ಮಿಕ್ಕಿಹೋದವರು…

ವಿಜಯಶ್ರೀ ಹಾಲಾಡಿ

“ಊರಿಗ್ ಬಂದಾಗ್ಳಿಕೆಲ್ಲ ವೆಂಕತ್ತೆ ಮನಿಗೊಂದ್ ಹೋಯ್ದಿರೆ ನಿಮ್ಗೆ ನಿದ್ದಿ ಬತ್ತಿಲ್ಲೆ ಕಾಂತ್ ಅಲ್ದಾ ಅಕ್ಕಾ ?” ಬೆಳ್ಳುಳ್ಳಿ ಸಿಪ್ಪೆ ತೆಗೆಯುತ್ತ ರಮಾ ಕೇಳಿದಾಗ ಸುಜಾತ ಸುಮ್ಮನೆ’ ಹೆಹೆ’ ಎಂದಳಷ್ಟೆ. ಓರಗಿತ್ತಿ ಎಂದಮೇಲೆ ವಾರೆ ಮಾತುಗಳೂ ಖಾಯಂ ಎಂದುಕೊಳ್ಳುತ್ತ “ಕಡ್ಗಿ ಹೋಳ್ ಲಾಯ್ಕ್ ಬೆಂದಿತ್ ಮರಾಯ್ತಿ, ಅಡ್ಡಿಲ್ಲೆ” ಎಂದು ಸೌಟಲ್ಲೆತ್ತಿ ಮುಟ್ಟಿ ನೋಡಿದಳು. “ಹಾ ಅದ್ ಹಾಂಗೇ, ಮೂರ್ಮುಡಿ ಗ್ಯದ್ದಿ ಬದಿ ಮರದ್ದ್; ಒಳ್ಳೆ ಬೇಯತ್ತ್” ಉತ್ತರಿಸಿದ ರಮಾ ಮಾತಿನ ಬುಡ ಬಿಡದೆ “ಹುಣ್ಸಿಮಕ್ಕಿಗ್ ಹೋಯಿ ಅಲ್ಲಿಂದ್ಲೇ ವೆಂಕತ್ತಿ ಮನಿಗೆ ಹ್ವಾಪ್ದಾ?” ಎಂದಳು.

“ಹಾ-ಹೌದ್, ನಾಳಿಗೆ ಹುಣ್ಸಿಮಕ್ಕಿಗ್ ಹೊರಡ್ತೆ” ಎಂದವಳೇ ಸುಜಾತ ಬ್ಯಾಗಿಗೆ ಬಟ್ಟೆ ಹಾಕಿಲ್ಲ ಇನ್ನೂ ಅಂತೆಲ್ಲ ನೆನಪಿಸಿ ಕೊಳ್ಳತೊಡಗಿದಳು. ಆದರೂ ರಮಾ ಕಡೆತುದಿಗೆ “ಅಕ್ಕಾ ಜಾಗ್ರತೆ ಹೋಯಿಬನ್ನಿ. ವೆಂಕತ್ತಿ ಮನಿಗೆ ಹ್ವಾಪ್ದ್ ಅಂದ್ರೆ ಅಷ್ಟ್ ಸಣ್ಣ್ ಹರ್ಬ್ ಅಂದ್ ಎಣಿಸ್ಬೇಡಿ; ಮಿಕ್ಕಿಹ್ವಾದವ್ರ್ ಅವ್ರೆಲ್ಲ” ಎಂದು ಒಗ್ಗರಣೆ ಸೌಟನ್ನು ಕಡಿಗಿ ಹುಳಿ ಪಾತ್ರಕ್ಕೆ ಚಂಯ ಹಾಕಿದಳು. ಸುಜಾತಂಗೆ ಸಿಟ್ಟೇ ಬಂತು. ತಾನು ಎಲ್ಲಿಗೆ ಹೋದರೆ ಇವಳಿಗೇನು….. ‘ಕೊಂಯ್ಸಣಿ ರಮಾ’ ಅಂದ್ ಹೆಸ್ರ್ ತಕಂಡದ್ದ್ ಇದ್ಕೇ ಇವಳು. ಇಪ್ಪತ್ತೈದ್ ವರ್ಷದಿಂದ ಕಾಂತ ಇದ್ನಲೇ ಇವ್ಳ್ ಬುದ್ದಿ ಎಂದು ಒಳಗೊಳಗೇ ಸಮಾಧಾನ ಮಾಡಿಕೊಂಡು ಕೆಳ ಕೋಣೆಗೆ ಹೊರಟಳು.

ಮಕ್ಕಳಿಗೆ ಬೇಸಿಗೆ ರಜೆ. ಅತ್ತಿಗೆಯರ ಮಕ್ಕಳು, ರಮನ ತಂಗಿ ಮಕ್ಕಳು ಎಲ್ಲ ಆಟ, ಹರಟೆ ಎತ್ತಿಕೊಂಡು ಸಿಟೌಟಲ್ಲಿ, ಅಂಗಳದಲ್ಲಿ ಗಲಾಟೆ ಎಬ್ಬಿಸುತ್ತಿದ್ದವು. ದೊಡ್ಡವು ಎರಡು ಹುಡುಗರು ” ನಾವ್ ಜೋಮ್ಲಿ ಜಲಪಾತಕ್ಕೆ ಹ್ವಾತೋ. ಗಟ್ಟಿ ಇದ್ದವ್ರ್ ಬರ್ಲಕ್ಕ್” ಎನ್ನುತ್ತ ಬೈಕ್ ಮೇಲೆ ವಿರಾಮವಾಗಿ ಕೂತಿದ್ದವು. ಬಿಸಿಲು ರಾಪಿಗೆ ತಲೆಸುತ್ತಿದಂತಾಯಿತು ಸುಜಾತನಿಗೆ. ಊರಿಗೆ ಬಂದರೆ ಮೊದಲಿನಿಂದಲೂ ಹಾಗೇ. ಬೆಳಿಗ್ಗೆ ಕಾಫಿಯಿಂದ ಹಿಡಿದು ರಾತ್ರಿ ಮೊಸರಿಗೆ ಹೆಪ್ಪು ಹಾಕುವವರೆಗೆ ಎಲ್ಲವೂ ತನ್ನದೇ ಕೆಲಸ.

ರಮಾ ಅಡುಗೆ ಮನೆಯನ್ನು ತನಗೇ ವಹಿಸಿ ಹೊರಬದಿಯ ಯಾವುದಾದರೂ ಒಂದೆರಡು ಕೆಲಸ ಮಾಡಿಕೊಂಡು ತನ್ನಷ್ಟಕ್ಕೆ ಇದ್ದುಬಿಡುತ್ತಿದ್ದಳು.  ಅವಳ ಗಂಡ ಶ್ರೀಕಾಂತನೂ ಅಷ್ಟೇ “ನಾಲ್ಕು ದಿನಕ್ಕೆ ಬಂದ ಅತ್ತಿಗೆಗೆ ಎಲ್ಲ ಕೆಲಸ ಹೊರಿಸಬೇಡ, ನೀನೂ ಕೈ ಹಾಕು” ಎಂದವನಲ್ಲ. ಮೊದಲೆಲ್ಲ ತನ್ನ ಜೊತೆಗೆ ಪ್ರತಿಸಲ ಇವರೂ ಊರಿಗೆ ಬರುತ್ತಿದ್ದರಲ್ಲ; ಈಗ ಕೆಲಸ ಜಾಸ್ತಿ ಅಂತ ಆದಿತ್ಯವಾರವೂ ಆಫೀಸಿಗೆ ಗಾಡಿಬಿಡುತ್ತಾರೆ. ” ಈ ಸಲ ಅರ್ಧ ಬೆಂಗ್ಳೂರ್ ಮಾತ್ರ ಊರಿಗ್ ಬಂದದ್ದ್ !” ಅಂತ ರಮಾ ಆಚೀಚೆ ಮನಿಯವರಲ್ಲಿ ಹೇಳಿ ನಗಾಡುತ್ತಾಳಂತೆ. ಅವಳ ಮಾತೇ ಹಾಗೇ, ಎಂತ ಮಾತಾಡಿದರೂ ಒಂತರಾ ವಾರೆ ವಾರೆ.

ಈಗ ಎರಡು ವರ್ಷದ ಹಿಂದೆ ಸುಹಾಸ್ ಅಮೇರಿಕಕ್ಕೆ ಹೋದಮೇಲಂತೂ ” ಇನ್ನ್ ಸುಜಾತಕ್ಕನ್ ಬಿಡಾರ ಅಮೇರಿಕದಂಗೆ ಮಗನ್ ಮನ್ಯಂಗೇ. ಬೇಕಾರೆ ಕಾಣಿ ನಾ ಹೇಳದ್ದ್ ಸುಳ್ಳೋ ಬದ್ವೋ ಅಂದ್” ಅಂತೆಲ್ಲ ಆಡಿಕೊಂಡು ತಿರುಗುತ್ತಾಳಂತೆ. ಏನಾದರೂ ಹೇಳಿಕೊಳ್ಳಲಿ; ಹೇಳುವವರ ದೊಂಡೆ ಕಟ್ಟುಕಾತ್ತ ?,’ ತನ್ನ ಗಂಡನಿಗೆ ಪೇಟೆಯಲ್ಲಿ ಕೆಲಸ ಇಲ್ಲ, ತಾನು ಹಳ್ಳಿ ಮನೆಯಲ್ಲಿ ಗೇಯಲು ಮದುವೆಯಾಗಿ ಬಂದ ಹಾಗಾಯ್ತು, ಸುಜಾತಕ್ಕ , ಬಾವ ಮಾತ್ರ ಬೆಂಗಳೂರಲ್ಲಿ ರಾಜರ ಹಾಗಿದ್ದಾರೆ’ ಎಂದು ಮೊದಲಿಂದಲೂ ಅಸಮಧಾನ ಅವಳಿಗೆ, ಇರಲಿ; ಹಾಗಂತ ಈ ಮನೆಗೆ ಬಂದ ದಿನದಿಂದ ಪ್ರತಿಯೊಂದಕ್ಕೂ ಓರಗಿತ್ತಿಯರ, ಅತ್ತಿಗೆಯರ ಮುಲಾಜು ನೋಡಿಕೊಂಡು ಹೆದರಿ ಬದುಕಿದ್ದಾಯ್ತು, ಈಗಲೂ ಅವರು ಹೇಳಿದಂತೆ ಇರಲಾಗುವುದಿಲ್ಲ. ನಂಗೂ ಐವತ್ತಾಗ್ಲಿಕ್ಕೆ ಬಂತು….. ಯಾರಿಗಾದರೂ ಹೆದರಿ ದಿನ ತೆಗೆಯುವ ಅಗತ್ಯವಾದರೂ ಎಂತದಿದೆ ಎಂದುಕೊಂಡು ಸುಜಾತ ಬಟ್ಟೆ ಮಡಚಿ ಬ್ಯಾಗಿಗೆ ಹಾಕತೊಡಗಿದಳು.

ಚಿತ್ರಕೃಪೆ: ಗೂಗಲ್

ಹುಣ್ಸಿಮಕ್ಕಿ ಮನೆಯಲ್ಲಂತೂ ಗಮ್‍ಗೈಲ್. ಅಣ್ಣನ ಮಗಳಿಗೆ ಮದುವೆ ಆಗಿ ತಿಂಗಳು ಆದದ್ದಷ್ಟೇ. ಹೊಸ ಮದುಮಕ್ಕಳು ಊರು ತಿರುಗಲು ಬಂದಿದ್ದರು.  ದೊಡ್ಡಕ್ಕನ ಮೊಮ್ಮಕ್ಕಳು, ಜಾನತ್ತೆಯ ಮರಿಮಕ್ಕಳು ಹೀಗೆ ಚಳ್ಳರೆ ಪಿಳ್ಳರೆ ಎಲ್ಲ ಸೇರಿಕೊಂಡು ಮನೆಯೆಂದರೆ ಕಾಗೆಗೂಡಿನ ಹಾಗಾಗಿತ್ತು. ಸುಜಾತ ಒಳಗೆ ಹೊಗ್ಗಿದ್ದೇ, ಹೋ ಅಂತ ಕಿರುಚಿಕೊಂಡು “ಅಮೇರಿಕಾ ರಿಟನ್ರ್ಡ್ ಸುಜಾತತ್ತೆ ಬಂದ್ರೋ” ಅಂತ ಪೊಣ್ಕ್ ಮಕ್ಕಳು ಕೂಗಿದ ಹೊಡೆತಕ್ಕೆ ಅಣ್ಣಯ್ಯ ಸಹಿತ ಎಲ್ಲರೂ ಕುಶಾಲು ಮಾಡತೊಡಗಿದರು.

“ಹೀಂಗೆಲ್ಲ ಹೇಳಿರೆ ನಾನೀಗ್ಲೇ ಎರ್ಡ್ ಗಂಟಿ ಬಸ್ಸಿಗೆ ವಾಪಸ್ ಹ್ವಾತೆ ಕಾಣಿ ಮಕ್ಳೇ” ಅಂತ ಮಕ್ಕಳಿಗೆ ಕಣ್ಣು ದೊಡ್ಡದು ಮಾಡಿ; ದೊಡ್ಡವರನ್ನೆಲ್ಲ ಮಾತಾಡಿಸಿ ಅಮ್ಮನ ಹತ್ತಿರ ಹೋಗಿ ಕೂತುಕೊಂಡಳು ಸುಜಾತ. ಅಮ್ಮನಿಗೆ ಈಗೀಗ ಕಿವಿ ದೂರ. ಹತ್ತಿರ ಹೋಗಿ ಜೋರಾಗಿ ಹೇಳಬೇಕು, ಇಲ್ಲಾಂದರೆ ಸಿಟ್ಟು. “ಸುಜಾತಂಗೆ ಮಾತಾಡುಕೂ ದುಡ್ಡ್ ಕೊಡ್ಕಂಬ್ರಾ ? ” ಎಂದು ಸಟ್ಟ ಹೇಳಿದರೂ ಹೇಳಿದಳೇ. ವರ್ಷ ಆತ ಆತ ಅವಳ ಮಾತುಗಳು ಮತ್ತಷ್ಟು ಖಾರವಾಗಿದ್ದವು. ಅಪ್ಪಯ್ಯ ಹೋದಮೇಲಂತೂ ಮನಸ್ಸಲ್ಲಿ ಸಮಾಧಾನ ಪಸೆಯೇ ಇಲ್ಲ ಅವಳಿಗೆ.

ತವರೆಂದರೆ ಹಾಗೇ ತಂಪು ತಂಪು! ಅಲ್ಲ; ಎಲ್ಲ ಊರಂತೆ ತವರೂ ಬಿಸಿಲು-ಮಳೆಯ ಒಂದು ಊರೇ….. ಅಲಾಯ್ದ ಎಂತದಿಲ್ಲ. ಆದರೂ ಹೆಣ್ಣುಮಕ್ಕಳಿಗೆ ಬಿಸಿಲು ಮರೆತು ಹೋಗಿ ತಂಪೊಂದೇ ನೆನಪಿನಲ್ಲಿ ಉಳಿಯುತ್ತದೆ ಅಷ್ಟೇ. ಒಂದು ವಾರ ಕಳೆದದ್ದೇ ಗೊತ್ತಾಗಲಿಲ್ಲ ಸುಜಾತನಿಗೆ. ಅಣ್ಣಯ್ಯನಿಗೂ ಉಳಿದ ಅಕ್ಕ ತಂಗಿಯರಿಗಿಂತ ಸುಜಾತ ಚೂರು ಊಂಚೇ. ಡಬ್ಬಲ್ ಡಿಗ್ರಿ ಮಾಡಿದವಳು, ಜಾಣೆ ಅಂತ ಅತ್ತಿಗೆಯೂ ಬೇರೆಯವರ ವಿಷಯದಲ್ಲಿ ಹೇಗೇ ಇದ್ದರೂ ಸುಜಾತ ಅಂದ್ರೆ ಆಯ್ತು ; ಅವಳು ಹೇಳಿದ್ದೆಲ್ಲ ಸರಿ ಎಂದು ತಲೆಯಾಡಿಸುವವರು. ಆದರೆ ವೆಂಕತ್ತೆ ಮನೆಗೆ ಹ್ವಾಪ ವಿಷಯ ಎತ್ತಿದ ಕೂಡಲೇ “ಹೌದ್ ಮಾರಾಯ್ತಿ, ಅದೊಂದ್ ಮರ್ಲ್ ಬಿಟ್ರೆ ನೀ ಗನಾ ಜನ. ಅಲ್ಲನಾ, ಪ್ರತೀ ವರ್ಷ ಅಲ್ಲಿಗೊಂದ್ಸಲ ಹೋಯ್ ಬರದಿದ್ರೆ ನಿಂಗೆಂತ ತಿಂದ್ ಕೂಳ್ ಅರ್ಗುದಿಲ್ಯಾ ?” ಅಂದರು.

ಎಡೆಯಲ್ಲಿ ಅಣ್ಣಯ್ಯ ‘ಅವ್ಳ್ ಎಂತಾರೂ ಅನ್ಲಿ, ನೀ ಹೋಯಿಬಾ’ ಅನ್ನುವಂತೆ ಕಣ್ಣು, ಕೈ ಸನ್ನೆ ಮಾಡಿದ. ದೊಡ್ಡಕ್ಕ ” ಏನಪ ಯಾರ್ ಎತ್ಲಾಗಾರೂ ಹೋಯ್ಲಿ, ನಾನ್ ನಾಕ್ ದಿನ ಅಮ್ಮನ್ ಸೇವೆ ಮಾಡ್ಕಂಡ್ ಇಲ್ಲೇ ಇರ್ತೆ” ಅಂತ ರಾಗ ಎಳೆದಳು. ಸುಜಾತ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ವೆಂಕತ್ತೆ ಮನೆಗೆ ಹೋಗುವುದಕ್ಕೆ ಬಸ್ಸಿನ ಸಮಯ ಕೇಳಿ ಗಟ್ಟಿಮಾಡಿಕೊಂಡಳು. “ಒಂದಾರ್ ದಿನ ವೆಂಕತ್ತೆ ಮನಿಗೆ ಹೋಯಿಬತ್ತೆ ಅಮ್ಮಾ” ಕೂಗಿ ಹೇಳಿದರೆ ಅವಳು “ಹಾ, ಕೃಷ್ಣನೂ ಬತ್ನಲ್ಲ ಜೊತಿಗೆ” ಎಂದಳು.’ ಅಯ್ಯೋ, ಇವರು ಬೆಂಗಳೂರಿಂದ ಬಂದಿಲ್ಲ ಅಂತ ಗೊತ್ತಿತಲೇ ಅಮ್ಮನಿಗೆ ! ಇಲ್ಲಪ ಈಗೀಗ ಎಂತದೂ ನೆನಪಾತಿಲ್ಲೇ ಅವಳಿಗೆ’ ಮನಸ್ಸಲ್ಲೇ ಅಂದುಕೊಳ್ಳುತ್ತ ಏನೊಂದೂ ಉತ್ತರಿಸದೆ ಬರೀ “ಹಾ ಹಾ” ಎಂದಳು ಸುಜಾತ.

ಐದಾರು ಗಂಟೆಗಳ ಪ್ರಯಾಣ. ಸದ್ಯ ಡೈರೆಕ್ಟ್ ಬಸ್ ಒಂದು ಸಿಕ್ಕಿತು. ಎಂತ ಬಸ್ಸಾದರೂ ಕಡಿಗೆ ಆಗುಂಬೆ ಘಾಟಿ ನಡೂಮಧ್ಯೆ ಇಳಿದು ಕೊರಕಲು ಸಪೂರ ರಸ್ತೆಯಲ್ಲಿ ಮುಕ್ಕಾಲು ಗಂಟೆ ಆಟೋದಲ್ಲೇ ಹೋಯ್ಕಲ್ಲ ವೆಂಕತ್ತೆ ಮನೆಗೆ…… ಕಾಡೆಂದರೆ ಕಾಡು ! ಸುಮಾರು ಹಾಡಿ ಹಕ್ಲ್ ತಿರುಗಿದ್ದರೂ ಅಂತಾ ಬೀಳು ಹಬ್ಬಿಕೊಂಡ ಕತ್ತಲೆ ಕತ್ತಲೆ ಕಾಡನ್ನು ಸುಜಾತ ಸದ್ಯಕ್ಕೆ ಮತ್ತೆಲ್ಲೂ ಕಂಡಿರಲಿಲ್ಲ. ಈ ಉರಿ ವೈಶಾಖದಲ್ಲೂ ಒಳ್ಳೆ ಎ ಸಿ ಹಾಕಿದವರ ಹಾಗೆ ತಂಪು ತಂಪು ವೆಂಕತ್ತೆ ಮನೆ.

ಸುತ್ತಮುತ್ತ ತೋಟದಲ್ಲಿ ಉಜಿರು ಕಣ್ಣುಗಳು ಯಾವಾಗಲೂ ಹರಿಯುತ್ತಿರುತ್ತವೆ. ಆದರೂ ಹೆದರಿಕೆಯಪ್ಪ ; ವೆಂಕತ್ತೆ ಮನೆಯೊಂದು ಬಿಟ್ಟರೆ ಸುಮಾರು ಮೈಲಿಯಷ್ಟು ದೂರದವರೆಗೂ ಬೇರೆ ನರಮನುಷ್ಯರಿಲ್ಲ. ಹೇಗಿತ್ರ್ರೋ ಎಂತ ಕತೆಯೋ ! ಇನ್ನು ಮಳೆಗಾಲದಲ್ಲಿ ಕೇಳುವುದೇ ಬೇಡ, ಜೈಲ್‍ಗುಟ್ಕಂಡ್ ನಾಕ್ ತಿಂಗಳಾದರೂ ಹೊಯ್ತಾ ಇರತ್ತಪ್ಪ ಅಲ್ಲಿ ಮಳೆ. ಭಾರೀ ಧೈರ್ಯ ವೆಂಕತ್ತೆದು. ಸಾಮಾನ್ಯ ಹೆಂಗಸರಿಗೆ ಎಲ್ಲಿರತ್ತ್ ಅಂತಾ ಗುಂಡಿಗೆ ! ಒಂದ್ ಸಿಟ್ಟ್ ಇಲ್ಲ, ಸೆಡ ಇಲ್ಲ, ಜೀವಕ್ಕೆ ಜೀವ ಕೊಡೂಕೂ ತಯಾರು. ಆದ್ರೂ ಅಂತವರು ಬೇಡಪ್ಪಾ ಜನರಿಗೆ. ಯಾವುದೋ ಕಾಲದ್ದ್ ಎಂತದೋ ಊನ ಹಿಡ್ಕಂಡ್ ಸಾಯೋವರೆಗೂ ಜರಿಯೂದೇ ಆಯ್ತ್ ಅವರನ್ನ. ಯೋಚನೆ ಮಾಡುತ್ತ ಅಲ್ಲೇ ನಿದ್ದೆತೂಗಿತು ಸುಜಾತನಿಗೆ.

ಆಟೋ ಇಳಿದು ಮತ್ತೆರಡು ಫರ್ಲಾಂಗ್ ನಡೆದು ಸುಜಾತ ಮನೆ ಮೆಟ್ಲ್ ಕಲ್ಲಿಗೆ ಕಾಲಿಟ್ಟದ್ದೇ ಇಟ್ಟದ್ದ್, ಕಿವಿಗೆ ಗಾಳಿ ಹೊಗ್ಗಿದ ಕರುವಿನಂತೆ ವೆಂಕತ್ತೆ ಓಡಿಯಾಡಲು ಸುರು ಮಾಡಿದರು. “ಸುಜಾತಾ, ಬಂದ್ಯಾ ಮುರಾಯ್ತಿ ಬಾ, ಬಾ ಈ ಸಲ ನೀ ಬತ್ತೇ ಇಲ್ಲೆ ಅಂದ್ ಗಿರಾಯ್ಸಿದೆ ನಾನ್” ಎನ್ನುತ್ತ ಬೆಲ್ಲ ನೀರು ತಂದುಕೊಟ್ಟರು. ” ಅದೇ ಹೇಳೊದ್ ವೆಂಕತ್ತೇ….ಒಂದ್ ಮೊಬೈಲ್ ತಂದ್ಕೊಡ್ತೆ ಇಟ್ಕಣಿ ಅಂದ್ ; ನೀವ್ ಕೇಂತಿಲ್ಲೆ” ಸುಜಾತ ನೆಲದ ಮೇಲೆ ಕಾಲುನೀಡಿ ಕುಳಿತಳು.

” ನಂಗ್ ಮೊಬೈಲ್ ಬ್ಯಾಡ ಹೆಣೇ. ಅಲ್ದಾ, ಅದನ್ನ್ ಇಟ್ಕಂಡ್ ಎಂತ ಬೆಲ್ಲಹಾಕಿ ನಕ್ಕೂದಾ ನಾನ್? ಇಲ್ಲ್ ಮಾತಾಡುದಿಲ್ಲೆ ಅದ್ ; ಟವರ್ ಸಿಕ್ತಿಲ್ಲೆ  ಅಂಬ್ರ್” ವೆಂಕತ್ತೆ ಜೀರಿಗೆಕಷಾಯ ತಂದುಕೊಟ್ಟರು. ಚೂರೇ ಚೂರೂ ಬದಲಾಗಿಲ್ಲ ಅವರು! ಅದೇ ನಸುಗಪ್ಪು ಲಕ್ಷಣದ ಮುಖ, ಹದ ಎತ್ತರದ ಸಟಾಸುಟಿ ಶರೀರ, ದಪ್ಪಸುತ್ತಿನ ಕಾಲುಂಗುರ, ಕುತ್ತಿಗೆ ತುಂಬುವ ಕರಿಮಣಿ, ಮುಡಿಯಗಲಕ್ಕೆ ಹೂವು, ಹಣೆಯಲ್ಲಿ ದೊಡ್ಡ ಬೊಟ್ಟು, ಕಣ್ಣಿಗೆ ಮನೆಯಲ್ಲೇ ನಂದಿಬಟ್ಟಲು ಹೂವಿನ ರಸ ಹಾಕಿ ಮಾಡಿಕೊಂಡ ಕಾಡಿಗೆ, ರಾತ್ರಿ ಮಲಗುವವರೆಗೂ ಬಾಯ್ತುಂಬ ಎಲೆಯಡಿಕೆ, ಮಾತಿಗೆ ಮುಂಚೆ ಒಂದು ಮೆಲುನಗು…..ಅರವತ್ತೆಂಟು ದಾಟಿದರೂ ಅರವತ್ತರ ಮೇಲೆ ಒಂದು ದಿನ ಹೆಚ್ಚಿಗೆ ಎಂದು ಎಂತವರೂ ಅಂದಾಜಿಸುವ ಹಾಗಿಲ್ಲ.

ಸುಜಾತ ಕೈಕಾಲು ತೊಳೆಯಲು ಬಚ್ಚಲಿಗೆ ಹೋದಳು, ಹಂಡೆಗೆ ಬಂದುಬೀಳುವ ದಂಬೆ ನೀರು ಬಿರುಬೇಸಿಗೆಯಲ್ಲೂ ಥಂಡಿ ಥಂಡಿ ಇತ್ತು. ಯಾವ ಯಾವ ಮರಗಳ ಬೇರಿನ ಮೇಲೆ ಹರಿದು ಬಂದ ನೀರೋ…… ಒಂತರ ಅಭಿಮಾನ ಉಕ್ಕಿದಂತಾಗಿ ನೆತ್ತಿಗೆ ಒಂದು ಚೊಂಬು ಸುರಿದು ತಟ್ಟಿಕೊಂಡಳು ಸುಜಾತ. ಕಲ್ಲುಮರಿಗೆಯೊಂದರಲ್ಲಿ ಯಾವತ್ತಿನಂತೆ ಬೆಳ್ಳಂಟೆ ಸೊಪ್ಪಿನ ಗುಳ ತಲೆಸ್ನಾನಕ್ಕೆ ಅಣಿಯಾಗಿತ್ತು. ಚಳಿಯೆನಿಸಿ ಮೈ ಕೈ ಒರೆಸಿ ಅಡುಗೆಮನೆಗೆ ಹೋಗಿ ಒಲೆಮುಂದೆ ಕುಳಿತಳು.

ವೆಂಕತ್ತೆಯ ಬೆಕ್ಕು ಬೀರಿ ಒಲೆದಂಡೆಯಲ್ಲಿ ಕುಳಿತದ್ದು ಕೆಳಗಿಳಿದು ಬಂದು ಸುಜಾತಳನ್ನು ಕಂಡು ಮೈಮುರಿಯಿತು. ಅದರ ತಲೆಸವರುತ್ತ ಅಮೇರಿಕಾದಲ್ಲಿ ಸುಹಾಸ್ ಎಂತ ಮಾಡ್ತಿದ್ನೋ ಎಂದುಕೊಂಡು ಹೋ, ಇಷ್ಟೊತ್ತಿಗೆ ನಿದ್ದೆ ಮಾಡ್ತಿರ್ತ ಅಂತ ಸಮಾಧಾನ ಮಾಡಿಕೊಂಡಳು. ವೆಂಕತ್ತೆಯ ಮನೆಯಿಡೀ ಒಂತರಾ ಘಾಟು. ಮೊದಲಿಂದಲೂ ಅಷ್ಟೇ; ಬಾಗಾಳ್‍ಕಟ್ಟೆ ಎಂಬ ಆ ಊರಿನ ಐದಾರು ಮನೆಗಳಿಗೆ ಮಾತ್ರವಲ್ಲ ಸುತ್ತಮುತ್ತಲಿನ ಊರಿನ ಜನಕ್ಕೆ, ದನಕ್ಕೆ ವೆಂಕತ್ತೆಯೇ ನಾಟಿ ವೈದ್ಯರು. ಅವರು ಎಲ್ಲ ಕಾಯಿಲೆಗೂ ನಾರುಬೇರಿನ ಔಷಧಿ ಕೊಡುವವರು. ಅವರ ಕೈಗುಣ ಒಳ್ಳೆಯದೆಂದು ಅಲ್ಲೆಲ್ಲ ನಂಬಿಕೆ ಇತ್ತು.

ಜಾನುವಾರುಗಳಿಗಂತೂ ವೆಂಕತ್ತೆಯ ಮದ್ದು ಒಳ್ಳೆ ನಾಟುತ್ತಿತ್ತು. ಎಷ್ಟೋ ಸಲ ರಾತ್ರಿಕಟ್ಟಿಯೂ ಜನರು ಒಂದೋ ಗುಳಿ ಲೇಹ್ಯ, ಕಷಾಯ ತಗೊಂಡುಹೋಗುವುದು ಇಲ್ಲಾ ಸೀರಿಯಸ್ ಎಂದಾದರೆ ” ನೀವೇ ಒಂದ್ ಗಳಿಗೆ ಬಂದು ಹೋಯ್ನಿ ವೆಂಕಮ್ಮ” ಎನ್ನುತ್ತ ಕರೆದೊಯ್ಯುವುದನ್ನೂ ಸುಜಾತ ಕಂಡಿದ್ಲು. ಅದೆಂತಕೋ ಗೊತ್ತಿಲ್ಲ,  ವೆಂಕತ್ತೆ ಮನೆಗೆ ಬರುವುದೆಂದರೆ ಸುಜಾತನಿಗೆ ತವರಿಗಿಂತಲೂ ಹೆಚ್ಚು.  ಬೆನ್ನು ಸೆಳೆತ, ತಲೆನೋವು, ಕಾಲುಜಗಿತಕ್ಕೆ ಅವರು ಕೊಡುವ ನಾಟಿ ಔಷಧಿಯ ಜೊತೆಗೆ ಅವರ ಸಾಂಗತ್ಯವೇ ಒಂದು ಮದ್ದಿನಂತೆ ಕಾಣುತ್ತಿತ್ತು.

ವೆಂಕತ್ತೆ ಅಡುಗೆ ಮನೆಗೆ ಬಂದವರು “ಸುಜಾತಾ ಮೂರ್ ಗಂಟೆ ಆಯ್ತ್ ಮರಾಯ್ತಿ. ನಿಂಗ್ ಹಸಿವಾಯ್ ಹೋಯ್ತ್ ಕಾಣತ್ತ್, ತಟ್ಟಿ ಇಡ್ತೆ, ಊಟಕ್ಕೆ ಕೂಕೋ. ನಮ್ದ್ ಊಟ ಆಯ್ತ್ ಆಗ್ಲೇ” ಅಂದರು. ಕೊಚ್ಚಿಗೆ ಅನ್ನ, ಬೆಂಡೆ ಬೋಳುಹುಳಿ, ಮಜ್ಜಿಗೆ……ಸುಜಾತ ಸಮಾ ಉಂಡು “ಬೆನ್ನ್ ಸರ್ತ ಮಾಡ್ತೆ ಒಂಚೂರ್” ಅಂತ ಚಾವಡಿಯಲ್ಲಿ ಮಲಗಿದಳು ಎದ್ದಾಗ ಆರುಗಂಟೆ. ಕಾಫಿ ಮಾಡಿಕೊಂಡು ಬಂದು ವಿರಾಮವಾಗಿ ಕಾಲುನೀಡಿ ಮಾತಿಗೆ ಕುಳಿತ ವೆಂಕತ್ತೆ ಹುಣ್ಸೆಮಕ್ಕಿ, ಬೆಂಗ್ಳೂರು, ಅಮೇರಿಕ ಎಲ್ಲ ಕಡೆ ಸುದ್ದಿ ವಿಚಾರಿಸಿದರು.

ತಮ್ಮ ನೆಂಟರಿಷ್ಟರು ಯಾರನ್ನೂ ನೋಡದೆ ಮೂವತ್ತು ವರ್ಷಗಳಿಗಿಂತ ಜಾಸ್ತಿಯೇ ಆದರೂ ಈಗ ಕಂಡಂತೆ ಎಲ್ಲರ ಹೆಸರು ಹಿಡಿದು ಕೇಳಿದರು. ಈಗೀಗ ಹುಟ್ಟಿದ ಮಕ್ಕಳ ಬಗ್ಗೆಯೂ ಕುತೂಹಲದಿಂದ ವಿಚಾರಿಸಿ ಖುಷಿಪಟ್ಟರು. ಸುಜಾತಂಗೆ ವೆಂಕತ್ತೆಯ ಅಪ್ಪಯ್ಯನ ಮನೆ ಬೈಂದೂರು ಎಂಬುದೊಂದು ಬಿಟ್ಟು ಹೆಚ್ಚೆಂತ ಗೊತ್ತಿಲ್ಲ. ಆದ್ರೂ ಅವರಿವರು ಹೇಳಿದ ಅಡ್ಡ ಮಾತುಗಳಿಂದ ಸಣ್ಣದಿರುವಾಗ ಎಂತದೋ ಒಂದು ನಮೂನೆ ಕಲ್ಪನೆ ವೆಂಕತ್ತೆಯ ಬಗ್ಗೆ ಹುಟ್ಟಿತ್ತು.

ಅದೆಲ್ಲ ಸಮ, ಬಾಗಾಳ್‍ಕಟ್ಟೆ ವೆಂಕತ್ತೆಯ ಗಂಡನ ಊರಾ? ಹಾಗಾದ್ರೆ ಅವ್ರ ಗಂಡ ಎಲ್ಲಿದ್ರ್….ಮಕ್ಕಳು ಇದ್ದಾರ? ಏನಪ, ಇಷ್ಟು ಸಲ ಬಂದುಹೋಗಿ ಮಾಡಿದರೂ ಅದ್ಯಾವುದನ್ನೂ ಸುಜಾತ ವಿಚಾರಿಸಿದವಳಲ್ಲ. ಎಷ್ಟೆಲ್ಲ ಮಾತಾಡುವ ವೆಂಕತ್ತೆಯೂ ‘ಸೂ’ ಅಂತ ಎಂತದೂ ಹೇಳಿಲ್ಲೆ. ಬೊಂಬಾಯಲ್ಲಿ ತನ್ನ ತಂಗಿ ಮಗ ಸುರೇಶ ಇದ್ದ; ವರ್ಷಕ್ಕೊಂದು ಸಲ ಬತ್ತ ಅಂತ ಅವರು ಆಗಾಗ ಹೇಳುತ್ತಿದ್ದುದೊಂದು ಗೊತ್ತು ಅಷ್ಟೇ. ಹಾಗಂತ ಅವರ ಮನೆಯ ಗೋಡೆಯಲ್ಲೋ ಮತ್ತೊಂದರಲ್ಲೋ ಯಾರ ಫೋಟೋವೂ ಇದುವರೆಗೆ ಸುಜಾತಳ ಕಣ್ಣಿಗೆ ಬಿದ್ದಿಲ್ಲ.

“ಕಾಫಿ ಹ್ಯಾಂಗಿತ್ತ್ ಸುಜಾತ ? ಲಾವಣ್ಯ ಮಾಡಿದ್ದ್” ವೆಂಕತ್ತೆ ಪಕ್ಕ ಕೇಳಿದಾಗ ಅವಳಿಗೆ ಮಾತೇ ಹೊರಡಲಿಲ್ಲ. ಕಾಫಿ ಲಾಯ್ಕಿತ್ತ್ ಹೌದ್, ಈ ಲಾವಣ್ಯ ಯಾರಂಬ್ರ್? ಇವ್ರ ತಂಗಿ ಮಗಳಾ ಹಂಗಾರೆ ? ” ಅದ್ಯಾರ್ ವೆಂಕತ್ತೆ ?” ಎಂದಳು ಸುಜಾತ.

” ಅದೊಂದ್ ಅಲಾಯ್ದ ಕತೆ, ಕಡಿಗೆ ಹೇಳ್ತೆ ಹೆಣೆ” ಎನ್ನುತ್ತ “ಲಾವಣ್ಯಾ ಬಾ ಇಲ್ಲ್” ಎಂದು ಕರೆದರು. ಅಡಿಗೆ ಮನೆಯಲ್ಲಿದ್ದ ಹುಡುಗಿ ಈಚೆ ಬಂದು ವೆಂಕತ್ತೆಬದಿಗೆ ಕುಳಿತಾಗ ಸುಜಾತಂಗೆ ಆಶ್ಚರ್ಯವೇ ಆಯ್ತು. ಅಬ್ಬ! ಎತ್ತರ ನಿಲುವಿನ ಚಂದದ ಹುಡುಗಿ. ಬವುಷಃ ಇಂತವರನ್ನು ಕಂಡೇ ಕವಿಗಳು ರೂಪಸಿ, ಸಹಜಸುಂದರಿ ಎಂದೆಲ್ಲ ಹೊಗಳುವುದಿರಬೇಕು ಅಂದುಕೊಂಡಳು.

“ಸುಜಾತಕ್ಕ, ನಿಮ್ಮ್ ಸುದ್ದಿ ಸುಮಾರ್ ಸಲ ಹೇಳ್ತಾ ಇತ್ರ್ರ್ ವೆಂಕದೊಡ್ಡ” ಎಂದಿತು ಹುಡುಗಿ. ” ಹಾ ಹೌದಾ ಲಾವಣ್ಯ ? ಲಾಯ್ಕಾಯ್ತ್, ಎಲ್ಲರ್ ಎದ್ರೂ ಈ ಸುಜಾತನ್ನ ದೂರದಿದ್ರೆ ನಿದ್ದಿ ಬತ್ತಿಲ್ಲೆ ವೆಂಕತ್ತಿಗೆ” ಸುಜಾತ ತಮಾಷೆ ಮಾಡಿದಳು. ಚೂರುಹೊತ್ತು ಸಂಕೋಚದಿಂದ ಕೂತಿದ್ದ ಲಾವಣ್ಯ ಎದ್ದು” ನಾನ್ ಓದೂಕ್ ಹ್ವಾತೆ” ಎಂದು ಪಡಸಾಲೆಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಳು. ವೆಂಕತ್ತೆ ಮನೆಯಲ್ಲಿ ಒಟ್ಟು ಮೂರುಕೋಣೆ.

ಒಂದು ದೇವರ ಕೋಣೆ ಇನ್ನೊಂದು ಪಡಸಾಲೆಕೋಣೆ, ಮತ್ತೊಂದು ಮದ್ದಿನಕೋಣೆ. ವೆಂಕತ್ತೆ ಮೆಲಗುತ್ತಿದ್ದುದು ಮದ್ದಿನಕೋಣೆಯಲ್ಲಿ. ಅಲ್ಲಿ ಮರದ ಕಪಾಟುಗಳಲ್ಲಿ ಚಕ್ಕೆ ಬೇರು, ನಾರು, ಕಷಾಯ, ಲೇಹ್ಯ, ಪುಡಿಗಳು, ಒಣಗಿದ ಎಂತದೋ ಕಾಯಿಗಳು, ಎಲೆಗಳು ಎಲ್ಲವನ್ನೂ ಶಿಸ್ತಾಗಿ ಜೋಡಿಸಿಟ್ಟಿದ್ದರು. ವೆಂಕತ್ತೆಯ ಬೆಕ್ಕು ಬೀರಿ ಮಲಗುತ್ತಿದ್ದುದೂ ಅಲ್ಲೇ ಅವರ ಮಂಚದ ಮೇಲೆ. ದೇವರಕೋಣೆಯಲ್ಲಿ ಸುಮಾರು ದೇವರ ಪೋಟೋಗಳನ್ನೆಲ್ಲ ಜೋಡಿಸಿಟ್ಟಿದ್ದರು.

ದಿನವೂ ಸಾಯಂಕಾಲ ಕತ್ತಲಾದ ಕೂಡಲೇ ದೇವರ ಮುಂದೆ ನಂದಾದೀಪ ಹಚ್ಚಿಟ್ಟು ಅಡ್ಡಬಿದ್ದೇ ಅಡುಗೆ ಕೆಲಸ ಸುರುಮಾಡುತ್ತಿದ್ದುದು ಅವರು. ಸುಜಾತ ಪ್ರತಿಸಲ ಬಂದಾಗಲೂ ಮಲಗುತ್ತಿದ್ದುದು ಪಡಸಾಲೆಕೋಣೆಯಲ್ಲಿ. ಆ ಕೋಣೆಯ ಕಿಟಕಿ ಪಕ್ಕದಲ್ಲೇ ದೊಡ್ಡ್ ಹಲಸಿನ ಮರ. ಅಲ್ಲೇ ಆಚೆ ಒಂದು ಭೂತದ ಗುಡಿ. ಅಕ್ಕ ಪಕ್ಕ ಬೋಗಿ, ಕಿರಾಲ್ ಬೋಗಿ, ಸಾಗುವಾನಿ ಮರಗಳು. ನಡುನಡುವೆ ಇಣುಕುತ್ತಿದ್ದ ವೆಂಕತ್ತೆ ನೆಟ್ಟ ದಾಸವಾಳ, ಅಬ್ಬಲಿಗೆ, ಪಾರಿಜಾತದ ಗಿಡಗಳು….

“ಇವತ್ತ್ ನಾವಿಬ್ರ್ ಚಾವಡಿಯಗೇ ಮನಿಕಂಬ, ಆತಿಲ್ಯ ಸುಜಾತ? ನಾ ಮಸ್ತ್ ಮಾತಾಡ್ಕ್ ಬಲ್ಯ ನಿನ್ಹತ್ರ?” ಎಂದರು ವೆಂಕತ್ತೆ. “ಅಡ್ಡಿಲ್ಲೆ, ನಂಗಿನ್ನ್ ಹ್ಯಾಂಗೂ ರಾತ್ರಿಗೆ ನಿದ್ದಿ ಬತ್ತಿಲ್ಲೆ. ಮಧ್ಯಾಹ್ನ ಸಮಾ ನಿದ್ದಿ ಆಯ್ತ್” ಎಂದಳು ಸುಜಾತ. ರಾತ್ರಿಯೂಟ ಮುಗಿದು ಚಾವಡಿಯಲ್ಲಿ ಎರಡು ಚಾಪೆ ಹಾಸಿದರು ವೆಂಕತ್ತೆ. ಲಾವಣ್ಯ ಒಂದೆರಡು ಮಾತಾಡಿ ಕೋಣೆ ಸೇರಿಕೊಂಡಳು. “ಪಾಪ, ಜಾಸ್ತಿ ಓದೂಕಿತ್ತ್ ಕಾಣತ್ತ್” ಅಂದುಕೊಂಡಳು ಸುಜಾತ.

ಲೈಟ್ ಆರಿಸಿದಮೇಲೆ ಕಾಡಿಗೆ ಕತ್ತಲು. ಅಂತಹ ಕತ್ತಲನ್ನು ಕಾಣದೆ ವರ್ಷವೇ ಆಯ್ತು ಅನ್ನಿಸಿ ಹೀರಿ ಒಳತುಂಬಿಕೊಳ್ಳುವಂತೆ ನಿಡಿದಾಗಿ ಉಸಿರೆಳೆದುಕೊಂಡಳು. ವೆಂಕತ್ತೆ ಮನೆಯಲ್ಲಿ ಫ್ರಿಜ್ಜ್, ಟಿ.ವಿ, ವಾಷಿಂಗ್‍ಮೆಷಿನ್ ಎಂತದೂ ಇನ್ನೂ ಬಂದಿರಲಿಲ್ಲ. “ನಂಗೆ ಸದ್ಯ ಅದೆಲ್ಲ ಬ್ಯಾಡ. ಕೈ ಕಾಲ್ ತಲಿ ಗಟ್ಟಿ ಇತ್ತ್” ಎಂದು ಕವಳ ಹಾಕುತ್ತ ನಗೆಯಾಡುತ್ತಿದ್ದರು ಅವರು. ಸುಜಾತಂಗೆ ಚಳಿಯೆನಿಸಿ ರಗ್ಗು ಎಳೆದುಕೊಂಡಳು. “ಇದೆಂತ ವೆಂಕತ್ತೆ! ನಿಮ್ಮೂರಂಗೆ ಸೆಕೆಯೇ ಇಲ್ಯಲೇ. ಹುಣ್ಸಿಮಕ್ಯಗೆ, ಬೈಲೂರಂಗೆಲ್ಲ ಭಾರೀ ಉಷ್ಣ. ನೀರ್ ಸಮೇತ ಬತ್ತೂಕ್ ಆಯ್ತ್ ಬಾಮಿಯಂಗೆ” ಎಂದಳು ಸುಜಾತ.

” ಹಾ ನಮ್ಮ್ ಪುಣ್ಯ ಕಾಣ್” ಎನ್ನುತ್ತ ವೆಂಕತ್ತೆ ಮಲಗಿದರು. ಥಟ್ಟನೆ ಸುಜಾತಳಿಗೆ ವೆಂಕತ್ತೆಯ ಪರಿಸ್ಥಿತಿ ಎಲ್ಲರಿಗಿಂತ ಬೇರೆಯೇ ಆದದ್ದು ಯಾಕೆ? ಕಾರಣ ಕೇಳಿಬಿಡಬೇಕೆಂಬ ಗಡಿಬಿಡಿ ಕಾಡತೊಡಗಿತು. ಅಷ್ಟೊತ್ತಿಗೆ “ಸುಜಾತ, ನಿನ್ನ್ ಮಗ  ಸುಹಾಸ ಅಮೇರಿಕದಗೆ ಹ್ಯಾಂಗಿದ್ದ ಅಂಬ್ರ್? ನೀನೂ ಹೋಯಿದ್ಯಲೆ, ಲಾಯ್ಕಿತ್ತ ಅಲ್ಲೆಲ್ಲ?” ಎಂಬ ವೆಂಕತ್ತೆಯ ಪ್ರಶ್ನೆ ಕತ್ತಲಿಂದ ತೂರಿಬಂತು. “ಹಾ ಅಡ್ಡಿಲ್ಲೆ ವೆಂಕತ್ತೆ, ಅಲ್ಲೆಲ್ಲ ನಮ್ಮ್ ದೇಶದ ಕಣೆಂಗೆ ಬಿಡುಬೀಸಾಗಿ ಇಪ್ಕ್ ಅತಿಲ್ಯೆ.  ಆರೂ ಎಂತ ಸೌಲಭ್ಯ ಬೇಕಾರೂ ಇತ್ತ್. ಸತ್ಯ ಪ್ರಾಮಾಣಿಕತೆ ಎಲ್ಲ ಜಾಸ್ತಿ. ಹಾಂಗೇ ರೂಲ್ಸ್‍ಗಳೂ ಜಾಸ್ತಿಯೇ.

ಏನೇ ಆದ್ರೂ ಮನುಷ್ಯನಿಗೆ , ಅವನ ಮನಸ್ಸಿನ ಭಾವನೆಗಳಿಗೆ ಅಲ್ಲಿ ಬೆಲೆ ಹೆಚ್ಚ್.  ನಮ್ಮಲ್ಲಿ ಕಣಂಗ್ ಅಲ್ಲ” ಎಂದವಳು “ಸುಹಾಸಂಗೆ ಅಲ್ಲೇ ಇಪ್ಕೆ ಇಷ್ಟ ಇಲ್ಲೆ ಅಂಬ್ರ್. ಇನ್ನೊಂದ್ ನಾಕ್ ಐದ್ ವರ್ಷ ಕೆಲ್ಸ ಮಾಡಿ ಭಾರತಕ್ಕೆ ಬತ್ತ ಅಂವ. ನಂಗೂ ಅವ್ನ್ ಇಲ್ಲೇ ಇದ್ರೆ ಖುಷಿ, ಇಪ್ದ್ ಒಬ್ಬ ಮಗ ನಮ್ಗೆ, ಹಿಂದಿಲ್ಲೆ ಮುಂದಿಲ್ಲೆ” ಎಂದಳು. “ಅದೂ ಸಮವೇ ಸುಜಾತ, ಹಾಂಗಾ ಬೆಂಗಳೂರಗೇ ಇರ್ಲಿ ಮರಾಯ್ತಿ ಕಣ್ಣ್ ಮುಂದೆ. ಆದ್ರೂ ಒಂದ್ ವಿಚಿತ್ರ ಹೆಣೇ, ಎಲ್ಲ ಅಮ್ಮಂದಿರೂ ಮಗ ಅಮೇರಿಕದಂಗೇ ಇರ್ಕ್ ಅಂದ್ ಹಾರೈಸ್ತ್ರ್ ಈಗ.  ನೀನ್ ಮಾತ್ರ ಅಲಾಯ್ದ ಬಿಡ್” ಎನ್ನುತ್ತ ನಗೆಯಾಡಿದರು ವೆಂಕತ್ತೆ.

ಹೊರಗಿನ ಸದ್ದುಗಳು ಆಗಾಗ ಕೇಳುತ್ತಿದ್ದವು. ತೋಟದ ಗೇಟಿನ ಹತ್ತಿರ ಎಲ್ಲೋ ವೆಂಕತ್ತೆ ಮನೆಯ ನಾಯಿ ಬಿಡುವು ಕೊಟ್ಟು ಕೊಟ್ಟು ಕೂಗುತ್ತಿತ್ತು. ಮಧ್ಯೆ ಮಧ್ಯೆ ಅಡಕೆ ಹಾಳೆ,  ಚಂಡ್ ಪಳೆ ಹೀಗೆ ಎಂತದೋ ಬೀಳುವ ಸಣ್ಣ ಸಣ್ಣ ಸದ್ದುಗಳು ಕಿವಿಗೆ ತಾಕುತ್ತಿದ್ದವು. ಒಂದೆರಡು ವಿಂಚುಹುಳ ಅಲ್ಲಲ್ಲಿ ಮಿಣಿ ಮಿಣಿ ಮಾಡುತ್ತ ಒಳಗೇ ಬಂದಿದ್ದವು.” ವೆಂಕತ್ತೇ, ಒಂದ್ ಮಾತ್ ಕೇಂತೆ” ಸುಜಾತ ಅಂದಳು.

“ಹೇಳ್ ಹೆಣೇ ಎಂತದದ್”

“ಅಲ್ಲಾ, ನೀವ್ ಇಷ್ಟ್ ದೂರ ಬಂದ್ ಈ ಘಾಟಿಯಂಗೆ ಇದ್ದದ್ದಾದ್ರೂ ಎಂತಕೆ, ನಮ್ಮ್ ಬದಿಗೆಲ್ಲ ಬಪ್ದೇ ಕೈದ್ ಮಾಡ್ಕಂಡ್ ಕೂತದ್ದ್ ಎಂತಕೆ? ನಾನ್ ಸಣ್ಣ ಇಪ್ಪತ್ತಿಗೆ ನೀವ್ ನಮ್ಮನಿಗೆ ಬಂದ್ ಹೋದ್ದ್ ನೆನಪಿತ್ತ್ ನಂಗೆ. ಆಗ ಅಮ್ಮನಿಗೆ ನೀವ್ ಬಂದ್ರೆ ಎಷ್ಟ್ ಖುಷಿಯಾತಿತ್ತ್! ಕಡಿಗೆ ಹೀಂಗೆಲ್ಲ ಆಯ್ತಲ್ಲ ಇದೆಲ್ಲ ಯಾಕೆ ನಂಗೊಂದೂ ಗೊತ್ತಿಲ್ಲೆ.  ಅದ್ಕೇ ಇವತ್ತ್ ಕೇಂಡೆ”

“ಸುಜಾತಾ, ಈಗ ಅದೆಲ್ಲ ಎಂತಕೆ ಮರಾಯ್ತಿ,  ಹೋಯ್ಲಿಬಿಡ್” ವೆಂಕತ್ತೆ ಅಂದಾಗ ಅವರಿಗೆ ಬೇಜಾರಾಯ್ತೇನೋ ಅನ್ನಿಸಿ ಸುಜಾತಂಗೆ ಒಂತರಾ ಆಯ್ತು. ಎದ್ದು ಕುಳಿತು ಕತ್ತಲೆಯಲ್ಲಿ ಬಳಚಿ ತಲೆದಸಿ ಇಟ್ಟಿದ್ದ ತಂಬಿಗೆಯಿಂದ ನೀರು ಕುಡಿದು “ಬೇಜಾರ್ ಮಾಡ್ಕಬೇಡಿ ವೆಂಕತ್ತೆ” ಎಂದಳು. ಅಯ್ಯೋ ಬೇಜಾರೆಂತದಿಲ್ಲೆ ಹೆಣೆ. ಲಾವಣ್ಯನ್ ವಿಷ್ಯ ಆಗ ಕೇಂಡ್ಯಲೆ. ಅದ್ ಹೇಳ್ತೆ ಈಗ, ಸ್ವಸ್ಥ ಮನಿಕೊ ಹೊದ್ಕಂಡ್”  ಅಂದರು. ನೆಲದಲ್ಲಿ ಮಲಗಿದಾಗೆಲ್ಲ ಸುಜಾತಂಗೆ ಗಟ್ಟಿ ನೆಲ ಅಮ್ಮನ ಮಡಿಲು ಅನ್ನಿಸುವುದು. ಈಗಲೂ ಹಾಗೇ ನೆಲಕ್ಕೆ ಬೆನ್ನುಕೊಟ್ಟು ಮಲಗಿದಳು.

“ಸುಜಾತಾ, ಪಡುಬೈಲ್ ಗೊತಿತಾ ನಿಂಗೆ… ಅಲ್ಲಿನ್ ಹೆಣ್ಣ್ ಈ ಲಾವಣ್ಯ” ಎಂದರು ವೆಂಕತ್ತೆ. “ಹಾ, ಅಲ್ಲೆಲ್ಲ ನಮ್ ಪೈಕಿಯವರು ಇದ್ರ್ ಅಂದ್ ಗೊತಿತ್ ಅಷ್ಟೆ. ಗುರ್ತ ಪರಿಚಯ ಇಲ್ಲೆ ವೆಂಕತ್ತೆ.” “ಸಮ ,ಮೊದ್ಲೆಲ್ಲ ಹೋಯಿ ಬಪ್ದ್ ಇತ್ತ್…ಅಂದ್ರೆ ನಿನ್ನ ಅಜ್ಜಿ ಕಾಲ್ದಂಗೆ; ನಿಮ್ಗೆಲ್ಲ ಗೊತ್ತಿಲ್ಲೆ ಬಿಡ್. ಈ ಹೆಣ್ಣಿನ್ ಅಮ್ಮನ್ನ್ ಕಂಡ್ ನೆನಪಿತ್ತ್ ನಂಗೆ, ಶಾಂತ ಅಂದ್ಹೇಳಿ ಹೆಸ್ರ್. ಆಗಿನ್ನೂ ಮೈನೆರೆದಿರಲಿಲ್ಲ ಅವ್ಳ್” ಎನ್ನುತ್ತ ವೆಂಕತ್ತೆ ಶಾಂತ ಎಂಬವರ ಮಗಳಾದ ಲಾವಣ್ಯನ ಕಥೆಯನ್ನು ಹೇಳಲು ಶುರುಮಾಡಿದರು.

ಲಾವಣ್ಯನ ಅಪ್ಪ ಅಮ್ಮನಿಗೆ ಮೂರೂ ಹೆಣ್ಣ್ಮಕ್ಕಳ್ಳ್. ಅವ್ಳ ಅಪ್ಪಯ್ಯಂದ್ ಸಣ್ಣ್ ಹೋಟ್ಲ್. ಆದಾಯ ಹೆಚ್ಚೆಂತ ಇಲ್ಲೆ. ಇಪ್ಪುಕೊಂದ್ ಸಣ್ಣ್ ಮನಿ.  ಅಮ್ಮ ಮನಿಯಲ್ಲೇ  ಹಪ್ಪಳ ಉಪ್ಪಿನಕಾಯಿ ಮಾಡಿ ಮಾರಾಟ ಮಾಡಿ ಸ್ವಲ್ಪ ಖರ್ಚ್ ಕಂಡ್ಕಂತಿದ್ಲ್ ಅಂಬ್ರ್. ಎಲ್ಲ ಹೆಣ್ಣ್ ಮಕ್ಕಳಿಗೂ ಮದಿಯಾಯ್ಕಲೇ ಮುಂದೆ ಅಂತ ಅವಸರ ಮಾಡಿ ಲಾವಣ್ಯಂಗೆ ಪಿಯುಸಿ ಮುಗಿದದ್ದೇ ತಡ ಮದುವೆ ಮಾಡಿಸಿದ್ರ್. ಅಪ್ಪನ ಕಡೆ ಸಂಬಂಧದ ಹುಡುಗ. ಅವ್ನ್ ಸುಮಾರಿಗೆ ಅನುಕೂಲ್ದಂಗೇ ಇದ್ದಿದ.  ಆರೂ, ಮನ್ಯಂಗೇ ಕೂಕಂಬ್ಕೆ ಬೇಜಾರ್ ಅಂದ್ಹೇಳಿ ಕಂಪ್ಯೂಟರ್ ಎಲ್ಲ ಕಲ್ತ್ ಕಡಿಗೆ ಒಂದ್ ಸಣ್ಣ್ ಕೆಲ್ಸಕ್ಕ್ ಹ್ವಾತಿದ್ಲ್ ಲಾವಣ್ಯ. 

ವಿಷ್ಯ ಎಂತದೋ ಗುತ್ತಿಲ್ಲೆ ಕಾಣ್; ಅಂತೂ ಅಲ್ಲ್ ಒಂದ್ ಹುಡುಗನ ಜ್ವತಿಗೆ ಓಡಾಡ್ತಿದ್ಲಂಬ್ರ್. ಒಂದ್ ದಿನ ಇವ್ಳೂ, ಆ ಗಂಡೂ ಪಾರ್ಕಂಗೆ ಕೂಕಂಡಿಪ್ಪ ಸಮಯಕ್ಕೆ ಒಂದ್ಹತ್ತ್ ಜನ ಬಂದ್ದಂಡ್” ಇವ್ನ್ ನಿಂಗೆ ಎಂತಾಯ್ಕ್ ” ಕೇಂಡ್ರಂಬ್ರ್.  ಅವ್ರ್ ಜೋರ್ ಮಾಡಿದ್ ರಾಪ್, ಹೊಡುಕ್  ಬಪ್ಪ್ ಅಂದಾಜೆಲ್ಲ ಕಂಡ್ಕಡ್ ಹೆದ್ರಿ “ನನ್ನ್ ಗಂಡ” ಅಂದ್ಲಂಬ್ರ್; ಇವ್ಳ್. ಆಗ ಅವರಲ್ಲೇ ಒಬ್ನ “ಸುಳ್ಳ್ ಹೇಳ್ತಾ ಇದ್ದಾಳ್. ಇವ್ಳ್ ನಮ್ಮ್ ಸತೀಶಣ್ಣನ್ ಹೆಂಡ್ತಿ ಅಲ್ದಾ… ಇಲ್ಲ್  ಕೆಲ್ಸಕ್ಕ್ ಅಂದ್ ಬಂದ್ಕಂಡ್ ಸಾಯ್ಬನ್ ಜತಿಗೆ ಚಕ್ಕಂದ ಆಡ್ತಿದ್ಲ್ ಕಾಣಿ” ಅಂದ. 

ಎಲ್ಲರು ಒಟ್ಟಾಯಿ ಇವ್ರಿಬ್ರನ್ನ ಆಚೀಚೆ ಹ್ಯಾಪುಕೆ ಬಿಡದೇ ಟಿ.ವಿ.ಯವ್ರನ್ನ್ ಕರ್ಕ ಬಂದ್ ಫೋಟೋ, ವೀಡಿಯೋ ಎಲ್ಲ ತೆಕ್ಕಂಡ್ರಂಬ್ರ….. “ಅಯ್ಯೋ ಇದೆಲ್ಲ ಬ್ಯಾಡ. ಬಿಡಿ ನಮ್ಮನ್ನ”. ಅಂತ ಲಾವಣ್ಯ ಮರ್ಕಿರೂ  ಹರ್ಕಿರೂ ಕೇಣ್ಣಿಲ್ಲೆ. ಕಡಿಗೆ ಅದೇ ದಿನ ಮಂಗ್ಳೂರಿದ್ ಯಾವ್ದೋ ಚಾನಲ್ಲಂಗೆ ಆ ಫೋಟೋ ವೀಡಿಯೋ ಎಲ್ಲಾ ಹಾಕಿರಂದ್ರ್. ಲಾವಣ್ಯ ಸಾಯಂಕಾಲ ಮನಿಗೆ ಹ್ವಾಪುರೊಳಗೆ ಇದೆಲ್ಲ ಪಬ್ಲಿಕ್ ಆಯಿ ಅವ್ಳ್ ಗಂಡನ್  ಮನಿಯಂಗೆ ದೊಡ್ಡ್ ಗಲಾಟಿ ಎದ್ದಿತಂಬ್ರ್.

ಆ ಊರಿನ್ ಕೆಲವ್ ಕೆಲ್ಸ ಇಲ್ಲದ  ಹಡಿ ಮಕ್ಳೆಲ್ಲ ಬಂದ್ ಗಲಾಟಿ ಮಾಡಿ “ಆ ಸಾಯ್ಬನ್ ಜೊತಿಗೇ ಬೆರ್ಸಿ ಇವಳನ್ನ”  ಅಂದ್ ಕೂಗಾಟ ಅಂಬ್ರ್. ಕಡಿಗೆ ಬೇರೆ ದಾರಿ ಇಲ್ದೆ ಲಾವಣ್ಯ ಆ ಹುಡುಗನ ಜೊತೆಗೇ ಹ್ವಾದಾಳ್.  ರಾಜಕೀಯದವ್ರೆಲ್ಲ ಸೇರ್ಕಂಡ್ ಕೋಮುಗಲಭೆ ಮಣ್ಣ್‍ಮಸಿ ಅಂತೆಲ್ಲ ಪೇಪರಂಗೆ ಬರ್ಸಿ ಎಲ್ಲ್ ಕಂಡ್ರೂ ಇದೇ ವಿಶ್ಯ ಮಾತಾಡೂದಾಯ್ತಲೇ. ಇಷ್ಟೆಲ್ಲ ಆಪತಿಗೆ ಆ ಹುಡುಗನ್ ಮನಿ ಬದಿಗೂ ಕೆಲವೊಬ್ರೆಲ್ಲ ಹೋಯಿ ರಾಪ್ ಮಾಡಿ “ಈ ಹೆಣ್ಣಿನ್ ಓಡ್ಸಿನಿ” ಅಂದ್ ಮಚ್ಚ್, ಕತ್ತಿ ತಕಬಂದ್ ಹೆದ್ರಿಸಿ ರಾಮಾಯ್ಣ ಅಂಬ್ರ್. ತನ್ನಿಂದ ಅವ್ರಿಗ್ ತೊಂದ್ರಿ ಬ್ಯಾಡ ಅಂದ್ ಲಾವಣ್ಯ ಎದ್ಕಂಡ್ ಅಪ್ಪಯ್ಯನ್ ಮನಿಗೆ ಹ್ವಾರೆ ಅಲ್ಲ್ ಅಮ್ಮ ಮರ್ಕಿರೂ ಯಾರೂ ಗೋಷ್ಟಿ ಮಾಡ್ದೆ

“ಅವ್ಳ್ ಮನಿಗ್ ಬಪ್ದೇ ಬ್ಯಾಡ” ಅಂದ್ ಬಾಗ್ಲ್  ಹಾಕಿರಂಬ್ರ್.  ಪಾಪ ಈ ಹೆಣ್ಣ್ , ‘ಸಮುದ್ರಕ್ಕ್ ಹಾರ್ತೆ’ ಅಂತ ಮಲ್ಪೆಗೆ ಹೋದಾಗ್ಳಿಕೆ  ಅಲ್ಲ್ ನನ್ನ್ ಗುರ್ತದವ್ರ್ ಒಬ್ರ್ ಕಂಡ್ ಇಲ್ಲಿಗೆ ಕರ್ಕಬಂದ್ ಬಿಟ್ರ್ ಬಲ್ಯಾ? ನಾ ನಡುಗಿ ಹೋದೆ ಸುಜಾತಾ. ಇಲ್ಲಿಗ್ ಬಪ್ಪತಿಗ್ ಜೋರ್ ಜ್ವರ ಅದ್ಕೆ .  ಔಷಧ ಎಲ್ಲ ಮಾಡಿ ಕುಡಿಸಿದೆ . ಮೂಳಿ, ಚರ್ಮ ಎರಡೇ ಆಯಿತ್ ಪಾಪ. ನಿದ್ದಿ ಬಂದ್ರು ಸಮೆತ ಕೂಗ್ಕಂಡ್ ಎದ್ದ್ ಕೂಕಂಡ್ ಹೆದ್ರಿಕೆಯಲ್ಲಿ ಗಡಗಡ  ಅಂತಿತ್ತ್. ಕಡಿಗೆ ಆರೈಕೆ ಎಲ್ಲ ಮಾಡಿ, ಧೈರ್ಯ ಹೇಳಿ  ಉಳಿಸ್ಕಂಡೆ ಕಾಣ್.

ಅಲ್ಲ ಸುಜಾತಾ, ನಾವೇ ಕಾನೂನ್,  ನಾವೇ ಪೋಲೀಸ್ ಅಂತ ಕೆಲವ್ ಮಕ್ಕಳೆಲ್ಲ ಕೊಣೀತೋ ಅಂಬ್ರಲೇ…. ಕಾಲ ಎಲ್ಲಿಗ್ ಬಂತ್ ಕಾಣ್. ಟಿವಿಯಂಗೆಲ್ಲ ಕೊಡೊದ್ ಅಂದ್ರೆ ಅಷ್ಟೆ ಸುಲಭ ಆಯಿತನ ಇದೆಲ್ಲ!! …… ಹೀಂಗೆಲ್ಲ ಆಯಿ ಈಗ ಎರ್ಡ್ ವರ್ಷ ಆತ ಬಂತ್. ಇವ್ಳ್ ಗಂಡನಿಗೆ ಬ್ಯಾರೆ ಮದಿ ಆಯ್ತಂಬ್ರ್ ಕಾಣ್! ಹೋಯ್ಲಿಬಿಡ್ ಮಾರಾಯ್ತಿ.  ಯಾರಿಗೆ ಬ್ಯಾಡ ಅಂದ್ರು ನಂಗ್ ಬೇಕ್ ಈ ಹೆಣ್ಣ್.  ಯಾವುದೋ ಪರೀಕ್ಷೆ ಕಟ್ತೆ ಅಂದ್ಲ್, ಕಟ್ಟ್ ಹೆಣೆ  ಅಂದೆ.  ಮನ್ಯಾಗೇ ಕೂತ್ ಓದ್ತಾ ಇದ್ಲ್ ಈಗ”

ವೆಂಕತ್ತೆ ಇನ್ನೂ ಹೆಚ್ಚು ವಿವರ ಹೇಳಲಾರದವರಂತೆ ಮಾತು ನಿಲ್ಲಿಸಿ ಮೌನಕ್ಕೆ ಸರಿದರು. ಸುಜಾತ ಉಸಿರೆತ್ತಲಿಲ್ಲ; ಅವಳ ಬಾಯಿ ಕಟ್ಟಿಹೋಗಿತ್ತು. ದೂರದಲ್ಲೆಲ್ಲೋ ನರಿಗಳು ಊಳಿಡುವುದು ಕೇಳಿಸಿತು. ಸುಮಾರು ಹೊತ್ತು ಬಿಟ್ಟು ಸುಜಾತ “ವೆಂಕತ್ತೇ” ಎಂದಳು. “ಹೇಳ್ ಸುಜಾತ” ಎನ್ನುತ್ತ ಕಣ್ಣು ಮೂಗೊರೆಸಿಕೊಂಡ ಶಬ್ದ. “ಮನಿಕಣಿ ವೆಂಕತ್ತೆ, ಎಲ್ಲ ಒಳ್ಳೆದಾತ್ತ್.  ಚೂರ್ ಹಾಲ್ ಕಾಸಿ ಕೊಡೂದಾ?”  “ಎಂತ ಬ್ಯಾಡ ಹೆಣೇ ನೀ ಮನಿಕೋ, ದೊಡ್ಡ್ ನದಿಯೇ ದಾಟಿ ಬಂದವ್ಳ್……ನಾನ್, ಇದೆಲ್ಲ  ಎಂತದಿಲ್ಲೆ “ಎಂದರು.  ಸುಜಾತಾ ಮತ್ತೆಂತದೂ  ಕೇಳದೇ ಸುಮ್ಮನೇ ನೆಲದ ಮಡಿಲಿಗೆ ತಲೆಯಿಟ್ಟಳು.

ಬೆಳಗಿನ ಜಾವಕ್ಕೆ ಕಿಟಕಿ ಹತ್ತಿರ  ಗೋಪಿಹಕ್ಕಿ  ಹಾಡಲು ಶುರುಮಾಡಿತ್ತು.  ಅದರ ರಾಗ ವಿಸ್ತಾರವಾದ ಹಾಗೂ ಇಡೀ ಕಾಡೇ ಹಾಡು ಆಲೈಸಿದಂತೆ ಅದರಲ್ಲಿ ತಾನೂ ಒಬ್ಬಳಂತೆ ಎಣಿಸಿ ಹಾಗೇ ಮಲಗಿಯೇ ಇದ್ದಳು ಸುಜಾತಾ. ಸ್ವಲ್ಪ ಬೆಳಕು ಹರಿದ ಕೂಡಲೇ ಮಗ್ಗಲು ತಿರುಗಿ ನೋಡಿದಳು. ವೆಂಕತ್ತೆ ಆಗಲೇ ಎದ್ದಾಗಿತ್ತು.  ನಿಧಾನಕ್ಕೆದ್ದು ಮುಖತೊಳೆದು ತೋಟ ನೋಡಲೆಂದು ದಣಪೆ ಸರಿಸಿ ಹೊರಗೆ ಕಾಲಿಟ್ಟಳು. ತಂಪು ಗಾಳಿಗೆ ಮೈ ಜುಮ್ಮೆಂದ ಹಾಗಾಯ್ತು. ಹಾಳೆ ಬೀಳಿಸಿದ ಅಡಿಕೆ ಮರಗಳ ಅಡಿ ನಡೆಯುತ್ತ ವಿಸ್ಮಯದಿಂದ ತಲೆಯೆತ್ತಿ ಮರದ ತುದಿ ಕಾಣುತ್ತ ತೋಟದ ಮೂಲೆಯಲ್ಲಿದ್ದ ಕೆರೆ ಬದಿಗೆ ಹೋದಳು. ಅಲ್ಲಿ ಆಗಲೇ ಯಾರೋ ಕುಳಿತಿದ್ದರು.  ಹತ್ತಿರ ಹೋಗಿ ಕಂಡರೆ ಲಾವಣ್ಯ!  ಉದ್ದ ತಲೆ ಕೂದಲು ಇಳಿಬಿಟ್ಟು ಕೆರೆಯ ತಿಳಿನೀರಲ್ಲಿ ಮಾತಾಡುವವರ ಹಾಗೆ ಇದ್ದಳು. ಸುಜಾತಾ ಹೋಗಿ ನಿಂತದ್ದು ಅವಳಿಗೆ  ಗೊತ್ತಿಲ್ಲ. “ಲಾವಣ್ಯ” ಎಂದಾಗ ಎಚ್ಚತ್ತು “ಸುಜಾತಕ್ಕ, ಬನ್ನಿ ಬನ್ನಿ” ಎಂದಳು.

“ಎಂತ ಮಾಡ್ತ ಇದ್ದೆ ಇಲ್ಲಿ” ಎಂದರೆ. “ಎಂತದಿಲ,  ದಿನಾ ಒಂದರ್ಧ ಗಂಟೆ ಇಲ್ಲ್ ಬಂದ್ ಕೂಕಂಡ್ ಮನಿಗ್ ಹ್ವಾಪ್ದ್” ಅಂದಳು.

“ಸರಿ, ಯಾವ ಪರೀಕ್ಷೆ ಕಟ್ಟಿದ್ದೆ ಪುಟ್ಟೀ” ಸುಜಾತ ಕೇಳಿದೊಡನೆ ಅವಳ ಕಣ್ಣೀರು ಒಡೆದು ಕೆನ್ನೆಗಿಳಿಯಿತು. ಸುಜಾತಾ ಗಾಬರಿಯಾಯಿ “ಎಂತಾಯ್ತ್ ಮಗಾ” ಎಂದರೆ “ಎಂತದಿಲ್ಲ, ನೀವ್’ ಪುಟ್ಟೀ’  ಅಂದ್ರೆಲೇ ಅಮ್ಮನ್ ನೆನಪಾಯ್ತ್” ಎಂದವಳೇ ದಡದಡ ಎದ್ದು ಮನೆ ಕಡೆ ಹೋಗಿಬಿಟ್ಟಳು. ಸುಜಾತಾ ಕೆರೆ ದಂಡೆಮೇಲೆ ಸುದೀರ್ಘ ಯೋಚನೆಯಲ್ಲಿ ಕಲ್ಲಿನಂತೆ ಸುಮಾರು ಹೊತ್ತು ಕೂತೇ ಇದ್ದಳು.

ಆವತ್ತು ಇಡೀ ದಿನ ವೆಂಕತ್ತೆಗೆ ಮದ್ದುಕೊಡುವುದೇ ಕೆಲಸ ಆಯ್ತು. ಒಬ್ಬರಲ್ಲಾ ಒಬ್ಬರು ಸುತ್ತಮುತ್ತ ಹಳ್ಳಿಗಳಿಂದ ಬರುತ್ತಲೇ ಇದ್ದರು. ಲಾವಣ್ಯ, ಸುಜಾತಾ ಸೇರಿ ಅಡುಗೆ ಮಾಡಿದರು.

ರಾತ್ರಿಗೆ ಮತ್ತೆ “ಇವತ್ತೂ ಚಾವಡಿಯಂಗೇ ಮನಿಕಂಬ ಸುಜಾತಾ?” ವೆಂಕತ್ತೆ ಕೇಂಬತಿಗೆ “ಅಕ್ಕ್, ಇಲ್ಲ್ ಒಳ್ಳೇ ತಂಪಿತ್ತ್.  ದಿನಾ ಇಲ್ಲೇ ಮನಿಕಂಬ”   ಎನ್ನುತ್ತ ತಾನೇ  ಚಾಪೆ ತಂದು ಹಾಸಿದಳು ಸುಜಾತಾ. “ಸುಜಾತ, ನಿಂಗೊತಿತನ?” ಮಲಗಿ ಸ್ವಲ್ಪ ಹೊತ್ತಿನ ಮೇಲೆ ಕತ್ತಲೆಯ ಆಳದಿಂದ ವೆಂಕತ್ತೆ ಕೇಳಿದರು.  “ಎಂತ ವೆಂಕತ್ತೆ?  “ಅಲ್ಲಾ ಸುರೇಶ  ಯಾರ್ ಅಂದ್ಹೇಳಿ, ನಿಂಗೊತಿತ ಅಂದೆ”  ” ಯಾರ್ ಅಂದ್ರ್ ಎಂತ? ನಿಮ್ಮ್ ತಂಗಿ ಮಗ ಅಲ್ದಾ  ಅವ್ನ್” ವೆಂಕತ್ತೆ ಯಾಕೆ  ಹೀಂಗೆ ಕೇಂಡ್ರೋ ಗೊತ್ತಾಗಲಿಲ್ಲ ಸುಜಾತಂಗೆ.

“ಅಲ್ಲ ಹೆಣೇ”

“ಮತ್ತೇ?”

ವೆಂಕತ್ತೆ ನಿಡುಸುಯ್ದ ಶಬ್ದ ಕೇಳಿಸಿತು;

“ಅವ್ನ್ ನನ್ನ್ ಮಗ”

“ವೆಂಕತ್ತೇ!!!”

“ಹಾ, ಹೌದ್ ಹೆಣೇ, ಲಾವಣ್ಯನ್ ಕತಿ ಕಣೆಂಗೇ ನಂದೂ ಒಂದ್ ಕತಿ. ಸುರೇಶ ನನ್ನ ಮಗ ಅಂತ ಹೇಳೊಕೆ ಇನ್ನೂ ಧೈರ್ಯ ಬರ್ಲಿಲ್ಲೆ ನಂಗೆ. ಅಬ್ಬಿ ನಾಯಾರೂ ರಸ್ತಿ ಬದ್ಯಂಗೆ ಮಕ್ಳನ್ನ ಕಟ್ಕಂಡ್ ಬಿಡು ಬೀಸಾಯಿ ತಿರ್ಗತ್ತ್, ನಂಗ್ ಅಷ್ಟೂ ಆಯ್ಲಿಲ್ಲೆ”.

“ಅಯ್ಯೋ ಇದೆಂತ ಮಾತ್ ಅಂದ್ ಆಡ್ತ್ರಿ ವೆಂಕತ್ತೆ…..ಸುಮ್ನಾಯ್ಕಣಿ ಕಾಂಬ” ಸುಜಾತ ಅಂದಾಗ “ಹೊಟ್ಟಿ ಸುಡತ್ತ್ ಸುಜಾತಾ. ಹೆತ್ತ್ ಕರ್ಳ್ ಅಲ್ದನಾ ಇದ್…..ಎಷ್ಟ್ ಉಜ್ರ್ ಕಣ್ಣ್ ನೀರ್ ಕುಡ್ದ್‍ರೂ ಈ ಉರಿ ಹ್ವಾತಿಲ್ಲೆ ಸುಜಾತಾ, ಕೆಮಿಗ್ ಬಿದ್ದ್ ಮಾತನ್ನ ನೀನ್ ಹೊರ್ಗ್ ಹಾಕುದಿಲ್ಲೆ ಅಂದ್ಹೇಳಿ ಗೊತಿತ್ ನಂಗೆ; ಹಾಂಗಾಯ್ ಇದೆಲ್ಲ ಹೇಳ್ತಾ ಇದ್ದೆ. ಯಾವ್ ಜನ್ಮದ್ದೋ ಋಣ ನಿಂದ್  ನಂಗೆ” ಅವರಂದಾಗ “ಆಯ್ತ್, ಹೇಳಿ ವೆಂಕತ್ತೆ” ಸುಜಾತ ಧ್ವನಿಯಲ್ಲಿ ಸಮಾಧಾನವನ್ನು ತಂದುಕೊಂಡು ಹೇಳಿದಳು.

” ನನ್ನ್ ಗಂಡ ಅಂಬವ ಮಾ ದಡ್ಡ. ಹಾಗಂತ ಹೆಂಡ್ತಿಗೆ ಕೈ ಎತ್ತೂದ್ರಲ್ಲ್ ದಡ್ಡ್‍ತನ ಇರ್ಲಿಲ್ಲೆ. ಇಡೀ ದಿನ ಗಂಟಿಗಳಿಗೆ ಬಯ್ದಂಗೆ ಬಯ್ಯೂದ್ ಬ್ಯಾರೆ. ಅತ್ತಿ, ಮಾವನೂ ಬಯ್ಯುದ್, ಹೊಡಿಯೂದ್ ಮಾಮೂಲಾಯಿತ್. ಸುಮಾರ್ ವರ್ಷ ನಂಗೆ ಮಗುವೂ ಆಯ್ಲಿಲ್ಲೆ. ಈ ಕಾರಣ ತಕಂಡ್ ಬಯ್ದ್ ಬಯ್ದ್ ಇಟ್ರ್. ಮನ್ಯಂಗೆ ಮೂರ್ಹೊತ್ತಿನ್ ಊಟಕ್ಕೂ ಬರ್ಗಾಲ! ಹಾಂಗಾಯ್ ಅಲ್ಲೊಂದ್ ದೊಡ್ಡ್ ಮನಿಗೆ ಅಡ್ಗಿ ಕೆಲ್ಸಕ್ಕೆ ಹ್ವಾತಿದ್ದೆ. ಆ ಮನಿ ಗಂಡ್ಸ್ ಒಂಚೂರ್ ಲಾಯ್ಕ್ ಮಾಡಿ ಮಾತಾಡಿ ಒಳ್ಳೆ ಸೀರಿ ಗೀರಿ ತಂದ್ಕೊಡ್ತ್ ಮರಾಯ್ತಿ. ನಾನ್ ಅದನ್ನ ನಂಬಿ ಬಿಟ್ಟೆ. ಹಾಂಗೇ ಅದ್ಕೂ ನಂಗೂ ಸ್ನೇಹ ಆಯ್ತ್!  ಇದೆಲ್ಲ ಮನಿ ಬದಿ ಗೊತ್ತಾಯ್ ನಾನ್ ಎಂಟ್ ತಿಂಗ್ಳ್ ಬಸ್ರಿ ಇಪ್ಪತ್ತಿಗೆ ಪಂಚಾಯ್ತಿ ಮಾಡಿ ಬಹಿಷ್ಕಾರ ಹಾಕಿ ಆ ಊರಂಗೇ ನಾನ್ ಇಪ್ಕಾಗ ಅಂತ ತೀರ್ಮಾನ ಮಾಡಿರ್!! ಪಂಚಾಯ್ತಿ ಮುಖ್ಯಸ್ಥರ್ ಯಾರಂತೆ…ಅದೇ ಆ ದ್ವಡ್ಡ್ ಮನಿ ಗಂಡ್ಸಿನ್ ಅಪ್ಪಯ್ಯ! ಆಯ್ತಲೆ ನನ್ನ್ ಗತಿ!

ಕ್ಯರಿ, ಬಾಮಿ ಬದಿ ತಿರ್ಗ್ತಾ ಇದ್ದೆ….! ಆಗಳಿಕ್ಕೆ ಸೇಸಿಬಾಯಿ ಅಂಬ ಕುಡುಬಿಯರ ಹೆಂಗಸೊಬ್ಬಳ್, “ಈ ಹೊಟ್ಟಿ ಹೊತ್ಕಂಡ್ ಸಾಯೂದಾ? ಬನಿ ನನ್ ಜೊತಿಗೆ” ಅಂದ್ಹೇಳಿ ಈ ಜಾಗಕ್ಕೆ ಕರ್ಕ ಬಂದಾಳ್ ಬಲ್ಯಾ? ಈ ಮೂಲ ಜಾಗ ಅವ್ಳದ್ದೇ. ಅವಳದ್ದೊಂದ್ ಸಣ್ಣ್ ಮನಿ ಇತ್ತ್ ಇಲ್ಲ್. ದರ್ಖಾಸ್ ಜಾಗ್ದಂಗೆ ಕೊಗ್ಳ್ ಕಟ್ಟಂಡ್, ಜನ್ರಿಗೆ ಆಪತ್ಕಾಲಕ್ಕೆ ನಾರ್ ಬೇರ್ ಔಷಧ ಕೊಟ್ಕಂಡ್ ಈ ಘಾಟಿಯಂಗೆ ಇದ್ದಿದ್ಲ್ ಅವ್ಳ್. ನನ್ನ್ ಕರ್ಕಬಂದ್ ಬಸ್ರಿ ಹೆಂಗಸಿಗೆ ಎಂತೆಲ್ಲ ಮದ್ದ್ ಬೇಕೋ ಎಲ್ಲ ಮಾಡ್ದಾಳ್.

ಆರೆ ನಂದ್ ಒಂದೇ ಮಾತ್, ‘ನಾ ಸಾಯ್ತೆ’ ಅಂದ್. ಪಾಪ. ಅದ್ ಹ್ಯಾಂಗೆ ನನ್ನ್ ಕಂಡ್ಕಂಡ್ಲೋ ಆ ಪುಣ್ಯಾತ್ ಗಿತ್ತಿ!! ಕಡಿಗೊಂದಿನ ಸುರೇಶ ಹುಟ್ದ. ಆವತ್ತಿಂದ ‘ಸಾಯ್ತೆ’ ಅಂಬ ನನ್ನ ಮಾತ್ ಬಂದ್ ಆಯ್ತ್ ಕಾಣ್. ಮಗು ಚೂರ್ ದೊಡ್ಡ ಆಪತಿಗೆ ಅವಳ್ ಕೊಡ್ತಿದ್ದ್ ಔಷಧಿ ಬಗ್ಗೆ ಹೇಳಿಕೊಟ್ಲ್. ಯಾವ್ ಕಾಡಂಗೆ ಯಾವ್ ಬೇರ್, ಸೊಪ್ಪ್ ಎಲ್ಲಿರುತ್ತ್? ಅದನ್ನ ತಂದ್ ಮದ್ದ್ ತಯಾರ್ಸುದ್ ಹ್ಯಾಂಗೆ, ಯಾರಿಗೆ ಎಷ್ಟ್ ಪ್ರಮಾಣದಂಗೆ ಕೊಡ್ಕ್ ….ಹೀಂಗೆ ಎಲ್ಲ ಹೇಳಿಕೊಟ್ಲ್. ಅವ್ಳ್ ನನ್ನ್ ಗುರು ಮರಾಯ್ತಿ.

ಹೀಂಗೇ ಸುರೇಶ ದೊಡ್ಡ ಆದ. ಅವ್ನಿಗೆ ಸುಮಾರ್ ನಾಕೈದ್ ವರ್ಷ ಅಂಬೊತ್ತಿಗೆ ಸೇಸಿ ಬಾಯಿ ಹತ್ರ ಯಾವ್ದೋ ಮದ್ದ್ ವಿವರ ಕೇಂಬ್ಕೆ ಅಂತ ಪಂಡಿತರೊಬ್ರ್ ಬಂದ್ರ್, ಸುರೇಶನ್ನ ಕಂಡ್ ನನ್ನ ಕತಿ ಎಲ್ಲ ಕೇಂಡ್ ಅವನ್ನ ಯಾವ್ದಾರೂ ಒಂದ್ ಆಶ್ರಮದ ಶಾಲೆಗೆ ಸೇರಿಸ್ತೆ ಅಂದ್ರ್. ನನ್ನ ಕೆಟ್ಟ ಹೆಸ್ರ್ ಮಗಿಗೆ ಬಪ್ಕಾಗ ಅಂದ್ಹೇಳಿ ಅದ್ ನನ್ನ ಮಗು ಅಂತ ಹೇಳೊದೇ ಬ್ಯಾಡ ಅಂದೆ ನಾನ್! ಕಡಿಗೆ, ನನ್ನ್ ತಂಗಿ ಒಬ್ಳ್ ತೀರಿ ಹೋಯ್ತಿದ್ಲ್, ಇವ್ನ್ ಅವ್ಳ್ ಮಗ ಅಂತ ಹೇಳೂದಂತಾಯ್ತ್!  ಹೊಟ್ಟಿ ಒತ್ತಿ ಹಿಡ್ಕಂಡ್ ಸುರೇಶನ್ನ ಅವ್ರ್ ಜೊತಿಗೆ ಕಳಿಸಿಕೊಟ್ಟೆ ಕಾಣ್ ಸುಜಾತ…..

ಕಡಿಗೂ ನಾನ್ ಎಂತಕೆ ಬದುಕಿದೆನೋ ಗೊತ್ತಿಲ್ಲೆ. ಬವುಷಃ ಸಾಯೂಕಾತಿಲ್ಲೆ ಅಂದ್ಹೇಳಿ ಬದುಕಿದೆ ಕಾಣತ್ತ್. ಸುರೇಶಂದ್ ಆಗಾಗ ಕಾಗ್ದ ಬತ್ತಿತ್ತ್. ಹೀಂಗೇ ದಿನ ಕಳೀತ್. ಇಲ್ಲ್ ಸಣ್ಣ್ ತ್ವಾಟ ಮಾಡ್ದೆ. ಸೇಸಿಬಾಯಿಗೆ ವರ್ಷ ಆಯ್ತ್ : ತೀರಿಹ್ವಾದ್ಲ್. ಸುರೇಶ ಒಳ್ಳೆ ಓದಿದ, ಅವ್ನಿಗೆ ಬೊಂಬಾಯಂಗೆ ಕೆಲ್ಸ ಸಿಕ್ಕಿತ್ ಅಂದ್ ಗೊತ್ತಾಯಿ ಒಂದ್ ನಮೂನಿ ನೆಮ್ಮದಿ ಆಯ್ತ್ ಕಾಣ್. ವರ್ಷಕ್ಕೊಂದ್ ಸಲ ಬತ್ತ ‘ದೊಡ್ಡಮ್ಮ ದೊಡ್ಡಮ್ಮ’ ಅಂದ್ಕಂಡ್.. ಮರ್ಕುದೋ ನಗಾಡುದೋ ಒಂದೊಂದ್ಸಲ ಗೊತ್ತೇ ಆತಿಲ್ಲೆ ಮರಾಯ್ತಿ ನಂಗೆ” ವೆಂಕತ್ತೆ ಮಾತು ನಿಲ್ಲಿಸಿದರು.

“ಅಲ್ಲ ವೆಂಕತ್ತೆ, ಸುರೇಶಂಗೆ ಪ್ರಾಯಬಂದ್ ಕೆಲ್ಸ ಸಿಕ್ಕಿರ್ ಮೇಲಾರೂ ಸುಳ್ಳೆಂತ ಬದ್ದು ಎಂತ ಅಂದ್ ಹೇಳ್ಲಕ್ಕಿತ್ತಲೇ ನೀವ್…” ಮೌನ ಮುರಿದು

ಸುಜಾತ ಅಂದಾಗ “ಹ್ಯಾಂಗ್ ಹೇಳೊದ್ ಹೆಣೇ? ಬಾಯೇ ಬತ್ತಿಲ್ಲೆ ನಂಗೆ. ಇಷ್ಟ್ ದಿನ ಯಾಕ್ ಸುಳ್ಳ್ ಹೇಳ್ದೆ ಅಂದ್ ಅವ್ನ್ ಜಪ್ಪಡ್ಸಿರೆ ನಾನೆಂತ ಮಾಡೂದ್! “

“ಇರ್ಲಿ ವೆಂಕತ್ತೆ, ಕಾಲ ಬಂದ್ ಕೂಡ್ಲೆ ನಾವೇ ಬ್ಯಾಡ ಅಂದ್ರೂ ಎಲ್ಲ ತಂತಾನೇ ಸರಿಯಾತ್ತ್. ಈಗ ನಿದ್ದಿ ಮಾಡಿ” ಎನ್ನುತ್ತ ತನ್ನೊಳಗೆ ಇಲ್ಲದ ಸಮಾಧಾನವನ್ನು ವೆಂಕತ್ತೆಗೆ ಹೇಳಿ ಬೆಳಗ್ಗೆಯವರೆಗೆ ಹಾಸಿಗೆಯಲ್ಲಿ ಮಗ್ಗುಲು ಬದಲಾಯಿಸಿದಳು ಅವಳು. ಬೆಳಿಗ್ಗೆಮುಂಚೆ ಎದ್ದು ಕೊಚ್ಚಕ್ಕಿ ರೊಟ್ಟಿ ತಟ್ಟುತ್ತಿದ್ದ ವೆಂಕತ್ತೆಯ ಮಗ್ಗುಲಿಗೆ ಕುಳಿತಳು ಸುಜಾತ. ಬೆಂಕಿಯ ಶಾಖವನ್ನು ಸುಖಿಸುತ್ತ ಕೋಡೊಲೆಗೆ ತಾಗಿ ಮಲಗಿತ್ತು ಬೀರಿ.

“ವೆಂಕತ್ತೇ”

“ಚಾ ಕುಡೀತ್ಯಾ ಹೆಣೇ…” ಅವರ ಮಾತು ಮುಗಿಯುವುದರೊಳಗೆ ಲೋಟಕ್ಕೆ ಚಹ ಬಗ್ಗಿಸಿಕೊಟ್ಟಳು ಲಾವಣ್ಯ.

“ವೆಂಕತ್ತೇ, ನಾಡಿದ್ದಲ್ಲ, ಆಚಿ ನಾಡಿದ್ದ್ ರಾತ್ರಿ ಬಸ್ಸಿಗೆ ನಾನ್ ಹೊರಡ್ತೆ”

” ಅಯ್ಯೋ, ಇಷ್ಟ್ ಬೇಗ ಹೊರಟ್ಯಾ ಹೆಣೇ!?. ಎಂತಾಯ್ತ್…!” ರೊಟ್ಟಿ ತಟ್ಟುವುದನ್ನು ನಿಲ್ಲಿಸಿ ಆತಂಕದ ಕಣ್ಣುಗಳಿಂದ ಸುಜಾತನನ್ನು ನೋಡಿದರು.

” ಎಂತದಿಲ್ಲೆ ವೆಂಕತ್ತೇ.  ನಾ ಹ್ವಾಪ್ದ್ ಬೊಂಬಾಯಿಗೆ. ನೀವು, ಲಾವಣ್ಯ ಇಬ್ರೂ ನನ್ನ್ ಜ್ವತಿಗೆ ಬತ್ರಿ.  ಅಲ್ಲ್ ಸುರೇಶನ್ನ್ ಕಂಡ್ಕಂಡ್ ಕಡಿಗೆ ನಮ್ಮನಿಗ್ ಹ್ವಾಪ. ಲಾವಣ್ಯ ಇನ್ನ್ ಬೆಂಗ್ಳೂರಂಗೇ ಓದೂದ್. ನೀವ್ ಒಂದೆರ್ಡ್ ತಿಂಗ್ಳ್ ನಮ್ಮನ್ಯಂಗ್ ಆಯ್ಕಣಿ. ಸುರೇಶನ್ ವಿಷ್ಯ ನಾ ಕಂಡ್ಕಂತೆ… ಗೊತ್ತಾಯ್ತಲ್ದಾ?

ನಾನ್ ಇನ್ನ್ ಮುಂದೂ ಈ ಮನಿಗ್ ಬರ್ಕ್ ಅಂದಾರೆ, ನೀವಿಬ್ರೂ ನನ್ನ್ ಮಾತ್ ಕೇಣ್ಕ್ ಈಗ ಅಷ್ಟೇ” ಹೇಳಿ ಮುಗಿಸಿ ಸೀದಾ ಅಂಗಳಕ್ಕೆ ಹೋದ ಸುಜಾತ ಬೆಳಗಿನ ಎಳೆಬಿಸಿಲಿಗೆ ಮೈಯ್ಯೊಡ್ಡಿ ಮಲಗಿದ್ದ ಕಾಳಿಯನ್ನು ಮಾತಾಡಿಸತೊಡಗಿದಳು. ಒಬ್ಬರಿಗೊಬ್ಬರು ಮುಖ ಮುಖ ಕಾಣುತ್ತ  ಅವಳ ಹಿಂದೆಯೇ ಬಿರಬಿರನೆ ಬಂದ ಲಾವಣ್ಯ, ವೆಂಕತ್ತೆ ನೋಡ ನೋಡುತ್ತಿದ್ದಂತೆ ಓಡಿಕೊಂಡು, ಹಾರಿಕೊಂಡು ಬಂದ ಬೀರಿ; ಕಾಳಿಯ ಬಾಲ ಕಚ್ಚಿ ಹಿಡಿದೆಳೆದು ರೇಗಿಸುತ್ತ ಅದರ ಮೈಮೇಲೆ ಬಿದ್ದು ಆಟವಾಡತೊಡಗಿತ್ತು!

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ಅನುಪಮಾ ಪ್ರಸಾದ್ ನಾನಾಗ ಹತ್ತನೇ ತರಗತಿಯಲ್ಲಿದ್ದಿರಬೇಕು. ಮನೆಯಿಂದ ಶಾಲೆಗೆ ಬರುವ ಕಾಲುದಾರಿಯ ಒಂದು ತಿರುವಿನಲ್ಲಿ ನನಗಿಂತ ಎರಡು ಮೂರು...

ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಎಂ ಆರ್ ಭಗವತಿ ಕೋಳಿ ಮೊಟ್ಟೆಯನ್ನೊಡೆದು, ಮೇಲಿನ ಚಿಪ್ಪನ್ನು ಸ್ವಲ್ಪ ತೆಗೆದು, ಒಳಗೆ ಹತ್ತಿಯನಿಟ್ಟು, ಪಿಳಿಪಿಳಿ ಕಣ್ಣನು ಬರೆದು, ಕೆಂಪು...

ನಟೋರಿಯಸ್ ಕೈದಿಗಳ ಜೊತೆಯಲ್ಲಿ..

ನಟೋರಿಯಸ್ ಕೈದಿಗಳ ಜೊತೆಯಲ್ಲಿ..

ಹುಲುಗಪ್ಪ ಕಟ್ಟೀಮನಿ ಸೆಪ್ಟೆಂಬರ್‍ 19 ಬಿ.ವಿ.ಕಾರಂತರ ಜನ್ಮದಿನ. ರಂಗಭೂಮಿಯಲ್ಲಿರುವವರಿಗೆ ಕಾರಂತರ ನೆನಪೇ ಒಂದು ರೋಮಾಂಚನ. ಅವರ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: