
ಮಾಲಾ ಅಕ್ಕಿಶೆಟ್ಟಿ
ನೀಲಿ ನೀಲಿ ನೀಲಿ
ಸಮುದ್ರದಂತೆ ಆಕಾಶ
ಸಂಜೆ ಇಳಿ ಹೊತ್ತಲಿ
ಚಲಿಸುವ ಬೆಣ್ಣೆಯಂಥ
ಮೋಡಗಳು ಎಲ್ಲೆಲ್ಲೂ
ಸ್ಪಟಿಕದ ಸ್ಪಷ್ಟತೆ ಆಕಾಶದಲ್ಲೂ
ದೇಹದಲ್ಲೂ ಮನದಲ್ಲೂ
ಅಲ್ಲೊಂದು ಹಕ್ಕಿಗಳ
ಗುಂಪು ಹಾರುತ್ತ ಹಾರುತ್ತ
ಪೂರ್ವದ ಕಡೆಗೆ ಮತ್ತೆ ಅದೇ
ದಿಕ್ಕಿನಿಂದ ಬಹುಶಃ ನಾಳೆಯ
ಹಾರಾಟ, ಛೇ! ಒಂದು ಕಪ್ಪು
ಬಿಳುಪಿನ ಹಕ್ಕಿ ಹಿಂದುಳಿದೇ
ಬಿಟ್ಟಿತು ಗುಂಪನ್ನು ತಪ್ಪಿಸಿಕೊಂಡ
ಆಡಿನ ಮರಿಯಂತೆ, ಕರುವಿನಂತೆ
ಸೋತ ರೆಕ್ಕೆಗಳ ಕಾರಣ

ಗುಂಪಿನಲ್ಲೇ ಇರಬೇಕು
ಪ್ರಯತ್ನ ಸದಾ ಒಂಟಿ ಹಕ್ಕಿ
ಹೊಡೆತದ ಮೇಲೆ ಹೊಡೆತ
ಬಿಟ್ಟ ಬಿರುಗಾಳಿ, ಸುರಿದ ದೊಡ್ಡ
ಹನಿ ಮಳೆ, ದೇಹ ಸುಡುವ
ಉರಿ ಬಿಸಿಲು, ಕಿತ್ತೇ ಬಿಟ್ಟವು
ಚೆಂದದ ಹಕ್ಕಿಯ ರೆಕ್ಕೆಗಳ
ಸ್ತಬ್ಧಗೊಂಡ ಚಲಿಸುವ ಮೋಡಗಳು
ಅಂತಿಮ ಕರ್ತವ್ಯಗಳು
ಹೂತ ರೆಕ್ಕೆಗಳು ಮಣ್ಣಲ್ಲಿ
ಆತ್ಮೀಯ ಕಣ್ಣೀರ ನದಿ, ಹೂಗಳ ರಾಶಿ
ನೈವೇದ್ಯಕ್ಕಿಟ್ಟ ಯಾವ ರುಚಿಗಳೂ
ಸಂತೈಸಲ್ಲ ರೆಕ್ಕೆಯ ರೋಧಿಸುವ
ಮತ್ತೆ ಮತ್ತೆ ಬಿಕ್ಕುವ ಆತ್ಮವ
“ರೆಕ್ಕೆ ಸುಟ್ಟ ಹಕ್ಕಿ”
ಕವಿತೆ ಅದ್ಭತವಾಗಿದೆ.
ಬದುಕಿನ ಹೋರಾಟದಲ್ಲಿ ಸಿಕ್ಕು ಅನೇಕ ಏಳು ಬೀಳುಗಳನ್ನು ಕಂಡು ಕೊನೆಗೆ ಯಾವುದೂ ಶಾಶ್ವತವಲ್ಲ ಅನ್ನುವ ಏಕಮಾತ್ರ ಮೌಲ್ಯವನ್ನು ಕವಿತೆ ಧ್ವನಿಸಿದೆ.
ವಾಚ್ಯಾರ್ಥದಲ್ಲಿ ನಿಮ್ಮ ಕವಿತೆ ತೀರ ಸರಳ ಅನ್ನಿಸಿದರೂ ಆ ಕವಿತೆಯ ಒಳಹೊಕ್ಕಾಗ ವೇದ್ಯವಾಗುವ ಅಂಶಗಳೆ ಬೇರೆ.
ಕೆಲವು ಸಲ ನಿಮ್ಮ ಕವಿತೆಗಳನ್ನು ಎರಡೆರಡು ಬಾರಿ ಓದಿ ಅರ್ಥೈಸಿಕೊಳ್ಳಲು ನಾನು ಪ್ರಯತ್ನಿಸಿದ್ದಿದೆ.
ಒಂದು ರೀತಿಯಲ್ಲಿ ಬೇಂದ್ರೆ ಅವರು ಹೇಳುವ ಹಾಗೆ
“ಕವಿತೆ ಅನ್ನುವುದು ಅಮೃತಕ್ಕೆ ಹಾರುವ ಗರುಡ”
ಅದು ಸುಲಭದಲ್ಲಿ ಅರ್ಥವಾಗಲಾರದು.
ಕವಿತೆಯೇ ನಾವಾದಾಗ ಮಾತ್ರ ಅದರ ರಸಸ್ವಾದನೆ ಸಾಧ್ಯ.
ಅಭಿನಂದನೆಗಳು ಮೆಡಮ್.
ಅವಧಿಗೂ ಕೃತಜ್ಞತೆ.
Tq Avadhi and G N Mohan Sir
Tq ಇಂಚಲ ಸರ್ …