ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್

“ಮಿಸೆಸ್ ಅಯ್ಯರ್: ಇನ್ನೊಂದು ಮುಖ” ಲೇಖನ ಪ್ರಕಟಿಸುವಾಗ, ಈ ಸಿನೆಮಾಕ್ಕೆ ಪ್ರತಿಕ್ರಿಯೆಯಾಗಿ ವ್ಯಕ್ತವಾದ ಇನ್ನೊಂದು ರಚನೆಯ ಬಗ್ಗೆ ಪ್ರಸ್ತಾಪಿಸಿದೆವು. ಅದೇ ಜಿ ಎನ್ ಮೋಹನ್ ಅವರ ಈ ಕವಿತೆ. ಅವರ “ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ” ಸಂಕಲನದಲ್ಲಿ ಈ ಕವಿತೆ ಇದೆ. ತಮ್ಮಂತದೇ ಜೀವಗಳ ತತ್ತರದ ನಡುವೆಯೂ ಜನ ಸಂಭ್ರಮ ನಿರುಮ್ಮಳವಾಗಿಯೇ ಉಳಿದುಬಿಡುವ ವಿಪರ್ಯಾಸವನ್ನು ಹೇಳುವ ಈ ಕವಿತೆ ನಿಮಗಾಗಿ.

* * *

 blue3.jpg

ಜಿ ಎನ್ ಮೋಹನ್

ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ನಮ್ಮ ಟಿವಿ ಪರದೆಯ ಮೇಲೆ
ಮೂಡುವ ವೇಳೆಗೆ ಸರಿಯಾಗಿ
ನಮ್ಮ ಮನೆಯಲ್ಲಿ ಗಣೇಶನ ಹಬ್ಬ
ಭಾರೀ ಗೌದು ಮಾತುಕತೆ ಕೇಕೆ
ಸಡಗರದಿಂದ ಓಡಾಡುವ ಕಾಲ್ಗಳು
ಕಾಲ್ಗಳಲ್ಲಿ ಕಿಂಕಿಣಿಸುತ್ತಿರುವ ಗೆಜ್ಜೆ
ಹಬ್ಬದ ಜರಿ ಸೀರೆ ಪುಟಾಣಿಗಳಿಗೆ ಲಂಗ
ಎಲ್ಲರ ಕಣ್ಣಲ್ಲೂ ಮಿಂಚು

ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಬಸ್ ಏರಿ ಪಯಣ ಆರಂಭಿಸುವ
ವೇಳೆಗೆ ಸರಿಯಾಗಿ
ನಮ್ಮ ಮನೆಗೆ ಸಾಕಷ್ಟು ನೆಂಟರು;
ಮುತ್ತೈದೆತನ ಗಟ್ಟಿಯಾಗಿರಲಿ ಎಂದು
ಹಾರೈಸುವ ಬಾಗಿನ
ನಮ್ಮ ಬದುಕು ನಮಗೇ ಸರಿಯಾಗಿ
ಕಾಣಲಿ ಎಂದು ಮೇಲೊಂದು ಪುಟ್ಟ ಕನ್ನಡಿ

ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಹೊರಟ ಬಸ್ಸಿಗೆ ದಂಡು ಲಗ್ಗೆ ಹಾಕಿದೆ
ಚೀರಿ ಹೇಳುತ್ತಿದೆ ಬೆಂಕಿ ಕಾರುತ್ತಿದೆ;
“ನಿನ್ನ ಧರ್ಮಕ್ಕೆ ರುಜುವಾತು ಬೇಕು”

ನಮ್ಮ ಮನೆಯಲ್ಲಿ ಈಗ ಮಂಗಳಾರತಿ
ಎಲ್ಲ ಮನೆಯಲ್ಲಿ ಬೆಳಕು ಮೂಡಲಿ
ಮುಂದಿನ ಹಬ್ಬದವರೆಗೂ ವಿಘ್ನ ಬಾರದಿರಲಿ
ಕಣ್ಣುಗಳ ಕಾಂತಿ ಆರದಿರಲಿ
ಹಾಡು ಎಲ್ಲ ಎದೆಯಲ್ಲಿ ಹುಟ್ಟಲಿ

ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಜೊತೆಗೊಂದು ಮಗು, ಹಣೆಯಲ್ಲಿ ಕುಂಕುಮವಿದೆ
ಮಾತನಾಡುತ್ತಿರುವ ಭಾಷೆ ತಮಗೆ ಬೇಕಾದ
ಧರ್ಮದ್ದು ಎಂದು ಗೊತ್ತಾಗಿದೆ
ಉಟ್ಟ ಸೀರೆಯೂ ಧರ್ಮಕ್ಕೆ ಒಪ್ಪುವಂತಿದೆ
ನಮ್ಮ ಮನೆಯಲ್ಲಿ ಈಗ ಹಬ್ಬ ಖಂಡಿತಾ
ಹಬ್ಬದ ಕಳೆ ತಂದಿದೆ ಸಂತಸ ಉಕ್ಕಿಸಲು
ಹಸಿರು ತೋರಣ ಕೌದಿಗೂ ಕುಸುರಿಗೆಲಸ
ಮಾತಿನಲ್ಲಿ ಒಂದಿಷ್ಟು ಹೆಚ್ಚು ಸರಬರ
ಎಲ್ಲವೂ ಹಬ್ಬಕ್ಕೆ ತಕ್ಕಂತೆ
ಸರಿಯಾಗಿಯೇ ಇದೆ

ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಇದ್ದ ಬಸ್ ನಲ್ಲಿ ಮಾತ್ರ ಈಗ ಲೆಕ್ಕ ತಪ್ಪಿದೆ
ಏರುವಾಗ ಇದ್ದ ಪಯಣಿಗರ ಸಂಖ್ಯೆಯಲ್ಲಿ
ಈಗ ಎರಡು ಕಡಿಮೆಯಾಗಿದೆ. ಚೀರುವವರ
ಮಧ್ಯೆ ಬಸ್ ನ ಚಾಲಕ ಕೂಡ
ಮತ್ತೆ ತಲೆ ಎಣಿಸುವುದನ್ನು ಮರೆತಿದ್ದಾನೆ
ದಶಕಗಳ ಹಿಂದಿ ಮಾತು ಆಡುತ್ತಿದ್ದ

ಅಜ್ಜನ ದಂತಪಂಕ್ತಿ ಸಮುದ್ರದ ಅಲೆಯ
ಹೊಡೆತಕ್ಕೆ ಸಿಕ್ಕಿದೆ
ಜೊತೆಗಾತಿಯ ಕನ್ನಡಕ
ಅಲ್ಲೇ ಪಕ್ಕದ ಬಂಡೆಗೆ ಸಿಕ್ಕು
ನುಚ್ಚುನೂರಾಗಿದೆ

ನಮ್ಮ ಮನೆಯಲ್ಲಿ ಈಗ ಊಟದ ಸಮಯ
ಬಾಳೆ ಎಲೆ ಹರಡಿದ್ದಾಗಿದೆ
ಒಂದಿಷ್ಟು ಪಲ್ಯ ಬೇಕಾದಷ್ಟು ಕಡಬು
ಒಂದು ವರ್ಷ ಹೇಗೆ ಕಾಪಾಡಿದನಲ್ಲಾ
ವಿಘ್ನೇಶ್ವರ ಎಂಬ ಪ್ರಶಂಸೆ
ಮತ್ತೊಂದು ವರ್ಷವೂ ನಮ್ಮನ್ನು
ಹೀಗೇ ಕಾಪಾಡು ಎಂಬ ಮೊರೆ;
ಊಟ ಸಂಭ್ರಮದಿಂದ ಸಾಗಿದೆ

ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
ಏರಿದ್ದ ಬಸ್ ನಲ್ಲಿ ಮಾತ್ರ ಲೆಕ್ಕ ತಪ್ಪಿದೆ…

‍ಲೇಖಕರು avadhi

January 25, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This