ಮಾಯಾ ಏಂಜೆಲೊ

ಆರ್ ವಿಜಯರಾಘವನ್

ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು ವರ್ಷಗಳ ಸಿಗರೇಟು ಚಟದ ಬಗ್ಗೆ. ಅವರ 1969ರ ಲ್ಯಾಂಡ್‍ಮಾರ್ಕ್ ‘ಐ ನೋ ವೈ ಕೇಜ್ಡ್ ಬರ್ಡ್ ಸಿಂಗ್ಸ್’ 20ನೇ ಶತಮಾನದ ಕಪ್ಪು ಮಹಿಳೆಯರ ಮೊದಲ ಆತ್ಮಕಥೆ. ಅಪಾರ ಜನಮನ್ನಣೆ ಗಳಿಸಿದ ಈ ಕೃತಿ ಒಂದು ಹಾಡುಗಬ್ಬದಂತಿದೆ; ದಕ್ಷಿಣ ಜಿಮ್ ಕ್ರೋನಲ್ಲಿಯ ಆಕೆಯ ಬಾಲ್ಯವನ್ನು ಈ ಕೃತಿ ನಿರೂಪಿಸುತ್ತದೆ. ಆಕೆಯದೇ ‘ಐ ನೋ ವೈ ಕೇಜ್ಡ್ ಬರ್ಡ್ ಸಿಂಗ್ಸ್’ ಹೆಸರಿನ ಒಂದು ಕವಿತೆಯಂತೂ ಬಹಳ ಪ್ರಸಿದ್ಧವಾದದ್ದು.

ಆಕೆಯನ್ನು ಕುರಿತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ ಮಾತುಗಳಿವು: “ಇಂದು, ಮಿಚೆಲ್ ಮತ್ತು ನಾನು ನಮ್ಮ ಕಾಲದ ಪ್ರಕಾಶಮಾನ ದೀಪಗಳಲ್ಲಿ ಒಂದನ್ನು ನೆನಪಿಸಿಕೊಳ್ಳುವ ದಿಕ್ಕಿನಲ್ಲಿ ವಿಶ್ವದಾದ್ಯಂತದ ಲಕ್ಷಾಂತರ ಜನರನ್ನು ಸೇರಿಕೊಳ್ಳುತ್ತಿದ್ದೇವೆ. ಈಕೆ ಒಬ್ಬ ಅದ್ಭುತ ಬರಹಗಾರ್ತಿ, ಉತ್ಕಟ ಗೆಳತಿ ಮತ್ತು ನಿಜವಾಗಲೂ ಅದ್ಭುತ ಮಹಿಳೆ. ನನ್ನ ತಂಗಿಗೆ ಮಾಯಾ ಎಂದು ಹೆಸರಿಡಲು ಆಕೆ ನನ್ನ ತಾಯಿಗೆ ಪ್ರೇರಣೆ ನೀಡಿದಳು.”

ಆಕೆಯ ಆತ್ಮಕತೆ ಆರು ಸಂಪುಟಗಳಲ್ಲಿ ಪ್ರಕಟವಾಗಿವೆ. ಅವುಗಳು “Gather Together in My Name” (1974), “Singin’ and Swingin’ and Gettin’ Merry Like Christmas” (1976), “The Heart of a Woman” (1981), “All God’s Children Need Traveling Shoes” (1986) and “A Song Flung Up to Heaven” (2002). ಆವು ಆಕೆಯ ಕಾವ್ಯಕ್ಕಿಂತಲೂ ಹೆಚ್ಚು ಜನಪ್ರಿಯವಾಗಿವೆ ಎಂದು ಹೇಳಲಾಗಿದೆ.

ಮಾಯಾ ಬದುಕಿಗಾಗಿ ನಡೆಸಿದ ಹೋರಾಟದಲ್ಲಿ ನಿರ್ವಹಿಸಿದ ಪಾತ್ರಗಳು ಹಲವು: ನೃತ್ಯಗಾತಿ, ಕ್ಯಾಲಿಪ್ಸೋ ಗಾಯಕಿ, ಕಡೆಗೊಂದು ಕಡೆ ತಾನೇ ಹೇಳುವಂತೆ ಕೆಲ ಕಾಲ ಮೈಮಾರಿಕೊಂಡವಳು, ಸಾರ್ವಜನಿಕ ವಾಹನ ಕಂಡಕ್ಟರ್, ಸಿಂಗಲ್ ಮದರ್, ಕೈರೋ ನಗರದಲ್ಲಿ ದಿ ಅರಬ್ ಅಡ್ವೈಸರ್ ಮ್ಯಾಗಝಿನ್‍ನ ಸಂಪಾದಕಿ, ಘಾನಾದಲ್ಲಿ ಆಡಳಿತ ಸಹಾಯಕಿ.

ಜೇಮ್ಸ್ ಬಾಲ್ಡ್‍ವಿನ್, ರೆ ಮಾರ್ಟಿನ್ ಲೂಥರ್ ಕಿಂಗ್ ಜೂ ಮತ್ತು ಮಾಲ್ಕಮ್ ಎಕಸ್ ರ ಗೆಳತಿಯಾಗಿದ್ದವರು ಮಾಯಾ. ಬದುಕನ್ನು, ತನ್ನ ಜನರನ್ನು ಕುರಿತ ಮಾಯಾರ ಧೋರಣೆಯನ್ನು ಕೆಳಗಿನ ಸಾಲುಗಳು ಪ್ರತಿನಿಧಿಸುತ್ತವೆ:

ಒಂದು ಬಂಡೆ, ಒಂದು ನದಿ, ಒಂದು ಮರ
ಬಹಳ ಹಿಂದೆ ಅಗಲಿಹೋದ ಸಂತತಿಗಳಿಗೆ ಆಶ್ರಯ ನೀಡುತ್ತಿವೆ
ತಮ್ಮ ಬಾಳಪಯಣದ ಒಣ ಗುರುತುಗಳನ್ನು
ಈ ಭೂಗ್ರಹದ ನೆಲದ ಮೇಲುಳಿಸಿದ ಮಾಸ್ಟೋಡಾನ್, ಡೈನೋಸಾರ್‍ಗಳು
ಧಾವಿಸಿ ಬರುತ್ತಿದ್ದಅವುಗಳ ಸಾವಿನ ಮುನ್ಸೂಚನೆ
ಕತ್ತಲೆ ಕವಿಸುವ ಧೂಳು ಮತ್ತು ಕಾಲದಲ್ಲಿ ಕಳೆದುಹೋಗಿತ್ತು
ಆದರೆ ಇಂದು ಆ ಬಂಡೆ
ನಮಗೆ ಕೂಗಿ ಹೇಳುತ್ತಿದೆ, ಸ್ಪಷ್ಟವಾಗಿ, ಜೋರಾಗಿ
ಬನ್ನಿ, ನೀವೀಗ ನನ್ನ ಮೇಲೆ ನಿಲ್ಲಬಹುದು
ನಿಂತು ನಿಮ್ಮ ದೂರದ ಮುಂಬದುಕನ್ನು ಎದುರಿಸಿ ನಿಲ್ಲಬಹುದು
ಆದರೆ ನನ್ನ ನೆರಳಲ್ಲಿ ಆಶ್ರಯವನ್ನು ಮಾತ್ರ ಕೇಳದಿರಿ
ಅಡಗಿಕೊಳ್ಳಲು ಒಂದಿಷ್ಟೂ ಎಡೆ ನೀಡಲಾರೆ ನಾನು ನಿಮಗೆ.

ಆಕೆಯ ಉಳಿದ ಕವಿತಾ ಸಂಕಲನಗಳು “Just Give Me a Cool Drink of Water ‘fore I Diiie” (1971), “Oh Pray My Wings Are Gonna Fit Me Well” (1975), “And Still I Rise” (1978) ಮತ್ತು “Shaker, Why Don’t You Sing?” (1983).  ಆಕೆಯ ಗೀತೆಗಳ ಆಲ್ಬಂ “Miss Calypso,”  1957ರಲ್ಲಿ ಬಂತು.

ಆಕೆ ಕವಿಯಾಗಲು ಬಯಸಿದ್ದವಳು. ಆದರೆ ಆಕೆಯ ಕಾವ್ಯ ತುಂಡರಿಸಿದ ಸಾಲು ಗದ್ಯವೆಂದು ಹೇಳುವವರಿದ್ದಾರೆ. ಆ ಬಗೆಯ ಅಪಸ್ವರಗಳು ಆಕೆಯ ಆತ್ಮಕಥೆಗಳ ಬಗ್ಗೆ ಬರಲಿಲ್ಲ.

ಆಕೆ ತನ್ನ ಆತ್ಮಕಥೆ ಬರೆಯುವ ಉದ್ದೇಶವನ್ನೇನೂ ಇಟ್ಟುಕೊಂಡಿರಲಿಲ್ಲವಂತೆ. ಪ್ರಕಾಶನ ಸಂಸ್ಥೆ ರ್ಯಾಂಡಮ್ ಹೌಸ್‍ನ ಸಂಪಾದಕ ರಾಬರ್ಟ್ ಲೂಮಿಸ್ ಆಕೆಯನ್ನು ಆತ್ಮಕಥೆ ಬರೆಯುವಂತೆ ಕೇಳಿದ. ಇನ್ನೂ ನಾಟಕ ರಚನೆ, ಕಾವ್ಯ ಪ್ರಕಾರಗಳಲ್ಲಿ ದುಡಿಯುವ ಯೋಜನೆಯಿದ್ದ ಆಕೆ ಅದಕ್ಕೆ ಮುಂದಾಗಲಿಲ್ಲ. ಕೆಲಕಾಲದ ನಂತರ ಆಕೆಯನ್ನು ಪುನಃ ಸಂಪರ್ಕಿಸಿದ ಲೂಮಿಸ್ ‘ಆತ್ಮಕಥೆ ಬರೆಯದಿರುವ ನಿಮ್ಮ ಯೋಚನೆ ಸರಿಯಿದ್ದೀತು. ಏಕೆಂದರೆ ಆತ್ಮಕಥೆಯನ್ನು ಸಾಹಿತ್ಯವಾಗಿ ಬರೆಯುವುದು ಸಾಧ್ಯವಿಲ್ಲ ಅನ್ನಿಸುತ್ತದೆ. ಸಾಧ್ಯವೇ ಇಲ್ಲ ಎಂದರು.’ ಏಂಜೆಲೊ ಉತ್ತರಿಸಿದರು: ‘ನಾಳೆ ಪ್ರಾರಂಭಿಸುತ್ತೇನೆ.’ ಆಕೆಯ ಒಂದು ಕವಿತೆಯ ಅನುವಾದ ಇಲ್ಲಿದೆ. (ಪರಿಷ್ಕೃತ)

ತಾಯಿ ನನಗೊಂದು ಮಡಿಲು, ತೊಟ್ಟಿಲು
– Famous Family Poems

ಸತ್ಯ

ನಾನು ಸೃಷ್ಟಿಯಾಗಿದ್ದು ನಿನ್ನಲ್ಲೇ
ಇದೂ ಸತ್ಯ
ನೀನು ನನಗಾಗಿಯೇ ಸೃಷ್ಟಿಸಲ್ಪಟ್ಟಿದ್ದೀಯ
ನಾನು ನಿನ್ನ ಧ್ವನಿಯ ಮಾಲೀಕಳಾದೆ
ನನ್ನನ್ನು ಶಮನಗೊಳಿಸಲು ಅದರ ರೂಪ ಲಯಗಳನ್ನು ರೂಪಿಲಾಗಿದೆ
ನಿನ್ನ ತೋಳುಗಳನ್ನು ನನ್ನನ್ನು ಭದ್ರ ಹಿಡಿದಿಡಲು
ಜೋಲಿ ತೂಗಲು ತೊಟ್ಟಿಲಿನಂತೆ ಎರಕ ಹೊಯ್ಯಲಾಗಿದೆ
ನಿಮ್ಮ ದೇಹದ ಗಂಧ ಉಸಿರಾಡಲು ನನಗೆ ಪರಿಮಳದ ಗಾಳಿಯಾಗಿತ್ತು

ಅಮ್ಮ,
ಆ ಮೊದಲ, ಕಡುಪ್ರೀತಿಯ ದಿನಗಳಲ್ಲಿ
ನಾನು ಕನಸಲ್ಲೂ ಊಹಿಸಲಿಲ್ಲ
ನೀನು ನನ್ನನ್ನೂ ಒಳಗೊಂಡ
ದೊಡ್ಡ ಬದುಕನ್ನು ಹೊಂದಿದ್ದೀ ಎಂದು
ಏಕೆಂದರೆ ನನಗೆ ನನ್ನದೇ ಬದುಕೊಂದಿತ್ತು
ಅದು ನೀನು ಮಾತ್ರ

ಸಮಯ ನಿಧಾನವಾಗಿ ಸಂದುಹೋಯಿತು
ನಮ್ಮನ್ನು ವಿರುದ್ಧ ದಿಕ್ಕುಗಳ ಕಡೆಗೆ ಸೆಳೆಯಿತು
ನನಗೆ ಇಷ್ಟವಿರಲಿಲ್ಲ
ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಹೆದರಿದ್ದೆ
ನೀನು ನನ್ನನ್ನು ಶಾಶ್ವತವಾಗಿ ಬಿಟ್ಟು ಹೋಗುತ್ತೀ ಎಂದೂ
ನನ್ನ ಭಯವನ್ನು ನೋಡಿ ನೀನು ಮುಗುಳ್ನಕ್ಕೆ, ನುಡಿದೆ:
‘ನೀನು ನನ್ನ ಮಡಿಲಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ

ಆ ದಿನವನ್ನು ನೀನು ಎದುರಿಸಬೇಕಾಗುತ್ತದೆ
ಆಗ ನಾನು ಎಲ್ಲಿರಲು ಸಾಧ್ಯ?’
ನೀನು ಮತ್ತೆ ಮುಗುಳ್ನಕ್ಕೆ
ನಾನು ಹಾಗೆ ಮಾಡಲಿಲ್ಲ
ಸೂಚನೆಯನ್ನೇ ಕೊಡದೆ ನೀನು ನನ್ನನ್ನು ತೊರೆದು ಹೋದೆ
ಆದರೆ ನೀನು ತಡಮಾಡದೆ ಮರಳಿದ್ದೆ
ಮತ್ತೆ ಹೊರಟು ಹೋಗಲು ಹಿಂದಿರುಗಿದ್ದೆ
ನಾನು ಅದನ್ನು ಬೇಗನೆ ಒಪ್ಪಿಕೊಂಡೆ
ಆದರೆ ಪರಿಹಾರವು ನನ್ನೊಂದಿಗೆ ಸುಲಭವಾಗಿ ಉಳಿಯಲಿಲ್ಲ
ನೀನು ಮತ್ತೆ ಹೊರಟುಹೋದೆ, ಮತ್ತೆ ಮರಳಿದೆ
ಮತ್ತೆ ಹೊರಟುಹೋದೆ, ಮತ್ತೆ ಮರಳಿದೆ
ಪ್ರತಿ ಬಾರಿಯೂ ನೀನು ನನ್ನ ಜಗತ್ತನ್ನು ಸೇರಿಕೊಂಡಿದ್ದೆ
ಭರವಸೆ ತಂದಿದ್ದೆ
ನಿಧಾನವಾಗಿ ನಾನು ಆತ್ಮವಿಶ್ವಾಸ ಗಳಿಸಿಕೊಂಡೆ

ನೀನು ನನ್ನನ್ನು ತಿಳಿದಿದ್ದೀ ಎಂದು ನೀನು ಭಾವಿಸಿದೆ
ಆದರೆ ನಾನು ನಿನ್ನ ಅರಿತಿದ್ದೆ
ನೀನು ನನ್ನನ್ನು ಕಾವಲುಗಣ್ಣಲ್ಲಿ
ನೋಡುತ್ತಿರುವುದಾಗಿ ಭಾವಿಸಿದ್ದೆ
ಆದರೆ ನಾನು ನಿನ್ನನ್ನು ನನ್ನ ದೃಷ್ಟಿಯಲ್ಲಿ
ಗಟ್ಟಿಗೆ ಕವುಚಿ ಹಿಡಿದಿದ್ದೇನೆ
ಪ್ರತಿ ಕ್ಷಣವನ್ನು ದಾಖಲಿಸಿಕೊಳ್ಳುತ್ತಾ
ನಿನ್ನ ನಗುವನ್ನು ನೆನಪಿಟ್ಟುಕೊಳ್ಳುತ್ತಾ
ನಿನ್ನ ಕೋಪಗಳ ಕಾರಣಗಳನ್ನು ಪತ್ತೆ ಹಚ್ಚುತ್ತಾ
ನಿನ್ನ ಅನುಪಸ್ಥಿತಿಯಲ್ಲಿ ನಾನು
ಇವುಗಳ ರಿಹರ್ಸಲ್ ಮಾಡಿದ್ದೇನೆ
ತಂಗಾಳಿಯ ಕುರಿತು ನೀನು ಹಾಡುವ ರೀತಿ
ಒಂದು ದುಃಖದ ಬಿಕ್ಕು ನಿನ್ನ ಹಾಡಿನ ಮೂಲದಲ್ಲಿತ್ತು

ನೀನು ಬೆಳಕಿಗೆ ತಲೆ ಒಡ್ಡಿದ ರೀತಿಯಿಂದ
ಬೆಳಕು ನಿನ್ನ ಮುಖವನ್ನು ನೇವರಿಸುತ್ತದೆ
ನೀನು ಬೆರಳುಗಳನ್ನು ನನ್ನ ಕೈಮೇಲೆ ಹಾಕಿದಾಗ
ನಿಮ್ಮ ಕೈ ನನ್ನ ತೋಳಿನ ಮೇಲೆ ಹಾಕಿದಾಗ
ನಾನು ಆರೋಗ್ಯವಂತಳಾಗಿರುವ, ಶಕ್ತಿ ಮತ್ತು ಅದೃಷ್ಟ
ಹೊಂದಿರುವ ಭಾವವೊಂದು ತುಂಬಿ
ಆಶೀರ್ವಾದದಂತೆ ತೋರಿದೆ

ನೀನು ಯಾವಾಗಲೂ ನನಗೆ
ಸಂತೋಷದ ಹೃದಯವಾಗಿದ್ದೆ
ಸಂತೋಷದ ಸವಿದಿನಿಸ ತರುವುದು
ನೀನು. ಅವು ಬಿಚ್ಚುನಗುವಿನ ಸಿಹಿತಿಂಡಿಗಳು

ನಿನಗೆ ಏನೆಂದೂ ತಿಳಿದಿಲ್ಲದ ವರ್ಷಗಳಲ್ಲಿ
ನಾನು ಎಲ್ಲವನ್ನೂ ತಿಳಿದಿದ್ದೆ. ಆದರೂ ನಾನು
ನಿನ್ನನ್ನು ಇನ್ನೂ ಪ್ರೀತಿಸುತ್ತಿದ್ದೆ
ಕೇವಲ ಪ್ರೋತ್ಸಾಹದ ನಡೆಯಾಗಿ
ನನ್ನ ಹದಿಹರೆಯದ ಬುದ್ಧಿವಂತಿಕೆಯ
ಎತ್ತರದ ಕೋಡುಗಲ್ಲಿಂದ
ನನಗೂ ವಯಸ್ಸಾಯಿತು
ನಾನು ಬೆರಗಾದೆ. ನೀನು ಎಷ್ಟು ಜ್ಞಾನವನ್ನು
ಪಡೆದುಕೊಂಡಿದ್ದೆ, ಅದೆಷ್ಟು ತ್ವರಿತವಾಗಿ

ಅಮ್ಮ, ನಾನು ಈಗ ಸಾಕಷ್ಟು ಕಲಿತಿದ್ದೇನೆ
ನಾನು ನಿಜವಾಗಿಯೂ ಏನನ್ನೂ ಕಲಿತಿಲ್ಲ
ಎಂಬುದನ್ನು ತಿಳಿಯಲು
ಈ ದಿನ ತಾಯಂದಿರನ್ನು ಗೌರವಿಸುವ ಈ ದಿನ
ನಾನು ನಿನಗೆ ಧನ್ಯವಾದ ಹೇಳುತ್ತೇನೆ
ನನ್ನಲ್ಲಿನ ಎಲ್ಲ ಸ್ವಾರ್ಥ, ಅಜ್ಞಾನ ಮತ್ತು ಅಪಹಾಸ್ಯದ ಗುಣ
ಮುರಿದ ಗೊಂಬೆಯಂತೆ ನನ್ನನ್ನು ತ್ಯಜಿಸಿಬಿಡಲು
ನಿನ್ನ ಅಣಿಗೊಳಿಸಲಿಲ್ಲ
ನಾನು ನಿನ್ನ ಒಲವಿನ ಕೃಪೆಗೆ ಅನರ್ಹಳಾಗಿದ್ದೆ

ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ
ನೀವು ಇನ್ನೂ ನನ್ನಲ್ಲಿ ಏನನ್ನಾದರೂ ಕಾಣುತ್ತೀರಿ
ಮೆಚ್ಚಲು, ಪ್ರೀತಿಸಲು

ನಿನಗೆ ಧನ್ಯವಾದಗಳು, ತಾಯಿ
ನಾನು ನಿನ್ನನ್ನು ಪ್ರೀತಿಸುತ್ತೇನೆ

‍ಲೇಖಕರು Avadhi

November 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹುಲಿಹೊಂಡದ ಹುಲಿಯಪ್ಪ ನೆನಪು

ಹುಲಿಹೊಂಡದ ಹುಲಿಯಪ್ಪ ನೆನಪು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ...

‘ತ್ರಯಸ್ಥ’ ಎಂಬ ನೆನಪಿನ ಓಣಿ

‘ತ್ರಯಸ್ಥ’ ಎಂಬ ನೆನಪಿನ ಓಣಿ

ವಿಜಯಭಾಸ್ಕರರೆಡ್ಡಿ / ಕಲಬುರಗಿ ಕಮಲಿಯ ನೀಳ ನೋಟ, ಅವಳ ಸನ್ನೆಯ ಪಿಸುಮಾತು, ಒಲವಿನ ಉಸಿರು ಹೀಗೆ ಅವಳ ನಾನಾ ಬಗೆಯ ಮಗ್ಗಲುಗಳನ್ನ ಹೇಳತ್ತಾ ರಂಗದ...

೧ ಪ್ರತಿಕ್ರಿಯೆ

  1. ಪಾರ್ಥಸಾರಥಿ ಕೆ ಎಸ್

    Maya Angelou ಹಾಗೂ ಆಫ್ರಿಕನ್ ಸಾಹಿತ್ಯ ಕುರಿತು
    ಶ್ರೀಮತಿ ಎಂ ಆರ್ ಕಮಲ
    ತುಂಬ ಕೆಲಸ ಮಾಡಿದಾರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: