿ ದೂರದಲ್ಲಿಟ್ಟು ಮತ್ತೊಂದು ಬೈಕಿನ ನೆರಳಲ್ಲಿ ಕುಳಿತಳು. ಇನ್ನಷ್ಟು ಭಿಕ್ಷೆ ಸಿಗಲಿ ಎಂಬುದಾಕೆಯ ಮನಸ್ಥಿತಿಯಂತೆ ಕಂಡಿತು. ನನ್ನ ಉಪಾಹಾರ ಮುಗಿದು, ಕಾಫಿ ಬಂದಿತ್ತು. ಕಾಫಿಯ ಸ್ವಾದವನ್ನು ಅನುಭವಿಸುತ್ತಾ ಭಿಕ್ಷಿಕಿಯ ಕಡೆ ನೋಡುತ್ತಿದ್ದೆ. ನಾನು ನೋಡುತ್ತಿದ್ದ ಸಮಯದಲ್ಲಿ ಆಕೆಗೆ ಇಬ್ಬರು ಚಿಲ್ಲರೆ ನಾಣ್ಯ ನೀಡಿದ್ದರು. ಹೀಗೆ ಜನಸಂದಣಿ ಹೆಚ್ಚಾಗಿರುವ ಬೆಳಗಿನ ಸಮಯದಲ್ಲಿ ಒಟ್ಟು ಮೂರು ಗಂಟೆಯ ಅವಧಿಯಲ್ಲಿ ಆಕೆಗೆ ಹೆಚ್ಚೆಂದರೆ ಇಪ್ಪತ್ತು ರೂಪಾಯಿ ಸಿಕ್ಕೀತು ಎಂದು ಲೆಕ್ಕ ಹಾಕಿದೆ. ಆ ಒರಟನಂತೆ ಕಂಡ ಹೃದಯವಂತರು ಯಾರಾದರೂ ಸಿಕ್ಕರೆ ಒಂದೆರೆಡು ಇಡ್ಲಿ ಸಿಕ್ಕೀತು. ಭಿಕ್ಷೆಗೆ ಯಾರು ಹೊಟ್ಟೆ ತುಂಬ ಕೊಟ್ಟಾರು..? ಇಡೀ ದಿನದಲ್ಲಿ ಆಕೆ ಅಲ್ಲಿಯೇ ನಿಲ್ಲಲು ಸಾಧ್ಯವಾದರೆ ಆಕೆ ಮೂವತ್ತು ರೂಪಾಯಿ ಗಳಿಸಬಹುದೆನಿಸಿತು. ಒಂದು ಕೆಜಿ ರಾಗಿಗೆ ಇಪ್ಪತ್ತು ರೂಪಾಯಿಯ ಈ ದಿನಗಳಲ್ಲಿ ಆಕೆಗೆ ಅದರಲ್ಲಿ ಏನಾದೀತು..? ಆಕೆಯ ಜೀವನ ನಿರ್ವಹಣೆ ಹೇಗೆ ಎಂಬ ಯೋಚನೆಗಳೊಂದಿಗೆ ಕಾಫಿ ಮುಗಿಸಿ ಹಣ ಕೊಟ್ಟು ಹೋಟೆಲಿಂದೀಚೆ ಬಂದೆ. ಭಿಕ್ಷುಕಿಗೆ ಒಂದು ರೂಪಾಯಿ ಕೊಟ್ಟೆ. ಕಾಲು ಮುಂದೆ ಚಲಿಸಲಿಲ್ಲ. ಆಕೆಯನ್ನು ಏನೋ ಕೇಳಬೇಕೆನ್ನಿಸಿತು. ಯಾರೋ ತಿಂಡಿ ಕೊಟ್ರಲ್ಲ…ತಿನ್ನಬಾರದಾ..?’ಎಂದೆ. ಇಲ್ಲಕಣಪ್ಪ ಮನೇಲಿ ಖಾಯಿಲೆ ಮಲಗಿರೋ ಗಂಡ ಇದಾನೆ…ಅವನು ಹಸ್ಕೊಂಡಿರೋವಾಗ ನಾನೆಂಗೆ ತಿನ್ನಲಿ..? ಅವನಿಗೆ ಇದು. ಅವನು ದುಡಿಯೋಗಂಟ ನಾನು ಭಿಕ್ಷೆ ಎತ್ತುತ್ತಿರಲಿಲ್ಲ..ಈಗ..? ಆಕೆಯ ಕಣ್ಣುಗಳಲ್ಲಿ ನೀರು ತುಂಬಿದುವು. ಸೆರಗಿನಿಂದ ಕಣ್ಣು ಒರೆಸಿಕೊಂಡಳು. ‘ಮನೆ ಎಲ್ಲಿದೆ..? ಇಲ್ಲಿ ಸಿಗೋದು ನಿಂಗೆ ಸಾಕಾಗುತ್ತಾ..? ಗಂಡನಿಗೆ ಏನು ಖಾಯಿಲೆ?’ ಎಂದೆಲ್ಲಾ ಕೇಳಬೇಕೆನ್ನಿಸುತು. ಮರುಕ್ಷಣವೇ ನನ್ನಲ್ಲೇ ಪ್ರಶ್ನೆಗಳು ಮೂಡಿದುವು. ಆಕೆಯ ವಿಷಯಗಳನ್ನು ತಿಳಿದು ನಾನೇನಾದರೂ ಮಾಡಬಲ್ಲೆನೆ..? ಒಂದು ವೇಳೆ ಮನೆ ಇಂತಲ್ಲಿ ಇದೆ ಎಂದರೆ ಆಕೆಯನ್ನು ಅಲ್ಲಿಗೆ ಕರೆದೊಯ್ಯಬಲ್ಲೆನೆ..? ಗಂಡನೆ ಖಾಯಿಲೆ ಹೇಳಿದರೆ ನಾನು ಚಿಕಿತ್ಸೆ ಕೊಡಿಸಬಲ್ಲೆನೆ..? ಗಡಿಯಾರ ನೋಡಿಕೊಂಡರೆ ಕಾಲೇಜಿಗೆ ಹೋಗುವುದು ತಡವಾಗಬಹುದೆನ್ನಿಸಿತು. ಮೊದಲನೆಯ ಪೀರಿಯಡ್ ಕೂಡಾ ನನ್ನದೇ..? ಈ ಮುದುಕಿಯ ಸಮಸ್ಯೆಗಳಿಗೆ ನೆರವಾಗಬಲ್ಲೆನಾದರೆ ಆ ಪ್ರಶ್ನೆಗಳನ್ನು ಕೇಳುವುದು ಸರಿ, ಇಲ್ಲವಾದಲ್ಲಿ ಅವೆಲ್ಲಾ ಕೇಳಿದರೆ ಅವಳ ನೋವೇನು ಕಡಿಮೆಯಾಗದು. ಬಾಯಿ ಕಟ್ಟಿದಂತಾಯಿತು. ಮೂಕನಾಗಿ ಮುಂದೆ ನಡೆದೆ. ಆಕೆಗೆ ಬದುಕೆಷ್ಟು ಭಾರವಾಗಿರಬಹುದೆಂಬುದು ನನ್ನ ಊಹೆಗೂ ಮೀರಿದ್ದಾಗಿತ್ತು. ಏನೇ ಸಿಕ್ಕರು ಅದು ಮೊದಲು ತನಗೆ ಎನ್ನುವವರ ನಡುವೆ ಭಿಕ್ಷುಕಿಗೆ ಪಾರ್ಸಲ್ ಕಟ್ಟಿಸಿಕ್ಕೊಟ್ಟ ಆ ಒರಟು ಯುವಕ, ತಿನ್ನಲು ಸಿಕ್ಕಿದರೂ ತನ್ನ ಖಾಯಿಲೆಯ ಗಂಡನಿಗೆ ಎತ್ತಿಟ್ಟ ಆ ಭಿಕ್ಷುಕಿ ಅಪರೂಪದವರು ಎನ್ನಿಸಿತು. ಇಂತವರಿಗೆ ಬೇಕಾಗಿರುವುದು ನನ್ನಂತ ವಿಚಾರವಂತರಲ್ಲ, ಆ ಕಪ್ಪನೆಯ ಒರಟು ಯುವಕನಂತ ಹೃದಯವಂತರು ಬೇಕು. ನನ್ನಂತವರಿಂದ ಅವರ ನೋವಾಗಲೀ, ಸಮಸ್ಯೆಗಳಾಗಲೀ ಪರಿಹಾರವಾಗುವುದಿಲ್ಲ. ಬದಲಿಗೆ ಹೃದಯವಂತರಿಂದ ಅವರ ಒಂದು ಹೊತ್ತಿನ ಹಸಿವಾದರೂ ಹಿಂಗೀತು! ಇಂತ ಹೃದಯವಂತಿಕೆ ಎಲ್ಲರಿಗೂ ಬಂದರೆ ಕಷ್ಟ ಜೀವಿಗಳ ಬದುಕು ಒಂದಿಷ್ಟು ಸಹನೀಯವಾದೀತು!  ]]>

‍ಲೇಖಕರು G

August 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: