‘ಮುಂದೆ ಬರುವುದು ಮಹಾನವಮಿ’

ರಾಜು ಎಂ ಎಸ್

‘ಈ ಕಥೆಗಳ ಸಹವಾಸವೇ ಸಾಕು’ ಹಾಗೂ ‘ನವಿಲೆಸರ’ ಕಥಾಸಂಕಲನಗಳ ಮೂಲಕ ಕಥೆಗಳನ್ನು ಹೇಳಲಾರಂಭಿಸಿದ ಅಲಕ ತೀರ್ಥಹಳ್ಳಿಯವರು ತಮ್ಮ ಚೊಚ್ಚಲ ಕಾದಂಬರಿ ‘ಮುಂದೆ ಬರುವುದು ಮಹಾನವಮಿ’ಯ ಮುಖಾಂತರ ಮಲೆನಾಡಿನ ಬದುಕನ್ನು ಚಿತ್ರಿಸಿದ್ದಾರೆ.

ಕನ್ನಡ ಕಾದಂಬರಿಯ ಜಗತ್ತಿನಲ್ಲಿ ವಿಹರಿಸಿರುವ ನಾವು, ಈ ನೆಲದ ಅಸ್ಮಿತೆಯನ್ನು ಮೈಗೂಡಿಸಿಕೊಂಡವರು. ಇಲ್ಲಿನ ಕಾಡು, ನದಿ, ಊರು, ಕೇರಿ, ಜನಪದೀಯ ದಂತಕಥೆಗಳ ಪ್ರತೀತಿಗಳು, ಸಂಸ್ಕೃತಿ, ಆಧುನಿಕತೆ ಮತ್ತು ಪರಂಪರೆಗಳೆಲ್ಲವನ್ನೂ ನಮ್ಮ ನಮ್ಮ ಅರಿವಿನ ಹಿನ್ನೆಲೆಯಲ್ಲಿ ಗ್ರಹಿಸಿಕೊಂಡಿದ್ದೇವೆ. ಎಲ್ಲಾ ವರ್ಗ, ಜಾತಿ, ಪ್ರಾಂತೀಯತೆಗಳ ಸಂಘರ್ಷಗಳಿಗೆ ಹೆಗಲುಕೊಟ್ಟು ದುಡಿದಿದ್ದೇವೆ. ಇಷ್ಟೆಲ್ಲದರ ಹೊರತಾಗಿಯೂ, ಒಟ್ಟಾರೆಯಾಗಿ ನಾವು ಕನ್ನಡ ಭಾಷಾಭಿವ್ಯಕ್ತಿ ನೆಲೆಯಲ್ಲಿ, ಇಲ್ಲಿನ ಬಹುಮುಖೀ ಸ್ವರೂಪವನ್ನು ಸ್ವೀಕರಿಸುವಷ್ಟು ವಿಶಾಲ ಹೃದಯದವರು. ಸಹೃದಯರು! ಎಂ ಎಸ್ ಪುಟ್ಟಣ್ಣಯ್ಯ, ತರಾಸು, ಕುವೆಂಪು, ಕಾರಂತ, ಕಟ್ಟಿಮನಿ, ಲಂಕೇಶ್, ಅನಂತಮೂರ್ತಿ, ಭೈರಪ್ಪ, ಕುಂವೀ, ಕಂಬಾರ್, ತೇಜಸ್ವಿ, ದೇವನೂರು, ಬರಗೂರು, ಆಲನಹಳ್ಳಿ.. ಮುಂತಾದವರುಗಳು ಕಟ್ಟಿಕೊಟ್ಟಿರುವ ಕನ್ನಡ ಕಾದಂಬರಿ ಜಗತ್ತು ವೈವಿಧ್ಯತೆಯಿಂದ ಕೂಡಿದೆ.

ಪರಂಪರೆ ಮತ್ತು ವೈಯಕ್ತಿಕ ಅಭಿವ್ಯಕ್ತಿಯ ನೆಲೆಯಲ್ಲಿ ಈ ಕಾದಂಬರಿ ಲೋಕಗಳಲ್ಲಿ ನಡೆವ ತಿಕ್ಕಾಟವಿದೆಯಲ್ಲ ಅದು ಆದಿಮವಾದ ಸಂಘರ್ಷದ ಕಿಚ್ಚು. ಇವೆಲ್ಲದರ ಮೂಲ ಸೆಲೆ ಪುರಾಣಾದಿಯಿಂದಲೂ ಕ್ರಮಿಸಿಕೊಂಡು ಬಂದು ಆಧುನಿಕತೆಯೊಂದಿಗೆ ಸಾವಯವ ಸಂಬಂಧದ ಮೂಲಕ ಹೊಂದಾಣಿಕೆ ಮಾಡಿಕೊಳ್ಳುವಲ್ಲಿಗೆ ನೆಲೆಗೊಳ್ಳುತ್ತದೆ. ಇಂತಹುದೇ ಒಂದು ಅಭಿವ್ಯಕ್ತಿಯನ್ನು ನಾವು ‘ಮುಂದೆ ಬರುವುದು ಮಹಾನವಮಿ’ (2019) ಕಾದಂಬರಿಯಲ್ಲಿ ಕಾಣಬಹುದು.

ಅಲಕ ತೀರ್ಥಹಳ್ಳಿ ಅವರಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯ ಸರಳ ನಿರೂಪಣಾ ವಿಧಾನ ಸಿದ್ಧಿಸಿದೆ. ಈ ಕಾದಂಬರಿಯಲ್ಲಿ ಅನಾವರಣಗೊಳ್ಳುವ ನವಿಲೆಸರ ಮತ್ತು ಹಸಿರೂರು ಎನ್ನುವ ಮಲೆನಾಡಿನ ಕಾಲ್ಪನಿಕ ಊರುಗಳಲ್ಲಿ ನಡೆಯುವ ಘಟನಾವಳಿಗಳು ಇಲ್ಲಿವೆ. ಇಲ್ಲಿ ಮಲೆನಾಡ ಕಾಡು, ತೋಟಗಳು, ಜನ, ಊರು, ಜಾತ್ರೆ ಎಲ್ಲವನ್ನೂ ಒಂದು ಪನೋರಮಿಕ್ ಆದ ವಿಶಾಲ ನೆಲೆಯಲ್ಲಿ ಕುಂಚವಾಡಿಸಿರುವಂತೆ ಕಾಣುತ್ತದೆ. ಕಾದಂಬರಿ ಶುರುವಾಗುವುದು ಇಲ್ಲಿನ ಸ್ಥಳಪುರಾಣದಂತಹ ದಂತಕಥೆಯಿಂದ.

ನವಿಲೆಸರ ಮತ್ತು ಹಸಿರೂರುಗಳ ಬಳಿಯ ಹೆಬ್ಬೈಲಮ್ಮನ ಗುಡ್ಡ. ಇಲ್ಲಿ ಅಂಬಿಕೆ ಮತ್ತು ರೇಣುಕೆ ಎಂಬ ಹೆಸರಿನ ಅಕ್ಕ-ತಂಗಿಯರು ದೇವಲೋಕದಿಂದ ಬಂದು ಪ್ರಾಣಿ-ಪಕ್ಷಿಗಳೊಡನೆ  ಆಟವಾಡುತ್ತಿರುತ್ತಾರೆ. ರೇಣುಕೆ, ಶರಾವತಿ ನದಿ ದಾಟಿ ಚಂದ್ರಗುತ್ತಿಯಲ್ಲಿ ನೆಲೆಸುವಳು. ಅಂಬಿಕೆಯು, ಮೂಕಾಂಬಿಕೆಯಾಗಿ ಅಲ್ಲಿಯೇ ಇದ್ದ ದೈತ್ಯಾಕಾರದ ಅಪ್ಪೆ ಮಾವಿನ ಮರದ ಕೆಳಗಿನ ದಿಬ್ಬವೊಂದರ ಮೇಲೆ ಕಲ್ಲಾಗಿ ಕುಳಿತು ಪೂಜಿಸಲ್ಪಡುತ್ತಿದ್ದಾಳೆ ಎಂಬ ಪ್ರತೀತಿ, ಹಿನ್ನೆಲೆಯನ್ನು ಕಾದಂಬರಿಯು ಅನಾವರಣಗೊಳಿಸುತ್ತದೆ.

ಬ್ರಿಟಿಷರ ಕಾಲಾನಂತರ ನೆಹರು, ತದನಂತರ ಶಾಸ್ತ್ರಿಯವರು ಈ ಗುಡ್ಡ ಮುಳುಗಡೆಯಾಗುವಂತೆ ಲಿಂಗನಮಕ್ಕಿಯಲ್ಲಿ ಶರಾವತಿಗೆ ಅಣೆಕಟ್ಟೆಯೊಂದನ್ನು ಕಟ್ಟಿದುದಕ್ಕೆ, ಈ ಹೆಬ್ಬೈಲಮ್ಮನು ಶಾಪ ಕೊಟ್ಟಳು; ಈ ಪ್ರಧಾನಿಗಳಿಬ್ಬರ ಸಾವಿಗೆ ಇವಳ ಶಾಪವೇ ಕಾರಣ ಎಂಬುದಾಗಿ ಜನಪದರ ದಂತಕಥೆಗಳು ಹುಟ್ಟಿಕೊಳ್ಳುತ್ತವೆ. ಮುಳುಗಡೆಯಾಗಿ, ಹಿನ್ನೀರ ಕೆಸರ ಮಣ್ಣಿನಲ್ಲಿ ಹೂತುಹೋಗಿದ್ದ ಈ ಕಲ್ಲಿನ ದೇವಿಯ ವಿಗ್ರಹವನ್ನು ನವಿಲೆಸರದಲ್ಲಿ ವಿಧಿವತ್ತಾಗಿ ಸ್ಥಾಪಿಸಿದವರೇ ಮಹಾಬಲಯ್ಯನವರು.

ಮಹಾಬಲಯ್ಯನವರೆಂದರೆ, ನವಿಲೆಸರದಲ್ಲಿ  ರಸಬಳ್ಳಿಯಂತೆ ಹಬ್ಬಲಿರುವ ತಲೆಮಾರುಗಳಿಗೆ ಮಹಾವೃಕ್ಷದಂತಹವರು. ಈ ಗುಡಿಯೊಳಗೆ ಎಲ್ಲಾ ಜಾತಿ ಸಂಪ್ರದಾಯದವರಿಗೂ ಪ್ರವೇಶವಿತ್ತು. ಇಷ್ಟು ವರ್ಷಗಳವರೆಗೂ ಮಾಂಸ-ರಕ್ತಬಲಿ, ಬಯಸುತ್ತಿದ್ದ ದೇವಿಗೆ ಇನ್ನು ಮುಂದೆ ಮೊಸರನ್ನ-ಫಲಾನ್ನವನ್ನೇ ನೈವೇದ್ಯ ಮಾಡುತ್ತೇವೆಂದು ಒಪ್ಪಿಸಲಾಗುತ್ತದೆ.

ಯಾತ್ರೆಗೆ ಬಂದಿದ್ದ ವೆಂಕಟಾಚಲ ಭಟ್ಟರು, ಇಲ್ಲಿ ಪೂಜೆ ಮಾಡಿಕೊಂಡಿರಲು ನೇಮಕಗೊಳ್ಳುತ್ತಾರೆ. ಕಡುಗಪ್ಪು ಮೈಬಣ್ಣದ ಭಟ್ಟರಿಗೆ ಕರ್ಪೂರದ ಗೊಂಬೆಯಂತಹ ಕಲಾವತಿ ಎನ್ನುವ ಹುಡುಗಿಯೊಬ್ಬಳನ್ನು ಆರಿಸಿ ತಂದು ಮಹಾಬಲಯ್ಯನವರೇ ನಿಂತಿದ್ದು ಮದುವೆ ಮಾಡಿಸುತ್ತಾರೆ. ಭಟ್ಟರಿಗೆ ಐವತ್ತಾದರೂ ಮಕ್ಕಳಾಗುವುದಿಲ್ಲ. ಒಂದು ದಿನ ಕಲಾವತಮ್ಮ, ಕಿಬ್ಬೊಟ್ಟೆ ನೋವೇ ನೆಪವಾಗಿ ಆಸ್ಪತ್ರೆಯಲ್ಲಿ ಸಾಯುತ್ತಾಳೆ. ಕಣ್ಣೀರನ್ನು ಸುರಿಸದ ಭಟ್ಟರ ಮೌನ ಊರಿನವರೆಲ್ಲರಿಗೆ ಒಗಟಾಗಿ ಕಾಣುತ್ತದೆ.

ಈಗ ದೇವಿ ಪೂಜೆಯನ್ನು ವಹಿಸಿಕೊಳ್ಳಲು ಯಾರೂ ತಯಾರಿಲ್ಲ. ನವಿಲೆಸರದಲ್ಲಿದ್ದ ಸಂಬಯ್ಯನವರ ಮಕ್ಕಳು ಶಾಂತಾರಾಮ ಹಾಗೂ ರಾಜಾರಾಮ ಇಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಸ್ವಯಂ ನಿವೃತ್ತಿಯನ್ನು ಪಡೆದು ನವಿಲೆಸರಕ್ಕೆ ಬಂದು ಇಲ್ಲಿಯೇ ಎಷ್ಟೋ ವರ್ಷಗಳಿಂದ ನೆಲೆಸಿರುವ, ಇನ್ನೂ ಅವಿವಾಹಿತನಾಗಿಯೇ ಇರುವ ದತ್ತಮೂರ್ತಿ; ಮಹಾಬಲಯ್ಯನವರ ಮಗ ಶೇಷಗಿರಿ, ಮೊಮ್ಮಗ ದೇವಿಪ್ರಸಾದ ಇವರೂ ತಯಾರಿಲ್ಲ.

ಭಯ-ಭಕ್ತಿಯ ಜನರ ನಡುವೆಯೇ ಗಾಡಿಗರ ದ್ಯಾವಪ್ಪನ ಮೈಮೇಲೆ ದೇವಿ ಬಂದು “ಗಾಡಿ ಮೇಲೆ ಗಾಡಿ ಕಟ್ಟಿ.. ಗುಡಿ ಒಳಗೆ ಗುಡಿ ಕಟ್ಟಿ.. ಜಾತ್ರೆ ಮಾಡಿ ಬರ್ತೀನಿ.. ಕುರಿ ಬೇಕು.. ಕೋಳಿ ಬೇಕು.. ಬ್ರಾಂಬ್ರೂ ಬೇಕು ದೀವ್ರೂ ಬೇಕು ಅವ್ರೂ ಬೇಕು ಇವ್ರೂ ಬೇಕು” ಎನ್ನುತ್ತಾಳೆ.

ದೇವಿಯು ದ್ಯಾವಪ್ಪನ ಮೈ ಬಿಟ್ಟು ಹೋಗುತ್ತಿದ್ದಂತೆ, ಜನ ಚದುರುತ್ತಾರೆ.  ಅವನ ಹೆಂಡತಿ ಇದಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳದೆ… ಅವ ಪೇಟೆಗೆ ಹೋಗಲು ಬಳಸುವ ಅಂಗಿ ಪಂಚೆ ಉಡಲು ಕೊಟ್ಟು… “ತಾಳಗುಪ್ಪೆಗೆ ಹೋಗಿ ಸೋಪು, ಚಾಪುಡಿ, ಎಣ್ಣೆ ತಗುಬರ್ರಿ” ಎಂದು ಹಣಕ್ಕಾಗಿ ತನ್ನ ಕುಪ್ಪಸದಲ್ಲಿ ಕೈದಡವುತ್ತಾಳೆ. ಹೀಗೆ ಪಾತ್ರಗಳನ್ನು ಕೈಯಳತೆಯಷ್ಟು ದೂರವೇ ನಿಂತು ವೀರ-ಭೀಭತ್ಸತೆಯ ಅಂಶಗಳಿಂದ ನಿರೂಪಣೆಯ ಅಂತರವನ್ನು ಕಾಯ್ದಿರಿಸಿಕೊಳ್ಳುವಂತೆ ನಿರೂಪಣಾ ಶೈಲಿಯು ಇಲ್ಲಿ ಬಳಕೆಯಾಗಿದೆ. ಪಾತ್ರಗಳು  ತಮ್ಮ ಭೂತ-ವರ್ತಮಾನ-ಭವಿಷ್ಯದ (ಹಣೆಬರಹದ) ಮೇಲೆ ಯಾವುದೇ ನಿಯಂತ್ರಣ ಹೊಂದಲಾಗುವುದಿಲ್ಲ ಇಲ್ಲಿ. ಮಧ್ಯಮವರ್ಗ, ಬಡವ ಎಲ್ಲರೂ ಇಲ್ಲಿ ತಮ್ಮ ತಮ್ಮ ಉಳಿವಿಗೆ ಹೋರಾಡುತ್ತಿದ್ದಾರೆ ಅಷ್ಟೇ.

ನವಿಲೆಸರ ಮತ್ತು ಹಸಿರೂರು ಹಾಗೂ ಸುತ್ತಮುತ್ತಲಿನ ಹತ್ತೆಂಟು ಹಳ್ಳಿಗಳಿಗೆ ಸೇರಿದ ಪ್ರಾಥಮಿಕ ಶಾಲೆಯಲ್ಲಿ ಇಷ್ಟು ವರ್ಷಗಳ ಕಾಲ ಸಾವಿರಾರು ಜನರಿಗೆ ಪಾಠ ಮಾಡಿ ನಿವೃತ್ತರಾದ ಮಾಧವ ಮಾಸ್ಟರ ಸಾವಿನ ಸುದ್ದಿಯೊಂದಿಗೆ ಕಾದಂಬರಿಯು ಇನ್ನೊಂದು ಮಜಲನ್ನು ತೋರಿಸುತ್ತದೆ. ಮಾಷ್ಟ್ರ ಮಗ ಪುಂಡಲೀಕ ಬಾಲ್ಯದಲ್ಲೇ ಮನೆಬಿಟ್ಟು ಓಡಿಹೋದವ. ಇವನನ್ನು ಹುಡುಕಿ ಕರೆತಂದು ಮಾಸ್ಟರ ಶವಕ್ಕೆ ಕೊಳ್ಳಿ ಮುಟ್ಟಿಸಬೇಕೆಂದು ಬಹಳಷ್ಟು ಶಿಷ್ಯರು ಹೊರಡುತ್ತಾರೆ. ದತ್ತಮೂರ್ತಿಯೂ ಕಾರು ತೆಗೆದುಕೊಂಡು ಹೊರಡುವ.

ತಾಳಗುಪ್ಪದ ಮಹಾಲಸ ರೈಸ್ ಮಿಲ್ ನ ಓನರ್ ಮಂಜುನಾಥನ ಮಾರ್ಗಸೂಚಿಯಂತೆ, ದತ್ತಮೂರ್ತಿಯು ರಿಪ್ಪನ್ ಪೇಟೆಗೆ ಹೋಗಿ, ಅಲ್ಲಿನ ಕಿರಿದಾದ ಓಣಿಯೊಳಗೆ ಇದ್ದ ಅಪ್ಪೆ ಮಾವಿನ ಮಿಡಿ ಮಾರುವ, ಗಿಜಿಗುಟ್ಟುತ್ತಿರುವ ಅಂಗಡಿಯ ವ್ಯಾಪಾರ ನೋಡಿಕೊಳ್ಳುತ್ತಿದ್ದ ಪುಂಡಲೀಕನನ್ನು ಕಂಡು, “ಪುಂಡೀ!” ಎನ್ನುತ್ತಾನೆ. “ಓಹ್! ಏನೋ ದತ್ತು, ನಿನ್ನ ಮೇಷ್ಟ್ರು ಅಲ್ಲಿ ಸತ್ತು ಮಲ್ಕೊಂಡಿದ್ದಾರೆ. ನೀನು ಇಲ್ಲಿ ಅಪ್ಪೆಮಿಡಿ ತರಲಿಕ್ಕೆ ಬಂದಿದೆಯಲ್ಲೋ?” ಎಂದು ನಿರ್ಲಿಪ್ತನಾಗಿ ಪ್ರತಿಕ್ರಿಯಿಸಿ, ಮತ್ತೆ ತನ್ನ ವ್ಯವಹಾರದಲ್ಲಿ ತಲ್ಲೀನನಾಗುವನು. ಸ್ವಲ್ಪ ಹೊತ್ತಾದ ಮೇಲೆ “ದತ್ತು, ನೀನು ಯಾಕೆ ಬಂದಿದೀಯ ಅಂತ ನನಗೆ ಗೊತ್ತಾಯ್ತು. ಆದರೆ, ನಾನು ಈಗ ಬರೋದಿಲ್ಲ; ಬದುಕಿದ್ದಾಗಲೇ ಇಲ್ಲದ ಸಂಬಂಧ, ಸತ್ತಮೇಲೆ ಬರುತ್ತೆ ಅಂದ್ರೆ ಏನರ್ಥ?” ಎನ್ನುತ್ತಾನೆ. ದತ್ತು ಹೇಗೋ ಇವನನ್ನೊಪ್ಪಿಸಿ ಕಾರಿನಲ್ಲಿ ಕರಕೊಂಡು ಬರುವಾಗ, ಪುಂಡಲಿಕ ತನ್ನ ವಿಷವನ್ನೆಲ್ಲಾ ಕಾರಿಕೊಳ್ಳುವಂತೆ, ತೆಗಳುತ್ತಾನೆ: “(ಮಂಜುನಾಥನ) ಹೇಲ್ ತಿನ್ನೋ ಬುದ್ಧಿ, ಇವತ್ತಲ್ಲ ಇಪ್ಪತ್ತು ಮೂವತ್ತು ವರ್ಷಗಳಿಂದ ನಂಗೊತ್ತು” ಎನ್ನುತ್ತಾನೆ.

ಈ ರೀತಿಯಾಗಿ ಮಾಧವ ಮಾಸ್ಟರ ಪಾತ್ರಕ್ಕೆ ಹೊಂದಿಕೊಂಡಂತೆ – ಫಿಲೋಮಿನ ಟೀಚರಮ್ಮ; ತೆರೇಸಾ; ರೈಸ್ ಮಿಲ್ ಗೆ ಬಿದ್ದ ಬೆಂಕಿ; ಮಂಜುನಾಥನ ಷಡ್ಯಂತ್ರ – ಎಲ್ಲವೂ ಅನಾವರಣಗೊಳ್ಳುತ್ತಾ, ಊರಿನ ಸಮಸ್ತವೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಇವರ ಕಾರು ಸಿರಿವಂತೆ ಬೋರ್ಡುಗಲ್ಲು ಬಳಿ ಬರುವಾಗ, ಇನ್ನೇನು ಹತ್ತು ಹದಿನೈದು ನಿಮಿಷದಲ್ಲಿ ಊರು ತಲುಪುತ್ತಾರೆ ಎನ್ನುವಾಗ, ಮಂಜುನಾಥನ ಫೋನ್ ಬರುತ್ತೆ, ಶವದಹನ ನೆರವೇರಿ ಆಯ್ತು ಅಂತ! “ನಿನ್ನ ಮಂಜುನಾಥನ ನೇತೃತ್ವದಲ್ಲಿ ಮಾಸ್ಟರನ್ನು ಸುಟ್ಟಾಯ್ತಲ್ಲ? ನನಗೆ ಊರನಲ್ಲಿ ಇನ್ನೇನ್ ಕೆಲ್ಸ? ನಾನು ವಾಪಸ್ ಹೋಗ್ತೇನೆ” ಅಂತ ಹೇಳಿ, ಸಾಗರದ ಕಡೆ ಹೋಗುತ್ತಿದ್ದ ಲಾರಿಯೊಂದಕ್ಕೆ ಕೈ ಅಡ್ಡ ಹಾಕಿ, ಪುಂಡಲೀಕ ಲಾರಿಯೇರಿ ಹೋಗಿಯೇ ಬಿಡುತ್ತಾನೆ. 

ಇನ್ನೂ ವಿವಿಧ ಆಯಾಮಗಳು ಈ ಊರಿನ ಘಟನೆಗಳೊಂದಿಗೆ ಬೆರೆತುಹೋಗುತ್ತವೆ ಎನಿಸುತ್ತಲೇ ದತ್ತಮೂರ್ತಿಯು ಇಡೀ ವಿದ್ಯಮಾನಗಳಿಂದ  ತುಂಬಾ ಗೊಂದಲಗೊಳ್ಳುತ್ತಾನೆ. ಮಾಸ್ಟರ್ ಬಗೆಗೆ ಹೀಗಂದುಕೊಳ್ಳುತ್ತಾನೆ : “ನನ್ನ ಆರಾಧ್ಯಮೂರ್ತಿಗೆ ಎಷ್ಟೊಂದು ಜನರು ಎಷ್ಟೊಂದು ಪ್ರೀತಿಯ ಬಣ್ಣವನ್ನೂ ಹಚ್ಚುತ್ತಿದ್ದಾರೆ – ಹಸಿರು, ಕೆಂಪು, ನೀಲಿ… ಅಷ್ಟೇ ಅಲ್ಲ ಕಪ್ಪೂ ಇದೆ ಬಿಳಿಯೂ ಇದೆ!” ಈ ಥರದ ಆಲೋಚನೆಯು ಕಾದಂಬರಿಯೊಳಗಿನಿಂದಲೇ ಹೊಮ್ಮಿ ಬರುವುದು ಒಂದು ರೀತಿಯಲ್ಲಿ ‘ವಿಮರ್ಶೆಯ ವಿಮರ್ಶೆ’ ಅನ್ನಿಸುತ್ತದೆ. ಬದುಕು ಕೇವಲ ಬದುಕು ಅಷ್ಟೇ, ಬಣ್ಣ ಹಚ್ಚುವುದಲ್ಲ. (ಕಾದಂಬರಿಯೂ  ಅಷ್ಟೇ ಬಣ್ಣ ಹಚ್ಚಿಸಿಕೊಳ್ಳಲು ಅಲ್ಲ.) ಇದು ಕಾದಂಬರಿಯ ಹೊರಗೆ ನಿಂತು ನಾವೂ ಹೊಂದಬೇಕಿರುವ ದೃಷ್ಟಿಕೋನ. 

ಕಾದಂಬರಿಯ ಮುಂದಿನ ಭಾಗಗಳಲ್ಲಿ ಕೃಷಿಯ ಬಗೆಗೆ ಮಹಾಬಲಯ್ಯನವರ ಪಾರಂಪರಿಕ ದೃಷ್ಟಿಕೋನ ಹಾಗೂ ಅವರ ಮಗ ಶೇಷಗಿರಿಯ ಆಧುನಿಕ ದೃಷ್ಟಿಕೋನ – ಇವೆರಡರ ನಡುವಿನ ಹೊಯ್ದಾಟದ ತುಲನೆ ಇದೆ. ಇದರೊಟ್ಟಿಗೆ ಶೇಷಗಿರಿಯ ಮಗ ದೇವಿ ಪ್ರಸಾದನಿಗೆ ಹೆಣ್ಣು ಹುಡುಕುವ ಪ್ರಸಂಗವಿದೆ.

ಕಾಲೇಜು ಪದವೀಧರೆ ಕೊಲ್ಲೂರನ ಮಗಳು ಶೋಭಾ ಮಹಿಳಾ ಸಮಾಜವನ್ನು ಕಟ್ಟಿ ಅದರ ಸ್ತ್ರೀಪರ ಚಟುವಟಿಕೆಗಳನ್ನು ಉತ್ತುಂಗಕ್ಕೇರಿಸಿದವಳು. ಕಾಲು ಸ್ವಲ್ಪ ಊನವಿದ್ದರೂ ರೂಪ-ಸ್ವಭಾವಗಳಲ್ಲಿ ಯಾರೂ ಬೆರಳು ತೋರಿಸುವಂತಿರಲಿಲ್ಲ. ದೀವರ ಹುಡುಗಿಯಾದ ಅವಳ ನಯ ನಾಜೂಕು ಸ್ನೇಹಪರತೆ, ಪರೋಪಕಾರ ಗುಣಗಳಿಗೆ  ಇನ್ನಿಲ್ಲದಂತಿದ್ದವಳು. ಇವಳೊಂದಿಗೆ ದೇವಿಪ್ರಸಾದನ ಲವ್ ಸ್ಟೋರಿಯಿದೆ. ಇದಕ್ಕೆ ದೇವಿಪ್ರಸಾದನ ತಾಯಿ ರಾಜಲಕ್ಷ್ಮಿಯ ಕೊಂಕು ನುಡಿಗಳು: “ಯಾರೋ ಅಪ್ಪಿ, ಶೋಭಾ ಅಂದ್ರೆ? ಕೊಲ್ಲೂರನ ಮಗಳ? ಕಾಲೇಜು ಓದ್ದವ್ಳು ? ಅವಳಿಗೆಂತ ಮಳ್ಳು ಹಿಡದ್ದು ಮಾರಾಯಾ, ಈ ಫಟಿಂಗನ್ನ ಕಟ್ಟಿಗಳಾಕೆ? ಅಯ್ಯೋ! ಇನ್ನು ಅವ್ಳು ಕೆರೆ-ಬಾವಿ ಪಾಲೇ ಸೈ. ಈ ಲವ್ವಿಗೆ ಬೆಂಕಿ ಬೀಳ್ಳಿ!”

ಮಾಧವ ಮಾಸ್ಟರ ನೆಚ್ಚಿನ ಶಿಷ್ಯೆಯಾಗಿದ್ದ ಶೋಭಕ್ಕ ಮದ್ಯ ವಿರೋಧಿ ಚಳುವಳಿಯನ್ನು ತೀವ್ರವಾಗಿ ಹಮ್ಮಿಕೊಂಡವಳು. ಇವಳ ಅಣ್ಣ ರಾಜೇಶ ಇತ್ತೀಚೆಗೆ ಕುಡಿಯುವುದನ್ನು ಬಿಟ್ಟವನು. ಇನ್ನೊಂದೆಡೆ, ಮಹಾಬಲಯ್ಯನವರ ಮಗಳು ರಾಧಿಕಾ ಮದುವೆಯಾಗಿ ಅಮೆರಿಕದಲ್ಲಿದ್ದು ಈಗ ಅದೇಕೋ ಒಬ್ಬಳೇ ವಾಪಸ್ಸು ತವರು ಮನೆಗೆ ಬಂದಳು, ನವಿಲೆಸರದಲ್ಲಿಯೇ ನೆಲೆಯೂರಲು ನಿರ್ಧರಿಸಿಯಾಗಿದೆ. ಇವಳ ಐದು ಎಕರೆ ಬ್ಯಾಣದಲ್ಲಿ ಸ್ವತಃ ಕಸಿಮಾಡಿದ ಅಪ್ಪೆ ಮಿಡಿಗಳ ಸಸಿಗಳು ಬೆಳೆದು ನಳನಳಿಸುವಂತೆ ಮಾಡಿರುವಳು.

ಕಾದಂಬರಿಯ ಮುಂದಿನ ಹಂತದಲ್ಲಿ ಕಾಣುವಂತೆ, ಹೆಂಡತಿಯ ಕಳೆದುಕೊಂಡ ವೆಂಕಟಾಚಲ ಭಟ್ಟರು ಮತಿಭ್ರಮಣೆಯಾಗಿ ಅಲೆದಾಡುವುದು ಚಿತ್ರಿತವಾಗಿದೆ. ಇದಕ್ಕೆ ಕಾರಣವನ್ನು ಕಾದಂಬರಿಕಾರರು ಅತಿ ಸೂಕ್ಷ್ಮವಾಗಿ ನೀಡುತ್ತಾರೆ. ಒಂದೊಮ್ಮೆ ವೆಂಕಟಾಚಲ ಭಟ್ಟರು ದೇವಿ ಆರಾಧನೆ ಮಾಡುತ್ತಿರುವಾಗ “ಭಾರ್ಯಾಂ ಭಕ್ಷತು ಭೈರವಿ” ಎಂದು ಹೂವು ಏರಿಸುತ್ತಿದ್ದುದು ಏಕೆ ಎಂಬುದು ದೇವಿಪ್ರಸಾದನಿಗೆ ಅರ್ಥವಾಗುವುದಿಲ್ಲ.

ಈಗ ಭಟ್ಟರು ಭ್ರಾಂತಿಯ ಉನ್ಮಾದದಲ್ಲಿ ತಮ್ಮ ಹೆಂಡತಿಗೆ “ಹಾದರಗಿತ್ತಿ-ಹಡ್ಬೆ ರಂಡೆ-” ಅಂತೆಲ್ಲಾ ಬಡಬಡಿಸುತ್ತಿರುವುದು ಅವನಿಗೆ ಕೇಳಿಸುತ್ತದೆ. ಮಹಾಬಲಯ್ಯನವರ ಮನೆಯಿಂದ ಹೊರ ಹೋಗುತ್ತಾ ಭಟ್ಟರು “ಮಹಾಬಲೌ ಮಹಾಬಲಿಃ ಮಹಾಬಲೌ ಮಹಾಬಲಿಃ” ಎಂದು ಹೇಳುತ್ತಾ ಏಕೆ ಹೋದರು ಎಂಬುದು ಒಗಟಾಗಿಯೇ ಉಳಿಯುತ್ತದೆ. ಮುಂದಿನ ಕೆಲ ದಿನಗಳಲ್ಲಿ ಮಹಾಮರದಂತೆ ಇದ್ದ ಮಹಾಬಲಯ್ಯನವರು ತೀರಿಕೊಳ್ಳುತ್ತಾರೆ. ಇದು ದೇವಿ ಶಾಪವೋ, ಭಟ್ಟರ ಶಾಪವೋ ಓದುಗರೇ ‘ರೀಡಿಂಗ್ ಬಿಟ್ವೀನ್ ದಿ ಲೈನ್ಸ್’ ನಲ್ಲಿ ಅರಿಯಬೇಕಿದೆ.

ತೆರೇಸಾ ಮತ್ತು ಫಿಲೋಮಿನಾರಿಗೆ, ಮಾಧವ ಮೇಷ್ಟ್ರ ಸೇವಿಂಗ್ಸ್ ಹಣವನ್ನು ಕೊಡಲು, ದತ್ತಮೂರ್ತಿಯು ರಾಧಿಕಾಳನ್ನು ಕರೆದುಕೊಂಡು ಮಂಗಳೂರಿಗೆ ಹೋಗುವುದನ್ನು ಕಾದಂಬರಿಯ ಮುಂದಿನ ಭಾಗಗಳಲ್ಲಿ ಕಾಣಬಹುದು. ಬಾಲ್ಯದ ಗೆಳೆತನದಲ್ಲಿ, ಹೇಳಿಕೊಳ್ಳಲಾಗದ ನವಿರು ಪ್ರೇಮವು ಪರಸ್ಪರ ಇದ್ದುದನ್ನು, ರಾಧಿಕಾ ಮತ್ತು ದತ್ತು, ನೆನಪಿಸಿಕೊಳ್ಳುತ್ತಾ ಕಾರಿನಲ್ಲಿ ಸಾಗುತ್ತಾರೆ. ಒಂದು ರೀತಿಯ ವಿಭಿನ್ನ ಕಥಾಮಾಲಿಕೆಯಂತೆ, ಇದು ಮುದ ನೀಡುತ್ತದೆ.

ಕಾದಂಬರಿಯಲ್ಲಿ ಚಿತ್ರಣಗೊಂಡಿರುವ ವೈವಿಧ್ಯಮಯ ಪಾತ್ರಗಳನ್ನು ಓದಿಯೇ ಅನುಭವಿಸಬೇಕು. ಹೆಂಡ ಮಾರುವ ಸರೋಜಮ್ಮ; ಹಾಗು ಸರೋಜಮ್ಮನ ಸೊಸೆಯ ಗಯ್ಯಾಳಿತನ; ಹಸಿರೂರ ದಾರಿ ಮೇಲೆ ದನಕರುಗಳ ಸಗಣಿ ಬಾಚಿ ಗೊಬ್ಬರ ಗುಂಡಿಯ ತುಂಬಿಸುತ್ತಿದ್ದ ಮಡಿವಾಳ ಮರಿಯಪ್ಪ; ಹಾಗೂ ಇವನ ಹೆಂಡತಿ ರಾಮಿ; ರಾಮಿಯ ಮಗ ರಮೇಶ; ನಂತರ ರಾಮಿ-ಕೃಷಿಕ ಹಾಲಪ್ಪ ಕೂಡಿಕೆ; ಇದರಿಂದಾಗಿ ರಮೇಶನ ತಿರಸ್ಕಾರದ ಭಾವ.. ಇವೆಲ್ಲವೂ ಸಹಜವೆನ್ನುವಂತೆ ನಿರೂಪಿತವಾಗಿವೆ.

ರಾಮಿ ಮತ್ತು ಹಾಲಪ್ಪ ತೀರಿದ ನಂತರ, ಬೆಂಗಳೂರಿಗೆ ಓಡಿಹೋಗಿದ್ದ ರಮೇಶ ವಾಪಸ್ಸು ಬರುತ್ತಾನೆ. ಬೆಂಗಳೂರಿನಿಂದ ಇಲ್ಲಿಗೆ ನೆಲೆಯೂರಲು ಬಂದ ಸೋಮಶೇಖರ ಮೇಷ್ಟ್ರಿಗೆ ತಂದೆಯ ಜಮೀನು ಮಾರಾಟ ಮಾಡುವ ರಮೇಶ, ಮತ್ತೆ ಬೆಂಗಳೂರಿಗೆ ವಾಪಸಾಗುವನು. ಈ ಮೇಷ್ಟ್ರು, ಇಲ್ಲಿನ ಸುತ್ತಮುತ್ತಲಿನ ಊರ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ, ಜಮೀನಿನಲ್ಲಿ ಕೃಷಿ ಮಾಡುತ್ತಾ ನವಿಲೆಸರದಲ್ಲಿ ಬೆಂಗ್ಳೂರ್ ಮೇಷ್ಟ್ರು’ ಎಂದು ಜನಪ್ರಿಯರಾಗುತ್ತಾರೆ..

ಜಹಾಂಗೀರು ಮಾಡುತ್ತಲೇ ಫೇಮಸ್ ಆಗಿದ್ದ ಸಂಬಯ್ಯಭಟ್ಟರು, ಅವರ ಮಕ್ಕಳು ಶಾಂತಾರಾಮ ಮತ್ತು ರಾಜಾರಾಮರ ಕುಟುಂಬದ ಬಗೆಗೂ ವಿವರಣೆಗಳು ಬರುತ್ತವೆ. ಇವರ ಗದ್ದೆಯಲ್ಲಿ ತುಡುಗು ದನವೊಂದಕ್ಕೆ ಹೊಡೆದ ಕವಣೆ ಕಲ್ಲು ಅಕಸ್ಮಾತಾಗಿ ದನದ ಹಣೆಗೆ ಬಿದ್ದು ಅದು ಸಾಯುವ ಮನಕಲಕುವ ದೃಶ್ಯವಿದೆ.

ಶಾಂತಾರಾಮ ತನ್ನ ಕಂಪನಿಯ ಕೆಲಸದ ಮೇರೆಗೆ ದೇಶ-ವಿದೇಶ ಸುತ್ತುತ್ತಿರುವನು, ಆದರೂ ಪಿತ್ರಾರ್ಜಿತ ಭೂಮಿಯನ್ನು ಉಳುಮೆ ಮಾಡಿ ತೋಟ ಕಟ್ಟಿ, ಇಲ್ಲೇ ನವಿಲೆಸರದಲ್ಲೇ ನೆಲೆನಿಲ್ಲಲು ಬಂದಿದ್ದಾನೆ. ನವಿಲೆಸರದ ಹಾಲಪ್ಪನ ಮಗ ರಮೇಶ ಒಮ್ಮೆ ಸಲುಗೆಯಲ್ಲಿ ಹೇಳುತ್ತಾನೆ: “ಒಂದಿಷ್ಟು ವರ್ಷ ನಿಂಗೆ ಹೆಣ್ಣಿನ ಮೋಹ ಇತ್ತು; ಮುದಲಿಯಾರ್ರ ಹುಡುಗಿಯನ್ನು ಮದುವೆ ಆದ ಮೇಲೆ ಅದು ಬಿಡ್ತು; ಈಗ ಮಣ್ಣಿನ ಮೋಹ ಹಿಡ್ಕೊಂಡಿದೆ..! ಇದೆಲ್ಲವೂ ವ್ಯಸನ ಕಣಯ್ಯ ವ್ಯಸನ!” ಇದಕ್ಕೆ ಶಾಂತಾರಾಮನ ಉದ್ಗಾರ: “ಅಯ್ಯೋ ನನ್ನ ನವಿಲೆಸರವೆ!”

ಕಮೂನ ‘ದಿ ಪ್ಲೇಗ್’ ರೀತಿಯಲ್ಲೇ ಕಾಣುವಂತಹ ಪುಟ್ಟ ಘಟನಾವಳಿಗಳೂ ಇಲ್ಲಿವೆ. ಆದರಿದು ಅಬ್ಸರ್ಡ್ ಆಗಿಲ್ಲ. ಕನ್ನಡ ಮಣ್ಣಿನ ವಿಭಿನ್ನತೆಯಿದೆ. ಶ್ರೀಮಠದವರ ಬಾಳೆ ಗಿಡದ ತೋಟ; ಮಂಗಗಳ ಹಾವಳಿ; ಮಂಗಗಳ ಸಾವು; ಆರೋಗ್ಯ ಇಲಾಖೆಯ ಮಧ್ಯಪ್ರವೇಶದಿಂದ ಇದು ‘ಮಂಗನ ಕಾಯಿಲೆ’ ಎಂದು  ‘ಯುಟ್ಯೂಬ್’-‘ವಾಟ್ಸಾಪ್’ ಗಳಲ್ಲಿ ವೈರಲ್ ಆಗುವುದು. ಮಠದ ಮ್ಯಾನೇಜರ್ ಆಗಿದ್ದ ರಾಜಾರಾಮ ಅರೆಸ್ಟ್ ಆಗುವನು. ಕೊನೆಗೆ ಖುಲಾಸೆಯೂ ಆಗುತ್ತಾನೆ. ಒಟ್ಟಿನಲ್ಲಿ ರೋಸಿಹೋಗಿದ್ದ ರಾಜಾರಾಮ ಈ ಹಳ್ಳಿಗೆ ಮಹಾಮನಮಿ ಜಾತ್ರೆಗೆ ಬರುವುದು ನಡೆಯುತ್ತದೆ.

ಹಾಲಪ್ಪನ ಮಗ ರಮೇಶ ಒಮ್ಮೆ ಸಿಕ್ಕವ ಹೇಳುತ್ತಾನೆ, “ನಿಮ್ಮ ಊರು ಸತ್ತು ನೂರು ವರ್ಷ ಆಯ್ತು ಬಿಡಪ್ಪಾ!” ಇದಕ್ಕೆ ಶಾಂತಾರಾಮ ಊರು-ತೋಟಗಳ ಬಗ್ಗೆ ಹೀಗೆ ಹೇಳುತ್ತಾನೆ: “ಇರೋರು ಒಬ್ಬರೋ ಇಬ್ಬರೋ ಮಕ್ಕಳು. ಅವ್ರೂ ಬೆಂಗಳೂರು ಇಲ್ಲಾ ಅಮೆರಿಕಾ. ಎಲ್ರೂ ಹೇಳೋದೂ ಒಂದೇ ಮಾತು, ತೋಟವ ‘ಕೈಲಾದಷ್ಟು ದಿನ ಮಾಡುವುದು ಆಮೇಲೆ ಕೊಟ್ಟು ಹೋಗೋದು!’ ಎಲ್ಲಿಗೆ ಹೋಗ್ತಾರೆ ಇವ್ರು?” ಆಧುನಿಕತೆಯ ಕಾವು ಮಲೆನಾಡ ಊರುಗಳಿಗೆ ತಾಕಿರುವ ಪರಿ ಇದು. ಶರಾವತಿಗೆ ಇನ್ನೂ ದೊಡ್ಡ ಡ್ಯಾಮ್ ಕಟ್ಟಿ ಮುಳುಗಡೆಯ ಭಯ ಹುಟ್ಟಿಸುವ ಆಧುನಿಕತೆಯ ದುರಂತವನ್ನೂ ಇಲ್ಲಿ ಪ್ರಸ್ತಾಪಿಸಲಾಗಿದೆ. ಶಾಂತಾರಾಮನ ಮಗ ಸಚ್ಚಿ ಅಮೆರಿಕೆಯಿಂದ ಫೋನ್ ಮಾಡಿ “ಅಪ್ಪಾ, (ನಿನ್ನ) ಮೊಮ್ಮಕ್ಕಳು ಇಂಡಿಯಾಕ್ಕೆ ಬಂದಾಗ ನವಿಲೆಸರದಲ್ಲಿ ಒಂದಿಷ್ಟು ದಿನವಾದರೂ ಆರಾಮಾಗಿ ಉಳ್ಕೊಂಡು, ಆಡ್ಕೊಂಡು ಕಳೀಬೇಕು ಅಂತ – ಅದರ ಬಗ್ಗೆ ಏನೇನೋ ಯೋಜನೆ ವರ್ಕ್ಔಟ್ ಮಾಡ್ತಾ ಇದೀನಿ…” ಎನ್ನುತ್ತಾನೆ. ಮುಂಬರುವ ಪೀಳಿಗೆಯು ಮರಳಿ ಮಣ್ಣಿಗೆ ಹಿಂದಿರುಗುವ, ಚಿಗುರಿದ ಕನಸಾಗುವ ಮುನ್ಸೂಚನೆ ಇಲ್ಲಿದೆ.

ತಾಳಗುಪ್ಪದಲ್ಲಿ ನಡೆಯುತ್ತಿದ್ದ ಮದ್ಯವ್ಯಸನ ಶಿಬಿರದಲ್ಲಿಯೇ ಶೋಭಾ-ದೇವಿಪ್ರಸಾದರ ಮದುವೆಯು ಧರ್ಮಸ್ಥಳದ ಹೆಗ್ಗಡೆಯವರ ಆಶೀರ್ವಾದದಿಂದ ನೆರವೇರುತ್ತದೆ.

ಕಾದಂಬರಿಯ ಕೊನೆಯ ಪುಟಗಳಲ್ಲಿ ಮಾರಿಜಾತ್ರೆ ವರ್ಣನೆಯಿಂದ ಕಾದಂಬರಿ, ಆಶಾವಾದದಲ್ಲಿ ಶುಭಂ ಹೇಳುತ್ತದೆ. ರಾಧಿಕಾಳು, ಜಾತ್ರೆಯಲ್ಲಿ ಸಿಕ್ಕ ಎಷ್ಟೋ ಜನರೆದುರಿಗೆ, ದತ್ತಮೂರ್ತಿಯ ಕೈಯಲ್ಲಿ ತನ್ನ ಕೈಯಿಟ್ಟುಕೊಂಡು, “ಇವನು ನನ್ನ ಬಾಯ್ ಫ್ರೆಂಡು” ಎಂದು ಚಟಾಕಿ ಹಾರಿಸುವುದನ್ನು ಕಾಣುತ್ತೇವೆ.

ಪುಂಡಲೀಕ ತನ್ನ ‘ಪುಂಡಲೀಕ ಪಿಕಲ್ಸ್’ ಯೋಜನೆಯ ಕನಸನ್ನು ತನ್ನ ಸರಿಕರೊಂದಿಗೆ ಹಂಚಿಕೊಳ್ಳುತ್ತಿರುವುದೂ ಕಾಣುತ್ತದೆ.

ಕಾದಂಬರಿಕಾರರು ಸ್ವರೂಪಾತ್ಮಕವಾಗಿ ಕಾದಂಬರಿಯನ್ನು ನಮ್ಮ ಮುಂದೆ ಇಟ್ಟಿರುವ ಬಗೆ ಹೇಗಿದೆಯೆಂದರೆ, ಇಲ್ಲಿ ಕಥೆಯ ಆರಂಭ, ಬೆಳವಣಿಗೆ, ಅಂತ್ಯ, ಎನ್ನುವ ಸರಳರೇಖಾತ್ಮಕ ನಿರೂಪಣೆಯನ್ನು ಇದು ಅವಲಂಬಿಸಿಲ್ಲ. ಉಪಕಥೆಗಳೊಂದಿಗೆ  ಬೆಳೆವ ಗುಚ್ಛದಂತಹ ಮುಖ್ಯ ಕಥೆಯು ನವಿಲೆಸರವೆನ್ನುವ (ಸೀತಾಳೆ ಹೂ) ಕಾಡಹೂವಿನಂತಹ ಸುಂದರ ಕೋಮಲ ಮೂರ್ತತೆಯನ್ನು ಪಡೆಯುತ್ತದೆ. ಇಲ್ಲಿ ಕಾದಂಬರಿಕಾರ ಚರಿತ್ರಕಾರನಾಗುವುದಿಲ್ಲ. ಮಾರ್ಕ್ವೆಜ್ ನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’’ ನಂತೆಯೇ ನಮ್ಮ ಮಲೆನಾಡಿನ ರೂಪಕವಾಗಿ ನಿಲ್ಲುತ್ತದೆ ಈ ಕಾದಂಬರಿ.

ಮೂರು ತಲೆಮಾರುಗಳ ಬದುಕು, ಬವಣೆ, ಸಂಪ್ರದಾಯ, ನಂಬಿಕೆ, ಪರಂಪರೆ, ಇವೆಲ್ಲವೂ ಆಧುನಿಕತೆಯೊಂದಿಗೆ ತಾಕಲಾಟವಾಗುವುದನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಈಗಾಗಲೇ ಅನೇಕ ಮಾದರಿಯ ಕಥಾ ನಿರೂಪಣೆಗಳು, ನಮ್ಮ ಮುಂದಿವೆ – ತೀರ್ಥಹಳ್ಳಿ ಸಾಗರದ ಮಲೆನಾಡಿನ ಚಿತ್ರಣಗಳು ಬಹಳಷ್ಟು ಕಾದಂಬರಿಗಳಲ್ಲಿವೆ. ಕುವೆಂಪುರವರು, ತಮ್ಮ ಕಾದಂಬರಿಗಳಲ್ಲಿ ನೀಡಿರುವ ವರ್ಣನೆಗಳು; ತೀರ್ಥಹಳ್ಳಿಯ ಫಾಸಲೆಯ ಮಲೆನಾಡಿನ ರುದ್ರ ರಮ್ಯ, ಮನೋಹರವಾದ ಪ್ರಕೃತಿಯ ಮಡಿಲಲ್ಲಿ ಮೂಡಿದ ಪಾತ್ರಗಳು, ಕಥನಗಳು ಇಂದಿಗೂ ಎಂದೆಂದಿಗೂ ನಮ್ಮೊಂದಿಗಿವೆ.

‘ಮುಂದೆ ಬರುವುದು ಮಹಾನವಮಿ’ ಹೇಗೆ ಭಿನ್ನವಾಗಿ ಚಿತ್ರಿತಗೊಂಡಿದೆ ಎಂದು ಓದಿದರೆ, ಕನ್ನಡ ಕಾದಂಬರಿ ಲೋಕಕ್ಕೆ ಇದು ಇನ್ನೊಂದು ಅಮೂಲ್ಯ ಕೃತಿ ಎನ್ನಬಹುದು. ಕಾದಂಬರಿ ರಚನೆಯ ತಥಾಕಥಿತ ಶಿಲ್ಪ ಸಂವಿಧಾನ ಎನ್ನುವ ಗೊಡವೆಗೆ ಹೋಗದೆ ಒಂದು ವಿಶಾಲ ಕ್ಯಾನ್ವಾಸ್ ನ ಮೇಲೆ ಹಸೆ-ಚಿತ್ತಾರ ಬರೆದಂತೆ ಇಡೀ ಸಾಗರ-ಆನಂದಪುರ-ರಿಪ್ಪನ್ ಪೇಟೆ ಕಡೆಯ ಜನಜೀವನವನ್ನು ಬಿಡಿಸಿಟ್ಟಿರುವುದು ಇದೆಯಲ್ಲ ಅದು ಒಂದು ರೀತಿಯ ಯಾವುದೇ ಸ್ಥಾಪಿತ ನಿರೂಪಣಾ ಶೈಲಿಗೋಸ್ಕರ ದುಡಿಯದ ಕಥನಶೈಲಿ ಎನಿಸುತ್ತದೆ.

ಈ ಮಲೆನಾಡು ಕೊಂಪೆಯ ಹೊರಗೆ ಒಂದು ಮಾಡ್ರನೈಜ್ಡ್ – ಗ್ಲೋಬಲೈಜ್ಡ್ ಆದ ರುದ್ರ ರೋಚಕ ಪ್ರಾಪಂಚಿಕ ಬದುಕಿನ ನಾಗಾಲೋಟಕ್ಕೆ ಪ್ಯಾರಲಲ್ ಆಗಿ ಈ ನವಿಲೆಸರದಂತಹ  ಹಳ್ಳಿಗಳ ಪಾತ್ರಗಳ ಸಾವಯವ ಜೀವನ ಕಾಣಬರುತ್ತದೆ. ಇಲ್ಲಿ ತಮ್ಮದೇ ರೀತಿ-ನೀತಿ, ಕಟ್ಟುಪಾಡುಗಳು, ಮನೋಲೋಕಗಳು, ದೇವರು, ಮೂಕಾಂಬಿಕೆ, ರೇಣುಕೆ, ದುರ್ಗೆ, ಊರದೇವರು ಎಲ್ಲವೂ ಮಿಳಿತಗೊಂಡಂತೆ ಚಿತ್ರಿತವಾಗಿವೆ.

ಈ ಮಲೆನಾಡಿನ ಹಳ್ಳಿಯ ಲೋಕಕ್ಕೆ, ಪೇಟೆಯ ಜೀವನ ಚಿತ್ರಣಗಳು ಸಾದೃಶ್ಯ-ವೈದೃಶ್ಯದಂತೆ ಕಂಡರೂ ಎಲ್ಲೂ ಬಲವಾದ  ಪ್ರತಿರೋಧಗಳನ್ನು ಈ ದೇಸಿ ಮತ್ತು ಮಾರ್ಗಗಳು ಪರಸ್ಪರ ಸ್ಪರ್ಧೆಗಿಳಿದಂತೆ ಸಂಘರ್ಷಕ್ಕಿಳಿಸಿಲ್ಲ. ಈ ನವಿಲೆಸರದಲ್ಲಿರುವ ಪಾತ್ರಗಳು ತಮ್ಮ ಪಾಡಿಗೆ ತಾವು ಬದುಕುತ್ತಲೇ ಪ್ರಾದೇಶಿಕವಾದಂತಹ ಜೀವನ ಮೌಲ್ಯಗಳನ್ನು ತಂತಾನೇ ಜೀವಿಸಿ ತೋರಿಸುತ್ತವೆ.   

ಥಾಮಸ್ ಹಾರ್ಡಿ ಯ ವೆಸ್ಸೆಕ್ಸ್ ನಾವೆಲ್ ಆದ ‘ಅಂಡರ್ ದ ಗ್ರೀನ್ ವುಡ್ ಟ್ರೀ’ ಯಂತಹ ನ್ಯಾಚುರಲಿಸಂ ಅನ್ನು ಇಲ್ಲಿ ಕಾಣಬಹುದು. ಆದರೆ ಯುರೋಪಿಯನ್-ಅಮೇರಿಕನ್ ನ್ಯಾಚುರಲಿಸ್ಟ್ ಕಾದಂಬರಿಗಳಂತೆ ಅಲಕ ರವರ ಕಾದಂಬರಿಯು ದುರಂತಮಯ ಅಂತ್ಯವನ್ನೇನೂ ಕಾಣುವುದಿಲ್ಲ. ಆಶಾವಾದವೆನ್ನುವುದು ನಮ್ಮ ಮಣ್ಣಿನ ಗುಣ ಹೌದಲ್ಲವೇ? ಪ್ರಕೃತಿದತ್ತವಾಗಿ ತಂತಾನೆ ಗುಚ್ಛಗೊಳ್ಳುವ ನ್ಯಾಚುರಲಿಸಂ ಇಲ್ಲಿದೆ. ಇಲ್ಲಿನ ಬಹುಪಾಲು ಎಲ್ಲಾ ಪಾತ್ರಗಳು ಸಂಪೂರ್ಣವಾಗಿ ಪ್ರಕೃತಿಯ ವ್ಯವಸ್ಥೆಗೆ ಸೇರಿದವರಾಗಿ ಕಂಡುಬರುತ್ತಾರೆ.

ಇವರ ಸ್ವಭಾವ ಮತ್ತು ಅದೃಷ್ಟಗಳು (ಹಣೆಬರಹಗಳು) ಅನುವಂಶಿಕತೆ ಮತ್ತು ಪರಿಸರ ಎಂಬ ಎರಡು ಪ್ರಾಕೃತಿಕ ಶಕ್ತಿಗಳಿಂದ ನಿರ್ಧರಿತವಾಗಿದೆ. ಇದಕ್ಕೆ ಪುರಾವೆ ಕಾಣುವುದು ಎಲ್ಲಿ ಎಂದರೆ: ಮಹಾಬಲಯ್ಯನವರ ಮೊಮ್ಮಗ ದೇವಿಪ್ರಸಾದನ ಸ್ವಭಾವದಲ್ಲಿ; ಪುಂಡಲೀಕನ ಹುಂಬತನದಲ್ಲಿ; ರಾಧಿಕಾಳ ಸ್ವಭಾವದಲ್ಲಿ; ಮಂಜುನಾಥನ ಪುಡಾರಿತನದಲ್ಲಿ; ಮಾಧವ ಮಾಸ್ಟರ್ ಗಿದ್ದ ಫಿಲೋಮಿನಾ ರೊಂದಿಗಿನ ಅಫೇರ್ ನಲ್ಲಿ; ವೆಂಕಟಾಚಲ ಭಟ್ಟರ ವಿಭ್ರಾಂತಿಯಲ್ಲಿ.

ಈ ಕಾದಂಬರಿಯ ನಿರೂಪಕ ಎಲ್ಲಾ ಪಾತ್ರಗಳ ಮನಸೊಳಗೆ ಇಣುಕುಹಾಕಿ ನೋಡುವ ಸರ್ವಾಂತರ್ಯಾಮಿ ನಿರೂಪಕ. ಎಲ್ಲಾ ಪಾತ್ರಗಳ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಚಿತ್ರಿಸುತ್ತ ಹೋಗುತ್ತಾರೆ. ಎಷ್ಟೊಂದು ಪಾತ್ರಗಳು ಇವೆ ಇಲ್ಲಿ. ಇಲ್ಲಿ ನಿರೂಪಣೆಯ ಭಾಷೆಯ ಬಳಕೆಯು ತೊರೆಯ ನೀರಂತೆ ಸಲಿಲ ಧಾರೆಯಂತೆ ಮುನ್ನುಗ್ಗುತ್ತದೆ. ಇಲ್ಲಿ ಕಾದಂಬರಿಯ ಕಥಾನಾಯಕ, ಕಥಾನಾಯಕಿ ಎಂದು ಯಾರನ್ನೂ ಹುಡುಕಿಕೊಂಡು ಓದುತ್ತಾ ಹೋಗಬೇಕಿಲ್ಲ. ದತ್ತಮೂರ್ತಿ-ರಾಧಿಕಾ ಕಥಾನಾಯಕ-ನಾಯಕಿ ಎಂದೆನಿಸಿದರೂ , ಶೋಭಾ-ದೇವಿಪ್ರಸಾದ್ ಇಬ್ಬರೂ ಮುನ್ನೆಲೆಗೆ ಬಂದಂತೆನ್ನಿಸುತ್ತಾರೆ. ಆದರೆ ಕಾದಂಬರಿಯ ಎಲ್ಲಾ ಪಾತ್ರಗಳು ಮುಖ್ಯ ಎನ್ನಿಸುವಷ್ಟು  ಜೀವನವನ್ನು, ಪಾತ್ರವನ್ನು ನಿಭಾಯಿಸಿಕೊಂಡು ಹೋಗುತ್ತವೆ.

ಇದರಲ್ಲಿನ ಕಥಾವಿಸ್ತಾರತೆಯೇ ಈ ಕಾದಂಬರಿಯ ಶಕ್ತಿ. ಸಾಹಿತ್ಯಪಂಥಗಳ ಅಡಿಯಲ್ಲಿ ಇಸಂಗಳ ಒರೆಗಲ್ಲಿಗೆ ಹಚ್ಚಿ ನೋಡಲು ಹೋಗುವುದು ಆದರೆ, ಓದುಗನು ಈ ಕೃತಿಗೆ ಮಾಡುವ ವಿಮರ್ಶಾತ್ಮಕ ಸರ್ಕಸ್ ಆದೀತು, ಪ್ರಹಸನ ಆದೀತು. ಇಲ್ಲಿರುವ ಪಾತ್ರಗಳೆಲ್ಲವೂ ಕಾದಂಬರಿಕಾರರು ತಮ್ಮ ನಿಜ ಜೀವನದಲ್ಲಿ  ಕೇಳಿದ ನಿಜಮನುಷ್ಯರ ಸಾಹಿತ್ಯಕ ಪ್ರತಿರೂಪಗಳು. ಹಾಗಾಗಿ, ಓದುಗ ಅಥವಾ ವಿಮರ್ಶಕ ತನ್ನ ವಿಮರ್ಶಾ ಒರೆಗಲ್ಲಿನಲ್ಲಿ ಮೇಲೆ ಇದನ್ನಿಟ್ಟು ನೋಡುವುದೇ ಒಂದು ಕ್ರೌರ್ಯ. ಇಲ್ಲಿನ ಕಥಾಗುಚ್ಛಗಳ ಕಲಾತ್ಮಕ ಹೆಣೆತಗಳನ್ನು ಹೇಗಿರುವವೋ ಹಾಗೆಯೇ ಗ್ರಹಿಸಿಕೊಳ್ಳಲು ಸಾಧ್ಯವಿದ್ದರೆ ಮಾತ್ರ ಅವನು ಸಹೃದಯ ಓದುಗ ಎನ್ನಬಹುದು. ಇಲ್ಲವೆಂದಾದರೆ ಅವನು ಒಂದು ಸ್ಥಳಪುರಾಣದಂತಹ ಬದುಕಿನ ಚಿತ್ರಣವನ್ನು ನೋಡಲಾಗದಷ್ಟು ಕಣ್ಣು ಹಳದಿ ಮಾಡಿಕೊಂಡವನಾಗಿರುತ್ತಾನೆ ಎಂದರ್ಥ.

ಇಂದು ವಿಮರ್ಶೆ ಎನ್ನುವುದು ಕೇವಲ ಸಾಹಿತ್ಯಕ ಕಸರತ್ತು ಅಲ್ಲ. ಇಂದಿನ ಸಾಂಸ್ಕೃತಿಕ ಅಧ್ಯಯನ, ಅಂದರೆ ಕಲ್ಚರಲ್ ಸ್ಟಡೀಸ್, ಸಬಾಲ್ಟ್ರನ್ ಸ್ಟಡೀಸ್ಗಳಂತಹ ಅಧ್ಯಯನ ಮಾದರಿಗಳ ವೈವಿಧ್ಯತೆಗಳ ನಡುವೆ ಕಾದಂಬರಿ ಒಂದು ಭಿನ್ನವಾದ ಅದರದೇ ಆದ ಘಮವನ್ನು ಹೊಂದಿರುವಂತೆ ಕಾಣುತ್ತದೆ. ಕಾದಂಬರಿಯೊಳಗೆ ಬರುವ ಹೇಳಿಕೆಯಂತೆ: ಬರೀ ಕುರಿ-ಕೋಳಿ ರಕ್ತವೇ ಬೇಕು ಅಂದರೆ ಹೇಗೆ ಮೊಸರನ್ನವನ್ನು ಸವಿಯದವನು ಕೂಡ ಜೀವನ್-ವಿಮುಖಿ!

ಮೂಕಾಂಬಿಕಾ ದೇವಿ ದೇವಸ್ಥಾನವು ಇಲ್ಲಿನ ಮುಖ್ಯ ಕಥೆಗೆ ಒಂದು ಧಾರ್ಮಿಕ ನೆಲೆಗಟ್ಟನ್ನು ರೂಪಿಸಿದಂತೆನ್ನಿಸಿದರೂ ಸಹ, ಇಲ್ಲಿನ ಪಾತ್ರಗಳ ಆತ್ಮಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಪಂಚಗಳು ಅವರವರ ವೈಯಕ್ತಿಕ ಗುಣ ಮತ್ತು ಪ್ರವೃತ್ತಿಗಳನ್ನು ಮೀರಿ ನಿಲ್ಲಲಾರದಷ್ಟು ಸ್ವಕೇಂದ್ರಿತವಾಗಿ ಬೆಳೆದು ನಿಲ್ಲುತ್ತವೆ. ಹೀಗಾಗಿ ಇವರ ವಯಕ್ತಿಕ ಗುಣ ಮತ್ತು ಪ್ರವೃತ್ತಿಗಳು (ವಿಶೇಷತಃ ಹಸಿವು ಮತ್ತು ಕಾಮ) ಇವರ ವಾಸ್ತವ ವ್ಯಕ್ತಿಚಿತ್ರಣದಂತೆ ಮೂಡಿಬರುತ್ತವೆ. ಇದಕ್ಕೆ ಉದಾಹರಣೆಗಳೆಂದರೆ: ಮಡಿವಾಳರ ಮರಿಯಪ್ಪ-ರಾಮಿ; ನಂತರ ರಾಮಿ-ಹಾಲಪ್ಪರ ಕೂಡಿಕೆ; ವೆಂಕಟಾಚಲ ಭಟ್ಟರ ವಿಫಲ ದಾಂಪತ್ಯ; ಮಾಧವ ಮಾಸ್ಟರ್-ಫಿಲೋಮಿನಾರ ಆಫೇರ್; ಪುಂಡಲೀಕ-ತೆರೇಸಾರ ಇನ್ ಫ್ಯಾಚುಯೇಷನ್, ಇತ್ಯಾದಿ.

ಇಲ್ಲಿ ಮೂಡಿಬಂದಿರುವ ಕುಟುಂಬ ವ್ಯವಸ್ಥೆಯಲ್ಲಿ, ವರ್ಗ-ಅಂತಸ್ತಿನಲ್ಲಿ, ಹಾಗು ಇದರ ಎದುರು ಮಲೆನಾಡಿನ ಪರಿಸರದಲ್ಲಿ ಈ ಪಾತ್ರಗಳು ಆರ್ಥಿಕ ಮತ್ತು ಸಾಮಾಜಿಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತವೆ. ಈ ಪ್ರಭಾವವನ್ನು ಶೇಷಗಿರಿಯ ಆಧುನಿಕ ಕೃಷಿ ಮಾಡುವ ಹಂಬಲದಲ್ಲಿಯೂ ಕಾಣಬಹುದು; ಶಾಂತಾರಾಮನ ತೋಟ ಕಟ್ಟುವ ಭರಾಟೆಯಲ್ಲಿಯೂ ಕಾಣಬಹುದು; ಶೋಭಾಳ ಸಾಮಾಜಿಕ ಚಳುವಳಿಯಲ್ಲಿಯೂ ಕಾಣಬಹುದು. 

ಪುಂಡಲಿಕನದು ‘ಮೃಗೀಯ ಪ್ರಮಾಣಿಕತೆ’. ಇವನು, ಮಂಜುನಾಥನಂತಹ ಪುಡಾರಿ ರಾಜಕಾರಣಿಯ, ಅಂತೆಯೇ ಸಮಾಜದ ಶಕ್ತಿಗಳಿಗೆ ಬಲಿಪಶುವಾಗಿರುತ್ತಾನೆ. ಹಾಗಂತ ಇವ್ಯಾವ ಪಾತ್ರಗಳೂ ಕೊನೆಕೊನೆಗೆ, ದೇವರು, ಪರಿಸರ, ಶತ್ರುಗಳ ವಿರುದ್ಧದ ಸಂಘರ್ಷದಲ್ಲಿ ಸೋಲುವಂತಹ ದುರಂತ ಅಂತ್ಯವನ್ನೇನೂ ಕಾಣುವುದಿಲ್ಲ (ರಾಮಿ, ಹಾಲಪ್ಪ, ಭಟ್ಟರು, ರಮೇಶರನ್ನು ಹೊರತುಪಡಿಸಿ).

ಶೋಭ, ಶೇಷಗಿರಿ, ದತ್ತ, ಪುಂಡಲೀಕ, ಶಾಂತಾರಾಮರಂತಹ ಪಾತ್ರಗಳು ಕಾದಂಬರಿಯುದ್ದಕ್ಕೂ ಬೆಳೆಯುತ್ತಾ ಸಾಗಿ, ಕಾದಂಬರಿಯ ವಾಸ್ತವಿಕತೆಯನ್ನು ರೂಪುಗೊಳಿಸುತ್ತಲೇ, ಕಲ್ಪಕತೆಯನ್ನೂ ಮೀರಿ ಸಮಾಜದ ಬದುಕಿನ ವಾಸ್ತವಿಕತೆಯ ಕುರಿತೂ ಜವಾಬ್ದಾರಿಯುತ, ‘ಕಾವ್ಯಾತ್ಮಕ ನ್ಯಾಯ’ದ (ಪೊಯೆಟಿಕ್ ಜಸ್ಟಿಸ್) ಮಜಲನ್ನು ಕಾದಂಬರಿಯ ಕೊನೆಯಲ್ಲಿ ನಿರ್ಮಿಸಿಬಿಡುತ್ತವೆ.

ನವಿಲೆಸರ ಮತ್ತು ಹಸಿರೂರುಗಳಲ್ಲಿನ ಸಾಮುದಾಯಿಕ ಜನಜೀವನದ ಚಿತ್ರಣ ಈ ರೀತಿಯಲ್ಲಿ ಭಿನ್ನವಾಗಿ ಮೂಡಿಬಂದಿದೆ. ಇದೊಂದು ಸಾವಯವ ಸಂಬಂಧಗಳ ಬಾಳ್ವೆಯಾಗಿ ಕಂಡುಬರುತ್ತದೆ. ಈ ಮಲೆನಾಡಿನ ಬದುಕು ಯಾವುದೋ ಒಂದು ಊರು ಕೇರಿಯಂತಹ ಸಾಲು ಸಾಲು ಮನೆಗಳಂತಹ ಬಯಲುಸೀಮೆಯ ಹಳ್ಳಿಗಳ ಬದುಕಿನಂತಲ್ಲ. ಈ ಕಾದಂಬರಿಯಲ್ಲಿ ಒಂದು ಮನೆಗೂ ಇನ್ನೊಂದು ಮನೆಗೂ ನಡುವೆ ಪಸರಿಸಿದ ಕಾಡು, ಬ್ಯಾಣ, ಗದ್ದೆ, ತೊರೆ, ಅಡಿಕೆ ತೋಟಗಳು, ಭತ್ತದ-ಕಬ್ಬಿನ ಗದ್ದೆಗಳು, ಕೊಟ್ಟಿಗೆ ಮನೆ, ಹೋರಿ ಹಸು-ಕರು ಮುಂತಾದವುಗಳು ಇಲ್ಲಿ ಬರುವ ಪಾತ್ರಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ ಜೀವಸೆಲೆಗಳು. ಇಲ್ಲಿ ಜನರ ಮಾತುಕತೆಗಳು ಕಥೆಗಳಾಗಿವೆ. ಈ ಮೂಲಕ ಒಂದು ರೀತಿಯ ಸ್ಥಳಪುರಾಣವನ್ನು ಕಟ್ಟುವ ಸೃಷ್ಟಿಶೀಲ ಕಾದಂಬರಿಯಾಗಿ ಕಂಗೊಳಿಸುತ್ತದೆ ಈ ಕೃತಿ.

‍ಲೇಖಕರು Avadhi

December 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ನಾ ದಿವಾಕರ‌ ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This