ಮುಂಬೈಗೆ ಲೋಕಲ್ಲು, ದಿಲ್ಲಿಗೆ ಮೆಟ್ರೋ!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ಅನ್ನು ಮೊಟ್ಟಮೊದಲ ಬಾರಿಗೆ ನೋಡಿದಾಗ ನನಗೆ ನೆನಪಾಗಿದ್ದು ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್.

ಅದು ಜನಜಂಗುಳಿಯ ತಾಣ. ಜನಗಳ ನಿತ್ಯ ಜಾತ್ರೆ. ಎಲ್ಲಾ ದಿಕ್ಕುಗಳಲ್ಲಿ ಭಾರೀ ಅವಸರದಿಂದ ತಮ್ಮ ಪಾಡಿಗೆ ತಾವು ಕಟ್ಟಿರುವೆಗಳಂತೆ ಓಡಾಡುತ್ತಿರುವ ಮಂದಿ. ಇರುವ ಹತ್ತಾರು ದ್ವಾರಗಳಿಂದ ಎಷ್ಟು ಬಂದುಹೋದರೂ ಇಳಿಮುಖವಾಗದ ದಟ್ಟ ಜನಸಂದಣಿ. ದಿಲ್ಲಿಯ ಹಲವು ಮೆಟ್ರೋ ಲೈನುಗಳು ಇಲ್ಲಿ ಸಂಧಿಸುವುದರಿಂದ ಇದು ಸಹಜವೂ ಹೌದು. ಬಹುಷಃ ನಿರ್ಜನವಾದ ಈ ಜಾಗವನ್ನು ನೋಡುವುದೇ ಜನಸಾಮಾನ್ಯರಿಗೊಂದು ಅಚ್ಚರಿ.

ಅಂದಹಾಗೆ ನಾನು ನ್ಯೂಯಾರ್ಕಿಗೆ ಹೋಗಿಬಂದವನಲ್ಲ. ಹೀಗಾಗಿ ಟೈಮ್ಸ್ ಸ್ಕ್ವೇರ್ ನಿಜಕ್ಕೂ ಹೀಗಿರುತ್ತದೆ ಎಂದು ಧೈರ್ಯವಾಗಿ ಹೇಳಬಲ್ಲವನೂ ಅಲ್ಲ. ಆದರೆ ನ್ಯೂಯಾರ್ಕಿನ ಖ್ಯಾತ ಸ್ಥಳವಾದ ಟೈಮ್ಸ್ ಸ್ಕ್ವೇರ್ ಅನ್ನು ಸಿನೆಮಾಗಳು ಕ್ಯಾಮೆರಾಫ್ರೇಮಿನಲ್ಲಿ ಬಿಂಬಿಸುವುದು ಹೀಗೆಯೇ. ಕೊಂಚ ನಿಧಾನವಾಗಿಬಿಟ್ಟರೆ ಜಗತ್ತು ತಮ್ಮನ್ನು ಹಿಂದೆ ಹಾಕಿ ತಾನು ಮುಂದೆ ಸಾಗಿಬಿಡುತ್ತದೋ ಎಂಬ ದಿಗಿಲಿನಲ್ಲಿರುವಂತೆ ಓಡಾಡುವ ಮಂದಿಯೇ ಎಲ್ಲೆಲ್ಲೂ. ದೇಶ ಯಾವುದೇ ಆಗಿರಲಿ. ಮಹಾನಗರಗಳಿಗಿದು ನಿತ್ಯದ ದೃಶ್ಯ.

ಮೆಟ್ರೋ ವ್ಯವಸ್ಥೆಯು ದಿಲ್ಲಿಯ ನರನಾಡಿಯಿದ್ದಂತೆ ಎಂದು ನಾವೆಲ್ಲಾ ಮಾತಾಡುವುದುಂಟು. ಚಿಕ್ಕದೊಂದು ನರವು ಕೊಂಚ ತಡವರಿಸಿದರೂ ಶಹರದ ಇಡೀ ನರವ್ಯವಸ್ಥೆಯ ಜಾಲಕ್ಕೆ ತಕ್ಕಮಟ್ಟಿನ ಅಡಚಣೆಯಂತೂ ಆಗಿಯೇ ಆಗುತ್ತದೆ. ‘ಯೇ ಕ್ಯಾ ಹೋಗಯಾ ಭಾಯಿ’ ಎಂದು ದಿಲ್ಲಿಯ ಜನಜೀವನ ಗೊಣಗಾಡುತ್ತದೆ. ಎತ್ತ ಸಾಗೋಣ ಎಂದು ಮಹಾನಗರಿಯ ಲಕ್ಷಾಂತರ ಮಹಾಜನತೆಯು ದಿಲ್ಲಿ ಮೆಟ್ರೋದ ದೈತ್ಯ ನಕಾಶೆಯ ಎದುರು ಜಾತ್ರೆಯಲ್ಲಿ ಕಳೆದುಹೋಗಿರುವ ಪುಟ್ಟ ಮಗುವಿನಂತೆ ನಿಲ್ಲುತ್ತದೆ. ಇದು ಸತ್ಯವೆಂಬುದು ದಿಲ್ಲಿ ಮೆಟ್ರೋ ವ್ಯವಸ್ಥೆಗೂ ತಿಳಿದಿದೆ. ಹೀಗಾಗಿ ಇಂಥದ್ದೆಲ್ಲಾ ಆಗುವುದೂ ಅಪರೂಪ.

ದಿಲ್ಲಿಯ ವ್ಯವಸ್ಥಿತ ಮೆಟ್ರೋಜಾಲವನ್ನು ಇಂದು ನೋಡುವಾಗ ಇಲಟ್ಟುವಲಪಿಲ್ ಶ್ರೀಧರನ್ ಅವರಿಗೆ ಹೇಗನಿಸುತ್ತಿರಬಹುದು ಎಂದು ನಾನು ಯೋಚಿಸುತ್ತಿರುತ್ತೇನೆ. ಭಾರತೀಯ ಚುನಾವಣಾ ಆಯೋಗದ ಶೇಷನ್ ಎಷ್ಟು ಖ್ಯಾತರೋ, ನಮ್ಮ ಮೆಟ್ರೋ ಲೋಕದಲ್ಲಿ ಶ್ರೀಧರನ್ ಅಷ್ಟೇ ಸುಪ್ರಸಿದ್ಧರು. ಅಸಾಮಾನ್ಯ ದೂರದೃಷ್ಟಿಯಿದ್ದ ಇವರು ಮೆಟ್ರೋ ಎಂಬ ದೈತ್ಯ ಕನಸನ್ನು ದಿಲ್ಲಿಯಲ್ಲಿ ನನಸಾಗಿಸಿದ ಸಾಧಕರು. ಸಹಜವಾಗಿಯೇ ‘ಮೆಟ್ರೋ ಮ್ಯಾನ್’ ಎಂಬ ಹೆಸರಿನಲ್ಲಿ ಖ್ಯಾತರಾದ ಶ್ರೀಧರನ್ ಭಾರತದ ಮೆಟ್ರೋ ವ್ಯವಸ್ಥೆಯ ವಿಚಾರಕ್ಕೆ ಬಂದರೆ ನಿಜವಾದ ‘ಸೂಪರ್ ಮ್ಯಾನ್’ ಕೂಡ ಹೌದು.

ಅಮೆರಿಕಾದಲ್ಲಿ ಎಫ್.ಬಿ.ಐ ಎಂಬ ಪುಟ್ಟ ಇಲಾಖೆಯೊಂದನ್ನು ವಿಶ್ವದ ದೊಡ್ಡ ಮತ್ತು ಯಶಸ್ವಿ ಭದ್ರತಾ ಸಂಸ್ಥೆಯೆನಿಸುವ ಮಟ್ಟಿಗೆ ಜೆ. ಎಡ್ಗರ್ ಹೂವರ್ ಹೇಗೆ ಬೆಳೆಸಿದರೋ, ಶ್ರೀಧರನ್ ದಿಲ್ಲಿಯೂ ಸೇರಿದಂತೆ ಭಾರತದ ಹಲವು ಮಹಾನಗರಿಗಳಲ್ಲಿ ಮೆಟ್ರೋಜಾಲವನ್ನು ಯಶಸ್ವಿಯಾಗಿ ಹಬ್ಬಿಸಿದರು. ಈ ದೇಶದಲ್ಲಿ ಸರ್ಕಾರಿ ಯೋಜನೆಗಳು ಎಂದಿಗೂ ಮುಗಿಯುವುದೇ ಇಲ್ಲ ಎಂಬಂತಹ ಪರಿಸ್ಥಿತಿಯಿರುವಾಗ ನಿಗದಿತ ಹಣಕಾಸಿನ ಬಜೆಟ್ಟಿನಲ್ಲೇ, ಪೂರ್ವನಿರ್ಧಾರಿತ ಅವಧಿಗೂ ಮುಂಚಿತವಾಗಿ ಮೆಟ್ರೋ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಟೈಮ್ಸ್ ನಂತಹ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಸುದ್ದಿಯಾದರು. 

ಮೂರು ದಶಕಗಳ ಹಿಂದೆ ಶ್ರೀಧರನ್ ಬಿತ್ತಿದ ಬೀಜ ಇಂದು ದಿಲ್ಲಿಯಲ್ಲಿ ಹೆಮ್ಮರವಾಗಿ ನಿಂತಿದೆ. ಮೆಟ್ರೋ ದಿಲ್ಲಿಯ ಜನಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಎಲ್ಲಾ ರೀತಿಯಲ್ಲೂ ದಿಲ್ಲಿ ಮೆಟ್ರೋ ಜಾಗತಿಕ ಮಟ್ಟಿನ ಅತ್ಯುತ್ತಮ ಮೆಟ್ರೋ ವ್ಯವಸ್ಥೆಗಳಲ್ಲಿ ಮುಂಚೂಣಿಯ ಸ್ಥಾನದಲ್ಲಿ ಹೆಮ್ಮೆಯಿಂದ ನಿಂತಿರುವಂತಹ ವ್ಯವಸ್ಥೆ. ಮೂರು ರಾಜ್ಯಗಳನ್ನು ಒಂದು ಮಟ್ಟಿಗೆ ಆವರಿಸಿಕೊಂಡಿರುವ ವ್ಯವಸ್ಥಿತ ಮೆಟ್ರೋಜಾಲವು ಇಂದು ಅಂದಾಜು ನಾಲ್ಕು ನೂರು ಕಿಲೋಮೀಟರುಗಳಷ್ಟಿನ ದೂರವನ್ನು ಆವರಿಸಿಕೊಳ್ಳುತ್ತದೆ. ಇನ್ನೂರೈವತ್ತಕ್ಕೂ ಹೆಚ್ಚು ಮೆಟ್ರೋ ಸ್ಟೇಷನ್ನುಗಳಿರುವ ದಿಲ್ಲಿ ಮೆಟ್ರೋ ಜಾಲವು ವರ್ಷಕ್ಕೆ ಬರೋಬ್ಬರಿ ಏಳುನೂರು ಮಿಲಿಯನ್ ಪ್ರಯಾಣಿಕರು ನಿರಾತಂಕವಾಗಿ ಪ್ರಯಾಣಿಸುವಂತಹ ಅವಕಾಶವನ್ನು ಕಲ್ಪಿಸುತ್ತದೆ. ಇದು ಅಮೆರಿಕಾದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು.

ಮುಂಬೈಯ ಲೋಕಲ್ ಟ್ರೈನುಗಳಂತೆ ದಿಲ್ಲಿ ಮೆಟ್ರೋದೊಳಗೂ ಒಂದು ಲೋಕವಿದೆ. ಮೆಟ್ರೋದೊಳಗೆ ಕಾಲಿರಿಸುವ ಒಬ್ಬೊಬ್ಬ ಪ್ರಯಾಣಿಕನದ್ದೂ ಒಂದೊಂದು ಲೋಕ. ಜನರ ಚಿಟಪಟ ಮಾತುಗಳು, ಹತ್ತಲು-ಇಳಿದಾಡಲು ಅವಸರ, ನೂಕುನುಗ್ಗಲು, ಎಲ್ಲೋ ಒಂದು ಕಡೆ ಥಟ್ಟನೆ ಕ್ಷಿಪಣಿಯಂತೆ ಬಂದೆರಗುವ ಬೈಗುಳ, ಒಂದಷ್ಟು ಪಿಸುಮಾತು, ಹಿಡಿಯಷ್ಟು ಮೌನ… ಹೀಗೆ ಎಲ್ಲವನ್ನೂ ಒಳಗೊಂಡಿರುವ ವೈಚಿತ್ರ್ಯದ ಲೋಕವದು.

ಹಿಂದೆಲ್ಲಾ ಪುಸ್ತಕಗಳನ್ನು ಹಿಡಿದುಕೊಂಡು ತಮ್ಮ ಪಾಡಿಗೆ ಓದುತ್ತಿರುವ ಪ್ರಯಾಣಿಕರೂ ಮೆಟ್ರೋದಲ್ಲಿ ಕಾಣಸಿಗುತ್ತಿದ್ದರು. ಆದರೆ ಸ್ಮಾರ್ಟ್‍ಫೋನುಗಳು ಮತ್ತು ಅಂತರ್ಜಾಲವು ಕಳೆದ ಕೆಲವರ್ಷಗಳಿಂದ ತೀರಾ ಅಗ್ಗವಾಗಿ ಬಿಟ್ಟನಂತರ ಈ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದಂತೂ ಸತ್ಯ. ಇಂದು ಮೆಟ್ರೋಬೋಗಿಯಲ್ಲಿ ಪ್ರಯಾಣಿಸುವ ಹತ್ತರಲ್ಲಿ ಎಂಟು ಮಂದಿ ಸ್ಮಾರ್ಟ್‍ಫೋನಿನ ಆರಿಂಚಿನ ಪರದೆಗಳಿಗೆ ಅಂಟಿಕೊಂಡು ತಮ್ಮದೇ ಲೋಕದಲ್ಲಿ ಕಳೆದುಹೋಗಿರುತ್ತಾರೆ. ಮೆಟ್ರೋದ ಬೋಗಿಗಳಲ್ಲಿ ಬೆರಳೆಣಿಕೆಯಷ್ಟಿದ್ದರೂ, ಸಾಮಾನ್ಯವಾಗಿ ವ್ಯಸ್ತವಾಗಿರುವ ಫೋನ್ ಚಾರ್ಜಿಂಗ್ ಸಾಕೆಟ್ಟುಗಳು ಇದಕ್ಕೆ ಸಾಕ್ಷಿ.

ಇನ್ನು ದಿಲ್ಲಿ ಮೆಟ್ರೋದಲ್ಲಿ ಘೋಷಣೆಯ ರೂಪದಲ್ಲಿ ಕೇಳಿಬರುವ ಹಿತವಾದ ದನಿಗಳು ಖ್ಯಾತನಾಮರಾದ ರಿನಿ ಖನ್ನಾ ಮತ್ತು ಶಮ್ಮಿ ನಾರಂಗ್ ರದ್ದು. ಇಬ್ಬರೂ ಎಪ್ಪತ್ತು ಮತ್ತು ಎಂಭತ್ತರ ದಶಕಗಳಲ್ಲಿ ದೂರದರ್ಶನದಲ್ಲಿ ಟಿವಿ ನಿರೂಪಕರಾಗಿಯೂ, ವಾಯ್ಸ್ ಓವರ್ ಕಲಾವಿದರಾಗಿಯೂ ಮಿಂಚಿದವರು. ನಾರಂಗ್ ರವರ ದನಿಯಂತೂ ರ್ಯಾಪಿಡ್ ಮೆಟ್ರೋ, ಬೆಂಗಳೂರು ಮೆಟ್ರೋ, ಮುಂಬೈ ಮೆಟ್ರೋ, ಹೈದರಾಬಾದ್ ಮತ್ತು ಜೈಪುರ್ ಮೆಟ್ರೋಗಳಲ್ಲೂ ಹಿತವಾಗಿ ಮೊಳಗುತ್ತಿದೆ. ದಿಲ್ಲಿ ಮೆಟ್ರೋದ ನಕಾಶೆಯು ಸಂಕೀರ್ಣ ಎನ್ನುವವರಿಗೆ ಈ ದನಿಗಳು ತಮ್ಮದೇ ಆದ ರೀತಿಯಲ್ಲಿ ದಾರಿ ತೋರಿಸುತ್ತಿವೆ.

ದಿಲ್ಲಿ ಮೆಟ್ರೋ ಸಂಸ್ಥೆಯ ಜೊತೆ ತಕ್ಕಮಟ್ಟಿನ ಒಟನಾಟದ ಅವಕಾಶಗಳು ಸಿಕ್ಕಿದ್ದರಿಂದ ಇಲ್ಲಿಯ ಕಾರ್ಯವೈಖರಿಯನ್ನು ವಿವರವಾಗಿ ನೋಡುವ ಅವಕಾಶಗಳೂ ನನಗೆ ಸಿಕ್ಕಿದ್ದುಂಟು. ದಿಲ್ಲಿಯ ಹೃದಯಭಾಗದಲ್ಲಿರುವ ಮುಖ್ಯಕಚೇರಿ `ಮೆಟ್ರೋ ಭವನ್’ ಆಕರ್ಷಕ ಕಟ್ಟಡವನ್ನು ಹೊಂದಿದ್ದು, ವಾಲ್-ಸ್ಟ್ರೀಟ್ ಕಾರ್ಯಾಲಯದಂತೆ ಸದಾ ಕ್ರಿಯಾಶೀಲವಾಗಿ ಗಿಜಿಗುಡುತ್ತಿರುತ್ತದೆ. ದಿನವಿಡೀ ಓಡಾಡಿದ ನಂತರ ಮೆಟ್ರೋರೈಲುಗಳಿಗೆ ಮರಳಲು ಗೂಡಿನಂತಿರುವುದು ‘ಡಿಪೋ’ಗಳೆಂಬ ಜಾಗಗಳು. ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಈ ವಿಶಾಲ ಡಿಪೋಗಳು ಸುವ್ಯವಸ್ಥಿತವಾಗಿದ್ದು ಸಿ.ಐ.ಎಸ್.ಎಫ್ ಯೋಧರ ಬಿಗಿಭದ್ರತೆಯ ಕಣ್ಗಾವಲಿನಲ್ಲಿವೆ.      

ವಿಶೇಷವೆಂದರೆ ಶ್ರೀಧರನ್ ಹುಟ್ಟುಹಾಕಿದ ‘ಮಿತವ್ಯಯ ಮತ್ತು ವೇಗದ ಕಾರ್ಯವೈಖರಿ’ಯ ಸಂಸ್ಕೃತಿಯು ದಿಲ್ಲಿ ಮೆಟ್ರೋ ಕಾರ್ಯಾಲಯಗಳಲ್ಲಿ ಇಂದಿಗೂ ಜೀವಂತವಾಗಿದೆ. ಕಳೆದ ಐದು ವರ್ಷಗಳಲ್ಲಿ ದಿಲ್ಲಿ ಮೆಟ್ರೋ ಸಂಸ್ಥೆಯ ಸಾಕಷ್ಟು ಹೊಸ ಲೈನುಗಳು ವೇಗವಾಗಿ ತಯಾರಾಗಿ ಜನರ ನಿತ್ಯಬಳಕೆಗೆ ಸಿದ್ಧವಾಗಿದ್ದಲ್ಲದೆ, ತನ್ನ ಸೌಂದರ್ಯ ಮತ್ತು ಸೇವೆಯ ಗುಣಮಟ್ಟದಲ್ಲಿ ಯಾವ ಮುಂದುವರಿದ ದೇಶಕ್ಕೂ ಕಮ್ಮಿಯಿಲ್ಲವೆಂಬಂತೆ ಬೀಗುತ್ತಿವೆ. ಇಂದು ದಿಲ್ಲಿಯ ಕೆಲ ಮೆಟ್ರೋ ಸ್ಟೇಷನ್ನುಗಳಲ್ಲಿ ಕಾಣಸಿಗುವ ಒಳಾಂಗಣದ ಗೋಡೆಗಳನ್ನು ಸುಂದರವಾಗಿ ಅಲಂಕರಿಸಿರುವ ಕಲಾಕೃತಿಗಳು, ಪುಟ್ಟ ಮ್ಯೂಸಿಯಮ್ಮುಗಳು, ಹೊರಗೋಡೆಗಳಲ್ಲಿ ಕಂಗೊಳಿಸುತ್ತಿರುವ ಆಕರ್ಷಕ ಗ್ರಾಫಿಟಿ ಚಿತ್ರಗಳು ಹೊಸತನದತ್ತ ಸದಾ ತುಡಿಯುತ್ತಿರುವ ದಿಲ್ಲಿ ಮೆಟ್ರೋದ ಕ್ರಿಯಾಶೀಲತೆಗೆ ನಿದರ್ಶನದಂತಿವೆ.

ದಿಲ್ಲಿ ಮೆಟ್ರೋ ಶಹರದ ಸಾರಿಗೆ ವ್ಯವಸ್ಥೆಗಷ್ಟೇ ಅಲ್ಲದೆ ಒಟ್ಟಾರೆ ಆರ್ಥಿಕ ಸ್ವರೂಪಕ್ಕೂ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಮೆಟ್ರೋ ಸ್ಟೇಷನ್ನುಗಳ ಬುಡದಲ್ಲೇ ಬೀಡುಬಿಟ್ಟಿರುವ ಆಟೋಗಳು, ಸೈಕಲ್ ರಿಕ್ಷಾಗಳು, ಇ-ರಿಕ್ಷಾಗಳು, ಟ್ಯಾಕ್ಸಿಗಳು, ಪುಟ್ಟ ಅಂಗಡಿಗಳು ಮತ್ತು ಬೀದಿಬದಿಯ ವ್ಯಾಪಾರಿಗಳಿಗೆ ಮೆಟ್ರೋ ಬೆನ್ನೆಲುಬಿದ್ದಂತೆ. ಈಚೆಗಂತೂ ಹಲವು ಖ್ಯಾತ ಬ್ರಾಂಡ್ ಗಳನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡು ಸ್ವತಃ ಮೆಟ್ರೋ ಸ್ಟೇಷನ್ನುಗಳೇ ನಿಧಾನವಾಗಿ ಶಾಪಿಂಗ್ ಮಾಲ್ ಗಳ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಇನ್ನು ದಿಲ್ಲಿಯ ಪ್ರೇಕ್ಷಣೀಯ ಸ್ಥಳಗಳಿಗೆ ಸಾಗಬಯಸುವ ಪ್ರಯಾಣಿಕರಿಗೂ, ಪ್ರವಾಸಿಗರಿಗೂ ಆಯಾ ಸ್ಥಳದ ಬಳಿಯಿರುವ ಮೆಟ್ರೋ ಸ್ಟೇಷನ್ನುಗಳೇ ರೆಫರೆನ್ಸ್ ಪಾಯಿಂಟ್ ಗಳು. 

ಸಮಯ ಪರಿಪಾಲನೆಯಲ್ಲೂ ದಿಲ್ಲಿ ಮೆಟ್ರೋದ ರೈಲುಗಳದ್ದು ಎತ್ತಿದ ಕೈ. ಮಹಾನಗರಿಯ ಟ್ರಾಫಿಕ್ ಜಂಜಾಟಗಳಲ್ಲಿ ಸಿಲುಕದೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಬೇಕಾದವರಿಗೆ ಮೆಟ್ರೋ ನಿಜಕ್ಕೂ ವರದಾನ. ಸಾಗುತ್ತಿರುವ ಮೆಟ್ರೋ ಕಿಂಡಿಯಲ್ಲಿ ಕಾಣಸಿಗುವ ಕುತುಬ್ ಮಿನಾರ್ ತುದಿ, ಝಂಡೇವಾಲಾ ಹನುಮನ ವಿಶಾಲ ಎದೆ, ಅರಗಿನ ಅರಮನೆಯಂತಿರುವ ಅಕ್ಷರಧಾಮ… ಇತ್ಯಾದಿಗಳು ನೋಡಲು ಸೊಗಸು. ಇನ್ನು ಸಾಕಷ್ಟು ಅಗ್ಗವಾಗಿರುವ ಪ್ರಯಾಣದ ದರಗಳು ದಿಲ್ಲಿ ಮೆಟ್ರೋದ ಜನಪ್ರಿಯತೆಯ ಕಿರೀಟಕ್ಕೆ ಗರಿಯೂ ಹೌದು. ಅಷ್ಟರ ಮಟ್ಟಿಗೆ ಮೆಟ್ರೋ ವ್ಯವಸ್ಥೆಯು ದಿಲ್ಲಿ ನಿವಾಸಿಗಳಿಗೆ ಅನಿವಾರ್ಯ ಮತ್ತು ಪ್ರಸ್ತುತ. 

ದಿಲ್ಲಿಯನ್ನು ಕಂಗಾಲಾಗಿಸುತ್ತಿರುವ ವಾಯುಮಾಲಿನ್ಯವನ್ನು ಗಮನದಲ್ಲಿರಿಸಿ, ಮೆಟ್ರೋದಂತಹ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಬುದ್ಧಿವಂತಿಕೆಯ ಹೆಜ್ಜೆಗಳನ್ನು ಆಡಳಿತ ವ್ಯವಸ್ಥೆಯು ಇಡಬಹುದಾಗಿತ್ತು. ಶಹರದಲ್ಲಿ ಸೊಗಸಾಗಿ, ಸುಸಜ್ಜಿತವಾಗಿ ನೆಲೆಯೂರಿರುವ ದಿಲ್ಲಿ ಮೆಟ್ರೋಗೆ ಇದು ಮಹಾಸವಾಲಿನ ಮಾತೇನಲ್ಲ. ಜಪಾನಿನ ರಾಜಧಾನಿಯಾಗಿರುವ ಟೋಕಿಯೋ ಸೇರಿದಂತೆ ಜಗತ್ತಿನಾದ್ಯಂತ ಹಲವು ಮಹಾನಗರಗಳ ಜನತೆಯು ಸ್ವಂತ ವಾಹನಗಳ ಬದಲಾಗಿ ತಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ. ಇಂತಹ ಜವಾಬ್ದಾರಿಯುತ ನಡೆಯ ಕನಸು ನಮ್ಮಲ್ಲೂ ನನಸಾಗಬೇಕಿದೆ.

ಇತ್ತ ನಾಲ್ಕನೇ ಹಂತದ ಮೆಟ್ರೋ ಜಾಲವನ್ನು ಹಬ್ಬಿಸುವ ನಿಟ್ಟಿನಲ್ಲಿ ದಿಲ್ಲಿ ಮೆಟ್ರೋ ಈಗ ಅಣಿಯಾಗುತ್ತಿದೆ. ಇಲ್ಲಿ ಐವತ್ತಕ್ಕೂ ಹೆಚ್ಚು ಮೆಟ್ರೋ ಸ್ಟೇಷನ್ನುಗಳು ಮತ್ತೆ ಸಜ್ಜಾಗಲಿದ್ದು ದಿಲ್ಲಿಯ ಮತ್ತಷ್ಟು ಭಾಗಗಳನ್ನು ಆವರಿಸಿಕೊಳ್ಳಲಿವೆ. ಇದರಂತೆ ವಿವಿಧ ಆಯಾಮಗಳ ವಿನ್ಯಾಸವೂ ಸೇರಿದಂತೆ ಹಲವು ಹಂತಗಳಲ್ಲಿ ಕೆಲಸಗಳು ಭರದಿಂದ ಸಾಗುತ್ತಿವೆ. ಇನ್ನು 2020 ರ ವರ್ಷಾಂತ್ಯದಲ್ಲಿ ಹೊಸದಾಗಿ ಲೋಕಾರ್ಪಣೆಗೊಂಡು ದಿಲ್ಲಿಯ ಜನಬಳಕೆಗೆ ತೆರೆದುಕೊಂಡಿದ್ದು ಭಾರತದ ಮೊಟ್ಟಮೊದಲ ಚಾಲಕರಹಿತ ಮೆಟ್ರೋ. ಇದರೊಂದಿಗೆ ಚಾಲಕರಹಿತ ಮೆಟ್ರೋ ವ್ಯವಸ್ಥೆಯನ್ನು ಹೊಂದಿರುವ ಜಗತ್ತಿನ ಕೆಲವೇ ಕೆಲವು ದೇಶಗಳ ಅಪರೂಪದ ಪಟ್ಟಿಗೆ ಭಾರತವೂ ಸೇರಿಕೊಂಡಂತಾಗಿದೆ.

ಮೆಟ್ರೋ ಒಂದು ರೀತಿಯಲ್ಲಿ ಜನಸಾಮಾನ್ಯರ ತಲ್ಲಣಗಳನ್ನು ಅರಿತುಕೊಂಡಿರುವ, ಕಾಲಾಂತರದಲ್ಲಿ ಅವರೊಳಗೊಂದಾಗಿಬಿಟ್ಟ ವ್ಯವಸ್ಥೆ. ಹೀಗಾಗಿ ಮೆಟ್ರೋ ಅದೆಷ್ಟು ಮಾಡರ್ನ್ ಆಗಿದ್ದರೂ ದಿಲ್ಲಿಯ ನಿವಾಸಿಗಳಿಗೆ ‘ದೇಸಿ’ಯೇ!

January 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This