ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ

ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ ವಿಡಂಬನೆಗಳಂತೂ ಸುಪ್ರಸಿದ್ಧ. ಸಿಟ್ಟು, ತಾತ್ಸಾರ, ಹಾಸ್ಯ, ಲೇವಡಿ, ಕಚಗುಳಿಗಳನ್ನೆಲ್ಲ ಕೂಡಿಸಿದರೆ ಒಂದು ಅದ್ಭುತ ಭಾಷೆ ಹುಟ್ಟುತ್ತದೆ. ಉದಾಹರಣೆ ಬೇಕೆಂದರೆ ಈ ನೆಲದ ಪಾಪು, ಚಂಪಾ, ಮಹಾದೇವ ಬಣಕಾರ ಇತ್ತೀಚಿನ ಕೋರಗಲ್ ವಿರೂಪಾಕ್ಷ , ವಿಜಯಕಾಂತ ಪಾಟೀಲ ಯಾರನ್ನಾದರೂ ಓದಿದರೆ ಸಾಕು ನಾ ಬರೆದ ಖದರು ಅಲ್ಲಿ ಸಿಗುತ್ತವೆ.

ಹಾವೇರಿಯಾಂವ್ ಇಲ್ಲಿಯ – ಹೊಸ ಪ್ರತಿಭೆ ಮಾಲತೇಶ ಅಂಗೂರ ಎಂಬ ಲೇಖಕ ಪತ್ರಕರ್ತರ ಅಂಕಣ ಬರಹದ ಪುಸ್ತಕ. 2018- 19 ಒಂದು ವರ್ಷದ ಕಾಲ ವಾರ ವಾರದ ಅಂಕಣ ಬರಹಗಳದ್ದು. ಈ ಹಿಂದೆ ನವಿಲು ಗರಿ ಎಂಬ ಅಂಕಣ ಬರಹದ ಪುಸ್ತಕ ಪ್ರಕಟಿಸಿದ್ದರು. 44 ವಾರಗಳ ಕಾಲ ಬರೆದ ಹಾವೇರಿಯಾಂವ್ ರಾಜಕೀಯ ವಿಡಂಬನೆಯ ಕಾಲಮ್ಮಿನ ಬರಹ.

ಗೇಲಿ, ಕಚಗುಳಿ ತಿವಿತ ವಿಷಯವಿಲ್ಲದ ಸಮಾಜ ವಿಡಂಬನೆಯ ಅಂಕು ಡೊಂಕುಗಳನ್ನು ಜನರೆದರು ತೆರೆದಿಡಲು ತಮ್ಮದೇಯಾದ ಅನನ್ಯ ಶೈಲಿಯನ್ನು ಅಂಗೂರ ಕಂಡುಕೊಂಡಿದ್ದಾರೆ. ವಿಡಂಬನೆಯಾದರೂ ಅದಕ್ಕೊಂದು ಬನಿ ಕಂಡುಕೊಡಿದ್ದಾರೆ. ಅವರದು ಕೇವಲ ಉತ್ತರ ಕರ್ನಾಟಕದ ಗಂಡು ಭಾಷೆಯಂದು ಹೇಳಲಾಗದು.

ಹಾವೇರಿ ನೆಲದ ಮಣ್ಣು ಬಗೆದು, ತೆಗೆದು ಅಲ್ಲಿನ ನಾಣ್ಣುಡಿಯ ಆಡು ಮಾತುಗಳನ್ನು ಬಣ್ಣ ಬದಲಾಯಿಸುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಢೋಂಗಿ ಸನ್ಯಾಸಿಗಳು, ನಕಲಿ ಹೋರಾಟಗಾರರು, ಸಾಹಿತಿ ವೇಷದ ಪುಡಾರಿಗಳು – ಹೀಗೆ ಎಲ್ಲ ಬಗೆಯ ಜನರಿಗೆ ಬಿಸಿ ಮುಟ್ಟಿಸುವ ರೀತಿಯೇ ಅಪರೂಪದ್ದು. ಹೀಗೆಂದು ಹಿರಿಯ ಪತ್ರಕರ್ತ ಟಿ ಕೆ ತ್ಯಾಗರಾಜ ಮುನ್ನುಡಿಯಲ್ಲಿ ಹೇಳಿದ್ದಾರೆ.

ಸದಾ ಕ್ಯಾಮರಾ ಬೆನ್ನಿಗೇರಿಸಿ ಪ್ರಾಣಿ ಪಕ್ಷಿಗಳ ಬೆನ್ನಟ್ಟಿ, ಕೆರೆ ಗದ್ದೆ ಕಾಡು ಮೇಡು ತಿರುಗುವ ಮಾಲತೇಶ ಅಂಗೂರ ಬಹಳ ಗಂಭೀರ ಪರಿಸರ ಕಾಳಜಿಯ ಲೇಖನಗಳನ್ನೂ ಬರೆಯುತ್ತಾರೆ. ಹಾವೇರಿಯಾಂವ್ ಕೃತಿ ಬೇರೆ ರೀತಿಯದ್ದೆ. ಹಾದಿ ಬೀದಿಯಲ್ಲಿ ನಡೆಯುವ ರಾಜಕೀಯ ಹುಚ್ಚಾಟಗಳ ನೋಡಿ ಬೇಸತ್ತು ಬಸವ, ಕಾಕಾ ಮುಂತಾದ ಪಾತ್ರಗಳ ಮೂಲಕ ಮಾತಾಡುವ ಅಂಕಣವಿದೆ. ಅಂಕಣದ ಹೆಸರೇ ಕಾಕಾ ಕಾಲಂ. ಮಾಲತೇಶ ಇಲ್ಲಿಯ ಕೌರವ – ಎಂಬ ಜಿಲ್ಲಾ ದೈನಿಕದ ಸ್ಥಾನಿಕದ ಸಂಪಾದಕರು.

ಇವು ಕೇವಲ ರಾಜಕೀಯ ಮುಖವಾಡ ಕಿತ್ತುವ ಮೇಲ್ಪದರ ಲೇಖನಗಳಲ್ಲ. ಇವುಗಳ ಆಳದಲ್ಲಿ ಒಂದು ತಾತ್ವಿಕ ಬದ್ಧತೆ, ಸಾಮಾಜಿಕ ಕಾಳಜಿ ಹಾಗೂ ಜೀವ ಪರ ಸೊಲ್ಲೂ ಇವೆ.

ಬಸವ ಜಯಂತಿ ಅಂತ ಬೆಳಗ್ಗೆ ನೀರು ಹೊಯ್ಯಕೊಂಡು ಬಸವೇಶ್ವರ ಸರ್ಕಲ್ ಕಡಿಗೆ ಹೋದ್ರಾತು ಅಂತ ತಯಾರಾಗಿದ್ದೆ. ಅಷ್ಟರಾಗ ಬಸವ ಭಕ್ತರು, ಮಕ್ಕಳು ಬಸವಣ್ಣನವರ ಫೋಟೊ ಹಿಡಕೊಂಡು ಪಾಹಿಮಾಮ್ ಪಾಹಿ ಬಸವ, ಬಸವ ಪಾಹಿಮಾಮ್, ಕಳ ಬೇಡ ಕೊಲ ಬೇಡ, ಇವನಾರವ ಇವನಾರವ ಅಂತ ವಚನ ಹೇಳ್ತಾ ಬರ್ತಿದ್ದರು. ಇತ್ಲಾಗ ಅಗ್ರಹಾರದ ಮುಂದ ಇಟ್ಟಿದ್ದ ಕಸದ ಬಾನಿ ಹತ್ರ ನಾಲ್ಕಾರು ಮಕ್ಕಳು ಅಲ್ಲಿದ್ದ ನಾಯಿ ಹಂದಿನ್ನ ಕಲ್ಲು ತಗೋಡು ಹೊಡದು ಓಡಿಸಿ, ಕಸದ ಬಾನಿಗೆ ಇಳಿದು ಖಾಲಿ ಬಾಟ್ಲಿ ಆರ್ಸಿಕೊಳ್ತಾ ಇದ್ರು…

ಕಟು ವಾಸ್ತವದ ನಡುವೆ ಇಂತಹದೊಂದು ಅಮಾನವೀಯ ಚಿತ್ರ ನೋಡಿ ಜೀವಪರ ತುಡಿಯುವ ಮೇಲಿನ ನುಡಿಗಳು ಎದೆಗೆ ನಾಟದೆ ಇರಲಾರವು. ಇದನ್ನು ದಾಟಿ ಕೊನೆಗೊಂದು ಮಾತು ಬರೆಯುತ್ತಾರೆ. ದೇವ್ರಾಗಬಹುದು ಆದ್ರ ಬಸವಣ್ಣಾಗಾಕ ಸಾಧ್ಯ ಇಲ್ಲ. ಇಂತಹ ಅನೇಕ ಮಾತುಗಳು ಚುಚ್ಚಿ ಹೆಚ್ಚರಿಸುತ್ತವೆ. ಹರಿದು ಹೋದ ಮನಷ್ಯ ಚಿತ್ರಗಳನ್ನು ಕೂಡಿಸುವ ತಹ ತಹ ಕೂಡ ಈ ಅಂಕಣ ಕೆಳಗೆ ಉರಿಯಿಟ್ಟಿದೆ.

ಹಸಿದ ಹೊಟ್ಟೆಗಳು ಜಪಿಸಲಾರವು ಹೆಚ್ಚು ದಿನ ರಾಮ ನಾಮ. ಓಪನ್ ಬರೋಮಟ ಊಟಿಲ್ಲ, ಕ್ಲೋಸ್ ಬರೋಮಟ ನಿದ್ದಿಲ್ಲ, ತಂತಿ ಮಾತು ಸಿಬಿಐ ಗಾದ್ರ, ಕಂತಿ ಕಂತಿ ಮಾತು ಯಾವ ಐ ಗೆ? ಉಂಡ್ ಉರಿಲೇ ಮೂಳಾ ಅಂದ್ರ, ಇಲ್ಲಾ ನಾ ಉಪಾಸನ ಉರ್ಯಾಂವ್, ಸರಕಾರಿ ಆಸ್ಪತ್ರ್ಯಾಗ ಬಿಲ್ಡಿಂಗ ಇದ್ರ ಕಾಟಾ ಇರೋದಿಲ್ಲ, ಕಾಟಾ ಇದ್ರ ಔಷಧಿ ಇರೋದಿಲ್ಲ, ಈ ಮೂರು ಇದ್ರ ಡಾಕ್ಟರ್ ಇರೋದಿಲ್ಲ, ಗಾಳಿ ಬಿಟ್ಟಾಗ ತೂರಿಕೋ, ಇಲೆಕ್ಷನ್ ಬಂದಾಗ ಮಾರಿಕೊ, ಗೌಡ್ರು ಸಕ್ರೀ ರಾಜಕೀಯದಿಂದ ನಿವೃತ್ತರಾದರೂ ಬೆಲ್ಲದ ರಾಜಕೀಯ ಬಿಡಾಂಗಿಲ್ಲ – ಇಂತಹ ಅನೇಕ ನಾಟು ನುಡಿಗಳು ಬೆಚ್ಚಿ ಬೀಳಿಸುತ್ತವೆ. ಇವೆಲ್ಲ ಹಾವೇರಿಯಾಂವ್ ಪುಸ್ತಕದ ಶೀರ್ಷಿಕೆ ಸಾಲುಗಳು. 232 ಪ್ರತಿ ಪುಟಗಳಲ್ಲಿ ಇದೇ ರುಚಿ ಇದೇ ಖದರು ಓದ ಸಿಗುತ್ತದೆ.

ಹಾವೇರಿಯ ಜನರ ಮಾತುಗಳು ಇಲ್ಲಿ ಭಾಷೆಯಾಗಿ ಹರಳು ಗಟ್ಟಿ, ಮೊನಚು ಪಡೆದಿವೆ. ಹಾವೇರಿ ನೆಲದ ಭಾಷಾ ರುಚಿ ಅನುಭವಿಸಬೇಕಾದರೆ, ಹಾವೇರಿಯಾಂವ್ ಓದಲೇ ಬೇಕು. ನಾಮದೇವ ಕಾಗದಗಾರರ ಮುಖಪುಟ ಚಿತ್ರ, ಒಳವಿನ್ಯಾಸಗಳಲ್ಲಿ ತೆಗೆದ ರೇಖಾ ಚಿತ್ರಗಳು ಸೆಳೆಯುತ್ತವೆ.

‍ಲೇಖಕರು Avadhi

January 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಯಲು ಸೀಮೆಯ ʼಒಕ್ಕಲ ಒನಪುʼ

ಬಯಲು ಸೀಮೆಯ ʼಒಕ್ಕಲ ಒನಪುʼ

ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್‌ ಗಳಲ್ಲಿ ಖತಂ! ಓದಿದ ಎಷ್ಟೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This