ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ…

-ಧನಂಜಯ  ಕುಲಕರ್ಣಿ

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ

ಮಾನ್ಯ ಮುಖ್ಯ ಮಂತ್ರಿಗಳೇ,

ನಿಮಗೆ ಈ ರೀತಿಯ ಪತ್ರಗಳು ಹೊಸದೇನಲ್ಲ. ನನ್ನಂತಹ ಅನೇಕ ಜನ ನಿಮಗೆ ಈಗಾಗಲೇ ಇಂತಹ ಪತ್ರಗಳನ್ನು ಬರೆದಿದ್ದಾರೆ ಮತ್ತು ನೀವು ಅವುಗಳನ್ನು ಅಷ್ಟೇ ಮೌನದಿಂದ ಸ್ವೀಕರಿಸಿದ್ದೀರಿ ಕೂಡ. ಅದಕ್ಕೆ ನಾವು “ಮೌನಂ ಸಮ್ಮತಿ ಲಕ್ಷಣಂ” ಎಂದು ಅರ್ಥೈಸಿ ಕೊಳ್ಳಬೇಕೆಂದರೆ ಅಂತಹ ಪತ್ರಗಳಿಗೆ ನಿಮ್ಮಿಂದ ದೊರೆತ ಉತ್ತರ ಮತ್ತು ಫಲಿತಾಂಶ ಮಾತ್ರ ಸೊನ್ನೆ. ಹೀಗಾಗಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ ಒದಗಿ ಬಂದಿದೆ. ನೀವು ಅಧಿಕಾರಕ್ಕೆ ಬಂದ ಮೊದಲಿನ ಎರಡು ವರ್ಷಗಳನ್ನು ನಿಮ್ಮ ಪಕ್ಷದ ಆಂತರಿಕ ಬಂಡಾಯ, ಕಚ್ಚಾಟ, ಶಾಸಕರ ಖರೀದಿ ವ್ಯವಹಾರಗಳಲ್ಲೇ ಕಳೆದಿರಿ. ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳನ್ನು ಗುರಿಯಾಗಿರಿಸಿಕೊಂಡಿರಿ, ಜನರ ಮುಂದೆ ಕಣ್ಣೀರು ಹಾಕಿದಿರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಆಡಳಿತ ಪಕ್ಷದ ಜನರಿಗೆ ನಿಮ್ಮ ಮಾತುಗಳು ಬೆಂಕಿಯುಂಡೆಯಾಗುತ್ತಿದ್ದವು. ಆದರೆ ಈಗ ನಿಮ್ಮ ಮಾತುಗಳು ಹಾಗಿರಲಿ, ನೀವೇ ಬಾಲ ಸುಟ್ಟ ಬೆಂಕಿನಂತಾಗಿದ್ದೀರಿ. ಕೇವಲ ಅಧಿಕಾರವನ್ನುಳಿಸಿಕೊಳ್ಳಲು ಈ ರೀತಿಯ ಅಸಹಾಯಕತೆಯನ್ನು ಪ್ರದರ್ಶಿಸುವ ನಾಯಕರನ್ನು ನಾವೆಂದೂ ಕಂಡಿಲ್ಲ. ನಿಜಕ್ಕೂ ನಿಮ್ಮ ಪರಿಸ್ಥಿತಿಯನ್ನು ನೋಡಿ ನಮಗೆಲ್ಲ ಅಯ್ಯೋ ಅನ್ನಿಸುತ್ತಿದೆ. ನಿಮ್ಮ ಸರಕಾರ ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಅನೇಕ ಕ್ಲಿಷ್ಟ ಪರಿಸ್ಥಿತಿಯನ್ನು ಮತ್ತು ಕಠಿಣ ಸಮಸ್ಯೆಗಳನ್ನು ಹಿಂದಿನ ಬಹುತೇಕ ಸರಕಾರಗಳು ಎದುರಿಸುತ್ತಿದ್ದವು. ಆದರೆ ಅವುಗಳನ್ನು ಬಗೆಹರಿಸುವಲ್ಲಿ ನಮಗೆಲ್ಲ ಕಾಣಸಿಗುತ್ತಿದ್ದ ರಾಜಕೀಯ ಮುತ್ಸದ್ದಿತನ, ಮೇಧಾವಿತನ ನಮಗೆ ನಿಮ್ಮಿಂದ ಸಿಗುತ್ತಿಲ್ಲ. ಒಂದು ಕಡೆಯಿಂದ ಗಣಿಧಣಿಗಳು ನಿಮಗೆ ಪ್ರತಿಪಕ್ಷದವರಂತೆ ವರ್ತಿಸುತ್ತಿದ್ದರೆ, ಇನ್ನು ಕೆಲವು ಸಚಿವರ ಬೇಜವಾಬ್ದಾರಿಯುತ ವರ್ತನೆಗಳಿಗೆ ಮುಖ್ಯಮಂತ್ರಿಯಾದ ನೀವು ಕ್ಷಮೆ ಕೇಳುತ್ತೀರಿ. ಆದರೆ ಬೇಜವಾಬ್ದಾರಿ ಪ್ರದರ್ಶಿಸಿದ ಮಂತ್ರಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮ ರಾಜ್ಯದ ಗೃಹ ಮಂತ್ರಿಗಳಂತೂ ಬಿಡಿ. ಅವರು ರಾಜ್ಯಕ್ಕೆ ಗೃಹ ಮಂತ್ರಿಗಳಾ ಅಥವಾ ತಮ್ಮ ಮನೆಗೆ ಗೃಹ ಮಂತ್ರಿಗಳಾ ಎನ್ನುವುದನ್ನು ಪರಾಮರ್ಶಿಸುವ ಅಗತ್ಯವಿದೆ. ಯಾವುದೇ ವಿಷಯವಾಗಲೀ, ಘಟನೆಯಾಗಲೀ ಅದಕ್ಕೆ ಅವರು ಮೊದಲು ನೀಡುವ ಸ್ಪಷ್ಟನೆಯೆಂದರೆ “ಇದು ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಬಂದ ನಂತರ ಆ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ”. ಅಷ್ಟರಲ್ಲಿ ಎಲ್ಲ ಮುಗಿದು ಮತ್ತೊಂದು ಹಗರಣಕ್ಕೆ ನಿಮ್ಮ ಶಾಸಕರು, ಸಚಿವರು ಸಿದ್ಧತೆ ನಡೆಸಿರುತ್ತಾರೆ. ನೀವು ವಿರೋಧ ಪಕ್ಷದ ಮುಖಂಡರಾಗಿದ್ದಾಗ ಎಷ್ಟು ಬಾರಿ ಆಡಳಿತ ಪಕ್ಷದವರನ್ನು ಸಂಕಷ್ಟಕ್ಕೆ ಸಿಲುಕಿಸಲು ಪಕ್ಷದ ಸಮಾವೇಶಗಳನ್ನು ನಡೆಸಿದ್ದಿರಿ? ಸ್ವಲ್ಪ ನೆನಪಿಸಿಕೊಳ್ಳಿ. ಈಗ ಕಳೆದ ಎರಡೂವರೆ ವರ್ಷಗಳಲ್ಲಿ ಅವೆಲ್ಲವನ್ನು ಬಡ್ಡಿ ಸಮೇತ ತೀರಿಸುವವರಂತೆ ಸಮಾವೇಶಗಳನ್ನು ನಡೆಸುತ್ತಿದ್ದೀರಿ. ವಿಧಾನಸೌಧ ಒಂದು ಪವಿತ್ರ ಸ್ಥಳವಾಗಿತ್ತು. ಅದನ್ನು ಅಸಂವಿಧಾನಿಕ ಪದಬಳಕೆಗಳಿಂದ ನಿಮ್ಮ ಶಾಸಕರು, ಸಚಿವರು ಮತ್ತು ವಿರೋಧ ಪಕ್ಷದವರು ಅಪವಿತ್ರಗೊಳಿಸಿಬಿಟ್ಟಿದ್ದೀರಿ. ವಿರೋಧ ಪಕ್ಷದವರು ಅಂತಹ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದಾಗ ಸ್ವಲ್ಪ ತಾಳ್ಮೆ, ಸಹನೆಗಳನ್ನು ತೋರಿ, ನಿಮ್ಮ ಶಾಸಕರನ್ನು ನಿಯಂತ್ರಿಸಿ ನಿಮ್ಮ ಸ್ಥಾನಕ್ಕೆ ಮತ್ತು ಖುರ್ಚಿಗೆ ಒಂದು ಘನತೆಯನ್ನು ತಂದು ಕೊಡಬಹುದಾಗಿತ್ತು. ಆದರೆ ಅದ್ಯಾವುದನ್ನೂ ನೀವು ಮಾಡಲೇ ಇಲ್ಲ. ಬದಲಾಗಿ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಒಂದೇ ಸಾಲಿನ ಮಾತುಗಳನ್ನು ಪುನರಾವರ್ತಿಸುತ್ತ ಹೋದಿರಿ. ಗಣಿಧಣಿಗಳು ವಿಧಾನಸೌಧದಲ್ಲಿ ಆರ್ಭಟಿಸುತ್ತಿರುವಾಗ ನೀವು ಮೌನರಾಗ ತಾಳಿದ್ದೇಕೆ. ಆ ಆರ್ಭಟದಿಂದಲೇ ಅಲ್ಲವೇ ನಮ್ಮ ನಾಡಿನ ಐದು ಕೋಟಿಜನರು ಕಳೆದ ಒಂದೂವರೆ ತಿಂಗಳಿನಿಂದ “ದೊಂಬರಾಟ” ವನ್ನು ನೋಡುತ್ತಿರುವುದು? ಬಳ್ಳಾರಿ – ಹೊಸಪೇಟೆ ನಡುವಿನ ಅಂತರ ಕೇವಲ ೬೨ ಕಿಲೋ ಮೀಟರ್. ಆದರೆ ಅದನ್ನು ಕ್ರಮಿಸಲು ಬರೊಬ್ಬರಿ ೩ ಗಂಟೆ ಬೇಕು. ಅಷ್ಟು ಅದ್ಭುತವಾಗಿವೆ ಅಲ್ಲಿನ ರಸ್ತೆಗಳು. ಇದು ನಿಮ್ಮ ಬಳ್ಳಾರಿ ಗಣಿಧಣಿಗಳು ಮಾಡಿದ ಅಭಿವೃದ್ಧಿ ಕಾರ್ಯವೆಂದು ಸಮರ್ಥಿಸಿಕೊಳ್ಳುತ್ತೀರಾ? ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ನೆರೆ ಸಂತೃಸ್ತರಿಗೆ ಇನ್ನೂ ಸೂರು ಸಿಕ್ಕಿಲ್ಲ, ಸಣ್ಣ ಉದ್ದಿಮೆದಾರರಿಗೆ ಸರಿಯಾಗಿ ವಿದ್ಯುತ್ ಸಿಗದೇ ಕಂಗಾಲಾಗಿ ಬೀದಿಗೆ ಬರುತ್ತಿದ್ದಾರೆ. ರೈತರಿಗೆ ಬೀಜ ಮತ್ತು ಗೊಬ್ಬರ ಸರಿಯಾಗಿ ಸಿಗದೇ ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಹಂತಕ್ಕೆ ತಲುಪಿದ್ದಾರೆ, ಶಾಲೆಗಳು ಆರಂಭವಾಗಿ ೩-೪ ತಿಂಗಳುಗಳು ಕಳೆದರೂ, ಪ್ರತಿ ವರ್ಷದಂತೆ ಈ ವರ್ಷವು ಸಹ ಪಠ್ಯ ಪುಸ್ತಕಗಳ ಸಮಸ್ಯೆ ಎಂದಿನಂತೆ ಇದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಇಂಜಿನೀಯರಿಂಗ್ ಓದಬೇಕೊ ಅಥವಾ ವೈದ್ಯಕೀಯ ಓದಬೇಕೋ ಎಂಬ ಗೊಂದಲದಲ್ಲಿದ್ದಾರೆ. ಹೀಗೆ ಸಮಸ್ಯೆಗಳ ಮಹಾಪೂರವೇ ನಮ್ಮ ಮುಂದಿರುವಾಗ ನೀವು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಾರಕ್ಕೆರಡು ಸಮಾವೇಶಗಳನ್ನು ನಡೆಸುವ ಅಗತ್ಯವಿದೆಯಾ? ಅಚಾನಕ್ಕಾಗಿ ನಿಮಗೆ ಸಿಕ್ಕ ಈ ಅದ್ಭುತ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ರಾಜ್ಯಕ್ಕೆ ಮಾದರಿ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ. ಸ್ವಲ್ಪ ಶಾಂತಚಿತ್ತರಾಗಿ ಕುಳಿತು ವಿಚಾರಮಾಡಿ. ನೀವು ಮಾಡಿದ್ದು, ಮಾಡುತ್ತಿರುವುದು ಸರಿಯೇ ಎಂದು. ಉತ್ತರ ನಿಮ್ಮಲ್ಲಿಯೇ ಇದೆ.]]>

‍ಲೇಖಕರು avadhi

August 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

 1. devu

  indu ballariyalli samavesh. Uttar Karnatakada ella Bus galannu sarkarve eravalu padedittu. Gulbgaragadalli aghoshita Bundhna vatavaran. Bere nagargala stiti kUda bhinna iralikkilla. Bus galillade Jana paradaduttiddaru. CET Counselling, Exam, Interview, Hospital, mattitara kelasagalige Horatidda jana Sarkarada ‘SADHANE’ nodi Kangalagiddaru. The Great Yediyurappa TV Vahinigalli Virodha pakshagalannu Taratege tegedukolluttiddaru.

  ಪ್ರತಿಕ್ರಿಯೆ
 2. M. Shivaram

  Date: 21st Aug 2010
  Bangalore.
  Sir,
  Mohamad Boluvaru avarige Kendra Sahitya Academy prasasti
  baddidannu conferm madikollalu paradaduttiddaga, avadi noodi avarige
  nanu helabekayitu. Thanking you avadi and GNM Sir.
  Shivaram. M.

  ಪ್ರತಿಕ್ರಿಯೆ
 3. Mallikarjuna Barker

  Nice Letter, 99% of politicians are not interested to develop the state, they are developing themselves by fixing the % commission in eve
  rything

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: