ಮಾವ ಹೇಗಿದ್ದೀರ?

 
malaಮಾವ ಹೇಗಿದ್ದೀರಾ…? ಎಂದು ತುಂಬು ಕಕ್ಕುಲಾತಿಯಿಂದ ಕೇಳುತ್ತಿರುವವರು  ಮಾಲಾ.
ಸುತ್ತಿ ಬಳಸಿ ಅಲ್ಲಿಗೇ ಬರುವುದಾದರೆ ನಮ್ಮ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕವರ್ಧನರ ತಮ್ಮನ ಹೆಂಡತಿ. ಆರ್ಥಾತ್ ಜಿ ಟಿ ನಾರಾಯಣರಾಯರ ಸೊಸೆ.
ಮಾಲಾ ಅವರೇ ತಮ್ಮನ್ನು ಪರಿಚಯಿಸಿಕೊಳ್ಳುವುದು ಹೀಗೆ- ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಹಳ್ಳಿ ಪರಿಸರದಲ್ಲಿ ನನ್ನ ಜನನ. ಪ್ರಪಂಚದಲ್ಲಿ ಜನ ಬೆಲೆ ಕೊಡುವ ವಿದ್ಯಾಭ್ಯಾಸ ಪಿ.ಯು.ಸಿವರೆಗೆ. ಬಾಲ್ಯದಿಂದ ೧೮ ವರ್ಷ ಹಳ್ಳಿಯಲ್ಲಿ ನೆಲೆಸಿ ಮದುವೆಯಾಗಿ ಬಂದು ಮೈಸೂರು ಎಂಬ ನಗರದಲ್ಲಿ ತಳ ಊರಿ ಸುಮಾರು ೨೧ ವರ್ಷವಾಯುತು. ಕಥೆ, ಹಾಸ್ಯಲೇಖನ, ಮಕ್ಕಳ ಕಥೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯ ಓದುವ ಹವ್ಯಾಸ. ‘ಅಕ್ಷಮಾಲಾ’ ಮಕ್ಕಳ ನೀತಿಕಥಾ ಸಂಕಲನ (೧೯೯೮) ಪ್ರಕಟವಾಗಿದೆ. ಸದ್ಯ ಅತ್ತೆ, ಗಂಡ, ಮಗಳೊಂದಿಗೆ ಸಂತೃಪ್ತ ಜೀವನ.
ಒಂದು ಹೆಣ್ಣು ಜೀವ ತಾನು ಬಾಳದೀಪದಂತೆ ಕಂಡ ಹಿರಿಯರ ಕೊರತೆಯನ್ನು ಅನುಭವಿಸುತ್ತಿರುವ ಪರಿ ಇಲ್ಲಿದೆ-


gtn-03preview
ಮಾವ ಹೇಗಿದ್ದೀರ? ನಾವೆಲ್ಲ ಚೆನ್ನಾಗಿದ್ದೇವೆ. ನೀವು ಈ ಲೋಕ ತ್ಯಜಿಸಿ ದೀರ್ಘ ೫ ತಿಂಗಳೇ ಕಳೆದುವು. ಈ ಹಿಂದೆಯೇ ನಿಮಗೆ ಪತ್ರ ಬರೆದು ಇಲ್ಲಿಯ ಆಗುಹೋಗುಗಳನ್ನು ತಿಳಿಸಬೇಕೆಂದು ಯೋಚಿಸಿದ್ದೆ. ಆದರೆ ನನ್ನ ಸೋಮಾರಿತನದಿಂದ ಅದು  ಇಷ್ಟು ಮುಂದೆ ಹೋಯಿತು. ನೀವು ಹೋಗಿ ೧೧ನೇ ದಿನ ನಾವು ನಿಮಗೆ ಪಿತೃಸ್ಮೃತಿ ಎಂದು ಒಂದು ಕಾರ್ಯಕ್ರಮ ಮನೆಯಲ್ಲಿ ಹಮ್ಮಿಕೊಂಡಿದ್ದೆವು. ನಿಮ್ಮ ಸ್ನೇಹಿತರಾರಿಗೂ ಹೇಳಲಿಲ್ಲ. ಹತ್ತಿರದ ಸಂಬಂಧಿಗಳಿಗೆ ಮಾತ್ರ ಹೇಳಿದ್ದು. ನಿಮ್ಮ ದೃಷ್ಟಿಯ ಸಂಬಂಧಿಗಳಲ್ಲ, ನಮ್ಮ ದೃಷ್ಟಿಯಲ್ಲಿ ಕಂಡವರು. ಆ ಕಾರ್ಯಕ್ರಮ ಮಾಡುವುದು ನಿಮಗೆ ಸರಿ ಬರುವುದಿಲ್ಲ ಎಂದು ಗೊತ್ತು. ಆದರೆ ನೀವೇ ಹೇಳುತ್ತಿದ್ದ ಮಾತು `ಗೃಹಶಾಂತಿಗೋಸ್ಕರ ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತೆ’ ಎಂದು. ಅದನ್ನು ನಾವು ನೆನಪಿಟ್ಟುಕೊಂಡಿದ್ದೆವು! ಹಾಗಾಗಿ ಮಾಡಬೇಕಾಯಿತು. ಬೇರೆಯವರ ಭಾವನೆಗೂ ಬೆಲೆಕೊಡಬೇಕೆಂದು ನೀವು ಸದಾ ಹೇಳುತ್ತಿದ್ದ ಮಾತು. ಅದರಲ್ಲಿ ನಿಮ್ಮದೇ ಆದರ್ಶ ನಮಗೆ. ಅದರಂತೆಯೇ ನಡೆದುಕೊಳ್ಳುತ್ತೇವೆ ಮುಂದೆಯೂ ಕೂಡ. ನಿಮ್ಮ ೨ನೇ ಸುಪುತ್ರ ಪರದೇಶದಿಂದ ಬಂದು ನಿಮ್ಮ ಬಗ್ಗೆ ಹಳೆಯದನ್ನೆಲ್ಲ ನೆನಪುಮಾಡಿಕೊಂಡರು. ಒಂದುವಾರವಿದ್ದು, ನೆನಪನ್ನು ಕಟ್ಟಿಕೊಂಡು ಪರದೇಶಕ್ಕೆ ಹೋದರು. ಅಲ್ಲಿ ಮೊಮ್ಮಕ್ಕಳು ಭಾರೀ ಬೇಜಾರುಮಾಡಿಕೊಂಡರಂತೆ ಅಜ್ಜನನ್ನು ನೋಡಲಾಗಲೇ ಇಲ್ಲ ಎಂದು.
ನಿಮಗೆ ಬರುತ್ತಿದ್ದ ಪಿಂಚಣಿ ಹಣ ಈಗ ಯಾವ ತಕರಾರು ಇಲ್ಲದೆ ಒಂದು ತಿಂಗಳಿನೊಳಗೆ ಅತ್ತೆಯ ಹೆಸರಿಗೆ ವರ್ಗಾವಣೆಯಾಗಿದೆ. ಅತ್ತೆಯ ಹಳೆ ಕಾಯಿಲೆ ಮೈ ಕೈ ನೋವು ಬಿಟ್ಟರೆ ಚೆನ್ನಾಗಿದ್ದಾರೆ.  ಈಗ ಅತ್ತೆಗೆ ಪಿಂಚಣಿ ಸರಿಯಾಗಿ ಬರುತ್ತಿರುತ್ತದೆ. ಪ್ರತೀ ತಿಂಗಳು ನೀವು ಒಂದನೇ ತಾರೀಕು ಸೆಲ್ಪ್ ಚೆಕ್ ಬರೆದು ಪಾಸ್ ಪುಸ್ತಕ ಕೈಗಿತ್ತು ಹಣ ತರಲು ಹೇಳುತ್ತಿದ್ದುದು ನೆನಪಾಗುತ್ತಿದೆ. ಆ ಕೂಡಲೇ  ಪಾಸ್ ಪುಸ್ತಕ ಎಂಟ್ರಿಯಾಗಬೇಕು ನಿಮಗೆ. ಅಷ್ಟು ಕರಾರುವಾಕ್. ಆ ಕೂಡಲೇ ಹಣ ತಂದಿಲ್ಲ ಎಂದರೆ ಏನೋ ಕಸಿವಿಸಿ ನಿಮಗೆ. ಎಷ್ಟೋ ಸಲ ನಾನು ಆ ಗಳಿಗೆಯಲ್ಲಿ ನನ್ನ ಕೈಯಲ್ಲಿದ್ದ ಹಣ ನಿಮಗೆ ಕೊಟ್ಟು ಬಿಡುತ್ತಿದ್ದೆ. ಆಗ ನಿಮಗೆ ಗೊತ್ತಾಗುತ್ತಿತ್ತು. ಬ್ಯಾಂಕಿಗೆ ಹೋಗಲಿಲ್ಲ ಇದು ಸಾಲ ಎಂದು ನಗುತ್ತ ನೀವು ಹೇಳುತ್ತಿದ್ದಿರಿ. ನಾನು ನನಗೆ ಸಮಯ ಆದಾಗ ಹೋಗಿ ದುಡ್ಡು ತರುತ್ತಿದ್ದೆ.  ಈಗಲೂ ಅತ್ತೆಯ ಪಾಸ್ಪುಸ್ತಕ ಎಂಟ್ರಿಗೆ, ಹಾಗೂ ಹಣ ತರಲು ಬ್ಯಾಂಕಿಗೆ ಹೋಗುತ್ತಿರುತ್ತೇನೆ. ನಿಮ್ಮ ಸ್ವಭಾವ ಹೇಗೆಂದರೆ ಅದು ಯಾವ ಕೆಲಸವಾದರೂ ಕೂಡಲೇ ಆಗಬೇಕು. ನಿಮ್ಮ ವೇಗಕ್ಕೆ ಸ್ಪಂದಿಸುವಷ್ಟು ಚುರುಕು ನನಗಿರಲಿಲ್ಲ. ನಿಮ್ಮ ವೇಗವನ್ನು ಅರ್ಥ ಮಾಡಿಕೊಳ್ಳಲು ನೀವಿದ್ದಾಗ ನಾನು ವಿಫಲಗೊಂಡಿದ್ದೆ ಎನ್ನಬಹುದು. ಸಮಯವದು ಬಹು ಅಮೂಲ್ಯ. ಅದು ಕಳೆದಮೇಲೆ ಮತ್ತೆ ಬೇಕೆಂದರೂ ಎಂದೆಂದಿಗೂ ಹಿಂದೆ ಬರುವುದಿಲ್ಲ. ಎಂಬುದನ್ನು ನಾವು ಮರೆಯುತ್ತೇವೆ. ಆದರೆ ನೀವು ಮರೆತಿರಲಿಲ್ಲ.
ವಿವಿಧಕಡೆ ನಿಮ್ಮ ಅಭಿಮಾನಿಗಳು ಮಿತ್ರರು ಸೇರಿ ನಿಮ್ಮ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕೆಲವಕ್ಕೆ ಹೋಗಿದ್ದೆವು. ಅಂಥದ್ದರಲ್ಲಿ ಒಂದು ಕಾರ್ಯಕ್ರಮದ ದಿನ ಸಂಜೆ ಧಾರಾಕಾರ ಮಳೆ. ನಿಮ್ಮ ಪ್ರೀತಿಯ ಮನೆ ವೀಣೆಶೇಷಣ್ಣ ಭವನದಲ್ಲೇ ಏರ್ಪಾಡದದ್ದು. ಆ ಪಾಟಿಮಳೆಗೆ ಯಾರೂ ಜನರೇ ಬರಲಿಕ್ಕಿಲ್ಲ ಎಂದು ನಾವು ಭಾವಿಸಿದ್ದೆವು. ನಿಮ್ಮ ನಿಜವಾದ ಅಭಿಮಾನಿಗಳು ಮಿತ್ರರು ಯಾರು ಎಂದು ಆ ದಿನ ವೇದ್ಯವಾಗಿತ್ತು. ಆ ಮಳೆಯಲ್ಲಿ ಎಷ್ಟು ಜನ ಬಂದು ಸೇರಿದ್ದರು ಎಂದರೆ ಭವನ ತುಂಬಿತ್ತು. ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬೇಕೆಂದು ಬಹಳ ಪ್ರಯತ್ನಪಟ್ಟರು. ಮಳೆ, ವಿದ್ಯುತ್ ಹೋಗಿದ್ದರಿಂದ ಕೇವಲ ೧೫ ನಿಮಿಷ ತಡವಾಯಿತು. ೧೦-೧೨ ಮಂದಿ ನಿಮ್ಮ ಬಗ್ಗೆ ೫ ನಿಮಿಷ ಮಾತಾಡಿದರು. ಕಾರ್ಯಕ್ರಮದ ಪ್ರಾರಂಭದ ಮೊದಲು ನಾವೆಲ್ಲ ಮನೆಯವರು ವೇದಿಕೆ ಹತ್ತ್ತಿ ನಿಮ್ಮ ಆಳೆತ್ತರದ ಭಾವಚಿತ್ರಕ್ಕೆ ನಿಮ್ಮ ಪ್ರೀತಿಯ ಮಲ್ಲಿಗೆ ಹೂವನ್ನು ಎರಚುವ ನಾಟಕೀಯ ಕಾರ್ಯಕ್ಕೆ ಮುಂದಾಗಬೇಕಾಯಿತು. ನಮಗೆ ಇಷ್ಟವಿಲ್ಲದಿದ್ದರೂ ನಾವು ಆ ರೀತಿ ನಡೆದುಕೊಳ್ಳಬೇಕಾಯಿತು ಕಾರ್ಯಕ್ರಮ ಸಂಯೋಜಕರ ಪ್ರೀತಿ ಅಭಿಮಾನಕ್ಕೆ ನಾವು ತಲೆಬಾಗಲೇಬೇಕಾಯಿತು. ಆದಿನ ನಿಮ್ಮ ಪ್ರೀತಿಯ ದೇಜಗೌ ಕಾರ್ಯಕ್ರಮದುದ್ದಕ್ಕೂ ಕುಳಿತು ಕೊನೆಗೆ ನಿಮ್ಮ ಬಗ್ಗೆ ಎರಡು ಮಾತಾಡಿ ನಿಮ್ಮ ಮೇಲಿದ್ದ ಪ್ರೀತಿಯನ್ನು ತೋರ್ಪಡಿಸಿದರು.
ದೇಹದಾನ ಮಾಡಬೇಕು ಎಂಬ ನಿಮ್ಮ ಇಚ್ಛೆಯಂತೆ ನಿಮ್ಮ ದೇಹವನ್ನು ಜೆ.ಎಸ್.ಎಸ್ ಆಸ್ಪತ್ರೆಗೆ ಕೊಟ್ಟಿದ್ದೇವೆ. ಇದರಿಂದ ಪ್ರೇರಿತರಾಗಿ ಕೆಲವು ಮಂದಿ ಅವರ ದೇಹದಾನಕ್ಕೆ ಬೇಕಾದ ಕಾಗದಪತ್ರಗಳನ್ನು ತಯಾರು ಮಾಡಿಟ್ಟುಕೊಂಡಿದ್ದಾರಂತೆ.
ನೀವು ಹೋಗಿ ತಿಂಗಳು ಕಳೆದಮೇಲೆ ಗ್ರಹಣ ಬಂತು. ನೀವಿಲ್ಲ ಎಂದು ಜನ ಹೆಚ್ಚೆಚ್ಚು ಮೌಢ್ಯದಿಂದ ಆ ದಿನವನ್ನು ಕಳೆದರು ಎಂಬುದು ನನ್ನ ಭಾವನೆ. ಗಹಣದಿಂದ ಏನೂ ಹಾನಿಯಿಲ್ಲ ಎಂದು ಪತ್ರಿಕೆಯಲ್ಲಿ ಘಂಟಾಘೋಷವಾಗಿ ಬರೆದು ಎಚ್ಚರಿಸಲು ನೀವಿರಲಿಲ್ಲ. ನಿಜವಾಗಿ ಖೇದವಾಯಿತು ಜನರ ಮೌಢ್ಯ ನೋಡಿ. ಕಛೇರಿಗಳಿಗೆ ರಜ ಕೊಟ್ಟಿದ್ದರು. ರಸ್ತೆಯಲ್ಲಿ ಆ ಸಮಯದಲ್ಲಿ ನರಪಿಳ್ಳೆಯ ಸಂಚಾರ ಇರಲಿಲ್ಲ. ಸ್ಮಶಾನ ಮೌನ ಎನ್ನುತ್ತಾರಲ್ಲ ಹಾಗಿತ್ತು. ಆ ದಿನ ದರ್ಬೆಗಳಿಗೆ ಎಲ್ಲಲ್ಲದ ಬೇಡಿಕೆ ಇತ್ತಂತೆ. ದೇವಸ್ಥಾನಗಳಲ್ಲಿ ಶಾಂತಿ ಹೋಮಗಳ ಹೊಗೆ ಕಾವೇರಿತ್ತು! ಅದರನಂತರ ಚಂದ್ರಗ್ರಹಣವೂ ಬಂತು. ಆ ದಿನವೂ ಜನ ಮೌಢ್ಯದಿಂದ ಕೂಪಕ್ಕೆ ಬಿದ್ದರು. ಅವರನ್ನು ಬೀಳದಂತೆ ತಡೆಯುವವರಾರು ಇರಲಿಲ್ಲ.
ನಿಮಗೆ ಸಂತೋಷದ ವಿಷಯ ಹೇಳಲೇಬೇಕು. ನೀವು ಬರೆದ ಧೂಮಕೇತು ಪುಸ್ತಕ ೧೦ನೇ ಮುದ್ರಣಕ್ಕೆ ಅಣಿಗೊಳ್ಳುತ್ತಿದೆ ಎಂದು ನವಕರ್ನಾಟಕದಿಂದ ಕಾಗದ ಬಂದಿತ್ತು. ಕೂಡಲೆ ಅವರಿಗೆ ಸಂತೋಷ ಪ್ರಕಟಿಸಿ ಮಾರೋಲೆ ಬರೆದೆ. ನೀವೇನು ಚಿಂತೆ ಮಾಡಬೇಡಿ. ಕಾಗದ ಬರೆದಿದ್ದಾರೊ ಇಲ್ಲವೋ ಎಂದು. ನಿಮ್ಮಿಂದ ಆ ಒಳ್ಳೆಯ ಕೆಲಸವನ್ನು ನಾನು ತಪ್ಪದೆ ಪಾಲಿಸಲು ಕಲಿತಿದ್ದೇನೆ. ಮತ್ತೊಂದು ಸಂತೋಷದ ವಿಷಯ ಇದೆ. ನೀವು ಗೋವಿಂದರಾವ್ ಅವರಿಂದ  ಬಲವಂತವಾಗಿ ಬರೆಸಿರುವ ನಕ್ಷತ್ರದ ಬಗ್ಗೆ ಪುಸ್ತಕ. ಅದನ್ನು ಅವರು ಬರೆದು ಅಚ್ಚಿನಮನೆಗೆ ಕೊಟ್ಟು ಕರಡು ಓದಿ ಅದೀಗ ಮುದ್ರಣಕ್ಕೆ ಹೆಜ್ಜೆ ಇಟ್ಟಿದೆ. ಅದಕ್ಕೆ `ತಾರಾಲೋಕ’ ಎಂದು ಹೆಸರು ಕೊಟ್ಟಿದ್ದಾರೆ. ಮುದ್ರಣ ಕಾರ್ಯ ಎಲ್ಲೀವರೆಗೆ ಬಂತು ಎಂದು ಆಗಾಗ ದೂರವಾಣಿಸಿ ಅಥವಾ ಅಲ್ಲೇ ಹೋಗಿ ಕೇಳಲು ನೋಡಲು ನೀವಿಲ್ಲವಲ್ಲ. ಅದಕ್ಕೆ ಸ್ವಲ್ಪ ನಿಧಾನವಾಗುತ್ತಿದೆಯೇನೋ ಎಂದು ನನಗನಿಸಿದೆ. ಗೋವಿಂದರಾವ್ ಮುತುವರ್ಜಿಯಿಂದ ನೀವಿತ್ತ ಕೆಲಸವನ್ನು ಬಹಳ ಸಂತೋಷದಿಂದಲೇ ಮಾಡಿ ಮುಗಿಸಿದ್ದಾರೆ. ಅವರಿಗಿಂತ ಹೆಚ್ಚು ನೀವೇ ಆ ಪುಸ್ತಕ ನೋಡಿ ಸಂತೋಷ ಅಭಿಮಾನ ವ್ಯಕ್ತಪಡಿಸುತ್ತಿದ್ದಿರಿ ಎಂದು ನನ್ನನಿಸಿಕೆ.
ನಿಮ್ಮ ಅಭಿಮಾನಿ ಶಿಷ್ಯೆ ಮಯೂರರಿಗೆ ನೀವು ಬರೆಯಲು ಹೇಳಿದ ಸ್ಟೀಫನ್ ಹಾಕಿಂಗ್ ಪುಸ್ತಕ ಇದೀಗ ನವಕರ್ನಾಟಕದವರು ಅಚ್ಚು ಹಾಕಿದ್ದಾರೆ. ಅದನ್ನು ನಿಮಗೆ ಅರ್ಪಣೆ ಮಾಡಿದ್ದಾರೆ. ನೀವೇ ಹಸ್ತಪ್ರತಿ ನೋಡಿ ಅವಶ್ಯ ತಿದ್ದುಪಡಿ ಹಾಕಿದ್ದಂತೆ. ಮಯೂರ ಖುದ್ದಾಗಿ ಬಂದು ಆ ಪುಸ್ತಕ ಕೊಟ್ಟು ಹೋಗಿದ್ದಾರೆ. ಅತ್ತೆ ಆ ಕೂಡಲೇ ಅದನ್ನು ಓದಿ ಮೆಚ್ಚಿ ಶಿಫಾರಸು ಕೊಟ್ಟಿದ್ದಾರೆ. ಬಂದವರಿಗೆಲ್ಲ ದೂರವಾಣಿಸಿದವರಿಗೆಲ್ಲ ಆ ಪುಸ್ತಕದ ಬಗ್ಗೆ ತೋರಿಸಿ ಹೇಳಿ ಸಂತೋಷ ಪಡುತ್ತಿದ್ದಾರೆ.
