ಮೀಡಿಯಾ: ವಾಸ್ತವಕ್ಕಿಂತಲೂ ಭ್ರಮೆಯೇ ಇಷ್ಟ

ಇಂದಿನ ಮಾಧ್ಯಮಗಳ ಪರಿದೃಶ್ಯ: ಒಂದು ಚಿಂತನೆ

ಎಚ್. ಎಸ್. ಈಶ್ವರ

ಲೇಖಕರು ಹಿರಿಯ ಸಂವಹನ ತಜ್ಞರು. ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗವನ್ನು ರೂಪಿಸಿದವರು 

ಪ್ರಸಿದ್ಧ ಇತಿಹಾಸಕಾರ ಡೇನಿಯಲ್ ಬೂರ್ಸ್ ಟಿನ್ ನ ‘ದಿ ಇಮೇಜ್’ ಕೃತಿಯಲ್ಲಿನ ಸಂಭಾಷಣೆಯ ತುಣುಕೊಂದು ನನಗೆ ಆಪ್ಯಾಯಮಾನವಾದದ್ದಾಗಿದೆ. ಅದು ಹೀಗಿದೆ: ಸ್ನೇಹಿತಳೊಬ್ಬಳು ಮಗುವಿನ ತಾಯಿಗೆ ಹೇಳುತ್ತಾಳೆ: ಅಹಾ, ನಿನ್ನ ಮಗು ಅದೆಷ್ಟು ಮುದ್ದಾಗಿದೆ! ಅದಕ್ಕೆ ಮಗುವಿನ ತಾಯಿ ಕೊಡುವ ಉತ್ತರ: ನೀನು ಅವಳ ಫೋಟೋ ನೋಡಬೇಕು. ಇನ್ನೂ ಸುಂದರವಾಗಿದ್ದಾಳೆ. ವಾಸ್ತವಕ್ಕಿಂತಲೂ ವಿಭಿನ್ನವಾದ ಭ್ರಮೆಗಳನ್ನು ಸೃಷ್ಟಿಸುವ ಮೂಲಕ ಮಾಯಾಲೋಕಕ್ಕೆ ಕರೆದೊಯ್ಯುವ ಕೆಲಸದಲ್ಲಿ ಮಾಧ್ಯಮ ಜಗತ್ತು ತೊಡಗಿಸಿಕೊಂಡಿರುವ ಸತ್ಯ ಈ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣಬರುವ ಕಾರಣ ಮಾಧ್ಯಮ ವಿದ್ಯಾರ್ಥಿಯಾದ ನನಗೆ ಅದು ಒಂದು ಔಚಿತ್ಯಪೂರ್ಣವಾದ ಸೈದ್ಧಾಂತಿಕ ಸೂತ್ರವಾಗಿ ಗೋಚರಿಸುತ್ತದೆ.

ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣಗಳ ಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮ ಜಗತ್ತು ವೈವಿದ್ಯಮಯವಾಗಿದ್ದು ನಮ್ಮ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದೆ. ಮಾಧ್ಯಮಗಳು ಸೃಷ್ಟಿಸುವ ಭ್ರಮೆಗಳು, ಹುಟ್ಟುಹಾಕುವ ಆಸೆಗಳು ಮತ್ತು ಅಗತ್ಯಗಳು, ಅವುಗಳ ಪೂರೈಕೆಗೆ ಸೂಚಿಸುವ ಉಪಾಯಗಳು, ಪೋಷಿಸುವ ಮೌಢ್ಯಗಳು, ಬಿತ್ತುವ ಅನುಮಾನಗಳು ಮತ್ತು ಗೊಂದಲಗಳು, ಆ ಮೂಲಕ ಪರಿಣಮಿಸುವ ಹತಾಶೆ, ಆಶಾಭಂಗ, ಖಿನ್ನತೆ, ಹಿಂಸಾತ್ಮಕ ಮನೋಭಾವನೆಗಳು ಮತ್ತು ನಡೆಗಳು -ಈ ಎಲ್ಲವೂ ಮಾಧ್ಯಮಗಳ ಮೂಲೋದ್ದೇಶಗಳನ್ನು ಮರೆಮಾಡಿ, ಅವುಗಳ ಸಾಮಾಜಿಕ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕಡೆಗಾಣಿಸುವ ಹತಾಶ ಪರಿಸ್ಥಿತಿಗೆ ಎಡೆಮಾಡಿಕೊಟ್ಟಿವೆ. ಈ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣಗಳೇನು, ಅದರಿಂದ ಉದ್ಭವಿಸಬಹುದಾದ ಪರಿಣಾಮಗಳೇನು, ಮತ್ತು ಇಂಥಹ ಒಂದು ಅನಾರೋಗ್ಯ ಮಾಧ್ಯಮ ಪರಿಸರವನ್ನು ಸುಧಾರಿಸುವಲ್ಲಿ ಇರುವ ಪರಿಹಾರೋಪಾಯಗಳು ಯಾವುವು?

media controlಆಧುನಿಕ ಸಮಾಜದಲ್ಲಿ ಮಾಧ್ಯಮಗಳಿಗೆ ಒಂದು ಪ್ರತಿಷ್ಠಿತ ಸ್ಥಾನವಿದ್ದು, ಅವು ಸರ್ಕಾರದ ‘ನಾಲ್ಕನೆಯ ಅಂಗ’ (ಫೋರ್ಥ್ ಎಸ್ಟೇಟ್) ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಅವುಗಳ ಉದ್ದೇಶಗಳಾದರೂ ಗಹನವಾದುವೇ ಆಗಿವೆ. ಸುದ್ಧಿಸಮಾಚಾರಗಳನ್ನು ಒದಗಿಸುವುದು, ತಿಳುವಳಿಕೆಯನ್ನು ಕೊಡುವುದು, ಶಿಕ್ಷಣ ಮತ್ತು ಮನೋರಂಜನೆಗಳು ಮಾಧ್ಯಮಗಳ ಪ್ರಮುಖ ಉದ್ದೇಶಗಳಾಗಿ ಪರಿಗಣಿಸಲ್ಪಟ್ಟಿವೆ.

ಮುಂದುವರಿದಂತೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ಇನ್ನೂ ಹೆಚ್ಚಿನ ಆದ್ಯತೆಗಳನ್ನು ವಹಿಸಲಾಗಿದೆ. ಸರ್ಕಾರ ಮತ್ತು ಜನತೆಯ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಮಾಧ್ಯಮಗಳು, ಸರ್ಕಾರದ ನೀತಿನಿಯಮಗಳನ್ನು ಜನರಿಗೆ ಮನವರಿಕೆ ಮಾಡಿಸುವ, ಜನರ ಆಶೋತ್ತರಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವ, ಸಾರ್ವಜನಿಕ ಅಭಿಪ್ರಾಯಗಳನ್ನು ರೂಡಿಸುವ, ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ನಿಗಾ ವಹಿಸುವ ‘ವಾಚ್ ಡಾಗ್’ ಕರ್ತವ್ಯಗಳು ಮಾಧ್ಯಮಗಳ ಪಾಲಿನ ಹೊಣೆಗಾರಿಕೆಗಳಾಗಿವೆ. ಹೀಗೆ ಅವುಗಳಿಗೆ ಆರೋಪಿಸಲಾಗಿರುವ ಕರ್ತವ್ಯಗಳನ್ನು ಮಾಧ್ಯಮಗಳು ಪ್ರಸ್ತುತದಲ್ಲಿ ಎಷ್ಟು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿವೆ ಎನ್ನುವುದು ಮಹತ್ತರ ಚರ್ಚಾಸ್ಪದ ವಿಷಯವಾಗಿದೆ.

ಯಾವುದೇ ಒಂದು ದಿನ ಮಾಧ್ಯಮಗಳಲ್ಲಿ ವರದಿಯಾಗುವ ಸುದ್ಧಿಗಳು, ಬಿತ್ತರಿಸಲಾಗುವ ಕಾರ್ಯಕ್ರಮಗಳನ್ನು ಗಮನಿಸಿದರೆ ಅವುಗಳ ಅಪಸಾಮಾನ್ಯ (ಡಿಸ್ಪಂಕ್ಸ್ನಲ್) ಸ್ವರೂಪ ಮನವರಿಕೆಯಾಗುತ್ತದೆ. ಪತ್ರಿಕೆಗಳ ಮುಖಪುಟದಲ್ಲಿ ಕಾಣಬರುವ ರಾಜಕೀಯ ದೊಂಬರಾಟಗಳು, ಭ್ರಷ್ಟಾಚಾರಗಳು, ಕೊಲೆ, ಸುಲಿಗೆ, ಹಿಂಸೆ, ಆತ್ಮಹತ್ಯೆ, ಅಪಘಾತ ಇವೇ ಮೊದಲಾದ ಕೇವಲ ಕ್ಷುಲ್ಲಕ, ನಿರರ್ಥಕ, ಯಃಕಶ್ಚಿತ್ ಸುದ್ದಿಗಳು ಮೇಲೆ ಪಟ್ಟಿಮಾಡಿರುವ ಯಾವುದೇ ಮಾಧ್ಯಮ ಉದ್ದೇಶಗಳನ್ನು ಪೂರೈಸಲು ಸಹಕಾರಿಯಾಗಲಾರವು.

ವಾಸ್ತವದಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳ ಜೊತೆಯಲ್ಲಿ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿರುವ ಪತ್ರಿಕೆಗಳು ಈಗ ಸುದ್ಧಿಯನ್ನು ನೇರವಾಗಿ ವರದಿ ಮಾಡುವ ಬದಲು, ಅವುಗಳನ್ನು ಅತಿ ರಂಜಕವಾಗಿ ತಮ್ಮದೇ ಅಭಿಪ್ರಾಯ ಮತ್ತು ಟೀಕೆಗಳನ್ನು ಜೋಡಿಸಿ, ನ್ಯಾಯಾಲಯದ ತೀರ್ಪಿನಂತೆ ವರದಿ ಮಾಡುವ ಪರಿಪಾಠ ಅತಿ ಸಾಮಾನ್ಯವಾಗಿದೆ. ಹಾಗಾಗಿ ಸುದ್ಧಿಯ ಪಾವಿತ್ರತೆ ಹಳಸಲು ಮೌಲ್ಯವಾಗಿದ್ದು, ವಸ್ತುನಿಷ್ಠತೆ ಕೊರತೆಯಿಂದ ಪತ್ರಿಕೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಇದು ಪತ್ರಿಕೆಗಳ ಪರಿಸ್ಥಿತಿಯಾದರೆ, ಟೆಲಿವಿಷನ್ ಮಾಧ್ಯಮದ ವಿಚಾರ ಇನ್ನೂ ಗಂಭೀರ ಸ್ವರೂಪದ್ದಾಗಿದೆ.

ಇಂದು ಪ್ರಸಾರವಾಗುತ್ತಿರುವ ಬಹಳಷ್ಟು ಟೆಲಿವಿಷನ್ ಕಾರ್ಯಕ್ರಮಗಳನ್ನು ವೀಕ್ಷಿಸಿದಾಗ ಒಂದು ಬಗೆಯ ಜಿಗುಪ್ಸೆಯಾಗುತ್ತದೆ. ಮಾಟ, ಮಂತ್ರ, ಭವಿಷ್ಯ, ಜಾತಕ ಫಲ, ವಾಮಾಚಾರ, ವ್ಯಭಿಚಾರಗಳಿಂದಲೇ ತುಂಬಿಹೋಗಿರುವ ಕಾರ್ಯಕ್ರಮಗಳಿಂದ ನಾವು ಏನನ್ನು ಸಾಧಿಸಲಿಕ್ಕೆ ಹೊರಟಿದ್ದೀವಿ ಎನ್ನುವ ಚಿಂತೆ ಟಿ ವಿ ನೋಡಿದಾಗಲೆಲ್ಲಾ ಪ್ರಜ್ಞಾವಂತರನ್ನು ಕಾಡುತ್ತಲೇ ಇರುತ್ತದೆ.

ಪ್ರಸಾರದ ಹೆಚ್ಚಿನ ಸಮಯವನ್ನು ಆವರಿಸುವ, ನಮ್ಮ ಜೀವಿತ ಅವಧಿಯಲ್ಲಿ ಕೊನೆಗೊಳ್ಳುವ ಸಾಧ್ಯತೆ ಇಲ್ಲವೋ ಎನಿಸುವ ಮತ್ತು ನಿರಂತರವಾಗಿ ಸಾಗುತ್ತಾ ಹೋಗುವ ಧಾರವಾಹಿಗಳಂತೂ ಮಾಧ್ಯಮಗಳ ಮಹತ್ತರ ಉದ್ದೇಶಗಳಿಗೆ ಅಪವಾದ ಎನ್ನಿಸುತ್ತವೆ. ಟಿ. ವಿ. ಕಣ್ಣುಗಳಿಗೆ ‘ಚ್ಯೂಯಿಂಗ್ ಗಮ್’ ಇದ್ದಂತೆ ಎನ್ನುವ ಮಾತು ಇದೆ. ಅದು ವೀಕ್ಷಕರಲ್ಲಿ ಒಳ್ಳೆಯ ಆಸಕ್ತಿ ಅಥವಾ ಅಭಿರುಚಿಗಳನ್ನು ಬೆಳೆಸುವುದೂ ಇಲ್ಲ, ಅಥವಾ ಮನಸ್ಸಿಗೆ ಚೇತೋಹಾರಿಯಾದ ಸಾಮಾಗ್ರಿಗಳನ್ನು ಒದಗಿಸುವುದೂ ಇಲ್ಲ. ಟೆಲಿವಿಷನ್ ವೀಕ್ಷಣೆ ಯಾಂತ್ರಿಕವಾಗಿ ಸಾಗುವ ಚರ್ವಿತಚರ್ವಣ ಕ್ರಿಯೆಯಾಗಿ ಪರಿಣಮಿಸುತ್ತದೆ.

ಜನರು ಇಂಥಹ ಕಾರ್ಯಕ್ರಮಗಳನ್ನು ನೋಡುತ್ತಾರೆ. ಅವರು ಎಲ್ಲಿಯವರೆಗೆ ಇಂಥಹ ಕಾರ್ಯಕ್ರಮಗಳನ್ನು ನೋಡಲು ಇಚ್ಛಿಸುತ್ತಾರೋ, ಅಲ್ಲಿಯವರೆಗೆ ನಾವು ಇವುಗಳನ್ನು ಪೂರೈಸುತ್ತಲೇ ಹೋಗುತ್ತೇವೆ ಎಂದು ವಾದ ಮಾಡುವವರೂ ಇದ್ದಾರೆ. ಎಂದರೆ, ಜನರು ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸುತ್ತಾರೆಂದು, ನಾವು ಅವರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಬಿಟ್ಟು ಬಿಡಬೇಕೇ ಎನ್ನುವ ಭೀತಿ ನನ್ನನ್ನು ಕಾಡುತ್ತದೆ. ವೀಕ್ಷಕರಲ್ಲಿ ಭಯವನ್ನು ಹುಟ್ಟುಹಾಕಿ, ಮೌಢ್ಯವನ್ನು ಪ್ರಚೋದಿಸಿ, ಮಾನಸಿಕ ಸ್ವಾಸ್ತ್ಯವನ್ನು ಹಾಳುಮಾಡಿ, ನಮ್ಮ ಸಂಸ್ಕೃತಿಯನ್ನು ವಿನಾಶ ಮಾಡುವಂಥಹ ಕಾರ್ಯಕ್ರಮಗಳು ಸಹ ಮಾಧ್ಯಮಗಳ ಘನ ಉದ್ದೇಶಗಳಿಗೆ ಪೂರಕವಾಗುವುದಿಲ್ಲ.television in street

ಒಟ್ಟಾರೆಯಾಗಿ ಪರಿಗಣಿಸಿದಾಗ, ಮೋಸ, ವಂಚನೆ, ಅಪರಾಧ, ಹಿಂಸೆ, ಕ್ರೌರ್ಯ, ಕೊಲೆ, ಸುಲಿಗೆ, ಅಪಘಾತ, ಮೋಜಿನ ಹುಡುಗಿಯರ ಬೆತ್ತಲೆ ಪ್ರದರ್ಶನ, ರಾಜಕಾರಣಿಗಳ ಪರಸ್ಪರ ಕೆಸರೆರಚಾಟ ಮತ್ತು ಪೊಳ್ಳು ಭರವಸೆಗಳು ಮುಂತಾದ ಭಕ್ಷ್ಯಗಳಿಂದ ಕೂಡಿದ ಬಫೆಯನ್ನು (‘ಸ್ಮಾರ್ಗಸ್ಬೋರ್ಡ್’) ಮಾಧ್ಯಮಗಳು ನಮಗೆ ನಿರಂತರವಾಗಿ ಒದಗಿಸುತ್ತಲೇ ಹೋಗುತ್ತವೆ. ಕ್ಷುಲ್ಲಕ ವಿಚಾರಗಳನ್ನು ವಿಜೃಂಬಣೆಗೊಳಿಸುವ ಮೂಲಕ (‘ಸೆನ್ಸೇಷನಲೈಸ್’) ಮಾಧ್ಯಮಗಳು ತಮ್ಮ ಸರಕುಗಳನ್ನು ಜನಪ್ರಿಯಗೊಳಿಸುವ, ಮಾರುಕಟ್ಟೆಯಲ್ಲಿ ಲಾಭಗಳಿಸುವ ಪ್ರವೃತ್ತಿ ಇಂದು ಸಾಮಾನ್ಯವಾಗಿದೆ. ಇನ್ನು ಇಂತಹ ವಿಚಾರಗಳು ಓದುಗರ ಅಥವಾ ವೀಕ್ಷಕರ ಮೇಲೆ ಯಾವ ಬಗೆಯ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ ಎನ್ನುವ ಬಗ್ಗೆ ಜವಾಬ್ದಾರಿಯುತ ಮಾಧ್ಯಮ ವೃತ್ತಿಯವರು ಆಲೋಚಿಸುವುದೇ ಇಲ್ಲ.

ಮಾಧ್ಯಮ ಸರಕುಗಳು ಅವುಗಳ ಬಳಕೆದಾರರ ಮೇಲೆ ಯಾವ ಬಗೆಯ ಪರಿಣಾಮ ಬೀರುತ್ತವೆ ಎನ್ನುವ ಬಗ್ಗೆ ಸಂವಹನ ಸಂಶೋಧಕರು ಮತ್ತು ಸಮಾಜ ಮನೋವಿಜ್ಞಾನಿಗಳು ನಿರ್ಧಿಷ್ಟ ತೀರ್ಮಾನಗಳಿಗೆ ಬಂದಿದ್ದಾರೆ. ಸಂಶೋಧನೆಗಳಿಂದ ತಿಳಿದು ಬರುವಂತೆ, ಮಾಧ್ಯಮಗಳು ನಮ್ಮ ನಡವಳಿಕೆಗೆ ‘ಮಾದರಿ’ಗಳನ್ನು ಒದಗಿಸುತ್ತವೆ; ನಮ್ಮ ಕೃತ್ಯಗಳಿಗೆ ಪ್ರಚೋದನೆ ನೀಡುತ್ತವೆ, ಮತ್ತು ಅಂತಹ ಕೃತ್ಯಗಳನ್ನು ನೆರವೇರಿಸಲು ಅಗತ್ಯವಾದ ಮಾರ್ಗೋಪಾಯಗಳನ್ನು ಸೂಚಿಸುತ್ತವೆ ಅಥವ ಕಲಿಸಿಕೊಡುತ್ತವೆ.

ಈ ಮೇಲಿನ ಅಂಶಗಳನ್ನು ಪುಷ್ಟೀಕರಿಸಲು ಸುಮಾರು ಐವತ್ತು ವರ್ಷಗಳ ಹಿಂದೆ ನಾನು ಅಮೆರಿಕೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಸಂಭವಿಸಿದ ಒಂದು ಘಟನಾವಳಿಯನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಚಿಕಾಗೋ ನಗರದ ಆಸ್ಪತ್ರೆಯೊಂದರಲ್ಲಿ ರಾಬರ್ಟ್ ಸ್ಪೆಕ್ ಎಂಬ ತರುಣ, ಅಲ್ಲಿ ನಿದ್ರಿಸುತ್ತಿದ್ದ ಹದಿಮೂರು ಜನ ದಾದಿಯರನ್ನು ನಿಷ್ಕಾರಣವಾಗಿ ಇರಿದು ಕೊಲೆ ಮಾಡಿದ. ಈ ಸುದ್ದಿ ಸಹಜವಾಗಿಯೇ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆಯಿತು. ಸ್ಪೆಕ್ ಭಾವಚಿತ್ರಗಳು ಪತ್ರಿಕೆಗಳಲ್ಲಿ, ಟಿ. ವಿ. ಜಾಲಗಳಲ್ಲಿ ಪದೇ ಪದೇ ಕಾಣಿಸಿಕೊಂಡವು. ಸ್ಪೆಕ್ ಆ ದಿನಗಳಲ್ಲಿ ಅಮೆರಿಕಾದ ಮನೆ ಮಾತಾದ.

ಈ ಘಟನೆಯ ನಂತರದ ಕೆಲವೇ ದಿನಗಳಲ್ಲಿ ವಿಟ್ಮನ್ ಎಂಬ ಇನ್ನೊಬ್ಬ ಯುವಕ, ಟೆಕ್ಸಾಸ್ ವಿಶ್ವವಿದ್ಯಾಲಯದ ಗೋಪುರದ ಮೇಲಿಂದ ಗುಂಡು ಹಾರಿಸಿ ಆಸುಪಾಸಿನ ಹದಿನಾರು ಜನರನ್ನು ಸಾಯಿಸಿದ. ಸ್ವಾಭಾವಿಕವಾಗಿಯೇ ಈ ಸುದ್ದಿಗೂ ವ್ಯಾಪಕ ಪ್ರಚಾರ ದೊರಕಿತು; ವಿಟ್ಮನ್ ಕೂಡಾ ದೇಶದ ಮಾಧ್ಯಮಗಳಲ್ಲಿ ರಾರಾಜಿಸಿದ. ಇದಾದ ಕೆಲವೇ ದಿನಗಳಲ್ಲಿ ಸ್ಮಿತ್ ಎಂಬ ಇನ್ನೊಬ್ಬ ಯುವಕ ಜನನಿಬಿಡ ವ್ಯಾಪಾರಿ ಮಳಿಗೆಯೊಂದಕ್ಕೆ ನುಗ್ಗಿ, ಅಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಐವರು ಮಹಿಳೆಯರನ್ನು ಸಾಲಾಗಿ ನಿಲ್ಲಿಸಿ, ಅವರಿಗೆ ಗುಂಡಿಕ್ಕಿ ಸಾಯಿಸಿದ.

ಸ್ಮಿತ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ತಾನು ಸ್ಪೆಕ್- ವಿಟ್ಮನ್ ರ ಸಾಹಸಗಳನ್ನು ಪತ್ರಿಕೆಗಳಲ್ಲಿ ಓದಿ, ಟಿ. ವಿ. ಯಲ್ಲಿ ನೋಡಿ, ತಾನೂ ಅವರಂತೆ ಒಬ್ಬ ಹೀರೋ ಆಗಬೇಕೆಂಬ ಆಶೆ ತನ್ನನ್ನು ಕಾಡುತ್ತಿದ್ದುದಾಗಿಯೂ, ಅದಕ್ಕಾಗಿ ತನು ಈ ಕೃತ್ಯವನ್ನು ಎಸಗಿದ್ದಾಗಿಯೂ ಅವನು ಹೇಳಿಕೆ ನೀಡಿದ. ಸ್ಪೆಕ್-ವಿಟ್ಮನ್ ಮಾದರಿಗಳನ್ನು ನಿರಂತರವಾಗಿ ಉಣಿಸುವ ಮಾಧ್ಯಮಗಳು ನಮ್ಮ ಮಕ್ಕಳನ್ನು ಮತ್ತು ಯುವ ಜನತೆಯನ್ನು ಯಾವ ಹಾದಿಯಲ್ಲಿ ಕೊಂಡೊಯ್ಯಬಹುದು ಎನ್ನುವುದನ್ನು ಯಾರೂ ಕಲ್ಪಿಸಿಕೊಳ್ಳಬಹುದು.

ಮಾಧ್ಯಮಗಳ ಈ ದುಸ್ಥಿತಿಗೆ ಏನು ಕಾರಣ? ಅವುಗಳ ಸುಸೂತ್ರ ಕಾರ್ಯನಿರ್ವಹಣೆಗೆ ಯಾವ ಅಂಶಗಳು ಅವಶ್ಯಕವಾಗಿವೆ? ಈ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಎರಡು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಬೇಕು. ಮೊದಲಿಗೆ, ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಪೂರಕವಾದ ಸಾಮಾಜಿಕ ಹಾಗೂ ರಾಜಕೀಯ ಸನ್ನಿವೇಶ; ಎರಡನೆಯದು, ಅಂತಹ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳುವ ಮಾಧ್ಯಮ ವೃತ್ತಿಯ ಸಾಮಾಜಿಕ ಹೊಣೆಗಾರಿಕೆ. ನಮ್ಮ ಸಂದರ್ಭಕ್ಕೆ ಸೀಮಿತವಾಗಿ ಈ ವಿಚಾರಗಳನ್ನು ಪರಿಶೀಲಿಸಿದಾಗ, ಈ ವಿಚಾರಗಳಲ್ಲಿ ನಮ್ಮ ಮಾಧ್ಯಮಗಳ ಪರಿಸ್ಥಿತಿ ಅಪೇಕ್ಷಿತ ಮಟ್ಟದಲ್ಲಿ ಇದ್ದಂತೆ ತೋರುವುದಿಲ್ಲ.

ಮಾಧ್ಯಮಗಳ ಸ್ವಾತಂತ್ರ್ಯದ ಪ್ರಶ್ನೆ ಬಂದಾಗ ನಮಗೆ ತಟ್ಟನೆ ಹೊಳೆಯುವುದು ಪ್ರಭುತ್ವದ ನಿಯಂತ್ರಣ. ಈ ವಿಚಾರದಲ್ಲಿ ನಮ್ಮ ಸಂವಿದಾನ ಉದಾರವಾಗಿದೆ; ವಾಕ್ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಅವಕಾಶ ಒದಗಿಸಿಕೊಟ್ಟಿದೆ. ತುರ್ತು ಪರಿಸ್ಥಿತಿ ಸಂದರ್ಭವನ್ನು ಹೊರತುಪಡಿಸಿ ಮತ್ತು ಕೆಲವು ವಿಶೇಷ ಸಂಗತಿಗಳಿಗೆ ಅನ್ವಯಿಸುವುದನ್ನು ಬಿಟ್ಟು, ಯಾವತ್ತೂ ಸರ್ಕಾರ ಮಾಧ್ಯಮಗಳಲ್ಲಿ ಆಷ್ಟಾಗಿ ಹಸ್ತಕ್ಷೇಪ ಮಾಡಿದ್ದು ಅಪರೂಪ. ಹಾಗಾದರೂ ನಮ್ಮ ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಭಾವಿಸಿದರೆ ತಪ್ಪಾಗುತ್ತದೆ.

ಪ್ರಮುಖವಾಗಿ ಮಾಧ್ಯಮ ಸ್ವಾತಂತ್ರಕ್ಕೆ ಅಡ್ಡಿಯಾಗಿರುವುದು ಒಡೆತನದ ಏಕಸ್ವಾಮತೆ, ಎಂದರೆ ಮಾಧ್ಯಮಗಳ ಮಾಲಿಕತ್ವ ಕೆಲವೇ ಹಿತಾಸಕ್ತ ಗುಂಪುಗಳ ಹಿಡಿತಕ್ಕೆ ಒಳಪಟ್ಟಿದ್ದು, ಈ ಮಾಲೀಕರು ಬೃಹತ್ ಉದ್ಯಮಿಗಳು ಅಥವಾ ಕೈಗಾರಿಕಾ ಗುಂಪುಗಳು. ಈಚಿನ ದಿನಗಳಲ್ಲಿ ರಾಜಕಾರಣಿಗಳು ಸಹ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸುವ ಪ್ರವೃತ್ತಿ ಹೆಚ್ಚಾಗಿ ಕಾಣಬರುತ್ತದೆ. ಇವರು ಮಾಧ್ಯಮಗಳನ್ನು ತಮ್ಮ ವ್ಯವಹಾರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಸಾಧನಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಮಾಧ್ಯಮಗಳ ಮೇಲೆ ಪ್ರಭಾವ ಬೀರುವ ಇನ್ನೊಂದು ಗುಂಪು ಜಾಹಿರಾತುದಾರರು. ಜಾಹಿರಾತು ಮೂಲದ ಆದಾಯ ಮಾಧ್ಯಮಗಳ ಆಥರ್ಿಕ ಸ್ಥಿತಿಗೆ ಅಡಿಪಾಯವಾಗಿರುವ ಕಾರಣ, ಜಾಹಿರಾತುದಾರರು ಮತ್ತು ಮಾಧ್ಯಮಗಳ ನಡುವಣ ‘ಕೊಡು ಕೊಳ್ಳುವ’ ಹೊಂದಾಣಿಕೆಗಳು ಮಾಧ್ಯಮಗಳು ಅನುಸರಿಸುವ ನೀತಿ ಮತ್ತು ಧೋರಣೆಗಳನ್ನು ಅವಶ್ಯಕವಾಗಿ ತಿರುಚುತ್ತವೆ ಎನ್ನುವುದನ್ನು ಕೂಡಾ ಅಲ್ಲಗಳೆಯುವಂತಿಲ್ಲ. ಇನ್ನು ಸಂಪಾದಕ, ವರದಿಗಾರ, ನಿರ್ದೇಶಕ ಮೊದಲಾದ ಮಾಧ್ಯಮ ಸಂಸ್ಥೆಯ ಕಾರ್ಯನಿರ್ವಾಹಕರು ತಮ್ಮದೆ ಅಭಿಪ್ರಾಯ, ಧೋರಣೆ, ಪಕ್ಷಪಾತಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವ ಮೂಲಕ ಅವುಗಳ ವಸ್ತುನಿಷ್ಠತೆಗೆ ಕಂಠಕಪ್ರಾಯರಾಗುತ್ತಾರೆ. ಈ ಎಲ್ಲ ಮೂಲಗಳಿಂದ ಒದಗಿಬರುವ ನಿಯಂತ್ರಣಗಳನ್ನು ಗಮನಿಸಿದಾಗ, ಮಾಧ್ಯಮ ಸ್ವಾತಂತ್ರ್ಯ ಕೇವಲ ಮರೀಚಿಕೆಯಾಗಿ ತೋರಿಬರುತ್ತದೆ.

tv remoteಇನ್ನು ಮಾಧ್ಯಮಗಳಲ್ಲಿ ಎಷ್ಟರಮಟ್ಟಿನ ವೃತ್ತಿಪರತೆ ಎನ್ನುವುದು ಕೂಡಾ ಮಾಧ್ಯಮಗಳ ಒಳ್ಳೆಯ ಅಥವಾ ಕಳಪೆ ನಿರ್ವಹಣೆಗೆ ಪೂರಕವಾಗುತ್ತದೆ. ಮಾಧ್ಯಮಗಳು ಹೆಚ್ಚು ವಸ್ತುನಿಷ್ಠವಾಗಲು, ಜವಾಬ್ದಾರಿಯುತವಾಗಲು ಅವು ಹೆಚ್ಚು ಹೆಚ್ಚು ವೃತ್ತಿಪರವಾಗುವ ಅವಶ್ಯಕತೆ ಇದೆ. ಯಾವುದೇ ವೃತ್ತಿ, ವೃತ್ತಿಯೆಂದು ಪರಿಗಣಿಸಲ್ಪಡಲು ಕನಿಷ್ಠ ಎರಡು ಅರ್ಹತೆಗಳನ್ನು ಹೊಂದಿರಬೇಕು. ಒಂದು, ವೃತ್ತಿ ಸಂಬಂಧಿ ಕಾರ್ಯನಿರ್ವಹಣೆಗೆ ಅವಶ್ಯಕವಾದ ತರಬೇತಿ; ಎರಡು, ವೃತ್ತಿಗೆ ಸಂಬಂಧಿಸಿದ ನೀತಿ ಸಂಹಿತೆ ಮತ್ತು ಅದರ ಕಟ್ಟುನಿಟ್ಟಿನ ಅನ್ವಯ. ಈ ಎರಡೂ ಮಾನದಂಡಗಳನ್ನು ಮಾಧ್ಯಮ ವೃತ್ತಿಗೆ ಅನ್ವಯಿಸಿದರೆ, ಎರಡೂ ವಿಚಾರದಲ್ಲಿ ಕೊರತೆ ಎದ್ದು ಕಾಣುತ್ತದೆ. ವೃತ್ತಿಗೆ ಸಂಬಂಧಿಸಿದ ಯಾವುದೇ ಬಗೆಯ ತರಬೇತಿ ಇಲ್ಲದೆಯೂ ಮಾಧ್ಯಮಗಳಲ್ಲಿ ಕೆಲಸ ಪಡೆದುಕೊಳ್ಳುವ ಸಾಧ್ಯತೆ ಇದೆ. ಬೇರೆ ಬೇರೆ ನೀತಿಸಂಹಿತೆಗಳು ಲಭ್ಯವಿದ್ದರೂ, ಅವು ಕಾರ್ಯರೂಪದಲ್ಲಿ ಜಾರಿಯಾದದ್ದು ತೀರಾ ಅಪರೂಪ.

ಮಾಧ್ಯಮಗಳಲ್ಲಿ ಇನ್ನು ಹೆಚ್ಚಿನ ಅಪಾಯಕಾರಿ ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ಗೋಚರವಾಗುತ್ತಿರುವ ಅಪಾದನೆಗಳು ಕೇಳಿಬರುತ್ತಿವೆ. ತನಿಕಾ ವರದಿಗಳ ನೆಪದಲ್ಲಿ ಮಾಧ್ಯಮಗಳು ತಮ್ಮದೇ ತನಿಕೆ ನಡೆಸಿ, ಅದರ ಆಧಾರದ ಮೇಲೆ ತಮ್ಮದೇ ತೀರ್ಮಾನಗಳನ್ನು ಕೈಗೊಂಡು ನ್ಯಾಯವಿತರಣೆಯ ಹಾದಿತಪ್ಪಿಸುವ ಅಥವಾ ನ್ಯಾಯಾಂಗ ತನಿಕೆಯ ಮೇಲೆ ಪ್ರಭಾವ ಬೀರುವ ಕೆಲಸ ವ್ಯಾಪಕವಾಗಿ ನಡೆಯುತ್ತದೆ. ಯಾವುದೋ ಹಗರಣದಲ್ಲಿ ಯಾರನ್ನೋ ಅಪರಾಧಿ ಎಂದು ಪರಿಗಣಿಸಿ, ನ್ಯಾಯಾಲಯಗಳು ತೀರ್ಪು ನೀಡುವ ಮೊದಲೇ, ಮಾಧ್ಯಮಗಳು ಪ್ರಚಾರ ಮಾಡುವುದು ಅವುಗಳ ಸ್ವಾತಂತ್ರ್ಯದ ದುರ್ಬಳಕೆಯಾಗುತ್ತದೆ.

ಇನ್ನು ಮಾಧ್ಯಮಗಳ ಭ್ರಷ್ಟಾಚಾರದ ಬಗೆಗೂ ಸಾಕಷ್ಟು ಅನುಮಾನಗಳು ಇದ್ದೇ ಇವೆ. ‘ಕಾಸಿಗಾಗಿ ಸುದ್ಧಿ’ (ಪೆಯ್ಡ್ ನ್ಯೂಸ್) ಎನ್ನುವ ಹೊಸ ಪ್ರವೃತ್ತಿಯಂತೂ ತುಂಬಾ ಅಪಾಯಕಾರಿ ಬೆಳವಣಿಗೆ. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದು ಅವರ ಪರ ಅಥವಾ ವಿರೋಧವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮಾತು ಆಗಾಗ ಕೇಳಿಬರುತ್ತಲೇ ಇರುತ್ತವೆ. ಇಂತಹ ದುಷ್ಟ ಪ್ರವೃತ್ತಿಗಳು ಮಾಧ್ಯಮಗಳ ಮೂಲ ಆಶಯಗಳಿಗೆ ತೀರಾ ವ್ಯತಿರಿಕ್ತವಾಗಿರುವುದು ಯಾವುದೇ ನಾಗರೀಕ ಸಮಾಜದ ದುರಂತವೇ ಸರಿ.

ಮಾಧ್ಯಮ ಮಂಥನದಲ್ಲಿ ಅವಶ್ಯಕವಾಗಿ ನೆನಪಿಡಲೇ ಬೇಕಾದ ಅಂಶವೊಂದಿದೆ. ಸ್ವಾತಂತ್ರ್ಯ ಎನ್ನುವುದು ಉನ್ನತ ಮೌಲ್ಯ, ನಿಜ. ಆದರೆ ಅದು ಯಾವತ್ತೂ ಸರ್ವತಂತ್ರ ಎಂದು ಪರಿಭಾವಿಸಬಾರದು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಳು ಬೇರೆಯವೇ. ಸ್ವಾತಂತ್ರ್ಯದ ಹಕ್ಕು ಮತ್ತು ಅದರ ಜವಾಬ್ಧಾರಿಯುತ ಬಳಕೆ ಒಂದಕ್ಕೊಂದು ಪೂರಕವಾದ ಸಹವರ್ತಿಗಳು. ಯಾವಾಗ ಸ್ವಾತಂತ್ರ್ಯದ ದುರ್ಬಳಕೆಯಾಗುತ್ತದೋ ಆಗ ಅದನ್ನು ನಿಯಂತ್ರಣಕ್ಕೆ ಒಳಪಡಿಸುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವುದು ಸಮಾಜಕ್ಕೂ ಹಿತಕರ, ಮಾಧ್ಯಮಗಳಿಗೂ ಕ್ಷೇಮ.

ಪ್ರಸ್ತುತ ಲೇಖಕ ಇನ್ನೊಂದು ಸಂದರ್ಭದಲ್ಲಿ ನಿರೂಪಿಸಿರುವ ಕೆಲವು ಮಾತುಗಳು ಇಲ್ಲಿ ಉಲ್ಲೇಖನಿಯ: ಇಷ್ಟೆಲ್ಲ ಹೇಳಿದ ಮೇಲೂ ನಾಗರಿಕ ಸಮಾಜದ ಅಳಿವು ಉಳಿವು ಅನಿವಾರ್ಯವಾಗಿ ಮಾಧ್ಯಮಗಳ ಆರೋಗ್ಯಕರ ನಿರ್ವಹಣೆಯನ್ನೇ ಅವಲಂಬಿಸಿರುತ್ತದೆ. ಮಾಧ್ಯಮ ವಿಮುಕ್ತ ಸಮಾಜ ಕಲ್ಪನೆಗೂ ನಿಲುಕದಷ್ಟು ಅವು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಅವುಗಳ ಅರೆಕೊರೆಗಳನ್ನು ಹೇಳಿದ ಮಾತ್ರಕ್ಕೆ ಈ ಮೇಲಿನ ವಿಚಾರಧಾರೆ ಮಾಧ್ಯಮ ವಿರೋಧಿ ಎಂದು ಯಾರೂ ಪರಿಗಣಿಸಬೇಕಾಗಿಲ್ಲ.

ಮಾಧ್ಯಮಗಳ ಇತಿಮಿತಿಗಳನು ಗಮನದಲ್ಲಿಟ್ಟುಕೊಂಡು ನಾವು ಮಾಧ್ಯಮ ಸರಕುಗಳನ್ನು ಅರ್ಥೈಸಬೇಕು, ಒಪ್ಪಿಕೊಳ್ಳಬೇಕು ಎನ್ನುವುದು ಇಲ್ಲಿನ ವಿಚಾರ ಸರಣಿಯ ಸಾರಾಂಶ. ಪಾಲ್ ಬೆಕೆಟ್ ಎಂಬ ಮಾಧ್ಯಮ ವಿಮರ್ಶಕನ ಹೇಳಿಕೆಯೊಂದನ್ನು ಉದ್ದರಿಸುವ ಮೂಲಕ ಇಲ್ಲಿನ ವಿಶ್ಲೇಷಣೆಯನ್ನು ಕೊನೆಗೊಳಿಸಬಹುದು: ‘ಸ್ವತಂತ್ರ ಮಾಧ್ಯಮ (ಅದರ ನಿಜ ಅರ್ಥದಲ್ಲಿ) ಶಕ್ತಿಶಾಲಿ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಭ್ರಷ್ಟ ಮಾಧ್ಯಮ ಕುಲಗೆಟ್ಟ ಪ್ರಜಾಪ್ರಭುತ್ವದ ಸೂಚಿ ಮತ್ತು ಅದನ್ನು ಶಾಶ್ವತಗೊಳಿಸುವ ಸಾಧನ ಎರಡೂ ಆಗಿರುತ್ತದೆ.’

ಹೊಸ ಮನುಷ್ಯ, ವಿಶೇಷ ಸಂಚಿಕೆ, ಅಗಸ್ಟ 2016

‍ಲೇಖಕರು Admin

August 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This