ಮೀಡಿಯಾ ಮಿರ್ಚಿ- ಸಮಚಿತ್ತವಿರಲಿ

RaviH1-ರವಿ ಹೆಗಡೆ

ಕಾರ್ಯನಿರ್ವಾಹಕ ಸಂಪಾದಕರು, ಕನ್ನಡಪ್ರಭ

ಮೊನ್ನೆ ಭಾನುವಾರ “ವಿಜಯ ಕರ್ನಾಟಕ” ಸಂಪಾದಕ ವಿಶ್ವೇಶ್ವರ ಭಟ್ಟರ ಜನಗಳಮನ ಅಂಕಣ ಓದುವಾಗ ಗೊತ್ತಾಯಿತು… ಅವರ ಜೋಳಿಗೆಯಿಂದ ಮತ್ತೊಂದು ಹೊಸ ಅಂಕಣ ಹೊರಬರುತ್ತಿದೆ ಅಂತ. ಇವತ್ತು ಬೆಳಿಗ್ಗೆ ವಿ.ಕ. ಓದುವಾಗ ಹೊಸ ಅಂಕಣದ ಹೆಸರು “ಮೀಡಿಯಾ ಮಿರ್ಚಿ” ಅಂತಲೂ ಗೊತ್ತಾಯಿತು. ಪತ್ರಿಕೆಗಳಲ್ಲಿ ಹೊಸ ಹೊಸ ಅಂಕಣಗಳು ಆರಂಭವಾಗುವುದು ಸ್ವಾಭಾವಿಕ. ಆದರೂ, ನಾನು ಈ ಅಂಕಣದ ಬಗ್ಗೆ ಇಲ್ಲಿ ಬರೆಯಲು ಕಾರಣವಿದೆ.

ಈ ಹೊಸ ಅಂಕಣ ಪತ್ರಿಕೆಗಳ ಕುರಿತಾದದ್ದು. ನಾವು-ನೀವು ಕೆಲಸ ಮಾಡುವ ಪತ್ರಿಕೆಗಳ ಕುರಿತು ವಿಮರ್ಶೆ ಮಾಡುವ ಅಂಕಣ ಇದು. ಈ ರೀತಿಯ ಅಂಕಣ ಬಲು ಅಪರೂಪ. ರೇಡಿಯೋ ಕಾರ್ಯಕ್ರಮಗಳು, ಟೀವಿ ಕಾರ್ಯಕ್ರಮಗಳ ಕುರಿತು ವಿಮರ್ಶೆ ಮಾಡುವ ಅನೇಕ ಅಂಕಣಗಳು ಕನ್ನಡದಲ್ಲಿ ಇದ್ದವು. ಈಗ ಇವೆಯೋ ನಿಂತಿವೆಯೋ ನೋಡಿಲ್ಲ. ಸೋ ಕಾಲ್ಡ್ ಸಿನಿಮಾ ವಿಮರ್ಶೆಗಳಂತೂ ಪ್ರಕಟವಾಗುತ್ತಿವೆ. ಆದರೆ, ಪತ್ರಿಕೆಗಳು ಅದರಲ್ಲೂ ಪ್ರತಿಸ್ಪರ್ಧಿ ಪತ್ರಿಕೆಗಳ ಕುರಿತೂ ವಿಮರ್ಶೆ ಪ್ರಕಟಿಸುವ ಅಂಕಣ ಕನ್ನಡದಲ್ಲಿ ಯಾವುದೂ ಇರಲಿಲ್ಲ.

ಇಂಗ್ಲೀಷಿನ ಪ್ರೋಬ್ ಪತ್ರಿಕೆಯಲ್ಲಿ ಎಂ.ವಿ. ಕಾಮತ್ ಮಿಡಿಯಾ ವಾಚ್ ಎಂಬ ಮಾಧ್ಯಮ ವಿಮರ್ಶೆಯ ಅಂಕಣ ಬರೆಯುತ್ತಿದ್ದರು ಅಂತ ವಿಶ್ವೇಶ್ವರ ಭಟ್ಟರು ಜನಗಳಮನದಲ್ಲಿ ಮಾಹಿತಿ ನೀಡಿದ್ದಾರೆ.

ಒಂದೆರಡು ಹೆಚ್ಚುವರಿ ಮಾಹಿತಿ ಇಲ್ಲಿದೆ. ಈ ಹಿಂದೆ, ದಿ ಪಯೋನಿಯರ್ ಪತ್ರಿಕೆಯಲ್ಲೂ ಇದೇ ರೀತಿಯ ಅಂಕಣ ಪ್ರಕಟವಾಗುತ್ತಿತ್ತು. ಹೆಸರು ಬ್ಲೂ ಪೆನ್ಸಿಲ್ ಅಂತ. ಬರೆಯುತ್ತಿದ್ದುದು ಜಿ. ಎಸ್. ಭಾರ್ಗವ. (ಈ ಹಿಂದೆ, ಬರೆದ ಅಥವಾ ಟೈಪ್ ಮಾಡಿದ ಪ್ರತಿ ತಿದ್ದಲು ನೀಲಿ ಬಣ್ಣದ ಪೆನ್ಸಿಲ್ ಬಳಸುವ ಸಂಪ್ರದಾಯವಿತ್ತು. ಅದಕ್ಕಾಗಿ ಕಾಪಿ ಎಡಿಟಿಂಗಿಗೆ ಸಮಾನಾರ್ಥಕವಾಗಿ ಬ್ಲೂ ಪೆನ್ಸಿಲ್ ಎಂಬ ನುಡಿಗಟ್ಟು ಹುಟ್ಟಿದೆ.) ವಿನೋದ್ ಮೆಹ್ತಾ ಅವರು ಪಯೋನಿಯರ್ ಸಂಪಾದಕರಾಗಿದ್ದಾಗ ಈ ಅಂಕಣ ಆರಂಭಿಸಿದ್ದರು. ಭಾರ್ಗವ ಈ ಅಂಕಣದಲ್ಲಿ ಕೆಲವು ಬಾರಿ ಕಟು ವಿಮರ್ಶೆಗಳನ್ನೇ ಬರೆದಿದ್ದರಂತೆ. ಹಲವಾರು ವರ್ಷ ಈ ಅಂಕಣ ಪ್ರಕಟವಾಗುತ್ತಿತ್ತು.

1992-93ರ ಸಮಯದಲ್ಲಿ ಡಿಡಿ-2 – ದೂರದರ್ಶನ ಮೆಟ್ರೋ ಚಾನಲ್‌ನಲ್ಲಿ ಪ್ರತಿ ಭಾನುವಾರ ರಾತ್ರಿ 10.30ಕ್ಕೆ ಇಂಥದೇ ಪತ್ರಿಕಾ ವಿಮರ್ಶೆಯ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಹೆಸರು ನ್ಯೂಸ್ ವಾಚ್. ಅರ್ಧ ಗಂಟೆಯ ಈ ಕಾರ್ಯಕ್ರಮದಲ್ಲಿ ದೇಶದ ಅನೇಕ ಪತ್ರಿಕೆಗಳ ತಪ್ಪುಗಳನ್ನು ಎತ್ತಿ ತೋರಿಸಲಾಗುತ್ತಿತ್ತು. ಜನರು ತಾವು ಓದುವ ಪತ್ರಿಕೆಯಲ್ಲಿ ಕಂಡ ಅಸಂಬದ್ಧ ಸುದ್ದಿಗಳ “ಕಟಿಂಗ್”ಗಳನ್ನು ಈ ಕಾರ್ಯಕ್ರಮಕ್ಕೆ ಕಳಿಸಿಕೊಡಬಹುದಿತ್ತು. 13 ಕಂತುಗಳಾದ ನಂತರ ಈ ಕಾರ್ಯಕ್ರಮ ನಿಂತು ಹೋಯಿತು. ಒಂದೆರಡು ಬಾರಿ ಈ ಕಾರ್ಯಕ್ರಮದಲ್ಲೇ ಅಸಂಬದ್ಧ Facts ಪ್ರಸಾರವಾಗಿ ಆಭಾಸವೂ ಆಗಿತ್ತು.

ಹಾಯ್ ಬೆಂಗಳೂರಿನಲ್ಲಿ “ಮೀಡಿಯಾ ಮಸಾಲಾ” ಎಂಬ ಅಂಕಣ ಕೆಲಕಾಲ, ಆಗಾಗ ಪ್ರಕಟವಾಗುತ್ತಿತ್ತು. ಆದರೆ, ಅದು ಪತ್ರಿಕೆಗಳಲ್ಲಿ ಪ್ರಕಟವಾಗುವ ವಸ್ತು ವಿಷಯಗಳ ಕುರಿತ ವಿಮರ್ಶೆಯ ಅಂಕಣವಾಗಿರಲಿಲ್ಲ. ವಿವಿಧ ಮಾಧ್ಯಗಳಲ್ಲಿನ ಪತ್ರಕರ್ತರನ್ನು ಉಗಿಯುವ ಅಂಕಣವಾಗಿತ್ತು!

ಈಗ ವಿಜಯ ಕರ್ನಾಟಕದಲ್ಲಿ ಆರಂಭವಾಗಲಿರುವ ಮೀಡಿಯಾ ಮಿರ್ಚಿಯ ಅಂಕಣಕಾರರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಬಹುಶಃ ಅಂಕಣಕಾರರು ಗುಪ್ತವಾಗಿರಲಾರರು ಎಂದು ಆಶಿಸುತ್ತೇನೆ. ಅವರ ವಿಮರ್ಶೆ, ಅಭಿಪ್ರಾಯಗಳೂ ಟೀವಿ, ರೆಡಿಯೋ, ಸಿನಿಮಾ ವಿಮರ್ಶೆ ಬರಹಗಳಂತೆ ಇರದಿರಲಿ ಎಂದು ಹಾರೈಸುತ್ತೇನೆ! ಈ ಅಪರೂಪದ ಅಂಕಣ ಸಮಚಿತ್ತ, ಸಹೃದಯ ಹಾಗೂ ಸಮಕಾಲೀನ ಅಳೆತೆಗೋಲುಗಳನ್ನು ಕಾಯ್ದುಕೊಳ್ಳುವುದಾದರೆ ಖಂಡಿತ ಸ್ವಾಗತಾರ್ಹ

‍ಲೇಖಕರು avadhi

July 17, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This