ನಿಮ್ಮ ಅಭಿಲಾಷೆಯಂತೆ ನಿಮ್ಮ ಸಂಗ್ರಹದಲ್ಲಿದ್ದ ಸುಮಾರು ೧೦೦ಕ್ಕು ಹೆಚ್ಚು ಆಂಗ್ಲದಲ್ಲಿದ್ದ ವಿಜ್ಞಾನ ಪುಸ್ತಕಗಳನ್ನು ನಿಮ್ಮ ನೆಚ್ಚಿನ ಶಿಷ್ಯ ರಾಧಾಕೃಷ್ಣನಿಗೆ ಕೊಟ್ಟಿದ್ದೇವೆ. ಅವನು ಅಭಿಮಾನ ಸಂಕೋಚ ಎಂಬ ಮಿಶ್ರಭಾವದಿಂದ ಅವುಗಳನ್ನು ಕೊಂಡೋಗಿದ್ದಾನೆ. ಅದರಲ್ಲಿ ಕೆಲವು ಅವನದೇ ಪುಸ್ತಕಗಳಿದ್ದುವು! ನೀವು ಬೈಂಡ್ ಮಾಡಿ ಜೋಪಾನವಾಗಿರಿಸಿದ ಸೈಂಟಿಪಿಕ್ ಅಮೇರಿಕ ಪುಸ್ತಕವನ್ನು ಕೊಂಡೋಗಿದ್ದಾನೆ. ವಿಜ್ಞಾನ ಲೇಖನ ಬರೆಯುವವರಿಗೆ ಅದು ವರದಾನವಂತೆ. ಇನ್ನು ಮುಂದೆ ಕಸ್ತೂರಿ ಇತ್ಯಾದಿ ಪತ್ರಿಕೆಗಳಿಗೆ ತಪ್ಪದೆ ವಿಜ್ಞಾನ ಲೇಖನ ಬರೆದು ಕಳುಹಿಸುತ್ತೇನೆ ಎಂಬ ಭರವಸೆ ಕೊಟ್ಟಿದ್ದಾನೆ. ಬರೆಯಬೇಕು ಬರೆಯಬೇಕು ಎಂದು ಆ ಪುಸ್ತಕಗಳನ್ನು ತೆರೆದು ನೋಡಿ ಸಂತೋಷದಿಂದ ಹೇಳಿಕೊಂಡ. ಸಪಾತ್ರರಿಗೆ ಅಂಥ ಅಮೂಲ್ಯ ಪುಸ್ತಕ ಸಂದರೆ ಅದಕ್ಕಿಂತ ಸಂತೋಷ ಬೇರಿಲ್ಲ. ಪುಸ್ತಕಗಳನ್ನು ತೆಗೆದುಕೊಂಡು ಅವನು ನಮ್ಮನ್ನು ಸಾರ್ಥಕಗೊಳಿಸಿದ ಎಂದೇ ನನ್ನ ಭಾವನೆ. ನೀವು ಸಂಗ್ರಹಮಾಡಿ ಇಟ್ಟದ್ದು ಸಾರ್ಥಕವಾದಂತಾಯಿತು. ಉಳಿದ ಆಂಗ್ಲ, ಕನ್ನಡ ಪುಸ್ತಕಗಳನ್ನೆಲ್ಲ ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿದ್ದೇನೆ. ನಾವೇ ಅದನ್ನು ಜತನದಿಂದ ಇಟ್ಟುಕೊಳ್ಳುತ್ತೇವೆ. ಓದುತ್ತೇವೆ ಕೂಡ!
ಚಂದ್ರಯಾನ-೧ ನೌಕೆ ಚಂದ್ರನಮೇಲೆ ಇತ್ತೀಚೆಗೆ ಇಳಿಯುವ ಮೂಲಕ ಅಲ್ಲಿ ಭಾರತ ಧ್ವಜ ಹಾರಾಡಿಸಿ ಭಾರತೀಯರ ಕನಸು ನನಸಾಯಿತು. ಹಿಂದೆ ನೀವು ಬರೆದ ಮಾನವಚಂದ್ರನಮೇಲೆ ಪುಸ್ತಕನ್ನು ಪುನರ್ಮುದ್ರಣಗೊಳಿಸುವ ಅಂದಾಜಿನಲ್ಲಿದ್ದಾರೆ ನಿಮ್ಮ ಹಿರಿಮಗ. ಅದಕ್ಕೆ ಈಗಿನ ಚಂದ್ರಯಾನ- ೧ ನೌಕೆಯ ಟಿಪ್ಪಣಿಗಳನ್ನು ಸೇರಿಸುವ ಯೋಜನೆ ಇದೆಯಂತೆ. ನನಗಂತೂ ಅದರ ತಲೆಬುಡ ಅರ್ಥ ಆಗುವುದಿಲ್ಲ- ಓದಿದರೆ ಕೂಡ. ನನ್ನ ಬುದ್ಧಿಮಟ್ಟ ಮೀರಿದ ವಿಷಯಗಳವು (ವಿಜ್ಞಾನ) ಎಂದು ನಾನಂದೇ ತೀರ್ಮಾನಕ್ಕೆ ಬಂದಿದ್ದೇನೆ. (ಬೇಜಾರುಮಾಡದಿರಿ ನಿಮ್ಮ ನೆಚ್ಚಿನ ವಿಷಯವನ್ನು ಹಾಗೆ ಹೇಳಿದ್ದಕ್ಕೆ.) ಸುಮ್ಮನೆ ವಿಷಯ ಓದಿ ಸಂತೋಷಗೊಳ್ಳುವುದಷ್ಟೆ ನನ್ನ ಕೆಲಸ.
ನಿಮ್ಮ ಮೊಮ್ಮಗನ ಮದುವೆ ನಿಮ್ಮ ಅನುಪಸ್ಥಿತಿಯಲ್ಲಿ ನೆರವೇರಿತು. ನವದಂಪತಿಗಳು ಖುಷಿಯಿಂದಿದ್ದಾರೆ. ಮೊಮ್ಮಗನಿಗೆ ಬಲು ಕೋಪ ನಿಮ್ಮ ಮೇಲೆ. ಅವನ ಮದುವೆ ನೋಡದೆ ನಿಮಗೇನು ಅವಸರವಿತ್ತು ಹೋಗಲು ಎಂದು ಅವನ ಆರೋಪ. ಅವನಿಗೆ ನೀವೇ ಉತ್ತರ ಕೊಡಿ. ನಿಮ್ಮ ಮೊಮ್ಮಗಳು ಯಾವಾಗಲೂ ನಿಮ್ಮನ್ನು ನೆನಪುಮಾಡಿಕೊಳ್ಳುತ್ತ ಇರುತ್ತಾಳೆ. ಅವಳಿಗೆ ದುಃಖ. ಅವಳನ್ನು ಯಾರೂ ಹೊಗಳುವುದಿಲ್ಲವಂತೆ ಈಗ. ಅಜ್ಜ ಒಬ್ಬರೇ ಹೊಗಳುತ್ತಿದ್ದುದಂತೆ. ಈಗ ಅಜ್ಜ ಕೂಡ ಇಲ್ಲ. ನನ್ನ ಕಾಲೇಜಿನ ವಿಷಯಗಳನ್ನೆಲ್ಲ ಅಜ್ಜ ಆಸಕ್ತಿಯಿಂದ ಕೇಳುತ್ತಿದ್ದರು. ನನಗೆ ಬಂದ ಬಹುಮಾನಗಳನ್ನು ಖುಷಿಯಿಂದ ನೋಡಿ ಬೆನ್ನುತಟ್ಟಿ, `ಎಂದಿಗೂ ಜಂಬ ಬರಬಾರದು ಮಗು’ ಎಂದು ಹೇಳುತ್ತಿದ್ದರು. ಎಂದು ಆಗಾಗ ಹೇಳುತ್ತಿರುತ್ತಾಳೆ. ಮನುಜ ಇರುವಾಗ ಅವನ ಬೆಲೆ ಏನು ಎಂದು ಗೊತ್ತಾಗುವುದಿಲ್ಲ ಅವನಿಲ್ಲದಾಗ ಎಲ್ಲ ಗೊತ್ತಾಗುತ್ತದೆ. ಇದುವೆ ಜಗದ ನಿಯಮ, ಮಾನವನ ಸ್ವಭಾವ ಕೂಡ! ದಕ್ಷಿಣಕನ್ನಡ ಜಿಲ್ಲೆಯವರಿಗೆ ಹೊಗಳಲು ಬರುವುದಿಲ್ಲ, ಮತ್ತೆ ಗರ್ವ ಅಂದರೆ ಅಸ್ಮಿತೆ ಹೆಚ್ಚು ಎಂದು ನನ್ನ ಅಭಿಪ್ರಾಯ.
ನಿಮ್ಮನ್ನು ಕೇಳಿಕೊಂಡು ಆಗಾಗ ಕೆಲವು ಬ್ಯಾಂಕ್ನಿಂದ ಸಾಲ ಬೇಕೆ ಎಂದು ದೂರವಾಣಿ ಬರುತ್ತಿರುತ್ತದೆ. ಆಗ ನಾನು ಅವರು ಈ ಲೋಕದಲ್ಲೇ ಇಲ್ಲ ಎಂದು ಹೇಳುತ್ತೇನೆ. ಆಗವರು ಓ ಸಾರಿ ಎಂದಿಡುತ್ತಾರೆ. ನನಗೆ ನೀವು ಅಂಥವರೋಡನೆ ಮಾತಾಡಿದ ಪ್ರಸಂಗ ನೆನಪಿಗೆ ಬರುತ್ತದೆ. ಅವರು ಆಂಗ್ಲದಲ್ಲಿ ಮಾತಾಡಿದಾಗ ನೀವು ಅಮಾಯಕತೆಯಿಂದ ನನಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ ತಾಯಿ (ಇಲ್ಲವೆ ಅಣ್ಣ) ಕನ್ನಡದಲ್ಲಿ ಹೇಳಿ ಎಂದೋ, ಇಲ್ಲವೆ ನೋಡಮ್ಮ ನನಗೆ ೮೦ ವರ್ಷ ನನಗೇನು ಸಾಲ ಬೇಕಾಗಿಲ್ಲ ಎಂದು ಹೇಳುತ್ತಿದ್ದಿರಿ. ದೂರವಾಣಿ ಕರೆ ಬಂದಾಗ ನೀವು ಫೋನ್ ಎತ್ತಿದಕೂಡಲೇ `ನಮಸ್ಕಾರ ನಾರಾಯಣ ರಾವ್’ ಅಥವಾ `ನಮಸ್ಕಾರ ಜಿ.ಟಿ. ನಾರಾಯಣ ರಾವ್’ ಎಂಬ ಗಂಭೀರ ಸ್ವರ ಅತ್ತಲಾಗಿ ಕೇಳಿದವರನ್ನು ಮಂತ್ರಮುಗ್ಧಗೊಳಿಸುತ್ತಿತ್ತೆಂದು ಕಾಣುತ್ತದೆ. ಎಲ್ಲರು ಈಗ ಫೋನ್ ಮಾಡಿದಾಗ ನಮಸ್ಕಾರ ನಾರಾಯಣ ರಾವ್ ಎಂಬ ಸ್ವರ ಕೇಳಲಾಗುವುದಿಲ್ಲವಲ್ಲ ಎಂದು ಹೇಳುತ್ತಿರುತ್ತಾರೆ. ನಿಮ್ಮ ಮಗ ಫೋನ್ ಎತ್ತುವ ಮೊದಲು ನಮಸ್ಕಾರ ನಾರಾಯಣ ರಾವ್ ಎಂದು ಹೇಳಿ ಫೋನ್ ಎತ್ತಿಕೊಳ್ಳುತ್ತಾರೆ.
ಪ್ರತೀದಿನ ಅಂಚೆಡಬ್ಬ ತೆರೆದು (`ತೆಗೆದು’ ಎಂದು ಬಳಸದೆ ನೀವು ಹೇಳಿಕೊಟ್ಟ ಭಾಷಾಶುದ್ಧತೆಯನ್ನು ನೆನಪಿಟ್ಟು ಪಾಲಿಸಿದ್ದೇನೆ) ನೋಡುತ್ತೇನೆ. ಕೆಲವು ಪತ್ರಗಳು ನಿಮಗೂ ಬರುತ್ತವೆ. ಸಂಘ ಸಂಸ್ಥೆಗಳದ್ದು, ಸಂಗೀತ ಕಚೇರಿಗಳದ್ದು. ಪತ್ರಬಂದಕೂಡಲೇ ಉತ್ತರಿಸುವ ನಿಮ್ಮ ಕ್ರಮವನ್ನು ನಾನು ಅಳವಡಿಸಿಕೊಂಡಿದ್ದೇನೆ. ಅಂಚೆಡಬ್ಬ ನೋಡುವಾಗಲೆಲ್ಲ ನಿಮ್ಮ ನೆನಪು ಆವರಿಸುತ್ತದೆ. ನೀವು ಪ್ರತೀದಿನ ೩-೪ ಸಲವಾದರೂ ಅದನ್ನು ತೆರೆಯುವುದು, ಪತ್ರ ಇದ್ದರೆ ನಿಮಗಾಗುವ ಸಂತೋಷ, ಪತ್ರ ಇಲ್ಲದಿದ್ದರೆ ಕೈ ತಿರುಗಿಸುತ್ತ ನಿಮಗೆ ನೀವೇ `ಎಪ್ಪೆ’ ಎಂದು ಹೇಳಿಕೊಳ್ಳುವುದು ನನ್ನ ಕಣ್ಣಿಗೆ ಕಟ್ಟುತ್ತದೆ. ಪತ್ರಬಂದಕೂಡಲೇ ಅದನ್ನು ತೆರೆದು ಓದಿ ಮಾರೋಲೆ ಬರೆಯಬೇಕಾಗುವುದಕ್ಕೆ ಕೂಡಲೇ ಅಂಚೆ ಕಾರ್ಡಲ್ಲಿ ಬರೆದು ಅದನ್ನು ಅಂಚೆ ಡಬ್ಬಕ್ಕೆ ಹಾಕಿ ಬರುವುದು ನಿಮ್ಮ ಅಮೂಲ್ಯ ಕಾರ್ಯಗಳಲ್ಲಿ ಅದೂ ಮುಖ್ಯವಾದದ್ದು.
ನಿಮಗೆ ಮೊಮ್ಮಗ ಉಡುಗೊರೆಯಾಗಿತ್ತ ೨೪ ಗಂಟೆ ಕರ್ನಾಟಕ ಸಂಗೀತ ಬರುವ ವರ್ಲ್ಡ ಸ್ಪೇಸ್ ರೇಡಿಯೋ ಇತ್ತೀಚೆಗೆ ಸ್ತಬ್ಧಗೊಂಡಿತು. ಚಂದಾ ಅವಧಿ ಮುಗಿಯಿತು ಅದರದ್ದು. ಅದನ್ನು ನಾವು ಮುಂದುವರಿಸಲಿಲ್ಲ. ವರ್ಷಕ್ಕೆ ಸುಮಾರು ೧೮೦೦ ರೂ. ಅಂತೆ. ಅಷ್ಟು ದುಡ್ಡು ಕೊಟ್ಟು ಸಂಗೀತ ಕೇಳುವ ಆಸಕ್ತಿ ಇಲ್ಲಿ ಯಾರಿಗೂ ಇಲ್ಲ. ನೀವು ಆ ಉಪಕರಣಕ್ಕೆ ದಾಸರಾಗಿಬಿಟ್ಟಿದ್ದಿರಿ. ಅದರಿಂದ ಸ್ವಲ್ಪ ಹೊತ್ತು ಸಂಗೀತ ಬರದಿದ್ದರೆ ನಿಮ್ಮ ಚಡಪಡಿಕೆ ನೋಡಿ ನಮಗೆ ನಗು. ಮೊಮ್ಮಗ ಆ ಉಪಕರಣ ನಿಮಗಿತ್ತು ಸಾರ್ಥಕಗೊಂಡ. ಏಕೆಂದರೆ ಅಷ್ಟು ಸಂತೋಷ ನೀವು ಅದರಿಂದ ಪಡೆದುಕೊಂಡಿದ್ದೀರಿ. ನೀವು ಎಷ್ಟು ಬೇಗ ಬದಲಾವಣೆ ಹೊಂದಿದ್ದೀರಿ ಎಂದು ನಾನು ಭಾವಿಸಿದ್ದೆ. ಹಿಂದೆ ನೀವು ಇಂಥ ಮೃತ ಸಂಗೀತ ಕೇಳಬೇಕೆಂದೆನಿಸುವುದಿಲ್ಲ, ಜೀವಂತ ಕಛೇರಿ ಕೇಳುವುದೇ ಸೊಗಸು ಎಂದು ವಾದಿಸುತ್ತಿದ್ದಿರಿ. (ನಿಮ್ಮ ಈ ವಾದವನ್ನು ನಾನು ಒಪ್ಪುತ್ತಿರಲಿಲ್ಲ.) ಯಾರಾದರೂ ಸಂಗೀತದ ಸಿಡಿ, ಕ್ಯಾಸೆಟ್ ಕೊಟ್ಟರೆ ಮೃತಸಂಗೀತ ಕೇಳಲು ನನಗೆ ಬಿಡುವು ಇಲ್ಲ ಎಂದು ಅದನ್ನು ಆಸಕ್ತರಿಗೆ ದಾನ ಮಾಡುತ್ತಿದ್ದಿರಿ. ಅಂಥ ನೀವು ೨೪ ಗಂಟೆ ರೇಡಿಯೋದಲ್ಲಿ ಬಂದದ್ದೇ ಬರುವ ಸಂಗೀತ ಕೇಳಿ ಆನಂದಗೊಳ್ಳುತ್ತಿದ್ದಿರಿ ಎಂಬುದು ವಿಸ್ಮಯವಲ್ಲವೆ? ಬದಲಾವಣೆ ಎನ್ನುವುದು ಜಗದ ನಿಯಮವಲ್ಲವೆ? ಅದರಿಂದ ಯಾರೂ ತಪ್ಪಿಸಿಕೊಳ್ಳಲಾಗುವುದಿಲ್ಲ.
ನಿಮ್ಮ ಸ್ನೇಹಿತರು ಕೆಲವರು ಬರುತ್ತಿರುತ್ತಾರೆ. ಅತ್ತೆಯನ್ನು ಮಾತಾಡಿಸಿ ಹೋಗುತ್ತಾರೆ. ನೀವು ಹುಶಾರಿಲ್ಲದೆ ಆಸ್ಪತ್ರೆ ಸೇರಿದ ಸಮಯದಲ್ಲೇ ಚಕ್ರವರ್ತಿ ಹೋದರು. ಮಾರನೇದಿನ ನೀವು ಹೋದಿರಿ. ಇತ್ತೀಚೆಗೆ ಎಚ್ಚೆಸ್ಕೆ, ಬಿಎಸ್. ಪಂಡಿತ, ರಾಮರತ್ನಂ ಎಲ್ಲ ನಿಮ್ಮ ಸ್ನೇಹಿತರು ನಿಮ್ಮನ್ನು ಅರಸುತ್ತ ಈ ಲೋಕ ತ್ಯಜಿಸಿದರು.  ನೀವೀಗ ಆ ಸ್ನೇಹಿತರೊಡನೆ ಸಾಹಿತ್ಯ ಸಂಗೀತದ ವಿಚಾರ ಮಂಥನ ಮಾಡುತ್ತ ಸಂತೋಷವಾಗಿ ಇರಬಹುದಲ್ಲವೆ ಅಲ್ಲಿ? ಒಬ್ಬರಿಗೊಬ್ಬರು ಭೇಟಿ ಆಗಿದ್ದಿರಿ ತಾನೆ?  ಇಲ್ಲಿಗೆ ಈ ಪತ್ರ ಕೊನೆಗಾಣಿಸುತ್ತೇನೆ. ಬಾಕಿ ವಿಷಯಕ್ಕೆ ಇನ್ನೊಮ್ಮೆ ಪತ್ರಿಸುತ್ತೇನೆ
ಇತಿ ನಿಮ್ಮ ಸೊಸೆ
ಮಾಲಾ

‍ಲೇಖಕರು avadhi

January 8, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

8 ಪ್ರತಿಕ್ರಿಯೆಗಳು

 1. ಅಶೋಕ ಉಚ್ಚಂಗಿ

  ನೆನಪಿನ ಬುತ್ತಿ ಬಿಚ್ಚಿಟ್ಟ ಶ್ರೀಮತಿ ಮಾಲಾರಿಗೆ ಧನ್ಯವಾದಗಳು.ನಮಸ್ಕಾರ ಜಿ.ಟಿ. ನಾರಾಯಣ ರಾವ್’ ಎಂಬ ಕಂಚಿನ ಕಂಠ ನಿಜಕ್ಕೂ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿತ್ತು.ನಮ್ಮ ಕಛೇರಿಗೆ ಒಮ್ಮೆ ಜಿಟಿಎನ್ ರನ್ನು ಕರೆದುಕೊಂಡು ಹೋಗಿದ್ದೆ.ಅಂದು ಅವರು ಸುಬ್ರಹ್ಮಣಂ ಚಂದ್ರಶೇಖರ್ ರನ್ನು ಭೇಟಿ ಮಾಡಿದ ಸಂಗತಿ ತಿಳಿಸುತ್ತಾ ನಕ್ಷತ್ರಲೋಕದ ಪರಿಚಯವನ್ನೂ ಮಾಡಿಕೊಟ್ಟಿದ್ದರು.ಆಗ ಮೈಕಿನಲ್ಲಿ ಅವರ ಧ್ವನಿ ಕಂಚಿನ ಕಂಠದಂತೆ ಕೇಳಿಬರುವಂತೆ ಅಡ್ಜಸ್ಟ್ ಮಾಡಿದ್ದೆ.ಎರಡು ಗಂಟೆಗಳ ಕಾರ್ಯಕ್ರಮಕ್ಕೆಂದು ಬಂದವರು ನಮ್ಮೊಡನೆ ನಾಲ್ಕೈದು ತಾಸು ಕಳೆದಿದ್ದರು.
  -ಅಶೋಕ ಉಚ್ಚಂಗಿ

  ಪ್ರತಿಕ್ರಿಯೆ
 2. ಸುಪ್ತದೀಪ್ತಿ

  ಮುಂದೆ ಸಂದವರ ಜೊತೆಗೆ ಇಷ್ಟು ನಾಜೂಕಾಗಿ ಅಕ್ಕರೆಯಿಂದ ಪತ್ರ ಬರೆಯುವ ನಿಮ್ಮ ಪ್ರೀತಿಗೆ, ಅಭಿಮಾನಕ್ಕೆ, ಗೌರವಕ್ಕೆ ನಮಸ್ಕಾರಗಳು.

  ಪ್ರತಿಕ್ರಿಯೆ
 3. ಜೈಕುಮಾರ್

  ಜಿ. ಟಿ. ನಾರಾಯಣರಾಯರನ್ನು ಕುರಿತ ನೆನಪಿನ ಸುರಳಿಯ ನಳಿಕೆ ತೆರದದ್ದಕ್ಕೆ ಮಾಲಾರವರಿಗೆ ಧನ್ಯವಾದಗಳು.

  ಪ್ರತಿಕ್ರಿಯೆ
 4. kallakulla

  madam,
  bahala aaptha baraha. heege bareyade iddare GTN bejara madkolthidreno antha annisthide. suuuperb
  -vikas negiloni

  ಪ್ರತಿಕ್ರಿಯೆ
 5. ಪಂಡಿತಾರಾಧ್ಯ

  ಈಗ ತಾನೆ ನವಕರ್ನಾಟಕದಿಂದ ಬಿ ಎಸ್ ಮಯೂರ ಅವರ ಸ್ಟೀಫನ್ ಹಾಕಿಂಗ್ ಪುಸ್ತಕ ತಂದು ತೆರೆದು ನೋಡುತ್ತಿದ್ದೆ. ಅವರು ಅದನ್ನು ಜಿ ಟಿ ನಾರಾಯಣರಾಯರಿಗೆ ಅಪಿFಸಿದ್ದಾರೆ. ಈಗ ನಿಮ್ಮ ಲೇಖನ ಓದಿದೆ. ಈಗಾಗಲೇ ನಾರಾಯಣರಾಯರೂ ಓದಿರುತ್ತಾರೆ. ಅವರ ನೆನಪು, ನಿಮ್ಮ ಬರವಣಿಗೆ ಸಂತೋಷ ನೀಡಿದವು.

  ಪ್ರತಿಕ್ರಿಯೆ
 6. eshakumar h n

  ಮೊದಲಿಗೆ ದನ್ಯವಾದಗಳು ಮಾಲ ಮೇಡಂ;
  ಜಿ ಟಿ ಎನ್ ತಾತನ ನೆನಪು ಎಂದಿಗೂ ಮಾಸದು,ಇರುವೆ ರೀತಿ ಚಟುವಟಿಕೆಯಿಂದ ಇರಬೇಕು ನೀವು ಯುವಕರು.ಓದಬೇಕು ಲೇಖನಗಳ ಬರೀಬೇಕು ಎಂದು ಅವರು ನಿದುತಿದ್ದ ಪ್ರೋತ್ಸಾಹಕ್ಕೆ ನಾನು ಋಣಿ.ಅವರು ನೀಡಿದ ಪುಸ್ತಕಗಳು ಇಂದಿಗೂ ಆ ಕ್ಷಣಗಳನು ಬಿಂಬಿಸುತ್ತವೆ.ಅಂಥಹ ಚೇತನದ ಬಗ್ಗೆ ಸವಿವರವಾಗಿ ಬರೆದ ನಿಮಗೆ ನನ್ನ ನಮನ
  ಈಶಕುಮಾರ್

  ಪ್ರತಿಕ್ರಿಯೆ
 7. ಕೆ. ಉಷಾ ಪಿ. ರೈ

  ನಿಮ್ಮ ಪತ್ರ ಓದುತ್ತಿದ್ದೆ. ಅಲ್ಲಿದ್ದ ಫೊಟೋ ನೋಡಿ ನನ್ನವರು ಇದು
  ಜಿ.ಟಿ ನಾರಾಯಣ ಅವರಲ್ಲ? ಅವರು ನನ್ನ ಮೇಷ್ಟ್ರಾಗಿದ್ದರು ಎ೦ದು ಖುಷಿ ಪಟ್ಟರು.
  ಬರಹ ಚೆನ್ನಾಗಿದೆ. ಮನಕ್ಕೆ ಮುಟ್ಟುತ್ತದೆ. ಅಭಿನ೦ದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: